ದಾರಾವಾಹಿ

ಆವರ್ತನ

ಅದ್ಯಾಯ51

Naga Puja - Lifestyle & Culture Photos - grousers snapshots

ಚಿಟ್ಟೆಹುಲಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾದ ರಾಘವ ಮೂರುದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ. ಆದರೆ ಅವನ ಸಾವಿನ ಸುದ್ದಿ ಕೇಳಿದ ಗುರೂಜಿಯವರು ಮಾತ್ರ ಅಸಾಧ್ಯ ದುಃಖದಿಂದ ನರಳಾಡಿಬಿಟ್ಟರು. ಯಾವ ಹೊತ್ತಿನಲ್ಲೂ, ಎಂಥ ಕೆಲಸಕ್ಕಾದರೂ ಸೈ ಎಂದೆನ್ನಿಸಿಕೊಂಡಿದ್ದಂಥ ಮಹಾ ಧೈರ್ಯಶಾಲಿ ರಾಘವನು ತಮ್ಮ ಬಲಗೈಬಂಟನಂತಿದ್ದವನು! ಅಷ್ಟಲ್ಲದೇ ತಮ್ಮ ಈಚೀಚೆಗಿನ ಒಂದು ಮಟ್ಟದ ಗೆಲುವಿಗೂ ಅವನೇ ಕಾರಣನಾಗಿದ್ದ. ಅಂಥವನು ಇಷ್ಟು ಬೇಗ ಕಳೆದು ಹೋದನೆಂದರೆ ಅದು ತಮಗೆ ತುಂಬಲಾರದ ನಷ್ಟವೇ ಸರಿ! ಇನ್ನು ಮುಂದೆ ಅಂಜನ ಹಾಕಿ ಹುಡುಕಿದರೂ ಅಂಥವನೊಬ್ಬ ಸಿಕ್ಕಲು ಸಾಧ್ಯವಾ… ಖಂಡಿತಾ ಇಲ್ಲ! ಎಂದು ಗುರೂಜಿಯವರು ಕೊರಗುತ್ತಲೇ ಆಸ್ಪತ್ರೆಗೆ ಧಾವಿಸಿದರು. ಅಲ್ಲಿ ಛಾವಣಿ ಕಿತ್ತು ಹೋಗುವಂತೆ ರೋಧಿಸುತ್ತಿದ್ದ ರಾಘವನ ಪತ್ನಿ ಮಯೂರಿಯನ್ನೂ ಅವನ ಮಕ್ಕಳನ್ನೂ ಮತ್ತು ಹೆತ್ತವರನ್ನೂ ಕಂಡವರು ಸ್ವಲ್ಪಹೊತ್ತು ತಾವೂ ಗೋಡೆಗೊರಗಿ ತಣ್ಣಗೆ ಕಣ್ಣೀರಿಟ್ಟರು. ನಂತರ ಸುಧಾರಿಸಿಕೊಂಡು ತಾವೇ ಅವರೆಲ್ಲರನ್ನೂ ಸಮಾಧಾನಿಸಿ ಆಸ್ಪತ್ರೆಯ ಬಿಲ್ಲು ಪಾವತಿಸಿ ಹೆಣವನ್ನು ಅವನ ಮನೆಗೆ ಕೊಂಡು ಹೋಗುವ ವ್ಯವಸ್ಥೆಯನ್ನೂ ಮಾಡಿಸಿದರು. ಅಷ್ಟುಮಾತ್ರಲ್ಲದೇ ರಾಘವನ ಹೆಣ ಸುಡುವ ಮುಂಚಿನ ವಿಧಿಯಾಚರಣೆಗಳೆಲ್ಲ ಮುಗಿಯುವವರೆಗೆ ಅವನ ಮನೆಯಂಗಳದ ಹಲಸಿನಮರದ ಕಟ್ಟೆಯಲ್ಲಿ ಗೋಮುಖಾಸನದಲ್ಲಿ ಕುಳಿತುಕೊಂಡು ಎಲ್ಲವನ್ನೂ ವ್ಯವಸ್ಥಿತವಾಗಿ ನಡೆಸಿಕೊಟ್ಟರು.

