ವಾಸ್ತವದ ವೇದಿಕೆಯಲ್ಲಿ ಜಗದ ನಾಟಕಗಳು

ಪುಸ್ತಕ ಸಂಗಾತಿ

ವಾಸ್ತವದವೇದಿಕೆಯಲ್ಲಿಜಗದನಾಟಕಗಳು

ಡ್ರಾಮಾ ಕಂಪನಿ

ಕಥಾ ಸಂಕಲನ

ರಾಜೇಶ್ ಶೆಟ್ಟಿ

ಸಪ್ನಾ ಪ್ರಕಾಶನ

ಪುಟಗಳು 109

ಬೆಲೆ ರೂ.100

ಯುವ ಬರಹಗಾರ ರಾಜೇಶ್ ಶೆಟ್ಟಿಯವರ ಕಥಾ ಸಂಕಲನ ‘ಡ್ರಾಮಾ ಕಂಪನಿ’. ಈ ‘ಡ್ರಾಮಾ ಕಂಪನಿ’ಯ ಟೆಂಟಿನೊಳಗೆ ಹೋದರೆ ಬಗೆ ಬಗೆಯ ಪಾತ್ರಗಳನ್ನು ರಾಜೇಶ್ ಶೆಟ್ಟಿ ನಮ್ಮೆದುರು ತರುತ್ತಾರೆ. ಈ ಪಾತ್ರಗಳು ನಮ್ಮನ್ನು ಅಳಿಸುತ್ತವೆ, ಕಾಡುತ್ತವೆ, ಮುಖದಲ್ಲಿ ನಗು ಮೂಡಿಸುತ್ತವೆ, ನಿಟ್ಟುಸಿರಿಡಿಸುತ್ತವೆ, ಪಾಠ ಹೇಳಿ ಎಚ್ಚರಿಸುತ್ತವೆ.

‘ಒಂದು ಕೊಲೆ ಮತ್ತು ಅದಕ್ಕೂ ಮುಂಚಿನ ಘಟನೆಗಳು’ ಕಥೆ ಫೇಸ್ಬುಕ್ ನಲ್ಲಿ ನಡೆಯುವ ಹುಸಿ ಕ್ರಾಂತಿ ಮತ್ತು ಅದರ ಘೋರ ಪರಿಣಾಮಗಳನ್ನು ತೋರಿಸುವ ಕಥೆ. ವಿಷಯದ ಹಿನ್ನೆಲೆ ಗೊತ್ತಿಲ್ಲದೇ ಫೇಸ್ಬುಕ್ ಪೋಸ್ಟ್ ಗಳನ್ನು ನಂಬಿ ಅದಕ್ಕೆ ಪ್ರತಿಕ್ರಿಯಿಸುವುದು, ಬೆಂಬಲಿಸುವುದು ಒಂದು ಜೀವದ ಸಾವಿಗೆ ಕಾರಣವಾಗುವುದನ್ನು ನಿರೂಪಿಸುವ ಈ ಕಥೆ ಓದುಗರ ವಿವೇಚನೆಯನ್ನು ತಿವಿದೆಬ್ಬಿಸಿ, ಪ್ರತಿಯೊಬ್ಬನ ನೈತಿಕ ಹೊಣೆಯನ್ನು ನೆನಪಿಸಿ, ಎಚ್ಚರಿಕೆಯ ಗಂಟೆ ಬಾರಿಸುತ್ತದೆ. ಈ ಕಥೆಯ ಕೇಂದ್ರ ಇದರ ಕ್ಲೈಮ್ಯಾಕ್ಸ್ ನಲ್ಲಿದೆ. ಶೀರ್ಷಿಕೆ ಕಥೆ ‘ಡ್ರಾಮಾ ಕಂಪನಿ’ ಪ್ರತಿಯೊಬ್ಬನ ಅಂತರಂಗ ಬಹಿರಂಗಗಳು ಒಂದೇ ಅಲ್ಲ ಎಂದು ನಿರೂಪಿಸುವ ಚಂದದ ಕಥೆ. ಮೇಲ್ನೋಟಕ್ಕೆ  ನವಿರಾದ ಪ್ರೇಮ ಕಥೆಯಂತೆ ಕಂಡರೂ ಇದರ ಕೇಂದ್ರ ಮತ್ತು ಕಥಾವಸ್ತು ಬೇರೆಯೇ. ಸಂಬಂಧಗಳಲ್ಲಿ ನಂಬಿಕೆ ಕಳೆದುಕೊಂಡಂತೆ, ನಿರ್ಲಿಪ್ತನಂತೆ ಕಾಣುವ ಮನುಷ್ಯನೂ ಒಳಗೊಳಗೇ ಯಾವುದೋ ಸುಖಕ್ಕಾಗಿ ಸಾಂಗತ್ಯಕ್ಕಾಗಿ ಹುಡುಕಾಟ ನಡೆಸುತ್ತಿರಬಹುದು, ಪರಮ ಸುಖಿಯಂತೆ ಕಾಣುವ ಮನುಷ್ಯನನ್ನೂ ಯಾವುದೋ ಕೊರತೆ ಬಾಧಿಸುತ್ತಿರಬಹುದು. ತೆರೆಯ ಮೇಲೆ ವೇಷ ಧರಿಸಿ ಪಾತ್ರ ಮಾಡುವ ಕಲಾವಿದನಿಗೆ, ತೆರೆಯ ಹಿಂದೆ ಬೇರೆಯೇ ವ್ಯಕ್ತಿತ್ವ, ಜೀವನ ಇರುವಂತೆ ಮನುಷ್ಯನ ಪಾತ್ರ ಬಾಹ್ಯ ಮತ್ತು ಆಂತರ್ಯದಲ್ಲಿ ಬೇರೆ ಬೇರೆಯೇ ಇರಬಹುದು ಎನ್ನುವ ಅಂಶ ಈ ಕಥೆಯಲ್ಲಿ ಸೃಜನಶೀಲವಾಗಿ ನಿರೂಪಿಸಲ್ಪಟ್ಟಿದೆ. ಇಲ್ಲಿ ಬರುವ ಕಾಲ್ಗೆಜ್ಜೆ ಮತ್ತು ಹಸಿರು ಬಳೆಗಳು ರುಚಿಕಟ್ಟಾದ ಅಡುಗೆಗೆ ಗಾರ್ನಿಶಿಂಗ್ ಮಾಡಿದ ಹಾಗೆ ಕಥೆಯನ್ನು ಇನ್ನಷ್ಟು ಅಂದಗೊಳಿಸಿವೆ.

‘ಪ್ರೀತಿಯ ಕೊನೆಯ ಚರಣ’ ಓದಿದಾಗ ಕೊನೆಯಿಲ್ಲದ ಖೇದ ಮತ್ತು ನಿಟ್ಟುಸಿರು ನಮ್ಮಲ್ಲಿ ಹುಟ್ಟುತ್ತವೆ. ಶೀನ ಹೆಗ್ಡೆ ಮತ್ತು ಸಾಕಿದ ಕೋಳಿಯ ಸಂಬಂಧ, ಮತ್ತು ತನ್ನ ಜಿದ್ದಿಗಾಗಿ ಕೋಳಿ ಅಂಕದಲ್ಲಿ ತನ್ನ ಪ್ರೀತಿಯ ಕೋಳಿಯನ್ನು ಪಣಕ್ಕಿಡುವ ಶೀನ ಹೆಗ್ಡೆಯ ಚಿತ್ರಣ ಒಂದು ಜೀವದ ಮೇಲಿನ ಪ್ರೀತಿಗಿಂತ ಮನುಷ್ಯನ ಪ್ರತಿಷ್ಠೆಯೇ ಮೇಲಾಗುವ ದುರಂತವನ್ನು ಚಿತ್ರಿಸಿದೆ. ಈ ಕಥಾವಸ್ತು ಲೇಖಕರ ಅತ್ಯಂತ ಸೂಕ್ಷ್ಮ ಸಂವೇದನೆಗೆ ಸಾಕ್ಷಿಯಾಗಿದೆ. ಬಹಳ ಕಾಡುವ ಕಥೆಯಿದು. ಯಕ್ಷಗಾನದ ಪ್ರಸಂಗವನ್ನು ಸೇತುವೆಯಾಗಿಸಿ ಮಾನವ ಸಂಬಂಧಗಳನ್ನು ಚಿತ್ರಿಸುವ ಕಥೆ ‘ಮಹಿಷಾಸುರ’ ಕಥೆಯನ್ನು ಕಟ್ಟಿಕೊಟ್ಟ ರೀತಿಯಿಂದ ಗೆಲ್ಲುತ್ತದೆ. ನೆರೆಹೊರೆಯವರೇ ಆಗಿದ್ದು, ಸದಾ ಮಾತಿಲ್ಲದೇ ಒಬ್ಬರ ಮೇಲೊಬ್ಬರು ಪೈಪೋಟಿ ನಡೆಸಿಕೊಳ್ಳುವ ‘ಬೀಡಿ’ ಕಥೆಯ ರಾಘಣ್ಣ ಮತ್ತು ಮುದ್ದಣ್ಣ ಅವರಿಗೇ ಅರಿವಿಲ್ಲದೇ, ಒಳಗೊಳಗೇ ಬೆಳೆಸಿಕೊಂಡ ಮುಗ್ಧ, ಪರಿಶುದ್ಧ ಭಾವಬಂಧ ನಮ್ಮ ಬಾಲ್ಯಕಾಲದ ಸ್ನೇಹಿತರನ್ನು ನೆನಪಿಸುತ್ತದೆ.

