ಅಂಕಣ ಬರಹ
“ಕಾವ್ಯದರ್ಪಣ”
ಗಾಂಧಿ ನಗುತ್ತಾನೆ
“ರವಿ ಮುಳುಗದ ನಾಡಿನಲ್ಲಿ ಜನಿಸಿದ ನಾವು ವಿಶ್ವದಲ್ಲಿ ಅನ್ವೇಷಿಸಲ್ಪಟ್ಟಿರುವ ಅತಿ ಭಯಾನಕ ಮಾರಕಾಸ್ತ್ರಗಳನ್ನು ನಿರ್ಭೀತಿಯಿಂದ ಎದುರಿಸಿದವು. ಆದರೆ ನಗುನಗುತ್ತಾ, ನಮಸ್ಕರಿಸುತ್ತಾ, ಬರಿಗೈಯಲ್ಲಿ ಬರುವ ಗಾಂಧಿಯನ್ನು ಮಾತ್ರ ಎದುರಿಸಲಾರೆವು“
– ಬ್ರಿಟನ್ ರಾಣಿ
(ಅಂದರೆ ಸರಳತೆ ಹಾಗೂ ತತ್ವದರ್ಶಗಳ ಮೂಲಕ ವಿಶ್ವವನ್ನೇ ನಡುಗಿಸಿದ ವ್ಯಕ್ತಿ – ಗಾಂಧಿ )
ಕಾವ್ಯ ಪ್ರವೇಶಿಕೆಯ ಮುನ್ನ…..
ಕನ್ನಡ ಸಾಹಿತ್ಯ ಪರಂಪರೆಯನ್ನು ನೋಡಿದಾಗ, ಎಲ್ಲರನ್ನು ಬಹುವಾಗಿ ಕಾಡುತ ಸಾವಿರಾರು ಕವನಗಳನ್ನು ರಚಿಸಿಕೊಂಡ ಧೀಮಂತ ವ್ಯಕ್ತಿತ್ವದ ರೂವಾರಿ ಎಂದರೆ ಗಾಂಧೀಜಿ. ಗಾಂಧಿ ಕುರಿತು ಕವಿತೆ ಕಟ್ಟದಿರುವ ಕವಿಯೇ ಇಲ್ಲ ಅಷ್ಟು ಸಾಹಿತ್ಯ ಅವರ ಹೆಸರಿನಲ್ಲಿ ರಚನೆಯಾಗಿದೆ. “ಇದ್ದರೂ ಇಲ್ಲದಂತೆ ಇರುವವರು ಹಲವರು, ಇಲ್ಲದೆಯೂ ಇರುವವರು ಕೆಲವರು. ಅಂತಹ ಕೆಲವರಲ್ಲಿ ಒಬ್ಬರಾಗಿ, ಭೌತಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ಮಾನಸಿಕವಾಗಿ, ಭಾವನಾತ್ಮಕವಾಗಿ, ಸಾಹಿತಿಕವಾಗಿ ಸದಾ ನಮ್ಮೊಳಗೆ ಜೀವಂತವಿರುವ ಮಹಾಮಾನವತಾವಾದಿ ಎಂದರೆ ಅದು ನಮ್ಮೆಲ್ಲರ ಪ್ರೀತಿಯ ಬಾಪು. ಕಾಲಘಟ್ಟದ ಮನೋಧರ್ಮಕ್ಕನುಗುಣವಾಗಿ ರಾಷ್ಟ್ರಪಿತ ಎಂಬ ಗೌರವಾದರಗಳಿಂದ ಹಿಡಿದು, ಅವರೆಲ್ಲ ಆಸೆ,ಆಕಾಂಕ್ಷೆಗಳನ್ನು ತಿರಸ್ಕರಿಸಿ ಸ್ವಾರ್ಥದ ಅಡಿಯಲ್ಲಿ ಸುಟ್ಟು ಭಸ್ಮ ಮಾಡಿರುವುದನ್ನು ಪ್ರತಿಭಟಿಸುವವರೆಗೆ ಗಾಂಧಿ ಹೆಸರಿನಲ್ಲಿ ವಿಫುಲವಾದ ಸಾಹಿತ್ಯ ಜೀವ ಪಡೆದಿದೆ.
ಗಾಂಧಿ ಜೀವನ, ಸಾಧನೆ,ಆದರ್ಶಗಳು,ಮೌಲ್ಯಗಳು, ಅವರ ಹೋರಾಟ ಅವರ ಪ್ರತಿಪಾಧನೆಗಳನ್ನು ಕುರಿತ ಕಾವ್ಯಗಳನೇಕ. ನಾನು ಇಂದು ಅಂತಹ ಪಥದಲ್ಲಿ ಸಾಗಿ ಗಾಂಧಿಯನ್ನು ಕುರಿತಾದ ಕವನ ರಚಿಸಿದ ಕವಿಯೊಬ್ಬರ ಕವಿ ಕಾವ್ಯ ಪರಿಚಯವನ್ನು ನಿಮಗೆ ಉಣಬಣಿಸಲು ಹರ್ಷಿಸುತ್ತೇನೆ.
