ಸಂಕ್ರಾಂತಿಗೊಂದು ಪ್ರಶ್ನೆ
ದುಗುಡದ ಛಾಯೆ ಆವರಿಸಿದ
ಚಿಂತೆಯ ಕಾವಳ ಹೊದ್ದ ಮನಕೆ
ತರಬಹುದೇ ಸಂಕ್ರಾಂತಿ ನಿನ್ನಾಗಮನ
ಹೊಸ ಚೈತನ್ಯದ ಶಾಖದ ಕಾವನು?
ಜಡ್ಡು ಕಟ್ಟಿರುವ ಜೀವನ ಜಾಡ್ಯಕೆ
ಋತು ಪರಿವರ್ತನೆಯ ಔಷಧಿಯೇ?
ಹೇಮಂತನ ಮಬ್ಬು ಆಲಸ್ಯಕೆ
ಮಾಗಿಯ ರೋಗಕೆ ನೀ ಮದ್ದೇ?
ಪ್ರಕೃತಿಗಂತೂ ಈ ಭೂಮಿ ಪರಿಭ್ರಮಣೆ
ನಿತ್ಯ ನೂತನ ಸಂಭ್ರಮ ತರುವ ಆವರ್ತನೆ
ಏಕತಾನತೆಯ ಬೇಸರದ ಬದುಕಿಗೆ
ನೀ ತರಬಹುದೇನು ಹೊಸ ಬದಲಾವಣೆ?
ಬದುಕಿನಿಡೀ ನಡೆಯುತಿದೆ ಬವಣೆ ಕೃಷಿ
ಬರಬಹುದೆ ಈಗ ಸಫಲತೆಯ ಸುಗ್ಗಿ?
ಸಿಗುವುದೇ ಪರಿಶ್ರಮಕ್ಕೊಂದು ಬೆಲೆ
ಬಾಳಪಯಣಕೊಂದು ಗಮ್ಯ ನೆಲೆ?
ಕಾಯುತಲಿದೆ ಹೃದಯ ನೊಂದು ನಲುಗಿ
ಮುದುಡಿ ಸೊರಗಿ ಬಳಲಿ ಬೆಂಡಾಗಿ
ಮೊಗ್ಗಾದ ಭಾವಗಳ ಅರಳಿಸಬಹುದೇ ಎಂದು
ಜರುಗಿ ನಿರೀಕ್ಷಿಸುತಲಿರುವ some ಕ್ರಾಂತಿ?
ಸುಜಾತಾ ರವೀಶ್