ಸಂಕ್ರಾಂತಿ ಬಂತೋ ರತ್ತೋ ರತ್ತೋ
ವಿಶಾಲಾ ಆರಾಧ್ಯ
ಭಾರತವು ಅನೇಕ ಧರ್ಮಗಳನ್ನೊಳಗೊಂಡ ದೇಶ. ಹಬ್ಬಗಳು ಎಲ್ಲಾ ಧರ್ಮಗಳಲ್ಲಿ ಹಾಸು ಹೊಕ್ಕಾಗಿವೆ. ಈ ಹಬ್ಬಗಳಿಗೆ ತನ್ನದೇ ಆದ ವಿಶೇಷ ಹಿನ್ನೆಲೆ ಮತ್ತು ಪ್ರತೀಕಗಳು ಇವೆ. ಭಾರತೀಯರೆಲ್ಲಾ ಕೂಡಿ ಆಚರಿಸುವ ಹಬ್ಬಗಳು ಒಂದೆಡೆಯಾದರೆ. ಆಯಾ ಧರ್ಮದವರು ಆಚರಿಸುವ ಹಬ್ಬಗಳು ಮತ್ತೊಂದು. ಉತ್ತರಭಾರತದಲ್ಲಿ ಆಚರಿಸುವ ಹಬ್ಬಗಳು ಒಂದೆಡೆಯಾದರೆ.. ಅದೇ ಹಬ್ಬಗಳನ್ನು ಬೇರೆ ಹೆಸರಿನಿಂದ ದಕ್ಷಿಣ ಭಾರತೀಯರು ಆಚರಿಸುತ್ತಾರೆ. ಇಂತಹ ಹಬ್ಬಗಳಲ್ಲಿ ಸಂಕ್ರಾಂತಿಯು ನಮ್ಮ ದಕ್ಷಿಣ ಭಾರತೀಯರಿಗೆ ಅದರಲ್ಲೂ ಹಿಂದೂಗಳಿಗೆ ಇದು ಮಹತ್ವದ ಹಬ್ಬವಾಗಿದೆ.
ಇದು ರೈತಾಪಿ ಹಬ್ಬವಾಗಿದೆ. ಇದನ್ನು ಹೊಲಗದ್ದೆಗಳಲ್ಲಿ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವು ನಾಡಿನ ರೈತಾಪಿ ಜನಗಳ ಸಮೃದ್ಧಿಯ ಸಂಕೇತವಾಗಿದೆ. ಈ ಸಂಕ್ರಾಂತಿಯು ಧಾರ್ಮಿಕ ತತ್ವಗಳಿಂದ ಬೇರ್ಪಟ್ಟು ಆಚರಿಸಿದರೂ ಸಹ ಇದಕ್ಕೆ ಜ್ಯೋತಿಷ್ಯ ಶಾಸ್ತ್ರದ ಅಡಿಪಾಯವೂ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂಗಳು ಆಚರಿಸುವುದು ವಾಡಿಕೆ. ಈ ಸಂಕ್ರಾಂತಿಯನ್ನು ಮಕರ ಸಂಕ್ರಾಂತಿಯೆಂದು ಕರೆಯಲಾಗುತ್ತದೆ. ಇದನ್ನು ಪ್ರತಿವರ್ಷ ಜನವರಿ ೧೪ ರಂದು ಆಚರಿಸಲಾಗುತ್ತದೆ. ಇದಕ್ಕೆ ಉತ್ತರಾಯಣ ಎಂದೂ ಕರೆಯಲಾಗುತ್ತದೆ. ಈ ದಿನ ಸೂರ್ಯ ತನ್ನ ಪಥವನ್ನು ಬದಲಿಸಿ ಮಕರ ರಾಶಿಗೆ ಪ್ರವೇಶಿವನು. ಅದಕ್ಕಾಗಿ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಹಬ್ಬದಲ್ಲಿ ವಿಶೇಷವಾಗಿ ಗಂಗಾ, ಯಮುನ ಮತ್ತು ಪ್ರಯಾಗ ಸೇರಿದಂತೆ ಯಾವುದೇ ನದಿಯಲ್ಲಿ ಸ್ನಾನಮಾಡಿದರೆ ಮೋಕ್ಷವೆಂದು ಪರಿಗಣಿಸಲಾಗಿದೆ.
