ಮಿಲನ
ಅರುಣಾ ನರೇಂದ್ರ
ನಾನು ನೀನು ಒಂದು ದಿನ
ಸಂಧಿಸುವ ಕಾಲ ಬಂದರೆ
ಈ ಜಗದ ಚೆಲುವೆಲ್ಲ
ನಮ್ಮ ಮುಂದೆಯೇ
ಬಂದು ನಿಲ್ಲಬಹುದು
ನಾನು ನಿನ್ನ ಕಣ್ಣಲ್ಲಿ
ನನ್ನ ರೂಪು ನೋಡಿಕೊಳ್ಳುತ್ತೇನೆ
ನೀನು ನಿನ್ನೆ ನಾಳೆಗಳ ಮರೆತು
ಪ್ರೀತಿಯ ಮಾತುಗಳ ಕಿವಿಯಲ್ಲಿ ಉಸಿರಬಹುದು
ಯುಗಳಗೀತೆಯ ಕೇಳಿ
ಕೋಗಿಲೆ ಮೂಕವಾಗುತ್ತದೆ ನೋ
ಚಂದ್ರ ಮಂಚದಲಿ ಚುಕ್ಕಿಗಳ ಸಿಂಗರಿಸಿ
ಬೆಳದಿಂಗಳ ನೊರೆ ಹಾಲು ತುಂಬಿ ಕೈಗಿತ್ತು
ಸೋಬಾನೆ ಹಾಡಿ ತಂಗಾಳಿ
ನಿನ್ನ ಬಳಿ ನನ್ನ ಕಳಿಸಬಹುದು
ಅದರ ಮಧುವನು ಕುಡಿದು
ಮತ್ತೇರಿ ಮೈಮರೆತು
ಮಿಲನ ಮಹೋತ್ಸವದ
ಶುಭ ಗಳಿಗೆಯಲ್ಲಿ
ಶತಮಾನದ ವಿರಹ ನೀಗಬಹುದು
ಆಹಾ….