ಪ್ರೇಮಾ ಹೂಗಾರ ಕೃತಿಗೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ

ಪುಸ್ತಕ ಸಂಗಾತಿ

ಪ್ರಣೀತೆ ಹಿಡಿದು ಸಂತಳ ಭಾವ ಬಿತ್ತಿದ

ಪ್ರೇಮಾ ಹೂಗಾರ ಬೀದರ*

.

     ಒಟ್ಟು ಐದು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಕವಿಯತ್ರಿ ಪ್ರೇಮಾ ಹೂಗಾರರವರು ಭರವಸೆ ಮೂಡಿಸುವ ಬರಹಗಾರ್ತಿ ಎನ್ನಬಹುದು.ಇನ್ನಷ್ಟು ಕೃತಿಗಳು ಪ್ರಕಟನೆಯ ಹಾದಿಯಲ್ಲಿವೆ.ಇದು ಹೆಮ್ಮೆಯ ಸಂಗತಿಯು ಆಗಿದೆ.

ಬದುಕಿನಲಿ ನಂಬಿಕೆಯ ಬೊಗಸೆಯೊಳಗಿಡಿದು ಕಾದಿರುವೆ ಪ್ರಣೀತೆ

ಇಲ್ಗಗಳೆಲ್ಲವನು ಯಾರಿಗೇಕೆ ದೂರಲಿ ನನ್ನೊಳಗೆ ಅರಿಯುವೆ ಪ್ರಣೀತೆ

…..ಹೀಗೆ ಸಾಗುವ ದ್ವಿಪದಿ ಕೊನೆಯಲ್ಲಿ

ಪ್ರೇಮಾಎಲ್ಲ ಇದ್ದೂ ಕೊರಗುವವರ ಮುಂದೆ ಬದುಕಿ ತೋರಿಸಬೇಕಿದೆ

ಬದುಕಿನೊಳಗಿನ ಗಾಯಗಳಿಗೆ ಮುಲಾಮಾಗಿ ಗಜಲ್ ತಂದಿರುವೆ ಪ್ರಣೀತೆ

    ಎಂದು ಬದುಕಿನ ಜಂಜಡಗಳಿಗೆ ಸಮಜಾಯಿಷಿ ನೀಡುವ ಮಹೋನ್ನತ ಆಶಯ ಇವರ ಬರಹಕ್ಕಿದೆ.

ಇದು ಅವರ ಕೃತಿಯ ಬೆನ್ನುಡಿಯ ಗಜಲ್, ಪುಸ್ತಕ ಕೈಗೆ ತೆಗೆದುಕೊಂಡ ತಕ್ಷಣ ಮನಸ್ಸನ್ನು ಚಿಂತನೆಗೆ ಈಡು ಮಾಡುತ್ತದೆ.

     “ಪ್ರೇಮಾ ಹೂಗಾರ ” ಭಾವುಕಜೀವಿ ಎಂಬುದನ್ನು ಅವರ ಕಾವ್ಯದಲ್ಲಿ ಅರಿತುಕೊಳ್ಳಬಹುದು.ಭಾವುಕತೆಯು ಸೃಜನಶೀಲತೆಯ ಮೂಲದೃವ್ಯ. ತನ್ನ ಸಂಕಷ್ಟಗಳನ್ನು ಬಚ್ಚಿಟ್ಟು ಜಗತ್ತಿನ ಸಂಕಷ್ಟಕ್ಕೆ ಸ್ಪಂದಿಸುವ ಗುಣದಿಂದಲೇ ಸಾಹಿತ್ಯದ ಚಿಲುಮೆ ಪುಟಿದೇಳುತ್ತದೆ ಎನ್ನುತ್ತಾರೆ ಈ ಕೃತಿಗೆ ನಲ್ನುಡಿ ಮಾತುಗಳನ್ನು ಬರೆದ ಬಹುಭಾಷಾ ಕವಿ ಮಂಗಳೂರಿನ “ಮುಹಮ್ಮದ್ ಖಡ್ಡೂರ”. ಬಹು ಸತ್ಯವಿದು.

    ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ

ನಾ ಅತ್ತು ಜಗ ನಗಲು ನನ್ನ ಎತ್ತಿಕೊಳ್ಳರೆ…ಎಂದ ಕವಿ ಈಶ್ವರ ಸಣಕಲ್ ರು ನನಗೆ ಇಲ್ಲಿ ನೆನಪಾದರು.ಇವರ ಧೋರಣೆಯು ಸಹ ಅಂಥದೆನಿಸಿದೆ ನನಗೆ.

ಉತ್ತಮ ಸಾಹಿತ್ಯ ಆತ್ಮವನ್ನು ತಣಿಸುತ್ತದೆ

ಮಧ್ಯಮ ಸಾಹಿತ್ಯ ದೇಹವನ್ನು ತಣಿಸುತ್ತದೆ

ಕೆಟ್ಟ ಸಾಹಿತ್ಯ ಸಮಾಜವನ್ನು ಕೆಡಿಸುತ್ತದೆ.

ಇವರ ಗಜಲ್ ಗಳನ್ನು ಅವಲೋಕಿಸಿದಾಗ “ಸಂತ” ಳಾಗುವ ಸರ್ವ ಲಕ್ಷಣಗಳು ಗೋಚರಿಸುತ್ತವೆ.ಈ ಗಜಲ್ ಗಳಲ್ಲಿ ನೋವು ಮತ್ತು ಅನುಭವಗಳ ಸಂಗಮ ಸಮಾಜ ಪರ ವಿಚಾರಗಳನ್ನು ಎತ್ತಿ ಹಿಡಿದಿದ್ದಾರೆ.ವಾಸ್ತವದ ಇಟ್ಟಿಗೆಗಳಿಂದ ಸತ್ಯದ ದೇಗುಲ ಕಟ್ಟುವ ಪ್ರಯತ್ನ ಮಾಡಿರುತ್ತಾರೆ ಎಂದು ನಲ್ನುಡಿಯಲ್ಲಿ ಹೇಳಿರುವ ಲೇಖಕರ ಮಾತುಗಳು ಅರ್ಥಪೂರ್ಣವಾಗಿವೆ.

ಕಂದೀಲು ದೀಪದ ವ್ಯತ್ಯಾಸ ಅರಿಯದ ಹಸುಳೆ ನಾನಾದೆ ಇಂದು

ಕಾಡಲಿ ಕರಿ ಕಂದಿಲಿಡಿದು ಕರೆಯುತ್ತಿರುವೆನು ದಿನ ಸೂರ್ಯನಿಗೆದುರಾಗಿ

…….ಹೀಗೆ ಮೀರಾ-ಅಕ್ಕಳನ್ನು ನೆನಪಿಸುವ ಈ ಕವಿಯತ್ರಿಯ ಕಾಡುವ ನೋವುಗಳೇನಿವೆಯೋ ಇಲ್ಲಿಯ ಅವರ ಗಜಲ್ ಗಳ ‘ಸಾಕಿ ‘ಯೇ ಬಲ್ಲ. ಬಹು ಅಮೂಲ್ಯವಾದ, ಹೃದಯವನ್ನು ವಿಷಾದಗೊಳಿಸಿ ಚಿಂತನೆಗೆ ಹಚ್ಚಿ ಬಹುಕಾಲ ಕಾಡುವ ಗಜಲ್ ಗಳು ಈ ಸಂಕಲನದಲ್ಲಿವೆ. ಈ ಪ್ರಣೀತೆ ತನ್ನನ್ನು ತಾ ಸುಟ್ಟುಕೊಂಡು ಜಗಕೆ ಬೆಳಕಾಗಲು ಹೊರಟಿಹಳು ಅನ್ನಿಸುತ್ತದೆ.

