ಅಂಕಣ ಸಂಗಾತಿ
ಸಕಾಲ
ಮಳೆಗಾಲದ ಮುನ್ನೋಟ…
ಮಳೆಗಾಲ ಬಂತೆಂದರೆ ಮನಸಿಗೇನೋ ಮುಂಜಾವು, ಸಂಜೆ ಅಪೂರ್ವ ಸಂಗಮವದು.ಮೊದಲ ಮಳೆಯ ಸಿಂಚನದ ಸ್ಪರ್ಶಕೆ ಕಾದು ಕುಳಿತ ಇಳೆಗೂ ಬಿಸಿಲ ಬೇಗೆಯಿಂದ ತಂಪನರಸುವ ಆತುರದ ಜೊತೆಗೆ ಮಳೆಯ ಅಪೂರ್ವವಾದ ದೃಶ್ಯ ನೋಡುವುದೇ ಕಣ್ಣಿಗೆ ಹಬ್ಬ ಏಕೆಂದರೆ, ಮೋಡಗಳ ದಟ್ಟಣೆ ಕಡಿಮೆಯಾಗಿ, ಓರೆಯಾಗಿ ಬಿಸಿಲು ಬಿದ್ದು, ಸುತ್ತಲಿನ ಬಯಲು ಮತ್ತು ಕಾನನ ಬೆಳಗುವ ಪರಿ ಅಧ್ಬುತ. ಸಂಜೆಯ ಹೊತ್ತಿನಲ್ಲಿ ಮೋಡಗಳ ನಡುವೆ ನವಿರಾಗಿ ಬಂದು, ಮನೆ ಎದುರಿನ ಬಯಲಿನ ಒಂದು ಭಾಗಕ್ಕೆ ಮಾತ್ರ ಬೀಳುವ ಬಿಸಿಲು ನಮ್ಮ ಊರಿನಲ್ಲಿ “ನೇಸರ ಬಿಸಿಲು” ಎನ್ನುತ್ತಿದ್ದ ವಾಡಿಕೆ. ನೇಸರು ಎಂದರೂ ಬಿಸಿಲು ಎಂದೇ ಅರ್ಥ. ಆ “ನೇಸರಬಿಸಿಲಿ”ನಲ್ಲಿ ವಿಚಿತ್ರ ಬಣ್ಣದಿಂದ ಚಂದವಾಗಿ ಕಾಣುತ್ತಿದ್ದುದನ್ನು, ಎದುರಿನ ಬಯಲನ್ನು ನಾವೆಲ್ಲಾ ಬೆರಗಣ್ಣಿನಿಂದ ನೋಡುತ್ತಿದ್ದೆವು.ಸಂಜೆಗೆಂಪಿನ ಬಿಸಿಲಿನಲ್ಲಿ ಹಸಿರು ತುಂಬಿದ ಬಯಲು ಬೇರೆಯದೇ ಬಣ್ಣವನ್ನು ಪಡೆಯುತ್ತದೆ. ಒಂದೆರಡು ತಿಂಗಳುಗಳ ಹಿಂದೆ ನಾಟಿ ಮಾಡಿದ ಬತ್ತದ ಗದ್ದೆಗಳು ಚೆನ್ನಾಗಿ ಬೆಳೆದು ಇನ್ನೇನು ಹೊಡೆ ತುಂಬಿ, ಕದಿರು ಬಿಡುವ ಶ್ರಾಯ. ಬಯಲಿನ ಹಿಂಭಾಗದ ಗುಡ್ಡ,ಬೆಟ್ಟಗಳಲ್ಲೂ ಹಸಿರಿನ ಗಿಡ ಮರಗಳ ದಟ್ಟಣೆ. ಅದರಾಚೆ, ಉದ್ದಕ್ಕೂ ಹರಡಿರುವ ಹಾಡಿಗಳಲ್ಲಿರುವ ಅಳಿದುಳಿದ ಕಾಡು ಸಹಾ, ಮಳೆಗಾಲದ ಜೀವಶಕ್ತಿಯನ್ನು ಕುಡಿದು ಸೊಂಪಾಗಿಬೆಳೆದು, ಸ್ನಿಗ್ದ ಹಸಿರಿನಿಂದ ತುಂಬಿ, ತಾನೂ ಸಹಾ ಸಹ್ಯಾದ್ರಿಯ ದಟ್ಟಕಾಡನ್ನು ಹೋಲಿಕೆಯಾಗ ಬಲ್ಲೆ ಎನ್ನುತ್ತಿತ್ತು.