‘ಚಂದ್ರಹಾಸ’ ಕಥೆಯಲ್ಲಿ ಸಿನಿಮಾ ನಟನೊಬ್ಬ ಮೊದಲು ಬಳಸಿದ್ದ ಮೊಬೈಲ್ ನಂಬರನ್ನು ನಂತರ ಚಂದ್ರಹಾಸ ಎಂಬ ಸಾಮಾನ್ಯ ವ್ಯಕ್ತಿ ಬಳಸಲು ಪ್ರಾರಂಭಿಸಿದಾಗ ಆಗುವ ಗೊಂದಲಗಳ ಚಿತ್ರಣವಿದೆ. ನಮ್ಮ ಪಾತ್ರವನ್ನಷ್ಟೇ ನಾವು ಬದುಕಬೇಕು, ಒಬ್ಬರ ಪಾತ್ರವನ್ನು ಇನ್ನೊಬ್ಬರು ನಕಲಿಸಲು ಆಗದು ಎಂಬ ಸಂದೇಶ ಕಥೆಯೊಳಗಿದೆ.

ತನ್ನ ತಾನೇ ಹುಡುಕಿಕೊಳ್ಳುವ ನಿರಂತರ ಪ್ರಯತ್ನದಲ್ಲಿರುವ ನಿಜಗುಣನ ಕಥೆ, ಸಣ್ಣ ಸಿನಿಮಾದಂತೆ ನಡೆದು ಹೋಗುವ ‘ಫೇರಿಟೇಲ್’ ಹೀಗೆ ಹನ್ನೆರಡು ಕಥೆಗಳಿರುವ ಈ ಪುಸ್ತಕದಲ್ಲಿ ಎಲ್ಲ ಕಥೆಗಳೂ ಇಷ್ಟವಾಗುತ್ತವೆ.

ಜೀವನದ ಸಣ್ಣ ಸಣ್ಣ ಸಂಗತಿಗಳನ್ನೂ, ಸೂಕ್ಷ್ಮ ಎಳೆಗಳನ್ನೂ ಕಥೆಯಾಗಿಸುವ ಕೌಶಲ ರಾಜೇಶ್ ಅವರಿಗೆ ಸಿದ್ಧಿಸಿದೆ. ಈ ಕಥೆಗಳು ಬದುಕಿನ, ಮಾನವ ಸಂಬಂಧದ ವಿವಿಧ ಆಯಾಮ ಹಾಗೂ ದೃಷ್ಟಿಕೋನಗಳನ್ನು ತೆರೆದಿಡುತ್ತವೆ. ಸೊಗಸಾದ ನಿರೂಪಣೆಯಿಂದ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಒಮ್ಮೆ ಮಂಗಳೂರಿನ ಟೌನ್ ಹಾಲ್ ಗೆ ನಮ್ಮನ್ನು ಕರೆದೊಯ್ದರೆ, ಇನ್ನೊಮ್ಮೆ ಬೆಂಗಳೂರಿನ ಷೆರ್ಲಾಕ್ಸ್ ಪಬ್ ಗೆ ಕರೆದೊಯ್ಯುತ್ತವೆ. ಹೊಸತನದಿಂದ ಕೂಡಿದ ಕಥೆಗಳಿಗಾಗಿ ರಾಜೇಶ್ ಶೆಟ್ಟಿ ಅವರಿಗೆ ಅಭಿನಂದನೆಗಳು. ರಾಜೇಶ್ ಶೆಟ್ಟಿ ಇನ್ನಷ್ಟು ಬರೆಯಲಿ ಎಂದು ಆಶಿಸುವೆ. ಈ ಕಥೆಗಳ ಓದಿನ ಖುಷಿಯನ್ನು ನಿಮ್ಮದಾಗಿಸಿಕೊಳ್ಳಲು ಒಮ್ಮೆ ಡ್ರಾಮಾ ಕಂಪನಿಯ ಒಳಹೊಕ್ಕು ನೋಡಿ.

—————–

ಡಾ. ಅಜಿತ್ ಹರೀಶಿ

Leave a Reply

Back To Top