ಕವಿ ಪರಿಚಯ
“ಚೇತನ್ ನಾಗರಾಳ” ಕಾವ್ಯನಾಮದಿಂದ ಸಾಹಿತ್ಯಕ್ಷೇತ್ರಕ್ಕೆ ಪರಿಚಿತರಾಗಿರುವ ಚೆನ್ನಮಲ್ಲಪ್ಪ ನಾಗರಾಳ ರವರು ಬೀಳಗಿ ತಾಲೂಕಿನವರು. ಖಾಸಗಿ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದಾರೆ. ಕವನ ಹಾಗೂ ಗಜಲ್ ರಚನೆಯಲ್ಲಿ ಅಪಾರ ಅನುಭವ ಇರುವ ಇವರು “ಹೀಗೊಂದು ಯುದ್ಧ ಬುದ್ಧನೊಂದಿಗೆ” ಎಂಬ “ಕವನ ಸಂಕಲನ” (2018) ಹಾಗೂ “ಖಾಲಿ ಕೋಣೆಯ ಹಾಡು” ಎಂಬ “ಗಜಲ್ ಸಂಕಲನ” (2018) ವನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. “ಬೀಳಗಿ ತಾಲೂಕು ರಾಜ್ಯೋತ್ಸವ ಪ್ರಶಸ್ತಿ” ಸೇರಿದಂತೆ ಹಲವಾರು ಸಂಸ್ಥೆಗಳ ಪ್ರಶಸ್ತಿ ಮತ್ತು ಬಹುಮಾನಗಳಿಗೆ ಭಾಜನರಾಗಿದ್ದಾರೆ. ಜೊತೆಗೆ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವಿತೆ ವಾಚನ ಮಾಡಿದ ಅಪಾರ ಅನುಭವ ಈ ಕವಿಗಿದೆ.
ಕವಿತೆಯ ಆಶಯ
“ನೀವು ಬೇರೆಯವರಿಗಾಗಿ ಒಂದು ದೀಪ ಹಚ್ಚಿಡಿ.ಅದು ನಿಮ್ಮ ದಾರಿಗೂ ಬೆಳಕಾಗುವುದು”. ಎಂಬ ಬುದ್ಧವಾಣಿಗೆ ಅನ್ವರ್ಥಕರಾಗಿ ಬದುಕಿದವರು ಗಾಂಧಿ.
ನಡೆ ನುಡಿಗಳಲ್ಲಿ ಏಕನಿಷ್ಠೆ ಹೊಂದಿದ್ದ ಗಾಂಧಿಯ ತತ್ವಾದರ್ಶಗಳು ಸಾರ್ವಕಾಲಿಕ ಮೌಲ್ಯವನ್ನು ಹೊಂದಿರುವಂತಹವುಗಳು.
ಗಾಂಧಿಯನ್ನು ವಿಭಿನ್ನವಾಗಿ, ವಿಶಿಷ್ಟವಾಗಿ ಚಿತ್ರಿಸಿರುವ ಕವಿತೆಗಳು ಬಹಳಷ್ಟಿವೆ. ಅಂತಹವುಗಳ ಪೈಕಿ ಈ ಗಾಂಧಿ ಕವಿತೆಯು ಒಂದು.
ಸಾಮಾಜಿಕ ಪ್ರಗತಿಗೆ ಸಿದ್ಧ ಸೂತ್ರಗಳನ್ನು ರಚಿಸಿದ ನಾಯಕ. ಇಲ್ಲಿ ಕವಿಯು ತಾನು ಕಂಡ ಗಾಂಧಿ ವಿಚಾರ ಧಾರೆಗಳು, ಆದರ್ಶಗಳು, ತತ್ವ,ಸಿದ್ಧಾಂತಗಳು, ಕನಸುಗಳು ಪ್ರಸಕ್ತ ವಿದ್ಯಮಾನದಲ್ಲಿ ಆಚರಣೆಗೂ ಬಾರದೆ, ಪಾಲನೆಯೂ ಆಗದೆ, ಧೂಳಿಪಟ ಆಗಿರುವುದನ್ನು ತಮ್ಮ ಕಾವ್ಯಾಭಿವ್ಯಕ್ತಿಯ ಮೂಲಕ ಅಮೋಘವಾಗಿ ಚಿತ್ರಿಸಿದ್ದಾರೆ.
“ರಕ್ತ ಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿಯೊಬ್ಬ ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ” ಗಾಂಧಿಯನ್ನು ಕುರಿತು ಆಲ್ಬರ್ಟ್ ಐನ್ಸ್ಟೀನ್ ಅವರ ಅಭಿಪ್ರಾಯವಿದು.
ಕವಿತೆಯ ಶೀರ್ಷಿಕೆ
“ಗಾಂಧಿ ನಗುತ್ತಾನೆ” ಇಲ್ಲಿ ಕವಿತೆಯ ಶೀರ್ಷಿಕೆಯು ಎಲ್ಲರಲ್ಲೂ ಸೋಜಿಗವನ್ನು ಉಂಟು ಮಾಡುತ್ತದೆ. ಗಾಂಧಿ ಇಲ್ಲದಿರುವ ಈ ಜಗತ್ತಿನಲ್ಲಿ ನಗಲು ಹೇಗೆ ಸಾಧ್ಯ ? ಎಲ್ಲಿ ನಗುತಿದ್ದಾರೆ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಜೊತೆಗೆ ಇಲ್ಲಿ ಏನೋ ಸರಿಯಿಲ್ಲ ಎಂಬುದನ್ನು ರುಜುವಾತು ಪಡಿಸುವಂತೆ ಶೀರ್ಷಿಕೆಯಿದ್ದು ಅದನ್ನು ಕಂಡು ಗಾಂಧಿ ನಗೆ ಬೀರುತಿದ್ದಾರೆ. ಆ ಏನು ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಲು ಇಡೀ ಕಾವ್ಯ ಕವಿಯಿಂದ ಸಮರ್ಥವಾಗಿ ದುಡಿಸಿಕೊಂಡಿದೆ.