   ಸುತ್ತಮುತ್ತಲಿನ ಹತ್ತೂರುಗಳಲ್ಲಿ ದೇವಮಾನವರಂಥ ಪ್ರಸಿದ್ಧಿಯನ್ನು ಪಡೆದಿರುವ ಏಕನಾಥ ಗುರೂಜಿಯವರು ಆಸ್ಪತ್ರೆಯ ದೊಡ್ಡ ಮೊತ್ತವನ್ನು ಪಾವತಿಸಿದ್ದಲ್ಲದೇ ಗಂಡನ ಹೆಣವನ್ನೂ ಮನೆಗೆ ತಂದು ತಮ್ಮಂಥ ಬಡವರ ಮನೆಯಂಗಳದಲ್ಲಿ, ನೆರೆಕರೆಯವರ ಕಣ್ಣು ಕುಕ್ಕುವಂತೆ ಕುಳಿತುಕೊಂಡು ಬಂದವರಿಗೆಲ್ಲ ಆಶೀರ್ವದಿಸುತ್ತಿದ್ದುದನ್ನು ನೋಡುತ್ತಿದ್ದ ಮಯೂರಿಗೆ ಅವರ ಮೇಲೆ ಅಪಾರ ಗೌರವಾಭಿಮಾನಗಳು ಮೂಡಿದ್ದವು. ಸಾವಿನ ವಿಧಿಗಳೆಲ್ಲ ಮುಗಿದು, ಮನೆಮಂದಿ ಮತ್ತು ನೆರಕರೆಯವರೂ ಕೂಡಿ ಹೆಣವನ್ನು ಮನೆಯೆದುರಿನ ಹಾಡಿಯೊಳಗೆ ಸುಡಲು ಕೊಂಡು ಹೋದ ನಂತರ ಗುರೂಜಿಯವರು ಮಯೂರಿಯನ್ನು ಹತ್ತಿರ ಕರೆದವರು, ‘ನೋಡಮ್ಮಾ, ನಿನ್ನ ಗಂಡ ಒಬ್ಬ ಸಾಧಾರಣ ಮನುಷ್ಯನೆಂದು ಎಂದಿಗೂ ಭಾವಿಸಬೇಡ. ಯಾಕೆಂದರೆ ಅವನು ನಮ್ಮ ನಾಗದೇವನ ಸೇವೆ ಮಾಡುತ್ತಿದ್ದಾಗಲೇ ಆ ದೇವನ ಪಾದ ಸೇರಿದ್ದಾನೆ. ಯಾರಿಗಾದರೂ ಅಂಥ ಮರಣ ಬರಬೇಕಾದರೆ ಪೂರ್ವಜನ್ಮದ ಪುಣ್ಯವಿರಬೇಕಮ್ಮಾ! ಆದ್ದರಿಂದ ಇನ್ನು ಮುಂದೆ ಅವನ ಬಗ್ಗೆ ಚಿಂತಿಸಿ ಅಳುತ್ತ ಅವನ ಆತ್ಮಕ್ಕೆ ನೋವುಂಟು ಮಾಡಬೇಡ. ಆ ದೇವರು ಎಂದಿಗೂ ನಿಮ್ಮ ಕೈಬಿಡುವುದಿಲ್ಲ. ನಿನ್ನ ಕುಟುಂಬದೊಂದಿಗೆ ನಾವೂ ಇದ್ದೇವೆ ಅನ್ನುವುದನ್ನೂ ಮರೆಯಬೇಡ!’ ಎಂದು ಗಂಡನ ಬಗ್ಗೆ ಅವಳಲ್ಲಿ ಎಂದೂ ಮೂಡಿರದ ಗೌರವವನ್ನೂ ಗಟ್ಟಿ ಭರವಸೆಯನ್ನೂ ನೀಡಿದರು. ನಂತರ ಇಪ್ಪತ್ತು ಸಾವಿರ ರೂಪಾಯಿಗಳನ್ನು ತೆಗೆದು, ‘ತಕೋಮ್ಮಾ, ಸದ್ಯಕ್ಕೆ ಇದನ್ನಿಟ್ಟುಕೋ. ಮುಂದಿನ ಖರ್ಚಿಗೆ ಬೇಕಾಗುತ್ತದೆ. ಸರಕಾರದಿಂದಲೂ ಮತ್ತು ಇತರ ಕೆಲವು ಸಂಘ, ಸಂಸ್ಥೆಗಳಿಗೂ ಪರಿಹಾರ ಬರುವ ಹಾಗೆ ಅರ್ಜಿ ಹಾಕಿಸುವ ವ್ಯವಸ್ಥೆ ಮಾಡಿಸುತ್ತೇವೆ. ಒಟ್ಟಿನಲ್ಲಿ ನೀನು ಯಾವುದಕ್ಕೂ ಚಿಂತಿಸಬಾರದು. ಮುಂದೆನಾದರೂ ಸಹಾಯ ಬೇಕಿದ್ದರೆ ಸಂಕೋಚಪಡದೆ ಬಂದು ಕೇಳಬೇಕು ಆಯ್ತಾ…?’ ಎಂದು ಧೈರ್ಯ ತುಂಬಿ, ಅವಳು ನೀಡಿ ನಿಂತ ಕೈಗಳಿಗೆ ರೂಪಾಯಿಗಳನ್ನೆತ್ತಿ ಎಸೆದರು.