ಹೊಳವಾದ ಅಂತಹ ಸಂಜೆಗಳಲ್ಲಿ, ಒಮ್ಮೊಮ್ಮೆ ಮಳೆ ಬರುವುದೂ ಅಪರೂಪವಾದರೂ, ಪಟಪಟನೆ ಮಳೆ ಸುರಿದು ಪುನ: ವಾತಾವರಣ ತಿಳಿಯಾಗುವ ಶ್ರಾವಣದ ದಿನಗಳ ಮರೆಯಲಾದಿತೆ? ಹಿಂದಿನ ಮಳೆಯ ಸದ್ದಿಗೆ ಇಡೀ ಪ್ರಪಂಚವೇ ಕಂಗಾಲು.ನೇಸರನ ಕಾಣದ ಎಷ್ಟೋ ದಿನಗಳನ್ನು ನೆನೆವ ಅಜ್ಜಂದಿರು,ನಮ್ಮ ಕಾಲದ ಮಳೆಯಿಗಿಲ್ಲವೆಂದು ಗೊಣಗಿದ್ದು ಉಂಟು. ಸಂಜೆಯ ಚಿನ್ನದ ಬಣ್ಣ ಸುತ್ತಲಿನ ಪ್ರಪಂಚವನ್ನೇ ಕೆಂಬಣ್ಣದಿಂದ ತುಂಬಿರುತ್ತದೆ ಆ ಕಾಡು, ಆ ಮರ, ಆ ಬಯಲು, ಆ ಗದ್ದೆ,ಆ ಅಂಗಳ, ಆ ಮನೆ ಎಲ್ಲವೂ ಬಣ್ಣ ಬದಲಿಸಿಕೊಂಡು, ಪ್ರಕಾಶ ದಿಂದ ಮಿನುಗುತ್ತವೆ. ಈ ಸಮಯವೇ ಗೋದೂಳಿ ಸಮಯ. ಮನೆಯ ಹಿಂದಿನ ಗುಡ್ಡಕ್ಕೆ ಮೇಯಲು ಹೋದ ಹಸು ಕರುಗಳು ತಮ್ಮ ಕುತ್ತಿಗೆಗೆ ಕಟ್ಟಿದ್ದ ಮರಣಿಗೆಂಡೆಗಳನ್ನು ಸದ್ದು ಮಾಡುತ್ತಾ, ಹಟ್ಟಿಯ ಹಿಂದಿದ್ದ ದರೆಯಲ್ಲಿ ತಿರುವಿಕೊಂಡು ಬರುವ ಮಣ್ಣು ದಾರಿಯನ್ನು ಇಳಿದು, ತೋಡನ್ನು ದಾಟಿ ಹಟ್ಟಿ ಸೇರುತ್ತವೆ. ಹಗಲಿಡೀ ಗುಡ್ಡದ ತುಂಬಾ ಸುತ್ತಾಡಿ, ನಾನಾ ರೀತಿಯ ಸೊಪ್ಪಿನ ಚಿಗುರನ್ನು, ಕುಡಿಗಳನ್ನು, ಹುಲ್ಲುಗಳನ್ನು ತಿಂದು ವಾಪಸಾಗುವ ಆ ದನಕರುಗಳು ಸಾಕಷ್ಟು ಆರೋಗ್ಯಪೂರ್ಣವೆಂದೇ ಹೇಳಬೇಕು.
