ಶಶಿಯಂಗಳದ ಪಿಸುಮಾತು

ಪುಸ್ತಕ ಸಂಗಾತಿ

ಗಜಲ್ ಲೇಖಕಿ ಶಶಿಕಾಂತೆ ಕಾವ್ಯನಾಮದ (ತಕಲ್ಲುಸ್) ಶ್ರೀಮತಿ ಶೈಲಶ್ರೀ ಶಶಿಧರ ಅವರು ಇಡೀ ನಾಡಿನಲ್ಲಿ ಬುದ್ಧಿವಂತರ ಜಿಲ್ಲೆ ಅನಿಸಿದ ಉಡುಪಿಯವರು.ಬದುಕಿನ ಕುಲುಮೆಯಲ್ಲಿ ಬೆಂದು ನೊಂದು ಹಿಗ್ಗಿ ನಲಿದು ಕಲಿತ ಪಾಠ,ಜೀವನಾನುಭವ ಅಪಾರ.ಆ ಹಿನ್ನೆಲೆಯಲ್ಲಿ ಐದು ನೂರಕಿಂತ ಹೆಚ್ಚು ಕವಿತೆಗಳಲ್ಲಿ ಅರಳಿದ ಅಪ್ಪಟ ಪ್ರತಿಭಾವಂತ ಹೆಮ್ಮೆ ಪಡುವ ಕವಯತ್ರಿ.ಈಗ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲವಾಗಿ ರೂಪುಗೊಂಡ ಅಪರೂಪದ ಗಜಲ್ ಲೇಖಕಿ ಎಂದು ಪರಿಚಯಿಸಲು ಸಂತೋಷವಾಗುತ್ತದೆ. ತುಂಬು ಕುಟುಂಬದೊಂದಿಗೆ ಈಗ ಸಾಂಸ್ಕೃತಿಕ ರಾಜಧಾನಿ ಬೆಂಗಳೂರು ವಾಸಿ.

ಗಜಲ್ ಅಂದರೇನೇ ಮೂಲಭೂತವಾಗಿ ಪ್ರೇಮಕಾವ್ಯ. ಅದರ ಮಧುರಾನುಭೂತಿ, ಅದು ಕಟ್ಟಿಕೊಡುವ ನಯ, ನಾಜುಕು, ಕುಸುರಿತನ, ಕೋಮಲತೆ ಬಲ್ಲವರೇ ಬಲ್ಲರು. ಪ್ರೇಮ, ಪ್ರೀತಿ, ವಿರಹ, ತಲ್ಲಣ,ದು:ಖ-ದುಮ್ಮಾನ, ತಂಗಾಳಿಯಂತಹ ಖುಷಿ,ಗುಲಾಬಿ ಪಕಳೆಗಳಂತಹ ಮೃದುತ್ವದಿಂದಾಗಿ ಏಕದಂ ಓದುಗನ ಭಾವಲೋಕಕ್ಕೆ ಪ್ರವೇಶಿಸಿ ಒಂದು ಸುಂದರ ಕಲ್ಪನಾಲೋಕದಲ್ಲಿ ತೇಲಿಸುವಂತಹದು.ಜೊತೆಯಾಗಿ ಕರೆದೊಯ್ಯುವಂತಹದು.ಅಂತಹ ಪ್ರೇಮಕ್ಕೆ ಪ್ರೇಮವೇ ಖುಷಿಗೊಂಡು ನವಿರಾಗಿ, ನವಿಲಾಗಿ ನರ್ತಿಸುವಂತಹ ಸೆಹ ಗಜಲ್ ಗಳನ್ನು ಲೇಖಕಿ ಶೈಲಶ್ರೀ ಶಶಿಧರ ಅವರು ಇಲ್ಲಿಯ ಬಹುಪಾಲು ಗಜಲ್ ಗಳಲ್ಲಿ ಕಟ್ಟಿಕೊಟ್ಟು ನಮ್ಮ ಮೈ ಮನಗಳಿಗೆ ಪ್ರೇಮ ಸಿಂಚನ ಗೊಳಿಸಿದ್ದಾರೆ.ಕನ್ನಡ ಗಜಲ್ ಸಾಹಿತ್ಯ ಲೋಕದಲ್ಲಿ ಮೊಟ್ಟ ಮೊದಲ ಸೆಹ ಗಜಲ್ ಕೃತಿ ಪ್ರಕಟಿಸಿದ ಲೇಖಕಿ ಎಂಬ ಹೆಗ್ಗಳಿಕೆ ಇವರಿಗೆ ಇತಿಹಾಸದಲ್ಲಿ ಸ್ಥಾನ ಕಲ್ಪಿಸಲಿದೆ.

