ಪುಸ್ತಕ ಸಂಗಾತಿ

ಸಂವೇದನೆಗಳ ಸ್ಪಷ್ಟ ನಿರ್ಭೀತ ಅಭಿವ್ಯಕ್ತಿ

ಮಹಿಳಾ ಕಾವ್ಯದಲ್ಲೊಂದು ಹೊಸ ಸಂಚಲನ ಸೃಷ್ಟಿ ,ಒಂದು ಗಮನಾರ್ಹ ಸೇರ್ಪಡೆ ಎಂದು  ಶಹಬ್ಬಾಸ್ ಗಿರಿಗಳನ್ನು ಬೆನ್ನಿಗೆ ಗಿಟ್ಟಿಸಿಕೊಳ್ಳುತ್ತಾ ಈಗಾಗಲೆ ಸಾಹಿತ್ಯಾಸಕ್ತರ ಗಮನ ಸೆಳೆದ ಶೋಭಾ ನಾಯಕ್ ಅವರ ‘ಶಯ್ಯಾಗೃಹದ ಸುದ್ದಿಗಳು’  ಒಂದು ವಿಶಿಷ್ಟ ಅಭಿವ್ಯಕ್ತಿಯ ಕವನ ಸಂಕಲನ. ಶೀರ್ಷಿಕೆ ಕೂಡಾ ಹಲವರ ಹುಬ್ಬೇರಿಸಿದ್ದು ಅದರ ವಿಶಿಷ್ಟತೆಯಿಂದಲೇ ಎಂದು ಹೇಳಬಹುದು.

ಬೀಜ ಮಿಗಿಲೋ? ಕ್ಷೇತ್ರವೋ ? ಎರಡೂ ಕತ್ತಲ ಗರ್ಭದ ಕೊಡುಗೆಗಳೇ ಎಂಬ ಸತ್ಯವ ಮನಗಾಣಿಸುತ್ತಲೇ ಬಟ್ಟೆಯುಟ್ಟವರ ಮುಂದೆ ಬೆತ್ತಲೆ ಕವಿತೆಗಳ ಕತ್ತು ಹಿಸುಕುವುದು ಒಂದು ಕೊಲೆಯೇ ಎಂದು ನೇರ ಹೇಳುವ ಎದೆಗಾರಿಕೆಯನ್ನೂ ಇಲ್ಲಿನ ಕವಿತೆಗಳು ತೋರಿಸುತ್ತವೆ.

ನಾನಿಂತವಳಲ್ಲ ಎಂದು ಸುಳ್ಳು ಸಾಬೀತು ಪಡಿಸುವ ಬದಲು ಹೌದು ನಾನು ಹೀಗೇ… ನಿನ್ನ ಹಾಗೇ ಅಲ್ಲವೇ ಎಂದು ಪ್ರಶ್ನೆಗಳ ಎಸೆಯವ ದಿಟ್ಟತನವೂ ಕಾಣುತ್ತದೆ. ಅಭಿವ್ಯಕ್ತಿಯಲ್ಲಿ ಎಲ್ಲೂ ಸಿಟ್ಟು ಆಕ್ರೋಶ ತೋರದೆ ಸಶಕ್ತವಾಗಿ  ಹೊರಹೊಮ್ಮಿ ಮನ ತಾಕುವಂತಿವೆ. ಮುಖವಾಡಗಳ ಮುಖಕ್ಕೆ ಹೊಡೆದಂತೆ ಕೇಳುವ ಪ್ರಶ್ನೆಗಳು ಬೆಚ್ಚಿ ಬೀಳಿಸುತ್ತವೆ. ಉತ್ತರಿಸಲಾಗದೆ ತಡಬಡಾಯಿಸುವಂತೆ ಮಾಡುತ್ತವೆ

