ಅಂಕಣ ಸಂಗಾತಿ
ಸಕಾಲ
ಆತ್ಮಸಾಕ್ಷಿಗೊಂದುಚಿಂತನೆಅಷ್ಟೇ
ಮುಸುಕಿನ ಗುದ್ದಾಟವೆಂದರೆ ಅದೊಂದು ವಿಚಿತ್ರ ಸಂಗ್ರಾಮ.ವಿವಿಧ ಕಾಲಘಟ್ಟದಲ್ಲಿ ವಿಚಾರ ವಿನಿಮಯಗಳಲ್ಲಿ ಕಂಡುಬಂದ ಸತ್ಯಾಸತ್ಯತೆಯನ್ನು ಪೂರ್ಣಪ್ರಮಾಣದಲ್ಲಿ ಅರ್ಥೈಸಿಕೊಳ್ಳಲು ಹಾಗೂ ಅದರ ತಾರ್ಕಿಕ ನೆಲೆಗಟ್ಟಲ್ಲಿ ಚಿಂತಿಸಲು ನಮಗೀಗ ಸಾಧ್ಯವಾ? ಆಕರ ಗ್ರಂಥಗಳು ಒದಗಿಸಿದ ದೃಷ್ಟಿಕೋನದಿಂದ ಮಾತ್ರ ಗ್ರಹಿಸುವುದು. ಅಂತಹ ಸಂದರ್ಭದಲ್ಲಿ ಚಿಂತೆಯೆಂಬ ಪೆಡಂಭೂತ ಬಡಕೊಂಡ ಮೇಲೆ ನಮ್ಮ ಈಗಿನ ವಸ್ತು ಸ್ಥಿತಿಗಿಂತ ಪಕ್ಕದ ಮನೆಯ ವಾಸ್ತವಕ್ಕೆ ಹೆಚ್ಚು ಚಿಂತೆಮಾಡುವ ಮನೋಭಾವ ಮೈದುಂಬಿ ನಿಂತಂತೆ.ವಿಚಿತ್ರವಾದರೂ ಸತ್ಯ.
ದೊಡ್ಡವರ ಬುದ್ಧಿಮಾತನ್ನು ನಮಗೆ ಬೇಕಾದಂತೆ ತಿರುಗಿಸುವುದು; ಪ್ರಸಿದ್ದವಾದ ಹೇಳಿಕೆಯನ್ನು ನಮ್ಮ ಸಂದರ್ಭಕ್ಕೆ ಒದಗುವ ಹಾಗೆ, ಮೂಲೋದ್ದೇಶಕ್ಕೆ ವಿರುದ್ಧವಾಗಿ ಅರ್ಥೈಸುವುದು; ಇವೆಲ್ಲ ಎಲ್ಲರೂ ಬಲ್ಲ ಹಳೆಯ ವಿದ್ಯಮಾನವೇ. ಈ ತರದ ‘ಅನುಕೂಲವೇದಾಂತ’ ಬಹುಶಃ ವೇದಾಂತಕ್ಕಿಂತಲೂ ಪ್ರಾಚೀನ’ ‘ಪರಚಿಂತೆ ಎಮಗೆ ಏಕೆ, ಅಯ್ಯಾ?’ ಎಂಬ ಬಸವಣ್ಣನವರ ಪ್ರಶ್ನೆಗೆ.ಆಶ್ಚರ್ಯವಾದರೂ ನೈಜತೆಗೆ ಒಗ್ಗದ ಮನಸ್ಸು. ಬಸವಣ್ಣನರು ಮಾನಸಿಕ,ಭೌತಿಕ ಪ್ರಬುದ್ಧ ಮನಸ್ದಿತಿ ಹೊಂದಿದವರು.ಇವರು ಬರೆದ ವಚನದ ಭಾವ ಕೊಂಚ ಬದಲಾಗಿ ಅರ್ಥೈಸಲಾಗಿದೆ.
