ನಿಭಾಯಿಸುವ ಕಲೆ

ಲೇಖನ

ನಿಭಾಯಿಸುವ ಕಲೆ

ಶಿವಲೀಲ ಹುಣಸಗಿ

ಗುಲಾಬಿ ಗಿಡದ ಹೂವೊಂದು ನಸುಗಂಪಿನಲಿ ನಳನಳಿಸುತ್ತಿರುವಾಗ ನೋಡುಗರ ಕಣ್ಣಿಗೆ ಹಬ್ಬದ ಸಡಗರ ಸಂಭ್ರಮಿಸಿದಂತೆ.ರಕ್ಷಣೆಗೆ ಮುಳ್ಳುಗಳು ಕಾವಲು ಇದ್ದ ಸಂಗತಿ ಗೋಚರಿಸುವುದು ಹೂವ ಕಿತ್ತುಕೊಳ್ಳುವ ಧಾವಂತವಿದ್ದಾಗ ಮಾತ್ರ. ಕುಟುಂಬವೆಂಬ ರಥವನ್ನು ಏಳೆಯುವ ಸಾಮರ್ಥ್ಯ ಎಲ್ಲವನ್ನು ನಿಭಾಯಿಸುವ ಮನಸ್ಥಿತಿಯಿದ್ದಾಗ ಮಾತ್ರ. ಹೀಗೊಂದು ಸಾಮರಸ್ಯ ಏರ್ಪಡುವುದು ಪರಸ್ಪರ ನಂಬಿಕೆಯ ಮೇಲೆ.ಮನೆಯ ನಿಭಾಯಿಸುವುದರ ಜೊತೆಗೆ ಉದ್ಯೋಗವನ್ನು ಸರಿದೂಗಿಸುವುದು ಅಷ್ಟು ಸುಲಭವಲ್ಲ.ಪತಿ ಪತ್ನಿಯರ ನಡುವೆ ಇರುವ ನಿಸ್ವಾರ್ಥ ಭಾವ ಸ್ಪಷ್ಟವಾಗಿದ್ದರೆ ಎಲ್ಲವೂ ಹೂ ಎತ್ತಿದ ಹಾಗೆ ಸುಲಭವೆನ್ನುವುದರಲ್ಲಿ ಸಂದೇಹವಿಲ್ಲ.

ಹವ್ಯಾಸಗಳು ಯಾರಿಗಿಲ್ಲ ಹೇಳಿ? ಹವ್ಯಾಸಗಳ ಗೀಳು ಹಚ್ಚಿಕೊಂಡವಗೆ ಅದೊಂದು ಸುಂದರ ಸ್ವಪ್ನದಂತೆ. ಗಂಡು,ಹೆಣ್ಣೆಂಬ ಬೇಧ ಭಾವವಿರದೆ ಇಬ್ಬರಿಗೂ ಅವ್ಯಾಹತವಾಗಿ ಅವಕಾಶಗಳಿವೆಯೆಂಬ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು.ಮಹಿಳೆ ಹೊರ ಪ್ರಪಂಚಕ್ಕೆ ಅಡಿಯಿಟ್ಟಿದ್ದು ಒಂದು ಕುಟುಂಬದ ಜವಾಬ್ದಾರಿ ಹೊತ್ತು ,ಇನ್ನೊಂದು ಸ್ವಾವಲಂಬಿಯಾಗಿ ನಿಲ್ಲಬೇಕೆನ್ನುವ ಛಲದಿಂದ.ಇದರಿಂದಾಗಿ ಎರಡರಲ್ಲೂ ಇಂದು ಯಶಸ್ಸು ಪಡೆದ ಯಶೋಗಾಥೆಗಳು ನಮ್ಮ ಮುಂದಿವೆ.ಸಾಧಕರಿಗೆ ಯಾವುದು ಅಡ್ಡಿಯಿಲ್ಲ, ಅವರಿಗೆ ಇಚ್ಛಾಶಕ್ತಿ ಮಾತ್ರ ಜಾಗೃತವಾಗಿರಬೇಕು.