   ಗುರೂಜಿಯವರ ಹಿತನುಡಿಗಳಿಗೂ ಮತ್ತು ಉದಾರತೆಗೂ ಮಯೂರಿ ಮೂಕಳಾದಳು. ತನ್ನ ಗಂಡ ಜೀವಂತವಿದ್ದಾಗ ಮನೆಯ ಮೇಲ್ಖರ್ಚಿಗೆ ಒಂದೈನೂರು ರೂಪಾಯಿ ಕೇಳಿದರೂ ಒಂದು ವಾರ ಸತಾಯಿಸಿ, ಪೀಡಿಸಿ ಕೊನೆಗೊಂದಷ್ಟು ಬೈದ ನಂತರವೇ ಇನ್ನೂರೋ, ಮುನ್ನೂರೋ ಬಿಸಾಕಿ ಹೋಗುತ್ತಿದ್ದ. ಅಂಥದ್ದರಲ್ಲಿ ಇಂದು ಅವನಿಂದಾಗಿಯೇ ತನ್ನ ಕೈಯಲ್ಲಿ ಎರಡು ಸಾವಿರ ಮುಖಬೆಲೆಯ ಗರಿಗರಿಯಾದ ಹತ್ತು ನೋಟುಗಳು! ಅಯ್ಯೋ ದೇವರೇ! ತಪ್ಪಾಯ್ತು ಮಾರಾಯ್ರೇ…! ನೀವು ಮನೆಯಲ್ಲಿ ನಮ್ಮೊಂದಿಗೆ ಹೇಗಿದ್ದಿರೋ ಎನ್ನುವುದಕ್ಕಿಂತಲೂ ಹೊರಗಡೆ ಇಷ್ಟೊಂದು ದೊಡ್ಡ ಜನವಾಗಿದ್ದಿರೆಂದು ನಾನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ! ತಪ್ಪಾಗಿ ತಿಳಿದುಬಿಟ್ಟೆ ನಿಮ್ಮನ್ನು. ಕ್ಷಮಿಸಿಬಿಡ್ರೀ…!’ ಎಂದು ದುಃಖದಿಂದ ಬೇಡಿಕೊಂಡಳು. ಅವಳ ಕಣ್ಣೀರು ನೋಡಿದ ಗುರೂಜಿಯವರು ಮತ್ತಷ್ಟು ಸಾಂತ್ವನ ಹೇಳಿದರು. ಆದ್ದರಿಂದ ಅವಳು ಮಂಡಿಯೂರಿ ಕುಳಿತು ಗುರೂಜಿಯವರ ಪಾದಗಳೆದುರಿನ ನೆಲವನ್ನು ಭಕ್ತಿಯಿಂದ ಮುಟ್ಟಿ ಕಣ್ಣಿಗೊತ್ತಿಕೊಂಡಳು. ಗುರೂಜಿಯವರು ತೃಪ್ತರಾಗಿ ಎದ್ದು ಮನೆಗೆ ಹಿಂದಿರುಗಿದರು.

   ರಾಘವನ ಅಂತ್ಯಕ್ರಿಯೆಯನ್ನು ನೆರವೇರಿಸಿ ಮನೆಗೆ ಹಿಂದಿರುಗಿದ ಗುರೂಜಿಯವರು ತಮ್ಮ ಮೈಲಿಗೆಯ ವಸ್ತ್ರಗಳನ್ನು ಕಳಚಿ ಬಾವಿಕಟ್ಟೆಯಲ್ಲಿಟ್ಟು ಮೈಕೈ ಉಜ್ಜಿ ಸ್ನಾನ ಮಾಡಿ ಸೂತಕ ಕಳೆದುಕೊಂಡರು. ದೇವಕಿ ಕೊಟ್ಟ ಶುಭ್ರ ಬಟ್ಟೆಯನ್ನುಟ್ಟು ಒಳಗೆ ಬಂದು ಹತಾಶೆಗೊಂಡಿದ್ದ ತಮ್ಮ ಮನಸ್ಸನ್ನು ಹತೋಟಿಗೆ ತಂದುಕೊಳ್ಳುತ್ತ ಕಾಲು ಚಾಚಿ ಕುಳಿತರು. ಇತ್ತ, ರಾಘವನ ಸಾವು ತನ್ನ ಗಂಡನ ಮೇಲೆ ಅದೆಂಥ ಪರಿಣಾಮ ಬೀರಿದೆ ಎನ್ನುವುದನ್ನು ಅರಿತಿದ್ದ ದೇವಕಿಯು ಕೂಡಲೇ ಕಾಫಿ ಮಾಡಿ ತಂದು ನಗುತ್ತ ಗಂಡನಿಗೆ ಕೊಟ್ಟಳು. ಆದರೆ ಗುರೂಜಿಯವರು ಅವಳಿಗೆ ಪ್ರತಿಕ್ರಿಯಿಸದೆ ಗಂಭೀರವಾಗಿ ಕಾಫಿ ಕುಡಿಯತೊಡಗಿದರು. ಆದ್ದರಿಂದ ದೇವಕಿಯು, ‘ರಾಘವನ ಕೆಲಸವನ್ನೆಲ್ಲ ಮುಗಿಸಿ ಬಂದ್ರಾ…?’ ಎಂದು ಮೃದುವಾಗಿ ಕೇಳಿದಳು. ‘ಹೌದು ಮಾರಾಯ್ತೀ…ಎಲ್ಲಾ ಮುಗಿವಷ್ಟು ಹೊತ್ತಿಗೆ ಸಾಕು ಸಾಕಾಯಿತು!’ ಎಂದುತ್ತರಿಸಿದ ಗುರೂಜಿಯವರ ಮುಖವು ತಟ್ಟನೆ ಮುದುಡಿತು. ಅದನ್ನು ಕಂಡ ದೇವಕಿ, ‘ಆಗಿದ್ದು ಆಗಿ ಹೋಯ್ತು ಮಾರಾಯ್ರೇ. ಹುಟ್ಟು ಸಾವು ಯಾರ ಕೈಯಲ್ಲಿದೆ ಹೇಳಿ? ನಡೆದು ಹೋದುದರ ಬಗ್ಗೆ ಇನ್ನು ಚಿಂತಿಸಿ ಫಲವುಂಟಾ? ಅವನ ವಿಷಯವನ್ನು ನೀವು ಅಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಆರೋಗ್ಯ ಕೆಡುತ್ತದೆ!’ ಎನ್ನುತ್ತ ಸಾಂತ್ವನಿಸಲು ಪ್ರಯತ್ನಿದಳು.

