ಸರಣಿ ಬರಹ
ಅಂಬೇಡ್ಕರ್ ಓದು
ಭಾಗ-9
ಅಧ್ಯಯನಕ್ಕಾಗಿ ಮತ್ತೆ ಇಂಗ್ಲೆಂಡಿಗೆ ಪ್ರಯಾಣ
ಅರ್ಧಕ್ಕೆ ನಿಂತಿದ್ದ ಉನ್ನತ ಶಿಕ್ಷಣವನ್ನು ಪುರ್ಣಗೊಳಿಸಬೇಕೆಂಬ ಹೆಬ್ಬಯಕೆ ಅಂಬೇಡ್ಕರರ ಮನದಲ್ಲಿ ಇನ್ನೂ ಮನೆಮಾಡಿತ್ತು. ಪ್ರೊಫೆಸರ್ ಹುದ್ದೆಯಿಂದ ಬರುತಿದ್ದ ವೇತನದಲ್ಲಿ ಉಳಿತಾಯ ಮಾಡಿ ಕುಟುಂಬ ನಡೆಸಲು ಅರ್ಧದಷ್ಟು ಹಣ ಪತ್ನಿ ರಮಾಬಾಯಿ ಕೈಗೆ ಕೊಟ್ಟು ಇನ್ನುಳಿದ ಹಣವನ್ನು ದುಂದುವೆಚ್ಚ ಮಾಡದೆ ಕೂಡಿಸಿಟ್ಟಿದ್ದರು. ಕೂಡಿಟ್ಟ ಮತ್ತು ಶಾವು ಮಹಾರಾಜರು ಮಾಡಿದ ಸಹಾಯ ಹಣದೊಂದಿಗೆ ಗೆಳೆಯ ನಾವೆಲ್ ಬಾತೇನಾರವರಿಂದ ಒಂದಿಷ್ಟು ಸಾಲ ಪಡೆದು ಲಂಡನಗೆ ಹೊರಡುವರು. 1920 ರ ಜುಲೈ ತಿಂಗಳಲ್ಲಿ ಮುಂಬೈಯಿಂದ ಹೊರಟು ಸೆಪ್ಟಂಬರ ನಲ್ಲಿ ಲಂಡನ್ ತಲುಪುತ್ತಾರೆ. ಗ್ರೆಸ್ ಇನ್ ಕಾಲೇಜಿನಲ್ಲಿ ಕಾನೂನು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ ಕಾಲೇಜಿನಲ್ಲಿ ಉನ್ನತ ಅರ್ಥ ಶಾಸ್ತ್ರದ ಅಧ್ಯಯನಗಳನ್ನು ಮುಂದುವರೆಸುತ್ತಾರೆ. ಜಗತ್ತಿನ ಬೃಹತ ಜ್ಞಾನ ಕೇಂದ್ರವಾದ ಲಂಡನ್ನಿನ ಗ್ರಂಥಾಲಯಕ್ಕೆ ಅಂಬೇಡ್ಕರರು ಪ್ರತಿದಿನ ತಪ್ಪದೆ ಅಧ್ಯಯನ ಮಾಡಲು ಹೊಗುತ್ತಿದ್ದರು. ಕಾರ್ಲಮಾರ್ಕ್ಸ, ಲೇನಿನ್, ಮೇಜನಿ ಅಂತಹ ಮಾಹಾನ ವ್ಯಕ್ತಿಗಳು ಅಧ್ಯಯನ ಮಾಡಿದ ಬ್ರಿಟಿಷ ಮೂಜಿಯಂ ಅಂಬೇಡ್ಕರರ ಪಾಲಿಗೆ ನಿತ್ಯ ಅಧ್ಯಯನ ಕೇಂದ್ರವಾಗಿತ್ತು. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಗ್ರಂಥಾಲಯದಲ್ಲಿ ಅಂಬೇಡ್ಕರರು ಅಧ್ಯಯನ ಮಾಡುವರು. ಓದಿನಲ್ಲಿ ಮಗ್ನರಾಗಿ ಒಮ್ಮೊಮ್ಮೆ ಮಧ್ಯಾನದ ಊಟವನ್ನು ತಪ್ಪಿಸುತ್ತಿದ್ದರು. ಗ್ರಂಥಾಲಯಕ್ಕೆ ಬರುವವರಲ್ಲಿ ಇವರೆ ಮೊದಲಿಗರು. ಸಂಜೆ ಹೊರಹೊಗುವಾಗ ಇವರೇ ಕೊನೆಯವರಾಗಿರುತ್ತಿದ್ದರು. ಓದು ಅವರ ಉಸಿರಾಗಿತ್ತು. ಅಂಬೇಡ್ಕರರನ್ನು ಸಿಬ್ಬಂದಿ ಎಚ್ಚರಿಸಿ ಸಂಜೆಯಾಗಿದೆ, ವೇಳೆ ಆಯ್ತು ಎಂದು ಹೇಳಿ ಕಳುಹಿಸಿ ಗ್ರಂಥಾಲಯದ ಕಿಡಕಿ, ಬಾಗಿಲುಗಳನ್ನು ಹಾಕುತ್ತಿದ್ದರು.
