ಇಂದಿನ ಶಿಕ್ಷಕ

ಲೇಖನ

ಇಂದಿನ ಶಿಕ್ಷಕ

ಸುಮಾ ಕಿರಣ್

ಮಿತ್ರರೇ, ಒಂದು ಇಪ್ಪತ್ತೈದು ವರ್ಷಗಳಷ್ಟು ಹಿಂದಕ್ಕೆ ನಮ್ಮ ನೆನಪನ್ನು ಹೊರಳಿಸಿದ್ದೇ ಆದರೆ… ಬಹಳಷ್ಟು ಮನಸ್ಸಿಗೆ ಮುದ ನೀಡುವ ನೆನಪುಗಳು ಗರಿಗೆದರುತ್ತವೆ! ಅದರಲ್ಲಿ ಒಂದು, ನಮ್ಮ ಶಾಲಾ ದಿನಗಳು. ಶಾಲೆ ಎಂಬುದು ನಮ್ಮ ಪಾಲಿಗೆ ಕೇವಲ ವಿದ್ಯೆ ಕಲಿಯುವ ಜಾಗದಂತೆ ಇರದೆ, ವಿದ್ಯಾ ದೇಗುಲದಂತೆ ಗೋಚರಿಸುತ್ತಿತ್ತು. ಅದಕ್ಕಾಗಿಯೇ ತರಗತಿಯ ಒಳಗೆ ಹೋಗುವ ಮೊದಲು ಶಾಲೆಯ ಮುಂಭಾಗದ ಗೋಡೆಗೆ ಸಾಲಾಗಿ ನಮ್ಮ ಚಪ್ಪಲಿಗಳನ್ನು ಜೋಡಿಸಿಟ್ಟು ಬರಿಗಾಲಲ್ಲಿ ಕುಳಿತು ಪಾಠ ಕೇಳುತ್ತಿದ್ದೆವು. ಇನ್ನೂ ಬಹಳಷ್ಟು ಶಾಲೆಗಳಲ್ಲಿ ಬೆಂಚು, ಕುರ್ಚಿಯ ವ್ಯವಸ್ಥೆ ಇರದೆ ನೆಲದ ಮೇಲೆ ಕುಳಿತು ಪಾಠ ಕೇಳುವ ಪದ್ಧತಿ ಇತ್ತು. ಬಹುಶಃ ಇದಕ್ಕೆ ಕಾರಣ ವಿದ್ಯಾರ್ಥಿಗಳಾದ ನಾವು ಅಧ್ಯಾಪಕರ ಸರಿ ಸಮಕ್ಕೆ ಕುಳಿತುಕೊಳ್ಳದೆ ವಿನಯ, ವಿಧೇಯತೆಯನ್ನು ರೂಡಿಸಿಕೊಳ್ಳಲಿ… ಎಂದಿರಬಹುದೇನೊ!

ಹಾಗೆಯೇ ನಮ್ಮ ಅಧ್ಯಾಪಕರ ಬಗೆಗೆ ಅಪಾರ ಗೌರವ, ಪ್ರೀತಿ, ಭಯ-ಭಕ್ತಿ ಎಲ್ಲವೂ ತುಂಬಿರುತ್ತಿತ್ತು. ಅಧ್ಯಾಪಕರೊಂದಿಗೆ ವಾದ ಮಾಡುವುದಿರಲಿ; ಅಧ್ಯಾಪಕರು ಅಷ್ಟು ದೂರದಲ್ಲಿ ಕಂಡರೂ ಸಾಕು ನಮ್ಮ ತೊಡೆಗಳಲ್ಲಿ ನಡುಕ ಹುಟ್ಟುತ್ತಿತ್ತು. ಅಧ್ಯಾಪಕರು ನೀಡುತ್ತಿದ್ದ ಶಿಕ್ಷೆಗಳು ಕೂಡ ಅಷ್ಟೇ ಕಠಿಣವಾಗಿ ಇರುತ್ತಿತ್ತು. ಇನ್ನೊಂದು ಬಾರಿ ಅಂತಹ ತಪ್ಪು  ಮಾಡದಂತೆ ಸದಾ ಎಚ್ಚರಿಸುವ ರೀತಿಯಲ್ಲಿ ಶಿಕ್ಷೆಗಳು ಇರುತ್ತಿದ್ದವು. ಅಧ್ಯಾಪಕರ ಬಗ್ಗೆ ಕೇವಲ ನಮಗೆ ಮಾತ್ರವಲ್ಲ ಮನೆ ಮಂದಿ, ಊರವರಿಗೆಲ್ಲ ಗೌರವ ಭಾವ. ಮನೆಯಲ್ಲಿ ನಾವೇನಾದರೂ ಅಧ್ಯಾಪಕರ ಬಗ್ಗೆ ದೂರು ಹೇಳಿದ್ದೆ ಆದರೆ, ಮನೆಯವರಿಂದ ನಮಗೇ ನಾಲ್ಕು ಗುದ್ದು ಬಿದ್ದು ನಮ್ಮ ಬಾಯಿ ಮುಚ್ಚುತ್ತಿತ್ತು. ಎಲ್ಲಿಯಾದರೂ ಅಧ್ಯಾಪಕರನ್ನು ನಮ್ಮ ಪಾಲಕರು ಕಂಡದ್ದೇ ಆದರೆ, ಅವರ ಬಾಯಿಯಿಂದ ಬರುತ್ತಿದ್ದ ಒಂದೇ ಪದ “ಗಂಡಿಗ್ ಸಮ ನಾಲ್ಕು ಹಾಕಿ ಮೇಷ್ಟ್ರೇ, ಹೇಳಿದ್ದ್ ಕೆಂತಿಲ್ಲ “.

