ಕಥಾ ಸಂಗಾತಿ
ಸೆನೆಟ್
ದೀಪಾ ಗೋನಾಳ್
ಕಳೆದ ಏಳು ವರ್ಷಗಳಿಂದ ಅವಳು ವಾರದಲ್ಲಿ ಎರಡು ಸಲ ಈ ಕಿನಾರೆಗೆ ಬಂದು ಎದುರಿನ ಬೆಂಚಿನ ಮೇಲೆ ಕೂಡುತ್ತಾಳೆ. ಅಮವಾಸ್ಯ ಹುಣ್ಣಿಮೆ ದಿನವಂತು ಸ್ವಲ್ಪ ಹೆಚ್ಚು ಹೊತ್ತು ಕೂತಿರುತ್ತಾಳೆ ದೊಡ್ಡ ಅಲೆಗಳನ್ನ ನುಂಗುವವಳಂತೆ ಕೂತಿರುತ್ತಾಳೆ. ಅವನೂ ಬರುತ್ತಾನೆ ಅವಳು ಬಂದ ದಿನ. ಮೊದಮೊದಲು ನೋಡಿ ನಗುತ್ತಿದ್ದರು ಒಬ್ಬರನ್ನೊಬ್ಬರು ಆಮೇಲಾಮೇಲೆ ಸಣ್ಣ ಪರಿಚಯ. ಅವನು ಪ್ರೀತಿಸಹತ್ತಿದ ಅವಳು ಕೂಡುವ ಬೆಂಚಿಗೆ ಬಂದು ಕಾಯುತ್ತಿದ್ದ. ಕಡಲನ್ನ ತದೇಕಚಿತ್ತದಿಂದ ಕಾಣುತ್ತಿದ್ದ ಅವಳ ಕಣ್ಣೊಳಗೆ ತನ್ನ ಬಿಂಬ ಹುಡುಕುತ್ತಿದ್ದ.
ಲಂಗರು ಹಾಕಿದ್ದ ನಾನಾ ನಮೂನೆಯ ಹಡಗು,ಲಾಂಚು, ದೊಡ್ಡ ದೊಡ್ಡ ಬೋಟುಗಳನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಳು. ಒಮ್ಮೊಮ್ಮೆ ತನ್ನವರು ಯಾರೋ ಇಳಿದು ಬರುತ್ತಾರೇನೊ ಅನ್ನುವಷ್ಟು ಉಮೇದಿನಿಂದ ಕಾಯುತ್ತಿದ್ದಳು. ಬಣ್ಣಬಣ್ಣದ ಶಂಖ,ಚಿಪ್ಪುಗಳನ್ನ ಆಯ್ದು ಆಡುತ್ತಿದ್ದ ಮಕ್ಕಳ ಉಡಿಗೆ ಹಾಕಿ ಸಣ್ಣಗೆ ಕಿರುನಗೆ ಬೀಸಿ ಹೊರಡುತ್ತಿರುವಾಗ ಇವನು ಅವಳ ಹಿಂದೆಯೇ ಹೋಗಿ ಅವಳು ಬಸ್ಸು ಹತ್ತುವರೆಗೆ ನಿಂತು ಕೈಬೀಸಿ ಬರುತ್ತಿದ್ದ.
*
ಉತ್ತರ ಕರ್ನಾಟಕದ ಮೆದು ಮಣ್ಣಿನಿಂದ ಬೆವರಿನ ಊರಿಗೆ ಬಂದು ಸಿ ಇ ಟಿ ಬರೆದು ಜಿಲ್ಲೆಗೆ ಮೊದಳಿಗಳಾಗಿ ತೇರ್ಗಡೆಯಾಗಿ ಬೀಚು ಪಕ್ಕದ ಕನ್ನಡ ಶಾಲೆಯಲ್ಲಿ ಟೀಚರಾದ ಹುಡುಗಿಯದು.