ಕವಿತೆ : “ಗಾಂಧಿ ನಗುತ್ತಾನೆ“
ಗಾಂಧಿ ನಗುತ್ತಾನೆ
೧
ನನ್ನ ಗಾಂಧಿ
ಈಗಲೂ ನಗುತ್ತಾನೆ
ಕಂಚಿನ ಪುತ್ಥಳಿಗಳಲ್ಲಿ
ಮರದ ಕೆತ್ತನೆಗಳಲ್ಲಿ
ಫುಟ್ ಪಾತಿನಲ್ಲಿ
ಜೋತು ಬಿಟ್ಟಿರುವ
ಪೋಸ್ಟರುಗಳಲ್ಲಿ
ಹರಿದ ಹತ್ತರ ನೋಟಿನಲ್ಲಿ
ನಗುತ್ತಿರುತ್ತಾನೆ
ನಾನು ಮತ್ತೆ ಸಾಯಲಾರೆ ಎಂದು..
ವಾಸ್ತವ ಜಗತ್ತಿನಲ್ಲಿ, ಪ್ರಸಕ್ತ ವಿದ್ಯಮಾನಗಳಲ್ಲಿ, ಗಾಂಧಿಯ ತತ್ವ, ಸಿದ್ಧಾಂತಗಳು ಕೇವಲ ವ್ಯಾಪಾರದ ಮಾಲಾಗಿ, ಲಾಭ ಗಳಿಕೆಯ ಸರಕಾಗಿರುವುದನ್ನು ಈ ಸಾಲುಗಳು ತೀವ್ರವಾಗಿ ಖಂಡಿಸುತ್ತವೆ. ಈ ನೆಲೆಯಲ್ಲಿ ಮೂಡಿಬಂದ ಮಾರ್ಮಿಕ ಸಾಲುಗಳು ಇವಾಗಿವೆ. ಗಾಂಧೀಜಿ ಅವರ ದೃಷ್ಟಿಕೋನವನ್ನು ನಮ್ಮ ಅನುಕೂಲಸಿಂಧು ಮಾಡಿಕೊಂಡು ನಮ್ಮದೇ ಆದ ನೆಲೆಯಲ್ಲಿ ಪರಾಮರ್ಶಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದೇವೆ ಎಂಬ ಕಟು ಸತ್ಯವನ್ನು ತಮ್ಮ ವಿಶಿಷ್ಟ ರೂಪಗಳು ಹಾಗೂ ಪ್ರತಿಮೆಗಳ ಮೂಲಕ ಬಹಳ ಕಳಕಳಿಯಿಂದ ಹೆಣೆದು ಜನರ ಮುಂದೆ ಬಿಚ್ಚಿಟ್ಟಿದ್ದಾರೆ.
” ಜಗತ್ತಿನಲ್ಲಿ ಹೇಳುವವರಿಗಿಂತ, ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು“.
ಎಂಬ ಗಳಗನಾಥರ ನುಡಿ ಗಾಂಧಿಗೆ ಸರಿಯಾಗಿ ಹೊಂದುತ್ತದೆ.
ಕಂಚಿನ ಪುತ್ತಳಿಗಳು, ಮರದ ಕೆತ್ತನೆಗಳು, ಪೋಸ್ಟರ್ಗಳು, ಹತ್ತರ ನೋಟುಗಳಲ್ಲಿ ಗಾಂಧಿ ಇದ್ದಾನೆ ಎಂದು ಪ್ರತಿಪಾದಿಸುತ್ತಾ, ಗಾಂಧಿಯನ್ನು ಕೇವಲ ಜಡವಾಗಿಸಿ, ಸ್ಥಾವರವಾಗಿಸಿ, ಪೂಜೆ ಮಾಡುತ್ತಾ, ಢಂಬಾಚಾರದ ಸ್ಮರಣೆಯ ಮೂಲಕ ಅವರ ವಿಚಾರಧಾರೆಗಳನ್ನು, ಕಾರ್ಯಗತಮಾಡುವ ಆಷಾಡಭೂತಿತನ ತೋರುತ್ತ ಮುಖವಾಡಗಳನ್ನು ಮೀರಿಸುವ ನಮ್ಮ ನಡವಳಿಕೆಯ ಪ್ರತೀಕಗಳಾಗಿ ಮೂಡಿಬಂದಿವೆ. ಈ ಮಾತುಗಳನ್ನು ಪುಷ್ಟೀಕರಿಸಲು “ದುಂಡಿರಾಜ”ರ ಹನಿಯನ್ನು ನಾವು ಸ್ಮರಿಸಬಹುದು
” ನಾವು ಎಲ್ಲೆಡೆ ಗಾಂಧಿ ಪ್ರತಿಮೆಗಳನ್ನು ನಿಲ್ಲಿಸಿದ್ದೇವೆ. ಕಾರಣ ಗಾಂಧಿ ತತ್ವಗಳ ಪಾಲನೆಯನ್ನು ನಿಲ್ಲಿಸಿದ್ದೇವೆ”.
“ನಾನು ಮತ್ತೆ ಸಾಯಲಾರೆ” ಎಂಬ ಸಾಲು ಈಗಾಗಲೇ ಗಾಂಧಿಯ ವಿಚಾರಧಾರೆಗಳನ್ನು ನಾವು ಸಾಯಿಸಿದ್ದೇವೆಂಬ ಭಾವವನ್ನು ಹೊತ್ತು ತಂದಿದೆ.