‘ಪರಚಿಂತೆ ಎನಗೆ ಬೇಕೇ..ಬೇಕು!’ ಎಂದು ಇಣುಕುವ ,ಮೂಗು ತೂರಿಸುವ ಗುಂಪು ನಮ್ಮೆದುರು ದುತ್ತನೆ ನಿಲ್ಲುತ್ತದೆ.ಅವರಿಗೇನೂ ಆಮಂತ್ರಣ ನೀಡಬೇಕಿಲ್ಲ…ನಮ್ಮ ಸಂಪೂರ್ಣ ಹಿಸ್ಟರಿ ಅವರು ಕಲೆಹಾಕಿರುತ್ತಾರೆ.ಒಮ್ಮೊಮ್ಮೆ ಪರರ ಚಿಂತೆ ಮಾಡುವುದು ತಪ್ಪಾ? ಸರಿಯಾ? ಎಂಬ ನನ್ನೊಳಗಿನ ದ್ವಂದ್ವಗಳು ಆಗಸಕ್ಕೆ ನಾಣ್ಯ ಚಿಮ್ಮಿಸಿ ಹೆಡ್ಡಾ? ಟೇಲಾ ಕೇಳಿದಂತೆ.ಒಳ ಕೂಗು ಪರಚಿಂತೆ ಎಮಗೆ ‘ಏಕೆ?’ ಎನ್ನುವುದಕ್ಕಿಂತ, ‘ಬೇಕು’ ಎನ್ನುವುದೇ ಸರಿ ಅಂತ.
ಎಷ್ಟೊಸಲ ಪರ,ಪರಾಯಾ,ಇಲ್ಲಿಯದಲ್ಲ,ಅದೊಂದು ವಿಶಿಷ್ಟವೆನಿಸದೇ ಇರದು. ಪರ ಶಬ್ದಕ್ಕೆ ಮೇಲಿನ ‘ಹೆಚ್ಚಿನ’ಎಂಬ ಅರ್ಥವೂ ಇದೆ. ‘ಇಹ’ಕ್ಕಿಂತಲೂ ಶ್ರೇಷ್ಠವಾದದ್ದು ಈ ‘ಪರ’. ನಮ್ಮ ಸಾಧು-ಸಜ್ಜನರೂ ಶಾಸ್ತ್ರಗ್ರಂಥಗಳೂ ಹೇಳಿರುವುದು ‘ಇಹದ ಚಿಂತೆಗೆ ಒಂದು ಮಿತಿ ಹಾಕಿ ಪರದ,ಇಹಲೋಕದ ಕಡೆಗೆ ಗಮನ ಕೊಡಿ; ಪರವೇ ಸತ್ಯ, ಇಹವಲ್ಲ’ ಅಂತ. ಪರ ಚಿಂತೆ ಎಂದರೆ ಪರದ-ಪರಲೋಕದ ಚಿಂತೆ; ಪರಮಾತ್ಮನ ಚಿಂತೆ; ಪರಾತ್ ಪರನ ಚಿಂತೆ. ಆದ್ದರಿಂದ ಪರಚಿಂತೆ ಒಳ್ಳೆಯದೇ; ಅದು ನಮಗೆ ಬೇಕಾದದ್ದೇ.ದೈವಿಕ ಚಿಂತನೆ, ಮೋಹ ಮಾಯದ ಬಿಡುಗಡೆ,ಜೊತೆಗೆ ಇಹ,ಪರದ ಪರಿಕಲ್ಪನೆ ವೈರಾಗ್ಯ,ತ್ಯಾಗದಲ್ಲಿ ಲೀನ. ಹಾಗಿದ್ದ ಮೇಲೆ ಪರ ಚಿಂತೆ ಇಷ್ಟು ಸುಲಭವಾ?ಆದರೆ ಈ ವಿವರಣೆಯನ್ನು ಎಲ್ಲರೂ ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. “ಅಯ್ಯಾ! ಹಾಗಲ್ಲ ಅದು. ಪರ ಎಂದರೆ ಇಲ್ಲಿ ‘ಬೇರೆಯ’ ‘ಅನ್ಯ’ ಅಂತರ್ಥ. ಅದರಲ್ಲೂ ‘ಎಮ್ಮಯ ಚಿಂತೆ…’ ಅಂತ ಬರುವುದರಿಂದ ಪರ ಎಂದರೆ ‘ಬೇರೆಯವರು’ ಅಂತಲೇ ಇಂಗಿತ. ‘ಸುಮ್ಮನೆ ಅವರಿವರ ಚಿಂತೆ ಬಿಟ್ಟು ನಮ್ಮ ಚಿಂತೆ ನಾವು ಮಾಡಿಕೊಳ್ಳೋಣ’ ಎನ್ನುವುದು ಇಲ್ಲಿನ ಮೂಲೋದ್ದೇಶ” ಇದಕ್ಕಿಂತ ಹೆಚ್ಚಿಗೆ ಚಿಂತಿಸಿ ಅರ್ಥಗೇಡುವಂತೆ ಮಾಡುವುದು ಸರಿಯಾ? ಎಂದು ಮೂಗು ಮುರಿದವರೂ ಇದ್ದಾರೆ.
