ಕಾವ್ಯ ಸಂಗಾತಿ
ಗಜಲ್
ಅರುಣಾ ನರೇಂದ್ರ
ಏನ ಬರೆಯಲಿ ಜೀಯಾ ನೀನು ಕೊಟ್ಟ ಭಾವಗಳ ಮರಳಿ ಪಡೆದ ಮೇಲೆ
ಎನಿತು ಹಾಡಲಿ ಜೀಯಾ ನಾನು ಮಿಡಿದ ರಾಗಕೆ ಶ್ರುತಿ ಸೇರದ ಮೇಲೆ
ಬೆಳಕಿಗಾಗಿ ಬೊಗಸೆ ಒಡ್ಡಿರುವಾಗ ಮಿಂಚಂತೆ ಮಿಂಚಿ ಮಾಯವಾದೆ
ಎಲ್ಲಿ ಹುಡುಕಲಿ ಜೀಯಾ ನನ್ನ ಕಂಗಳಿಗೆ ಕಗ್ಗತ್ತಲೆ ಕವಿದ ಮೇಲೆ
ಅಪ್ಪಳಿಸುವ ಅಲೆಯ ಆರ್ಭಟದಲಿ ದಡದ ನಿಟ್ಟುಸಿರು ಕೇಳುವರಾರು
ಹೇಗೆ ಮೌನ ಮುರಿಯಲಿ ಜೀಯಾ ನೀನು ಮಾತು ತೊರೆದ ಮೇಲೆ
ಲೆಕ್ಕಕ್ಕೆ ಸಿಗದ ನೋವುಗಳು ನಿತ್ಯ ಕಾಡುತಿವೆ ತಲೆ ಏರಿ ಕುಳಿತು
ಯಾವ ಸುಖ ಬಯಸಲಿ ಜೀಯಾ ನೀ ನನ್ನ ಜೊತೆಗೆ ಇರದ ಮೇಲೆ
ಅರುಣಾಗೆ ಬಾಳಿನಾಟದ ಪಾತ್ರ ಕೊಟ್ಟು ಸೂತ್ರ ಹಿಡಿದವ ನೀನು
ಎಂಥ ಪೋಷಾಕು ಧರಿಸಲಿ ಜೀಯಾ ನಾಟಕ ಮುಗಿದ ಮೇಲೆ