ಪ್ರಕೃತಿಯ ಮಕ್ಕಳು ಅವು.ನೋಡಲು ತೀರಾ ದಢೂತಿ ಯಾಗಿರುವುದಿಲ್ಲ.ದಿನವೂ ಆರೆಂಟು ಮೈಲಿ ಗುಡ್ಡದಲ್ಲಿ ಸುತ್ತಾಡಿದ ಗಟ್ಟಿಮುಟ್ಟಿನ ದೇಹ. ಗುಡ್ಡ ಬೆಟ್ಟಗಳಲ್ಲಿ ಹುಲ್ಲು, ಹಸಿರು ಕುಡಿಯನ್ನು ತಿಂದು ಬರುವ ನಾಟಿ ಹಸುಗಳ ಹಾಲಿಗೆ ವಿಶಿಷ್ಟ ರುಚಿ ಇರುತ್ತದೆ.ಅವು ತಿನ್ನುವ ವಿವಿಧ ಸಸ್ಯಗಳ ರುಚಿಯೂ ಅವುಗಳು ನೀಡುವ ಹಾಲಿನಲ್ಲಿ ಬೆರೆತಿರುವುದರ ಜೊತೆ, ಅವು ಹಲವಾರು ಮೈಲಿ ನಡೆದಾಡಿ ಸಂಚಯನಗೊಂಡ ಶಕ್ತಿಯ ಒಂದು ಭಾಗ ಸಹಾ ಆ ಹಾಲಿಗೆ ಸೇರಿಕೊಳ್ಳುತ್ತೆ ಎಂಬ ಭಾವ ಆ ಹಸುಗಳ ಹಾಲನ್ನು ಕುಡಿದಾಗ ಉಂಟಾಗದೆ ಇರದು.
ಗುಡ್ಡಗಳಿಗೆ ಮೇಯಲು ಹೋದ ದನಕರುಗಳು ಆಗಾಗ ಮಳೆಗೆ ಸಿಕ್ಕಿಕೊಳ್ಳುವುದುಂಟು. ಜಾಸ್ತಿ ಮಳೆ ಬಂದರೆ, ಪುಟ್ಟ ಪ್ರವಾಹವೆ ಬಂದಂತೆ. ಆಗ ಹಸುಕರುಗಳು ಹಟ್ಟಿಗೆ ವಾಪಸಾಗಲು ಕಷ್ಟ. ಮನೆಯವರು ಹಗ್ಗದೊಂದಿಗೆ ಹೋಗಿ, ಅವುಗಳ ಕತ್ತಿನ ಸುತ್ತ ಹಗ್ಗ ಬಿಗಿದು, ಪ್ರವಾಹ ತುಂಬಿದ ಆ ತೋಡನ್ನು ದಾಟಿಸಿ ಹಟ್ಟಿಗೆ ಕರೆತರುತ್ತಿದ್ದರು.ಮಳೆಯೆಂದರೆ ಅದೆಂತಹುದೋ ಹುಮ್ಮಸ್ಸು.ಮಳೆಗಾಗಿ ಕಾದು ಕುಳಿತವರು ಅನ್ನದಾತರು.ನಾವೆಂದೂ “ರೇನ್ ರೇನ್ ಗೋ ಅವೇ” ಎಂದು ಹೇಳಿದವರಲ್ಲ. ಮಳೆ ಬರುವ ಮುನ್ಸೂಚನೆ ಕಂಡರೆ ಸಾಕು ಎಲ್ಲ ಮಕ್ಕಳು ಸೇರಿ ಹಾಡುವ ಒಂದೇ ಹಾಡು
“ಬಾರೋ ಬಾರೋ ಮಳೆರಾಯ
ಹುಯ್ಯೋ ಹುಯ್ಯೋ ಮಳೆರಾಯ
ಗುಡು ಗುಡು ಮುತ್ಯ ಬಂದಾನ
ರಪ ರಪ ಮಳೆಯನು ತಂದಾನ”
ಹೀಗೆ ಮಳೆಯ ಹಾಡುಗಳನ್ನು ಎಲ್ಲರೂ ಹಾಡುತ್ತಾ ಮಳೆರಾಯನ ಬರಮಾಡಿಕೊಳ್ಳುತ್ತಿದ್ದೆವು.
