ಧಾರಾವಾಹಿ

ಆವರ್ತನ

ಅದ್ಯಾಯ-53

Kali Sketch - Kali Black And White , Free Transparent Clipart - ClipartKey

.

ಮರುದಿನದಿಂದಲೇ ಸುರೇಂದ್ರಯ್ಯ ಚೌಂಡಿ ದೈವದ ದರ್ಶನ ಸೇವೆಯ ತಯಾರಿಗೆ ತೊಡಗಿದರು. ಕಂಕಣಬೆಟ್ಟಿನ ಖ್ಯಾತ ದರ್ಶನಪಾತ್ರಿ ಮಾಲಿಂಗನನ್ನು ಭೇಟಿಯಾಗಿ ದೇವಿಯ ದರ್ಶನಕ್ಕೆ ಅವನಿಗೆ ವೀಳ್ಯವನ್ನು ಕೊಟ್ಟು ಆಹ್ವಾನಿಸಿ ಬಂದರು. ಗುರೂಜಿಯವರು ತಿಳಿಸಿದ ದಿನದಂದು ಅವರ ಹಳೆಯ ಮನೆಯು ಸುಂದರವಾಗಿ ಶೃಂಗಾರಗೊಂಡು ಹೊಸಕಳೆಯಿಂದ ಮಿಂಚತೊಡಗಿತು. ಊರ, ಪರವೂರ ಬಂಧು ಬಳಗ ಮತ್ತು ಗ್ರಾಮದ ಹಿರಿಯರು, ಗುರಿಕಾರರು ಹಾಗೂ ನೆರಕರೆಯವರೆಲ್ಲ ಬಂದು ಸೇರಿ ಶ್ರದ್ಧಾಭಕ್ತಿಯಿಂದ ದೈವದ ಚಾಕರಿಯಲ್ಲಿ ತೊಡಗಿದರು. ಕತ್ತಲಾಗುತ್ತಿದ್ದಂತೆಯೇ ಮನೆಯ ದೈವಗಳಿಗೂ ಮತ್ತು ಗತಿಸಿದಪಿತೃಗಳಿಗೂ ಪನಿವಾರ ಬಡಿಸಲಾಯಿತು. ಆ ಸೇವೆ ಮುಗಿಯುತ್ತಲೇ ದೇವಿಯ ದರ್ಶನವೂ ಆರಂಭವಾಯಿತು.

   ತನ್ನ ತಂದೆ ಸಂಜೀವ ಪಾತ್ರಿಯಿಂದ ದೈವ ದರ್ಶನ ಕಲೆಯನ್ನು ಭಯಭಕ್ತಿ ಮತ್ತು ಸಂಸ್ಕಾರಯುತವಾಗಿ ರೂಢಿಸಿಕೊಂಡಿದ್ದ ಐದು ಮುಕ್ಕಾಲು ಅಡಿ ಎತ್ತರದ, ಎಣ್ಣೆಗೆಂಪಿನ ಕಟ್ಟುಮಸ್ತಾದ, ಮೂವತ್ತೈದರ ಹರೆಯದ ಮಾಲಿಂಗನು ಆವತ್ತು ಶುದ್ಧಾಚಾರದಿಂದ ಬಂದು ಸುರೇಂದ್ರಯ್ಯನ ದೈವದ ಕೋಣೆಯನ್ನು ಪ್ರವೇಶಿಸಿದ. ದೇವಿಗೆ ಒಂದು ಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದ. ಮುಂದಿನ ಕ್ಷಣ ಹೊರ ಬಾಗಿಲಿನಿಂದ ವಾದ್ಯ ಮೇಳದ ಕೊಂಬು ಕಹಳೆಗಳು ಕರ್ಣಕಠೋರವಾಗಿ ಮೊಳಗಿದವು. ಅಂಥದ್ದೊಂದು ಅಲೌಕಿಕ ಅನುರಣನಕ್ಕೆ ಪಾತ್ರಿಯ ದೇಹವು ನಿಧಾನವಾಗಿ ನಡುಗತೊಡಗಿತು. ಬರಬರುತ್ತ ಆವೇಶದ ತೀವ್ರತೆ ಹೆಚ್ಚಿತು. ಮುಂದಿನ ಕೆಲವೇ ನಿಮಿಷಗಳಲ್ಲಿ ವಿಶೇಷವಾದೊಂದು ಸ್ತ್ರೀ ತೇಜಸ್ಸು ಅವನ ಇಡೀ ದೇಹದಲ್ಲಿ ಪ್ರಜ್ವಲಿಸತೊಡಗಿತು. ಅದಕ್ಕೆ ತಕ್ಕಂತೆ ಅವನ ಹಾವಭಾಗಳೂ ಬದಲಾಗಿಬಿಟ್ಟವು.

