ಜಯಂತಿ ಸುನಿಲ್ ಗಜಲುಗಳು

ಕಾವ್ಯ ಸಂಗಾತಿ

ಜಯಂತಿ ಸುನಿಲ್ ಗಜಲುಗಳು

ಅವನಿರುವಲ್ಲಿ ಶಿಶಿರ ಕಾಲದಲ್ಲೂ ಕವಿತೆಯ ಸಾಲುಗಳು ಚಿಗುರೊಡೆಯುತ್ತವೆ..
ಗೋರಿಯೊಳಗಣ ದೇಹದಲ್ಲೂ ಬತ್ತಿದ ಭಾವಗಳು ಪುಟಿದೇಳುತ್ತವೆ..!!

ಮುಗಿದ ದಾರಿಯ ಕೊನೆಯ ಹೆಜ್ಜೆಗೆ ಜೊತೆಯಾದವನು..
ಅವನೆದೆಗೆ ಒರಗಿದಾಗ ಹತಾಶೆಗೀತೆಗಳು ಪ್ರೇಮಸುನೀತಗಳಾಗುತ್ತವೆ..!!

ಪ್ರೇಮ,ತಲ್ಲಣ, ವಿಷಾದ,ರೋಮಾಂಚನಗಳ ರೂಪಕದಂತೆ ನನಗವನು..
ಆತ್ಮದೊಳಗೆ ಮೌನಿಯಾದ ನನ್ನಲ್ಲೀಗ ಮಾತುಗಳು ತುಟಿಬಿಚ್ಚುತ್ತವೆ..!!

ನನ್ನೊಳಗಿನ ಅವನ ನಡಿಗೆ ನಿಂತರೆ ಸಾಕು ಕಾಲದ ಜೊತೆ ಕಾಲು ಮನ್ನಡೆಯದು..
ಕಂಗಳು ದಣಿದರೆ ಗಡಿಯಾರದೊಳಗಣ ಮುಳ್ಳುಗಳು ಚುಚ್ಚುತ್ತವೆ..!!

ಶೃತಿ ತಪ್ಪಿದ ಬದುಕಲಿ ಸೇರಿ ಏಳು ಜನ್ಮಕ್ಕಾಗುವಷ್ಟು ಫನಾಸುರಿಸಿಹನು..
ಅವನು ನನ್ನೊಳಗೆ ಕಾಲಿಟ್ಟ ಮೇಲೆ ಹಾಡಾಗದ ಲಯಗಳು ತಾಳವಾಗುತ್ತವೆ..!!

ಅವನೆಂದರೆ ಮೊದಲ ರಾತ್ರಿಯಲ್ಲಿ ತೊಯ್ದ ಮಣ್ಣಿನ ಘಮಲು
ಮಂಜು ಮುಸುಕಿದ ಮನಸ್ಸಿಗೆ ಆವನೊಲುಮೆಯ ಕಿರಣಗಳು ತಾಕುತ್ತವೆ..!!

ಅವನಿದ್ದರೆ ದಾಟಲಾಗದ ನದಿಗಳು ದಾರಿಮಾಡಿಕೊಡುತ್ತವೆ..
ಜಯದ ಮೆಟ್ಟಿಲೇರಲು ಒಡ್ಡುವ ಅಡ್ಡಿಗಳ ಹಾದಿಗಳು ಬಟಾಬಯಲಾಗುತ್ತವೆ..!!

***

.

ಮತ್ತದೇ ಇಳಿಸಂಜೆಗಳಲಿ ಹಾಜರಿ ಹಾಕಬೇಡಿ ಕಹಿ ನೆನಪುಗಳೇ ಸುಮ್ಮನಿರಿ..
ಚಲಿಸುತಿಹ ಬದುಕಿಗೆ ಬೇಸರದಿ ಬದಿಒಡ್ಡದಿರಿ ನೋವುಗಳೇ ಸುಮ್ಮನಿರಿ..!!

ಜೀವನಸತ್ವದ ಶರಾಬನ್ನು ಹನಿಹನಿಯಾಗಿ ಹೀರುವ ಉಮೇದಿ ಮನಕೆ..
ಹಸಿ ಮಡಿಕೆಯೊಳಹೊಕ್ಕ ನೀರಾಗಿ ಸೋರಿಹೋಗಬೇಡಿ ಅನುಭವಗಳೇ ಸುಮ್ಮನಿರಿ..!!

ಅದೆಷ್ಟೋ ತಿರುವುಗಳು ಹಠಾತ್ ಪಲ್ಲಟದ ಕಾಲದಂತೆ ನಮ್ಮ ಪಾಲಿಗೆ..
ಮೊಳಕೆಯೊಡೆವ ಮೊದಲೇ ಸೊರಗಬೇಡಿ ಬೀಜಗಳೇ ಸುಮ್ಮನಿರಿ..!!

ಜೀವನ ಯಾದಿಯಲ್ಲಿ ಹೆಜ್ಜೆ ಹೆಜ್ಜೆಗೂ ಎಡವಿದ ಕಲ್ಲುಗಳೇ ಮುತ್ತುಗಳಾಗಬಹುದು…
ಸಾಣೆ ಹಿಡಿಯುವ ಸಂಗತಿಗಳಿಗೆ ದೂರಾಗಬೇಡಿ ಗಾಯಗಳೇ ಸುಮ್ಮನಿರಿ..!!

ನಮ್ಮದೇ ನೈಜ ಸಾಲುಗಳು ಮತ್ಯಾರದೋ ಓದಲಿ ಕಥೆಯಾಗಬಹುದು…
ಜಯದ ಮದವನ್ನು ನೆತ್ತಿಗೇರಿಸಿಕೊಳ್ಳಲುಬೇಡಿ ಸಾಧನೆಗಳೇ ಸುಮ್ಮನಿರಿ..!!


ಜಯಂತಿ ಸುನಿಲ್

Leave a Reply

Back To Top