ಅಂಕಣ ಸಂಗಾತಿ
ಗಜಲ್ ಲೋಕ
ನಾಗೇಶ್ ನಾಯಕರವರ ಗಜಲ್ ನಾಕ
ಎಲ್ಲರಿಗೂ ನಮಸ್ಕಾರ..
ನನ್ನ ಗಜಲ್ ಮನಸುಗಳೆ ಕ್ಷೇಮವೇ..ಹೇಗೆ ಸಾಗುತ್ತಿದೆ ತಮ್ಮ ಸಾಹಿತ್ಯ ಕೃಷಿ…..ಕೃಷಿ ಅಂದರೆ ಕೇವಲ ಬರವಣಿಗೆ ಅಂತೇನಲ್ಲ, ಓದುವುದು ಕೂಡ ಕೃಷಿನೆ ಅಲ್ವಾ!! ಇಂದು ಮತ್ತೊಮ್ಮೆ ನಾನು ಗಜಲ್ ಚಕೋರಿಯೊಂದಿಗೆ ತಮ್ಮ ಮುಂದೆ ಹಾಜರಾಗಿದ್ದೇನೆ, ತಮ್ಮೊಂದಿಗೆ ಗಜಲ್ ಪ್ರೀತಿಯನ್ನು ಹಂಚಿಕೊಳ್ಳಲು ; ಜೊತೆ ಜೊತೆಗೆ ಹರಟೆ ಹೊಡೆಯಲು… ಮತ್ತೇಕೆ ತಡ, ಕಮಾನ್; ಬೇಗ ಬನ್ನಿ…!!
“ಭಾಕಾ ನ್ಯಾರಿ ನ್ಯಾರಿ, ಭಾವ್ ಏಕ
ಕಹಾ ತುರ್ಕ್ ಕಹಾ ಬರ್ ಹಾಮನ್“
–ಇಮ್ಮಡಿ ಇಬ್ರಾಹಿಂ ಆದಿಲ್ ಶಾಹಿ
ಭಾಷೆ ಎಂದರೆ ಸಾಹಿತ್ಯದ ಜೊತೆ ಜೊತೆಗೆ ಸಾಹಿತ್ಯಕ್ಕೂ ಮಿಗಿಲಾದ ಅನೇಕ ಸಂಗತಿಗಳ ಸಂಗಮ. ಇದು ನೆನ್ನೆ ಮತ್ತು ನಾಳೆಗಳ ಆಗರವಾಗಿರುವುದರಿಂದ ನಾಳೆಗಳ ನಿರ್ಮಾಣ ಮಾಡುವ ಮೊದಲು ನೆನ್ನೆಯನ್ನು ಅರ್ಥೈಸಿಕೊಳ್ಳಬೇಕಾಗಿದೆ. ನಾವು ನೆನ್ನೆಯನ್ನು ಅರಿತಾಗಲೆ ನಾಳೆಗಳನ್ನು ಸದೃಢವಾಗಿ ನಿರ್ಮಿಸಲು ಸಾಧ್ಯ. ಭಾಷಾಲೋಕವು ಸದಾ ಹೊಸ ಹೊಸ ಬದಲಾವಣೆಗಳಿಗೆ ಮುಖಾಮುಖಿಯಾಗುತ್ತಲೆ ಇರುತ್ತದೆ. ಈ ನವ ನವೀನ ಪರಿವರ್ತನೆಗಳಿಗೆ ನಮ್ಮನ್ನು ನಾವು ತೆರೆದುಕೊಂಡಾಗ ಮಾತ್ರ ಭಾಷೆಯನ್ನು ಕಟ್ಟಲು ಸಾಧ್ಯ. ಜಾಗತಿಕ ಭಾಷೆಗಳು ನಮ್ಮನ್ನು ಆಳುತ್ತಿರುವ, ಆಕ್ರಮಿಸುತ್ತಿರುವ ಹೊತ್ತಿನಲ್ಲಿ ನಮ್ಮ ಸೋದರ ಭಾಷೆಗಳ ಪರಿಚಯದ ಅವಶ್ಯಕತೆ ಇದೆ. ಇದಕ್ಕೊಂದು ಉತ್ತಮ ಸಾಧನವೆಂದರೆ ಭಾಷಾಂತರ. ಭಾಷಾಂತರ ಎಂದರೆ ಒಂದು ಭಾಷೆಯಲ್ಲಿನ ಮಾತು ಅಥವಾ ಬರವಣಿಗೆಯನ್ನು ಮತ್ತೊಂದು ಭಾಷೆಯಲ್ಲಿ ಸಮಾನ ಅರ್ಥ ನೀಡುವಂತೆ ಪರಿವರ್ತಿಸುವ ಒಂದು ಪ್ರಕ್ರಿಯೆ. ಈ ಪ್ರಕ್ರಿಯೆಯಿಂದ ಕನ್ನಡ ಸಾರಸ್ವತ ಲೋಕವು ಹಲವು ವ್ಯತ್ಯಯಗಳೊಂದಿಗೆ ಅಸಂಖ್ಯಾತ ಸಾಹಿತ್ಯ ಪ್ರಕಾರಗಳಿಗೆ ಆಶ್ರಯ ನೀಡುತ್ತ ಬಂದಿದೆ. ಇಂತಹ ಹಲವು