ಅದೇನೆ ಇದ್ದರೂ ಈ ಕವಿಯತ್ರಿ ಗಜಲ್ ಕುರಿತು ಪಿಎಚ್ ಡಿ ಅಧ್ಯಯನದಲ್ಲಿ ತೊಡಗಿದ್ದು ಇವರಿಗೆ ಈ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಇರುವದರಿಂದ ಗಜಲ್ ಕುರಿತು ಹಲವಾರು ಹಿರಿಯ ಸಾಧಕರ ಅನಿಸಿಕೆಯನ್ನು ಇವರ ಕೃತಿ ಪರಿಚಯದ ಜೊತೆ ಹೇಳುವುದು ಇಲ್ಲಿಯ ಓದುಗರ ದೃಷ್ಟಿಯಿಂದ ಬಹು ಮುಖ್ಯ ಅಂದುಕೊಂಡಿರುವೆ.

     ಗಜಲ್ ರಚನೆಯ ನಾಲ್ಕು ಅಂಗಗಳಾದ  ಮತ್ಲಾ, ಕಾಫಿಯಾ, ರದೀಫ್, ಮುಕ್ತಾಗಳ ಕುರಿತು ಬಹಳ ಸಾಧಕರು ವಿವರವಾಗಿ ಹೇಳಿದ್ದಾರೆ.ಗಜಲ್ ಕುರಿತು ಮತ್ತೆ ಮತ್ತೆ ಹೇಳಬೇಕಾದ ವಿಚಾರವೆಂದರೆ ಪ್ರೀತಿ ಪ್ರೇಮ ಎಂದು ಬರೆದ ಕವನಗಳೆಲ್ಲಾ ಅಥವಾ ಅಂತ್ಯ ಪ್ರಾಸವಿರುವುವೆಲ್ಲಾ ಗಜಲ್ ಗಳಾಗುವದಿಲ್ಲ ಎಂಬುದು.ಆದರೆ ಗಜಲ್ ಮೋಡಿಗೆ  ಒಳಗಾದವರು ಅಂತ್ಯ ಪ್ರಾಸವೊಂದಿದ್ದರೆ ಹಾಗು ಪ್ರೀತಿ, ಪ್ರೇಮ,ಪ್ರಣಯದ ಬಗ್ಗೆ ಬರೇದಾಕ್ಷಣ ಅದು ಗಜಲ್ ಎಂದಾಗುತ್ತದೆಂದು ತಿಳಿದಿರುವರು. ಗಜಲ್ ಮೂಲ ಉದ್ದೇಶ ಹಾಗೂ ಅದರ ಭಾವವನ್ನು ತಿಳಿಯದ ಯಾರೇ ಆಗಲಿ ಇಂತಹ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆಂದು ಸ್ಪಷ್ಟ ಪಡಿಸುತ್ತಾರೆ.

       ಗಜಲ್ ದ್ವಿಪದಿಯಲ್ಲಿರುತ್ತದೆ.ಒಂದು ಗಜಲ್ ನಲ್ಲಿ ೫ ರಿಂದ ೨೫ ಶೇರ( ದ್ವಿಪದಿ) ಗಳಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ, ಗಜಲ್ ನ ಒಂದು ಚರಣಕ್ಕೆ  “ಮಿಶ್ರ” ಎನ್ನುತ್ತಾರೆ, ದ್ವಿಪದಿಗೆ” ಶೇರ್” ಎನ್ನುತ್ತಾರೆ. ಉದು೯ ಸಾಹಿತ್ಯ , ಸಂಸ್ಕೃತಿಯಿಂದ ಗಜಲ್ ಬಂದಿದೆ ಯಾದ್ದರಿಂದ ನಮ್ಮ ಕನ್ನಡ ಸಂಸ್ಕೃತಿಗೆ ಅವುಗಳನ್ನು ಒಗ್ಗಿಸಿಕೊಳ್ಳುವಾಗ ಉದು೯ ಸಾಹಿತ್ಯ ದ ಮಧುಶಾಲೆ, ಸಾಕಿಗಳ ಬಗ್ಗೆಯು ಇಲ್ಲಿ ಚಚಿ೯ಸಿದ್ದಾರೆ.