“ಬಸವಣ್ಣನವರ ವಚನ“
“ಪರಚಿಂತೆ ಎಮಗೆ ಏಕೆ ಅಯ್ಯಾ? ಎಮ್ಮಯ ಚಿಂತೆ ಎಮಗೆ ಸಾಲದೇ?
ಕೂಡಲಸಂಗನು ಒಲಿವನೋ ಇಲ್ಲವೋ ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು”
ಜಗಜ್ಯೋತಿ ಬಸವಣ್ಣ ಎಂದರೆ ಭಕ್ತಿಭಂಡಾರಿ, ಮಹಾ ಕರ್ಮಯೋಗಿ, ಮಾನವತಾವಾದಿ, ಸಮತಾವಾದಿಯ, ಜೀವನ-ಬೋಧನೆಗಳ ಹಿನ್ನೆಲೆಯಲ್ಲಿ ನೋಡಿದರೆ ಈ ವಚನದ ಭಾವಾರ್ಥ: ನಮಗಾಗಲಿ ಪರರಿಗಾಗಲಿ ಒಳಿತು ಮಾಡದಂತಹ ಕ್ಷುದ್ರ ವಿಚಾರಗಳ ಕಡೆಗೆ ನಮ್ಮ ಗಮನ ಬೇಡ. ಕೈಲಾಸ ಎನ್ನುವುದು ಇದ್ದರೆ ಅದು ಪರಸ್ಪರ ಪ್ರೀತಿ. ಸಹಕಾರ, ಸಮಾನತೆಗಳನ್ನು ಆಧರಿಸಿದ ಮಾನವೀಯ ಸಂಬಂಧದಲ್ಲಿ ಮಾತ್ರವೇ; ಈ ಮೌಲ್ಯಗಳನ್ನು ಹೆಚ್ಚಿಸುವಂತಹ ಸಕಾರಾತ್ಮಕ ಚಿಂತನೆಯಲ್ಲಿ ತೊಡಗಿ ಜೀವಿಸೋಣ. ’ಆತ್ಮಸಾಕ್ಷಿಗೊಂದು ಚಿಂತನೆ ಅಷ್ಟೇ’
ಹಾಗಿದ್ದ ಮೇಲೆ ಪರರು-ಪರರದೆಂದರೆ ಯಾವುದು?ತಾನು-ತನ್ನದೆಂದರೆ ಯಾವುದು? ಸ್ವಾರ್ಥ-ಪರಾರ್ಥ ಪ್ರತ್ಯೇಕಿಸುವುದು ಹೇಗೆ? ಸ್ವಚಿಂತೆಯಿಲ್ಲದ ಪರಚಿಂತೆ ಸಾಧ್ಯವೇ? ಬ್ರಹ್ಮಾಂಡದಷ್ಟು ವಿಶಾಲ. ಪರಮಾಣುವಿನಷ್ಟು ಕ್ಲಿಷ್ಟ ವಿಚಾರ. ನಮ್ಮ ಇಡೀ ಅಸ್ಥಿತ್ವದ, ಜೀವಿತೋದ್ದೇಶದ ವಿಮರ್ಶೆ ಇಲ್ಲಿ ಅಡಗಿದೆ.