ಪ್ರಕಾರಗಳಲ್ಲಿ ಅರಬ್ ಮರುಭೂಮಿಯ ಖರ್ಜೂರ ಅಂದರೆ ‘ಗಜಲ್’ ಉರ್ದು ಮಾರ್ಗವಾಗಿ ಕರುನಾಡಿನಲ್ಲಿ ಬೆಳೆಯುತ್ತ ತನ್ನ ಸ್ವಾದವನ್ನು ಉಣಬಡಿಸುತ್ತಿದೆ. ಮನದ ಬೇಗೆಯಲ್ಲಿ ತಂಪೆರೆಯುವ, ತಂಪೆರೆಯುತ್ತಿರುವ ‘ಗಜಲ್’ ಪಾರಿಜಾತ ಅಪರಿಮಿತ ರಸಿಕರ ಹೃದಯಗಳಲ್ಲಿ ಚಿಗುರೊಡೆದಿದೆ, ಚಿಗುರೊಡೆಯುತ್ತಿದೆ. ತಮ್ಮ ಎದೆಯಂಗಳದಲ್ಲಿ ಗಜಲ್ ತಾಜ್ ಮಹಲ್ ನಿರ್ಮಿಸಿರುವ, ನಿರ್ಮಿಸುತ್ತಿರುವ ಹೃದಯವಂತರಲ್ಲಿ ಶ್ರೀ ನಾಗೇಶ್ ಜಿ. ನಾಯಕ ಅವರೂ ಒಬ್ಬರು!!
ವೃತ್ತಿಯಲ್ಲಿ ಶಿಕ್ಷಕರಾಗಿರುವ ನಾಗೇಶ್ ಜೆ. ನಾಯಕ ರವರು 1975 ಫೆಬ್ರವರಿ 23 ರಂದು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಸವದತ್ತಿಯಲ್ಲೆ ಪೂರೈಸಿದ್ದಾರೆ. ಇನ್ನೂ ಓದಬೇಕು ಎಂಬ ಹಂಬಲವಿರುವಾಗಲೆ ಕೌಟುಂಬಿಕ ಒತ್ತಡ, ಬಡತನದ ಬೇಗೆ ಅವರಿಗೆ ಮುಖಾಮುಖಿಯಾಗಿ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಊರೂರು ಅಲೆಯುವಂತಾಯಿತು. ಯಾವ ಕೆಲಸವೂ ದೊಡ್ಡದಲ್ಲ, ಚಿಕ್ಕದಂತೂ ಅಲ್ಲವೇ ಅಲ್ಲ ಎನ್ನುವ ಕಾಯಕ ಧೋರಣೆಯೊಂದಿಗೆ ಬಡತನವನ್ನು ಪ್ರೀತಿಸುತ್ತಲೆ ಅದರ ವಿರುದ್ಧ ಜಯ ಸಾಧಿಸಿದರು. ಮುಂದೆ ದಿನಗಳು ಬದಲಾದಂತೆ ತಮ್ಮ ಅಕ್ಕ-ಮಾವನವರ ಸಹಾಯ-ಸಹಕಾರದಿಂದ ಪದವಿಯನ್ನು ಪಡೆದು, ತುಮಕೂರಿನ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಪದವಿಯಲ್ಲಿ ತೇರ್ಗಡೆ ಹೊಂದಿ; ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿಯ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಕವಿಮಿತ್ರರೊಬ್ಬರ ಒಡನಾಟದಿಂದ ತಾವು ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ್ದು ಎಂದು ಹೇಳುವ ನಾಯಕ ಅವರು ಕವಿತೆ, ಕಥೆ, ವಿಮರ್ಶೆ, ವ್ಯಕ್ತಿ ಪರಿಚಯ, ಅಂಕಣ ಬರಹ ಹಾಗೂ ಗಜಲ್ ವಲಯಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದು ‘ಪುಟ್ಟ ಪದಗಳು’, ‘ಕವಿಸಮಯ’, ‘ಸಾಲುದೀಪ’, ‘ಮನದ ಮಾತು’, ‘ಒಡಲ ಕಿಚ್ಚಿನ ಹಿಲಾಲು ಹಿಡಿದು’, ‘ನೀನೊಂದು ಮುಗಿಯದ ಸಂಭ್ರಮ’, ‘ಪ್ರೀತಿಯಿಂದ ಪ್ರೀತಿಗೆ’, ‘ಭರವಸೆಗಳ ಬೆನ್ನೇರಿ’, ‘ಮಠದೊಳಗಣ ಬೆಕ್ಕು,’ ‘ಬಯಲ ಕನ್ನಡಿ’, ‘ಒಡಲ ದನಿ’, ‘ಘನದ ಕುರುಹು’, ‘ಚಿನ್ನದ ಚೂರಿ’, ….ಮುಂತಾದ ಕೃತಿಗಳೊಂದಿಗೆ ‘ಗರೀಬನ ಜೋಳಿಗೆ’, ‘ಆತ್ಮ ಧ್ಯಾನದ ಬುತ್ತಿ’, ಎನ್ನುವ ಗಜಲ್ ಸಂಕಲನಗಳು ಸೇರಿದಂತೆ ಸುಮಾರು ೨೦ ಕೃತಿಗಳನ್ನು ಸಾಹಿತ್ಯಿಕ ಲೋಕಕ್ಕೆ ಅರ್ಪಿಸಿದ್ದಾರೆ. ಕನ್ನಡದ ಹೆಚ್ಚಿನ ದಿನಪತ್ರಿಕೆಗಳಲ್ಲಿ ಇವರ ಕಥೆ, ಕಾವ್ಯ, ಅಂಕಣಗಳು, ವಿಮರ್ಶಾ ಲೇಖನಗಳು ಪ್ರಕಟವಾಗಿವೆ. ಆಕಾಶವಾಣಿಯಲ್ಲಿ ಇವರ ಕಥೆ, ಕವನಗಳೂ ಬಿತ್ತರಗೊಂಡಿವೆ. ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ನೇರ ಸಂದರ್ಶನವೂ ಕೂಡ ಪ್ರಸಾರಗೊಂಡಿದೆ. ನಾಡಿನಾದ್ಯಂತ ಹಲವಾರು ಸಂಘ-ಸಂಸ್ಥೆಗಳು, ಸರಕಾರ, ಸಂಘಟನೆಗಳು ಆಯೋಜಿಸಿದ್ದ ಸಮ್ಮೇಳನ, ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಜನಮನ ಗೆದ್ದು ಕರುನಾಡಿನಾದ್ಯಂತ ಗಜಲ್ ಗೋ ಎಂದು ಚಿರಪರಿಚಿತರಾಗಿದ್ದಾರೆ.
ಸದಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ಶ್ರೀ ನಾಗೇಶ್ ಜೆ. ನಾಯಕ ಅವರಿಗೆ ನಾಡಿನ ಪ್ರತಿಷ್ಠಿತ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಅಡ್ವೈಸರ್ ಪುಸ್ತಕ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಸಿರಿಗನ್ನಡ ಪುಸ್ತಕ ಪ್ರಶಸ್ತಿ, ವೀರಶೈವ ಪ್ರತಿಷ್ಠಾನ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಪುರಸ್ಕಾರ, ಆಜೂರು ಪುಸ್ತಕ ಪ್ರಶಸ್ತಿ… ಇತ್ಯಾದಿಗಳು ಪ್ರಮುಖವಾಗಿವೆ.
