ಚಂಪಾ- ಒಂದು ಅಚ್ಚಳಿಯದ ನೆನಪು
ಚಂಪಾ ಅಂದರೆ ಬಂಡಾಯ, ಬಂಡಾಯ ಅಂದ್ರೆ ಚಂಪಾ !
ಯಾಕೆಂದರೆ ಚಂಪಾ ಇದ್ದುದೇ ಹಾಗೇ…..
ನೇರ ನಿಷ್ಠುರ ಸಂಕ್ರಮಣವೇ ಚಂಪಾ
ಉದ್ರಿ ಚಂದಾದಾರರಿಗೆ 15 ಪೈಸೆ ಕಾರ್ಡದಲ್ಲಿ ಚಂಪಾ ನೋಟೀಸ್ ಕಳಿಸುತ್ತಿದ್ದರು!
ಹೀಂಗಿಂಗ ಏನಪಾಂತಂದ್ರ ನಿಮ್ದು
ಇಷ್ಟ ಬಾಕಿ ಉಳಿದದ ಕಳಸರಿ,
ಇಲ್ಲಾಂದ್ರ ನಾನೇ ಬರಬೇಕಾತೈತಿ! ಅಂತ
ಚಂಪಾರ ಸಂಕ್ರಮಣದಿಂದ ಮೂರು ಬಾರಿ ಲಲಿತ ಪ್ರಬಂಧದಲ್ಲಿ ಬಹುಮಾನ ಪಡೆದ ದೊಡ್ಡ ಪ್ರಶಸ್ತಿ ನನ್ನದು!
ಯಾಕಂದ್ರs ಚಂಪಾ ಬಳಿ ವಶೀಲಿ ನಡಿತಿದ್ದಿಲ್ಲ! ಅದಕ್ಕs ……
ನಾವೆಲ್ಲ ಚಂಪಾ ಬರಗೂರ ಲಂಕೇಶ್
ಅನಂತಮೂರ್ತಿ ಕೆ.ವಿ ಸುಬ್ಬಣ್ಣ ಅಕ್ಷರ ಚಿದಂಬರರಾವ ಜಂಬೆ ಪ್ರಸನ್ನ
ಮುಂತಾದವರನ್ನೆಲ್ಲ ನೋಡಿಕೊಂಡು
ಬೆಳೆದವರು.
ಗೋಕಾಕ ಚಳುವಳಿ ನೇತೃತ್ವವನ್ನು
ಚಂಪಾ ವಹಿಸಿದ್ದರು. ತಮ್ಮ ಗುರು ಗೋಕಾಕರಿಗೇ ‘
‘ ಗೋಕಾಕ ಗೋ ಬ್ಯಾಕ್’ ಅಂತ ಘೋಷಣೆ ಕೂಗಿದವರು.
ಗೋಕಾಕ ಚಳುವಳಿ ಸಂದರ್ಭದಲ್ಲಿ
ರಾಜಕುಮಾರ ಚಳುವಳಿಗೆ ಧುಮುಕಿದಾಗ ಇಡೀ ಚಳುವಳಿಯ ರಂಗೇ ಬದಲಾಗಿ ಹೋಯಿತು.
ಸರಕಾರ ಥರಗುಟ್ಟಿತು.
ಚೆನ್ನವೀರ ಕಣವಿ ಕಾಪಸೆ ಗಿರಡ್ಡಿ …… ಯವರೆಲ್ಲಾ ಗೋಕಾಕ ಚಳುವಳಿಯಲ್ಲಿ ಒಂದಾದರು.
ಚಂಪಾ’ ಕನ್ನಡಾ ಕನ್ನಡಾ ಬರ್ರಿ ನಮ್ಮ ಸಂಗಡಾ’ ಅಂದ್ರು.
ನಾವೆಲ್ಲಾ ಆಗಲೇ ರಾಜಕುಮಾರ ಸ್ಟೈಲ್ ಲ್ಲಿ ಬೀದಿ ನಾಟಕ ಮಾಡಿದೆವು.
ಗಂಗಾಧರ ಕೋರಳ್ಳಿ 50 ದಿನ ಉಗ್ರ ಉಪವಾಸ ಮಾಡಿದರು.
. . . ……
ಚಂಪಾ ಸ್ಟೈಲ್ ಹಾಗೆನೇ…
ಸುರಪುರದ ಆರಾಧನಾ ಭವನದಲ್ಲಿ
1992ರಲ್ಲಿ ಕವನ ಸಂಕಲನ ಬಿಡುಗಡೆ ಸಮಾರಂಭ ನಡೆಯಿತು.