೨
“ಇಲ್ಲೊಂದು ಮುದುಕಿ
ಹಲಸಿನ ತೊಳೆ ಬಿಡಿಸಿ
ಕಾಯುತ್ತ ಕುಳಿತಿದ್ದಾಳೆ
ಯಾರಾದರೂ ಬಂದಾರೆಂದು
ಗಾಂಧಿಗೂ ಆಸೆಯಾಯಿತು
ಬೊಚ್ಚು ಬಾಯಲ್ಲೂ ನೀರೊಡೆಯಿತು
ಇನ್ನೇನು ಇಳಿದು
ಬರಬೇಕೆಂದಿದ್ದವನು
ಅರೆ ಕಾಸು ಬೇಕಲ್ಲವೆ
ಎಂದು ನಿಂತುಬಿಟ್ಟ“..
ಅಬ್ಬಬ್ಬಾ ಈ ಸಾಲುಗಳು ನಮ್ಮ ದೇಶದ ಆರ್ಥಿಕ ಪ್ರಗತಿಯನ್ನು ಅಣಕಿಸುತ್ತಿವೆ. ನಮ್ಮ ಕನಿಷ್ಠ ಬಯಕೆಗಳನ್ನು ಈಡೇರಿಸಿಕೊಳ್ಳಲು ಆಗದ ಅಸಹಾಯಕ ಪರಿಸ್ಥಿತಿಯನ್ನು ಅನಾವರಣ ಮಾಡುತ್ತವೆ. ಹಲಸಿನಹಣ್ಣು ಬಿಡಿಸಿ ಕಾಯುತ್ತಾ ಕುಳಿತಿದ್ದಾರೆ ಎಂಬ ಸಾಲುಗಳು ಇಳಿ ವಯಸ್ಸಿನಲ್ಲಿ ಬಾಳ ಬಂಡಿ ಸಾಗಿಸಲು ದುಡಿಯುವ ಹಿರಿ ಜೀವದ ನಿರಾಶೆ, ಹತಾಶೆ, ಅನಿವಾರ್ಯತೆಯ ಜೊತೆಗೆ ತ್ಯಕ್ತ ಹೃದಯದ ತಲ್ಲಣಗಳನ್ನು ಹೊತ್ತು ತಂದಿದೆ.
ಸ್ವಾತಂತ್ರ್ಯ ಪಡೆದು ಎಷ್ಟು ವರ್ಷಗಳಾದರೂ ಪ್ರಜೆಗಳು ಇನ್ನೂ ಸ್ವಾವಲಂಬಿಯಾಗಿ ನೆಲೆ ಕಾಣದಿರುವ ಸಂದರ್ಭದ ಸಾಕ್ಷಿಗೆ ಈ ಸಾಲುಗಳು ಪುಷ್ಟಿ ನೀಡುತ್ತವೆ. “ಅರೆಕಾಸು ಬೇಕಲ್ಲವೇ” ಎಂಬ ಸಾಲು ಬಡತನದ ಪ್ರತೀಕವಾಗಿ ಇಲ್ಲಿ ಮುದುಕಿ ಕಾಯುತ್ತಾ ಕುಳಿತಿದ್ದಾಳೆ ಎಂಬ ಸಾಲು ಯುವಜನತೆಯ ನಿರುದ್ಯೋಗದ ಪ್ರತೀಕವಾಗಿ, ಇಳಿವಯಸ್ಸಲ್ಲಿ ದುಡಿಯುವ ಅನಿವಾರ್ಯ ಪರಿಸ್ಥಿತಿಯನ್ನು ಕಣ್ಣಮುಂದೆ ತರುತ್ತವೆ.
೩
“ಗಾಂಧಿ ಜಯಂತಿಯ ದಿನ
ಬಾರುಗಳು ಬಂದ್
ಟೇಬಲ್ ಕ್ಲೀನ್
ಮಾಡುವ ಹುಡುಗನಿಗೆ
ಸಿಗುತ್ತಿದ್ದ ಗಾಂಧಿಗೆ
ಇಂದು ರಜೆ
ಶಾಲೆಯಲ್ಲಿ ಹಂಚುತ್ತಿದ್ದ
ಬೆತ್ತಾಸನ್ನು
ದೂರದಿಂದಲೇ ಕಣ್ತುಂಬಿಕೊಂಡ“..
ಇಲ್ಲಿ “ಗಾಂಧಿ ಜಯಂತಿಯ ದಿನ ಬಾರುಗಳು ಬಂದ್.” ಎಂಬ ಸಾಲು ಗಾಂಧಿ “ಪಾನಮುಕ್ತ ಸಮಾಜ”ದ ಪ್ರತಿಪಾದನೆಯನ್ನು, ಆ ದಿನಕ್ಕೆ ಮಾತ್ರ ಸೀಮಿತಗೊಳಿಸಿರುವ ವಿಪರ್ಯಾಸವನ್ನು ಎತ್ತಿ ಹಿಡಿಯುತ್ತದೆ. ಗಾಂಧಿ ಭಾರತದ ಕಲ್ಪನೆಯನ್ನು ನನಸಾಗಿಸುವ ಮೂಲಕ “ಗಾಂಧಿ ಸ್ಪೃತಿ” ಮಾಡಬೇಕು ಎಂದು ಕಿವಿ ಹಿಂಡಿ ಹೇಳುತ್ತದೆ. ಟೇಬಲ್ ಕ್ಲೀನ್ ಮಾಡುವ ಹುಡುಗನಿಗೆ ಕೊಡುವ “ಗಾಂಧಿನೋಟು” ಭ್ರಷ್ಟಾಚಾರ ವಿವರಿಸಿದರೆ, ಗಾಂಧಿ ಜಯಂತಿ ಆಚರಿಸುವ ಮೂಲಕ ಶಾಲೆಯಲ್ಲಿ ಮಕ್ಕಳಿಗೆ ಸಿಗುವ ಬೆತ್ತಾಸ್ ದೂರದಿಂದ ಕಣ್ತುಂಬಿಕೊಳ್ಳುವ ಭಾವ ನಮ್ಮ ಕೈಗೆಟುಕದ ಸೌಲಭ್ಯವು ಅಂಬರದ ಹೂವೆಂದು ಓದುಗರ ಮುಂದಿಡುತ್ತಾರೆ.