   ಬರಬರುತ್ತ ಪಾತ್ರಿಯ ಆವೇಶವು ದುಪ್ಪಟ್ಟಾಗಿ ಅವನು ಎಗರಿ ಎಗರಿ ನಡುಗತೊಡಗಿದ. ಅವನ ವಿಶಾಲವಾದ ಶುಭ್ರ ಕಣ್ಣುಗಳು ಇಹವನ್ನು ತೊರೆದು ಅನಂತದತ್ತ ನೆಟ್ಟವು. ಅವನ ಮುಖದಲ್ಲಿ ಅಪೂರ್ವ ಕಾಂತಿ ಬೆಳಗತೊಡಗಿತು. ಆಗ ಚೌಂಡಿಯು ಅವನ ಮೇಲೆ ಆವಾಹಿತಳಾಗಿದ್ದಾಳೆಂದು ಜನರಿಗೆ ಭಾಸವಾಗಿ ಎಲ್ಲರೂ ಭಯಭಕ್ತಿಯಿಂದ ರೋಮಾಂಚಿತರಾದರು. ಕೆಲವರ ಕಣ್ಣಾಲಿಗಳು ತುಂಬಿಕೊಂಡವು. ಆದರೆ ಆ ದಿವ್ಯಶಕ್ತಿಯು ಎಂದಿನಂತೆ ಮೈದಳೆದ ತಕ್ಷಣ ಒಮ್ಮೆ ಉಗ್ರವಾಗಿ ವಿಜೃಂಭಿಸಿ ಬಳಿಕ ಮಧುರ ಮಂದಸ್ಮಿತೆಯಾಗಿ ಮಮತೆಯಿಂದ ತಮ್ಮನ್ನು ದಿಟ್ಟಿಸುತ್ತಿದ್ದವಳು ಇಂದೇಕೋ ಅವರಿಗವಳು ಮೊದಲಿನ ಚಾಮುಂಡಿಯಾಗಿ ಕಾಣಿಸಲಿಲ್ಲ. ಯಾವ ಕಾರಣಕ್ಕೋ ಅಥವಾ ಯಾರ ಮೇಲೆಯೋ ಅವಳು ತೀವ್ರ ಅಸಹನೆಗೊಂಡಂತೆಯೂ ಮತ್ತು ಬಿಸಿಯುಸಿರು ದಬ್ಬುತ್ತಿರುವಂತೆಯೂ ಭಾಸವಾಗಿ ಅವಳ ಆ ರೌದ್ರತೆಯನ್ನು ಕಂಡ ಭಕ್ತಾದಿಗಳಲ್ಲಿ ತಟ್ಟನೆ ಆತಂಕವು ಮನೆ ಮಾಡಿತು.

   ಇತ್ತ ಸುರೇಂದ್ರಯ್ಯ ರೇಷ್ಮೆಯ ಗರಿಮುರಿಯಾದ ಬಿಳಿಯಪಂಚೆಯುಟ್ಟು ಅದೇ ಬಣ್ಣ ಉತ್ತರೀಯವನ್ನು ಹೆಗಲಿಗೇರಿಸಿಕೊಂಡು ತಮ್ಮ ಪೂರ್ತಿ ಬೆಳ್ಳಗಿನ ಉರಿಮೀಸೆಯನ್ನು ಇನ್ನಷ್ಟು ನೆಟ್ಟಗಾಗಿಸಿ ಎದೆ ಸೆಟೆಸಿ ದೇವಿಯೆದುರು ನಿಂತುಕೊಂಡು ಅವಳನ್ನೇ ದಿಟ್ಟಿಸುತ್ತಿದ್ದರು. ಅದನ್ನು ಕಂಡ ಅವಳೂ ಅವರನ್ನು ತೀಕ್ಷ್ಣವಾಗಿ ಕೆಕ್ಕರಿಸಿದಳು. ಬಳಿಕ ತನ್ನ ಆವಾಹನೆಗೆ ತುಸು ಮುಂಚೆ ಸುರೇಂದ್ರಯ್ಯನು ಪಾತ್ರಿಯ ಕೊರಳಿಗೆ ಹಮ್ಮಿನಿಂದ ತೊಡಿಸಿದ್ದ ಮಲ್ಲಿಗೆ ಮತ್ತು ಸೇವಂತಿಗೆ ಹಾರಗಳನ್ನೂ ಮತ್ತವರನ್ನೂ ತಿರಸ್ಕಾರದಿಂದ ದಿಟ್ಟಿಸಿದವಳು ತನ್ನ ಎಡಗೈಯಿಂದ ಸರಕ್ಕನೇ ಹಾರಗಳನ್ನು ಕಿತ್ತು ಸುರೇಂದ್ರಯ್ಯನ ಮುಖದ ಮೇಲೆ ರಪ್ಪನೆ ಎಸೆದುಬಿಟ್ಟಳು!

 ದೇವಿಯ ವರ್ತನೆಯಿಂದ ಸುರೆಂದ್ರಯ್ಯ ಒಮ್ಮೆಲೇ ತಲ್ಲಣಿಸಿ ಹಿಂದೆ ನೆಗೆದರು! ಮರುಕ್ಷಣ ಅವರನ್ನು ತೀವ್ರ ಭಯ ಮತ್ತು ಅವಮಾನ ಕಾಡಿತಲ್ಲದೇ ಅದು ಕೂಡಲೇ ಪಾತ್ರಿಯ ಮೇಲಿನ ಸಿಟ್ಟಾಗಿ ಪರಿವರ್ತನೆಗೊಂಡಿತು. ಅವನನ್ನು ಕಣ್ಣಲ್ಲೇ ಸುಟ್ಟು ಬಿಡುವಂತೆ ಕಿಡಿಕಾರಿದರು. ಆದರೆ ಅದರಿಂದ ಪ್ರಮಾದವೇ ಜರುಗಿಬಿಟ್ಟಿತು. ಅವರ ದೃಷ್ಟಿಯನ್ನು ಕಂಡ ದೇವಿಯು ಇನ್ನಷ್ಟು ಕೆರಳಿದಳು.‘ಏನಲೇ ದುಷ್ಟಾ…! ನನ್ನನ್ನೇ ಕೆಕ್ಕರಿಸುವಷ್ಟು ಅಹಂಕಾರವೇನೋ ನಿನಗೇ…?’ ಎಂದು ಗುಡುಗಿದವಳು ತನ್ನ ಕಡ್ಸಲೆಯನ್ನು ಝಳಪಿಸುತ್ತ ಸುರೇಂದ್ರಯ್ಯನನ್ನು ಸಿಗಿದೇ ಹಾಕಲೆಂಬಂತೆ ವೇಗವಾಗಿ ಮುನ್ನುಗ್ಗಿದಳು. ಅಷ್ಟರವರೆಗೆ ಭಯದಿಂದ ಗರಬಡಿದವರಂತೆ ನಿಂತುಕೊಂಡು ದೇವಿಯ ವರ್ತನೆಯನ್ನು ನೋಡುತ್ತಿದ್ದ ಭಕ್ತಾದಿಗಳೆಲ್ಲ ಒಮ್ಮೆಲೇ,‘ಹೋ, ಹೋ…ಹೋ…ಅಮ್ಮಾ…ಅಮ್ಮಾ…ತಾಯೇ…ಕ್ಷಮಿಸಬೇಕು, ಕ್ಷಮಿಸಬೇಕು…!’ ಎಂದು ಬೊಬ್ಬಿಡುತ್ತ ಒಬ್ಬರನ್ನೊಬ್ಬರು ತಳ್ಳಿಕೊಂಡು ದಡಬಡನೇ ಹಿಂದೆ ಸರಿಯತೊಡಗಿದರು. ಆದರೆ ಅಷ್ಟರಲ್ಲಿ ಗುರಿಕಾರ ಎಚ್ಚೆತ್ತುಕೊಂಡ.

