ಅಂಕಣ ಸಂಗಾತಿ

ಚಾಂದಿನಿ

ಇರುವೆಗಳದೆಸೆಯಲ್ಲಿಆಗುದಿಲ್ಲಪ್ಪಾ…….

ಮೊನ್ನೆ ಬೆಳಿಗ್ಗೆ ಎದ್ದು ಬಾಗಿಲು ತೆಗೆದು ನೋಡುತ್ತೇನೆ ಮನೆ ಮುಂದೆ ಹೆಣ ಬಿದ್ದಿದೆ! ಒಂದು ಹಲ್ಲಿ ಕೈಕಾಲು ಮೇಲೆ ಮಾಡಿ ಅಂಗಾತ ಬಿದ್ದಿದೆ. ಅದರ ಡೆಡ್ ಬಾಡಿ ನೋಡಿದರೆ ಅರ್ಧ ಮಾತ್ರ ಇತ್ತು. ಇನ್ನರ್ಧ ಏನಾಗಿದೆ ಎಂಬುದು ದೇವರಿಗೇ ಗೊತ್ತು. ತಲೆಭಾಗದ ಅರ್ಧ ಹೆಣವನ್ನು ಹೊತ್ತ ಇರುವೆಗಳ ಹಿಂಡು ಶವಯಾತ್ರೆ ಹೊರಟಿದ್ದವು. ಬಾಲ ಇಲ್ಲದ ಸತ್ತು ಹೋದ ಹಲ್ಲಿ, ಮತ್ತು ಈ ಇರುವೆಗಳ ಹಿಂಡನ್ನು ನೋಡಿ ಹೇಸಿಗೆ ಆಗೋಯ್ತು. ಗುಡ್ಲಿ ವರ್ಸಿ ಹೇಗಾದರೂ ಅದನ್ನು ವಿಲೇವಾರಿ ಮಾಡಿದೆ. ಪಾಪ ಹಲ್ಲಿ, ಪಾಪ ಇರುವೆಗಳು ಎಲ್ಲಿ ಬೀಳಬೇಕು, ಎಲ್ಲಿ ಸಾಯಬೇಕು ಆಂತ ಅವುಗಳಿಗೆ ಗೊತ್ತುಂಟಾ – ಹೀಗೆಲ್ಲಾ ಮನದಲ್ಲೇ ನನ್ನನ್ನೇ ನಾನು ಸಮಾಧಾನಿಸಿ, ಇನ್ನೊಂದು ಜನ್ಮ ಇದ್ದರೆ ಉತ್ತಮ ಜನ್ಮ ಎತ್ತಿ ಬನ್ನಿ ಅಂತ ಸತ್ತಿದ್ದ ಅರ್ಧ ಹಲ್ಲಿಗೆ, ಗುಡಿಸುವ ರಭಸದಲ್ಲಿ ಸಿಕ್ಕಿ ಸತ್ತ ಇರುವೆಗಳಿಗೆ ಎಲ್ಲಾ ಹೋಲ್‌ಸೇಲಾಗಿ ಅಂತಿಮ ನಮನ ಸಲ್ಲಿಸಿ ಸ್ವರ್ಗಕ್ಕೆ ಸೇರಿಸಿದೆ.

ಮರುದಿನ ಎದ್ದು ನೋಡಿದರೆ ಬಾಗಿಲಿನೆದುರು ಮತ್ತೊಂದು ಹೆಣ! ಇದನ್ನು ಕಂಡು ಸ್ವಲ್ಪ ಸಿಟ್ಟು ಏರಿತು. ಒಂದು ಸತ್ತ ಚಿಟ್ಟೆ. ಅದರ ಸುತ್ತಾ ತರಾವರಿ ಇರುವೆಗಳು. ಸಣ್ಣಿರುವೆ, ಕೆಂಪಿರುವೆ, ಕಪ್ಪಿರುವೆ, ದೊಡ್ಡಿರುವೆ- ಹೀಗೆ ಬೇರೆಬೇರೆ ಜಾತಿಯ, ಬೇರೆಬೇರೆ ಗಾತ್ರದ, ಬೇರೆಬೇರೆ ನಮೂನೆಯ ಇರುವೆಗಳು. ಜಗಲಿಯಿಡೀ ಅವುಗಳದ್ದೇ ಸಾಮ್ರಾಜ್ಯ, ಅವುಗಳೇ ಬಾಡಿಗೆ ಕೊಡುವಂತೆ! (ಇಡೀ ವಿಶ್ವದಲ್ಲಿ ಸುಮಾರು ಹನ್ನೆರಡು ಸಾವಿರ ಜಾತಿಯ ಇರುವೆಗಳು ಇವೆಯಂತೆ)