     ಮಧ್ಯ ಮಾರುವ ಅಂಗಡಿಗೆ ಮಧುಶಾಲೆ ಎಂದು ಬಳಿಸಿದರೂ ಸಹ ಅಲ್ಲಿ ಅದಕ್ಕೆ ಒಂದು ಶಿಷ್ಟಾಚಾರವಿದೆ. ಕುಡಿದವ ಅಲ್ಲಿ ಮತ್ತನಾಗಿ ಬಡಬಡಿಸಬಾರದು.ಪ್ರಜ್ಞೆ ಯನ್ನು ಕಳೆದುಕೊಳ್ಳಬಾರದು.ಕವಿಗಳು ಮಧುಪಾನ ಮಾಡುತ್ತಾ, ಮಾತಾಡುವ,ಚಿಂತಿಸುವ ಒಂದು ಕೂಟವಾಗಿರುತ್ತದೆ.ಇನ್ನು ಸಾಕಿ ಅಂದರೆ ಮದ್ಯವನ್ನು ಕವಿಗಳಿಗೆ ಕೊಡುವವ ಅಥವಾ ಕೊಡುವವಳು ಎಂದರ್ಥವಿದೆ.ಸಾಕಿ ಗಂಡು ಅಥವಾ ಹೆಣ್ಣು ಆಗಿರಬಹುದು.ಕೆಲವು ಕಡೆ ಸಾಕಿ ಎಂದರೆ ದೇವರ ರೂಪಕವಾಗಿಯೂ ಪ್ರಯೋಗಿಸುತ್ತಾರೆ ಶಾಂತರಸರು.

.

     ಅಂತಹ ಎಲ್ಲಾ ಲಕ್ಷಣಗಳನ್ನು ಪ್ರಜ್ಞಾಪೂರ್ವಕವಾಗಿ ಗಮನದಲ್ಲಿಟ್ಟುಕೊಂಡು ಈ ಗಜಲ್ ಲೇಖಕರು ಬರೆಯುತ್ತಾರೆ. ಗಜಲ್ ರಚನೆ ಒಂದು ಕುಸುರಿ ಕಲೆಯ ಹಾಗೆ ಅನಿಸುತ್ತದೆ.ಅದು ಕೊಡುವ ಮೋಹಕತೆ, ಮುದ,ಸುಖ,ನೆಮ್ಮದಿ,ನವಿರಾದ ಭಾವ,ಕೋಮಲತೆ, ಖುಷಿಯನ್ನು ಇತರ ಬರಹಗಳು ತಕ್ಷಣ ಕೊಡುವದು ಕಡಿಮೆ.ಅದು ಮುಸ್ಲಿಂರ ಮನೆಯ ಬಿರಿಯಾನಿಯ ಘಮದಂತಹದು.ಆ ಹಿನ್ನೆಲೆಯಲ್ಲಿ ನಮ್ಮ ಭಾಗದಲ್ಲಿ ಇತ್ತೀಚಿಗೆ ಗಜಲ್ ರಚನೆಗೆ ಹೊಸ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಬರಹದ ಕಡೆ ತೊಡಗಿದ್ದಾರೆ.ಅದರಲ್ಲಿ ನಾನು ಒಬ್ಬ ಅಂತ ಸಂಕೋಚದಿಂದಲೇ ಹೇಳ ಬಯಸುತ್ತೇನೆ.

       ಒಟ್ಟಾರೆಯಾಗಿ ಕವಿಯತ್ರಿ ಪ್ರೇಮಾ ಹೂಗಾರರವರು ಈ  “ಪ್ರಣೀತೆ” ಸಂಕಲನದಲ್ಲಿ ಗಜಲ್ ಪ್ರಕಾರದ ಈ ಮೇಲಿನ ಎಲ್ಲಾ ಲಕ್ಷಣಗಳನ್ನು ,ನಿಯಮಗಳನ್ನು ಒಗ್ಗಿಸಿಕೊಂಡು ಅತ್ಯಂತ ಸಮರ್ಥವಾಗಿ ೩೫ ಗಜಲ್ ಗಳನ್ನು ರಚಿಸಿದ್ದಾರೆ.ಇವರು ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟಾರೆ ಎಲ್ಲಿಯೂ ಜಾಸ್ತಿ ಕಾಣಿಸಿ ಕೊಳ್ಳದೇ ಎಲೆ ಮರೆಯ ಕಾಯಿಯ ಹಾಗೇ,”ತುಂಬಿದ ಕೊಡ ತುಳುಕದು” ರೀತಿಯಲ್ಲಿ, ಒಂದು ಧ್ಯಾನಸ್ಥ ಸ್ಥಿತಿಯಲ್ಲಿ ಬರೆಹದಲ್ಲಿ ತೊಡಗಿರಬಹುದೆಂದು ಉಹಿಸಬಹುದಾಗಿದೆ.

    ಈ ಕೃತಿ” ಪ್ರಣೀತೆ “ಮೂಲಕ ಕವಿಯತ್ರಿ ಪ್ರೇಮಾ ಹೂಗಾರರು ಗಜಲ್ ಪ್ರಕಾರದ ಪ್ರೀತಿ ಪ್ರೇಮ ವಿರಹ ಹೀಗೆ ಒಂದು ಮೂಲ ಪರಂಪರೆಯ ಜೊತೆ ಜೊತೆಗೆ ವೈಚಾರಿಕ ವಿಚಾರ,ಪ್ರತಿಯೊಂದನ್ನು ಎದುರಿಸುವ ಮನೋಭಾವದ ಮುಂದುವರಿಕೆಯ ಭಾಗವಾಗಿ ಈ ಸಂಕಲನದ ಬಹುತೇಕ ಗಜಲ್ ಗಳು ಯಶಸ್ವಿಯಾಗಿ ಓದುಗರ ಹೃದಯ ತಟ್ಟುತ್ತವೆ ಮತ್ತು ಮನ ಮುಟ್ಟುತ್ತವೆ. ಗಜಲ್ ಲೋಕ ಗಂಭೀರವಾಗಿ ಪರಿಗಣಿಸಬಹುದಾದ ಕೃತಿ ಹಾಗೂ ಮಹತ್ವದ ಲೇಖಕಿ ಇವರಾಗಿದ್ಜಾರೆ.

     ಇಂತಹ ಕೃತಿಗಳನ್ನು ನೀಡಿ ಓದಲು ಬರೆಯಲು ಹಚ್ಚಿ  ಈ ಗಜಲ್ ಕ್ಷೇತ್ರದ ಕಡೆಗೆ ನನ್ನನ್ನು ಹೃದಯ ತುಂಬಿ ಬರಮಾಡಿಕೊಂಡ ಈ ಪ್ರೇಮಾ ಹೂಗಾರರವರಿಗೆ ಹಾಗೂ ಇತರ ಎಲ್ಲ ಗಜಲ್ ಲೇಖಕರಿಗೆ, ವಯಕ್ತಿಕವಾಗಿ ಅಭಿನಂದಿಸಿ ಮುಗಿಸುವೆ.

(ಪ್ರಣೀತೆಕನ್ನಡ ಗಜಲ್ ಸಂಕಲನ.

ಲೇಖಕರು.ಶ್ರೀಮತಿ ಪ್ರೇಮಾ ಹೂಗಾರ ಬೀದರ

ಬೆಲೆ:ರೂ.೧೦೦/-ಪುಟ ೮೪,ಸೈಜ್ /

ಪ್ರಕಟನೆ: ಶ್ರೀ ಸಿದ್ಧೇಶ್ವರ ಪ್ರಕಾಶನ ಬೀದರ.)

ಈ ಪ್ರಣತೆ ಕುರಿತು ಆರಂಭದಲ್ಲಿ ಬರೆದ ಬರಹ ಇದು.ಈಗ ಬಂದ ಪುರಸ್ಕಾರದ ಹಿನ್ನೆಲೆಯಲ್ಲಿ ಮತ್ತೆ ಎಲ್ಲರಿಗೂ ಓದಿಸಿ ಅವರಿಗೆ ಅಭಿನಂದನೆಗಳು ಹೇಳಲಿರುವೆ.


ಸಿದ್ದರಾಮ ಹೊನ್ಕಲ್

Leave a Reply

Back To Top