ಅಂಕಣ ಬರಹ

ಗಜಲ್ ಲೋಕ

ರವಿಯ ಹೊಂಗಿರಣದಲ್ಲಿ ಗಜಲ್ ಚಿತ್ತಾರ..

ಹಲೋ ನನ್ನ ಗಜಲ್ ಮನಸ್ಸುಗಳೆ…

ಕಾಲಚಕ್ರದ ತುದಿ ಹಿಡಿದು ಮತ್ತೊಮ್ಮೆ ನಿಮ್ಮ ಮುಂದೆ ಬಂದು ನಿಂತಿರುವೆ, ಗಜಲ್ ಲೋಕದ ಮುತ್ತಿನೊಂದಿಗೆ ; ಅದೂ ಗಜಲ್ ದೊರೆಸಾನಿಯನ್ನು ಆರಾಧಿಸುವ ಗಜಲ್ ಉಪಾಸಕರೊಬ್ಬರೊಂದಿಗೆ…!!

ಹೃದಯ ಒಂದು ನೋವಿನ ರಂಗ ತಾಲೀಮು ಸಾವಿರ

ದೀಪ ಉರಿಯುತ್ತಿತ್ತು ಅದೂ ಗಾಳಿಯ ಸರಸದೊಂದಿಗೆ

                                –ಮುಶಫಿಕ್ ಖ್ವಾಜಾ

        ಬದುಕು ಎನ್ನುವುದು ‘ತೊಟ್ಟಿಲೊಂದಿಗೆ ಗುನುಗುವ ಲಾಲಿ ಹಾಡು’. ಇದು ಮನುಕುಲವನ್ನೂ ಒಳಗೊಂಡಂತೆ, ಉಸಿರಾಡುವ ಸಕಲ ಜೀವಜಂತುಗಳಿಗೂ ಅನ್ವಯಿಸುತ್ತದೆ. ಆದರೆ ಮನುಷ್ಯನಿಗೂ ಹಾಗೂ ಇತರ ಜೀವಕೋಟಿಗಳಿಗೂ ಇರುವ ಒಂದು ಅನುಪಮ ಅಂತರವೆಂದರೆ ಯಾವುದು ಸರಿ, ಯಾವುದು ತಪ್ಪು ಎಂದು ವಿವೇಚಿಸುವ ಬುದ್ಧಿ, ತರತಮ ಜ್ಞಾನ. ‘ಬದುಕು’ ಎನ್ನುವುದು ‘ಕ್ರಿಯಾಪದ’ ಆದಾಗ ಮನುಷ್ಯ ಪಶು, ಪಕ್ಷಿ, ಕ್ರಿಮಿ, ಕೀಟಗಳಿಗಿಂತಲೂ ಭಿನ್ನವಾಗಿ, ವಿಶಿಷ್ಟವಾಗಿ ನಿಲ್ಲುತ್ತಾನೆ. ಅಲ್ಲೂ ಸಹ ವ್ಯಕ್ತಿಗಳ ಮನೋಭಾವ, ನಂಬಿಕೆ, ಪರಿಸರ ಪ್ರಭಾವಗಳನ್ನು ಆಧರಿಸಿ ಒಬ್ಬೊಬ್ಬ ವ್ಯಕ್ತಿಯ ಜೀವನ ಇತರರಿಗಿಂತ ಅನನ್ಯವಾಗುತ್ತದೆ. ಈ ಬದಲಾವಣೆ, ವಿಕಾಸದಲ್ಲಿ ಅಕ್ಷರಗಳ ಪಾತ್ರ ಉಪಮಾತೀತ. ಅಕ್ಷರಗಳ ಉಯ್ಯಾಲೆಯಲ್ಲಿ ಬೆಳೆದ, ಬೆಳೆಯುತ್ತಿರುವ ಮುದ್ದು ಕೂಸೆಂದರೆ ವಾಗ್ದೇವಿ. ಈ ವಾಗ್ದೇವಿಯ ಹೆಜ್ಜೆ ಗುರುತುಗಳು ಇರದ ಭಾಷೆಯೇ ಇಲ್ಲ. ಹಲವು