   ಅದಕ್ಕೆ ಗುರೂಜಿಯವರು, ‘ಮನಸ್ಸಿಗೆ ಹಚ್ಚಿಕೊಳ್ಳದಿರುವುದು ಅಷ್ಟೊಂದು ಸುಲಭವೆಂದುಕೊಂಡೆಯಾ ದೇವಕೀ…? ನಮ್ಮ ವ್ಯವಹಾರಕ್ಕೆ ರಾಘವ ಮೂರನೆಯ ಕಣ್ಣಿನಂತಿದ್ದವನು. ಬಹಳ ನಂಬಿಕಸ್ಥ ಮನುಷ್ಯ ಅಂತ ನಿನಗೂ ಗೊತ್ತಿತ್ತಲ್ಲವಾ? ಅಂಥವನನ್ನು ಇನ್ನು ಮುಂದೆ ಎಲ್ಲೀಂತ ಹುಡುಕುವುದು ಹೇಳು? ಅಷ್ಟಲ್ಲದೇ ಇನ್ನು ಮುಂದೆ ಅವನಿಲ್ಲದೆ ನಮ್ಮ ಕೆಲವು ವ್ಯವಹಾರಗಳು ನಡೆಯುವುದೇ ಕಷ್ಟ ಎಂಬಂತಾಗಿಬಿಟ್ಟಿದೆ. ಹಾಗಾಗಿ ಈಗ ಅದೇ ಚಿಂತೆಯೇ ನಮ್ಮನ್ನು ಕಾಡುತ್ತಿರುವುದು!’ ಎಂದು ತಲೆಗೆ ಕೈಹೊತ್ತು ಕುಳಿತರು. 