ಜೀವಲೋಕದದಲ್ಲಿ ಸ್ವಾರ್ಥ-ಪರಾರ್ಥಗಳು ಒಂದರೊಡನೆ ಒಂದು ಎಷ್ಟು ಹಾಸುಹೊಕ್ಕಾಗಿವೆ.ಅದು ಬೀಜವೃಕ್ಷನ್ಯಾಯದಷ್ಟೇ ಸಂಕೀರ್ಣ. ಯಾವುದು ಮೊದಲು; ಯಾವುದರಿಂದ ಯಾವುದು? ಹೇಳುವುದು ಕಷ್ಟ. ನಾವು ನಿರ್ವಹಿಸುವ ಕಾಯಕದಲ್ಲಿ ಯಾವುದು ಪೂರ್ತಿ ಸ್ವಾರ್ಥಪ್ರೇರಿತ? ಯಾವುದು ಸಂಪೂರ್ಣ ನಿಃಸ್ವಾರ್ಥದ್ಯೋತಕ ಎಂದು ಹೇಳುವುದು ಅಸಾಧ್ಯ.
“ಏ ಮೇರೆ ವತನಕೇ ಲೋಗೋ ಜರಾ ಆಂಖ ಮೇ ಭರಲೋ ಪಾನಿ ಜೋ ಶಹೀದ ಹುವೇ ಹೈ ಉನಕಿ ಝರಾ ಯಾದ ಕರೋ ಕುರುಬಾನಿ”…ಈ ಹಾಡು ದೇಶದ ಕೋಟಿ ಜೀವಗಳ ನಾಡಿ ಮಿಡಿತ.ದೇಶ ರಕ್ಷಣೆಗಾಗಿ ತನ್ನ ಪ್ರಾಣವನ್ನು ಪಣವಿಟ್ಟು, ವೈರಿಯ ಗುಂಡಿಗೆ ಗುಂಡಿಗೆಯೊಡ್ಡಿ, ನೆಲ-ಜಲ-ಅನಲಗಳಲ್ಲಿ ಕಾದು ಕುದ್ದು ಕಾದುತ್ತಿರುವ ಒಬ್ಬ ಸಾಮಾನ್ಯ ಸೈನಿಕ ನಿಃಸ್ವಾರ್ಥತೆಯ ಬಿಂಬ.ಸೈನಿಕರ ತ್ಯಾಗವನ್ನು ಬಣ್ಣಿಸುವ ಗಾನ ಕೋಗಿಲೆ ಲತಾ ಮಂಗೇಶ್ಕರರ ಹಾಡನ್ನು ಕೇಳಿದ ಪ್ರತಿಯೊಬ್ಬ ಭಾರತೀಯನ ಕಣ್ಣುಗಳು ಒಂದು ಕ್ಷಣ ಒದ್ದೆಯಾಗದೆ ಇರದು.
ನಮ್ಮ-ನಿಮ್ಮಂಥವರ ದೃಷ್ಟಿಯಲ್ಲಿ ಸೈನಿಕನಾಗುವ ಕೆಲಸ ಅತಿ ಕಠಿಣ, ಅಪಾಯಕಾರಿ; ಜೊತೆಗೆ ಅತಿ ಕಡಿಮೆ ಪ್ರತಿಫಲದ್ದು; ಆದ್ದರಿಂದ ಅವರು ವೀರ ಮರಣ ಅಪ್ಪಿದಾಗ ಸಹಜವಾಗಿ ‘ಪಾಪ!’ ಎನ್ನುತ್ತೇವೆ. ಮರುಗುತ್ತೇವೆ,ಕಂಬನಿ ಮಿಡಿಯುತ್ತೆವೆ. ಅವರು ನಿಸ್ವಾರ್ಥಿ, ದೇಶಪ್ರೇಮಿ ಎನ್ನುತ್ತೇವೆ. ಇವರನ್ನೆಲ್ಲ ನೆನಪಿಸಿಕೊಂಡರೆ ನಿಸ್ವಾರ್ಥ ಕಲ್ಪನೆ ಅಷ್ಟೊಂದು ಉತ್ಕಟವಾಗಿ ಮೂಡಲಾರದು.ಯಾಕಿರಬಹುದು, ಅವರು ಸ್ವತಃ ಪ್ರಾಣತ್ಯಾಗ ಮಾಡುವ ಸಾಧ್ಯತೆ ಕಡಿಮೆಯೆಂದೇ? ಅವರಿಗೆ ಸಿಗುವ ಸುಖ-ಸವಲತ್ತು ಗಳು ಹೆಚ್ಚೆಂದೇ,ಕಡಿಮೆಯೆಂದೆ? ಇವೆಲ್ಲವನ್ನೂ ಮೀರಿ ಚಿಂತಿಸುವ ಶ್ರೇಷ್ಠ ಮನೋಭಾವ ಬೆಳೆದಷ್ಟು ಒಳಿತು.ಮಹಾನ್ ನಾಯಕರ ಬಲಿದಾನದ ನೆತ್ತರು ವ್ಯರ್ಥವಾಗಿ ಹರಿದು ಹೋದರೆ ಬೆಲೆಯೆಲ್ಲಿ? ಮುಂದಿನ ಭಾವಿ ಭವಿಷ್ಯದ ಕನಸು ಹೊತ್ತು ಮಡಿದರವರ ಪರ ಚಿಂತೆ ನಿಜವಾಗಲೂ ಆದರ್ಶ,ಅನುಕರಣೀಯ..