*
ಒಂದಿನ ಗಟ್ಟಿ ಧೈರ್ಯ ಮಾಡಿ ಕೇಳಿದ “ಏನು ಉತ್ತರ ಕರ್ನಾಟಕದ ಹುಡುಗಿಗೆ ನಮ್ಮ ಕಡಲಿನ ಮೇಲೆ ಇಷ್ಟೊಂದು ಒಲವು”.
ನಸುನಕ್ಕು “ನನ್ನ ಅಮ್ಮ ಅಪ್ಪ ತಮ್ಮ ಇಲ್ಲೆ ಇದಾರೆ ಕಡಲಲ್ಲಿ ನಾನು ಒಂದಿನ ಅವರನ್ನ ಸೇರ್ತಿನಿ ನಮ್ಮ ಕುಟುಂಬ ಮತ್ತೆ ಒಂದಾಗುತ್ತೆ ಮೊದಲಿನಂತೆ”ಅಂದು ಎದ್ದೋಗಿದ್ದಳು.
ಇದೊಂತರಾ ಒಗಟಾಗಿ ಕಂಡಿತು ಪಾಪ ಅವನಿಗೆ ಇವರ ಅಪ್ಪ ಅಮ್ಮ ಏನು ಮತ್ಸ್ಯೆಯರೆ ಅಂದುಕೊಳ್ಳುತ್ತಾ ಅವಳಿಗೆ ಗೊತ್ತಿಲ್ಲದೆ ತೆಗೆದ ಅವಳ ಫೋಟೊ ಒಂದನ್ನ ಗ್ಯಾಲರಿಯಿಂದ ತೆಗೆದು ನೋಡುತ್ತಾ ನಿದ್ದೆಗೆ ಜಾರಿದ.
*
ಮಾರನೆ ದಿನ ಕಾರಹುಣ್ಣಿಮೆ ಅವಳಿಗಾಗಿ ಕಾದುಕೂತು ಅದೇ ಸಮುದ್ರದಂಚಿನಲ್ಲಿ, ಅವಳು ಬರಲಿಲ್ಲ. ಮಾರನೆ ದಿನ ಕೂಡ ಕಾದ. ಮೀನುಗಾಗರು ಪಕ್ಕದ ಕಿನಾರೆಯಲ್ಲಿ ಯಾವುದೊ ಹುಡುಗಿ ಹೆಣ ಸಿಕ್ಕಿದೆ ಅಂತ ಗುಸುಗುಸು ಸುದ್ದಿ ತಂದು ಹಡಗಿನಿಂದ ಇಳಿದರು.
ಇವನು ಹೋಗಿ ನೋಡಿದಾಗ ಅಲ್ಲಿದ್ದದ್ದು ತಾನು ಇಷ್ಟುಕಾಲ ತನ್ಮಯನಾಗಿ ಪ್ರೀತಿಸಿದ ಸೆನೆಟ್. ಪೋಲಿಸರಿಗೆ ತನಗೆ ಈ ಹುಡುಗಿ ಗುರ್ತಿರುವುದಾಗಿ ಹೇಳಿ ಅಲ್ಲಲ್ಲಿ ಸಹಿ ಮಾಡಿ, ಪೋಸ್ಟ್ ಮಾರ್ಟಮ್ ನಲ್ಲಿ ಅವಳ ಅಂಗೈಯಗಲದ ಮೊಕವಷ್ಟೆ ಕಾಣುವಂತೆ ಕಟ್ಟಿಕೊಂಟ್ಟ ಒಲವಿನ ಗಂಟನ್ನ ತಂದು ಅಂತ್ಯಕ್ರಿಯೆ ಮಾಡಿದ. ಅವಳ ರೂಮಿನಿಂದ ಸಿಕ್ಕ ಕೆಲವು ಡೈರಿ ಓದುತ್ತ ಕುಳಿತ.