ಸೋಗಲಾಡಿ ಸಂಸಾರದಲ್ಲಿ ಅನಾದಿ ಕಾಲದಿಂದ ಗಂಡು ವಿಜೃಂಭಿಸುತ್ತಾ ಹೆಣ್ಣನ್ನು ದ್ವಿತೀಯಳಾಗಿ ಕಾಣುತ್ತಾ ಬಂದಿರುವ ಸಮಾಜದಲ್ಲಿ ಶೋಭಾ ಅವರ ಕವಿತೆಗಳು ದಿಟ್ಟವಾಗಿ ಪ್ರಶ್ನೆಗಳ ಕೇಳುವಂತಿವೆ. ಗಂಡು ಹೆಣ್ಣಿನ ಸುಂದರ ಲೋಕವನ್ನು ಛಿದ್ರಗೊಳಿಸಿ ಕುರೂಪಗೊಳಿಸಿರುವ ಮೇಲು ಕೀಳೆಂಬ ಭಾವ ಗಟ್ಟಿಯಾಗಿ ಮನದಲ್ಲಿ ನೆಲೆಯೂರುವಂತೆ ಮಾಡಿರುವ, ವ್ಯವಸ್ಥಿತವಾಗಿ ಹೆಣ್ಣನ್ನು ತುಳಿಯುತ್ತಿರುವ ವರ್ಗಕ್ಕೆ ಇಲ್ಲಿನ ಕವಿತೆಗಳು ಸವಾಲಾಗಿವೆ. ಸುಂದರವಾದದ್ದೆಲ್ಲಾ ತನಗೇ ಬೇಕೆಂಬ, ಹೆಣ್ಣನ್ನು ತನ್ನ ಭೋಗದ ವಸ್ತುವಾಗಿಸಿಕೊಂಡ ಈ ಪರಂಪರೆಗೆ ನಿನ್ನಂತೆ ನನಗೂ ಸೊಬಗು ಬೇಕು ಮಾರಾಯಾ ಎಂದು ತಣ್ಣಗೆ ಹೇಳುತ್ತಾ ದಂಗುಬಡಿಸುತ್ತಾರೆ.

ಕಾವ್ಯಲೋಕದಲ್ಲಿ ಈ ಸಂಕಲನದ ಅಭಿವ್ಯಕ್ತಿಗಳು ಸಂಚಲನ ಮೂಡಿಸಿದರೂ ಹೊಸದೇನಲ್ಲ. ಹೆಣ್ಣಿನ ಅಭಿವ್ಯಕ್ತಿಯನ್ನು ಭಿನ್ನವಾಗೇ ಗ್ರಹಿಸುವ ಪರಂಪರೆಗೆ ಜೋತುಬಿದ್ದವರು ನಾವು. ಗಂಡಿನ ಎಲ್ಲಾ ಅಭಿವ್ಯಕ್ತಿಗಳೂ ರಸಿಕತೆಗೆ, ಬುದ್ಧಿವಂತಿಕೆಗೆ, ವೈಚಾರಿಕ ಮೇರುತನಕ್ಕೆ ತುಲನೆ ಮಾಡಿ ಕೊಂಡಾಡುವ ವರ್ಗ ಹೆಣ್ಣಿನ ಒಳಲೋಕದ ತಲ್ಲಣಗಳ, ಪ್ರಾಮಾಣಿಕ ಅನಿಸಿಕೆಗಳ ಅಭಿವ್ಯಕ್ತಿಯನ್ನು ಮಾತ್ರ ಹಳದಿ ಕನ್ನಡಕ ಹಾಕಿ ನೋಡುವುದು ದುರಂತವೇ ಸರಿ. ಬಹುಶ ಪ್ರಾಮಾಣಿಕತೆಯನ್ನ ಎದುರಿಸಲಾಗದ ಯಾವುದೋ ಅವ್ಯಕ್ತ ಭಯವೂ ಇದ್ದೀತುಬಿಡಿ.