ಇದನ್ನೇ ‘ಬೇಕು’ ಎಂದು ಹೇಳಿದ ‘ಪರಚಿಂತೆ!’ಅಂದರೆ, ಬಸವಣ್ಣನನಂಥವರು,ಮಹಾತ್ಮರೂ ಇದಕೆ ಸರಿಯೆಂದು,ಜೊತೆಗೆ ಧರ್ಮವೆಂದು ಎತ್ತಿಹಿಡಿದ ತತ್ವವಿದು.ಕೇವಲ ಸ್ವಾರ್ಥವನ್ನು ಆದರಿಸಿದ ಯಾವುದೇ ವ್ಯವಸ್ಥೆಯಾದರೂ ಅದು ಸಂಸ್ಕೃತಿಗೆ ಅಪವಾದ; ಅದಕ್ಕೆ ಮನ್ನಣೆಯಿಲ್ಲ. ಒಬ್ಬ ನಿರಂಕುಶಪ್ರಭು ಕೂಡ ತಾನು ತನ್ನ ಪ್ರಜೆಗಳ ಹಿತವನ್ನೇ ಕಾಯುತ್ತಿದ್ದೇನೆ ಎಂಬ ವಿಶ್ವಾಸ ಹುಟ್ಟುವಂತೆ ಆಳಿದರೆ ಮಾತ್ರ ಜನರ ಪ್ರೀತಿ ಗೌರವಗಳಿಗೆ ಪಾತ್ರನಾಗಿರುತ್ತಾನೆ; ಚರಿತ್ರೆಯಲ್ಲಿ ಸ್ಥಾನ ಗಳಿಸುತ್ತಾನೆ. ಹಾಗಲ್ಲದಿದ್ದರೆ ಅವಗೆ ಒಬ್ಬ ದರೋಡೆಕೋರನ ಕುಖ್ಯಾತಿಯಷ್ಟೇ ಹೆಸರು ಲಭ್ಯ.ಸಮುದಾಯದ ಒಳಿತಿಗಾಗಿ ವೈಯಕ್ತಿಕ ತ್ಯಾಗ, ರಾಷ್ಟ್ರೀಯ ಶ್ರೇಯಸ್ಸಿಗಾಗಿ ಭಾಷೆ,ಪ್ರಾಂತ,ಜಾತಿ,ಪಂಥ ಆಧರಿಸಿದ ಪರಿಮಿತ ಆಸಕ್ತಿಗಳ ತ್ಯಾಗ ಅತ್ಯಾವಶ್ಯಕ ಎನ್ನುತ್ತಾರೆ.ನಮ್ಮ ವೈವಾಹಿಕ ಜೀವನವೂ ಕೂಡ ಕೇವಲ ಕಾಮೋಪಭೋಗಕ್ಕಲ್ಲ; ಅದು ತ್ಯಾಗಕ್ಕೆ ಎಡೆಮಾಡಿಕೊಡಬೇಕು’ ಎಂಬ ಮೌಲ್ವಿಕ ಭಾವ ಅಡಗಿದೆಯೆಂದರೆ ತಪ್ಪಾಗದು.