ಶಾಲೆಗೆ ಹೋಗುವ ದಾರಿ ಮಳೆಗಾಲ ಆರಂಭವಾಗಿ ಒಂದೆರಡು ತಿಂಗಳುಗಳಲ್ಲಿ ಗದ್ದೆ ಕಳೆ ಕೀಳುವ ಕೆಲಸ ಶುರು. ಸಾಮಾನ್ಯವಾಗಿ ಈ ಕೆಲಸ ಹೆಂಗಸರ ಪಾಲಿನದು. ಬತ್ತದ ಗದ್ದೆಗಿಳಿದು, ಬಗ್ಗಿ ನಿಂತು,ಬತ್ತದ ಮಧ್ಯೆ ಬೆಳೆದ ಕಳೆಯನ್ನು ಕಿತ್ತು, ಅವುಗಳನ್ನು ಪುಟ್ಟ ಪುಟ್ಟ ಕಟ್ಟುಗಳ ರೀತಿ ಮಾಡಿ, ಗದ್ದೆ ಕಂಟದ ಮೇಲಿರುವ ದಾರಿಗೆ ಎಸೆಯುತ್ತಿದ್ದರು. ಮೊದಲೇ ನೀರಿನ ಸೆಲೆಯಿಂದ ತುಂಬಿರುವ, ಹುಲ್ಲು ಮುಚ್ಚಿದ ಆ ದಾರಿಯು, ಕಿತ್ತೆಸೆದ ಕಳೆಯಿಂದಾಗಿ, ಈಗ ಮತ್ತಷ್ಟು ಕೆಸರಿನಿಂದ ತುಂಬುತ್ತದೆ. ಅದೇ ದಾರಿಯ ಮೇಲೆ ಶಾಲೆಗೆ ಹೋಗುವ ನಾವೆಲ್ಲಾ ಮಕ್ಕಳು ಸಾಗಬೇಕು.ಬೆಳಿಗ್ಗೆ ಒಮ್ಮೆ, ಸಂಜೆ ಒಮ್ಮೆ, ನಾವೆಲ್ಲ ನಡೆದು ನಡೆದು ಪಿಚ್ ಪಿಚ್ ಎಂದು ಕೆಸರಾಗುತ್ತಿದ್ದ ಆ ದಾರಿ ಸವೆಸಿ ಮನೆ ಸೇರಿದಾಗ, ಪಾದ ಪೂರ್ತಿ ಕೆಸರು, ಮಣ್ಣು,ಬೆನ್ನ ಹಿಂದೆ ಸಿಡಿವ ಕೆಸರು ದಾರಿಯಲ್ಲಿ ನಡೆದು ಬರಬೇಕಾದ ನಮ್ಮ ಅನಿವಾರ್ಯತೆಯನ್ನು ಕಂಡು, ಹೆತ್ತವರು ಕನಿಕರ ವ್ಯಕ್ತಪಡಿಸುತ್ತಿದ್ದುದೂ ಉಂಟು. ಕೆಸರು ದಾರಿಯಲ್ಲಿ ನಡೆದು ಮಕ್ಕಳ ಕಾಲು “ಹೇಸಿ” ಹೋಗಿದೆ ಎಂದು ಮನೆಯವರು ಲೊಚಗುಟ್ಟಿದರೂ, ಶಾಲೆಗೆಹೋಗಿ ನಾಲ್ಕು ಇಂಗ್ಲಿಷ್ ಅಕ್ಷರ ಕಲಿಯುವುದು ಬಹಳ ಮುಖ್ಯವೆಂದು ಎಲ್ಲರೂ ಭಾವಿಸಿದ್ದರಿಂದ, ಆ ನಮ್ಮ ದಿನಚರಿ ಮಳೆಗಾಲದುದ್ದಕ್ಕೂ ಅವ್ಯಾಹತವಾಗಿ ಸಾಗಿತ್ತು.
ಮಳೆಗಾಲದಲ್ಲಿ ಶಾಲೆಮಕ್ಕಳ ಸಮವಸ್ತ್ರದ ಜೊತೆಗೆ. ಒಂದು ಕೈಯಲ್ಲಿ ಕಪ್ಪು ಬಟ್ಟೆಯ ಒಂದು ಕೊಡೆ, ಹೆಗಲಿನಲ್ಲಿ ಶಾಲೆಯ ಪುಸ್ತಕಗಳ ಚೀಲ, ಮಳೆ ಬಿರುಸಾಗಿದ್ದರೆ, ಕೊಡೆಯನ್ನು ಗುರಾಣಿಯಂತೆ ಮೈಗೆ ಇದಿರಾಗಿ ಹಿಡಿದು ಮನೆಯತ್ತ ಸಾಗಬೇಕಿತ್ತು. ಬೈಲುದಾರಿಯಲ್ಲಿ ಮಳೆಬಂದರಂತೂ, ಮೈ ಕೈ ಪೂರ್ತಿ ಒದ್ದೆಯೇ ಸರಿ. ಮನೆಗೆ ಬಂದು, ಒಲೆಯ ಹತ್ತಿರ ಪುಸ್ತಕ ಚೀಲವನ್ನಿಟ್ಟು, ಶೀತವೇರಿದ ಪುಸ್ತಕಗಳನ್ನು ಬಿಸಿ ಮಾಡುವ ಕೆಲಸ ನೆನೆದಷ್ಟು ಎನೋ ಹಿತ ಮನಸಿಗೆ.
