ಸಿಯಾಚಿನ್

ಪುಸ್ತಕ ಸಂಗಾತಿ

ಸಿಯಾಚಿನ್

ಸಿಯಾಚಿನ್ – ಜಗತ್ತಿನ ಭಯಾನಕ ಯುದ್ಧಭೂಮಿಯ ಸಾಹಸಗಾಥೆ. 28 ಲೇಖನಗಳ ಸಹಿತವಾದ ಇಂಥ ಮಹೋನ್ನತ ಪುಸ್ತಕವನ್ನು ಕನ್ನಡಿಗರಿಗೆ ನೀಡಿದ ಕೃತಿಯ ಲೇಖಕರಾದ ಆತ್ಮೀಯ ಶ್ರೀ ಎಸ್. ಉಮೇಶ್ ಅವರ ಸಾಧನೆಗೆ ಮೊಟ್ಟ ಮೊದಲು ಅಭಿನಂದಿಸುವೆ. ಅಪಾರ ಹುಮ್ಮಸ್ಸು, ಇಚ್ಛಾಶಕ್ತಿ ಮತ್ತು ಆತ್ಮಸ್ಥೈರ್ಯದ ಫಲವಾಗಿ ಹೊರಬಂದಿರುವ ಈ ಕೃತಿಯ ಕುರಿತು ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಂಡಿರುವೆ.

ಪುಸ್ತಕ ನನ್ನ ಕೈ ಸೇರಿದ ಕೂಡಲೇ ನನ್ನ ಗಮನ ಸೆಳೆದಿದ್ದು ಪುಸ್ತಕದ ಮುಖಪುಟ. ಸಿಯಾಚಿನ್ ಬೇಸ್ ಕ್ಯಾಂಪ್ ನಲ್ಲಿ ಲೇಖಕ ಉಮೇಶ್ ಅವರು ಗೋಲಾಕಾರದ ಶಿಲೆಯೊಂದನ್ನು ಮೇಲಕ್ಕೆ ಎಸೆಯುತ್ತಿರುವ ಚಿತ್ರ ವಿಶಿಷ್ಟವಾಗಿದೆ. ಭಾರತ, ಪಾಕಿಸ್ರಾನ ಮತ್ತು ಚೀನಾ ಈ ಮೂರು ರಾಷ್ಟ್ರಗಳ ಗಡಿರೇಖೆಗಳನ್ನು ನಿರೂಪಿಸುವ ಆಧಾರವಾಗಿ ಈ ಚಿತ್ರ ನನ್ನ‌‌ ಕಣ್ಣಿಗೆ ಕಾಣಿಸ್ತು. ಪುಸ್ತಕದ ಮುಖಪುಟವೇ ಇಷ್ಟು ಆಕರ್ಷಕವಾಗಿರುವಾಗ ಇನ್ನು ಒಳಪುಟಗಳ ಲೇಖನಗಳಲ್ಲಿ ಏನಿರಬಹುದು ಎಂದು ಓದುತ್ತಾ ಹೊರಟಾಗ ನನಗನಿಸಿದ್ದು ಹೀಗೆ…

ಅಟಲ್ ಜೀ ಅವರನ್ನು ನೋಡುವ ಉತ್ಸಾಹದಲ್ಲಿ ಲೇಖಕ ಉಮೇಶ್ ಅವರು ಹೇಳಿದ ಮಾತು ನನಗೆ ಬಹಳ ಇಷ್ಟವಾಯ್ತು. “ಒಟ್ಟಾರೆ ಮನಸ್ಸು ಎಲ್ಲಿಗೆ ಹೋಗು ಎನ್ನುತ್ತದೆಯೋ ಅಲ್ಲಿಗೆ, ಅದಕ್ಕಿಂತಲೂ ವೇಗವಾಗಿ ಹೋಗಿ ನಿಲ್ಲುವ ಹಠಮಾರಿ ನಾನು”…ಮನಸ್ಸಿನಲ್ಲಿರುವ ಭಾವನೆಗಳ ವೇಗಕ್ಕಿಂತ ಸಾಧಿಸುವ ಛಲದ ವೇಗ ಮುಖ್ಯವಾದದ್ದು ಎಂಬ ಧ್ಯೇಯವನ್ನು ಸಿಯಾಚಿನ್ ಪುಸ್ತಕದ ಅಲೆಮಾರಿಯ ಯಾನ ಲೇಖನದಲ್ಲಿ ನೀವು ಬಹಳ ಮಾರ್ಮಿಕವಾಗಿ ಹೇಳಲಾಗಿದೆ.

