ಕಥಾ ಸಂಗಾತಿ
ಮನದ ರಂಗಮಂಟಪ
ರಮೇಶ್ ಬಾಬು ಚಂದಕ ಚರ್ಲ
“ ವಿ ಆರ್ ಟ್ರಾನ್ಸ್ ಪರೆಂಟ್” ಛಾನಲ್ ನವರು ನಿರ್ವಹಿಸುತ್ತಿದ್ದ ಕಾರ್ಯಕ್ರಮ “ ಮುಖ್ಯಮಂತ್ರಿಗಳ ಜೊತೆ ಮುಖಾಮುಖಿ” ದಲ್ಲಿ ಪ್ರಶಾಂತ್ ಒಬ್ಬ ವೀಕ್ಷಕನಾಗಿ ಕೂತಿದ್ದ. ಆ ಕಾರ್ಯಕ್ರಮಕ್ಕೆ ಆಯ್ಕೆಯಾಗಲು ತುಂಬಾ ಪಟ್ರಂಗವಿತ್ತು. ನಗರದ ಹೊರವಲಯದ ಒಂದು ಕಾಲನಿಯ ಅಧ್ಯಕ್ಷನಾಗಿದ್ದಕ್ಕೆ ಅವನಿಗೆ ಆ ಅದೃಷ್ಟ ಒಲಿದಿತ್ತು. ಅದರಲ್ಲೂ ಛಾನೆಲ್ ನವರು ಇಂಟರ್ವ್ಯೂ ಅಂತ ಏನೋ ಕಿತಾಪತಿ ಮಾಡಿದ್ದರೂ ಪ್ರಶಾಂತನು ಸ್ವಲ್ಪ ಗಟ್ಟಿಯಾಗೇ ಉತ್ತರಗಳನ್ನು ಕೊಟ್ಟಿದ್ದರಿಂದ ಅವನಿಗೆ ಆ ಅವಕಾಶ ಸಿಕ್ಕಿತ್ತು. ಹೀಗೆ ನಗರ ಮತ್ತು ಅದರ ಹೊರವಲಯಗಳ ನಾಗರಿಕರನ್ನು ಕಾರ್ಯಕ್ರಮಕ್ಕೆ ಕರೆಯಿಸಿ ಅವರ ಕಷ್ಟ ಸುಖಗಳನ್ನು ನೇರ ಮುಖ್ಯಮಂತ್ರಿಗಳಿಗೇ ಕೇಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಕಾರ್ಯಕ್ರಮಕ್ಕೆ ಮುಂಚೆ ಛಾನಲ್ ನ ಸಿಬ್ಬಂದಿ ವರ್ಗದವರು ಬಂದ ಎಲ್ಲರನ್ನೂ ಕೂರಿಸಲು ಶುರು ಮಾಡಿದರು. ಇಂಟರ್ವ್ಯೂ ನಲ್ಲಿ ದೀಟಾಗಿ ಉತ್ತರ ಹೇಳಿದ್ದರಿಂದ ಪ್ರಶಾಂತನನ್ನು ಮೊದಲ ಸಾಲಿನಲ್ಲೇ ಕೂರಿಸಲಾಯಿತು. ಇನ್ನೂ ಐದು ನಿಮಿಷವಿರುವಾಗಲೇ ಮುಖ್ಯಮಂತ್ರಿಗಳ ಆಗಮನವಾಯಿತು. ಎಲ್ಲರಿಗೂ ನಮಸ್ಕರಿಸಿ ವೇದಿಕೆಯ ಮೇಲೆ ಕೂತರು. ಕಾರ್ಯಕ್ರಮದ ನಿರ್ವಾಹಕರು ಒಂದು ಸಣ್ಣ ಪೀಠಿಕೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ, ಮುಖ್ಯಮಂತ್ರಿಗಳಿಗೆ ಮೈಕ್ ಕೊಟ್ಟರು. ಅವರು ತಮ್ಮ ಸರಕಾರ ಪ್ರಜೆಗಳ ಸಮಸ್ಯೆಗಳನ್ನು ಹೇಗೆ ಪರಿಷ್ಕರಿಸುತ್ತಿದೆ, ಯಾವ ಯಾವ ಹೊಸ ಕಾರ್ಯಕ್ರಮ ಕೈಗೆತ್ತಿಕೊಳ್ಳುತ್ತಿದೆ, ತಮ್ಮ ಸರಕಾರದ ಮುಂದೆ ಇರುವ ಸವಾಲುಗಳೇನು ಎಂಬ ಅಂಶಗಳ ಬಗ್ಗೆ ಹತ್ತು ನಿಮಿಷ ಮಾತಾಡಿದರು. ಪ್ರತಿಪಕ್ಷಗಳ ಬಗ್ಗೆ ಸುನಿಶಿತ ವಿಮರ್ಶೆ ಮಾಡುವುದನ್ನು ಮರೆಯಲಿಲ್ಲ. ನಂತರ ವೀಕ್ಷಕರಿಂದ ಮುಖ್ಯಮಂತ್ರಿಗಳಿಗೆ ತಮ್ಮ ಅಹವಾಲುಗಳನ್ನು ತಿಳಿಸುವ ಸರದಿ ಬಂತು. ತುಂಬಾ ಜನ ತಮ್ಮ ತಮ್ಮ ಪ್ರದೇಶದ ಮೂಲ ಸೌಕರ್ಯಗಳ ಕೊರತೆಯ ಬಗ್ಗೆಯೇ ಸಮಸ್ಯೆಗಳನ್ನು ಅರುಹಿದರು. ಅವುಗಳಿಗೆಲ್ಲ ಮುಖ್ಯಮಂತ್ರಿಗಳು ತಮ್ಮದೇ ಆದ ಶೈಲಿಯಲ್ಲಿ ಉತ್ತರ ಕೊಟ್ಟು ಸಮಾಧಾನ ಪಡೆಸಿದರು. ಸಂಬಂಧ ಪಟ್ಟ ಅಧಿಕಾರಿಗಳಿಗೆ ಇವುಗಳನ್ನು ನೋಟ್ ಮಾಡಿಕೊಳ್ಳಲು ಹೇಳಿದರು. ತಾನು ಮುಂದಿನ ಸಾಲಿನಲ್ಲಿದ್ದರೂ ತನ್ನ ಸರದಿ ಬಂದಿಲ್ಲವೆಂದು ಚಡಪಡಿಸುತ್ತಿದ್ದ ಪ್ರಶಾಂತನ ಕಡೆಗೆ ನೋಡಿದ ನಿರ್ವಾಹಕ “ ನಿಮ್ಮ ಸಂಕ್ಷಿಪ್ತ ಪರಿಚಯ ಕೊಟ್ಟು, ಸಮಸ್ಯೆ ಹೇಳಿ” ಅಂದಾಗ ಪ್ರಶಾಂತ್ ತನ್ನ ಪರಿಚಯ ಕೊಟ್ಟು “ ಸಾರ್ ! ಈಗ ನೀವೇನೋ ಎಲ್ಲ ಸಮಸ್ಯೆಗಳನ್ನು ಕೇಳಿದಿರಿ. ಅವುಗಳ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳಿದಿರಿ. ಚೆನ್ನಾಗಿದೆ. ಆದರೆ ಈ ಕಾರ್ಯಕ್ರಮ ಮುಗಿದು ನೀವು ಹೋದಮೇಲೆ ಸಂಬಂಧ ಪಟ್ಟ ಅಧಿಕಾರಿಗಳಲ್ವಾ ಇದರ ಬಗ್ಗೆ ನೋಡೋದು? ನಾವು ಅವರ ಹತ್ತಿರ ಹೋದಾಗ ಅವರು ನಮ್ಮನ್ನು ಹಿಡಿಸಿಕೊಳ್ಳುವುದಿಲ್ಲ. ಕೆಲಸಗಳು ಆಗುವುದಿಲ್ಲ. ಹಾಗಲ್ಲದೇ ಈಗ ಚರ್ಚೆ ಮಾಡಿದ ಸಮಸ್ಯೆಗಳು ಪರಿಷ್ಕಾರ ಆಗುವವರೆಗೆ ಒಂದು ಪ್ರತ್ಯೇಕ ಫೋನ್ ನಂಬರ್ ನಿಗದಿ ಮಾಡಿ, ಅದಕ್ಕೆ ಒಬ್ಬ ಅಧಿಕಾರಿಯನ್ನಿಡಿ ಸಾರ್. ಈಗ ನೀವು ಪಟ್ಟಿ ಮಾಡಿದ ಕೆಲಸಗಳೆಲ್ಲಾ ಮುಗಿಯುವವರೆಗೆ ಅದಕ್ಕೆ ಸಂಬಂಧಪಟ್ಟ ವಿಚಾರಣೆ ಎಲ್ಲ ಅವರ ಹತ್ತಿರವೇ ಮಾಡುವ ಹಾಗೆ ಮಾಡಿದರೆ ನಮಗೆ ಸಹಾಯವಾಗುತ್ತದೆ ಸಾರ್ “ ಅಂದ. ನಿರ್ವಾಹಕರ ಮುಖ ಬೆಳಗಿತು ” ಪ್ರಶಾಂತ್ ಅವರೇ ! ನಿಜವಾಗ್ಲೂ ಉತ್ತಮ ಸಲಹೆ ನಿಮ್ಮದು “ ಎನ್ನುತ್ತಿದ್ದ ಹಾಗೇ ಮುಖ್ಯಮಂತ್ರಿಗಳು “ ಹಾಗೇ ಮಾಡೋಣ ಪ್ರಶಾಂತ್ ಅವರೇ ! ನಿಮ್ಮ ಸಲಹೆ ಉತ್ತಮವಾಗಿದೆ. ಅಚರಣೆಯಲ್ಲಿಡೋಣ” ಎನ್ನುತ್ತ ಕಾರ್ಯಕ್ರಮ ಮುಗಿಸಿದಾಗ ಪ್ರಶಾಂತ್ ಬೆಟ್ಟ ಹತ್ತಿದಷ್ಟು ಆನಂದ ಪಟ್ಟ. ಇಷ್ಟೇ ಅಲ್ಲದೇ ಮಾರನೆಯ ದಿನವೇ ಮುಖ್ಯಮಂತ್ರಿಗಳ ಕಚೇರಿಯಿಂದ ಫೋನ್ ಬಂದಿತ್ತು “ ನಾನು ಮುಖ್ಯಮಂತ್ರಿಗಳ ಕಚೇರಿಯಿಂದ ಮಾತಾಡೋದು. ನೀವೇ ಅಂತಲ್ಲ ನೆನ್ನೆ ಕಾರ್ಯಕ್ರಮದಲ್ಲಿ ಮಾತಾಡಿ ಪ್ರತ್ಯೇಕ ಫೋನ್ ನಂಬರಿನ ಐಡಿಯಾ ಕೊಟ್ಟಿದ್ದು. ಅದನ್ನ ತಕ್ಷಣ ಮಾಡಬೇಕು ಅಂತ ಸಿ.ಎಂ ಹೇಳಿದ್ದಾರೆ. ಅದರ ಪ್ರಕಾರ ಒಂದು ನಂಬರ್ ಅದಕ್ಕೇ ಮೀಸಲಾಗಿಸುತ್ತಿದ್ದೇವೆ. ಬರ್ಕೊಳ್ಳಿ. ಈ ನಂಬರನ್ನ ಆ ಛಾನೆಲನವರಿಗೆ ಕೊಟ್ಟು ಅವತ್ತಿನ ದಿನ ಸಮಸ್ಯೆಗಳನ್ನು ಹೇಳಿದವರಿಗೆ ತಿಳಿಸಲು ಹೇಳುತ್ತಿದ್ದೇವೆ. ನಿಮ್ಮ ಈ ಸಲಹೆಗೆ ನಾವು ಆಭಾರಿ” ಎಂದಾಗ ಪ್ರಶಾಂತನ ಕಾಲುಗಳು ಭೂಮಿಯ ಮೇಲಿರಲಿಲ್ಲ. ಮತ್ತ ಕೆಲವು ದಿನಗಳಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ ಇದರ ಬಗ್ಗೆ ಪತ್ರ ಸಹ ಬಂತು.