‘ಅಯ್ಯೋ ದೇವರೇ! ಹಾಗೆಲ್ಲ ಏನೂ ಆಗುವುದಿಲ್ಲರೀ…! ನೀವು ಸುಮ್ಮನೆ ಏನೇನೋ ಯೋಚಿಸಿ ಚೈತನ್ಯ ಕಳೆದುಕೊಳ್ಳಬೇಡಿ. ಅವನಿಗಿಂತ ಹುಷಾರಿನವನು ಯಾವನಾದರೊಬ್ಬ ಸಿಕ್ಕೇ ಸಿಗುತ್ತಾನೆ ನೋಡುತ್ತಿರಿ!’ ಎಂದು ಉತ್ಸಾಹದಿಂದ ಅಂದ ದೇವಕಿ ತಟ್ಟನೆ ಗಂಭೀರಳಾಗಿ, ‘ಆದರೂ ಒಂದು ಮಾತು ಹೇಳುತ್ತೇನೆ ಬೇಸರಿಸಬೇಡಿ. ಇಷ್ಟು ವರ್ಷಗಳ ಕಾಲ ಹಗಲುರಾತ್ರಿಯೆನ್ನದೆ ದುಡಿಯುತ್ತ ನಮಗಾಗಿ ಎಷ್ಟೆಲ್ಲ ಕಷ್ಟಪಟ್ಟಿದೀರಿ. ಆದರೆ ಈಗೀಗ ನೀವು ಇನ್ನಷ್ಟು ಮತ್ತಷ್ಟು ಮಗದಷ್ಟು ಅಂತ ಒಟ್ಟು ಗೂಡಿಸುತ್ತ ಒದ್ದಾಡುವುದಾದರೂ ಯಾರಿಗಾಗಿ ಹೇಳಿ? ಮಕ್ಕಳ ಭವಿಷ್ಯವನ್ನೂ ಉತ್ತಮ ಮಟ್ಟದಲ್ಲಿ ರೂಪಿಸುತ್ತಿದ್ದೀರಿ. ಅವರ ನಂತರವೂ ಎರಡು ಮೂರು ತಲೆಮಾರಿಗಾಗುವಷ್ಟು ಆಸ್ತಿಪಾಸ್ತಿ ನಮ್ಮ ಹತ್ತಿರವಿದೆ. ಹೀಗಿರುವಾಗ ಇನ್ನು ಮುಂದಾದರೂ ಈ ಎಲ್ಲ ಬೇಡದ ವ್ಯವಹಾರಗಳನ್ನೂ ಮತ್ತವುಗಳ ತಾಪತ್ರಯಗಳನ್ನೂ ಬದಿಗಿಟ್ಟು ಮುಂದಿನ ಜೀವನವನ್ನು ಒಂದಷ್ಟು ನೆಮ್ಮದಿಯಿಂದ ಬದುಕುವ ಮಾರಾಯ್ರೇ!’ ಎಂದು ಮೃದುವಾಗಿ ಹೇಳಿದಳು. ಆದರೆ ಅವಳ ಮಾತು ಕೇಳಿದ ಗುರೂಜಿಯವರಿಗೆ ತಟ್ಟನೆ ರೇಗಿಬಿಟ್ಟಿತು. ‘ನೀನೊಬ್ಬಳು ಏನೂಂತ ಮಾತಾಡ್ತಿದ್ದಿ ಮಾರಾಯ್ತೀ…? ಕೂತುಂಡರೆ ಕೊಪ್ಪರಿಗೆ ಹೊನ್ನೂ ಸಾಲದು ಅಂತ ಗಾದೆಯೇ ಉಂಟು. ಗೊತ್ತಿಲ್ಲವಾ ನಿನಗೆ! ಮೂರು ತಲೆಮಾರೋ ನಾಲ್ಕು ತಲೆಮಾರೋ ಅದೆಲ್ಲ ನಮಗೆ ಗೊತ್ತಿಲ್ಲ. ಉದ್ಯೋಗಂ ಪುರುಷ ಲಕ್ಷಣಂ ಅಷ್ಟೇ. ನಮ್ಮದೊಂದು ಕನಸಿದೆ. ಅದು ನೆರವೇರುವ ತನಕ ಅದೇನೇ ಆದರೂ ನಾವು ಮಾತ್ರ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ!’ ಎಂದು ಕಡ್ಡಿ ಮುರಿದಂತೆ ಅಂದವರು, ‘ನಾವಿಲ್ಲಿ ನಮ್ಮ ಹೆಗಲಿಗೆ ಹೆಗಲು ಕೊಟ್ಟು ದುಡಿಯುವವನೊಬ್ಬ ಹೋಗಿಬಿಟ್ಟನಲ್ಲಪ್ಪಾ…! ಅಂತ ಚಿಂತೆಯಲ್ಲಿದ್ದರೆ ಅದರ ನಡುವೆ ನಿನ್ನದೊಂದು ಬೇರೆಯೇ ರಾಗ! ನಿನಗಿದೆಲ್ಲ ಅರ್ಥವಾಗುವುದಿಲ್ಲ. ಹೋಗು ಹೋಗು ಕೆಲಸ ನೋಡಿಕೋ!’ ಎಂದು ಒರಟಾಗಿ ಹೇಳಿದರು.