ವಿಶ್ವವಿಧ್ಯಾಲಯದ ಗ್ರಂಥಾಲಯ ಮತ್ತು ಇಂಡಿಯಾ ಆಫೀಸ್ ಗ್ರಂಥಾಲಯಗಳಿಗೂ ಬೇಟಿ ಕೊಟ್ಟು ಅಲ್ಲಿಯು ಅಧ್ಯಯನ ಮಾಡುತ್ತಿದ್ದರು. ಸಂಜೆ ಒಂದಿಷ್ಟು ವಿಹಾರ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಮಹಿಳೆಯೊಬ್ಬಳು ನಡೆಸುತ್ತಿದ್ದ ವಸತಿ ಗೃಹದಲ್ಲಿ ಅಂಬೇಡ್ಕರರು ಬಾಡಿಗೆ ಉಳಿದು ಕೊಂಡಿರುತ್ತಾರೆ. ಅಲ್ಲಿಯೇ ಮುಂಬೈಯಿನವರಾದ ಅಸ್ನೋಟಿಕರ ಎಂಬುವವರು ಉಳಿದು ಕೊಂಡಿದ್ದರು. ಅವರೊಂದಿಗೆ ಪರಿಚಯವಾಗಿ ಇಬ್ಬರು ಸ್ನೇಹಿತರಾದರು. ಮನೆಯ ಮಾಲಿಕಳಾಗಿದ್ದ ಮಹಿಳೆ ಅತ್ಯಂತ ಜಿಪುಣಳಾಗಿದ್ದಳು. ಮುಂಜಾನೆ ಉಪಹಾರಕ್ಕೆ ಇಂದು ಒಂದು ಬ್ರೆಡ್ಡು, ಸ್ವಲ್ಪ ಪಲ್ಯ , ಒಂದು ಕಪ್ ಟೀ ಮಾತ್ರ ಕೊಡುತ್ತಿದ್ದಳು, ಸಂಜೆ ಊಟಕ್ಕೂ ಅಷ್ಟೆ ಕಡಿಮೆ ಊಟ ಕೊಡುತ್ತಿದ್ದಳು. ರಾತ್ರಿ ಅಂಬೇಡ್ಕರರಿಗೆ ಹಸಿವು ಆದಾಗಲೆಲ್ಲ ಹಪ್ಪಳ ಸುಟ್ಟುಕೊಂಡು ತಿಂದು ಒಂದು ಕಪ್ ಟೀ ಕುಡಿದು ಮತ್ತೆ ಓದಲು ಪ್ರಾರಂಭ ಮಾಡುತ್ತಿದ್ದರು. ಗೆಳೆಯ ಅಸ್ನೋಟಿಕರ ಒಂದು ರಾತ್ರಿ ಎಚ್ಚರಗೊಂಡಾಗ ಅಂಬೇಡ್ಕರರು ಇನ್ನೂ ಓದುತ್ತಾ ಕೂಳಿತಿರುವುದನ್ನು ಕಂಡು ಮಾರಾಯ, “ರಾತ್ರಿ ಮುಗಿಯುತ್ತಾ ಬಂತು ಓದು ನಿಲ್ಲಿಸಿ ಮಲಗು, ಮತ್ತೆ ನಾಳೆ ಓದುವಿಯಂತೆ” ಅನ್ನುತ್ತಾ ಮಲಗಲು ಹೇಳುವರು. ಆಗ ಅಂಬೇಡ್ಕರರು ಗೆಳೆಯನಿಗೆ “ನನ್ನ ಹತ್ತಿರ ಹಣವೂ ಇಲ್ಲ, ಸಮಯವೂ ಇಲ್ಲ ಇದ್ದುದರಲ್ಲಿ ಎಲ್ಲವನ್ನು ಓದಿ ಮುಗಿಸಬೇಕಾಗಿದೆ ಎಂದು ಉತ್ತರಿಸುವರು. ಇದರಿಂದ ಅಂಬೇಡ್ಕರರ ಆತ್ಮವಿಶ್ವಾಸ, ಛಲ ಎಂತಹದ್ದು ಎಂಬುದು ತಿಳಿಯುತ್ತದೆ.