‘ಅಯ್ಯೋ ತಾಯೇ…! ಇದೇನಮ್ಮಾ ಇಂಥ ಕೋಪ ನಿನ್ನದು…? ನಮ್ಮಂಥ ಬಡಭಕ್ತರ ಕೂಗಿಗೆ ನೀನು ಓಗೊಟ್ಟು ದರ್ಶನ ನೀಡಿರುವುದೇ ನಮಗೆಲ್ಲ ಬಹಳ ದೊಡ್ಡ ಸಂಗತಿ! ಹೀಗಿರುವಾಗ ಮನುಷ್ಯ ಮಾತ್ರರಾದ ನಮ್ಮಿಂದ ತಿಳಿದೋ ತಿಳಿಯದೆಯೋ ತಪ್ಪು ಒಪ್ಪುಗಳೂ ನಡೆದಿರಬಹುದು. ಅದನ್ನೆಲ್ಲ ನಿನ್ನ ಮಕ್ಕಳೆಂದು ಭಾವಿಸಿ ಹೊಟ್ಟೆಗೆ ಹಾಕಿಕೊಂಡು ಸರ್ವರ ಕಷ್ಟಕಾರ್ಪಣ್ಯಗಳನ್ನೂ ನಿವಾರಿಸಿ ಅಭಯ ನೀಡಬೇಕಮ್ಮಾ…!’ ಎಂದು ಆದ್ರ್ರನಾಗಿ ಬೇಡಿಕೊಂಡ. ಅವನ ನಮ್ರ ವಿನಂತಿಗೆ ದೇವಿಯು ತುಸು ತಣ್ಣಗಾದಳು. ಆದ್ದರಿಂದ ಸುರೇಂದ್ರಯ್ಯನಿಂದ ದೃಷ್ಟಿ ಕಿತ್ತು ತನ್ನ ಭಕ್ತಾದಿಗಳನ್ನೆಲ್ಲ ಸಹಾನುಭೂತಿಯಿಂದ ದಿಟ್ಟಿಸಿದವಳು,‘ಹ್ಞೂಂ ಹೇಳಿ. ನನ್ನನ್ನು ಬರಮಾಡಿಕೊಂಡ ಉದ್ದೇಶವೇನು…?’ ಎಂದು ಹ್ಞೂಂಕರಿಸುತ್ತ ಕೇಳಿದಳು. ಆಗ ಜನರು ಒಬ್ಬೊಬ್ಬರಾಗಿ ಮುಂದೆ ಬಂದು ತಮ್ಮತಮ್ಮ ಸಮಸ್ಯೆ, ತೊಂದರೆಗಳನ್ನೆಲ್ಲ ನಿವೇದಿಸಿಕೊಂಡರು. ಆಗ ಅವಳು ಮಂದಸ್ಮಿತೆಯಾಗಿ ಎಲ್ಲರನ್ನೂ ಆಶೀವರ್ದಿಸುತ್ತ ಹಿಂಗಾರದ ಚೂರುಗಳನ್ನು ಮುರಿಮುರಿದು ಅವರು ಚಾಚಿ ನಿಂತ ಕೈಗಳಿಗೆ ಎಸೆಯತೊಡಗಿದಳು. ಅವರೆಲ್ಲ ಅದನ್ನು ಭಕ್ತಿಯಿಂದ ಸ್ವೀಕರಿಸಿ ಕಣ್ಣಿಗೊತ್ತಿಕೊಂಡು ಹಿಂದೆ ಸರಿಯತೊಡಗಿದರು. ಕೊನೆಯಲ್ಲಿ ದರ್ಶನದ ಮುಖ್ಯ ಘಟ್ಟವೂ ಆರಂಭವಾಯಿತು.