೪
“ರಸ್ತೆಗೆ, ಬೀದಿಗೆ, ವೃತ್ತಗಳಿಗೆ
ಕಟ್ಟಡಗಳಿಗೆ
ಸರಕಾರದ ಯೋಜನೆಗಳಿಗೆ
ಹೆಸರಾಗಿ
ಗಾಂಧಿ ಇನ್ನೂ
ಹಚ್ಚ ಹಸಿರು
ನಮ್ಮ ನಾಡಲ್ಲಿ“..
ನಮಗೆ ನಿಜಕ್ಕೂ ಗಾಂಧಿ ನೆನಪಾಗುವ ಸನ್ನಿವೇಶಗಳನ್ನು ಸೊಗಸಾಗಿ ಚಿತ್ರಿಸಿರುವ ಕವಿ ರಸ್ತೆಗೆ, ಬೀದಿಗೆ, ಕಟ್ಟಡಗಳಿಗೆ ಅವರ ಹೆಸರಿಟ್ಟು ಕರೆಯುವ ಮೂಲಕ ಅವರನ್ನು ಜೀವಂತವಾಗಿಸಿದ್ದೇವೆ ಎನ್ನುವ ಮೂಲಕ ಅವರ ಹೆಸರನ್ನು ಅಪಮೌಲ್ಯ ಮಾಡುತ್ತಿದ್ದೇವೆ ಎಂಬುದನ್ನು ಓದುಗರ ಮುಂದಿಡುತ್ತಾರೆ. ಮೊದಲಿಗೆ ಸಿನಿಮಾ ಥಿಯೇಟರ್ಗೆ ಗಾಂಧಿಕ್ಲಾಸ್ ಅಂತ ಕರೆಯುವ ನಾವು ಅವರ ಹೆಸರನ್ನು ಮಾತ್ರ ಹಚ್ಚಹಸಿರಾಗಿಸಿದ್ಧೇವೆ ಎನ್ನುವ ಕವಿಯ ಭಾವನೆಗಳನ್ನು ಇಲ್ಲಿ ಗುರುತಿಸಬಹುದು. ನಾವೆಲ್ಲ ಢಂಬಾಚಾರಿಗಳಾಗಿ ಅವರ ಆಲೋಚನೆಗಳನ್ನು ಕೇವಲ ಬೌದ್ಧಿಕ ರೂಪಕ್ಕೆ ಸೀಮಿತಗೊಳಿಸಿದ್ದೇವೆ. ಆಚರಣೆಗೆ ತರುವ ಮನೋಸ್ಥೈರ್ಯ ಮಾಡುತ್ತಿಲ್ಲ ಎಂಬ ಭಾವ ಸೊಗಸಾಗಿ ಚಿತ್ರಿತವಾಗಿದೆ.
೫
“ಇಂದು ಅಕ್ಟೋಬರ್ ಎರಡು
ಮೊಳೆಯಿಂದ ಕೆಳಗಿಳಿದ
ಗಾಂಧಿಗೆ
ಹೂವು ಹಾರ ಊದುಬತ್ತಿ
ಖಾದಿ ಗ್ರಾಮೋದ್ಯೋಗದ
ಶಾಲು
ಉಡುಗೊರೆ ನೀಡಿ ಕೂರಿಸಿದ್ದಾರೆ
ನಾಳೆ ಮತ್ತದೇ ಮೊಳೆಗೆ
ಗಾಂಧಿಯನ್ನು
ತತ್ವಗಳ ಸಮೇತ
ತೂಗಿಬಿಟ್ಟು
ಕೂರುವ ಜಾಗಕ್ಕೆ
ಶಾಲು ಹಾಸುತ್ತಾರೆ“..
ಗಾಂಧಿಯನ್ನು ನಾವು ಅಕ್ಟೋಬರ್ 2ರ ಗಾಂಧಿಯಾಗಿಸಿದ್ದೇವೆ. ವರ್ಷವಿಡಿ ಅವರನ್ನು ಮರೆತು ಅವರ ಅಭಿಲಾಷೆಗಳನ್ನು ಮಕಾಡೆ ಮಲಗಿಸಿ ನಮ್ಮದೇ ಲೋಕದಲ್ಲಿ ಗಾಡವಾದ ನಿದ್ರೆಯಲ್ಲಿ ವಿಹರಿಸುವ ನಮಗೆ ಅಕ್ಟೋಬರ್ ತಿಂಗಳಿನಲ್ಲಿ ಗಾಂಧಿ ಜಯಂತಿ ಆಚರಿಸಲು ಕಂಕಣ ಬದ್ಧರಾಗಿ ನಿಲ್ಲುತ್ತೇವೆ.