ಸತ್ತ ಚಿಟ್ಟೆಯನ್ನಾದರೂ ಹೇಗಾದರೂ ವಿಲೇವಾರಿ ಮಾಡಬಹುದು. ಈ ಸುಡುಗಾಡಿನ ಇರುವೆಗಳನ್ನು ಏನು ಮಾಡುವುದು. ಅರ್ಜೆಂಟ್ ಕೆಲಸ ಇದೆ ಬೇರೆ. ತುರ್ತಿನಲ್ಲಿ ಇರುವಾಗಲೇ ಇವುಗಳಿಗೆಲ್ಲ ಇಲ್ಲೇ ಬಂದು ಸಾಯಬೇಕಾ ಎಂದೆಲ್ಲ ಮನಸ್ಸು ಬಯ್ದಿತು. ಪರಿಸ್ಥಿತಿ ನಿನ್ನೆಯ ಆಧ್ಯಾತ್ಮವನ್ನು ಕೊಂಚ ಬದಿಗೆ ಸರಿಸಿತ್ತು. ದುಪ್ಪಟ್ಟ ಸೊಂಟಕ್ಕೆ ಬಿಗಿದು ಪೊರಕೆ ಕೈಗೆತ್ತಿಕೊಂಡೆ. ಸೋಜಿಗ ಎಂದರೆ, ಸತ್ತ ಚಿಟ್ಟೆಯನ್ನು ಒಯ್ದು ತೆಂಗಿನ ಮರದ ಬುಡಕ್ಕೆ ಹಾರಿ ಬರುವಷ್ಟರಲ್ಲಿ ಇರುವೆಗಳೆಲ್ಲ ತನ್ನಿಂದ ತಾನೇ ಮಾಯವಾಗಿದ್ದವು!

ಹಾಗೆ ನೋಡಿದರೆ ಈ ಇರುವೆಗಳ ಕತೆ ಹೇಳಿ ಪ್ರಯೋಜನ ಇಲ್ಲ. ಕ್ಯಾರೇ ಇಲ್ಲದಂತೆ ನನ್ನ ಮನೆ ಒಳಗೆ-ಹೊರಗೆ, ಸುತ್ತ-ಮುತ್ತ ತಿರುಗುತ್ತವೆ. ಹಿಂಡುಹಿಂಡಾಗಿ ದಿಬ್ಬಣಹೋಗುವ ಪರಿಯನ್ನು ಕಂಡರೆ ಅವುಗಳನ್ನು ಕೊಲ್ಲುವ ಮನಸ್ಸಾಗುವುದಿಲ್ಲ. ಹಾಗಾಗಿ ಸಾಯ್ಲಾಚೆ (ಬದ್ಕಿ) ಅಂತ ಅವುಗಳ ಪಾಡಿಗೆ ಬಿಡುವುದು. ಕಿಚನ್, ಬೆಡ್ರೂಮು, ಹಾಸಿಗೆ, ಮಂಚ, ದೇವರ ಮನೆ,  ಫ್ರಿಜ್ಜು, ಲ್ಯಾಪ್‌ಟಾಪ್, ಪಾತ್ರೆ ಇಡುವಲ್ಲಿ, ಕೈ ತೊಳೆಯುವಲ್ಲಿ, ತುಳಸಿ ಪಕ್ಕ, ಚಪ್ಪಲ್ ಇಡುವಲ್ಲಿ, ಊಟ ಮಾಡುವಲ್ಲಿ, ಕುಳಿತಲ್ಲಿ, ನಿಂತಲ್ಲಿ ಎಲ್ಲೆಂದರಲ್ಲಿ, ಇರುವೆ, ನಾನಿಲ್ಲಿ ಇರುವೆ ಎನ್ನುತ್ತಿದ್ದು. ಈ ಇರುವೆಗಳನ್ನು ಅಷ್ಟೊಂದು ಲಘುವಾಗಿ ಪರಿಗಣಿಸಬಾರುದು ಅವುಗಳು ಮನೆಗಳನ್ನೇ ಕೆಡವಿ ಹಾಕುವಷ್ಟು ಸಾಮರ್ಥ್ಯ ಹೊಂದಿವೆ ಅಂತ ಎಲ್ಲೋ ಓದಿದ ನೆನಪು.