ನವರಸಗಳನ್ನು ಭಾಷೆಯಲ್ಲಿ ಹಿಡಿದಿಡುವಾಗ ಇಲ್ಲದ ಒಂದು ಮಡಿವಂತಿಕೆ ಶೃಂಗಾರ ರಸದ ವಿಷಯಕ್ಕೆ ಬಂದಾಗ  ಏಕೆ ಕೊಂಚ ಮುಜುಗರಕ್ಕೊಳಗಾಗುತ್ತದೋ ತಿಳಿಯದು…. ಅದೂ ಹೆಣ್ಣು ಅಭಿವ್ಯಕ್ತಿಸುವ ಶೃಂಗಾರರಸದ ಕವಿತೆಗಳಿಗೆ ಮಾತ್ರ ಎಂದು ನಾನು ಹೇಳಬಯಸುತ್ತಿರುವುದು… ಹೆಣ್ಣು ಎಂದರೆ ಹೀಗೇ ಇರಬೇಕೆಂಬ ಒಂದು ಚೌಕಟ್ಟು ಹಾಕಿಯೇ ನೋಡುವ   ಸಿದ್ದ ಪರಂಪರೆಯನ್ನು ಸೃಷ್ಟಿ ಮಾಡಿರುವಾಗ ಸ್ವತಹ ಹೆಣ್ಣಾಗಿ ನಾವುಗಳೂ ಅದನ್ನು ಮೀರುವಾಗ ಅತ್ತಿತ್ತ ನೋಡುವಂತೆ ಮಾಡಿಬಿಡುತ್ತದೆ. ಅಷ್ಟರಮಟ್ಟಿಗೆ ಸಿದ್ದ ರೂಢಿಗಳು ನಮ್ಮನ್ನು ತಯಾರು ಮಾಡಿಬಿಟ್ಟಿರುತ್ತವೆ. ಅದೇ ಸತ್ಯ ಎಂದು ನಂಬಿ ಅದರಿಂದ ಹೊರಬರಲಾಗದೆ ಹೆಣ್ಣುಕುಲ ಚಡಪಡಿಸುತ್ತದೆ. ಆದರೆ ಆಂತರ್ಯದಲ್ಲಿನ ಸಂಘರ್ಷಗಳು,ಒಳಸೆಲೆಗಳು, ಆಸೆ ಆಕಾಂಕ್ಷೆ ಕಾಮನೆಗಳನ್ನು ಪದಗಳಲ್ಲಿ ಹಿಡಿದಿಡುತ್ತಾ ಕಾವ್ಯದ ಮೂಲಕ ಹೊರಹೊಮ್ಮಿಸಿ ಲೋಕಾಂತಗೊಳಿಸುವ ಕ್ರಿಯೆಗೆ ದಿಟ್ಟತನ, ಶಕ್ತಿ ಒಂದು ಪ್ರಾಮಾಣಿಕತೆ ಖಂಡಿತವಾಗಿಯೂ ಬೇಕೇ ಬೇಕಾಗುತ್ತದೆ. ಇಂತಹ ಸೋಗಲಾಡಿತನವನ್ನು ಮುರಿಯುತ್ತಾ ತನ್ನತನವನ್ನು ಶೋಧಿಸಿಕೊಳ್ಳುತ್ತಾ ಕಾವ್ಯದಲ್ಲಿ ಅನಾವರಣಗೊಳಿಸಿರುವ ಪರಿ ಅನನ್ಯವಾದುದು. ಶೋಭಾ ಅವರ ಈ ಸಂಕಲನದ ಕವಿತೆಗಳು ಬರೀ ಸಿದ್ಧ ಪರಂಪರೆಗೊಂದಿಷ್ಟು ಸವಾಲುಗಳನ್ನು ಹಾಕುವುದಾಗಲೀ, ಅದನ್ನು ಮುರಿಯುವ ಉದ್ದೇಶವಷ್ಟೇ ಆಗಲೀ ಅಲ್ಲ. ಬದಲಿಗೆ ತನ್ನ ಅಂತರಂಗ ಶೋಧನೆಯನ್ನೂ ಅದು ಕಾಣಿಸುತ್ತದೆ. ಮೇಲ್ನೋಟಕ್ಕೆ ಅದು ಗಂಡು ಹೆಣ್ಣಿನ ಸಂಬಂಧಗಳ ಕೇಂದ್ರಿತ ಎನಿಸಿದರೂ ಮುಚ್ಚುಮರೆಯಿಲ್ಲದ ತನ್ನ ಆತ್ಮಶೋಧನೆಯ ಸತ್ಯವನ್ನು ದಿಟ್ಟವಾಗಿ ತೆರೆದಿಡುತ್ತದೆ.

ಅನುಭವ ಮಂಟಪಕ್ಕೆ ಬಂದ ಅಕ್ಕನನ್ನು, ಅವಳ ಬತ್ತಲೆಯನ್ನು ಕುರಿತು ಅಲ್ಲಮಪ್ರಭು ಕೇಳಿದ ಪ್ರಶ್ನೆಗಳಿಗೆ ಅಕ್ಕ ಕೊಟ್ಟ ದಿಟ್ಟ ಉತ್ತರಗಳು ಅವಳ ಸ್ಪಷ್ಟ ನಿಲುವನ್ನು ಹೇಗೆ ತೋರಿದವೋ ಹಾಗೆ ಶೋಭ ಅವರ ಕವಿತೆಗಳು ಲೋಕದ ಸಂಶಯ, ಕೊಂಕುಗಳಿಗ ಸ್ಪಷ್ಟ ಉತ್ತರದಂತಿದೆ.