ಇನ್ನು ಅಧ್ಯಾಪಕ ವೃತ್ತಿ ಎನ್ನುವುದು ಗೌರವಕ್ಕೆ ಪಾತ್ರವಾದ ವೃತ್ತಿಯಾಗಿತ್ತು. ಶ್ರೇಷ್ಠ ವೃತ್ತಿ ಎಂಬ ಹೆಗ್ಗಳಿಕೆ ಕೂಡ ಇತ್ತು. “ಶಿಕ್ಷಕರು” ಎಂದರೆ ಊರಿನಲ್ಲೆಲ್ಲ ಒಂದು ಘನತೆ ಇತ್ತು. ಅವರ ಮಾತಿಗೆ ಊರವರು ಬೆಲೆ ಕೊಡುವ ಜೊತೆಗೆ ಶಿಕ್ಷಕರು ಊರಿನಲ್ಲಿರುವ ಎಲ್ಲರ ಮನೆಯವರೊಂದಿಗೆ ಆತ್ಮೀಯ ಒಡನಾಟ ಹೊಂದಿರುತ್ತಿದ್ದರು. ಶಿಕ್ಷಕರಿಗೆ ದೊರಕುತ್ತಿದ್ದ ಈ ಪರಿಯ ಪ್ರೀತಿ, ಗೌರವಗಳಿಂದಾಗಿ ಮುಂದಿನ ತಲೆಮಾರಿನವರೂ ಶಿಕ್ಷಕರಾಗುವ ಕನಸು ಕಾಣುತ್ತಿದ್ದರು ಎಂದರೆ ತಪ್ಪಾಗಲಾರದೆನೋ?

ಮಿತ್ರರೇ, ಈಗ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಅವಲೋಕಿಸೋಣವೇ? ಅಧ್ಯಾಪಕರೊಂದಿಗೆ ವಾದಿಸುವ,  ಅಧ್ಯಾಪಕರಿಗೆ ವಾಟ್ಸಪ್ ನಲ್ಲಿ ಸಂದೇಶ ಕಳುಹಿಸುವ ಇಂದಿನ ವಿದ್ಯಾರ್ಥಿಗಳಿಂದ ಅದ್ಯಾವ ಪರಿಯ ವಿನಯ ವಿಧೇಯತೆಗಳನ್ನು ನಿರೀಕ್ಷಿಸಲು ಸಾಧ್ಯ  ನೀವೇ ಹೇಳಿ! ಇನ್ನು ತಮ್ಮ ಮಕ್ಕಳ ಶಿಕ್ಷಕರ ಬಗ್ಗೆ ಪಾಲಕರಿಗೇ ಕಿಂಚಿತ್ತು ಗೌರವವಿಲ್ಲ. ಮಕ್ಕಳ ಎದುರಿನಲ್ಲಿ ಅವರ ಶಿಕ್ಷಕರನ್ನು ಏಕವಚನದಲ್ಲಿ ಹೀಯಾಳಿಸುವಾಗ ಮಕ್ಕಳಿಗಾದರೂ ಗೌರವ ಅದೆಲ್ಲಿಂದ ಮೂಡಬೇಕು? ಪಾಲಕರಾದ ನಾವು,  ನಮ್ಮ  ಹಿರಿಯರು ಅದ್ಯಾವ ಪರಿಯ ವಿನಯದಿಂದ ನಮ್ಮ ಶಿಕ್ಷಕರೊಂದಿಗೆ ವ್ಯವಹರಿಸುತ್ತಿದ್ದರು ಎಂಬುದನ್ನು ಈ ಕ್ಷಣಕ್ಕೆ ಮರತೇ ಬಿಟ್ಟಿರುತ್ತೇವೆ.