ಬಾರಿ ಹಲವು ರೀತಿಯ ಹೆಜ್ಜೆಗಳಲ್ಲಿ ಸಾಮ್ಯತೆ ಇರುತ್ತದೆ, ಕೆಲವೊಂದೆಡೆಯಲ್ಲಿ ಕೊಡು-ಕೊಳ್ಳುವಿಕೆ ಇರುತ್ತದೆ ; ಮತ್ತೊಂದೆಡೆಯಲ್ಲಿ ಅನುಕರಣೆಯ ಅನನ್ಯತೆ ಇರುತ್ತದೆ. ಈ ಒಂದು ನೆಲೆಯಲ್ಲಿ ಭಾಷೆ ಅಮೂರ್ತ ರೂಪದ ಭಾವನೆಗಳಿಗೆ ಮೂರ್ತ ಸ್ವರೂಪವನ್ನು ನೀಡುತ್ತದೆ. ಭಾಷೆಗೆ ಜಾತಿ, ಮತ, ಪಂಥ, ಧರ್ಮ, ಸಿದ್ದಾಂತ, ಲಿಂಗ, ಗಡಿಗಳ ಹಂಗಿಲ್ಲ. ಭಾಷೆಯ ಬೇರಿನೊಂದಿಗೆ ಮೇಳೈಸಿದ, ಮೇಳೈಸುತ್ತಿರುವ ಸಾಹಿತ್ಯ ಪ್ರಕಾರಗಳಿಗೂ ಯಾವ ಸೀಮೆ, ಎಲ್ಲೆಗಳೂ ಇಲ್ಲ. ಹೃದಯ ತಟ್ಟುವ ಭಾವ, ಕದಡಿದ ಮನವನ್ನು ತಿಳಿಗೊಳಿಸುವ ರಾಗವಿದ್ದರೆ ಸಾಕು ಅದು ಸಾರ್ವತ್ರಿಕವಾಗಿ ನಿಲ್ಲುತ್ತದೆ. ಈ ಕಾರಣಕ್ಕಾಗಿಯೇ ಉರ್ದು ಸಾಹಿತ್ಯದಲ್ಲಿ ಗಜಲ್ ಕಾವ್ಯ ಪ್ರಕಾರಕ್ಕೆ ದೊರೆತ ಜನಪ್ರಿಯತೆ ಇನ್ಯಾವ ಕಾವ್ಯ ರೂಪಕ್ಕೂ ಸಿಗಲಿಲ್ಲ! ಭಾಷೆಯ ಮಾಧುರ್ಯ, ಲಯ, ಪ್ರವಾಹ, ಬಂಧ, ಛಂದ, ನಾಜೂಕು ಭಾವ ಕಲ್ಪನೆಗಳಿಂದ ಉರ್ದು ಭಾಷೆಯ ಗಜಲ್ ಗಳನ್ನು ಎಷ್ಟು ಓದಿದರೂ,‌‌ ಕೇಳಿದರೂ ಬೇಸರ ಅನಿಸುವುದಿಲ್ಲ. ಇಂಥಹ ಕ್ಲಾಸಿಕ್ ಗಜಲ್ ಮೃದು ಭಾಷಿಣಿ ಇಂದು ಕನ್ನಡದಲ್ಲಿ ಭುವನೇಶ್ವರಿಯಾಗಿ ಹುಲುಸಾಗಿ ಬೆಳೆಯುತ್ತಿದ್ದಾಳೆ. ಈ ಗಜಲ್ ಗೆ ಶೃಂಗಾರದ ಪ್ರೀತಿ-ಪ್ರೇಮ-ಪ್ರಣಯ-ವಿರಹ ಸ್ಥಾಯಿಭಾವಗಳಾದರೂ ಉಳಿದ ರಸಗಳು ಸಂಚಾರಿ ಭಾವಗಳಾಗಿ ಒಡಮೂಡುತ್ತವೆ. ಈ ರಸಗಳೊಂದಿಗೆ ಚೆಲ್ಲಾಟವಾಡುತ್ತ, ಸಹೃದಯ ಓದುಗರ ಮನವನ್ನು ತಣಿಸುತ್ತಿರುವ ಅಸಂಖ್ಯಾತ ಗಜಲ್ ಗೋ ಅವರಲ್ಲಿ ಶ್ರೀ ರವಿ ಹಂಪಿಯವರೂ ಒಬ್ಬರು.