“ಹಾಗಲ್ಲ ಮಾರಾಯ್ರೇ, ಮೊನ್ನೆ ನಿಮ್ಮ ಎದೆ ನೋವಿನ ಟೆಸ್ಟಿಗೆ ಹೋಗಿದ್ದಾಗ ಆ ಡಾಕ್ಟ್ರು ಏನು ಹೇಳಿದರು ಅಂತನಾದರೂ ನೆನಪಿದೆಯಾ ನಿಮಗೇ? ‘ನೀವು ತುಂಬಾ ಟೆನ್ಷನ್ ಮಾಡ್ಕೊಳ್ತಾ ಇರುತ್ತೀರಿ ಅಂತ ಕಾಣುತ್ತೆ. ಹಾಗಾಗಿ ಹಾರ್ಟಿಗೆ ಒತ್ತಡ ಬಿದ್ದು ಎದೆ ನೋವು ಬರುತ್ತಿರುವುದು. ಸ್ವಲ್ಪ ಜಾಗ್ರತೆ ಮಾಡಿ!’ ಅಂತ ಡಾಕ್ಟರ್ ಹೇಳಿದ್ದಕ್ಕಾದರೂ ನೀವು ಸ್ವಲ್ಪ ಆರಾಮವಾಗಿರಬೇಕಲ್ವಾ…?” ಎಂದು ದುಗುಡದಿಂದ ಹೇಳಿದ ದೇವಕಿ ಎದ್ದು ಒಳಗೆ ನಡೆದಳು. ಹೆಂಡತಿಯ ಮಾತಿನಿಂದ ಗುರೂಜಿಯವರಿಗೆ ತುಸು ಆತಂಕವಾಯಿತು. ಹೌದು, ಹೌದು! ಕೆಲವೊಮ್ಮೆ ತಾವು ತುಂಬಾ ಟೆನ್ಷನ್‍ನಲ್ಲಿರುವಾಗ ಎದೆಯೊಳಗೇನೋ ಬಿಗಿಯಾಗಿ ಹಿಡಿದುಕೊಂಡಂತೆ ನೋವಾಗುತ್ತದೆ! ಎಂದುಕೊಂಡು ಆ ಯೋಚನೆಯಿಂದಲೇ ಹೆದರಿದವರು, ದೇವಕಿ ಹೇಳಿದ್ದು ಸರಿ. ಇನ್ನು ಮುಂದೆ ಆದಷ್ಟು ಸಮಾಧಾನದಿಂದ ಇರಲು ಪ್ರಯತ್ನಿಸಬೇಕು ಎಂದೂ ಯೋಚಿಸಿದರು. ಆದರೆ ಮರುಕ್ಷಣ, ನಮ್ಮ ಕಿರಣ್‍ಪ್ರಭು ಅವರೇನೂ ಸಾಧಾರಣವಾದ ಡಾಕ್ಟರ್ ಅಲ್ಲ. ಬಹಳ ಫೇಮಸ್ ಹಾರ್ಟ್ ಸ್ಪೆಷಲಿಸ್ಟ್! ಅಂಥವರ ಔಷಧಿ ಇರುವಾಗ ಭಯವೆಂಥದ್ದು ಕರ್ಮ! ಎಂದುಕೊಂಡವರು ತಣ್ಣಗಾಗಿದ್ದ ಕಾಫಿಯನ್ನು ಎರಡೇ ಗುಟುಕಿನಲ್ಲಿ ಕುಡಿದು ಮತ್ತೆ ರಾಘವನ ಯೋಚನೆಗೆ ಹೊರಳಿದರು.