ಕಾಯಕದಲ್ಲಿ ಕೈಲಾಸ ಕಂಡವರು ಇಂದು ಅಜರಾಮರ ರಾಗಿದ್ದಾರೆ.ಎಷ್ಟೋ ಸಲ ಹವ್ಯಾಸದ ಬೆನ್ನಹತ್ತಿದವರು ನೋವಿನ ಬಾಗಿಲಲ್ಲಿ ನಿಂತು ನೋವ ನುಂಗಿ ಮುನ್ನಡೆದು ಸಾಧಿಸಿದ್ದಾರೆ.ಕೇವಲ ದುಡಿದರೆ ಸಾಕೆ? ಕೈತುಂಬ ಹಣವಿದ್ದರೆ ಸಾಕೆ? ಆಸ್ತಿ ಪಾಸ್ತಿ ಮಾಡಿಕೊಂಡು ಐಶಾರಾಮಿ ಜೀವನವಿದ್ದರೆ ಇನ್ನೇನು ಬೇಕು? ಬದುಕಿಗೆ ಸಾರ್ಥಕತೆ ಲಭಿಸುವುದು ನಮ್ಮೊಳಗಿನ ಚೈತನ್ಯ ಜೀವಂತವಾದಾಗ? ಎಷ್ಟೋ ಸಲ ಅನಿಸಿದ್ದಿದೆ ಕಲಿಯಬೇಕಾಗಿದ್ದು ಸಾಕಷ್ಟಿದೆ.
ಜವಾಬ್ದಾರಿಗಳಿಗೆ ಹೆಗಲು ಕೊಟ್ಟು ಬಾಗುವಾಗ ಆ ಹೊಣೆಗಾರಿಕೆಯಲ್ಲಿ ನಾನಾರೆಂಬ ಅಂತಃ ಸತ್ವ ಸದಾ ಒಳಹೊಳವಾಗಿ ಮಿನುಗುವಾಗ ಸಂತಸ ಮೂಡದೆ ಇರದು.

ಸೂರ್ಯ ಜಗತ್ತಿಗೆ ಉಸಿರಾದ ಹಾಗೆ ನನ್ನ ಬರವಣಿಗೆ ನನಗೊಂದು ಹೊಸ ರವಿಯಂತೆ.ಬರೆಯಲು ಸಮಯ ಹೊಂದಾಣಿಕೆ ಮಾಡಿಕೊಳ್ಳುವ ಕಾರ್ಯ ಕಷ್ಟ ಸಾಧ್ಯವಾದರೂ ಕೈಲಾಗದಿರುವುದೆನಲ್ಲ.ಬೆಳಗಿನಿಂದ ರಾತ್ರಿವರೆಗೆ ಬಿಡುವಿಲ್ಲದ ನಿಭಾಯಿಸಿ ಹಾಸಿಗೆ ಕಂಡಾಕ್ಷಣ ಒರಗುವ ಸುಸ್ತಾದ ದೇಹಕೆ,ಬೇರೆ ಏನೂ ಬೇಡವೆನ್ನಿಸದೇ ಇರದು.ಆದರೆ ಸಿಕ್ಕ ಬಿಡುವಿನ ವೇಳೆಯನ್ನು ಬಳಸಿಕೊಳ್ಳುವುದು ಜಾಣತನ.ದೇಹಕೆ ಸುಸ್ತಾದರೂ,ಮನಸ್ಸಿಗೆ ಆಸರಿಕೆ,ಬೇಸರಿಕೆ ಬರದಿದ್ದರೆ ಸಾಕೆನ್ನುತ ಮನಸ್ಸಿಗೆ ತಿಳಿದ ಹೊಸ ಲೋಕವನ್ನು ಬರೆಯುವಾಗೆಲ್ಲ ನನ್ನವನ ತೋಳ ತಲೆದಿಂಬಾಗಿದ್ದು ಇನ್ನಷ್ಟು ಉತ್ತೇಜನ ನೀಡಿದಂತೆ.