ವರ್ಷವೆಲ್ಲಾ ಮೊಳೆಗೆ ತೂಗುಬಿಟ್ಟು, ನಮ್ಮೆಲ್ಲಾ ಹುಚ್ಚಾಟಗಳನ್ನು ಮೂಖವಾಗಿ ನೋಡುತ್ತಾ,ಕಣ್ಣೀರಿಡುವ ಗಾಂಧಿ ಪಟವನ್ನು ಕೆಳಗಿಳಿಸಿ ಅದಕ್ಕಿಡಿದ ಧೂಳನ್ನು ಜಾಡಿಸಿ ಅವರ ಕನಸಿನ ಕೂಸಾದ ಖಾದಿ ಗ್ರಾಮೋದ್ಯೋಗದ ಶಾಲು ಹೊದಿಸಿ ಸಂಭ್ರಮಿಸುವ ನಾವು ಸಂಜೆಯೊಳಗೆ ಮತ್ತದೇ ಮೊಳೆಗೆ ಸಿದ್ದಾಂತ ಸಹಿತ ನೇತು ಹಾಕುವ ವಿರುದ್ಧದ ಕವಿಯ ಆಕ್ರೋಶದ ಭಾವವನ್ನು ಕಾಣಬಹುದು.
“ಅಹಿಂಸೆ ಇಲ್ಲದೆ ಸತ್ಯ ಸಾಕ್ಷಾತ್ಕಾರ ಸಾಧ್ಯವಿಲ್ಲ” ಎಂದು ನಂಬಿದ್ದ ಗಾಂಧೀಜಿಯವರು ಸತ್ಯ, ಶಾಂತಿ, ಅಹಿಂಸೆಗಳೆಂಬ ಪ್ರಬಲ ಅಸ್ತ್ರಗಳ ಮೂಲಕ ಜನರ ಹೃದಯದಲ್ಲಿ ಚಿರಸ್ಥಾಯಿಯಾದ ಸ್ಥಾನವನ್ನು ಪಡೆದ ಸ್ವಾತಂತ್ರ್ಯ ಶಿಲ್ಪಿ. ಕಾಲಚಕ್ರದ ನಾಗಾಲೋಟದಲ್ಲಿ ಇಂದು ಗಾಂಧಿ ತತ್ವಗಳು ಭೂಗತ ವಾಗುತ್ತಿರುವುದು ವಿಪರ್ಯಾಸವೆ ಸರಿ.
“ಬುದ್ಧ ಬಸವನ ನಂತರ ಈ ಮಣ್ಣಲ್ಲಿ ಜನಿಸಿದ ಅಹಿಂಸಾ ಪ್ರವರ್ತಕ ಗಾಂಧಿ”.
೬
“ಗಾಂಧಿ ಈಗಲೂ
ನಗುತ್ತಾನೆ
ಸದ್ಯ ನಾನೀಗ
ಬದುಕಿಲ್ಲ ಎಂದು“..
ನೋಡಿ ಸ್ನೇಹಿತರೆ ಈ ಮೇಲಿನ ಸಾಲುಗಳೇ ಸಾಕು ನಾವು ಗಾಂಧಿಯನ್ನು ಮಾತ್ರ ಸಮಾಧಿ ಮಾಡಿಲ್ಲ ಅವರ ಎಲ್ಲ ಕನಸುಗಳು ಅದರೊಳಗೆ ಹೂತು ಹಾಕಿದ್ದೇವೆ ಎಂಬುದನ್ನು ತೋರಿಸುತ್ತವೆ. ಗಾಂಧಿ ಕಂಡ ಕನಸಿನ ಭಾರತ ಇನ್ನು ಬಾರದಿರುವುದಕ್ಕೆ ಕಣ್ಣೀರು ಸುರಿಸುವ ಕವಿ ಸದ್ಯ ಈಗ ಗಾಂಧಿ ಬದುಕಿಲ್ಲ ಬಹುಶಃ ಅವರು ಈಗ ಇದ್ದಿದ್ದರೆ ಇದೆಲ್ಲವನ್ನು ಕಂಡ ಮನಸ್ಸು ರೋಧಿಸುತ್ತಿತ್ತು, ನೊಂದುಕೊಳ್ಳುತಿತ್ತು ಎಂದು ಹೇಳುವ ವ್ಯಂಗದ ಕಿರು ಸಾಲುಗಳು ಅಗಾಧವಾದ ಸಾರವನ್ನು ಪ್ರಸ್ತುತಪಡಿಸುತ್ತದೆ.
ಜೊತೆಗೆ ನಾಡಿನಲ್ಲಿ ಏನೆಲ್ಲ ಧನಾತ್ಮಕ ಬದಲಾವಣೆ ಆಗಬೇಕಿದೆ ಎಂಬುದನ್ನು ಅರಿಯಲು ನಮಗೆ ಭೂಮಿಕೆಯನ್ನು ನೀಡಿ ಚಿಂತನಾಶೀಲ ಮನಸ್ಸುಗಳನ್ನು ಸೃಷ್ಟಿಸಲು ಸಕಾರಾತ್ಮಕವಾಗಿವೆ.