ಈ ಇರುವೆಗಳ ದೆಸೆಯಿಂದಾಗಿ ನನ್ನ ಜೀವನವೇ ಹೈರಾಣಾಗಲಿಕತ್ತಿತು. ಇವುಗಳನ್ನು ಓಡಿಸಲು ನಾನು ಸೀರಿಯಸ್ಸಾಗಿ ಏನಾದರೂ ಆ್ಯಕ್ಷನ್ ತಗೊಳ್ಳಲೇಬೇಕು ಅನ್ನುವಲ್ಲಿಗೆ ತಲುಪಿತು ಪರಿಸ್ಥಿತಿ. ಅವುಗಳನ್ನು ಕೊಲ್ಲಲು ಮನಸ್ಸಿಗೆ ಕಸಿವಿಸಿಯಾಗುತ್ತಿತ್ತು. ಹೊರಗಿಂದ ಮನೆಒಳಗೆ ನುಗ್ಗುವ ಜಾಗ ನೋಡಿ ಅಲ್ಲಿ ಬೆಲ್ಲ, ಸಕ್ಕರೆ ಹಾಕಿ ನೋಡಿದೆ. ತಿಂದು ಅತ್ತಳೇ ಹೋಗಲಿ ಅಂತ. ಎಲ್ಲಿ ಹೋಗ್ತಾವೇ? ಅದನ್ನೂ ಹೊತ್ತುಕೊಂಡೇ ಮನೆಗೆ ನುಗ್ಗತೊಡಗಿದವು. ಇಷ್ಟು ಅವಸರದಲ್ಲಿ ಅವುಗಳು ಹೋಗುವುದಾದರೂ ಎಲ್ಲಿಗೆ ಎಂಬುದೇ ನನಗೆ ಸೋಜಿಗ. ಇತ್ತಲಿಂದ ಹೋದಷ್ಟೇ ಇರುವೆಗಳು ಅತ್ತಲಿಂದ ವಿರುದ್ಧ ಬದಿಯಿಂದಲೂ ಬರುತ್ತಿದ್ದು, ಮುಖಾಮುಖಿಯಾಗಿ ಎಂತದೋ ಪರಸ್ಪರ ಮಾತಾಡಿ ಮತ್ತೆ ಮುಂದುವರಿಯುತ್ತಿದ್ದವು. ಅಷ್ಟು ಅವಸರದಿಂದ ಎಲ್ಲಿಗೆ ಹೋಗುತ್ತಿದ್ದವೋ, ದೇವರಿಗೇ ಗೊತ್ತು. ಅಪ್ಪ ಇರುವೆ, ಅಮ್ಮ ಇರುವೆ, ಅಜ್ಜಿ ಇರುವೆ, ತಾತ ಇರುವೆ, ಪುಟಾಣಿ ಇರುವೆ, ಅಣ್ಣ ಇರುವೆ, ಅಕ್ಕ ಇರುವೆ, ಕಸಿನ್ ಇರುವೆ ಒಟ್ಟಿನಲ್ಲಿ ತರಾವರಿ ಇರುವೆಗಳೇ ಇರುವೆಗಳು.