ನಮಗಾದ ಅನುಭವಗಳನ್ನು ಅಕ್ಷರಕ್ಕಿಳಿಸುವ ಮುನ್ನ ಅದನ್ನು ಅನುಭಾವಿಸುವುದೆ ಗಜಲ್ ನ ಮೂಲ ತಿರುಳು. ಇದು ಸಾಧ್ಯವಾಗಬೇಕಾದರೆ ಗಜಲ್ ಕೇವಲ ಪ್ರೌಢಿಮೆಗೆ, ಅಲಂಕಾರಕ್ಕೆ ಸೀಮಿತವಾಗದೆ ಮೌಲ್ಯವನ್ನು ಬಿತ್ತುವ, ಅದನ್ನೇ ಬೆಳೆಸುವ ಕಾರ್ಯ ಮಾಡಬೇಕಿದೆ. ಆರಂಭದಲ್ಲಿ ಪ್ರೀತಿ, ಪ್ರೇಮ, ಪ್ರಣಯ, ವಿರಹಗಳೊಂದಿಗೆ ಹೆಜ್ಜೆ ಹಾಕಿದ ಅಶಅರ್ ಇಂದು ಎಲ್ಲ ವಿಷಯಗಳೊಂದಿಗೆ ರುಬರು ಆಗುತ್ತ ನೋವಿಗೆ ಸ್ಪಂದಿಸುತ್ತ, ಕಂಬನಿಗೆ ಮಿಡಿಯುತ್ತ ಆಲಿಂಗನದ ಮುಲಾಮು ಹಚ್ಚುತ್ತಿದೆ, ಹಚ್ಚಬೇಕು ಕೂಡ. ‘ಗಜಲ್’ ಜಿದ್ದಿನ ಕೂಸಲ್ಲ, ಧ್ಯಾನದ ಜೊತೆಗೂಡಿ ಅನುಭಾವದ ಪರಂಪರೆಯಲ್ಲಿ ಸಹಜವಾಗಿ ಮೂಡುವ ಹೃದಯದ ಪಿಸುಮಾತು. ಮನುಷ್ಯ ತನ್ನಲ್ಲಿ ಹುಟ್ಟಿನಿಂದಲೇ ಬಂದ ಮನುಷ್ಯತ್ವವನ್ನು ಮರೆತ ಕಾರಣಕ್ಕಾಗಿಯೆ ಸಮಾಜದಲ್ಲಿ ಗರೀಬಿ ಆವರಿಸಿದೆ. ಇದರಿಂದಾಗಿಯೆ ಎಷ್ಟೋ ಜನರು ನಿರ್ಗತಿಕರಾಗಿದ್ದಾರೆ, ನಿರ್ಗತಿಕರಾಗುತ್ತಿದ್ದಾರೆ. ಪ್ರತಿ ದಿನ ಹಸಿವನ್ನು ಒಡಲಲ್ಲೇ ಇಂಗಿಸಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಇಂಥಹ ಭೀಕರ ಬಡತನದ ಛಾಯೆಯನ್ನು ನಾವು ನಾಗೇಶ್ ಜೆ. ನಾಯಕ ರವರ ಗಜಲ್ ಗಳಲ್ಲಿ ಕಾಣುತ್ತೇವೆ. ಪ್ರೀತಿ, ಪ್ರೇಮ, ವಿರಹದ ಹೊಸ್ತಿಲು ದಾಟಿ ಸಾಮಾಜಿಕ ಸಮಸ್ಯೆಗಳ ಕುರಿತು ಗಜಲ್ ಗಳನ್ನು ಇವರು ರಚಿಸಿದ್ದಾರೆ. ಸಾಮಾಜಿಕ ವಿಷಮತೆ-ಅಸಮತೆ, ದುರಿತ ಕಾಲದ ಅನ್ಯಾಯ, ಹಿಂಸೆಗಳ ವಿರುದ್ಧ ದನಿ ಎತ್ತಿ ತಣ್ಣನೆಯ ಪ್ರತಿರೋಧವನ್ನು ಒಡ್ಡಿದ್ದಾರೆ. ಈ ಹೊತ್ತಿನ ಸನ್ನಿವೇಶದ ನೋವು, ಸಂಕಟ, ವಿಷಾದ, ಯಾತನೆ, ಬಿಕ್ಕಟ್ಟು, ಬದುಕಿನ ತಲ್ಲಣಗಳನ್ನು ಶ್ರೀಯುತರ ಗಜಲ್ ಗಳಲ್ಲಿ ಕಾಣುತ್ತೇವೆ.