   ಇತ್ತ ಅಷ್ಟರವರೆಗೆ ಕೋಪ ಮತ್ತು ವಿಚಲಿತತೆಯಿಂದ ಚಡಪಡಿಸುತ್ತ ದೂರದಲ್ಲಿ ಕೈಕಟ್ಟಿ ನಿಂತಿದ್ದ ಸುರೇಂದ್ರಯ್ಯನನ್ನು ಗುರಿಕಾರನೂ, ಕೆಲವು ಹಿರಿಯರೂ ದೇವಿಯ ಸಮ್ಮುಖಕ್ಕೆ ಕರೆದರು. ಅವರು ಅಸಹನೆಯಿಂದಲೇ ಬಂದರು. ಗುರಿಕಾರನು ಅವರೊಡನೆ ತಮ್ಮ ಸಮಸ್ಯೆಯನ್ನು ದೇವಿಯೊಡನೆ ನಿವೇದಿಸಿಕೊಳ್ಳಲು ಸೂಚಿಸಿದ. ಆಗಲೂ ಸುರೇಂದ್ರಯ್ಯ ಎದೆ ಸೆಟೆಸಿಕೊಂಡೇ ದೇವಿಯೆದುರು ನಿಂತರು. ಆದರಿತ್ತ ಗುರಿಕಾರನೂ, ಹಿರಿಯರೂ ಸುರೇಂದ್ರಯ್ಯನ ಹೆಸರೆತ್ತುತ್ತಲೇ ಚೌಂಡಿಯ ಕಣ್ಣುಗಳು ಮತ್ತೆ ಕೆಂಡ ಕಾರತೊಡಗಿದವು. ಸುರೇಂದ್ರಯ್ಯನಲ್ಲೂ ದೇವಿಯ ಮೇಲೆ ರೋಷ ಹೆಡೆಯಾಡುತ್ತಿತ್ತು. ತಾವು ಏನಂತಹ ಅಪರಾಧ ಮಾಡಿದ್ದೇವೆಂದು ಇವಳು ತಮ್ಮನ್ನು ಊರವರೆದುರೆಲ್ಲ ಇಷ್ಟೊಂದು ತುಚ್ಛವಾಗಿ ಕಾಣುತ್ತಿದ್ದಾಳೆ…? ಎಂದು ಯೋಚಿಸಿ ಅಶಾಂತರಾಗಿದ್ದವರು, ‘ಏನಮ್ಮಾ ತಾಯಿ…! ಒಂದು ಕಾಲದಲ್ಲಿ ಎಲ್ಲೆಲ್ಲೋ ಕಾಡುಗುಡ್ಡೆಯಲ್ಲಿದ್ದ ನಿನ್ನನ್ನು ಹುಡುಕಾಡಿ ನಮ್ಮ ನೂರಾಳು ಮಂದಿಯ ದೊಡ್ಡ ಮನೆಗೆ ವೈಭವದಿಂದ ಕರೆದುಕೊಂಡು ಬಂದು ನೇಮನಿಷ್ಠೆಯಿಂದ ಪೂಜಿಸುತ್ತ ಬಂದವರು ನಮ್ಮ ಹಿರಿಯರೂ ಮತ್ತು ನಾವು! ಹಾಗಾಗಿ ನೀನೂ ನಮ್ಮ ಕುಟುಂಬವನ್ನು ಕಾಪಾಡಿಕೊಂಡು ಬಂದಂಥವಳು. ಹೀಗಿದ್ದವಳು ಮೊನ್ನೆ ನಮ್ಮ ಬಂಡೆಯನ್ನು ಬಿಟ್ಟುಕೊಡದೆ ನಿನ್ನ ಗಣಗಳಿಂದ ನಮ್ಮೆಲ್ಲರ ಮೇಲೆ ಏಕಾಏಕಿ ಕ್ರೂರವಾಗಿ ಆಕ್ರಮಣ ಮಾಡಿಸಿದ್ದರ ಅರ್ಥವಾದರೂ ಏನು ಹೇಳು…?’ಎಂದು ತಿರಸ್ಕಾರದಿಂದ ಪ್ರಶ್ನಿಸಿದರು.

   ಸುರೇಂದ್ರಯ್ಯನ ಮಾತು ಕೇಳಿದ ಚೌಂಡಿಯ ಮುಖದಲ್ಲಿ ಒಮ್ಮೆಲೇ ಅಪಹಾಸ್ಯದ ನಗುವೊಂದು ಚಿಮ್ಮಿತು. ಅವರನ್ನು ಕಠೋರವಾಗಿ ದಿಟ್ಟಿಸುತ್ತ ಅಬ್ಬರಿಸಿ ನಕ್ಕವಳು,‘ಏನಂದೆಯೋ ಮೂರ್ಖಾ! ನಿನ್ನ ಹಿರಿಯರು ನನ್ನನ್ನು ಕರೆದು ತಂದು ನಂಬಿರುವುದೇ…? ಎಲ್ಲಿಗೋ…? ಆ ನಿನ್ನ ಹಿರಿಯರ ಹುಟ್ಟಿನ ಬಗ್ಗೆ ನಿನಗೇನು ಗೊತ್ತಿದೆಯೋ…?’ಎಂದು ಗುಡುಗಿ ಕ್ಷಣಹೊತ್ತು ಆವೇಶಭರಿತಳಾದವಳು,‘ಎಲವೋ ಮೂಢಾ…! ಆ ಕಥೆಯನ್ನು ಹೇಳುತ್ತೇನೆ ಕೇಳೋ. ನಿನ್ನಂಥ ಒಂದಷ್ಟು ನಿಕೃಷ್ಟಜೀವಿಗಳು ಈ ಭೂಮಿಯ ಮೇಲೆ ಹುಟ್ಟುವುದಕ್ಕಿಂತ ಕೋಟ್ಯಾಂತರ ವರ್ಷಗಳ ಹಿಂದೆಯೇ ನಾನೊಮ್ಮೆ ಕ್ಯಾಕರಿಸಿ ಉಗುಳಿದ ಎಂಜಲಿನಲ್ಲಿ ಬರಿಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮ ಹುಳುಗಳಾಗಿ ಹುಟ್ಟಿದವರೋ ಆ ನಿನ್ನ ಹಿಂದಿನವರು. ಆ ನಂತರ ಅದೆಷ್ಟೋ ಶತಮಾನಗಳವರೆಗೂ ಅದೇ ನೀರಿನೊಳಗಿನ ಜೀವಿಗಳಾಗಿ ಮಿಸುಕಾಡಿಕೊಂಡಿದ್ದರು. ಅದನ್ನು ಕಂಡು ನನಗೇ ಕನಿಕರವೆನಿಸಿ ಒಮ್ಮೆ ಅವರಲ್ಲಿ ಕೆಲವರಿಗೆ ಮರ್ಕಟಗಳ ರೂಪಕೊಟ್ಟು ಭೂಮಿಯ ಮೇಲೆ ಜೀವಿಸಲು ಕಲಿಸಿದೆ. ಹಾಗಾಗಿ ಅವರೆಲ್ಲ ಕ್ರಮೇಣ ಮಾನವಜೀವಿಗಳಾಗಿ ರೂಪಗೊಂಡು ನನ್ನ ಸಾಮ್ರಾಜ್ಯದೊಳಗೆ ಪ್ರಾಮಾಣಿಕರಾಗಿ, ದೈವನಿಷ್ಠರಾಗಿ ಬದುಕಿಕೊಂಡು ಬಂದವರೋ ಆ ನಿನ್ನ ಪ್ರಾಚೀನರು!