***********
ಎಷ್ಟೋ ವರ್ಷಗಳು ಕಾದು, ಅವರಿವರ ಕಾಲು ಹಿಡ್ಕೊಂಡು ಕಾಲನಿಗೆ ಹಾಕಿಸಿದ ರಸ್ತೆಗಳನ್ನು ಕೆಲವೇ ದಿನಗಳಲ್ಲಿ ಟೆಲಿಫೋನ್ ಕೇಬಲ್ ಹಾಕಲು, ಒಳಚರಂಡಿಗಾಗಿ ಅಥವಾ ಪೈಪ್ ಲೈನ್ ಹಾಕಲು ತೋಡಿ, ಕೆಲಸವಾದ ಮೇಲೆ ಬರೀ ಮಣ್ಣು ತುಂಬಿ ಹೋಗುವುದು ಪ್ರಶಾಂತನಿಗೆ ಕಿರಿಕಿರಿ ಎನಿಸುತ್ತಿತ್ತು. ಆ ಮಣ್ಣು ಕೆಲವೇ ದಿನಗಳಲ್ಲಿ ಅತ್ತಿತ್ತ ಸರಿದು ಅಲ್ಲೊಂದು ಉದ್ದ ಕಾಲುವೆಯಾಗಿ ವಾಹನಗಳಿಗೆ ತುಂಬಾ ಅಡಚಣೆಯಾಗುತ್ತಿತ್ತು. ಯಾರೂ ಕೇಳದಿದ್ದರಿಂದ ಹೀಗೆ ನಡೆಯುತ್ತಿದೆ ಎಂದೆಣಿಸಿದ ಪ್ರಶಾಂತ್, ಈ ಘಟನೆಯಾದ ಮೇಲೆ, ಒಮ್ಮೆ ಹಾಗೆ ರಸ್ತೆ ಅಗಿಯುತ್ತಿದ್ದ ಮೇಸ್ತ್ರಿಯೊಂದಿಗೆ ಜಗಳಾಡಿದ. ಅವನು ಡಿಪಾರ್ಟ್ ಮೆಂಟಿಗೆ ದೂರು ಕೊಡಿ ಅಂದ ಪ್ರಶಾಂತ್ ಅಲ್ಲಿಂದ ಇಂಜನಿಯರ್ ಕಚೇರಿಗೆ ದೂರು ಹೊತ್ತು ಹೋದ. ಆತ ಸಹ ನಿರ್ಲಕ್ಷ್ಯವಾಗಿಯೇ ಉತ್ತರ ಕೊಟ್ಟಾಗ ಪ್ರಶಾಂತ ತನಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಬಂದ ಪತ್ರದ ನಕಲನ್ನು ತೋರಿಸಿ ಈ ದೂರನ್ನು ಅವರ ವರೆಗೆ ಕೊಂಡೊಯ್ಯುವುದೆಂದು ಹೇಳಿದಾಗ ರಸ್ತ ಅಗೆತದ ಕುಣಿಗಳು ಮುಚ್ಚಿದವು. ಪ್ರಶಾಂತನಿಗೆ ತನ್ನ ಹತ್ತಿರವಿದ್ದ ಪತ್ರದ ಶಕ್ತಿಯ ಅರಿವಾಯಿತು.
ಮಾರನೆಯ ದಿನ ತಮ್ಮ ಕಾಲನಿಗೆ ಬೇಕಾದ ಸವಲತ್ತುಗಳ ಬಗ್ಗೆ ವಿಚಾರಿಸಲು ಕಮಿಶನರ್ ಕಚೇರಿಗೆ ಹೋದ. “ ನೀವೆಲ್ಲೋ ಗುಡ್ಡದ ಮೇಲೆ ಮನೆ ಕಟ್ಟಿ ಅಲ್ಲಿಗೆ ಅದು ಬಂದಿಲ್ಲ,ಇದು ಬಂದಿಲ್ಲ ಅಂದ್ರೆ ಹೇಗ್ರೀ ! ಸುತ್ತಮುತ್ತ ಕೆಲ ಮನೆಗಳು ಆಗ್ಲಿ. ಮಾಡ್ತೇವೆ. ಮತ್ತೆ ನಮಗೆ ಬಡ್ಜಿಟ್ ಅಂತ ಒಂದು ಇರತ್ತಲ್ಲಾ!” ಎನ್ನುವ ರೂಲು ಪುಸ್ತಕದ ಉತ್ತರ ಕೊಟ್ಟರು.
“ ಹಾಗಾದರೆ ನಮ್ಮ ಹತ್ತಿರ ಟ್ಯಾಕ್ಸ್ ಯಾಕೆ ಸರ್ ಕಟ್ಟಿಸಿಕೊಳ್ತೀರಿ ? ಆಗ ಮಾತ್ರ ನಿಮಗೆ ಮನೆ ಇದೆ ಅಂತ ಕಾಣತ್ತಾ?” ಅಂತ ಪ್ರಶಾಂತ್ ಕೇಳಿದಾಗ ಕಮೀಷನರ್ ಅವರಿಗೆ ಕೋಪ ಬಂತು. ಆದರೂ ಇವನನ್ನು ಸಾಗ ಹಾಕಲು “ ಸ್ವಾಮೀ ! ನೀವೊಂದು ಅರ್ಜಿ ಕೊಡಿ. ನೋಡೋಣ “ ಎನ್ನುವ ಸ್ಟಾಕ್ ಉತ್ತರ ಕೊಟ್ಟರು. ಆಗ ಪ್ರಶಾಂತ್ ತನ್ನ ಮು.ಮಂ. ಕಾರ್ಡ್ ಸ್ವೈಪ್ ಮಾಡಿದಾಗ, ಕಮಿಷನರ್ ಅವರ ಎಟಿಎಂ ಕೆಲಸ ಮಾಡುವ ಸದ್ದು ಕೇಳಿಸಿತು. ಮತ್ತೊಂದು ವಾರದಲ್ಲಿ ಕೆಲಸಗಳು ಆರಂಭವಾದವು.
