ಕಾವ್ಯ ಸಂಗಾತಿ
ಪ್ರೇಮಕನ್ನಿಕೆಯ ಆಸೆ
ಶಂಕರಾನಂದ ಹೆಬ್ಬಾಳ


ಬಾಳಿನ ಬಂಡಿಗೆ ಗುರಿಯನು ತೋರಿಸಿ
ನಾಳಿನ ಆಸೆಯ ಬಿತ್ತಿ
ತೋಳಿನ ಆಸರೆ ಬಯಸುತ ನಿಂತಿಹೆ
ಗಾಳಿಯು ಬೀಸಲು ಒತ್ತಿ
ತನುವಿಗೆ ಹಿತವನು ನೀಡುವ ದೇವನೆ
ಮನವದು ಧ್ಯಾನಿಸಿ ನಿನ್ನ
ಗುಣವದು ಮಾಣಿಕ ಪ್ರೇಮದ ಕನ್ನಿಕೆ
ವಿನಯವ ತೋರಲು ಚೆನ್ನ
ಕಾನನದರಗಿಣಿ ಭಾಸುರ ಹಿಮಮಣಿ
ಜಾನಕಿಯಂತಿರೆ ಚೆಲುವೆ
ಗಾನವ ಪಾಡುತ ಕಣ್ಣಲಿ ಕರೆದಿರೆ
ಯಾನದಿ ನಲ್ಲೆಯ ಗೆಲುವೆ
ಸರಿದಿವೆ ದಿನಗಳು ಯುಗವನು ಮೆಲ್ಲಗೆ
ಹರಿಯುವ ಕಂಬನಿ ಧಾರೆ
ತೆರೆದಿದೆ ರಮಣಿಯೆ ಹೃದಯದ ಬಾಗಿಲು
ಕೊರೆಯುವ ತಂಪಿನ ನೀರೆ
ಒಲವಿನ ನುಡಿಯನು ಕೇಳದ ರಮಣನೆ
ಲಲನೆಯ ಮೊರೆಯನು ಕೇಳು
ಅಲೆಗಳ ಅಬ್ಬರ ಕಡಲಲಿ ಉದಿಸಲು
ನಲಿವನು ಕಾಣುತ ಬಾಳು