ಇನ್ನು ತಮ್ಮ ಶಾಲಾ ಮಕ್ಕಳಿಗೆ ಹೊಡೆಯುವುದಂತಿರಲಿ; ಗಟ್ಟಿಯಾಗಿ ಗದರಿದರೂ ಅದೊಂದು ಅಪರಾಧದಂತೆ ಕಂಡು, ಅಧ್ಯಾಪಕರು ಮಹಾನ್ ಅಪರಾಧಿಗಳಂತೆ ಬಿಂಬಿತರಾಗುತ್ತಾರೆ. “ನನ್ನ ಮಗುವಿಗೆ ನಿಮ್ಮ ಶಿಕ್ಷಕರು ಗದರಿದರಂತೆ? ಅವನು ಶಾಲೆಗೆ ಬರಲು ಒಪ್ಪುತ್ತಿಲ್ಲ” ಎಂದು ಶಾಲಾ ಪ್ರಾಂಶುಪಾಲರೊಂದಿಗೆ ದೂರುವ ಪಾಲಕರು ಕ್ಷಣ ಕಾಲ ಹಿಂತಿರುಗಿ ನೋಡಿದ್ದರೆ… ಕೋಲಿನಲ್ಲಿ ಬಾಸುಂಡೆ ಬರುವಂತೆ ಬಡಿದಾಗಲೂ ಚಕಾರವೆತ್ತದ ನಮ್ಮ ಪಾಲಕರು ಕಣ್ಮುಂದೆ ತೇಲುತ್ತಾರೆ. ಇಂದಿನ ಮಕ್ಕಳಿಗೆ ಅವರು ತಪ್ಪು ಮಾಡಿದಾಗ ತಿದ್ದಲು ಅವಶ್ಯಕವಾದ ಸಣ್ಣ ಮಟ್ಟದ ದಂಡನೆ ಪಾಲಕರಿಂದ ಯಾ ಶಿಕ್ಷಕರಿಂದ ಆಯಾ ಕಾಲಕ್ಕೆ ವಿಧಿಸಲ್ಪಡದೆಯೇ ಇರುವುದರಿಂದಲೇ ನಾಗರಿಕ ಸಮಾಜದಲ್ಲಿ ತಪ್ಪಿನ ಮೇಲೆ ತಪ್ಪು ಎಸಗುತ್ತಾ ಕಾನೂನಿನ ಕುಣಿಕೆಗೆ ಸಿಲುಕಿ ಪೋಲೀಸರಿಂದ ಹೊಡೆತ ತಿನ್ನುವ ಮಟ್ಟಕ್ಕೆ ಬೆಳೆಯುತ್ತಿದ್ದಾರೆ!

ಮಕ್ಕಳಿಗೆ ಹೊಡೆಯಬಾರದು, ಬೈಯಬಾರದು… ಇದನ್ನೆಲ್ಲ ಹೇಗೋ ಶಿಕ್ಷಕರು ಸಹಿಸಿಯಾರು. ಆದರೆ, ಬೋರ್ಡ್ ಮೇಲೆ ಬರೆದ ನೋಟ್ಸ್ ಅನ್ನು ಮಗು ಬರೆಯದಿದ್ದಾಗಲೂ ಅದು ಶಿಕ್ಷಕರದ್ದೆ ತಪ್ಪು! ಮಗುವಿನ ನೋಟ್ಸ್ ಪೂರ್ಣಗೊಳಿಸುವುದು, ಮಗು ಉತ್ತಮ ಅಂಕ ಗಳಿಸುವುದು…  ಎಲ್ಲದಕ್ಕೂ ಹೊಣೆಗಾರರು ಶಿಕ್ಷಕರೇ! ಗಮನಿಸಿ – ಮನೆಯಲ್ಲಿ ಇರುವ ನಮ್ಮ ಒಂದೇ ಮಗುವಿನ ನೋಟ್ಸ್ ಅನ್ನು ಪೂರ್ಣಗೊಳಿಸುವಲ್ಲಿ ಸಹಕರಿಸಲು ಆಗದ ಪಾಲಕರು ನಾವು. ಅದೇ ಒಬ್ಬ ಶಿಕ್ಷಕ ತರಗತಿಯಲ್ಲಿರುವ ನಲವತ್ತು ವಿದ್ಯಾರ್ಥಿಗಳನ್ನು ನೋಡಬೇಕು. ಅದೂ ಕೇವಲ ಒಂದೇ ತರಗತಿಯಲ್ಲ! ಅಂತಹ ಕನಿಷ್ಠ ಆರು ತರಗತಿಗಳನ್ನು ಪ್ರತಿನಿತ್ಯ ಗಮನಿಸಬೇಕು ಎಂದಾದರೆ ನಿಜಕ್ಕೂ ಶಿಕ್ಷಕರ ಬಗ್ಗೆ ಕರುಣೆ ಮೂಡುವುದಿಲ್ಲವೇ?