*****
ಈ ಎರಡೂ ವಿಜಯಗಳಿಂದ ಸರಣಿ ಜಯ ಗಳಿಸಿದ ಕೊಹ್ಲಿಯಂತೆ ಬೀಗಿದ ಪ್ರಶಾಂತ. ತನ್ನ ರಡಾರನ್ನು ಮತ್ತೆಲ್ಲಿಗೆ ಹರಿಸಲಿ ಅಂತ ಯೊಚಿಸಿದ. ಟೆಲಿಫೋನ್ ಕಚೇರಿ ಕಂಡಿತು. ತನ್ನ ಕೇಂದ್ರ ಸರಕಾರದ ಪಾಲಸಿಯಂತೆ ತಮಗೆಲ್ಲ ಬಿಎಸ್ ಎನ್ ಎಲ್ ಕನೆಕ್ಷನ್ನೇ ಇತ್ತು. ನಿವೃತ್ತಿಯಾಗುವಾಗ ಬದಲಾಯಿಸಲು ನೋಡಿದರೆ ತನ್ನ ಗೆಳೆಯರೆಲ್ಲ “ ಇದೇ ಇರಲಿ ಗುರೂ ! ಇಂಡಿಯಾದಲ್ಲಿ ಯಾವ ಮೂಲೆಗಾದರೂ ಕನೆಕ್ಟ್ ಆಗುತ್ತೆ” ಅಂತ ಗಾಳಿ ಹೊಡೆದಿದ್ದರು. ತನಗೂ ತನ್ನ ದೇಶದ ಬಗ್ಗೆ ಇರುವ ಅಭಿಮಾನದಿಂದ ಮುಂದುವರೆಸಿದ್ದ. ಆದರೆ ಅದು ಯಾವ ಮೂಲೆಗಾದರೂ ಕನೆಕ್ಟ್ ಆಗುವುದಿರಲಿ ಟವರ್ ಇದ್ದ ಸುತ್ತ ಮುತ್ತ ಜಾಗದಲ್ಲೂ ಸರಿಯಾಗಿ ಕೇಳುತ್ತಿರಲಿಲ್ಲ. ಕಾಲ್ ಡ್ರಾಪ್ ಗಳು, ಇದ್ದಕ್ಕಿದ್ದ ಹಾಗೆ ಕಟ್ ಅಗೋದು, ಮಾತಾಡುವಾಗ ಕರ್ಣ ಕಠೋರ ಶಬ್ದಗಳು ತುಂಬಾ ಕಿರಿಕಿರಿ ಮಾಡುತ್ತಿದ್ದವು. ಮನೆಯಲ್ಲಿ ಮಗ “ ಅಪ್ಪಾ! ಈ ಓಬಿರಾಯನ ಕಾಲದ ಕಂಪೆನಿಗಳನ್ನು ಹಿಡಿದು ನೇತಾಡಬೇಡ. ಯಾವ ಏರ್ ಟೆಲ್ಲೋ, ವೊಡಾಫೋನೋ ತೆಗೆದುಕೋ “ ಅಂತ ಕಲೇ ಬಿದ್ದಿದ್ದ. ಇನ್ನು ಇದರ ಬಗ್ಗೆ ಗಮನ ಹರಿಸಬೇಕು ಅಂದುಕೊಂಡ ಪ್ರಶಾಂತ್. ಟಿವಿ ಕಾರ್ಯಕ್ರಮದ ಗುಂಗು ಇನ್ನೂ ತಲೆಯಲ್ಲಿ ಸುತ್ತುತ್ತ ಅಮಲು ಕೊಡುತ್ತಿತ್ತು.