   ಆದರೆ ಅಂದು ಅವರೊಳಗೂ ನಿನ್ನಂಥ ನೀಚರುಇದ್ದರೋ…! ಅಂಥವರೆಲ್ಲ ತಮ್ಮ ದುರಾಸೆ ಮತ್ತು ಅಹಂಕಾರದಿಂದ ಮೆರೆಯುತ್ತ ನನ್ನ ಸೃಷ್ಟಿಯನ್ನೇ ಹಾಳುಗೆಡಲು ಹೊರಟಾಗ ನನ್ನ ಗಣಗಳಿಂದಲೇ ಅವರೆಲ್ಲರ ಸೊಕ್ಕು ಮುರಿಸಿ, ಅದೇ ಶಕ್ತಿಗಳನ್ನೂ ಮತ್ತು ಪ್ರಕೃತಿ ಸ್ವರೂಪಳಾದ ನನ್ನನ್ನೂ ಅವರೆಲ್ಲ ಪೂಜಿಸಿಕೊಂಡು ಬರುವಂತೆ ಮಾಡಿದ್ದ ಜಗನ್ಮಾತೆಯೋ ನಾನು! ಆವತ್ತಿನಿಂದಲೇ ನಿನ್ನ ಹಿರಿಯರ ಲಕ್ಷಾಂತರ ತಲೆಮಾರುಗಳು ನನ್ನ ದಿವ್ಯಶಕ್ತಿಗೆ ಮಣಿದು ತಮ್ಮ ರಕ್ಷಣೆಗೋಸ್ಕರ ನನ್ನನ್ನು ನಂಬಿ ಪೂಜಿಸಿಕೊಂಡು ಬಂದರೇ ವಿನಾಃ ನನ್ನ ಲಾಭಕ್ಕಾಗಿ ಅಲ್ಲವೋ ಅವಿವೇಕಿ! ಆದ್ದರಿಂದಲೇ ಹೇಳುತೇನೆ ಕೇಳು, ನನ್ನಿಂದ ನೀವೇ ಹೊರತು ನಿಮ್ಮಿಂದ ನಾನಲ್ಲವೋ ಅಧಮ!!’ ಎಂದು ಕೋಪದಿಂದ ಗರ್ಜಿಸಿದಳು. ಆದರೆ ಅಷ್ಟು ಕೇಳಿದ ಸುರೇಂದ್ರಯ್ಯ ಭಯದಿಂದ ಕಂಪಿಸಿಬಿಟ್ಟರು. ಅತ್ತ ಗುರಿಕಾರನೂ ಮತ್ತು ನೆರೆದವರೂ ಅವಕ್ಕಾಗಿದ್ದರು.

ಅಯ್ಯಯ್ಯೋ, ಇದೆಂಥದಿದು…? ಈ ಪಾತ್ರಿಯ ಮೇಲಿರುವುದು ನಿಜವಾಗಿಯೂ ಯಾವ ದೈವ…!? ನಮ್ಮ ಚೌಂಡಿ ಯಾವತ್ತೂ ನಮ್ಮ ಇಚ್ಛೆ ಮತ್ತು ಆಜ್ಞೆಗಳಿಗೆ ವಿರುದ್ಧವಾಗಿ ನಡೆದುಕೊಂಡವಳಲ್ಲ ಮತ್ತು ಇಷ್ಟೊಂದು ಕಠೋರವಾಗಿ ಮಾತಾಡಿದ್ದೂ ಇಲ್ಲ! ಹೀಗಿರುವಾಗ ಮಾಲಿಂಗನೇ ನಮ್ಮನ್ನು ಹೆದರಿಸಲು ನೋಡುತ್ತಿದ್ದಾನೋ ಹೇಗೇ…? ಎಂದು ಸಂಶಯಗೊಂಡ ಸುರೇಂದ್ರಯ್ಯ ಕೆಲವು ಕ್ಷಣ ಅವನನ್ನೇ ದಿಟ್ಟಿಸಿ ನೋಡಿದರು. ಬಳಿಕ, ಇಲ್ಲ, ಇಲ್ಲ. ಇವನಿಗೆ ಇಂಥ ಮೇಲ್ಮಟ್ಟದ ವಿಚಾರಗಳೆಲ್ಲ ಹೊಳೆಯಲು ಸಾಧ್ಯವೇ ಇಲ್ಲ. ಹಾಗಾದರೆ ಮತ್ತ್ಯಾರು…? ಎಂದು ಒಮ್ಮೆಲೇ ತಳಮಳಿಸಿದವರ ಒಳಮನಸ್ಸಿಗೇನೋ ಹೊಳೆದುಬಿಟ್ಟಿತು. ಮರುಕ್ಷಣ ಭಯದಿಂದ ಬಿಳಿಚಿಕೊಂಡವರು ತನ್ನೆದುರು ಹ್ಞೂಂಕರಿಸುತ್ತಿದ್ದ ಚೌಂಡಿಗೆ ಉತ್ತರಿಸಲಾಗದೆ ಮೌನವಾಗಿ ನಿಂತುಬಿಟ್ಟರು. ಆದರೆ ಮುಂದಿನಕ್ಷಣ ತಮ್ಮ ಕೋಟಿ, ಕೋಟಿ ಬೆಳೆಬಾಳುವಂಥ ಬಂಡೆಕಲ್ಲುಗಳ ಚಿತ್ರಣವು ಅವರ ಕಣ್ಣೆದುರು ಸುಳಿಯತೊಡಗಿದ್ದರೊಂದಿಗೆ,‘ಎಂಥ ದೈವಶಕ್ತಿಗಳನ್ನೂ ಮಣಿಸುವ ಸೂತ್ರ ನಮ್ಮ ಕೈಯಲ್ಲಿದೆ! ಎಂದು ಗುರೂಜಿಯವರು ಮೊನ್ನೆ ತಾನೇ ಗರ್ವದಿಂದ ಹೇಳಿದ್ದ ಮಾತುಗಳೂ ಅವರ ಮುನ್ನೆಲೆಗೆ ಬಂದವು. ಆದ್ದರಿಂದ ಆವರೆಗೆ ಕಷ್ಟಪಟ್ಟು ಹಿಡಿದುಕೊಂಡಿದ್ದ ಅಸಹನೆಯು ತಟ್ಟನೆ ಸ್ಫೋಟಗೊಂಡಿತು.‘ಹೌದಾ ಮಾರಾಯ್ತೀ…! ಅಂದರೆ ನೀನೀಗ ಅಷ್ಟೊಂದು ದೊಡ್ಡ ಶಕ್ತಿಯಾ…? ಹಾಗಾದರೆ ಆ ಬಂಡೆಯನ್ನು ನೀನು ನಮಗೆ ಬಿಟ್ಟುಕೊಡುವುದೇ ಇಲ್ಲವಾ…?’ ಎಂದು ಒರಟಾಗಿ ಪ್ರಶ್ನಿಸಿದರು.