   ಛೇ, ಛೇ…! ಎಂಥ ಮನುಷ್ಯನನ್ನು ಕಳೆದುಕೊಂಡೆವಪ್ಪಾ…! ಆ ಬಂಡೆಗಳ ಹತ್ರ ಅಂಥ ದರಿದ್ರ ಮೃಗಗಳು ವಾಸಿಸುತ್ತವೆ ಅಂತ ಸುರೇಂದ್ರಯ್ಯ ತಮಗೆ ಒಂದು ಮಾತೂ ಹೇಳಲಿಲ್ಲವಲ್ಲ! ಆ ವಿಷ್ಯ ಗೊತ್ತಿದ್ದರೆ ಖಂಡಿತಾ ನಾವು ಆ ಜಾಗದ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಆದರೆ ಲಫಂಗ ಸುರೇಂದ್ರಯ್ಯ ಅಲ್ಲಿಯೇ ಹುಟ್ಟಿ ಬೆಳೆದವನು ವಿಷಯವನ್ನೇ ಮುಚ್ಚಿಟ್ಟು ಭಾರೀ ದೊಡ್ಡ ನಷ್ಟ ಮಾಡಿಬಿಟ್ಟನಲ್ಲ! ಎಂದುಕೊಂಡು ಸಂಕಟಪಟ್ಟರು. ಆದರೆ ಬಳಿಕ ಅವರಿಗೆ ಮತ್ತೊಂದು ವಿಚಾರವೂ ಹೊಳೆಯಿತು. ಹೌದು, ರಾಘವ ಹೋದದ್ದು ತಮಗೆ ತುಂಬಲಾರದ ನಷ್ಟವೇನೋ ನಿಜ. ಅದರಲ್ಲಿ ಎರಡು ಮಾತಿಲ್ಲ. ಆದರೆ ಮತ್ತೊಂದು ದೃಷ್ಟಿಯಲ್ಲಿ ಯೋಚಿಸಿದರೆ ಅವನು ಸತ್ತು ಹೋದುದು ಒಳ್ಳೆಯದೇ ಆಗಲಿಲ್ಲವಾ? ಎಂದುಕೊಂಡವರಲ್ಲಿ ತಟ್ಟನೆ ಸಮಾಧಾನ ಮೂಡಿತು. ಆದರೆ ಮರುಕ್ಷಣ ತಮ್ಮ ಯೋಚನೆಗೆ ತಾವೇ ಬೆಚ್ಚಿಬಿದ್ದವರು, ಛೇ, ಛೇ! ಹಾಗೆಲ್ಲ ಯೋಚಿಸುವುದು ತಪ್ಪು ಎಂದು ಪಶ್ಚಾತ್ತಾಪಪಟ್ಟರು. ಆದರೆ ಮತ್ತೆ ಅವರ ಮನಸ್ಸು ಅದೇ ಯೋಚನೆಯನ್ನು ಮೆಲುಕು ಹಾಕಿತು. ಯಾಕೆ ಯೋಚಿಸಬಾರದು? ತಮ್ಮ ವ್ಯವಹಾರದ ಬಹಳಷ್ಟು ಒಳಗುಟ್ಟು ಮತ್ತು ರಹಸ್ಯಗಳೆಲ್ಲ ಅವನಿಗೆ ಚೆನ್ನಾಗಿ ಗೊತ್ತಿದ್ದವು. ಅಲ್ಲದೇ ಅಂಥ ಅನೇಕ ಕೆಲಸಕಾರ್ಯಗಳೂ ಅವನಿಂದಲೇ ನಡೆಯುತ್ತಿದ್ದವಲ್ಲ! ಎಂದುಕೊಂಡು ಗಾಬರಿಪಟ್ಟರು. ಆದರೂ ಅವನು ಒಳ್ಳೆಯ ಮನುಷ್ಯ. ಆ ಕುರಿತು ಯಾವತ್ತೂ ಯಾರ ಹತ್ತಿರವೂ ಚಕಾರವೆತ್ತಿದವನಲ್ಲ ಅಥವಾ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮನ್ನೂ ಹಗುರವಾಗಿ ಕಂಡವನಲ್ಲ. ಆದರೆ ಆ ವಿಷಯ ತಮ್ಮನ್ನು ಮಾತ್ರ ಆಗಾಗ ಭಾದಿಸುತ್ತಿದ್ದುದೂ ಸುಳ್ಳಲ್ಲವಲ್ಲಾ? ಇಂದಲ್ಲ ನಾಳೆ ಅಥವಾ ಮುಂದೆ ಯಾವತ್ತಾದರೊಂದು ದಿನ ಕೆಟ್ಟಗಳಿಗೆಯಲ್ಲಿ ಅವನಿಗೂ ತಮಗೂ ಮನಸ್ತಾಪವೆದ್ದುಬಿಟ್ಟಿತು ಎಂದುಕೊಳ್ಳೋಣ. ಆವಾಗ ಅವನು ನಮ್ಮ ವಿರುದ್ಧ ತಿರುಗಿಬಿದ್ದು ತಮ್ಮ ಗುಟ್ಟವನ್ನು ಸಮಾಜದ ಮುಂದೆ ರಟ್ಟು ಮಾಡಲಿಕ್ಕಿಲ್ಲ ಅಂತ ಗ್ಯಾರಂಟಿಯೇನು? ಆಗ ನಮ್ಮ ಘನತೆ ಗೌರವದ ಗತಿ ಏನಾದೀತು ಅಂತ ನಾವು ಅದೆಷ್ಟು ಬಾರಿ ಚಿಂತಿಸುತ್ತ ನಿದ್ರೆಗೆಟ್ಟಿಲ್ಲ! ಹೌದು, ಒಂದು ರೀತಿಯಲ್ಲಿ ಅವನು ಹೋದದ್ದೇ ಒಳ್ಳೆಯದಾಯಿತು. ಕೊನೆಗೂ ಅಂಥದ್ದೊಂದು ದೊಡ್ಡ ಆತಂಕದಿಂದ ಬಿಡುಗಡೆ ದೊರೆಯಿತು. ಅಷ್ಟಲ್ಲದೇ, ‘ಆಗುವುದೆಲ್ಲಾ ಒಳ್ಳೆಯದೇ ಆಗುತ್ತದೆ!’ ಅಂತ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವುದು ಸುಳ್ಳಾ? ಎಂದು ತಮ್ಮ ನಿಲುವನ್ನು ತಾವೇ ಮೆಚ್ಚಿಕೊಂಡು ಶಾಂತರಾದರು.