ಸಾಮಾನ್ಯವಾಗಿ ಅನೇಕರಿಗೆ ಸೇನೆ ಅಂದರೆ ಭೂಸೇನೆ, ವಾಯುಸೇನೆ, ನೌಕಾಸೇನೆ ಅಂತ ಮೂರು ಸೇನೆಗಳ ಬಗ್ಗೆ ತಿಳಿರುತ್ತದೆ. ಅದರಲ್ಲಿರುವ ಕೆಲ ಹುದ್ದೆಗಳ ಕುರಿತು ಮಾತ್ರ ಮೇಲ್ನೋಟಕ್ಕೆ ತಿಳಿದುಕೊಳ್ಳುವ ಪ್ರಯತ್ನ ಮಾಡಿರುತ್ತಾರೆ. ಆದರೆ ನೀವು ಸಿಯಾಚಿನ್ ಪುಸ್ತಕದಲ್ಲಿ ಭಾರತೀಯ ಸೈನ್ಯದ ವರ್ಗಶ್ರೇಣಿಯ ನೀಡಿದ ಮಾಹಿತಿ ಅರ್ಥಪೂರ್ಣವಾಗಿದೆ.

ವಿಶ್ವಗುರುವಾಗುತ್ತ ಭಾರತದ ಹೆಜ್ಜೆ ಒಂದು‌ ಕಡೆಯಾದರೆ, ಬಲಿಷ್ಠ ಭಾರತವನ್ನು ಯಾವ ಹೊರದೇಶವೂ ಮುಟ್ಟಲಾಗದು ಎಂಬ ಸನ್ಮಾನ್ಯ ಪ್ರಧಾನಿ ನರೇಂದ್ರ ‌ಮೋದಿ ಜೀಯವರ ನೇರ ಸಂದೇಶವನ್ನು ಮತ್ತು ಅದರ ಕ್ರಿಯಾತ್ಮಕತೆಯ ಚುರುಕನ್ನು ಆಗಲೇ ಪಾಕಿಸ್ತಾನಕ್ಕೆ ನೀಡಿದ್ದನ್ನು ಲಾಮಾಗಳ ನಾಡು ಲಡಾಕ್ ಎಂಬ ಲೇಖನದಲ್ಲಿ ದಾಖಲಿಸುವ ಮೂಲಕ ರಕ್ಷಣಾತ್ಮಕ ಭಾರತದ ಚಿತ್ರಣವನ್ನು ಓದುಗನಿಗೆ ನೀಡಲಾಗಿದೆ.

ಜಗತ್ತಿನ ಅತಿ ಎತ್ತರದ ರಸ್ತೆಯಲ್ಲಿ ಭಾರತದ ಪತಾಕೆಯನ್ನು ಹಿಡಿದು ನಿಲ್ಲುವ ರೋಮಾಂಚನದ ಅನುಭವದ ಜೊತೆಯಲ್ಲಿಯೇ ಕನ್ನಡದ ಬಾವುಟ ಹಾರಾಡಿಸುವ ಲೇಖಕ ಉಮೇಶ್ ಅವರ ತಾಯ್ನಾಡ ಅಭಿಮಾನ ಮೆಚ್ಚುಗೆಯಾಯ್ತು.

ಏಪ್ರಿಕಾಟ್ ಎಂಬ ಆ ಭಾಗದ ಹಣ್ಣಿನ ಮೂಲಕ ಜೀವನಪ್ರೀತಿಯ ಅನುಭವವನ್ನು ಹೇಳಿಕೊಳ್ಳುವ ಪರಿ ನನಗೆ ಬಹಳ ಇಷ್ಟವಾಯ್ತು. ” ತಿನ್ನಲು ಹಣ್ಣೇ ಇರುವಾಗ ಹಣ ನನಗೇಕೆ” ಎಂದು ಹೇಳುವ ವಯೋವೃದ್ಧನ ಮಾತು ಹೊಟ್ಟೆಗೆ ಹಣ ಮುಖ್ಯವಲ್ಲ ಹಣ್ಣು ಮುಖ್ಯ ಎನ್ನುವದನ್ನು‌ ಜೊತೆಗೆ ಬದುಕಿನ ಸಾರ್ಥಕತೆಗೆ ಹಿಡಿದ‌ ಕೈಗನ್ನಡಿಯಾಗಿದೆ.

ಬೇಸ್ ಕ್ಯಾಂಪ್ ನಲ್ಲಿರುವ ಹುತಾತ್ಮರ ನೆನಪಿನ ಭವ್ಯ ಸ್ಮಾರಕದ ಕುರಿತು  ನಮೂದಿಸಿದ ಅಂಶಗಳು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ಮತ್ತು ಗೌರವಿಸುವಂತಹದ್ದಾಗಿವೆ.