ಮಿತ್ರರೇ, ಒಬ್ಬ ಶಿಕ್ಷಕ ಕೂಡ ಎಲ್ಲರಂತೆ  ಸಾಮಾನ್ಯ ಮನುಷ್ಯ! ತನ್ನ ವೃತ್ತಿಯ ಮೇಲಿನ ಗೌರವ, ಪ್ರೀತಿ, ಬದ್ಧತೆಯಿಂದ ತನ್ನ ಮುಂದಿರುವ ಎಲ್ಲಾ ಸವಾಲುಗಳನ್ನು ನಗುನಗುತ್ತಾ ಎದುರಿಸುವ ಕಲೆಗಾರಿಕೆ ಶಿಕ್ಷಕನಿಗೆ ಕರಗತವಾಗಿರುತ್ತದೆ. ಹಾಗೆಂದು ಪಾಲಕರಾದ ನಾವು ಎಲ್ಲ ತಪ್ಪುಗಳನ್ನು ಶಿಕ್ಷಕರ ಕುತ್ತಿಗೆಗೆ ಕಟ್ಟಿ ನಿರಾಳವಾಗಿ ಇರಲು ಸಾಧ್ಯವೇ? ಖಂಡಿತ ನಾವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲಕ್ಷಗಟ್ಟಲೆ ಹಣವನ್ನು ಶಿಕ್ಷಣ ಸಂಸ್ಥೆಗಳ ಮೇಲೆ ಸುರಿದಿದ್ದೇವೆ. ಹಾಗೆಂದು ಶಿಕ್ಷಕರು ನಾವು ಬಯಸಿದಂತೆ ಇರಬೇಕು ಎಂಬುದು ಯಾವ ಪರಿಯ ನ್ಯಾಯ? ಕ್ಷಣ ಕಾಲ ಯೋಚಿಸಿ, ನೀವು ಮಹಾನಗರಗಳಲ್ಲಿ ಇದ್ದರೆ ಈ ಅನುಭವ ಖಂಡಿತ ನಿಮಗಾಗಿರುತ್ತದೆ. ನೀವು ವೃತ್ತಿ ನಿರತರಾಗಿದ್ದು ನಿಮ್ಮ ಒಂದು ಮಗುವನ್ನು ನೋಡಿಕೊಳ್ಳಲು ಆಯಾಗಳಿಗೆ ತಿಂಗಳಿಗೆ ಕನಿಷ್ಠ 20 ಸಾವಿರಕ್ಕೂ ಅಧಿಕ ಹಣ ಚೆಲ್ಲಿರುತ್ತೀರಿ. ಆದರೆ, ಒಬ್ಬ ಖಾಸಗಿ ಶಾಲಾ ಶಿಕ್ಷಕ/ಅಧ್ಯಾಪಕ ಇದಕ್ಕೂ ಕಡಿಮೆ ಸಂಬಳಕ್ಕೆ ಪ್ರತಿದಿನ ಪ್ರತಿ ತರಗತಿಯಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸುಧಾರಿಸಿ, ಅವರ ಎಲ್ಲ ಅಹವಾಲುಗಳನ್ನು ತಾಳ್ಮೆಯಿಂದ ಕೇಳಿ, ಕ್ಷಣ ಕ್ಷಣಕ್ಕೂ ಅವರೆಡಗೆ ಕಾಳಜಿ ತೋರಿ, ಊಟದಿಂದ ಹಿಡಿದು ಪಾಠದವರೆಗೆ ಗಮನಿಸುತ್ತಾರೆ. ಅಂತಹ ಶಿಕ್ಷಕರ ಬಗ್ಗೆ ನಮಗದೆಷ್ಟು ಗೌರವ ಅಭಿಮಾನವಿರಬೇಕು. ಈಗಲಾದರೂ ಈ ಬಗ್ಗೆ ಯೋಚಿಸೋಣವೇ??


ಸುಮಾ ಕಿರಣ್

Leave a Reply

Back To Top