ಯಾರಕಂಗೆಣ್ಣಿಗೂ ಗುರಿಯಾಗಲಾರದೆ ನಿಭಾಯಿಸುವ ಕೆಲಸ ಮುಳ್ಳಿನ ಮೇಲೆ ನಡೆದಂತೆ.ಬರೆದುದೆಲ್ಲ ಓದುವವರಿಗೂ ಕುತೂಹಲ! ಇದನ್ನೆಲ್ಲ ಯ್ಯಾವಾಗ ಬರಿತಿ? ಹೇಗೆ ಸಾಧ್ಯ? ಮೊದಲು ನಂಬಿಕೆ, ವಿಶ್ವಾಸ ಇಲ್ಲದಿದ್ದರೆ ಬದುಕು ಅರಳುವುದು ಹೇಗೆ? ಎಷ್ಟೋ ಪ್ರತಿಭೆಗಳು ಸಮಾಜದ ಬೆಳಕಿಗೆ ಬರದೆ ಕಮರಿದ್ದು ಇತಿಹಾಸ! ಹೆಣ್ಣು ಪ್ರಸಿದ್ದಳಾದರೆ ಬೆಂಬಲಿಸುವ ಸಮುದಾಯ ತುಂಬಾ ವಿರಳ.ಆ ಸಾಧನೆಗೊಂದು ಪಟ್ಟ ಕಟ್ಟಲು ಒಂದು ಮತಿಹೀನ ಸಮುದಾಯ ಕಾದು ಕುಂತಿದ್ದು,ಅದನ್ನೆಲ್ಲ ಎದುರಿಸಿ ನಡೆವ ಧೈರ್ಯ ಮಾಡಿ ಯಶಸ್ಸು ಪಡೆದವರು ನಮಗೆಲ್ಲ ಸ್ಪೂರ್ತಿ.

ದುಡಿದು ತಂದು ಹಾಕುವ ಸೊಸೆ,ಮಗಳಿದ್ದರೆ ಸಾಕು, ಓದೊದು,ಬರೆಯೊದರಲ್ಲಿ ಕಾಲಹರಣ ಮಾಡಿದರೆ ಖುಷಿಪಡುವ ಜಾಯಮಾನ ಎಲ್ಲರಿಗೂ ಇರಬೇಕಲ್ಲ. ಅಪ್ಪಿತಪ್ಪಿ ನೂರಕ್ಕೆ ಶೇಕಡಾ ೩೦%ರಷ್ಟು ಪ್ರೋತ್ಸಾಹ ನೀಡುವರಿದ್ದಾರೆಂಬುದೆ ಹೆಮ್ಮೆ ಪಡುವಂತಾಗಿದೆ. ಎಷ್ಟೋ ಸಲ ಕುಟುಂಬವನ್ನು ನಿರ್ಲಕ್ಷಿಸಿ ಕೇವಲ ಹವ್ಯಾಸದತ್ತ ತೊಡಗಿಕೊಂಡವರು ಸೂತ್ರಹರಿದ ಗಾಳಿಪಟದಂತೆ ಎಲ್ಲ ಯಶಸ್ಸು ಲಭಿಸಿದರೂ ಕುಟುಂಬದ ಜೊತೆಯಿಲ್ಲದೆ ಒಂಟಿಯಾಗಿ ಸಂಭ್ರಮಿಸುವ ಸ್ಥಿತಿ ನಿರ್ಮಾಣವಾದರೆ ಲಾಭವುಂಟೆ? ‘ಮನೆಗೆದ್ದು ಮಾರುಗೆದಿ’ ಯೆಂಬ ಮಂತ್ರವನ್ನು ಸದಾ ನೆನಪಿನಲ್ಲಿಟ್ಟುಕೊಂಡು ಮುನ್ನೆಡೆದರೆ ಮಾತ್ರ ಮುಂದಿನ ಏಳುಬೀಳುಗಳಿಗೆ ಕುಟುಂಬ ಶ್ರೀ ರಕ್ಷೆಯಾಗಿ ನಿಲ್ಲುವುದು.ಅದರಿಂದ ಸಾತ್ವಿಕ ನೆಲೆಗಟ್ಟು ದೊರೆತಂತೆ.