          1979 ರ ಜೂನ್ 01ರಂದು ಜನಿಸಿದ ಶ್ರೀ ರವಿಕುಮಾರ ಹಂಪಿ ಯವರ ಮೂಲ ಕೊಪ್ಪಳ ಜಿಲ್ಲೆಯಾದರೂ ಕಳೆದ ಮೂವತ್ತೈದು ವಸಂತಗಳಿಂದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರ ಗ್ರಾಮದಲ್ಲಿ ನೆಲೆಸಿದ್ದಾರೆ. ಧಾರವಾಡ ವಿಶ್ವವಿದ್ಯಾಲಯದಿಂದ ಆಂಗ್ಲಭಾಷೆಯಲ್ಲಿ‌ ಸ್ನಾತ್ತಕೋತ್ತರ ಪದವಿಯನ್ನು ಪಡೆದಿದ್ದು, ಎಂಟು ವರ್ಷಗಳ ಕಾಲ ದೇವದುರ್ಗ‌ ತಾಲೂಕಿನ ಬಿ.ಗಣೇಕಲ್ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಲಿಂಗಸೂಗೂರಿನ ಸರಕಾರಿ‌ ಪ್ರೌಢಶಾಲೆ ಕಸಬಾದಲ್ಲಿ‌ 2010 ‌ರಿಂದ ಆಂಗ್ಲಭಾಷಾ ಶಿಕ್ಷಕರಾಗಿ‌ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿರುವ ಶ್ರೀ ರವಿ ಹಂಪಿಯವರು ಪಾಶ್ಚಾತ್ಯ ಹಾಗೂ ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದು, ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಹಲವಾರು ಕಾವ್ಯ, ಕಥೆ, ಗಜಲ್ ಗಳು ರಾಜ್ಯದ ನೂತನ, ಮಯೂರ, ಮಲ್ಲಿಗೆ‌,‌ ತುಷಾರ ಮತ್ತಿತರ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಹಾಗೂ ಆಕಾಶವಾಣಿಯಲ್ಲಿಯೂ ಬಿತ್ತರಗೊಂಡಿವೆ. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ‌ ಪಡೆದು‌ ಬೆಂಗಳೂರಿನ ಸೃಷ್ಟಿ‌ ಪ್ರಕಾಶನದಿಂದ 2007 ರಲ್ಲಿ “ಸಖ‌ ಸಖಿ” ಎನ್ನುವ ಗಜಲ್‌ ಸಂಕಲನ‌ವನ್ನು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ, ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಹಲವಾರು ಸಂಘ, ಸಂಸ್ಥೆಗಳು ಅಭಿಮಾನದಿಂದ ಸನ್ಮಾನಿಸಿ ಗೌರವಿಸಿವೆ. ಅವುಗಳಲ್ಲಿ ‘ಸಂಚಯ ಕಾವ್ಯ ಪ್ರಶಸ್ತಿ’ಯೂ ಒಂದು! ಸದ್ಯ ಇಂಗ್ಲೀಷ್ ಕೃತಿಗಳ ಅನುವಾದದಲ್ಲಿ ತೊಡಗಿಕೊಂಡಿರುವ ಶ್ರೀಯುತರ ಜಪಾನ್ ಲೇಖಕ ಹರುಕಿ‌ ಮುರಕಾಮಿಯವರ “What I talk about when I talk about running” ಕೃತಿಯ ಅನುವಾದವು ಸೃಷ್ಟಿ‌ ಪ್ರಕಾಶನದಿಂದ, ಜಾರ್ಜ್ ಆರ್ವೆಲ್ಲರ “Animal Farm” ಕೃತಿಯ ಅನುವಾದವು ಸಂಗಾತ ಪ್ರಕಾಶನದಿಂದ ಪ್ರಕಟಗೊಳ್ಳಲಿವೆ.