ಅಂತರಾಷ್ಟ್ರೀಯ ಖ್ಯಾತ ಕವಿ ಮಂಜೂರ ಅಹ್ಮದ್ ತನಹಾ ತಿಮ್ಮಾಪುರಿಯವರ ಸಂಕಲನ’ಛಲ ನಿ ಛಲನಿ ಸಾಹೀಬಾ’ದ ಬಿಡುಗಡೆ ಹಾಗೂ ಕವಿಗೋಷ್ಠಿ ಮುಶಾಹಿರಾ
ಕಾರ್ಯಕ್ರಮ ನಡುರಾತ್ರಿ ತನಕ ನಡೆಯಿತು. ಆಗ ಮಹಾಕವಿ ಲಕ್ಷ್ಮೀಶ ವಾಚನ ಸಂಘ ಹಾಗೂ ಸುರಪುರದ ಕನ್ನಡ ಸಾಹಿತ್ಯ ಸಂಘದಿಂದ ಆಯೋಜಿಸಿದ್ದ ಈ ಕಾಯ೯ಕ್ರಮಕ್ಕೆ ಚಂಪಾ ಮುಖ್ಯ ಅತಿಥಿ ಹಾಗೂ ಮುಖ್ಯ ಆಕರ್ಷಣೆ!
ರಾಜಾ ಮದನಗೋಪಾಲ ನಾಯಕರು ಆಗ ಸಚಿವರಾಗಿದ್ದರು.
ಆದರೂ ಅತ್ಯಂತ ಸಾಮಾನ್ಯರಂತೆ
ಭಾಗವಹಿಸಿದ್ದರು.
ಎ.ಕೃಷ್ಣ ಸುರಪುರ, ಗುರುಬಸಯ್ಯಾ ಅಮ್ಮಾಪುರ, ಜೆ. ಅಗಸ್ಟಿನ್, ಬಸವೇಶ್ವರನಾಥ ಸುಗೂರಮಠ, ಬಿ.ಕೃಷ್ಣಮಾಚಾರ…. ಎಲ್ಲ ಘಟಾನುಘಟಿಗಳು ಭಾಗವಹಿಸಿದ್ದರು. ನನ್ನದೇ ನಿರೂಪಣೆ. ಚಂಪಾರ ಮಾತು ಕವನ
ಚುಟುಕು ಇಡೀ ಸಮಾರಂಭಕ್ಕೆನೇ
ಕಚಗುಳಿ ಇಟ್ಟವು, ನಿಶೆಯೆರಿಸಿದವು.
ಅದು ಚಂಪಾ ! ಅದು ತನಹಾ!
……….
ಹಾಗೇ ಅನೇಕ ಸಲ ಬಂದರು ಚಂಪಾ !
ಬಂದಾಗೊಮ್ಮೆ ಬಿರುಗಾಳಿ ಎಬ್ಬಿಸಿ ಹೋದರು!
ನಮ್ಮ ಶಿವಕುಮಾರ ಅಮ್ಮಾಪುರ ತಮ್ಮ ತಂದೆ ಗುಬ ಸ್ಮರಣಾರ್ಥ ಮಾಡಿದ ಕಾಯ೯ಕ್ರಮಗಳಿಗೆ ಚಂಪಾ ಬಂದಿದ್ದರು.
ಅದು ಒಂದು ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಹಾಗೂ ಇನ್ನೊಂದು ಬಿ. ಗುಡಿಯಲ್ಲಿ ನಡೆಯಿತು.
ಚಂಪಾ ಎಲ್ಲಿ ಬಂದರೂ ಎಲ್ಲರ ಗುರುತ್ವಾಕರ್ಷಣ ಕೇಂದ್ರವಾಗುತ್ತಿದ್ದರು.
‘ಸಂಕ್ರಮಣ’ದ ಚಂಪಾ ಕಾಲಂ ತುಂಬ ಪ್ರಸಿದ್ಧವಾಗಿತ್ತು.
ಅದರಲ್ಲಿ ಎಲ್ಲ ನಾ ನಾ ಎನ್ನುವವರನ್ನೆಲ್ಲ ಬೆತ್ತಲುಗೊಳಿಸುತ್ತಿದ್ದರು.
ಲಂಕೇಶ ಬೆಳಗೆರೆ …. ಎಲ್ಲರನ್ನೂ ಅಲ್ಲಿ ಕಟಕಟೆಯಲ್ಲಿ ನಿಲ್ಲಿಸಿದರು.
ರವಿ ಬೆಳಗೆರೆಗಂತೂ ‘ಪ್ರಾಣೇಶಾಚಾರಿಯ ಪಿಂಡ’ ಎಂದೇ
ಕರೆಯುತ್ತಿದ್ದರು.