ಈ ಕಚೇರಿಯಲ್ಲಿ ಸಹ ಅದರ ಪ್ರತಾಪ ತೋರಿಸುವ ಹುರುಪಿನಲ್ಲಿ ಆ ಆಫೀಸಿಗೆ ಮರುದಿನವೇ ಹೋದ. ಅಲ್ಲಿಯ ಇಂಜನಿಯರನ್ನು ಭೇಟಿ ಮಾಡಿದ. ಅವರು ಪ್ರಶಾಂತ್ ಹೇಳಿದ್ದೆಲ್ಲಾ ಕೇಳಿ “ ತುಂಬಾ ದೂರು ಬರ್ತಿವೆರೀ ! ಈ ಟವರನ್ನು ಅಪ್ ಗ್ರೇಡ್ ಮಾಡಿ ಅಂತ ಎಷ್ಟು ಪತ್ರ ಬರೆದಿದ್ದೇವೆ ಗೊತ್ತಾ ! ಈ ಕಾಲನಿಯಲ್ಲಿ ತುಂಬಾ ಜನ ಸರಕಾರದಿಂದ ನಿವೃತ್ತಿ ಹೊಂದಿದೆವರೇ ಇದ್ದಾರೆ. ಅವರೆಲ್ಲ ನಮ್ಮ ಕನೆಕ್ಷನ್ನೇ ತೊಗೊಂಡಿದ್ದಾರೆ. ಈ ಟವರಿನ ಕೆಪಾಸಿಟಿಗೆ ಸಾಕಾಗ್ತಿಲ್ಲ. ಅದಕ್ಕೇ ಹೀಗಾಗ್ತಿದೆ ಸಾರ್ “ ಅಂತ ತುಂಬಾ ನಿದಾನವಾಗೇ ತಿಳಿ ಹೇಳಿದರು.
ನಮ್ಮ ಪ್ರಶಾಂತ್ ಅಲ್ಲಿಗೇ ಬಿಡುವವನಾ ಹೇಳಿ ! ಕುದುರೆ ಹತ್ತಿದ್ದಾನಲ್ವಾ ! ಹೇಗೂ ಟಿವಿ ಅಸ್ತ್ರ ಇದೆ ಅಂತ ಗೊತ್ತು “ ಇದರ ಬಗ್ಗೆ ಎಲ್ಲಿ, ಯಾರ ಹತ್ತಿರ ಮಾತಾಡ ಬೇಕು ಹೇಳಿ “ ಅಂತ ಕೇಳಿದ. ಅವರು ನಗರದಲ್ಲಿದ್ದ ಕಚೇರಿಯಲ್ಲಿ ಯಾರನ್ನು ಭೇಟಿಯಾಗಬೇಕೋ ಹೇಳಿದರು. ಎರಡು ಸಲ ಅವರ ಸಲುವಾಗಿ ಹೋದಾಗ ಅವರಿರಲಿಲ್ಲ. ಕೊನೆಗೆ ಅವರು ಎಂದು, ಎಷ್ಟು ಹೊತ್ತಿಗೆ ಬರುತ್ತಾರೋ ತಿಳಿದುಕೊಂಡು, ಕಾದು, ಅವರನ್ನು ಹಿಡಿದ. ಭೇಟಿಯಾಗಿ ತನ್ನ (ಮ್ಮ) ಸಮಸ್ಯೆಯನ್ನು ತೋಡಿಕೊಂಡ. ಅವರು ಯಾವುದೋ ಬೇಜಾರಿನಲ್ಲಿದ್ದ ಹಾಗಿತ್ತು. “ ಹೀಗೆ ಅಪ್ ಗ್ರೇಡ್ ಮಾಡ ಬೇಕಾದ ಟವರ್ ಗಳು ತುಂಬಾ ಇವೇ ರೀ . ಯಾವುದನ್ನಂತ ಮಾಡೋದು ? ಸಿಟಿಯಲ್ಲಿರೋವು ಮಾಡುವಷ್ಟರಲ್ಲಿ ಹಣ ಮುಗಿದು ಹೋಗಿದೆ. ನೋಡೋಣ. ಮುಂದಿನ ವರ್ಷ ಜೂನಿನ ಬಡ್ಜೆಟ್ ನಲ್ಲಿ ಬಂದಾಗ ನೋಡೋಣ. ನೀವು ನಿಮ್ಮ ಕಾಲನಿಯ ಪರವಾಗಿ ಲೆಟರ್ ಹೆಡ್ ಮೇಲೆ ಪತ್ರ ಬರೆದು ಸೀಲ್ ಹಾಕಿ ಸಹಿ ಮಾಡಿ ಕೊಡಿ. ಹಣ ಬಂದಾಗ ನಿಮ್ಮ ಕಾಲನಿಯ ಟವರ್ ಬಗ್ಗೆ ಹೇಳ್ತೇವೆ “ ಎನ್ನುವ ಹಾರಿಕೆಯ ಉತ್ತರ ಕೊಟ್ಟರು. ಮತ್ತೆ ಪ್ರಶಾಂತ್ ತನ್ನ ಟೀವಿ ಕಾರ್ಯಕ್ರಮದ ಅಸ್ತ್ರ ಬಿಟ್ಟು, ತಾನು ಮುಖ್ಯಮಂತ್ರಿಗಳ ಆಪ್ತರಲ್ಲಿದ್ದ ವಿಷಯ ತಿಳಿಸಿದ. ಆಫೀಸರ್ ಗಾಬರಿಗೊಂಡು “ ಆ ಮಾತು ಮುಂಚೆನೇ ಯಾಕೆ ಹೇಳಲಿಲ್ಲ ನೀವು ! ಹೀಗಿರುವುದಾದರೆ ಮುಂಚೆ ನಿಮ್ದೇ ಅಂತ ಇಟ್ಕೊಳ್ಳಿ. “ ಅಂದರು. ಅದಕ್ಕೂ ಸಮಾಧಾನ ಗೊಳ್ಳದ ಪ್ರಶಾಂತ್ “ ಅಲ್ಲಿಗೆ ಇನ್ನೂ ಐದು ತಿಂಗಳಿವೆ ಸರ್. ಅಲ್ಲಿಯ ವರೆಗೆ ನಾವೆಲ್ಲ ಹೀಗೆ ಒದ್ದಾಡ ಬೇಕಾ ? ಅದಾಗುವುದಿಲ್ಲ. ಹೇಗಾದರೂ ಮಾಡಿ. ಇಲ್ಲಾಂದ್ರೆ ನಾನು ಅವರ ಪಿ ಎ ಗೆ ಫೋನ್ ಮಾಡ್ತೇನೆ. ಮತ್ತೆ ನಿಮಗೆ ಫೋನ್ ಬರುತ್ತೆ “ ಅಂದ. ಅದಕ್ಕೆ ಆ ಆಫೀಸರ್ “ ಹಾಗೆ ಮಾತ್ರ ಮಾಡ್ಬೇಡಿ. ಒಮ್ಮೆ ಸಿ ಎಂಗೆ ನನ್ನ ಹೆಸರು ನೋಟ್ ಆಗೋದ್ರೆ ಆಯ್ತು. ಎಲ್ಲಿಗೆ ಎತ್ತಂಗಡಿ ಮಾಡಿಸ್ತಾರೋ ಏನೋ ! ನಾವೆಷ್ಟು ಕೇಂದ್ರ ಸರಕಾರದ ಉದ್ಯೋಗಿಗಳಾದರೂ ರಾಜ್ಯದವರಿಗೆ ತಗ್ಗಿ ನಡೆಯ ಬೇಕಲ್ಲ. ಸರಿ. ನಿಮ್ಮ ಮೊಬೈಲ್ ನಂಬರ್ ಕೊಟ್ಟು ಹೋಗಿ. ನಾನು ನಿಮಗೆ ಒಂದೆರಡು ದಿನಗಳಲ್ಲಿ ತಿಳಿಸ್ತೇನೆ. ಆಗುವ ಹಾಗೆ ಮಾಡ್ತೇನೆ “ ಅಂತ ಆಶ್ವಾಸನೆ ಕೊಟ್ಟ ಮೇಲೆನೇ ಪ್ರಶಾಂತ್ ಹೊರಗೆ ಬಂದದ್ದು.
***********
ಈ ಯಾವ ಗೆಲುವನ್ನೂ ಪ್ರಶಾಂತ್ ಯಾರ ಜೊತೆಯೂ ಹಂಚಿಕೊಳ್ಳಲಿಲ್ಲ. ಯಾಕೆ ಅಂತ ಓದುಗರು ತಿಳಿದುಕೊಳ್ಳಲು ಇಚ್ಛಿಸುತ್ತಾರಲ್ಲವೇ ?
ಯಾಕೆ ಅಂದರೆ ಇವ್ಯಾವೂ ನಡೆದಿಲ್ಲ. ಇವೆಲ್ಲ ಪ್ರಶಾಂತ್ ತನ್ನಲ್ಲೇ ಮಾಡಿಕೊಳ್ಳುವ ಸಂವಾದಗಳು. ಟೀವೀ ಕಾರ್ಯಕ್ರಮದಿಂದ ಹಿಡಿದು ಮೊಬೈಲ್ ತನಕ ಎಲ್ಲವೂ ತನ್ನ ಮನದ ರಂಗ ಭೂಮಿಯ ಮೇಲೆ ತಾನೇ ಆಡಿದ ನಾಟಕಗಳು.