ಒಟ್ಟಾರೆ ಕವಿತೆ ಗಾಂಧಿ ಕಂಡ ಕನಸಿನ ಭಾರತದ ಮರುಸೃಷ್ಟಿಗೆ ಹಾತೊರೆಯುತ್ತಿದೆ. ಕೇವಲ ವ್ಯಕ್ತಿಯಾಗಿ ಗಾಂಧಿಯನ್ನು ಬದುಕಿಸಿಕೊಂಡಿದ್ದೇವೆ. ಸರ್ವಾಂಗೀಣ ಅಭಿವೃದ್ಧಿಯ ಹರಿಕಾರರ ಮಹದಾಸೆಯನ್ನು ಈಡೇರಿಸುವ ಮೂಲಕ ಗಾಂಧಿ ತತ್ವ ಆದರ್ಶಗಳ ಪಾಲನೆಗೆ ಕರೆ ನೀಡುತ್ತದೆ. ಗಾಂಧಿಯನ್ನು ಅಂತರಂಗದೊಳಗೆ ಸಮೀಕರಿಸಿಕೊಂಡು ಅವರ ಬೋಧನೆಗಳನ್ನು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಚಲಿಸುತ್ತಾ ಜಾರಿ ಮಾಡಿದರೆ ಆಗ ಗಾಂಧಿ ನಿಜಕ್ಕೂ ಮನತುಂಬಿ ನಗುತ್ತಾರೆ ಎಂಬುದು ಕವಿಯ ಮನದಿಂಗಿತ.
ಕವಿಯಲ್ಲಿ ನಾ ಕಂಡ ಕವಿ
ಭಾವ
ಇಡೀ ಕವಿತೆಯನ್ನು ಓದಿ ವಿಶ್ಲೇಷಿಸಿದಾಗ ನನಗೆ ಹತ್ತು ಹಲವಾರು ಅಂಶಗಳು ಕವಿಯ ಬಗ್ಗೆ, ಕವಿತೆಯ ಬಗ್ಗೆ ಅರಿವಿನ ಜಾಡಿನಲ್ಲಿ ಕರೆದೊಯ್ದವು. ಇಲ್ಲಿ
ಕವನದ ಅಭಿವ್ಯಕ್ತಿ ಸುಂದರವಾಗಿ ಮೂಡಿ ಬಂದಿದ್ದು, ಕಠಿಣ ಶಬ್ದಗಳ ಬಳಕೆ ಇಲ್ಲದೆ ಸಹಜ ಸರಳವಾಗಿ ಪ್ರಯೋಗಿಸಲ್ಪಟ್ಟಿದ್ದು ಸರಾಗವಾಗಿ ಓದಿಸಿಕೊಂಡು ಸಾಗುತ್ತದೆ. ಇಲ್ಲಿ ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಳ್ಳುವ ಜಾಣ್ಮೆ ಮತ್ತು ಕಲೆಗಾರಿಕೆ ಇವರ ಲೇಖನಿಗೆ ಕರಗತವಾಗಿದೆ.
ಕಾವ್ಯ ಕವಿಯ ಮನದಾಳವನ್ನು ತೆರೆದಿಡುವ ಅಕ್ಷರಲೋಕ, ಭಾವನಾಲೋಕ, ಕಲ್ಪನಾಲೋಕ, ಹಾಗೂ ಅಭಿವ್ಯಕ್ತಿಯ ಮಾಧ್ಯಮವಾಗಿದೆ. ಅನುಭವ ಬೇರೆಯಲ್ಲ. ಕಾವ್ಯ ಬೇರೆಯಲ್ಲ “ಎರಡು ಒಂದೇ ನಾಣ್ಯದ ಎರಡು ಮುಖಗಳು” ಅನುಭವವಿಲ್ಲದೆ ಕಾವ್ಯ ಹುಟ್ಟಲು ಸಾಧ್ಯವಿಲ್ಲ, ಅನುಭವವೆ ಅನುಭಾವವಾಗಿ ಅನುಸಂಧಾನಗೊಂಡು ಕವಿತೆ ಜನ್ಮತಾಳಿದೆ. ಇಷ್ಟು ಕಿರಿಯ ವಯಸ್ಸಿನಲ್ಲಿ ಕವಿಗೆ ಆ ಮಟ್ಟಿನ ಲೋಕಜ್ಞಾನ ಆಗಿರುವುದನ್ನು ನೋಡಿದರೆ ಅವರ ಸಂವೇದನಶೀಲ ಸ್ಪಂದನೆಯೇ ಮೂಲಾಧಾರವಾಗಿದೆ. ಸಾಮಾಜಿಕ ಪರಿಸರಕ್ಕೆ ಬಹುವಾಗಿ ತಮ್ಮನ್ನು ತೆರೆದುಕೊಂಡಿದ್ದಾರೆ ಎಂದು ಗೋಚರಿಸುತ್ತದೆ. ಇದರಿಂದ ಇಂತಹ ಗಟ್ಟಿಯಾದ ಸಾಹಿತ್ಯ ಅವರ ಲೇಖನಿಯಿಂದ, ಅಂತರಾಳದಿಂದ ಹುಟ್ಟಿ ಬಂದಿದೆ.