ವಾಸ್ತವವಾಗಿ, ತಮಗಿಂತ ಹೋಲಿಕೆಯಲ್ಲಿ ಅತಿ ಬಡವರಾದ ಕೋಟ್ಯಂತರ ಜನರಿಗಿಂತಲೂ ಇವರ ಮನಸ್ಸು, ಜೀವನ, ಆಲೋಚನೆ ಉದಾತ್ತವೂ ಸರಳವೂ ಆಗಿರುವ ಸಾಧ್ಯತೆಯೇ ಹೆಚ್ಚು! ಇದೇ ಮಾತು, ಯಾವುದೇ ಕೊರತೆಯಿಲ್ಲದಂತೆ ಬದುಕುವಂತೆ ತೋರುವ ಸಾಧು-ಸಜ್ಜನರಿಗೆಲ್ಲ ಅನ್ವಯಿಸುತ್ತದೆ. ಅದು ಹೇಗೆ ಎಂದು ಅರ್ಥಮಾಡಿಕೊಳ್ಳಲು ತೆರೆದ ಮನಸ್ಸು ಬೇಕಾಗುತ್ತದೆ ಅಷ್ಟೇ.ಹತ್ತಾರು ಇಲ್ಲವೇ ನೂರಾರು, ಸಾವಿರಾರು ಜನರನ್ನು ಸಾಗಿಸಬಲ್ಲ ವಿವಿಧ ವಾಹನಗಳಿವೆ. ಇವುಗಳ ತೂಕ ಆ ಎಲ್ಲ ಪ್ರಯಾಣಿಕರ ತೂಕಕ್ಕಿಂತ ಎಷ್ಟೋ ಪಾಲು ಹೆಚ್ಚಾಗಿರಲೇಬೇಕು! ಇಲ್ಲದಿದ್ದರೆ ಅವುಗಳ ಸ್ಥಿರತೆ, ಸುರಕ್ಷತೆ ಸಂದೇಹಾಸ್ಪದ! ಹಣ್ಣು-ಹೂವು ಹಾಗೂ ನೆರಳುಗಳನ್ನು ನೀಡುವ ಬೃಹತ್ ವೃಕ್ಷ ಅಷ್ಟೇ ಆಳವೂ ವಿಶಾಲವೂ ಆದ ಬೇರಿನ ವ್ಯವಸ್ಥೆ ಹೊಂದಿದ್ದರಷ್ಟೇ ಅದಕ್ಕೆ ಉಳಿವು! ಒಟ್ಟಾರೆ ಹೇಳುವ ಉದ್ದೇಶವೇನೆಂದರೆ, ಪರಹಿತಚಿಂತನೆ ಮಾಡಬೇಕೆನ್ನುವವ,ಅದಕ್ಕೆ ತಕ್ಕಂತಹ ಸ್ವಾರ್ಥದಂತೆ ಕಂಡುಬರುವ ಪೋಷಕ-ರಕ್ಷಕ ವ್ಯವಸ್ಥೆಯಿಂದ ಮುಕ್ತನಾಗಿರುವುದು ಇಂದಿನ ಸಮಾಜದಲ್ಲಿ ಉಹಿಸಲು ಸಾಧ್ಯವಿಲ್ಲ
ಬಸವಣ್ಣನವರು ಬೇಡವೆಂದು ಹೇಳಿದ ‘ಪರಚಿಂತೆ’ ಯಾವುದೆಂದರೆ, ಪರೋಪಕಾರದ ನೆಪದಲ್ಲಿ ಗುಪ್ತವಾಗಿಯೋ ವ್ಯಕ್ತವಾಗಿಯೋ ಸ್ವಾರ್ಥದ ದೃಷ್ಟಿಯಿಂದ ಮಾಡಿದ ಕೆಲಸ. ತನ್ನ ಬಾಯಿ ಚಪಲವನ್ನು ತಣಿಸಲು ಆಡಿದ ಮಾತು.ತನ್ನ ಅಹಂಕಾರವನ್ನು ಮೆರೆಸಲು ಮಾಡಿದ ದಾನ ಅಥವಾ ತ್ಯಾಗ ಇವನ್ನು ಉದಾಹರಣೆಯಾಗಿ ಬಳಸಬಹುದು. ಆದರೆ ಕಾಲಕ್ರಮದಲ್ಲಿ ಇವುಗಳನ್ನು ಕೂಡ ಉದಾತ್ತೀಕರಿಸುವ ಸಾಧ್ಯತೆ ಇದ್ದೇ ಇದೇ ಎನ್ನುವುದು ಬೇರೊಂದು ವಿಚಾರ ಇಷ್ಟಾದರೂ, ಯಾವಯಾವ ಕಾಲ-ದೇಶಕ್ಕೆ ಯಾವುದು ಯೋಗ್ಯವಾದ ಪರಚಿಂತೆ, ಯಾವುದು ಸ್ವಾರ್ಥವೆನಿಸುತ್ತದೆ, ಯಾವುದು ಪರಾರ್ಥವೆನಿಸುತ್ತದೆ ಎಂದು ತಿಳಿಸುವ ಏಕಮೇವ ಸೂತ್ರವಿಲ್ಲ.