………
ಚಂಪಾರ ನಾಟಕಗಳಾದ
ಗೋಕರ್ಣದ ಗೌಡಶಾನಿ, ಟಿಂಗರ ಬುಡ್ಡಣ್ಣ, ಅಪ್ಪ….ಗಳನ್ನು ವಿಜಾಪುರದ ಕಲಾಮಾಧ್ಯಮಕ್ಕೆ
ಅಶೋಕ ಬಾದರದಿನ್ನಿ ನಿರ್ದೇಶಿಸಿದರು. ಕಲಾಮಾಧ್ಯಮವು
ಜಿ.ಎನ್.ದೇಶಪಾಂಡೆ ನೇತೃತ್ವದಲ್ಲಿ ಚಂಪಾ ನಾಟಕೋತ್ಸವದ ತಿರುಗಾಟ ಮಾಡಿ ಸಂಕ್ರಮಣ ಕ್ಕೆ ಹಣ ಸಂಗ್ರಹಿಸಿಕೊಟ್ಟರು. ಇದು ಸಂಕ್ರಮಣದ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯ ಎಂದು ಈ ಸಂದರ್ಭದಲ್ಲಿ ಚಂಪಾ ಹೇಳಿದ್ದರು.
…………
ಬಹುಶ: 1980 ರಲ್ಲಿರಬೇಕು ….
ಬಂಡಾಯ ಸಾಹಿತ್ಯ ಸಂಘಟನೆಯ ಎರಡನೆ ಸಮ್ಮೇಳನ ವಿಜಾಪುರದ ಎ.ಪಿ.ಎಂ.ಸಿ ಯಾರ್ಡಿನ ಭವನದಲ್ಲಿ
ನಡೆಯಿತು.
ಪ್ರೊ.ಎ ಎಸ್. ಹಿಪ್ಪರಗಿ ಅವರು ಇದರ ರೂವಾರಿಗಳು
ಆಗ ಚಂಪಾ ಬರಗೂರ ಸಿದ್ಧಲಿಂಗಯ್ಯ ಡಿ.ಆರ್. ನಾಗರಾಜ
ಚೆನ್ನಣ್ಣ ವಾಲಿಕಾರ ….. ಹೀಗೆ ಎಲ್ಲ ಎಲ್ಲ ಬಂಡಾಯದ ಮೂಲ ಸೆಲೆಗಳು ಸೇರಿದ್ದವು.
ಆಗ ಬಂಡಾಯದ ಬಿರುಸಿನ ದಿನಗಳು. ಇವರೆಲ್ಲಾ ನೆಲಕ್ಕ ಒದ್ದರs
ನೀರ ಬರ್ತಾವು ಅನ್ನುವ ಹುಮ್ಮಸಿನಲ್ಲಿದ್ದವರು.
ಆಗಲೇ ಸಿದ್ಧಲಿಂಗಯ್ಯ ‘ಇಕ್ರಲಾ ಒದಿರಲಾ ಇವರನ್ನ ಗೆಬ್ರೆಲಾ…..ಅಂತ ಕವನ ಓದಿದರು.
ಅದು ಇಡೀ ಕನ್ನಡ ಸಾಹಿತ್ಯ ಲೋಕವನ್ನೇ ಅಲ್ಲೋಲ ಕಲ್ಲೋಲ ಮಾಡಿತು.
………………….
ಶಿವಮೊಗ್ಗದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಾಗ ಚಂಪಾನೇ ರಾಜ್ಯ ಕಸಾಪ ಅಧ್ಯಕ್ಷ ರಾಗಿದ್ದರು.
ಆಗ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು. ಚಂಪಾಗೆ ಇಂಥವರನ್ನ ಸಮ್ಮೇಳನಕ್ಕೆ ಕರೆಸಬೇಡಿರಿ ಎಂದು ಶಿವಮೊಗ್ಗ ದಲ್ಲಿ ಒತ್ತಡ ತಂದರೂ ಚಂಪಾ ಕೇಳಲಿಲ್ಲ. ಅಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು.
ಸರಕಾರ ರೊಕ್ಕ ಕೊಡ್ತದ ಸರಕಾರದ ಮಾತು ಕೇಳಬೇಕೆಂದರೇ, ಚಂಪಾ
‘ ಸರಕಾರ ಏನು ಮನಿಯಿಂದ ರೊಕ್ಕಾ ಕೊಡ್ತಾದೇನು? ಜನರ ತೆರಿಗೆ ದುಡ್ಡು ಅದು , ಕೊಡಲೇ ಬೇಕು. ಇದರಾಗ ಏನೂ ಉಪಕಾರ ಇಲ್ಲ’ ಎಂದು ದೊಡ್ಡದಾಗಿ ಮೈಕಿನಲ್ಲಿ ಹೇಳಿದರು!
ಇದು ಚಂಪಾ !
………,
ಹೀಗೆ ಚಂದ್ರಶೇಖರ ಪಾಟೀಲರ ಬಗ್ಗೆ
ಸಾವಿರಾರು ನೆನಪುಗಳಿವೆ
ಹೋಗಿ ಬನ್ನಿ ಚಂಪಾ
ಕನ್ನಡ ನಾಡು ಎಂದೆಂದಿಗೂ ನಿಮ್ಮನ್ನು ನೆನೆಸಿಕೊಳ್ಳುತ್ತದೆ.
ಶ್ರೀನಿವಾಸ ಜಾಲವಾದಿ