ಸುರೇಂದ್ರಯ್ಯನ ಮಾತು ಕೇಳಿದ ಚೌಂಡಿಯ ಕಣ್ಣುಗಳು ಮರಳಿ ಬೆಂಕಿಯುಂಡೆಗಳಾದವು.‘ಎಲೆಲವೋ ಮೂರ್ಖ, ಯಾವುದನ್ನೋ ಬಿಟ್ಟುಕೊಡುವುದು…? ನಿನ್ನಪ್ಪ, ಅಜ್ಜ ಅಥವಾ ನಿನ್ನ ಮುತ್ತಜ್ಜಂದಿರು ಸೃಷ್ಟಿಸಿ ಬಿಟ್ಟು ಹೋದಂಥ ಆಸ್ತಿಗಳೇನೋ ಅವು…? ನೀವೆಲ್ಲ ನಿಮ್ಮ ಮೇರೆ ಮೇರಿದ ಅಹಂಕಾರದಿಂದ ಮೆರೆಯಲು ಅವಕಾಶಕೊಟ್ಟಿರುವ ಈ ಭೂದೇವಿ ಇದ್ದಾಳಲ್ಲ ಆ ಮಾತೆಯ ಮೇಲೆ ನಿನ್ನಂಥ ದುರಾಸೆಪೀಡಿತರು ಅನಾದಿಕಾಲದಿಂದಲೂ ನಾನಾ ರೀತಿಯಿಂದ ನಡೆಸುತ್ತ ಬಂದಿರುವ ಅನ್ಯಾಯ, ಅಕ್ರಮಗಳಿಂದೆಲ್ಲ ಅವಳ ಕೋಮಲ ಒಡಲು ನಲುಗಿ ಘಾಸಿಗೊಂಡು ಅದರಿಂದ ಜ್ವಾಲಾರಸವೆಂಬ ಕೀವು ತುಂಬಿ ಆಗಾಗ ಅದು ಒಡೆದು ಸಿಡಿದು ಆಗುತ್ತಿರುವಂಥ ಅಪಾರ ಗಾಯಗಳಿಗೆಲ್ಲ ನಾನು ಹತಾಶೆಯಿಂದ ಹಚ್ಚುತ್ತಿರುವ ಔಷಧದ ಪದರಗಳೋ ಇಲ್ಲಿನ ಅಸಂಖ್ಯಾತ ಬಂಡೆಗಳು! ಅದನ್ನೂ ನಿನ್ನಂಥವರು ದೋಚಲು ಹೊರಟಿದ್ದೀರೆಂದರೆ ಒಂದು ದಿನ ಇದೇ ಧರಿತ್ರಿಯ ಕ್ರೋಧವೆತ್ತ ಜ್ವಾಲಾಮುಖಿಗೆ ನಿಮ್ಮ ಇಡೀ ಮನುಕುಲವೇ ಸುಟ್ಟು ಬೂದಿಯಾಗುತ್ತದೋ ದುಷ್ಟರಾ…! ನಿಮ್ಮಂಥ ಜೀವಿಗಳಿಂದ ಅಂಥ ಅನಾಹುತಗಳೆಲ್ಲ ನಡೆಯಬಾರದೆಂದೇ ನಾನು ಅಂಥ ಪ್ರದೇಶಗಳಲ್ಲಿ ನನ್ನ ಗಣಗಳನ್ನು ಸೃಷ್ಟಿಸಿರುವುದೋ. ಹೀಗಿರುವಾಗ ಅದನ್ನು ಮುಟ್ಟಲು ನಿಮಗೆಷ್ಟೋ ಧೈರ್ಯ! ಸರಿಯಾಗಿ ಕೇಳಿಸಿಕೊಳ್ಳಲೋ ಅವಿವೇಕಿ! ಇನ್ನೊಮ್ಮೆ ನೀನಾಗಲಿ ನಿನ್ನ ಜನರಾಗಲಿ ಆ ಬಂಡೆಗಳನ್ನು ಮುಟ್ಟುವುದು ಹಾಗಿರಲಿ, ಅದರ ಆಸುಪಾಸೆಲ್ಲಾದರೂ ಕಾಣಿಸಿಕೊಂಡಿರೋ ಆವತ್ತಿನಿಂದಲೇ ನಿಮ್ಮೆಲ್ಲರನ್ನೂ ಅಣುಅಣುವಾಗಿ ಹಿಂಸಿಸುತ್ತ ಸರ್ವನಾಶ ಮಾಡದೆ ಬಿಡುವುದಿಲ್ಲವೋ!!’ ಎಂದು ಆರ್ಭಟಿಸಿದ ದೇವಿಯು ಕೆಲವುಕ್ಷಣಗಳ ಕಾಲ ಸುಂದರಯ್ಯನನ್ನು ದುರುಗುಟ್ಟಿ ನೋಡುತ್ತ ನೆಗೆನೆಗೆದು ಆವೇಶ ತೋರಿದಳು.  