ಬದಲಾವಣೆಯ ದಿನಗಳಲ್ಲಿ, ರೈನ್ ಕೋಟು ಬಳಕೆಗೆ ಬಂದು, ಮಕ್ಕಳಿಗೆ ಮಳೆಯಿಂದ ಸಾಕಷ್ಟು ರಕ್ಷಣೆ ದೊರೆಯಿತು. ಇನ್ನೂ ನಂತರದ, ಈಗಿನ ದಿನಗಳಲ್ಲಿ ರಸ್ತೆ ಸೌಕರ್ಯ ಮತ್ತು ವಾಹನ ಸೌಕರ್ಯವೂ ಸೇರಿಕೊಂಡು, ಮಕ್ಕಳೆಲ್ಲಾ ಶಾಲೆಯ ವಾಹನದಲ್ಲಿ ಹೋಗುವುದು ವಾಸ್ತವವಾಗಿಬಿಟ್ಟಿದೆ. ನಡೆದು ಹೋಗಿ ಶಾಲೆ ಕಲಿತ ನಾವು ಕೊನೆಯಲ್ಲಿ ಏನು ಮಾಡಿದೆವೋ, ಅದನ್ನು ಈಗಿನ ಮಕ್ಕಳು ಸಹಾ ಮಾಡಲು ಸಿದ್ದರಿದ್ದಾರೆ ಅದೆಂದರೆ ಕಲಿತು,ಶಹರದಲ್ಲಿ ಕೆಲಸ ಪಡೆದು, ದೂರ ದೂರಿಗೆ ವಲಸೆ ಹೋಗುವುದು ಮಾಮೂಲಾಗಿದೆ. ಹಳ್ಳಿ ಹುಡುಗರೆಲ್ಲಾ ಪೇಟೆಯವರಾಗಿ ರೂಪಂತರ ಹೊಂದುವ ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆದಿದೆ. ಒಂದೇ ವ್ಯತ್ಯಾಸವೆಂದರೆ, ಮಳೆಯಲ್ಲಿ ಅರೆಬರೆ ನೆನೆದು ಸಾಗುವ ನಮ್ಮ ಕಾಲದ ಪಜೀತಿ ಈಗ ಕಡಿಮೆಯಾಗಿದೆ.ತಲೆ ನೆನೆದರಂತೂ ಮುಗಿತು… ಹೆರಳುದ್ದದ ಆರೈಕೆ ಸುಲಭವಲ್ಲ.
ಮಳೆಗಾಲದ ದಿನಗಳು ಭಾವನಾತ್ಮಕ ಯೋಚನೆಗಳಿಗೆ ಉತ್ತಮ ನಾಂದಿ ಹಾಡುತ್ತವೆ. ಸಣ್ಣದಾಗಿ ಸುರಿವ ಮಳೆಯ ತಾಳದೊಂದಿಗೆ, ಮನೆಯೊಳಗೆ ಕುಳಿತು ಮಳೆಯನ್ನು ನೋಡುತ್ತಾ ಇದ್ದರೆ, ಅದ್ಯಾವುದೋ ಲೋಕದ ಭಾವಗಳೆಲ್ಲ ಮನಸ್ಸನ್ನು ತುಂಬುತ್ತವೆ. ಆ ರೀತಿ ಮನದುಂಬುವ ಭಾವಗಳು ಸಂತೋಷದ ಅಲೆಗಳನ್ನೂ ಹೊಮ್ಮಿಸಬಹುದು. ಸುಪ್ತ ಮನಸ್ಸಿನ ಮೂಲೆಯಲ್ಲವಿತು ಅದ್ಯಾವುದೋ ಜನ್ಮಾಂತರದ ನೆನಪುಗಳನ್ನು ಸಹಾ ಈಚೆ ತರಬಹುದು.ಅಂತಹ ಭಾವನೆಗಳ ತರಂಗಗಳನ್ನು ಸ್ವೀಕರಿಸುವ ರೀತಿ ನಮ್ಮ ಮನಸ್ಸಿನ ಮೇಲೆ ಗಾಢ ಅಚ್ಚೊತ್ತಬಲ್ಲದು.