ಅಪರೂಪಕ್ಕೆ ಮನೆಗೆ ಬಂದ ಅತಿಥಿಗಳಿಗೆ ಕುರ್ಚಿಯಲ್ಲಿದ್ದ ಇರುವೆ ಕಾಯಿಸಿದಾಗ ಅವರು ನನ್ನನ್ನೇ ಕಚ್ಚುವಂತೆ ನೋಡಿದಾಗ ವಿಷಯ ಗಂಭೀರತೆ ನನಗೆ ತಟ್ಟಿತು. ಇವುಗಳನ್ನು ಓಡಿಸುವಾಂತ ಅವುಗಳ ಸಾಲಿನ ಆದಿ ಮತ್ತು ಅಂತ್ಯದಲ್ಲಿ ಲಕ್ಷ್ಮಣ ರೇಖೆ ಎಳೆದೆ. ಅವುಗಳು ನನಗಿಂತ ಶಾಣ್ಯಾಗಳಿದ್ದವು. ಆ ಗೆರೆಯನ್ನು ತಪ್ಪಿಸಿ ಪ್ರತ್ಯೇಕ ಸಾಲು ಮಾಡಿ ಹೊರಟವು. ನಾಳೆ ಸಂಜೆ ಒಳಗಾಗಿ ಎಲ್ಲಾ ಖಾಲಿ ಆಗಬೇಕು, ಇಲ್ಲಾಂದ್ರೆ ಪರಿಸ್ಥಿತಿ ನೆಟ್ಟಗಿರಲಾರದು ಅಂತ ವಾರ್ನಿಂಗ್ ಕೊಟ್ಟೆ. ಊಹೂಂ ನಾಟಲಿಲ್ಲ. ಬದಲಿಗೆ ಇನ್ನಷ್ಟು ಇರುವೆಗಳು ಸೇರಿ ಸಾಲು ದಪ್ಪ ಆಗಿ ಕಪ್ಪುಕಪ್ಪಾಗಿ ಎದ್ದು ತೋರುತ್ತಿತ್ತು. ದೇವರ ಬಳಿ ದೂರಿದೆ. ಒಂದು ಇರುವೆಯನ್ನೂ ಹ್ಯಾಂಡಲ್ ಮಾಡಲಾಗುವುದಿಲ್ಲವೇ ಎಂಬ ಅಶರೀರವಾಣಿ ಮೊಳಗಿದಂತಾಯಿತು.

ಏನಾದರಾಗಲೀ ಅಂತ ಹತ್ಯಾಕಾಂಡಕ್ಕ ಮೂರ್ತ ಇರಿಸಿದೆ. ಅಂಗಡಿಗೆ ನಡೆದು ಕಪ್ಪು ಹಿಟ್‌ ಖರೀದಿಸಿ ತಂದೆ. ಬೆಳಗ್ಗೆ ಹಿಟ್ ಹೊಡಿಯುವುದೇ ಎಂದು ತಿರ್ಮಾನಿಸಿ ನಿದ್ರಿಸಿದೆ. ಮುಂಜಾನೆ ಎದ್ದು ಕಪ್ಪು ಹಿಟ್ ಹಿಟ್ ಮಾಡಲು ನೋಡಿದರೆ ಇರುವೆಗಳೆಲ್ಲ ಮೊಟ್ಟೆ ಹೊತ್ತು ಸಾಗುತ್ತಿದ್ದವು. ಇವುಗಳನ್ನು ಕೊಲ್ಲೋದಾದರೂ ಹೇಗೇಂತ ಸುಮ್ಮನಾದೆ. ಅದೂ ಅಲ್ಲದೆ ನಾವು ಯಾವುದಾದರೂ ಕಾರ್ಯಕ್ಕೆ ಹೊರಟಾಗ ಮೊಟ್ಟೆ ಹೊತ್ತು ಸಾಗುವ ಇರುವೆ ಸಾಲು ಎದುರಾದರೆ ಶುಭ ಎಂಬ ನಂಬುಗೆ ಬೇರೆ ಇದೆ. ಕಣ್ಣಾರೆ ಕಂಡ ಅದೃಷ್ಟವನ್ನು ಕೈಯಾರೆ ಹೊಸಕುವುದಾದರೂ ಹೇಗೇ? ಹಾಗಾಗಿ ನನ್ನ ಇರುವೆ ಯಜ್ಞ ಕಾರ್ಯಕ್ರಮವನ್ನು ನಾಳೆಗೆ ಮುಂದೂಡಿದೆ.