ಬಡತನದಲ್ಲಿ ಹುಟ್ಟಿ ಬೆಳದು ಅಧ್ಯಕ್ಷ ಪದವಿಗೇರಿದ್ದ ಅಮೇರಿಕಾದ ಬೆಂಜಮಿನ್ ಪ್ರಾಂಕಲಿನರು, “ಸತತ ಪರಿಶ್ರಮ ಕೆಲಸ ಮತ್ತು ಮಿತವ್ಯಯದಿಂದ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವೆಂದು” ಹೆಳಿದ್ದ ದೇಯವಾಕ್ಯವನ್ನು ಅಂಬೇಡ್ಕರರು ಪಾಲಿಸುತ್ತಿದ್ದರು. ಮಿತವಾಗಿ ಹಣ ಖರ್ಚು ಮಾಡುತಿದ್ದರು. ಮೋಜು ಮಸ್ತಿ ಮನರಂಜನೆಗಾಗಿ ಕಾಲಹರಣ ಮಾಡದೆ ಸತತ ಅಧ್ಯಯನದಲ್ಲಿ ತೊಡಗುತಿದ್ದರು. ಬಿಡುವು ಸಿಕ್ಕಾಗ ಶಿವತಾಕರವರಿಗೆ ಪತ್ರ ಬರೆದು ಕುಟುಂಬದ ಯೋಗಕ್ಷೇಮದೊಂದಿಗೆ ಭಾರತದಲ್ಲಿನ ಆಗುಹೋಗುಗಳ ಘಟನೆಗಳನ್ನು ತಿಳಿದುಕೊಳ್ಳುತ್ತಿದ್ದರು. ಕೊಲ್ಲಾಪೂರದ ಸಾಹು ಮಹಾರಾಜರು ತೀರಿಕೊಂಡ ಸುದ್ದಿ ತಿಳಿದಾಗ ಅಂಬೇಡ್ಕರರು ಅತೀವ ದುಃಖ ಪಡುತ್ತಾರೆ.
ಭಾರತದ ಕಾರ್ಯದರ್ಶಿಯಾಗಿದ್ದ ಮೊಂಟೆಗೂರವರು ಇಂಗ್ಲಂಡಿಗೆ ಬಂದಾಗ ಅಂಬೇಡ್ಕರರು ಅವರನ್ನು ಬೇಟಿ ಮಾಡಿ ನಿಮ್ನ ಜನರ ಜೀವನ ಸುಧಾರಣೆ ಕುರಿತು ಚರ್ಚಿಸುತ್ತಾರೆ. ಗಾಂಧಿಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತಿಲಕರ ಮರಣದ ನಂತರ ಅವರ ಸ್ಥಾನವನ್ನು ಪೂರ್ಣವಾಗಿ ಆವರಿಸಿಕೊಳ್ಳುತ್ತಾರೆ. ತಿಲಕರ ಸ್ವರಾಜ ಫಂಡಿನಿಂದ ತೆಗೆದಿರಿಸಲಾಗಿದ್ದ ಒಂದು ಕೋಟಿ ಹಣದಲ್ಲಿ ಅಸ್ಪೃಶ್ಯರ ಏಳ್ಗೆಗಾಗಿ ಏನನ್ನು ಖರ್ಚುಮಾಡದ ಕಾಂಗ್ರೆಸ್ಸನ್ನು ಪ್ರಶ್ನಿಸುತ್ತಾರೆ. 1919 ರ ಕಾಯ್ದೆ ಜಾರಿಯಿಂದ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಅಸ್ಪೃಶ್ಯರ ಸುಧಾರಣೆ ಜಾರಿಗೆ ಬರುತ್ತದೆ. ಶಾಸನ ಸಭೆ ಮತ್ತು ಪ್ರಾಂತಿಯ ಸಭೆಗಳಿಗೆ ನಿಮ್ನ ವರ್ಗದ ಜನರ ಪ್ರತಿನಿದಿಗಳನ್ನಾಗಿ ಆಯ್ಕೆಮಾಡದೆ ಅಸ್ಪೃಶ್ಯರ ಸಂಪೂರ್ಣ ಏಳ್ಗೆ ಸಾಧ್ಯವಿಲ್ಲವೆಂದು ವಾದಿಸುತ್ತಾರೆ. ಓದಲು ಇಂಗ್ಲಂಡಿಗೆ ಬಂದಿದ್ದರೂ ತನ್ನ ಜನರ ಜೀವನ ಸುಧಾರಣೆಯೆ ಪ್ರಮುಖ ಕಾಳಜಿ ಹೊಂದಿದ್ದರು.
ಆಕ್ಟೋಬರ್ 1922 ರಲ್ಲಿ ಅಂಬೇಡ್ಕರರು ತಮ್ಮ ಮಹಾತ್ವಾಕಾಂಕ್ಷೆಯ ಪ್ರಭಂದ “ರೂಪಾಯಿ ಸಮಸ್ಯೆ ” ಯನ್ನು ಬರೆದು ಮುಗಿಸಿ ಮಹಾವಿದ್ಯಾಲಯಕ್ಕೆ ಒಪ್ಪಿಸುತ್ತಾರೆ. ಅದರಂತೆ ಗ್ರೆಸ್ ಇನ್ ಕಾಲೇಜಿನಲ್ಲಿ ಬ್ಯಾರಿಸ್ಟರ್ ಕಾನೂನು ಪದವಿ ಕೂಡ ಪೂರ್ಣಗೊಳಿಸುತ್ತಾರೆ. ಜಗತಪ್ರಸಿದ್ದ ವಿಶ್ವವಿದ್ಯಾಲಯದಲ್ಲಿ ಒಂದಾದ ಜರ್ಮನಿಯ ಬಾನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ನಿರ್ಧರಿಸಿ 1923 ರ ಜನವರಿ ಮೊದಲ ವಾರದಲ್ಲಿ ಜರ್ಮನಿಗೆ ಹೊಗುವರು. ಆದರೆ ಅಂಬೇಡ್ಕರರ ಮಾರ್ಗದರ್ಶಕರಾಗಿದ್ದ ಪ್ರೊ. ಎಡ್ವಿನಕ್ಯಾನನ್ ಅವರು “ರೂಪಾಯಿ ಸಮಸ್ಯೆ” ಪ್ರಭಂದದಲ್ಲಿ ಅಂಬೇಡ್ಕರರು ಬಳಸಿದ ಹರಿತ ಬಾಷೆಯ ತಿಕ್ಷಣತೆಯನ್ನು ಕಡಿಮೆ ಮಾಡಿ ತಿದ್ದುಪಡೆ ಮಾಡಿ ಪ್ರಭಂದ ಮರಳಿಸಲ್ಲಿಸಲು ಅಂಬೇಡ್ಕರರಿಗೆ ಮರಳಿ ಬರಲು ತಿಳಿಸುವರು. ಅಂಬೇಡ್ಕರರು ಜರ್ಮನಿಂದ ಇಂಗ್ಲಂಡಿಗ ಬಂದು ಪ್ರೊ. ಕ್ಯಾನನರನ್ನು ಕಾಣುತ್ತಾರೆ. ಲಂಡನ್ನಿನಲ್ಲಿ ಉಳಿದು ಪ್ರಭಂದವನ್ನು ಸರಿಪಡಿಸಬೇಕೆಂದರೆ ಅವರಲ್ಲಿ ಹಣ ಉಳಿದಿರುವುದಿಲ್ಲ, ಇದ್ದ ಹಣವು ಎಲ್ಲಾ ಖಾಲಿಯಾಗಿದ್ದರಿಂದ ಬಾನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮುಂದುವರೆಸಲು ಆಗುವುದಿಲ್ಲ. ಹಣಕಾಸಿನ ತೊಂದರೆಯಿಂದ 1923 ರ ಏಪ್ರೀಲ್ ತಿಂಗಳಿನಲ್ಲಿ ಮುಂಬಯಿಗೆ ಮರಳಿ ಬಂದು ಮನೆಯಲ್ಲಿ ಪ್ರಬಂದವನ್ನು ಪುನಃ ಸರಿಪಡಿಸಿ ಲಂಡನ್ ಸ್ಕೂಲ ಆಫ್ ಎಕಾನಾಮಿಕ್ಸ ಕಾಲೇಜಿಗೆ ಕಳುಹಿಸಿಕೊಡುವರು. ಮಹಾವಿದ್ಯಾಲಯವು ಪ್ರಭಂದವನ್ನು ಅಂಗಿಕರಸಿ ಅಂಬೇಡ್ಕರರಿಗೆ ಡಾಕ್ಟರೇಟ್ (ಡಿ.ಲಿಟ್) ಪದವಿಯನ್ನು ಅನುಗ್ರಹಿಸಿತು.
ಭಾರತಿಯ ನಾಣ್ಯ ಪದ್ದತಿ ಮತ್ತು ಬ್ಯಾಂಕಿಂಗ್ ನ ಇತಿಹಾಸ ತಿಳಿಸುವಲ್ಲಿ “ರೂಪಾಯಿಯ ಸಮಸ್ಯ” ಗ್ರಂಥವು ಅತ್ಯಂತ ಪ್ರಮುಖ ಗ್ರಂಥವಾಗಿದೆ. ಪಿ.ಎಸ್.ಕಿಂಗ್ ಆ್ಯಂಡ ಸನ್ ಲಿಮಿಟೆಡ್ ಲಂಡನ್ ಪ್ರಕಾಶಕರು ಈ ಗ್ರಂಥವನ್ನು 1923 ರಲ್ಲಿ ಮೊದಲ ಮುದ್ರನವಾಗಿ ಪ್ರಕಟಿಸುವರು. ತಮ್ಮ ಶಿಕ್ಷಣಕ್ಕಾಗಿ ತ್ಯಾಗ ಮಾಡಿದ ಮತ್ತು ಜ್ಞಾನೋದವನ್ನುಂಟುಮಾಡಿದ ಮಾತಾ ಪಿತೃಗಳ ನೆನಪಿಗಾಗಿ ಮತ್ತು ಅವರ ಉಪಕಾರದ ನಿರಂತರ ಸ್ಮರಣೆಯ ಸಂಕೆತವಾಗಿ ತಂದೆ ತಾಯಿಯವರಿಗೆ ಈ ಕೃತಿಯನ್ನು ಅಂಬೇಡ್ಕರರು ಅರ್ಪಿಸಿದ್ದಾರೆ. ಪ್ರೊ. ಎಡ್ವಿನಕ್ಯಾನನ್ ಅವರು ಕೃತಿಗೆ ಮೂನ್ನುಡಿ ಬರೆದಿದ್ದಾರೆ. ಅವರು ಮೂನ್ನುಡಿ ಬರೆಯುತ್ತಾ, ಅಂಬೇಡ್ಕರರು ವಿಷಯವನ್ನು ಪ್ರಸ್ತೂತ ಗ್ರಂಥದಲ್ಲಿ ಬಹಳ ನೇರವಾಗಿ ಪ್ರತಿಪಾದಿಸಿರುತ್ತಾರೆಂದು, ಅವರ ಅಬಿಪ್ರಾಯ ಮತ್ತು ವಿವೆಚನ ಶಕ್ತಿಗಳಲ್ಲಿ ಉತ್ತೇಜನಕಾರಿ ಹೊಸತನವನ್ನು ನಾನು ಕಂಡಿದ್ದೆನೆ ಎಂದು ಬರೆದಿದ್ದಾರೆ. ಬ್ರಿಟಿಷರು ಮಾಡಿದ ಭಾರತದಲ್ಲಿನ ಆರ್ಥಿಕ ಶೋಷನೆಯನ್ನು ನಿಖರವಾಗಿ ಅಂಕಿ ಅಂಶಗಳ ಸಮೇತ ಬ್ರಿಟಿಷರ ಆಡಳಿತವನ್ನು ಕಟುವಾಗಿ ಅಂಬೇಡ್ಕರರು ಪ್ರಭಂಧದಲ್ಲಿ ಟಿಕಿಸಿದ್ದಾರೆಂದು, ಆ ಕಾರಣಕ್ಕಾಗಿ ಕ್ಯಾನನ್ ರು ಅಂಬೇಡ್ಕರರ ವಾದವನ್ನು ತಾನು ಒಪ್ಪುವುದಿಲ್ಲವೆಂದು ಆದರೂ ಅಂಬೇಡ್ಕರರು ಹೇಳುವ ಕಟುವಾದ ಸತ್ಯ ಪರೀಕ್ಷೆಗಳನ್ನು ಅವರ ಸ್ವತಂತ್ರ ವಿಚಾರದ ವೈಚಿತ್ರ್ಯಗಳನ್ನು ನನ್ನಂತಹ ಹಳೆಯ ಶಿಕ್ಷಕರು ಸಹಿಸಿಕೊಳ್ಳುತ್ತಾರೆ ಎಂದು ಮುಕ್ತ ಕಂಠದಿಂದ ಅಂಬೇಡ್ಕರರು ಪ್ರಶಂಸುತ್ತಾರೆ.
ಬ್ರಿಟೀಷ್ ಆಡಳಿತಾವಧಿಯಲ್ಲಿ ಭಾರತದ ರೂಪಾಯಿ ಸಮಸ್ಯೆ ಅದರ ಹುಟ್ಟು ಮತ್ತು ಪರಿಹಾರ ಕುರಿತಾಗಿ ನೈಜತೆಯಿಂದ ಕೂಡಿದ ವಸ್ತುನಿಷ್ಠ ವಿಷಯದೊಂದಿಗೆ ಅಂಬೇಡ್ಕರರು ಗಂಭೀರವಾಗಿ ವಿಶ್ಲೇಷಣೆ ಮಾಡಿರುವರು. ಬ್ರಿಟೀಷರು ಭಾರತಕ್ಕೆ ಶಾಂತಿಯುತ ಆಡಳಿತ ವ್ಯೆವಸ್ಥೆ, ನ್ಯಾಯಾಂಗ ಪದ್ದತಿಯನ್ನು ಕೊಡುಗೆಯಾಗಿ ಕೊಟ್ಟಿರಬಹುದು, ಆದರೆ ಆರ್ಥಿಕ ವಾದ್ದ್ಯದ ಕೊಡುಗೆಯನ್ನು ಕೊಟ್ಟಿದ್ದು ನೂರಕ್ಕೆ ನೂರರಷ್ಟು ಕಟುಸತ್ಯವಾಗಿದೆ. ಬ್ರಿಟಿಷರು ತಮ್ಮ ಆರ್ಥಿಕ ಘೋಷಣೆಯಿಂದ ಭಾರತವನ್ನು ಪ್ರಪಂಚದಲ್ಲಿಯೇ ಒಂದು ಬತ್ತಿಹೋದ ಸ್ಥಳವನ್ನಾಗಿ ಮಾಡಿದ್ದಾರೆಂದು ಹೇಳುತ್ತಾರೆ.
ವ್ಯಾಪಾರ ವಹಿವಾಟುಗಳಲ್ಲಿ ಆಗುವ ಅನಿರೀಕ್ಷಿತ ಏರುಪೇರು ಜನಸಂಖ್ಯೆ ಸ್ತಿತಿಗತಿಯಲ್ಲಿನ ಹೆಚ್ಚಳ ಋತುಮಾನಗಳ ವೈಪರಿತ್ಯ ಉತ್ಪತ್ತಿಯಲ್ಲಿ ಏರಿಳಿತ ಅವಶ್ಯಕ ಭೇಡಿಕೆಗಳಲ್ಲಿನ ಹೆಚ್ಚಳ ಮತ್ತು ಕುಸಿತದಿಂದಾಗಿ ಹಣದ ಬೇಡಿಕೆ ಸ್ಥಿರವಾಗಿದೆ ಬದಲಾವಣೆಯಾಗುತ್ತದೆ ಹೀಗಾಗಿ ಒಂದಿ ಸಮಾಜದಲ್ಲಿ ಹಣದ ಮಹತ್ವ ವಿಷಯವಾಗಿದೆ ಎಂದಿದ್ದಾರೆ. ಮಾನವನ ಎಲ್ಲಾ ಚಟುವಟಿಕೆ, ಆಸಕ್ತಿ, ಬಯಕೆ ಮತ್ತು ಆಕಾಂಕ್ಷೆ ಇವುಗಳಿಗೆಲ್ಲಾ ಹಣವೆ ಪ್ರಮುಖ ಆದಾರವಾಗಿರುವುದ ರಿಂದ ಅನಿಬಾರ್ಯವಾಗಿ ಮಾನವನ ಸಮಾಜ ಆರ್ಥಿಕತೆಯಿಂದ ಕೂಡಿದೆ ವ್ಯಾಪಾರಿ ಸಮಾಜವಾಗಿದೆ. ಅದಕ್ಕಾಗಿಯೇ ಸಮಾಜದಲ್ಲಿ ವಾಣಿಜ್ಯ ಎಂಬುದು ಅತಿ ಮಹತ್ವದಿಂದ ಕುಡಿದ್ದು ಪ್ರಾಮುಖ್ಯತೆ ಪಡೆದುಕೊಂಡಿದೆ, ಆಸ್ತಿಗಳಿಕೆ ವಾಣಿಜ್ಯ ವ್ಯವಹಾರದೊಂದಿಗೆ ಸಮ್ಮೀಳನಗೊಂಡಿದೆ.
ಮಾನವನು ತನ್ನೆಲ್ಲ ವ್ಯವಹಾರಗಳನ್ನು ಹಣದ ಮುಖಾಂತರವೆ ಮಾಡುತ್ತಾನೆ. ವಸ್ತುಗಳನ್ನು ಕೇವಲ ವಸ್ತುಗಳಿಗಾಗಿ ವಿನಿಮಯವಾಗಿರದೆ ಹಣದಗೋಸ್ಕರವಾಗಿಯೇ ವ್ಯವಹಾರವಾಗಿರುತ್ತದೆ. ಎನ್ನುತ್ತಾ ಅಂಬೇಡ್ಕರರು, ಕುತುಹಲಕಾರಿಯಾಗಿ ಹಣದ ಬೇಡಿಕೆ ಅದರ ವ್ಯವಹಾರದ ಕುರಿತು ಚರ್ಚಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಹಣವು ಅತ್ಯಂತ ಮಹತ್ವದ ವಸ್ತುವಾಗಿದ್ದು ಅದಕ್ಕಿಂತ ಬೇರೆ ವಸ್ತು ಇನ್ನೊಂದಿಲ್ಲ ಎನ್ನುತ್ತಾರೆ. ಒಂದು ದೇಶವು ವಾಣೀಜ್ಯ ವ್ಯವಹಾರದಲ್ಲಿ ಅವ್ಯವಸ್ಥಿತವಾಗಿರಬಾರದು. ಅದು ಭದ್ರವಾದ ಹಣಕಾಸಿನ ವ್ಯವಸ್ಥೆಯನ್ನು ಹೊಂದಿರಲೇಬೇಕು ಎಂದು ಮೊದಲ ಅಧ್ಯಾಯದಲ್ಲಿ ಹಣದ ಮತ್ತು ವಾಣಿಜ್ಯದ ಮಹತ್ವವನ್ನು ವಿವರಿಸುತ್ತಾರೆ.
ಭಾರತವು ಪ್ರಾಚೀನದಿಂದ ಮೋಘಲ್ ಸಾಮ್ರಾಜ್ಯದ ಕಾಲಘಟ್ಟದಲ್ಲಿ ಆರ್ಥಿಕವಾಗಿ ಮುಂದುವರೆದ ದೇಶವಾಗಿತ್ತು. ಪ್ರಾಚೀನ ಹಿಂದೂ ಅರಸರ ಕಾಲದಲ್ಲಿ ಸುವರ್ಣ ನಾಣ್ಯ ಪಗೋಡಾ ಮೋಘಲರ ಆಡಳಿತದಲ್ಲಿ ಬೆಳ್ಳಿಯ ನಾಣ್ಯ ರುಪಾಯಿ ಮಾನಕ ಘಟಕಗಳಾಗಿದ್ದವು. ಮೊಹರು ಮತ್ತು ರೂಪಾಯಿ ತಾಮ್ರದ ನಾಣ್ಯವಾದ ದಾಮ್ ನೊಂದಿಗೆ ನಿಗದಿತ ವಿನಿಮಯ ಅನುಪಾತವನ್ನು ಹೊಂದಿತ್ತು. ಮೋಘಲರ ಆಳ್ವಿಕೆ ಮುಕ್ತಾಯದವರೆಗೂ ನಾಣ್ಯದ ಗುಣಮಟ್ಟ ಮತ್ತು ತೂಕ 175 ಗ್ರಾಂ ಟ್ರಾಯ್ ಕಾಯ್ದುಕೊಂಡು ಬರಲಾಗಿತ್ತು. ಬ್ರಿಟಿಷರ ಪೂರ್ವದ ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳ ಚಲಾವಣೆಯಿಂದ ದೇಶ ಸಂಪತದ್ಬರಿತವಾಗಿತ್ತೆಂದು ವಿಶ್ಲೇಷಣೆ ಮಾಡುತ್ತಾರೆ.
ಒಡೆದು ಆಳುವ ನೀತಿಯಿಂದ ಭಾರತದ ಒಂದೊಂದು ಪ್ರದೇಶವನ್ನು ವಶಪಡಿಸಿಕೊಳ್ಳುತ್ತಾರೆ, ಸಂಪೂರ್ಣ ವಸಪಡಿಸಿಕೊಂಡ ನಂತರ ಯುದ್ದದ ಖರ್ಚುವೆಚ್ಚ ತನ್ನ ಸೈನ್ಯದ ಮತ್ತು ಇತರ ನೌಕರರ ಸಂಬಳ, ಗೃಹ ವೆಚ್ಚ ಸಾಲದ ಬಡ್ಡಿ ಹೆರುತ್ತಾರೆ, ಇಂಗ್ಲಂಡಿನಲ್ಲಿ ತಯಾರಾದ ವಸ್ತುಗಳಿಗೆ ಸಾಂಕೇತಿಕ ತೆರಿಗೆಗಳನ್ನು ಹಾಕಿ ಭಾರತದಲ್ಲಿನ ಉತ್ಪನ್ನಗಳಿಗೆ,ವಸ್ತುಗಳಿಗೆ ಅತಿಯಾದ ತೇರಿಗೆ ವಿದಿಸುತ್ತಾ ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸುವಂತೆ ಮಾಡಿದ್ದಾರೆ ಎನ್ನುತ್ತಾ ಬ್ರಿಟಿಷರು ಹೇಗೆ ಭಾರತದಲ್ಲಿ ಲೋಹಗಳನ್ನು ಬರಿದು ಮಾಡಿದರು ಎಂಬುದನ್ನು ಅಂಕಿ ಅಂಶ ಸಮೇತ ಸಾದರಪಡಿಸುತ್ತಾರೆ. ಅಂಬೇಡ್ಕರರು ರೂಪಾಯಿ ಸಮಸ್ಯೆಯ ಮೂಲ ಮತ್ತು ಅದರ ಪರಿಹಾರಗಳ ಕುರಿತು ನಾವಿನ್ಯ ರೀತಿಯಲ್ಲಿ ಪ್ರಬಂಧವನ್ನು ಮಂಡಿಸುವರು ಆರ್ಥಶಾಸ್ತ್ರದಲ್ಲಿನ ಅವರ ಆಳವಾದ ಅಧ್ಯಯನ ಮತ್ತು ಜ್ಞಾನ ಕೃತಿ ಓದಿನಿಂದ ತಿಳಿದು ಬರುವುದು ಅವರೊಬ್ಬ ಭಾರತದ ಅರ್ಥಶಾಸ್ತ್ರದ ಪಿತಾಮಹರೆಂಬುದು ಇದರಿಂದ ಸ್ಪಷ್ಠವಾಗುವುದು.
(ಮುಂದುವರೆಯುವುದು)
-----------------------
ಸೋಮಲಿಂಗ ಗೆಣ್ಣೂರ.