                                                         ***

ಅತ್ತ, ಬುಕ್ಕಿಗುಡ್ಡೆಯ ದೇವಸ್ಥಾನ ನಿರ್ಮಾಣ ಸಮಿತಿ ಮತ್ತು ಆ ಸತ್ಕಾರ್ಯಕ್ಕೆ ಯಥೇಚ್ಛ ದಾನಧರ್ಮಗಳನ್ನು ನೀಡಲು ಮುಂದಾಗಿದ್ದ ಊರ ಹಾಗು ಪರವೂರ ಉದ್ಯಮಿಗಳೆಲ್ಲ ಬಂಡೆ ಕಡಿಯಲು ಹೋದ ಗುರೂಜಿಯವರ ತಂಡದ ಮೇಲೆ ಚಿಟ್ಟೆಹುಲಿಗಳ ದಾಳಿಯ ವಿಚಾರವನ್ನು ತಿಳಿದು ಆತಂಕದಿಂದ ಅವರನ್ನು ಕಾಣಲು ಬಂದರು. ಗುರೂಜಿಯವರು ಅವರೆಲ್ಲರನ್ನೂ ಆದರದಿಂದ ಬರಮಾಡಿಕೊಂಡು ಯಥೋಚಿತವಾಗಿ ಸತ್ಕರಿಸಿ ಮಾತಿಗಾರಂಭಿಸಿದರು. ಹಾಗಾಗಿ ಅವರೆಲ್ಲ ನಿರಾಂತಕರಾದರು ಮತ್ತು ಅವರಲ್ಲಿ ಕೆಲವು ಮುಖ್ಯಸ್ಥರು ಕೊನೆಯಲ್ಲಿ, ‘ಹೌದು ಗುರೂಜಿ, ಮುಂದೆ ದೇವಸ್ಥಾನ ನಿರ್ಮಾಣದ ಬಗೆ ಹೇಗೆ ಎಂದು ತಾವು ತಿಳಿಸಬೇಕು…?’ ಎಂದು ಕೇಳಿಕೊಂಡರು. ಅದಕ್ಕೆ ಗುರೂಜಿಯವರು, ‘ನೋಡಿ ಭಕ್ತಾದಿಗಳೇ, ಅದೆಂಥದ್ದೇ ಅಡ್ಡಿ ಆತಂಕಗಳು ಎದುರಾದರೂ ನಾಗನ ಮಂದಿರ ನಿರ್ಮಾಣ ಕಾರ್ಯ ಯಾವತ್ತಿಗೂ ನಿಲ್ಲುವುದಿಲ್ಲ! ಆ ಕುರಿತು ನಿಮಗ್ಯಾರಿಗೂ ಅನುಮಾನವೇ ಬೇಡ. ಅಂದಹಾಗೆ ಮೊನ್ನೆ ನಮಗೆ ಒದಗಿ ಬಂದಂಥ ಭೀಕರ ವಿಘ್ನದ ಹಿಂದೊಂದು ದೊಡ್ಡ ಕಾರಣವೇ ಇದೆ. ಅದು ಆ ಬಂಡೆಯ ಮಾಲಿಕನ ಕಡೆಯಿಂದ ಆಗಿರುವಂಥದ್ದು. ಅದು ನಮಗೆ ಆವತ್ತು ಆ ಪ್ರದೇಶಕ್ಕೆ ಕಾಲಿಟ್ಟಾಗಲೇ ಗಮನಕ್ಕೆ ಬಂದಿತ್ತು. ಹಾಗಾಗಿ ಶಂಕರನಿಗೂ, ಬಂಡೆಯ ಮಾಲಿಕನಿಗೂ ಅದನ್ನಲ್ಲೇ ತಿಳಿಸಿದ್ದೆವು. ಆದರೂ ನಮ್ಮ ಕೈಮೀರಿ ಅನಾಹುತ ನಡೆದು ಹೋಯಿತು. ಇನ್ನು ಮುಂದೆ ಅದೇನೇ ಆದರೂ ಆ ಬಂಡೆಯನ್ನು ಬಿಡಕ್ಕಿಲ್ಲ. ಯಾಕೆಂದರೆ ಅಂಥದ್ದೊಂದು ಉತ್ಕೃಷ್ಟ ಶಿಲೆ ನಮ್ಮ ಊರಿನಲ್ಲೆಲ್ಲೂ ಸಿಗುವುದಿಲ್ಲ. ಅಲ್ಲಿನ ದೈವಕ್ಕೊಂದು ಸಣ್ಣ ಭೋಗವಿಧಿ ಕೊಡಲಿಕ್ಕಿದೆ. ಅದಾದ ಕೂಡಲೇ ಬಂಡೆ ಒಡೆಯುವ ಕೆಲಸ ಆರಂಭವಾಗುತ್ತದೆ. ಅಲ್ಲಿಯವರೆಗೆ ಎಲ್ಲರೂ ಆ ನಾಗದೇವನನ್ನು ಪ್ರಾರ್ಥಿಸುತ್ತ ನಿಮ್ಮ ನಿಮ್ಮ ಕೆಲಸಕಾರ್ಯಗಳಲ್ಲಿ ಮುಂದುವರೆಯಿರಿ!’ ಎಂದು ಹೇಳಿ ಅವರನ್ನು ಸಂತೈಸಿ ಕಳುಹಿಸಿಕೊಟ್ಟ ಗುರೂಜಿಯವರು ಕೂಡಲೇ ಶಂಕರನಿಗೂ, ಸುರೇಂದ್ರಯ್ಯನಿಗೂ ಕರೆ ಮಾಡಿ ತುರ್ತಾಗಿ ಮನೆಗೆ ಬರುವಂತೆ ಆಜ್ಞಾಪಿಸಿದರು. 


(ಮುಂದುವರೆಯುವುದು)


ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply

Back To Top