ಸೆನೆಟ್ ಳ ತಂದೆ ಒಥ್ನೀಲ್ ಹುಬ್ಬಳ್ಳಿಯ ಕಹಳೆ ಪೇಪರಿನ ಎಡಿಟರ್ ಆಗಿ ಕೆಲಸ ಮಾಡ್ತಿದ್ದ. ತುಂಬ ಪ್ರಾಮಾಣಿಕ ವ್ಯಕ್ತಿ. ಹೆಸರಿಗೆ ತಕ್ಕ ಹಾಗೆ ನ್ಯಾಯದ ಪಥದಲ್ಲಿ ನಡೆದವ. ತಾಯಿ ಎಲಿಜೆಬೆತ್ ಮಹಾ ಅಂತಃಕರಣದ ಹೆಣ್ಣುಮಗಳು.ಒಬ್ಬ ಪುಟ್ಟ ತಮ್ಮ ಪೀಟರ್. ಹುಬ್ಬಳ್ಳಿಯ ವಿದ್ಯಾನಗರದ ಬಡಾವಣೆಯೊಂದರಲ್ಲಿ ತುಂಬ ನೆಮ್ಮದಿಯ ಸಂಸಾರ ಸಾಗಿಸುತ್ತಿದ್ದ ದಿನಗಳಲ್ಲಿ ನಾಲ್ಕು ದಿನ ರಜೆ ಪಡೆದು ತನ್ನ ಮೂಲ ಊರಾದ ಮಂಗಳೂರಿಗೆ ಸಂಸಾರ ಸಮೇತ ಬಂದ ಓಥ್ನೀಲ್ ಲಾಂಚ್ ನಲ್ಲಿ ಹೆಂಡತಿ ಮಕ್ಕಳನ್ನ ಕರೆದುಕೊಂಡು ಹವಾನಾ ಐಲ್ಯಾಂಡ್ನತ್ತ ಹೊರಟಿದ್ದ, ಇನ್ನೇನು ನಾಲ್ಕಾರು ನಿಮಿಷಗಳಲ್ಲಿ ಲಾಂಚ್ ಐಲ್ಯಾಂಡನ್ನ ತಲುಪಬೇಕು ಧುತ್ತನೆ ಬಂದ ದೊಡ್ಡ ಗಾಳಿಯ ಹೊಡೆತಕ್ಕೆ ಲಾಂಚು ಬುಡಮೇಲಾಯಿತು. ಸೇಫ್ಟಿ ಜಾಕೆಟ್ಟುಗಳು ಎಲ್ಲರ ಅದೃಷ್ಟವನ್ನ ಬದುಕುಳಿಸಲಿಲ್ಲ. ಸೆನೆಟ್ ಉಳಿದಿದ್ದಳು ದುರಾದೃಷ್ಟವಷಾತ್. ಬದುಕಿನ ಉದ್ದೇಶ ಈಗ ಅಪ್ಪ ಅಮ್ಮ ತಮ್ಮನನ್ನ ಸೇರುವುದಾಗಿತ್ತು. ಧೈರ್ಯ ಒಗ್ಗುಡಿಸಲು ಅವಳು ಮತ್ತೆ ಇಪ್ಪತ್ತು ವರ್ಷ ಕಾಯಬೇಕಾಯಿತು. ಒಂದು ಪೌರ್ಣಿಮೆಯ ದಿನ ಬಂದು ಸೇರುವೆ ಎಂದು ಬರೆದುಕಿಂಡಿದ್ದ ಪುಟ ಓದುತ್ತಿದ್ದಂತೆ ಅವನು ಗದ್ಗದಿತನಾದ.
ಇದಿಷ್ಟು ಓದಿ ಪುಟ ತಿರುವ ಬೇಕೆಂದಿದ್ದ ಹುಡುಗನಿಗೆ ಯಾಕೋ ಈ ಕೂಡಲೇ ಹೋಗಿ ಅವಳನ್ನ ಸೇರಬೇಕು ಅನಿಸ್ತು ಸೀದ ಕಡಲೆದೆಗೆ ಎದೆಗೊಟ್ಟು ನಡೆದು ಹೊರಟುಬಿಟ್ಟ. ಕಡಲ ಒಳಗೆ.