ಕಣ್ಮರೆಯಾಗಿ ಹೋದ ಯೋಧ ಓ.ಪಿ.ಬಾಬಾ ಅವರ ರಾಷ್ಟ್ರ ರಕ್ಷಣೆಯ ಪ್ರತೀಕವಾಗಿ ನಿರ್ಮಿಸಲಾದ ಮಂದಿರದ ಕುರಿತು ಮತ್ತು ಅದರಡಿಯಲ್ಲಿ ಪ್ರತಿಬಿಂಬಿತವಾಗಿರುವ ಸರ್ವಧರ್ಮ ಸಮನ್ವಯತೆಯ ಸಾರವನ್ನು ಬಹಳ ಕಾಳಜಿಪೂರ್ವಕವಾಗಿ ಈ ಲೇಖನದಲ್ಲಿ ಕಟ್ಟಿಕೊಡಲಾಗಿದೆ.

ಸಿಯಾಚಿನ್ ಸೈನಿಕ ತರಬೇತಿ ಶಾಲೆಯ ಕುರಿತು ಜೀವರಕ್ಷಣಾ ತರಬೇತಿ ತಂತ್ರ ಲೇಖನದಲ್ಲಿ ವಿವರಿಸಿ ಹೇಳುವಾಗ ನಿಜವಾಗಲೂ ನನಗೆ ಆ ಯೋಧರ ಶ್ರಮ, ತ್ಯಾಗ, ರಾಷ್ಟ್ರರಕ್ಷಣೆಯ ಕರ್ತವ್ಯ, ಪ್ರಾಮಾಣಿಕತೆಯ ದೇಶಪ್ರೇಮಕ್ಕೊಂದು ಸಲಾಮ್ ಹೇಳಲೇಬೇಕೆಂದುಕೊಂಡು, ಎದ್ದು ನಿಂತು ಜೈಹಿಂದ್ ಘೋಷವಾಕ್ಯ ಹೇಳಿ ಸೆಲ್ಯೂಟ್ ಹೊಡೆದೆ. ಅಬ್ಬಾ…! ಎಂತಹ ಅರ್ಪಣಾ ಮನೋಭಾವ ಆ ಸೈನಿಕರದ್ದು. ಉಷ್ಣ, ಚಳಿ, ಮಳೆಗೆ ಎದೆಗುಂದದೇ ಪಡೆದುಕೊಳ್ಳುವ ಅವರ ತರಬೇತಿ ಅವರನ್ನೊಬ್ಬ ಸಮರ್ಥ ರಾಷ್ಟ ರಕ್ಷಕನಾಗಿ ನಿರ್ಮಿಸುವುದಂತು ಸತ್ಯ.

ಸಿಯಾಚಿನ್ ನಲ್ಲಿಯ ಸೈನಿಕರ ಸ್ಥಿತಿಗತಿಯನ್ನು ಬಹಳ ಅಂತಃಕರಣವಾಗಿ ಚಿತ್ರಿಸಲಾಗಿದೆ. ಸಿಯಾಚಿನ್ ನಲ್ಲಿ ರಾಷ್ಟ್ರ ರಕ್ಷಣೆಗಾಗಿರುವ ಪ್ರತಿಯೊಬ್ಬ ಯೋಧನ ಬದುಕಿನ ಚಿತ್ರಣ ಮಾತ್ರ ಕಣ್ಣಂಚಿನಲ್ಲಿ ನೀರು ತರಿಸುವುದು. ರಾತ್ರಿ ವೇಳೆ ಪಹರೆ ನಡೆಸುವ ಕಷ್ಟದ ಕೆಲಸ, ತಿಂದ ಆಹಾರ ಜೀರ್ಣತೆಯ ಸಮಸ್ಯೆ, ಉಸಿರಾಟ ಮತ್ತು ಹೃದಯ ಸ್ತಂಭನದಂತಹ ಆಕಸ್ಮಿಕ ದುರಂತಗಳು ಘಟಿಸುವ ಅರಿವಿನ ಮಧ್ಯೆಯೂ ಸೈನಿಕರು ಕೆಚ್ಚದೆಯ ವೀರತ್ವದ ಆತ್ಮಸ್ಥೈರ್ಯದೊಂದಿಗೆ ತಾಯ್ನಾಡ ರಕ್ಷಣೆಗೆ ನಿಲ್ಲುವ ಪರಿಯನ್ನು ಬಹಳ ವಿಶ್ವಾಸಾರ್ಹವಾಗಿ ದಾಖಲಿಸಲಾಗಿದೆ.