ನಿರ್ಭೀತವಾಗಿ ಮುಕ್ತವಾಗಿ ತನ್ನ ಸಂವೇದನೆಗಳನ್ನು ಅಭಿವ್ಯಕ್ತಿಸುವಲ್ಲಿ ಕವಿತೆಗಳು ಯಶಸ್ವಿಯಾಗಿವೆ. ಏಕೆಂದರೆ ಹೆಣ್ಣುಲೋಕವನ್ನು ಒಂದು ಅಘೋಷಿತ ನಿರ್ಬಂಧದಲ್ಲಿ ಬಂಧಿಸಿರುವಾಗ ಅದನ್ನು ಮೀರುವ ಪ್ರಯತ್ನ ಮಾಡುವುದು ಒಂದು ಸಾಹಸವೇ ಆಗಿದೆ ಈಗ.

ಹೇಳಬೇಕಾದ್ದನ್ನು ಹೇಳಬೇಕಾದ ಕಾಲದಲ್ಲಿ ಹೇಳಲು ಬಾರದಂತೆ ಮಾಡುವ ಲೋಕವೇ ಮುಂದೊಂದು ದಿನ ಎದುರು ನಿಲ್ಲುವ ಆ ದನಿಯನ್ನು ಅಲ್ಲಗೆಳೆಯುತ್ತದೆ ಇಲ್ಲವೇ ಹೀಗಳೆಯುತ್ತದೆ. ಹೆಣ್ಣು ಗಂಡಿನ ಲೋಕ ಬಲು ಸಣ್ಣದು ಮತ್ತು ಅತ್ಯಂತ ದೈಹಿಕವಾದುದು. ಅವೆರಡರ ಆಚೆಯ ಬಯಲು ನಿಸರ್ಗ ಸಹಜವೇ ಆದರೂ ಹೆಣ್ಣಿಗೆ ಅದನ್ನು ನಿಷಿದ್ಧಗೊಳಿಸಲಾಗಿದೆ….ಎಂದು ಕವಿಯತ್ರಿಯವರೇ ಈ ಪುಸ್ತಕದ ತಮ್ಮ ಮಾತುಗಳಲ್ಲಿ ದಾಖಲಿಸುತ್ತಾರೆ. ಈ ಮಾತಿನ ಮೂಲಕವೇ ತಿಳಿಯಬಹುದು ಕವಿ ಏನು ಹೇಳಲು ಬಯಸಿದ್ದಾರೆ ಮತ್ತು ಎಷ್ಟು ಎಚ್ಚರದಿಂದ ಈ ಕವಿತೆಗಳು ರೂಪುಗೊಂಡಿವೆ ಎಂದು. ಪಾರಂಪರಿಕ ಕಟ್ಟುಪಾಡುಗಳಿಂದ ಮುಕ್ತವಾಗಿ ಬಯಲಾಗ ಬಯಸುವ ಹಾಗೂ ತಾನೇನು ಹೇಳುತ್ತಿರುವೆ ಮತ್ತೆ ಯಾಕೆ ಎಂಬ ಸ್ಪಷ್ಟತೆಯೊಂದಿಗೆ ಕವಿತೆಗಳು ಮನತಾಕುತ್ತವೆ. ಮತ್ತಷ್ಟು ಹೊಸತನದ ಹೊಸ ದಿಟ್ಟ ಕವಿತೆಗಳನ್ನು ಕವಿಯತ್ರಿ ಆದಷ್ಟು ಬೇಗ ಕಾವ್ಯ ಪ್ರಿಯರಿಗೆ ಎದುರುಗೊಳ್ಳುವಂತೆ ಮಾಡಲಿ ಎಂದು ಆಶಿಸುತ್ತಾ ಶೋಭಾ ಅವರಿಗೆ ಅಭಿನಂದನೆಗಳೊಂದಿಗೆ ಶುಭ ಕೋರುತ್ತೇನೆ.


ಮಮತಾ ಶಂಕರ್

4 thoughts on “

      1. ವಿಮರ್ಶೆ ಚೆನ್ನಾಗಿದೆ
        ಲೋಕದ ಮಾತುಗಳಿಗೆ ಅಂತರಂಗದ ಸ್ಪಂದನಕ್ಕೇ ಕಾವ್ಯ ಸಶಕ್ತ ಮಾದ್ಯಮ ಅದನ್ನು ಸರಿಯಾಗಿ ಗುರುತಿಸಿದೆ ಅಭಿನಂದನೆಗಳು

        1. ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ

Leave a Reply

Back To Top