“ಗೆದ್ದವರಷ್ಟೇ ಉಳಿದು ಚಪ್ಪಾಳೆ ಗಿಟ್ಟಿಸುತ್ತಾರೆ ಇತಿಹಾಸದಲ್ಲಿ
ಸಾಧನೆ ನನ್ನಿಂದಾಗದು ಎಂದು ತಲೆ ಕೊಡವಬೇಡ ಎಂದಿಗೂ”
ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಾದರೂ ಜನ, ಸಮಾಜ ಪ್ರೀತಿಸೋದು, ಗೌರವಿಸೋದು ಗೆಲುವನ್ನು ಮಾತ್ರ. ಪ್ರತಿ ಸೋಲಿನಲ್ಲೂ ಗೆಲುವಿನ ಹಂಬಲ, ಗೆಲುವಿಗಾಗಿ ಹೋರಾಟ ಇದ್ದೆ ಇರುತ್ತದೆ. ಆದರೆ ದುರಂತ ಹಾಗೂ ಅಸಹನೀಯ ಎಂದರೆ ಗೆದ್ದವರು ಮಾತ್ರ ಮುನ್ನೆಲೆಗೆ ಬರುತ್ತಾರೆ. ಇಂದಂತೂ ಬೈ ಹುಕ್ ಆರ್ ಕೂಕ್ ಗೆಲ್ಲಲೆ ಬೇಕು ಎಂದು ವಾಮಮನಸ್ಸುಗಳು ಬಯಸುತ್ತಿವೆ. ಈ ಕಾರಣಕ್ಕಾಗಿಯೇ ಸಮಾಜ ಗೆದ್ದವರ ಕೊರಳಿಗೆ ಹೂಮಾಲೆಯನ್ನು ಹಾಕಿ ಪಾದಪೂಜೆ ಮಾಡುತ್ತಿದೆ. ಅಂತೆಯೇ ಗಜಲ್ ಗೋ ಅವರು ಹೋರಾಟಗಾರರಲ್ಲಿ ಜೀವನ ಪ್ರೀತಿಯನ್ನು ತುಂಬುವ ಪ್ರಯತ್ನ ಮಾಡಿದ್ದಾರೆ ತಮ್ಮ ಈ ಮೇಲಿನ ಷೇರ್ ಮುಖಾಂತರ.
“ಮಂದಿರ ಮಸೀದಿ ಏನೇ ಇದ್ದರೂ ಭಾರತಾಂಬೆಯೇ ದೇವಿಯಾಗಲಿ ನಮಗೆ
ರಾಷ್ಟ್ರಭಕ್ತಿಗೆ ದೇಹ ದಣಿಯಲಿ ಉಸಿರು ಮುಡಿಪಾಗಿರಲಿ ಎಂದೆಂದಿಗೂ“
ಇಂದು ನಮ್ಮ ನಾಡು, ನುಡಿ ಎಲ್ಲವೂ ಅಖಂಡತೆಯಿಂದ ವಿಮುಖವಾಗಿ ಬಳಲುತ್ತಿವೆ. ಜಾತಿ, ಧರ್ಮ, ಭಾಷೆ, ಸರಹದ್ದು, ಪಕ್ಷ, ಸಂಘಟನೆಯ ಹೆಸರಲ್ಲಿ ಅನಾಥ ಪ್ರಜ್ಞೆಯಲ್ಲಿ ಬಸವಳಿಯುತ್ತಿವೆ. ಧರ್ಮ-ಧರ್ಮದ ತಿಕ್ಕಾಟದಲ್ಲಿ ಭಾರತಾಂಬೆ ನಲುಗಿ ಹೋಗಿದ್ದಾಳೆ. ಧರ್ಮಗಳು ಮುನ್ನೆಲೆಗೆ ಬಂದು ದೇಶಭಕ್ತಿ ಹಿನ್ನೆಲೆಗೆ ಸರಿಯುತ್ತಿರುವ ವಾಸ್ತವ ಚಿತ್ರಣವನ್ನು ಈ ಷೇರ್ ಪ್ರತಿಧ್ವನಿಸುತ್ತಿದೆ. ಇಲ್ಲಿ ನಾಯಕ ರವರು ಧರ್ಮಗಳಿಗಿಂತಲೂ ಭಾರತಾಂಬೆ ಮುಖ್ಯವಾಗಬೇಕು ಎಂದು ಹೇಳುತ್ತ ಜನರಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಇಂದು ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆಯ ಅವಶ್ಯಕತೆ ಇರುವುದನ್ನು ಈ ಷೇರ್ ಸಾರುತ್ತಿದೆ.