ಸಿಯಾಚಿನ್ ಹೀರೋ ನರೇಂದ್ರ ಕುಮಾರ ಬುಲ್ ಅವರ ಅದಮ್ಯ ತುಡಿತದ ಫಲವಾಗಿ ಭಾರತಕ್ಕೆ ದಕ್ಕಿದ ಸಿಯಾಚಿನ್ ಕಥೆಯನ್ನು ಅತ್ಯಂತ ರೋಚಕವಾಗಿ ನಿರೂಪಿಸಲಾಗಿದೆ. ದೇಶದ ಗಡಿಪ್ರದೇಶವನ್ನು ಉಳಿಸಿ,ನೀರ್ಗಲ್ಲ ಬಂಡೆಗಳ ಮಧ್ಯೆ ಭಾರತದ ತ್ರಿವರ್ಣ ಧ್ವಜವನ್ನು ನೆಟ್ಟು ಬಂದ ಧೀರ ಯೋಧ ಬುಲ್ ಅವರ ಪರಾಕ್ರಮ ಇಂದಿನ ಯೋಧರಿಗೆ ಮತ್ತು ಯುವ ಜನತೆಗೆ ಮಾದರಿಯಾಗಲಿ.

ಜೀವಪ್ರೇಮದ ಕಾರ್ಯಾಚರಣೆಯ ಲೇಖನದಲ್ಲಿ ಕಾಜುವಿನ ರಕ್ಷಣೆ ಮತ್ತು ಯೋಧನೊಬ್ಬನ ಪ್ರಾಣ ಪಣಕ್ಕಿಡುವ ಅಂಶಗಳನ್ನು ವಿವರಿಸಿರುವುದು ಅದ್ಭುತವಾಗಿದೆ. ಜೀವಪ್ರೀತಿಯ ಆಶಯವನ್ನು ಇಲ್ಲಿ ಕಾಣಬಹುದಾಗಿದೆ.

ಸಿಯಾಚಿನ್ ಇಂದು ಶಾಂತಿಯ ತೋಟವಾಗಿದೆ ಎಂದರೆ ಕಾರಣ ಅಲ್ಲಿನ ನಮ್ಮ‌ ಹೆಮ್ಮೆಯ ಸೈನಿಕರು. “ಮೊದಲು ನನ್ನ ದೇಶದ ಗೌರವ, ಅನಂತರ ಜೀವ ಮತ್ತು ಜೀವನ” ಎನ್ನುವ ನಿಸ್ವಾರ್ಥ ಮನೋಭಾವದ ಯೋಧನ ಈ ಮಾತುಗಳು ರಾಷ್ಟ್ರಾಭಿಮಾನವನ್ನು ಹೆಚ್ಚಿಸುತ್ತವೆ.

ಒಟ್ಟಾರೆಯಾಗಿ ಶ್ರೀ ಉಮೇಶ್ ಅವರ ರಚನೆಯ 155 ಪುಟಗಳ ಸಿಯಾಚಿನ್ ಕೃತಿಯನ್ನು ಓದಿದ ನಂತರದಲ್ಲಿ ಸಿಯಾಚಿನ್ ಯುದ್ಧ ಭೂಮಿಯಲ್ಲಿಯೇ ಅಡ್ಡಾಡಿ ಅಲ್ಲಿನ ಪರಿಸರ, ಘಟಿಸಿದ ಘಟನೆಗಳಿಗೆ ನೀವೂ ಒಬ್ಬ ಸಾಕ್ಷಿಯಾಗುವ ಅಪೂರ್ವವಾದ ಅನುಭವವನ್ನು ಪಡೆಯುತ್ತೀರಿ. ರಾಷ್ಟ್ರಭಕ್ತಿಯನ್ನು ಇಮ್ಮಡಿಗೊಳಿಸುವ  ಸಿಯಾಚಿನ್ ಪುಸ್ತಕವನ್ನು ಖಂಡಿತವಾಗಿ ಪ್ರತಿಯೊಬ್ಬ ಭಾರತೀಯ, ಕನ್ನಡಿಗ ಓದಲೇಬೇಕು. ಪುಸ್ತಕ ಓದಿದವರೆಲ್ಲರ ಹೃದಯದಲ್ಲಿ ದೇಶಪ್ರೇಮ, ದೇಶಭಕ್ತಿ, ರಾಷ್ಟ್ರ ಗೌರವ, ಅರ್ಪಣಾ ಮನೋಭಾವ ಅಂಕುರಿಸುವುದು ಸತ್ಯ.


ರಾಘವೇಂದ್ರ ದೇಶಪಾಂಡೆ

Leave a Reply

Back To Top