   ಚೌಂಡಿಯ ಕೋಪವನ್ನೂ ಮತ್ತವಳ ಕಠೋರ ಎಚ್ಚರಿಕೆಯನ್ನೂ ಕೇಳಿದ ಸುರೇಂದ್ರಯ್ಯ ದಿಗ್ಭ್ರಮೆಗೊಂಡರು. ಆದರೆ ಅತ್ತ ನೆರೆದವರಲ್ಲಿ ಕೆಲವರು ಸುರೇಂದ್ರಯ್ಯನಿಗೆ ಬೇಕಾದವರು, ದೇವಿಯೆದುರು ಸುರೇಂದ್ರಯ್ಯ ತೋರಿಸಿದ ಧೈರ್ಯ, ಸಾಹಸಕ್ಕೆ ಹುಬ್ಬೇರಿಸಿ ಅವರನ್ನು ತಣ್ಣಗೆ ಪ್ರಶಂಸಿಸಲು ಮುಂದಾದರೆ ಇನ್ನುಳಿದವರು ಅವರ ಉದ್ಧಟತನಕ್ಕೆ ತೀರಾ ಮುನಿಸಿಕೊಂಡರು. ಇನ್ನೊಂದೆಡೆ ಗುರಿಕಾರ ಮತ್ತು ಹಿರಿಯರಿಗೆ ಸುರೇಂದ್ರಯ್ಯನ ಮೇಲೆ ಕೆಟ್ಟ ಅಸಮಾಧಾನವೆದ್ದಿತು. ಆದ್ದರಿಂದ ಅವರೆಲ್ಲ,‘ನೋಡಿ ಸುರೇಂದ್ರಯ್ಯ, ನೀವು ದೇವಿಯೊಡನೆ ಮಾತಾಡಿದ ಮತ್ತು ವರ್ತಿಸಿದ ರೀತಿ ಸ್ವಲ್ಪವೂ ಸರಿಯಲ್ಲ. ನಾವೆಲ್ಲ ಯಕಃಶ್ಚಿತ್ ಮಾನವ ಹುಳುಗಳು, ಅಂಥ ಮಹಾನ್‍ಶಕ್ತಿಯೊಂದಿಗೆ ಅಷ್ಟೊಂದು ಅಹಂಕಾರದಿಂದ ಮಾತಾಡುವುದೆಂದರೆ ಅರ್ಥವೇನು…? ಇದು ನೀವು ಅವಳಿಗೂ, ಊರಿನವರಿಗೂ ಮಾಡಿದ ಅಪಮಾನವೇ ಸರಿ! ಹಾಗಾಗಿ ಕೂಡಲೇ ಅವಳ ಕಾಲಿಗೆ ಬಿದ್ದು ಕ್ಷಮೆಯಾಚಿಸಿಕೊಳ್ಳಿ. ಇಲ್ಲದಿದ್ದರೆ ಇಡೀ ಊರಿಗೂರೇ ಅವಳ ಶಾಪಕ್ಕೆ ತುತ್ತಾಗುವ ದಿನ ಬಹಳ ದೂರವಿರದು! ಎಂದು ಬೈದು ಬುದ್ಧಿ ಹೇಳಿದರು. ಅಷ್ಟು ಕೇಳಿದ ಸುರೇಂದ್ರಯ್ಯ ಸಂಪೂರ್ಣ ಕುಗ್ಗಿದವರು ರಪ್ಪನೆ ದೇವಿಯತ್ತ ತಿರುಗಿ,‘ಓ ತಾಯೇ…ನಮ್ಮಿಂದ ದೊಡ್ಡ ತಪ್ಪಾಯಿತಮ್ಮಾ! ಕೋಪದ ಬರದಲ್ಲಿ ಏನೇನೋ ಮಾತಾಡಿಬಿಟ್ಟೆವು. ನಮ್ಮ ದುಡುಕನ್ನು ಹೊಟ್ಟೆಗೆ ಹಾಕಿಕೋ ತಾಯೇ…! ಎಂದು ದೈನ್ಯದಿಂದ ಬೇಡಿಕೊಂಡು ಅವಳ ಕಾಲಿಗೆ  ಬಿದ್ದರು.