ಒಟ್ಟಾರೆ…ಪರ ಚಿಂತೆ ಮಾನಸಿಕ ವ್ಯಾಕುಲತೆಗೆ ಒರೆ ಹಚ್ಚುವಂತಹ ಚಿಂತೆ ಇದ್ದಷ್ಟು ಇಹ-ಪರದ ತೀಕ್ಷ್ಣತೆ ಒಳಗಾಗಿ ಲೌಕಿಕ ಜಗತ್ತಿನಿಂದ ಅಲೌಕಿಕ ಪ್ರಪಂಚದತ್ತ ನಿಸ್ವಾರ್ಥಿಯಾಗಿ ಚಿಂತಿಸಿದಷ್ಟು ಮೋಹಮಾಯೆಗಳು ಕಳಚಿ ದೈವತ್ವದತ್ತ ಲೀನವಾಗುವುದು ದಿಟ… ಇಷ್ಟೊಂದುa ಗಾಢ ಚಿಂತನೆಗೆ ಒಳಗಾಗುವವರಾರೆಂದು?ನಮ್ಮೊಳಗಿಳಿದು ಯೋಚಿಸಿದರೆ ಸೂಕ್ತವೆನ್ನಿಸದಿರದು…
ಶಿವಲೀಲಾ ಹುಣಸಗಿ
ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ
ತುಂಬಾ ಸುಂದರ ಲೇಖನ . ಸರಳವಾಗಿ ಉನ್ನತವಾದ ವಿಚಾರ ಅಧ್ಭುತವಾಗಿ ಮೂಡಿ ಬಂದಿದೆ ರೀ ಮೇಡಂ
ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ ವಾಸ್ತವ ಅಂಶಗಳನ್ನು ಸವಿಸ್ತಾರವಾಗಿ ಓದುಗರಿಗೆ ರವಾನಿಸಿದ್ದೀರಿ. ಇಂತಹ ಬರಹಗಳು ಮನಸ್ಥಿತಿಗಳನ್ನು ಅರಿಯಲು ಸಹಕಾರಿ
Nice madam
ಪರರ ಬಗ್ಗೆ ಆಲೋಚನೆ ಮಾಡಿ ಕ್ಷಣಗಳನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ತನ್ನ ಬಗ್ಗೆ ತಾ ಅರಿತು ಉದಾತ್ತ ಧ್ಯೇಯವನ್ನು ಹೊಂದಿರಬೇಕು ಎಂದು ಲೇಖನ ಉತ್ತಮ ಸಂದೇಶ ಸಾರಿದೆ
Superb..gelati
Atyant sundar lekhana
ಮನುಷ್ಯನಲ್ಲಿನ ಸ್ವಾರ್ಥ ಲಾಲಸೆ ಬಿಟ್ಟು, ತನ್ನಂತೆ ಪರರ ಬಗ್ಗೆಯೂ ಒಳ್ಳೆಯ ಭಾವನೆ ಬೆಳೆಸಿಕೊಂಡರೆ ನಮ್ಮ ಬದುಕು ಎಷ್ಟು ಸುಂದರ, ನಿಮ್ಮ ಈ ಚಿಂತನೆಗಳು ಇಂದಿನ ಜನರ ಕೊಳಕು ಮನಸ್ಸುಗಳಿಗೆ ಹಿಡಿದ ಕೈಗನ್ನಡಿಯಂತಿದೆ, ನಿಮ್ಮ ಚಿಂತನೆ ಸ್ವಾಗತಾರ್ಹ, ಉತ್ತಮ ಸಕಾಲಿಕ ಲೇಖನ
ನಾಗರಾಜ ಆಚಾರಿ ಅಂಕೋಲಾ