ಮೂರನ್ನು ನಿಭಾಯಿಸುವಾಗ ದಶದಿಕ್ಕಿನಲ್ಲಿ ಚಿಂತಿಸುವ ದೃಢವಾದ ಗಟ್ಟಿಮುಟ್ಟಾದ ಮನಸ್ಸು ಸಿದ್ದವಾಗಬೇಕು. ಹೆಣ್ಣು ಜಗದ ಕಣ್ಣು.ಪ್ರತಿ ನಿರಂತರತೆಯ ಹಿಂದೆ ತ್ಯಾಗದ,ಬಲಿದಾನದ ಕುರುಹುಗಳಿರುತ್ತವೆ.ಅದನ್ನು ಅರಿತು ಎಡರುತೊಡರುಗಳ ಮೆಟ್ಟಿನಿಂತು ಸಾಧಿಸುವ ಪ್ರತಿಯೊಬ್ಬರಿಗೂ ಸೋಲೆಂಬುದು ಇಲ್ಲವೆ ಇಲ್ಲ.ಸ್ವಲ್ಪ ಯಾಮಾರಿದರೂ ಫಲಿತಾಂಶ ಉಹಿಸಲು ಸಾಧ್ಯವಿಲ್ಲ. ಹೀಗಾಗಿ ನೋವು,ಹತಾಶೆ,ನಿರಾಶೆಗಳ ಜಂಜಾಟದಲ್ಲಿ ಮೈಮರೆಯವ ಬದಲು ಮನೆಯೇ ಮೊದಲ ಪಾಠ ಶಾಲೆಯೆಂಬ ಮೂಲ ಮಂತ್ರ ತನ್ನದಾಗಿಸಿಕೊಂಡು ಸಮಾಧಾನ ಚಿತ್ತದಿಂದ ಹಸನ್ಮುಖಿಯಾಗಿ ನಡೆದರೆ ಎಲ್ಲವೂ ಸರ್ವ ಮಂಗಳವಾದಿತು….

ಅತ್ತೆ,ಮಾವ,ಇತರೆ ಸಂಬಂಧಗಳು ಪತಿಯ ಮನೋಧರ್ಮದ ಮೇಲೆ ನಿಂತಿರುವುದು.ಹೆಣ್ಣೊಬ್ಬಳ ಸಾಧನೆಯ ಹಿಂದೆ ಅವಳ ಪತಿ,ಕುಟುಂಬದ ಸಹಕಾರ ಸಿಕ್ಕಲ್ಲಿ ಅವಳಿಗೊಂದು ಭದ್ರ ಬುನಾದಿ ಹಾಕಿದಂತೆ. ಗುಲಾಬಿ ಹಾಗೂ ಮುಳ್ಳು ಜೊತೆಜೊತೆಯಾಗಿ ಹೇಗೆ ಬಾಳುತ್ತವೆ ಎಂಬುದನ್ನು ಅರಿತಂತೆ.ತ್ರಿಶಂಕು ಸ್ಥಿತಿ ಕುಟುಂಬ-ನೌಕರಿ-ಬರವಣಿಗೆ ಎಲ್ಲವೂ ಒಂದಕ್ಕೊಂದು ಪೂರಕವಾಗುವಂತೆ ಹೊರಳಿದಂತೆಯೇ ಹೂರಣ ಭರಿತ ಹೋಳಿಗೆಯಂತೆ ಅನ್ನಿಸದಿರದು.

4 thoughts on “ನಿಭಾಯಿಸುವ ಕಲೆ

  1. ತಮ್ಮ ವಾಸ್ತವದಂತಸುಂತೆ ಸುಂದರವಾಗಿ ಬಿಂಬಿಸಿದ್ದೀರಿ.ತಮ್ಮ ಜೀವನವೂ ಕೂಡ ಆಷ್ಟೇ ಆದರ್ಶ ವಾಗಿದೆ ಎಂದು ಎಲ್ಲರಿಗೂ.

  2. ವಾಸ್ತವಕ್ಕೆ ಸರಿಯಾಗಿದೆ ನಿನ್ನ ಬರವಣಿಗೆಯ ಸಾಲುಗಳು.
    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸೂಪರ್

  3. ನಿಭಾಯಿಸುವ ಜಾಣ್ಮೆ ಮಹಿಳೆಯರಿಗೆ ಸವಾಲಾದರೂ ನಿಭಾಯಿಸುವರೆಂಬುದೆ ಹೆಮ್ಮೆಯ ಸಂಗತಿ ಅರ್ಥಪೂರ್ಣವಾಗಿ ಮೂಡಿಬಂದಿದೆ.

Leave a Reply

Back To Top