        ಗಜಲ್ ಎನ್ನುವುದು ನಮ್ಮ ಅಂತರಂಗದ ತುಡಿತ. ಸುಂದರ ಭಾಷೆಯ, ಮನಸೆಳೆಯುವ ಶೈಲಿಯನ್ನು ಇದು ಒಳಗೊಂಡಿದೆ. ಸಂಕೇತ, ಪ್ರತಿಮೆ, ಉಪಮೆ, ಪ್ರತಿಮೆಗಳಲ್ಲಿ ಮೌನವಾಗಿ ಪಿಸುಗುಟ್ಟುತ್ತದೆ. ಗಜಲ್ ನಲ್ಲಿ ಪವಿತ್ರ ಪ್ರೇಮ ಸಾಂಕೇತಿಕವಾಗಿ ಪ್ರಕಟವಾಗುತ್ತದೆ. ಈ ದಿಸೆಯಲ್ಲಿ ಗಜಲ್ ಹೃದಯದ ವೃತ್ತಾಂತ ಮತ್ತು ಪ್ರೇಮ ಮೋಹಗಳ ವಿದ್ಯಮಾನಗಳ ಸಾಧನವಾಗಿದೆ. ಗಜಲ್ ನ ಸೌಂದರ್ಯ, ಪ್ರೇಮ ಮನುಷ್ಯನ ಬದುಕನ್ನು ಹಸನುಗೊಳಿಸುತ್ತದೆ, ಸಂಸ್ಕೃತಿಗೆ ಉಜ್ವಲತೆಯನ್ನು ನೀಡುತ್ತದೆ ; ನೀಡಬೇಕು. ಗಜಲ್ ಗೋ ರವಿ ಯವರು ಇಂತಹ ಹಲವಾರು ಗಜಲ್ ಗಳನ್ನು ರಚಿಸಿದ್ದಾರೆ. ಇವರ ಗಜಲ್ ಗಳಲ್ಲಿ ಸಖ ಮತ್ತು ಸಖಿ ಇವರಿಬ್ಬರ ನಡುವಿನ ಸೂಕ್ಷ್ಮ ಸಂವೇದನೆಯ ಬಂಧಗಳು, ಕಾಮ, ಪ್ರೇಮ, ಸಿಟ್ಟು, ಮುನಿಸು, ವಿಚಾರ ವಿನಿಮಯ, ವಂಚನೆ…. ಇವೆಲ್ಲವೂ ಒಪ್ಪವಾಗಿ ಮೂಡಿ ಬಂದಿವೆ. ಎಷ್ಟರಮಟ್ಟಿಗೆ ಎಂದರೆ ಉರ್ದುವಿನ ಅತಿರೇಕದ ಭಾವನೆಗಳಿಗೆ ಹತ್ತಿರವಾಗುವಷ್ಟು!!