ಮಧುಶಾಲೆ, ಮದಿರೆ, ಮಾಂಸ, ಮಾನಿನಿಯರ ಸುತ್ತವೆ ಸುತ್ತುತಿದ್ದ ‘ಗಜಲ್’ ಎಂಬ ಗಂಗಾಜಮುನಿ ತಹಜೀಬ್ ಇಂದು ಸಮಾಜದ ಪ್ರತಿಯೊಂದು ಸಮಸ್ಯೆಗಳನ್ನು ತನ್ನೊಳಗೆ ಆವಾಹಿಸಿಕೊಂಡು ಕಣ್ಣೀರನ್ನು ಒರೆಸುತ್ತ ಸಾಂತ್ವನ ಹೇಳುತ್ತಿದೆ. ಇಂತಹ ಹತ್ತು ಹಲವಾರು ಗಜಲ್ ಗಳು ಶ್ರೀ ನಾಗೇಶ್ ಜೆ ನಾಯಕ ಅವರಿಂದ ರಚನೆಗೊಳ್ಳಲಿ, ಅವುಗಳು ಗಜಲ್ ಪ್ರೇಮಿಗಳ ಮನಸುಗಳನ್ನು ತಣಿಸಲಿ ಎಂದು ಶುಭ ಕೋರುತ್ತೇನೆ.
“ಬಾ ಪ್ರಳಯವಾದರೆ ನನ್ನ ಎದೆಯಲಿ ನೀ ವ್ಯಾಪಿಸಿಬಿಡು
ಸುಗಂಧವಾಗಿರುವೆಯಾದರೆ ಹೋಗು ಓಣಿಯಲಿ ಹರಡಿಬಿಡು“
–ಮುಜಾಫರ್ ಹನಬಿ
ಗಡಿಯಾರದ ಮುಳ್ಳುಗಳು ಸದಾ ಸುತ್ತುತ್ತಲೇ ಇರುತ್ತವೆ ಎಂಬುದನ್ನೆ ಒಂದು ಕ್ಷಣ ಮರತೆ ಬಿಟ್ಟೆ ಗಜಲ್ ಉದ್ಯಾನವನದಲ್ಲಿ ವಿಹರಿಸುತ್ತ…!! ಕ್ಷಮಿಸಿ, ಇದೆಯಲ್ಲವೆ ಗಜಲ್ ಪಾಗಲ್ ಪನ್ ಎಂದರೆ. ಇವಾಗ ಮನದೊಳಗೆ ಶಪಿಸಬೇಡಿ….ಮತ್ತೆ ಮುಂದಿನ ವಾರ, ಗುರುವಾರ ತಮ್ಮ ಮುಂದೆ ಹಾಜರಾಗುವೆ. ಸ್ವಾಗತಿಸುವಿರಲ್ಲವೆ, ಗೊತ್ತು.. ತಮ್ಮೆಲ್ಲರ ಪ್ರೀತಿಗೆ ನಾನು ಯಾವತ್ತೂ ಚಿರಋಣಿ. ಎಲ್ಲರಿಗೂ ತುಂಬು ಹೃದಯದ ವಂದನೆಗಳು..
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