ನಾನು ಎಲ್ಲೋ ಓದಿದ ಪ್ರಕಾರ, ಈ ಇರುವೆಗಳ ಸಾಲು ಎಲ್ಲವೂ ಅವುಗಳಿಗೆ ಆಹಾರ ಹುಡುಕುವ ಅಥವಾ ಸಾಗಿಸುವ ಸಾಲು ಅಲ್ಲವಂತೆ. ಮರಿ ಇರುವೆಗಳಿಗೆ ದೊಡ್ಡ ಇರುವೆಗಳು ತರಬೇತಿ ನೀಡುವ ಸಾಲುಗಳೂ ಇರುತ್ತವಂತೆ! ಹೇಗೆ ಸಾಲಲ್ಲಿ ಸಾಗಬೇಕು, ಹೇಗೆ ಆಹಾರ ಹುಡುಕಬೇಕು, ವೈರಿಗಳು ಬರುವಾಗ ಹೇಗೆ ತಪ್ಪಿಸಿಕೊಳ್ಳಬೇಕು. ಅಪಾಯವಿದ್ದರೆ ರಾಸಾಯನಿಕ ಹೊರಚೆಲ್ಲಿ ಇತರ ಇರುವೆಗಳಿಗೆ ಹೇಗೆ ಸಂದೇಶ ನೀಡಬೇಕು – ಎಂಬುದೆಲ್ಲವನ್ನೂ ಕಲಿಸುವ ಸಾಲುಗಳೂ ಇರುತ್ತವಂತೆ.

ಇನ್ನು ಇವುಗಳನ್ನು ತಡೆದುಕೊಳ್ಳುವುದು ಸಾಧ್ಯವೇ ಇಲ್ಲವೆಂದಾದಾಗ ಒಂದು ಭಾನುವಾರ ಭಾರೀ ಹಾರಾಡ್ತೀರಾ ಅನ್ನುತ್ತಾ ಬಯ್ದುಕೊಂಡೇ ಇರುವೆಗಳು ಇರುವಲ್ಲೆಲ್ಲ ಹುಡುಕಿ ಹುಡುಕಿ ಹಿಟ್ ಹೊಡೆದೆ. ಇರುವೆಗಳು ಉದುರುದುರಿ ಬಿದ್ದವು. ಜಲಿಯನ್‌ವಾಲಾಬಗ್ ನೆನಪಾಯಿತು. ಒಂದಿಡೀ ಹಿಟ್ ಮುಗಿಸಿದೆ. ಮನೆ ಒಳಗೆ ಹೊರಗೆ ಬೀರುತ್ತಿದ್ದ ಹಿಟ್ ನಾತಕ್ಕೆ ಮೂಗು ಬಿಡಲಾಗುತ್ತಿರಲಿಲ್ಲ. ಇದರ ಘಾಟಿಗೆ ನಂಗೆ ಥ್ರೋಟ್ ಇನ್ಫೆಕ್ಷನ್ ಆಯಿತು. ಇದಕ್ಕೆ ಮರುದಿನ ಜ್ವರ ಬಂತು. ಜ್ವರಬಂದರೆ ಒಂದು ಡೋಲೋ ಹೋಯ್ತು ಅನ್ನುತ್ತಾ ಡೋಲೋ 650 ತಿಂದು, ಹಳದಿ-ಶುಂಠಿ ಕಷಾಯ ಕುಡ್ದು ಇನ್ನು ಇರುವೆಗಳ ಕಾಟವಿಲ್ಲವೆಂದು ಮಲಗಿದೆ. ಓ ದೇವ ಇಷ್ಟೊಂದು ಜೀವ ನನ್ನಿಂದ ಹೋಯಿತಾ ಅಂತಾದರೂ, ಅರ್ಜುನ, ಕೃಷ್ಣ ಪರಮಾತ್ಮ, ಭಗವದ್ಗೀತೆ, ಭಾಗವತ ಎಲ್ಲ ಮನಸ್ಸಲ್ಲಿ ಒಮ್ಮೆ ಹಾದು ಹೋಯಿತು.