ಹೃದಯ ನಿನ್ನ ಪ್ರೀತಿ ಬಗ್ಗೆಯೇ ಪ್ರತೀ ದಿನ ಹೇಳುತಿದೆ ರಾಧೆ
ಮನಸು ನಿನ್ನ ಕುರಿತೇ ಪ್ರತೀ ಕ್ಷಣ ಆಲೋಚಿಸುತಿದೆ ರಾಧೆ

ನಾ ಹೋದಲೆಲ್ಲಾ ನನ್ನ ಹುಚ್ಚು ಮನಸು ನಿನಗಾಗೇ ಹುಡುಕುತಿದೆ ರಾಧೆ
ನಾನೆಲ್ಲಿದ್ದರೂ ಜೀವವೆಲ್ಲಾ ನಿನ್ನಲ್ಲೆಂದು ಎದೆಯೊಳಗೆ ಧ್ವನಿಸುತಿದೆ ರಾಧೆ

ನೀನ್ಯಾರೋ ನಾನ್ಯಾರೋ ವಿಧಿಯೇಕೆ ನಮ್ಮನ್ನು ಒಂದಾಗಿಸಿದೆ ರಾಧೆ
ಬಾಡಿದ್ದ ಮನದ ಮಲ್ಲಿಗೆ ಪ್ರೇಮ ಸಿಂಚನಕೆ ಚಿಗುರುತಿದೆ ರಾಧೆ (ಗ-೧)

ಹೀಗೆ ಆರಂಭದ ಗಜಲ್ ಮೂಲಕವೇ ಹೃದಯಕ್ಕೆ ಲಗ್ಗೆ ಹಾಕುವ ಕವಯತ್ರಿ ಪ್ರೀತಿ ಪ್ರೇಮ ನೀಡುವ ಸುಖ ಸಂತೋಷ ನೆಮ್ಮದಿ ಕಂಫರ್ಟ ನ್ನು ಕಣ್ಣು ಹಾಗೂ ಮನದ ಮುಂದೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಒಂದಕಿಂತ ಒಂದು ಮೋಹಕ ಹಾಗೂ ಅಷ್ಟೇ ಚಿಂತನಾರ್ಹ ಒಟ್ಟು ೨೪ ಸೆಹ ಗಜಲ್ ಗಳು ಈ ಕೃತಿಯಲ್ಲಿವೆ.

ನನ್ನನ್ನು ನಂಬಿಬಿಡು ಪ್ರಾಣ ಕೋಡುತ್ತೇನೆ
ಸ್ನೇಹದಿಂದ ಇದ್ದುಬಿಡು ಜೀವ ನೀಡುತ್ತೇನೆ

ಚುಂಬಿಸಿ ಪ್ರೇಮದ ನಶೆಯೇರಿಸಿಬಿಡು
ಹಗಲಿರುಳೂ ನಿನ್ನನ್ನೇ ಧ್ಯಾನಿಸುತ್ತೇನೆ (ಗ-೩)

ಎಂದು ಹೇಳುವ ಮೂಲಕ ಪ್ರೇಮಲೋಕದ ಉತ್ತುಂಗಕ್ಕೆ ಒಯ್ಯುವ;ಆ ಮೂಲಕ ಎಂತಹ ತ್ಯಾಗ ಬಲಿದಾನಕ್ಕೂ ಕೊನೆಗೆ ಜೀವಕ್ಕೆ ಜೀವಕೊಡುವ ಶಕ್ತಿ ಪ್ರೇಮಕ್ಕೆ ಮಾತ್ರ ಈ ಜಗದಲ್ಲಿದೆ ಎಂದು ಹಿರಿಯ ಗಜಲ್ ಲೇಖಕಿ ಶೈಲಶ್ರೀಯವರು ಈ ಕೃತಿಯಲ್ಲಿ ನಿರೂಪಿಸಿದ್ದಾರೆ. ಅವರು ಈ ಮೊದಲ ಕೃತಿಯ ಮೂಲಕವೇ ಯಶಸ್ವಿ ಹೆಜ್ಜೆಯನ್ನು ಸಾಹಿತ್ಯ ಲೋಕಕ್ಕೆ ಇಟ್ಟಿದ್ದಾರೆ.ಅವರ ಒಳನೋಟಗಳು, ಚಿಂತನೆ, ಭಾವ ಅನುಭಾವಕ್ಕೆ ನಾವೆಲ್ಲ ಶುಭ ಕೊರೋಣವೆಂದು ಅಭಿನಂದಿಸುವೆ.


ಸಿದ್ಧರಾಮ ಹೊನ್ಕಲ್

Leave a Reply

Back To Top