ಈ ಹಬ್ಬದಲ್ಲಿ ಸೂರ್ಯನ ಪೂಜೆ ವಿಶೇಷವಾಗಿರುತ್ತದೆ. ಹಳ್ಳಿಯ ಮೂಲದ ಈ ಹಬ್ಬದಲ್ಲಿ ಮುಂಜಾನೆಯೇ ಹೆಂಗೆಳೆಯರು ಮನೆಮುಂದೆ ಸಗಣಿಯಿಂದ ಸಾರಿಸಿ ರಂಗೋಲಿಯಿಂದ ಸಿಂಗರಿಸುತ್ತಾರೆ. ಮನೆಯಲ್ಲಿ ಮತ್ತು ಹಳ್ಳಿಯಲ್ಲಿ ಅಂದು ವಿಶೇಷ ಕಳೆತುಂಬಿರುತ್ತದೆ. ಸಂಕ್ರಾಂತಿಗೆ ರೈತರು ತಮ್ಮ ವ್ಯವಸಾಯಕ್ಕೆ ನೆರವಾದ ಎತ್ತುಗಳಿಗೆ ಸ್ನಾನ ಮಾಡಿಸಿ, ಕೊಂಬುಗಳಿಗೆ ಬಣ್ಣಹಚ್ಚಿ, ವಿವಿಧ ಬಣ್ಣದ ರಿಬ್ಬನ್ ಗಳಿಂದ ಸಿಂಗರಿಸಿ ಗೋಮಾತೆಯೊಂದಿಗೆ ಪೂಜಿಸುವರು. ಬೆಳೆದ ಧಾನ್ಯಗಳಾದ ಕಡಲೆಪಪ್ಪು, ಬೆಲ್ಲ, ಎಳ್ಳು, ಕಡಲೆಬೀಜಗಳನ್ನು ಹುರಿದು ಅದರೊಂದಿಗೆ ಸಕ್ಕರೆ ಅಚ್ಚು ಮುಂತಾದವನ್ನು ಬೆರೆಸಿ ಕಬ್ಬಿನ ಜಲ್ಲೆಯೊಂದಿಗೆ ಅಕ್ಕ ಪಕ್ಕದ ಸ್ನೇಹಿತರಿಗೆ ಹಂಚಿ “ಎಳ್ಳು ಬೆಲ್ಲ ತಿನ್ನೋಣ, ಒಳ್ಳೆ ಮಾತನಾಡೋಣ” ಎಂದು ಪರಸ್ಪರ ಹೇಳುತ್ತಾ……. ಹಿಂದಿನ ದ್ವೇಷ, ಕೋಪ, ಮನಸ್ತಾಪಗಳನ್ನು ಮರೆತು ಸಂತೋಷದಿಂದ ಮುಂದಿನ ದಿನಗಳನ್ನು ಕಳೆಯಲು ಸ್ನೇಹದ ಹಸ್ತ ಚಾಚುವ ಹಬ್ಬವಾಗಿದೆ. ಕೆಲವರು ಈ ಹಬ್ಬದಲ್ಲಿ ಹೆಸರುಬೇಳೆ ಮತ್ತು ತರಕಾರಿಗಳನ್ನು ಸೇರಿಸಿ ಮಾಡಿದ ಕಿಚಡಿ ಅನ್ನವನ್ನು ರುಚಿಯಾಗಿ ತಯಾರಿಸಿ ಸವಿಯುವರು. ಇದನ್ನೇ ಅನೇಕರು ಪೊಂಗಲ್ ಎಂದೂ ಕರೆಯುವರು.
ಈ ವರ್ಷದ ಸಂಕ್ರಾಂತಿ ಎಲ್ಲರಿಗೂ ಸಂತಸ ತರಲಿ, ನಮ್ಮನ್ನೆಲ್ಲಾ ಕಾಡುತ್ತಿರುವ ಕೊರೋನ ಬೇಗ ನಾಶಹೊಂದಿ ಜನರು ನಿರ್ಭಯವಾಗಿ ಸರಳ ಜೀವನ ನಡೆಸುವಂತಾಗಲಿ ಎಂದು ತಿಳಿಸುತ್ತಾ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ತಮಗೆಲ್ಲಾ.
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದರೆ ಸಂಕ್ರಾಂತಿ ಕೊಟ್ಟಿತ್ತು ಅಭಿನಂದನೆಗಳು ವಿಶಾಲ ರವರೆ