ಮಳೆಗಾಲದಲ್ಲಿ ಭಾವಜೀವಿಯ ಭಾವನೆಗಳಿಗೆ ಕಾವ್ಯಾತ್ಮಕ ರೆಕ್ಕೆಗಳನ್ನು ಬೆಸೆಯುವ ಶಕ್ತಿಯುಳ್ಳದ್ದಿ ಮಳೆ.ಅದೆಷ್ಟೋ ಸಂದರ್ಭಗಳಲ್ಲಿ ಎಲ್ಲರ ಮೇಲೂ ಮೋಡಿ ಮಾಡುವುದಂತು ದಿಟ.
ಮಳೆಗಾಲದ ಸ್ಥಿತಿ ಗತಿಗಳು ಬದಲಾದ ಹಾಗೆ.ಆಗಿನ ಸುಖ ದುಃಖ ಪ್ರಕೃತಿಯ ಉಳಿವಲ್ಲಿ ಅಡಗಿರುತ್ತಿತ್ತು. ಅದರೆ ಈಗಿನ ಮಳೆ ಇಡೀ ಬ್ರಹ್ಮಾಂಡದ ಅಳಿವಿಗೆ ಕಾರಣವಾಗುತ್ತಿದೆ.ಕಾಡು ಬೆಳೆಸಿದಷ್ಟು ಮಳೆಗೊಂದು ಬೆಲೆ.ಮಾನವ ಜನ್ಮಕ್ಕೊಂದು ನೆಲೆ…ಹಿಂದೆ ನಾವು ಕಳೆದ ಅನುಭವ ಮಕ್ಕಳಿಗೆ ದಕ್ಕುವಂತ ಪರಿಸರ ನಿರ್ಮಿಸುವುದು ನಮ್ಮ ಕರ್ತವ್ಯವಾದರೆ ಒಳಿತು.
ಶಿವಲೀಲಾ ಹುಣಸಗಿ
ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ
ತುಂಬಾ ಸುಂದರವಾಗಿದೆ.
ಮಳೆಗಾಲದ ಸಮಯವನ್ನು ತಮ್ಮ ಲೇಖನಿಯ ಮೂಲಕ ಸೆರೆ ಹಿಡಿದ ರೀತಿ ಖುಷಿ ತಂದಿದೆ…..
ಸಂದರ್ಭಕ್ಕನುಗುಣವಾಗಿ ಮೂಡಿ ಬಂದ ಲೇಖನ. ಮಳೆಗಾಲ ದ ಬಗ್ಗೆ,ಪರಿಸರದಲ್ಲಿ ಮೂಡಿಬರುವ ಚಿತ್ರಣದ ಕುರಿತು,ಬಾಲ್ಯದಲ್ಲಿ ಮಕ್ಕಳ ಮನಸ್ಥಿತಿ ಹೇಳುವುದರೊಂದಿಗೆ,ಈಷ್ಟೆಲ್ಲ ನಾವು ಆಸ್ವಾದಿಸುವುದು ಸದಾ ನಮ್ಮೊಂದಿಗಿರಬೇಕೆಂದರೆ ನಾವು ಪರಿಸರ ರಕ್ಷಣೆ ಮಾಡಿದಾಗ ಎಂಬ ಸಂದೇಶ
Tumba chenagide lekhana.. nam hale dinagalu nenapagutave..shale inda baruvag male neerina hundi yali jigiyudu..malerayana hadu yala..present generation ge rain rain go away annoda aste gottu..
ಮಳೆಗಾಲದ ಬದಲಾವಣೆ ಹಾಗೂ ಪುಟಾಣಿಗಳ ಪಚಿತಿ ನಿಜವನ್ನು ತಿಳಿಸಿದೆ.
ಮಳೆಗಾಲದ ನೈಜ ಚಿತ್ರಣ ಸೂಪರ್