ಹಾಡುವ ಹಕ್ಕಿಯದು ಮೂಕವಾಗಿದೆ ನೀನು ಮರೆತ ನಂತರ

ನಗುವ ಹೂವದು ಕಳಚಿ ಬಿಕ್ಕಿದೆ ನೀನು ಮರೆತ ನಂತರ

ಹಕ್ಕಿಯ ಉಸಿರು ಇರುವುದು ಅದು ಹಾಡುವ ಹಾಡಿನಲ್ಲಿ. ಯಾವ ಕಾರಣಕ್ಕೂ ಅದು ಹಾಡುವುದನ್ನು ನಿಲ್ಲಿಸುವುದಿಲ್ಲ. ಹಾಡು ನಿಂತ, ನಿಲ್ಲಿಸಿದ ಮರುಕ್ಷಣವೆ ಅದರ ಎದೆಬಡಿತ ಸೂತಕವನ್ನು ಚುಂಬಿಸುತ್ತದೆ !! ಇದರೊಂದಿಗೆ ಹೂವಿನ ಜೀವನ ಸಾರ್ಥಕ ಆಗುವುದು ಅದು ಮುಡಿಗೇರಿದಾಗ ಮಾತ್ರ. ಇಲ್ಲದಿದ್ದರೆ ಅದು ಕಸವಾಗಿ ತಿಪ್ಪೆಯಲ್ಲಿ ಲೀನವಾಗಿ ಬಿಡುತ್ತದೆ. ಈ ಹಕ್ಕಿ ಮತ್ತು ಹೂವಿನ ಜೀವನ ಅಕ್ಷರಶಃ ಪ್ರೇಮಿಗಳಿಗೆ ಅನ್ವಯಿಸುತ್ತದೆ. ದ್ವಂದ್ವ ಜೀವಿಯಾದ ಮಾನವನ ಅಹಂ ನಾಶ ಆಗಿ, ಶಾಂತಿ-ನೆಮ್ಮದಿ ಲಭಿಸುವುದು ಮಾತ್ರ ಪ್ರೀತಿಯಿಂದ. ಆದರೆ ಪ್ರೀತಿ ಫಲಿಸದೆ ಹೋದಾಗ, ಪ್ರೀತಿಯಲ್ಲಿ ಮೋಸವಾದಾಗ ಒಂದರೆ ಘಳಿಗೆ ಹೃದಯದ ಬಡಿತವೆ ಸ್ತಬ್ಧವಾಗಿ ಬಿಡುತ್ತದೆ. ಇಂಥಹ ವಿರಹ ವೇದನೆಯನ್ನು ಗಜಲ್ ಗೋ ಅವರು ತುಂಬಾ ಅಪ್ಯಾಯಮಾನವಾಗಿ ಚಿತ್ರಿಸಿದ್ದಾರೆ. ಓದುತ್ತಿದ್ದಂತೆ ಕಣ್ಣಮುಂದೆ ಕ್ರೌಂಚ ಪಕ್ಷಿಗಳ ಒದ್ದಾಟದ ದರುಶನವಾಗುತ್ತದೆ.

        ಅವನಿಯ ಮಡಿಲಲ್ಲಿ ಉಸಿರಾಡುತ್ತಿರುವ ಪ್ರತಿಯೊಬ್ಬರಲ್ಲೂ ಪ್ರೀತಿಯ, ಪ್ರೇಮದ ಸಿಂಚನವಿದೆ. ಆ ಅನುರಾಗವೆ ಮನುಷ್ಯರನ್ನು ಮತ-ಧರ್ಮಗಳಾಚೆ, ಮಾನಸಿಕ ತೊಳಲಾಟದಾಚೆ ಬೆಸೆದಿದೆ, ಬೆಸೆಯುತ್ತದೆ. ದೇವರು ಇದ್ದಾನೊ ಇಲ್ಲವೊ ಎನ್ನುವ ತರ್ಕಗಳಾಚೆ ಪ್ರೇಮಿಗಳ ಹೃದಯದಲ್ಲಿ ದೇವರು ನೆಲೆಸಿರುತ್ತಾನೆ!! ಆದರೆ ನಿರ್ಲಕ್ಷ್ಯ, ಅಸಡ್ಡೆಗಳು ಎದೆಯ ಕದಕ್ಕೆ ದಸ್ತಕ್ ನೀಡಿದರೆ ಹೃದಯ ಅಶಾಂತಿಯ ಗೂಡಾಗುತ್ತದೆ, ದೆವ್ವಿನ ತಾಣವಾಗುತ್ತದೆ. ಇದೆ ಆಶಯದ ರವಿ ಹಂಪಿಯವರ ಷೇರ್ ಒಂದನ್ನು ಅನುಲಕ್ಷಿಸೋಣ.

