ಕಾವ್ಯ ಸಂಗಾತಿ
ಗಜಲ್
ದೇವರಾಜ್ ಹುಣಸಿಕಟ್ಟಿ
ರಾತ್ರಿಗಳು ನೀರವವಾಗಿ ಕರಗುತ್ತಲೇ ಇವೆ ನೀನಿಲ್ಲದೆ
ಭರವಸೆಯ ಬತ್ತಿಗಳು ನಂದುತ್ತಲೇ ಇವೆ ನೀನಿಲ್ಲದೆ
ಬಾಡಿಗೆಗೆ ಏನೆಲ್ಲಾ ಸಿಗಬಹುದು ಲೆಕ್ಕ ಹಾಕುತ್ತಲೇ ಇರುವೆ…?
ಸದ್ದಿಲ್ಲದೇ ಕನಸುಗಳು ದಫನಾಗುತ್ತಲೇ ಇವೆ ನೀನಿಲ್ಲದೆ
ಮಿನುಗು ನಕ್ಷತ್ರಗಳು ಇಂದಿಗೆ ಬಣ್ಣಗೇಡಿಗಳು ಎಂದೆನಿಸದಿರಲಿಲ್ಲ..
ಸರಹದ್ದಿನಲಿ ಬಿಳಿ ಪಾರಿವಾಳಗಳು ರೆಕ್ಕೆ ಮುರಿದು ಕೊಳ್ಳುತ್ತಲೇ ಇವೆ ನೀನಿಲ್ಲದೆ
ಚಾವಣಿಯ ಚಂದ್ರನಿಗೂ ಅಕಾಲಿಕ ಗ್ರಹಣವಂತೆ…ನಿಜವೇ?
ಕಣ್ಣಗಲದ ಬೆಳದಿಂಗಳಿಗೂ ಅದೆಷ್ಟೋ ಮುಪ್ಪಡರುತ್ತಲೇ ಇವೆ ನೀನಿಲ್ಲದೆ
ಅದ್ಯಾರೋ ಕೇಳಿದರು ನಿನ್ನೆದೆಗೆ ಕಿಚ್ಚು ಹಚ್ಚಿದವರಾರಂದು….?
ಒಣಗಿದ ಹುಲ್ಲು ಬಣಿವೆಯಾಗಿದೆ ದೇವನ ಹೃದಯ ಸಣ್ಣ ಕಿಡಿಗಳು ಸುಡುತ್ತಲೇ ಇವೆ ನೀನಿಲ್ಲದೆ