ಪ್ರಶಾಂತ್ ನಮ್ಮೆಲ್ಲರ ತರದ ಸಾಧಾರಣ ಮಧ್ಯ ತರಗತಿ ಮನುಷ್ಯ. ಎಷ್ಟೋ ಕಷ್ಟಪಟ್ಟು ಊರಾಚೆಯ ಒಂದು ಕಾಲೊನಿಯಲ್ಲಿ ಮನೆ ಕಟ್ಟಿಕೊಂಡಿದ್ದಾನೆ. ಮಗ ಇನ್ನೂ ಕೆಲಸಕ್ಕೆ ಪರದಾಡುತ್ತಿದ್ದಾನೆ. ಮನೆಯಲ್ಲೇ ಕೂತು ಬೇಡದ ಸಲಹೆಗಳು ಮಾತ್ರ ಕೊಡುತ್ತಿರುತ್ತಾನೆ. ಎಲ್ಲರ ರೀತಿಯಲ್ಲಿಯೇ ಪ್ರಶಾಂತನೂ ಕಷ್ಟಗಳನ್ನು ಎದುರಿಸುತ್ತಿದ್ದಾನೆ. ಎಲ್ಲ ಕಚೇರಿಗಳಿಗೆ ಸುತ್ತು ಹಾಕುವುದರಲ್ಲೇ ಸಮಯ ಕಳೆದು ಹೋಗುತ್ತದೆ.. ರಸ್ತೆಗಳ ತುಂಬಾ ಹೊಂಡಗಳು, ಉಕ್ಕಿ ಹರೆಯುವ ಚರಂಡಿಗಳು, ಸರಿಯಾಗಿ ಬೆಳಗದ ಬೀದಿ ದೀಪಗಳು. ಇವೆಲ್ಲದಕ್ಕೂ ನಾವೆಲ್ಲ ಹೇಗೆ ಬೇಜಾರು ಮಾಡಿಕೊಳ್ಳುತ್ತೇವೋ ಅವನು ಸಹ ಬೇಜಾರು ಮಾಡಿಕೊಳ್ಳುತ್ತಾನೆ. ಯಾರನ್ನೂ ನಿಲ್ಲಿಸಿ ಕೇಳಲಾಗದ ಅಸಹಾಯಕ ಸನ್ನಿವೇಶ. ಅದಕ್ಕೇ ಅಂಥ ಸಂದರ್ಭ ತನ್ನೆದುರಿಗೆ ಬಂದಾಗ ತನ್ನ ಮನಸ್ಸಿನಲ್ಲೇ ಈ ತರದ ಸನ್ನಿವೇಶ ಕಲ್ಪಿಸಿಕೊಂಡು ಅದಕ್ಕೆ ತಾನೇ ಏನೋ ಮಾಡಿದಂತೆ ಸಂಭ್ರಮಗೊಳ್ಳುತ್ತಾನೆ. ಕೋಪವನ್ನು ಶಮನ ಮಾಡಿಕೊಳ್ಳುತ್ತಾನೆ. ತನ್ನ ಕೈಲಾದದ್ದು ಇಷ್ಟೇ ಮತ್ತೆ !
ಚಂದ ಕತೆ.ಸಾಮಾನ್ಯ ವಸ್ತುವಿಗೆ ಕಥಾರೂಪ ಕೊಟ್ಟಿದ್ದು, ರಂಜನೀಯ ಎನಿಸಿತು.. ಲೇಖಕರಿಗೆ ಅಭಿನಂದನೆಗಳು.
ಒಬ್ಬ ಸಾಮಾನ್ಯ ಪ್ರಜೆಯ ಅಸಹಾಯಕತೆಯನ್ನು ಚೆನ್ನಾಗಿ ಪ್ರಸ್ತುತ ಪಡಿಸಿರುವ ಚಂದದ ಕತೆ
ವಿಚಾರಗಳನ್ನು ಆಚಾರಕ್ಕೆ ತರುವುದು ಎಷ್ಟು ಕಠಿಣ, ಹಾಗೂ ಅದರ ನಡುವಣ ಕಂದರದ ಕುರಿತು ಹೇಳುವ ಕತೆ. ಉತ್ತಮ ನಿರೂಪಣೆ! ಕತೆಯ ಕೊನೆಯವರೆಗೂ ಹಿರೋನಂತೆ ಕಂಡ ಪ್ರಶಾಂತ ಎಷ್ಟು ಅಸಹಾಯಕ ಎನ್ನುವ ವಿಷಯವನ್ನು ಅನಾವರಣಗೊಳಿಸುವ ಘಟ್ಟ ಮನಸ್ಸನ್ನು ಅಸ್ವಸ್ಥ ಮಾಡುತ್ತದೆ.
ಒಳ್ಳೆಯ ಕತೆ ಹೆಣೆದ ರಮೇಶ ಬಾಬು ಅವರಿಗೆ ಅಭಿನಂದನೆಗಳು