ಮೋಹಕ ಕಂಗಳಿಗೆ ಕಾಜಲ್ ಹಚ್ಚಿದೆ ನಾನು

ದೃಷ್ಟಿ ತಾಕೀತೆಂದು ಅತ್ತ ಹೊರಳಿದೆ ನೀನು

ತಾಯಿ ತನ್ನ ಮಗುವಿಗೆ ಎಷ್ಟೇ ಪ್ರೀತಿಯಿಂದ, ಕಾಳಜಿಯಿಂದ ಕೈತುತ್ತು ನೀಡಿ ಉಣಿಸಿದರೂ ಅಲ್ಲಿ ದೃಷ್ಟಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ಪ್ರೇಮಿಗಳು ಅಲಂಕಾರ ಮಾಡಿಕೊಳ್ಳುವುದೆ ತಮ್ಮನ್ನು ಪ್ರೀತಿಸುವ ಹೃದಯಗಳಿಗಾಗಿ. ಹೀಗಾಗಿ ಯಾವ ಪ್ರಿಯತಮೆಗೂ ತನ್ನ ಪ್ರಿಯತಮನಿಂದ ದೃಷ್ಟಿಯಾಗಲಾರದು. ಆದರೆ ದೃಷ್ಟಿಯಾಗುತ್ತದೆ ಎಂದು ಹೊರಳಿದರೆ ಅಲ್ಲಿ ಪ್ರೀತಿ ಉಸಿರುಗಟ್ಟಿ ಕೊನೆಯುಸಿರೆಳೆಯುತ್ತದೆ ಎಂಬ ಭಾವವನ್ನು ಈ ಮೇಲಿನ ಷೇರ್ ಪ್ರತಿಧ್ವನಿಸುತ್ತಿದೆ. ಪ್ರೀತಿಸುವ ಪ್ರತಿ ಹೃದಯಗಳ ಮಿಡಿತ ಈ ಷೇರ್ ನಲ್ಲಿ ಅಡಗಿದೆ.

      ಮನುಷ್ಯನ ದೇಹದಲ್ಲಿ ರಕ್ತ ಹರಿಯುವ ಬದಲು ಜಾತಿ, ಮತ, ಪಂಥ, ಧರ್ಮಗಳು ಹರಿಯುತ್ತಿವೆ ಎಂದು ಮನುಕುಲವನ್ನು ನಂಬಿಸುತ್ತಿರುವ ಈ ಕಾಲ ಘಟ್ಟದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಲೋಕದ ಮೇಲೆ ಹೆಚ್ಚಿನ ಜವಾಬ್ದಾರಿ, ಒತ್ತಡವಿದೆ. ಈ ಹಿನ್ನೆಲೆಯಲ್ಲಿ ಗಜಲ್ ಲೋಕವು ಸಮಾಜದಲ್ಲಿ ಜನ್ನತ್ ಸೃಷ್ಟಿಸುತ್ತಿದೆ, ಸೃಷ್ಟಿಸಬೇಕು; ಸೃಷ್ಟಿಸಲಿ. ಇದರಲ್ಲಿ ಗಜಲ್ ಗೋ ಶ್ರೀ ರವಿ ಹಂಪಿಯವರ ಪಾಲು ಇರಲಿ ಎಂದು ಶುಭ ಕೋರುತ್ತೇನೆ.

ಕವಿಯೆಂದರೆ ಬಟ್ಟಲಿಗೆ ಬೆಳಕ ಸುರಿವವನು

ಪವಿತ್ರ ನೊಂದ ಸುಂದರ ಹೃದಯಗಳ ಸಲಹುವವನು

                                           –ಹಾಫಿಜ್

‘ಸಮಯ’ ಕೈಗೆ ನಿಲುಕದ ನಕ್ಷತ್ರದಂತೆ, ಹಿಡಿಯುವ ಹುಚ್ಚು ಸಾಹಸ ಮಾಡಲಾರೆ… ನನ್ನ ‘ಸಮಯ’ಕ್ಕಾಗಿ ಕಾಯುವೆ, ಆ ‘ಸಮಯ’ದಲ್ಲಿ ಮತ್ತೆ ನಿಮ್ಮ ಮುಂದೆ ಬರುವೆ. ಎಲ್ಲರಿಗೂ ಹೃನ್ಮನದಿ ವಂದನೆಗಳು..


ಡಾ. ಮಲ್ಲಿaನಾಥ ಎಸ್. ತಳವಾರ

One thought on “

  1. ಅತ್ಯತ್ತಮ ವಿಮರ್ಶೆ ಭಾವದುಂಬಿ‌ಬರೆದಿರುವರು

Leave a Reply

Back To Top