ಎರಡು ದಿನ ರಗಳೆ ಇರಲಿಲ್ಲ. ಮೂರನೇ ದಿನ ಬೇರೆಯೇ ಜಾಗದಲ್ಲಿ ಸಣ್ಣದರಲ್ಲಿ ಹೊಸ ಇರುವೆಗಳ ಸಾಲು. ನಮ್ಮ ಸಂತಾನ ನಾಶ ಮಾಡಿದವಳು ನೀನಾ ಎಂಬ ನೋಟ ಎಸೆದು ಎಲ್ಲಸೇರಿ ನನ್ನ ವಿರುದ್ಧ ದಂಡೆತ್ತಿ ಬಂದಂತೆ ಬಾಸವಾಯಿತು. ಸಾಯ್ಲಾಚೆ ಅಂತ ಸುಮ್ಮನಾದೆ. ಇರುವೆಗಳೊಂದಿಗೆ ಬದುಕುವ ಟೆಕ್ನಿಕ್ ಅಥವಾ ಟ್ರೈನಿಂಗ್ ಏನಾದರೂ ಇದೆಯಾ ಅಂತ ಗೂಗಲಿಸಿ ನೋಡಿದೆ.

ಅಲ್ಲಾ… ಬೆಲ್ಲವೋ, ಸಕ್ಕರೆಯೋ ಏನಾದರೂ ಸಿಹಿ ವಸ್ತುವಿಗೆ ಅಥವಾ ಆಹಾರ ಕಣಗಳಿಗೆ ಇರುವೆ ಮುತ್ತುವುದು ಉಂಟಪ್ಪ. ಮೊನ್ನೆ ಅಕ್ಕ ಸ್ವಲ್ಪ ಗಾಂಧಾರಿ ಮೆಣಸು (ಸೂಜಿ ಮೆಣಸು) ಕೊಟ್ಟು ಕಳಿಸಿದ್ದಳು. ಅದು ಕೊಲೆಸ್ಟ್ರಾಲ್ ತಗ್ಗಿಸುತ್ತದಂತೆ! ಅದನ್ನು ಅಡುಗೆ ಮನೆಯ ಸ್ಲಾಬ್ ಮೇಲೆ ಇರಿಸಿ ಎಂತದಿಕ್ಕೋ ಐದು ನಿಮಿಷ ಹೊರಗೆ ಬಂದು ಒಳಗೆ ಹೋಗಿ ನೋಡ್ತೇನೇ….. ಅಷ್ಟು ಬೇಗ ಐದಾರು ಇರುವೆಗಳು ಆ ಗಾಂಧಾರಿ ಮೆಣಸಿನ ಮೇಲೆ ಹತ್ತಿ ಕುಣಿಯುತ್ತಿವೆ. ಏನನ್ನಬೇಕು? ಅವುಗಳ ಅವತಾರ ನೋಡಿದರೆ ಅವುಗಳಿಗೆ ನನ್ನಿಂದಲೂ ಹೆಚ್ಚು ಕೊಲೆಸ್ಟ್ರಾಲ್ ಇರಬೇಕು!!


ಚಂದ್ರಾವತಿ‌ ಬಡ್ಡಡ್ಕ

ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಅಂಕಣಕಾರರು ಹಾಗೂ ವೃತ್ತಿಪರ ಅನುವಾದಕಿ

One thought on “

Leave a Reply

Back To Top