   ಅಷ್ಟೊತ್ತಿಗೆ ಪಾತ್ರಿ ಮಾಲಿಂಗನು ನಿದ್ದೆಯಿಂದ ಎಚ್ಚೆತ್ತಂತೆ ರಪ್ಪನೆ ವಾಸ್ತವಕ್ಕೆ ಬಂದ. ಆದರೆ ಅವನು ಹಿಂದೆಂದಿಗಿಂತಲೂ ಹೆಚ್ಚು ಆಯಾಸಗೊಂಡಿದ್ದವನು ಕ್ಷಣಕಾಲ ತಾನೆಲ್ಲಿದ್ದೇನೆಂದು ಅರ್ಥವಾಗದೆ ತಬ್ಬಿಬ್ಬಾದ. ಬಳಿಕ ವಿಷಯ ಮನವರಿಕೆಯಾಗುತ್ತಲೇ ತನ್ನ ಕಾಲಬುಡದಲ್ಲಿ ಸುರೇಂದ್ರಯ್ಯ ಮಂಡಿಯೂರಿದ್ದನ್ನು ಕಂಡು ಮತ್ತೆ ಆವೇಶ ಬಂದಂತೆ ನಡುಗತೊಡಗಿದ. ಆದರೆ ಸುರೇಂದ್ರಯ್ಯನ ಈ ಬಗೆಯ ಶರಣಾಗತಿ ಯಾಕೆ? ಎಂದು ಮಾತ್ರ ಅವನಿಗರ್ಥವಾಗಲಿಲ್ಲ. ಆದರೂ ಆ ವೃತ್ತಿಯಲ್ಲಿ ಅವನು ಅಪಾರ ಪಳಗಿದವನಾದ್ದರಿಂದ,‘ಸರಿ, ಸರಿ ಕ್ಷಮಿಸಿದ್ದೇನೆ ಎದ್ದೇಳು. ಇನ್ನು ಮುಂದೆ ಯಾವತ್ತೂ ಅಂಥ ತಪ್ಪು ಮಾಡಬೇಡ. ನನಗೂ ನನ್ನ ಗಣಗಳಿಗೂ ಕಾಲಕಾಲಕ್ಕೆ ಭೋಗ ತಂಬಿಲವನ್ನು ಕೊಡುತ್ತ ಪೂಜಿಸಿಕೊಂಡು ಬಾ. ನಿನ್ನನ್ನೂ ನಿನ್ನ ಮನೆತನವನ್ನೂ ಅನುಗಾಲ ರಕ್ಷಿಸುವ ಹೊಣೆ ನನ್ನದು!’ ಎಂದು ಹರಸಿ ಒಂದು ಮುಷ್ಟಿ ಹಿಂಗಾರವನ್ನು ಮುರಿದು ಅವರ ಕೈಗೆಸೆದ.

   ಕೆಲವೇ ಕ್ಷಣದ ಹಿಂದಷ್ಟೇ ರಣಚಂಡಿಯಾಗಿದ್ದ ಚೌಂಡಿಯು ಈಗ ಇದ್ದಕ್ಕಿದ್ದಂತೆ ಶಾಂತಳಾಗಿ ಏನೂ ನಡೆದಿಲ್ಲವೆಂಬಂತೆ ಎಲ್ಲರನ್ನು ಹರಸತೊಡಗಿದ್ದನ್ನು ಕಂಡ ಸುರೇಂದ್ರಯ್ಯನಿಗೂ ಊರವರಿಗೂ ಅಚ್ಚರಿಯಾಯಿತು. ಆದರೂ,‘ಹೇಗಾದರಿರಲಿ. ಒಟ್ಟಾರೆ ದರ್ಶನಸೇವೆ ಯಾವ ಗಂಡಾಂತರವೂ ಇಲ್ಲದೆ ನೆರವೇರಿತಲ್ಲ. ಅಷ್ಟೇ ಸಾಕು. ಇನ್ನು ಸುರೇಂದ್ರಯ್ಯ ಆ ಶಕ್ತಿಯೊಂದಿಗೆ ಹೇಗೆ ನಡೆದುಕೊಂಡನೋ ಅದಕ್ಕೆ ತಕ್ಕ ಪ್ರತಿಫಲವನ್ನೂ ಅನುಭವಿಸುತ್ತಾನೆ!’ ಎಂದು ಹಿರಿಯರೂ, ಗುರಿಕಾರನೂ ಅಂದುಕೊಂಡು ನೆಮ್ಮದಿಯ ಉಸಿರುಬಿಟ್ಟರು. ಆದರೆ ಸುರೇಂದ್ರಯ್ಯನಿಗೆ ಅದರ ನಡುವೆಯೂ ರಪ್ಪನೆ ಬಂಡೆಯ ನೆನಪು ಒತ್ತರಿಸಿ ಬಂತು. ‘ಸರಿ ತಾಯಿ. ಹಾಗಾದರೆ ಆ ಬಂಡೆಗಳನ್ನು ನೀನು ಬಿಟ್ಟುಕೊಟ್ಟೆಯಲ್ಲವೇ…?’ ಎಂದು ಪಾತ್ರಿಯೊಡನೆ ನಮ್ರವಾಗಿ ಪ್ರಶ್ನಿಸಿದ್ದರು. ‘ಹ್ಞೂಂ, ಹ್ಞೂಂ! ಬಿಟ್ಟುಕೊಟ್ಟಿದ್ದೇನೆ. ಕೆಲಸಕಾರ್ಯಗಳನ್ನು ಮುಂದುವರೆಸು!’ ಎಂದು ಮಾಲಿಂಗ ಆಕಾಶದತ್ತ ದೃಷ್ಟಿ ನೆಟ್ಟು ನಡುಗುತ್ತ ನುಡಿದಾಗ ಸುರೇಂದ್ರಯ್ಯನಿಗೆ ಆವರೆಗೆ ನಡೆದುದೆಲ್ಲವೂ ಸಣ್ಣ ಕನಸಿನಂತೆ ಭಾಸವಾದುದರೊಂದಿಗೆ ಲಾಟರಿ ಹೊಡೆದಷ್ಟು ಸಂತಸವಾಯಿತು.

(ಮುಂದುವರೆಯುವುದು)


ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply