ಆನಂದ ಅವರ ಸಮಗ್ರ ಕತೆಗಳು

ಪುಸ್ತಕ ಸಂಗಾತಿ

ಆನಂದಅವರಸಮಗ್ರಕತೆಗಳು

ಸಂಪಾದಕರು ಡಾ. ಎಂ. ಎಸ್.ವಿಜಯಾಹರನ್

ಸಂಪಾದಕರು ಆಕಾಶವಾಣಿಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ನಿಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರು ನಿರ್ಮಿಸಿದ ಅನೇಕ ಕಾರ್ಯಕ್ರಮಗಳಿಗೆ ರಾಜ್ಯ ಹಾಗು ರಾಷ್ಟ್ರಮಟ್ಟದ ಆಕಾಶವಾಣಿ ಪ್ರಶಸ್ತಿಗಳು ಬಂದಿದೆ.

ಪ್ರಕಾಶಕರುಸಂಸ್ಕೃತಿ ಬುಕ್ ಪ್ಯಾರಡೈಸ್

ಲೇಖಕರ ಪರಿಚಯ: ಶ್ರೀಯುತ. ಅಜ್ಜಂಪುರ ಸೀತಾರಾಮ್ ಅವರು ಕತೆಗಾರ ಆನಂದ ರೆಂದೇ ಪ್ರಸಿದ್ಧರು. ಆನಂದರು ಸಣ್ಣ ಕತೆಗಾರರಷ್ಟೇ ಅಲ್ಲದೆ ಕುಂಚ ಕಲಾವಿದರೂ ಹೌದು. ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಕಾದಂಬರಿಯ ಮುಖಪುಟಕ್ಕೆ ಆನಂದರು ಬರೆದುಕೊಟ್ಟ ಕಾಜಾಣಗಳ ಚಿತ್ರ ಕುವೆಂಪುರವರಿಗೆ ಮೆಚ್ಚುಗೆಯಾಗಿ ಮುಂದೆ ಅವರು ತಮ್ಮ “ಉದಯರವಿ” ಪ್ರಕಾಶನದ ಚಿಹ್ನೆಯಾಗಿ ಬಳಸಿಕೊಂಡಿದ್ದರಂತೆ.

ಕ್ರೀಡೆಯಲ್ಲಿಯೂ ಆಸಕ್ತರಾದ ಲೇಖಕರು ಕ್ರಿಕೆಟಿನಲ್ಲಿ “ಸಿಕ್ಸರ್ ಸೀತಾರಾಮ್” ಎಂದು ಖ್ಯಾತರಾಗಿದ್ದರಂತೆ.

೧೯೨೨ರಿಂದ ಇವರು ಕತೆ ಬರೆಯಲು ಪ್ರಾರಂಭಿಸಿದರು. ಇವರ ಹೆಚ್ಚಿನ ಕೌಟುಂಬಿಕ ಕತೆಗಳು ಮಧ್ಯಮ ವರ್ಗದರನ್ನು ಕುರಿತು ಬರೆದವುಗಳು. ಈ ಪುಸ್ತಕದಲ್ಲಿ ಆನಂದರು ಬರೆದಿರುವ ೨೦ ಸಣ್ಣಕತೆಗಳು ಮತ್ತು ಅವರು ಅನುವಾದ/ ರೂಪಾಂತರ ಮಾಡಿರುವ ೧೨ ಕತೆಗಳಿವೆ.

ಇವರ ಕತೆಗಳಲ್ಲಿ ಅವರ ಕಾಲದ ಜೀವನ ಶೈಲಿಯನ್ನು ಕಾಣಬಹುದು. ಇಲ್ಲಿನ ಕೆಲವೊಂದು  ಸನ್ನಿವೇಶಗಳು ಈಗಿನ ಸಮಾಜದಲ್ಲಿ ಚಲಾವಣೆಯಲ್ಲಿ ಇಲ್ಲದಿದ್ದರೂ, (ವಾರಾನ್ನ, ಎಂಟಾಣೆ ಮೊದಲಾದವು)  ಮಾನವೀಯತೆ, ಸ್ನೇಹ, ಕರುಣೆ, ಪ್ರೀತಿ ಎಂದಿಗೂ ಚಿರನೂತನ ಅಲ್ಲವೆ.  ಹಾಗೆಯೇ ಕಾಲ ಯಾವುದಾದರೇನು  ಮನುಷ್ಯನ ಮನಸ್ಸು, ಅದರ ವ್ಯಾಪಾರ ಎಲ್ಲವೂ ಒಂದೇ ಅಲ್ಲವೇ ?

ದಾಂಪತ್ಯದ ಪವಿತ್ರತೆ, ಸರಸ ಜೀವನದ ಪ್ರೀತಿ, ವಿಶ್ವಾಸ, ನಂಬಿಕೆಯ  ನಡುನಡುವೆ ಇರಬೇಕಾದ ಹಾಸ್ಯ, ಸ್ನೇಹ, ಅನುರಾಗ ಇವುಗಳನ್ನೆಲ್ಲಾ  ಹದವಾಗಿ ಬೆರಸಿ ತಯಾರಿಸಿದ ಪಾಕದಂತೆ ಇಲ್ಲಿನ ಅನೇಕ ಕತೆಗಳಿವೆ.

ರಘುಪತಿ ಪ್ರಲಾಪ, ಬೇವು ಬೆಲ್ಲ ಮೊದಲಾದ ಕತೆಗಳಲ್ಲಿ ಆತ್ಮೀಯತೆಯೊಡನೆ ಬೆರೆತ ಪರಿಶುದ್ಧ ಸ್ನೇಹದ  ಪರಿಚಯ ನಮಗಾಗುತ್ತದೆ.  

ಸರಸಿಯ ಗೊಂಬೆ ಯಲ್ಲಿ ಮಗುವಿನ ಮುಗ್ಧತೆ ನಮ್ಮನ್ನು ಸೆಳೆಯುತ್ತದೆ. ಅಂತಹ ಒಂದು ಮಗುವಿನೊಡನೆ ಒಡನಾಡುವ ಭಾಗ್ಯ ನಮಗೂ ಸಿಗಬಾರದೇ ಎನಿಸುವಷ್ಟು ಆಪ್ತ ಭಾವ ಈ ಕತೆಯಲ್ಲಿದೆ. ಹಾಗೆಯೇ ಮಗು ಬೆಳೆದ ಮೇಲೆ ಹೇಗೆ ಅದರ ಮನೋಭಾವ ಬದಲಾಗುತ್ತದೆ ಎಂಬುದೂ ಇಲ್ಲಿ ಚೆನ್ನಾಗಿ ಚಿತ್ರಿತವಾಗಿದೆ.

 ನಾನು ಕೊಂದ ಹುಡುಗಿ  ಕತೆ ನನ್ನನ್ನು ಬಹಳ ಕಾಡುತ್ತಿದೆ. ಕಾರಣ, ದೇವದಾಸಿ ಪದ್ಧತಿಯನ್ನು ನಂಬಿ, ಮೂಢನಂಬಿಕೆಯಿಂದ ಚಿನ್ನದಂತಹ ತಮ್ಮ ಮಗಳ ಬಾಳಿಗೆ ತೊಡಕಾಗುವ ತಂದೆ, ತಾಯಿ. ಅವರು ಹೇಳಿದನ್ನು ನಂಬಿದ,‌ ಏನನ್ನೂ ಅರಿಯದ ಮುಗ್ಧ ಹುಡುಗಿ ಅವರು ಹೇಳಿದಂತೆ ಕೇಳುವುದು, ನಂತರ ತಾನು ಮಾಡುತ್ತಿರುವುದು ತಪ್ಪು ಎಂದು ತಿಳಿದಾಗ ಅವಳು ಪಡುವ ಸಂಕಟ,‌ ಕೊನೆಗೆ ಅವಳು ತೆಗೆದುಕೊಳ್ಳುವ ನಿರ್ಧಾರ, ಹೀಗೆ ತುಂಬಾ ದಿನ ಮನಸ್ಸಿನಲ್ಲಿ ನಿಲ್ಲುವ ಕತೆಯಿದು.

ಭವತಿ ಭಿಕ್ಷಾಂದೇಹಿ ಮತ್ತು ಕೊನೇ ಎಂಟಾಣೆ ಕತೆಗಳಲ್ಲಿ ಓದಿನ ಮಹತ್ವ, ಬಡತನ, ಹಸಿವು, ಸಾವು ಇವುಗಳನ್ನೆಲ್ಲಾ ಲೇಖಕರು ಹಸಿಹಸಿಯಾಗಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ.

ಚೊಚ್ಚಲು ಸಂಭ್ರಮ ಕತೆಯಲ್ಲಿ  ಮಗುವಿನ ಆಗಮನಕ್ಕೆ ಮನೆಯವರ ಸಂಭ್ರಮ ಆ ನಂತರದ ಆಘಾತವನ್ನು ಲೇಖಕರು  ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.

ಜೋಯಿಸರ ಚೌಡಿ ಕತೆಯಲ್ಲಿರುವಂತೆ ಜನರ ಶ್ರದ್ಧೆ,   ನಂಬಿಕೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಜನರಿಗೆ ಮೋಸ ಮಾಡುವವರು ಅಂದೂ ಇದ್ದರು, ಇಂದೂ ಇದ್ದಾರೆ ಅಲ್ಲವೆ. ಮೋಸ ಹೋಗದಂತೆ ಎಚ್ಚರವಾಗಿರುವುದು ನಮ್ಮ ಕರ್ತವ್ಯ.

ಆನಂದರು ಅನುವಾದ/ ರೂಪಾಂತರ ಮಾಡಿರುವ ೧೨ ಕತೆಗಳ ಬಗ್ಗೆ ಈಗ ತಿಳಿಯೋಣ. ಗೈಡಿ ಮೊಪಸಾನ ನಾಲ್ಕು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕತೆಗಾರ ಲೂಯಿ ಕೌಪೆರಸ್ನ ಮೂರು ಕತೆಗಳನ್ನು, ಗ್ವಿನ್ ಜೋನ್ಸನ, ಸ್ಯಾಪರನ, ಮೇರಿ ಕರೋಲಿಯ, ಅಂಬ್ರೂಸ್ ಬೊಯರ್ಸನ ಒಂದೊಂದು ಕತೆಯನ್ನು ಕನ್ನಡದ ಪರಿಸರಕ್ಕೆ ಹೊಂದುವಂತೆ ಸುಂದರವಾಗಿ ರೂಪಾಂತರಿಸಿದ್ದಾರೆ. ಹಾಗು ವಿ.ಎಸ್ ಗುರ್ಜಾರ್ ಅವರ ಮರಾಠೀ ಕತೆ ‘ಚಪಲಾ’ದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ.

ಮರಾಠಿ ಕತೆಯನ್ನು ಹೊರತು ಪಡಿಸಿ ಮಿಕ್ಕೆಲ್ಲ ಕತೆಗಳಲ್ಲಿ ನಮ್ಮ ಮಣ್ಣಿನ ಸೊಗಡು, ಇಲ್ಲಿನ ರೀತಿ ರಿವಾಜುಗಳು ತುಂಬಿ ತುಳುಕುತ್ತದೆ. ಹೇಳದೇ ಹೋದರೆ ಇವುಗಳು ಅನುವಾದ / ರೂಪಾಂತರ ಕತೆಗಳೆಂದು ಯಾರೂ ಊಹಿಸಲಾಗದು, ಅಷ್ಟು ನಮ್ಮತನವನ್ನು ಈ ಕತೆಗಳು ಹೊತ್ತಿವೆ.

ಮನೆಗೆ ಹೋದರು ಕತೆಯಲ್ಲಿ  ಒಬ್ಬ ಭಿಕ್ಷುಕಿ ಅವಳ ಸಾಕುಮಗುವನ್ನು ಬೆಳೆಸುವುದಕ್ಕಾಗಿ ಪಡುವ ಕಷ್ಟ, ಅವಳು ಕಂಡ ವಿವಿಧ ಬಗೆಯ ಜನರು, ಕೊನೆಗೂ ಮಗುವನ್ನು ಉಳಿಸಿಕೊಳ್ಳಲಾಗದ ಅವಳ ಅಸಹಾಯಕತೆ, ನಂತರ ಅವಳು ತೆಗೆದುಕೊಳ್ಳುವ ನಿರ್ಧಾರ ಇದೆಲ್ಲಾ ತುಂಬಾ ಪರಿಣಾಮಕಾರಿಯಾಗಿದೆ.

ಅಶ್ವಾರೋಹಿ ಎಂಬ ಕತೆಯಲ್ಲಿ ಹಿಂದೂಗಳ ಮೇಲೆ ಔರಂಗಷಹನ ದಬ್ಬಾಳಿಕೆಯನ್ನು ಪ್ರತಿಭಟಿಸಿ, ಹೆಸರು ಬದಲಾಯಿಸಿಕೊಂಡು ರಜಪೂತರೊಡನೆ ಸೇರುವ ಮುಸಲ್ಮಾನ ಯುವಕ ತನ್ನ ತಂದೆಗೇ  ಎದುರಾಳಿಯಾಗಬೇಕಾದ ಪರಿಸ್ಥಿತಿ  ಮನ ಮಿಡಿಯುವಂತಿದೆ.

ಚಪಲಾ ಕತೆಯಲ್ಲಿ ಕಥಾನಾಯಕನಿಗೆ ಟ್ರೈನಿನಲ್ಲಿ ಸಿಗುವ ಚಪಲಾಳ  ಡೈರಿ, ಅದನ್ನು ಓದದೇ ಅವಳಿಗೆ ಹಿಂತಿರುಗಿಸುವ ನಾಯಕ, ಅವರ ನಡುವಿನ ಪತ್ರ ವ್ಯವಹಾರ, ನಂತರದ ಅನೇಕ ಸನ್ನಿವೇಶಗಳು ಕೊನೆಯಲ್ಲಿ ಅವರ ಭೇಟಿ ಹೀಗೆ ಸರಾಗವಾಗಿ ಓದಿಸಿಕೊಂಡರೆ. ಅಸಲು-ನಕಲು ಕತೆಯಲ್ಲಿ ಲೇಖಕ ಮತ್ತು ಓದುಗಳ ನಡುವಿನ ಪತ್ರ ವ್ಯವಹಾರ, ಆನಂತರ ಅವರ ಭೇಟಿಗೆ ಸಿದ್ಧತೆ, ಭೇಟಿ ರದ್ದಾಗುವ ಪರಿ, ಮುಂದಿನ ಕತೆಯ ರೋಚಕ ತಿರುವು ನಮ್ಮನ್ನು ನಗೆಗಡಲಲ್ಲಿ ತೇಲಿಸುತ್ತದೆ.

ನಾವು ದಿನನಿತ್ಯದ ಬದುಕಿನಲ್ಲಿ  ಕಾಣುವ ಅನೇಕ ವ್ಯಕ್ತಿಗಳ ಪ್ರತಿರೂಪದಂತಿರುವ  ರಿಪೇರಿ ಮಾಯಣ್ಣ ನಮಗೆ ಅತ್ಯಾಪ್ತ ವ್ಯಕ್ತಿಯಾಗಿ ಗೋಚರಿಸಿದಲ್ಲಿ ಆಶ್ಚರ್ಯವೇನಿಲ್ಲ.  

ನನಗೆ ತುಂಬಾ ಯೋಚಿಸುವಂತೆ ಮಾಡಿದ ಕತೆ  ಏಕಾಂತತೆ. ನಮಗೆ ಬೇಕಾದವರೊಡನೆ ಇದ್ದರೂ ಒಮ್ಮೊಮ್ಮೆ ಮನಸ್ಸು ಹೇಗೆ ಏಕಾಂತವಾಗಿರುತ್ತದೆ ಎಂಬುದನ್ನು ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

ಭ್ರಮನಿರಸನ ದ ಪ್ರೇಮಿಗಳ ಕತೆಯಲ್ಲಿ, ಮೆಚ್ಚಿ ಒಂದಾದ ನಾಯಕ, ನಾಯಕಿ. ಅಕಸ್ಮಾತ್ತಾಗಿ ಮರಣ ಹೊಂದುವ ನಾಯಕಿ. ನಂತರ ಅವಳ ನಿಜವಾದ ಮನಸ್ಸು ನಾಯಕನಿಗೆ ತಿಳಿಯುವ ಬಗೆ ಮತ್ತು ಔದುಂಬರಾಣಿ ಪುಷ್ಪಾಣಿ ಕತೆಯಲ್ಲಿ ಇಬ್ಬರು ಆತ್ಮೀಯ ಗೆಳೆಯರ ಗೆಳೆತನ, ಒಂದು ಹೆಣ್ಣಿನಿಂದ ಹೇಗೆ ಹಾಳಾಗುತ್ತದೆ ಎಂಬುದು ಹಾಗು ಅರ್ಜುನಲಾಲನ ಪರಾಭವ ದಲ್ಲಿ ಸರ್ಕಸ್ಸಿನ ಜನರ ಬದುಕು ಮತ್ತು ಅಲ್ಲಿಯೂ ಗಂಡು ಹೆಣ್ಣಿನ ನಡುವಿನ ಸಂಬಂಧ, ಹೀಗೆ ಮೂರೂ ಕತೆಯಲ್ಲಿಯೂ ಮನುಷ್ಯನ ಮನೋ ವ್ಯಾಪಾರ ಎಷ್ಟು ನಿಗೂಢ ಎಂಬುದು ನಮ್ಮ ಅರಿವಿಗೆ ಬರುತ್ತದೆ.  ಜನರ ಕಣ್ಣಿಗೆ ಒಳ್ಳೆಯ ಬಾಳು ನಡೆಸಿದ್ದರೂ,  ನಿಜ ಜೀವನದಲ್ಲಿ ಅವರು ಹೇಗಿದ್ದರು ಎಂಬುದು ನಮ್ಮನ್ನು ಚಿಂತನೆಗೆ ದೂಡುತ್ತದೆ.

ಹೀಗೆ ವಿವಿಧ ರೀತಿಯ ಕತೆಗಳು ಅನೇಕ ಕಾಲ ನಮ್ಮನ್ನು ಯೋಚಿಸುವಂತೆ ಮಾಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.


ಶ್ರೀವಲ್ಲಿ ಮಂಜುನಾಥ

Leave a Reply

Back To Top