ಗಾಂಧಿ ತತ್ವ ಪಾಲನೆಯಲ್ಲಿ ವರ್ತಮಾನದ ವ್ಯವಸ್ಥೆಯನ್ನು ತನ್ನ ಅಕ್ಷರ ಪ್ರಹಾರದ ಮೂಲಕ ಪ್ರತಿಭಟಿಸುತ್ತಾ, ಬೌದ್ಧಿಕವಾಗಿ ದಾಳಿಮಾಡುತ್ತದೆ. ಅವ್ಯವಸ್ಥೆಯನ್ನು ವಿರೋಧಿಸುವ ಮೂಲಕ ಕಟುವಾದ ಚಾಟಿ ಬೀಸಿದ್ದಾರೆ. ನವ ನವೀನ ರೀತಿಯ ನಿರೂಪಣೆ ಮೂಲಕ ಸತ್ವಯುತವಾದ ಪ್ರತಿಪಾದನೆ ಮಾಡುವ ಕುರುಹುಗಳನ್ನು ಎದುರಿಗಿಡುತ್ತಾ, ನಮ್ಮ ಕಾರ್ಯದ, ನಡವಳಿಕೆಯ, ಸ್ವಭಾವದ ಪ್ರತಿಬಿಂಬಗಳನ್ನು ಹುಟ್ಟುಹಾಕಿದ್ದಾರೆ. ಗಾಂಧೀಜಿಯವರ ತತ್ವಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿದ್ದು, ಅವುಗಳನ್ನು ಪಾಲಿಸುವ ಮೂಲಕ ಮೌಲ್ಯ ಹೆಚ್ಚಿಸಬೇಕೆಂಬುದು ಕವಿಯ ಮಹದಾಸೆಯಾಗಿದೆ.
ರಚನಾತ್ಮಕ ಮತ್ತು ಸಕಾರಾತ್ಮಕ ಬದಲಾವಣೆ ಕವಿಯ ಕಾವ್ಯದ ಧ್ಯೇಯವಾಗಿದ್ದು, ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸಮಾಜವನ್ನು ಉತ್ತಮಿಕೆಯೆಡೆಗೆ ಕೊಂಡ್ಯೊಯ್ಯುವ ಅಭೂತಪೂರ್ವ ಪ್ರಯತ್ನವನ್ನು ಇವರ ಬರಹದಲ್ಲಿ ಗುರುತಿಸಬಹುದು.
ಗಾಂಧೀಜಿಯ ರಾಮರಾಜ್ಯದ ಕಲ್ಪನೆ, ಸರ್ವೋದಯ ತತ್ವ, ಪ್ರಗತಿಪರ ಚಿಂತನೆ, ಸಮನ್ವಯ ಸಿದ್ಧಾಂತಗಳು ಭೂಗತವಾಗಿ ಎಲ್ಲೆಡೆ ಸ್ವಾರ್ಥ, ಭ್ರಷ್ಟಾಚಾರ, ತಾಂಡವಾಡುತ್ತಿದೆ ಎಂಬುದನ್ನು ಸಾಬೀತುಪಡಿಸುವ ಕವಿಯ ಹೋರಾಟ ಆಶಾದಾಯಕವಾಗಿದೆ.
ಗಾಂಧೀಜಿಯ ಉದಾತ್ತ ಗುಣಗಳ ಮತ್ತು ಸೇವಾ ಮನೋಭಾವಗಳ ಕಡೆಗಣನೆಯು ಕವಿಯನ್ನು ರೊಚ್ಚಿಗೆಬ್ಬಿಸಿದೆ. ದೇಶಾಭಿಮಾನದ ಕಿಚ್ಚು ಹಚ್ಚಿ ನಿಜ ಸ್ಥಿತಿ ಕಣ್ಣಿಗೆ ಕಾಣುತ್ತಿದ್ದರೂ ನೇರವಾಗಿ ಮುಖಕ್ಕೆ ರಾಚುವಂತೆ ಹೇಳದೆ, ಸಿಟ್ಟು ಸೆಡವುಗಳನ್ನು ತೋರದೆ, ಕವಿ ಬಹುಸೂಕ್ಷ್ಮವಾಗಿ ಹದವರಿತ, ಹಿತಮಿತವಾದ ಭಾಷೆಯಲ್ಲಿ ವಾಸ್ತವವನ್ನು ಅನಾವರಣಗೊಳಿಸುವ ಪ್ರಾಮಾಣಿಕ ನೆಲೆಯಲ್ಲಿ ಸಾಗಿದ್ದಾರೆ.
ಅನುಸೂಯ ಯತೀಶ್
ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ
ಗಾಂಧೀಜಿಯವರ ತತ್ವಗಳು ಹಾಗು ಅವರ ಕಲ್ಪನೆಗಳನ್ನು ಎಳೆ ಎಳೆಯಾಗಿ ಕವಿತೆಗೆ ಹೊಂದುವಂತೆಯೂ ಹಾಗು ವೈಚಾರಿಕತೆಗಳನ್ನು ಸೂಕ್ಷ್ಮವಾಗಿ ಗುರುತಿಸಿ ಅದ್ಭುತವಾಗಿ ವಿಮರ್ಶಿಸಿದ್ದೀರಿ. ತುಂಬಾ ಚೆನ್ನಾಗಿದೆ ತಮಗೆ ಅಭಿನಂದನೆಗಳು.
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ
ಹೃದಯಾಳದ ಪಮನಗಳು ಸರ್
ಗಾಂಧಿ ನಗುತ್ತಾನೆ ಕವಿತೆ ತುಂಬ ಹರಿತವಾಗಿದೆ. ಕವಿತೆಯ ಕುರಿತು ತುಂಬ ಸರಳವಾಗಿ, ಸುಂದರವಾಗಿ, ಕವಿತೆಯ ಅಳಕ್ಕಿಳಿಯುವಂತೆ ವಿಶ್ಲೇಷಣೆ ಮಾಡಿದ್ದೀರಿ. ಒಂದು ಮಾರ್ಮಿಕವಾದ ಕವಿತೆಯನ್ನು ಮುನ್ನ ಮಾಡಿಸಿದ ತಮಗೆ ನೂರೊಂದು ನಮನಗಳು.