ಪ್ರೀತಿಯಿಂದ ಎಲ್ಲವನ್ನೂ ಮಾಡಿದ ಪ್ರೊ.ಚಂಪಾ

ಪ್ರೀತಿಯಿಂದ ಎಲ್ಲವನ್ನೂ ಮಾಡಿದ ಪ್ರೊ.ಚಂಪಾ

ಪ್ರೀತಿಯಿಲ್ಲದೇ ಏನನ್ನೂ ಮಾಡಲಾರೆ; ದ್ವೇಷವನ್ನು ಸಹ

ಎಂಬುದು ಪ್ರೊ.ಚಂದ್ರಶೇಖರ ಪಾಟೀಲರ ಪ್ರಸಿದ್ಧ ಮಾತು‌. ಕನ್ನಡದ ಬನಿ ದನಿಯನ್ನು ಸಮರ್ಥವಾಗಿ ಬಳಸಿದವರು ಚಂಪಾ. ಅವರು ಮಾತನಾಡುತ್ತಿದ್ದ ಶೈಲಿಯಲ್ಲೇ ಬರೆಯುತ್ತಿದ್ದರು‌ ಹಾಗೂ ಬದುಕುತ್ತಿದ್ದರು. ಅವರ ಮಾತು ಕತ್ತಿಯ ಅಲಗು. ಹಾಗೂ ಸತ್ಯ ಬೆಡಗು.  ಎದುರಾಳಿಯನ್ನು ಸೆದೆ ಬಡಿಯುವುದರಲ್ಲಿ ಚಂಪಾ ಸಿದ್ಧ ಹಸ್ತರು. ಸೆದೆ ಬಡಿಯುವುದು ನ್ಯಾಯಯುತ ಉದ್ದೇಶಕ್ಕೆ. ಹಾವೇರಿಯ ಜಗಳಗಂಟ ಎಂದು ಚಂಪಾ ತಮ್ಮನ್ನು ತಾವೇ ಕರೆದುಕೊಂಡಿದ್ದರು ಎಂದು ಎಲ್ಲೋ ಓದಿದ ( ಕೇಳಿದ)  ನೆನಪು ನನಗೆ‌ .

ಅಷ್ಟೊಂದು ಮೊನಚು ಕನ್ನಡ ಭಾಷೆಗೆ ಇದೆ ಎಂದು ತೋರಿಸಿದವರು , ಅದನ್ನು ಸಂಕ್ರಮಣದ ಸಂಪಾದಕೀಯದಲ್ಲಿ ದಾಖಲಿಸಿದವರು ನಮ್ಮ ಪ್ರೀತಿಯ ಚಂದ್ರಶೇಖರ ಪಾಟೀಲರು‌ ‌. 

ಚಂಪಾ ಬಂಡಾಯದ ಕವಿ. ಅಸಂಗತ ನಾಟಕಗಳನ್ನು ಬರೆದು ಪ್ರಯೋಗಿಸಿದವರು. ಇಂಗ್ಲೀಷ್ ಪ್ರಾಧ್ಯಾಪಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕೆಲಸ ಮಾಡಿದವರು. ಸಂಕ್ರಮಣ ಪತ್ರಿಕೆಯ ಸಂಪಾದಕರು.

ಹೀಗಿದ್ದ ಪ್ರೊ.ಚಂದ್ರಶೇಖರ ಪಾಟೀಲರನ್ನು ನಾನು ಮೊದಲು ನೋಡಿದ್ದು ,ಧಾರವಾಡದಲ್ಲಿ . ಅದು ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ‌ . 1989-91ರಲ್ಲಿ ಕನ್ನಡ ಎಂ.ಎ. ಓದುತ್ತಿದ್ದಾಗ

ಗೆಳೆಯ ಗಣೇಶ ಅಮಿನಗಡ  ಒಂದು ದಿನ  ಇಂಗ್ಲಿಷ್ ಡಿಪಾರ್ಟಮೆಂಟ್ ನ ಚೇಂಬರ್ ಗೆ ಚಂಪಾ ಅವರನ್ನು ಕಾಣಲು ನನ್ನನ್ನು  ಕರೆದೊಯ್ದ. ಆಗ ನೋಡಿದ್ದು ಚಂಪಾ ಅವರ‌ನ್ನು . ಮುಂದೆ ಆಗಾಗ ನಡೆವ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ದೂರದಿಂದ ನೋಡುತ್ತಿದ್ದೆ  .

ಮುಂದೆ ನಾನು ಕಾರವಾರ ಬಳಿಯ ಸದಾಶಿವಗಡಕ್ಕೆ ೧೯೯೩ರ ಹೊತ್ತಿಗೆ ಕನ್ನಡ ಉಪನ್ಯಾಸಕನಾಗಿ  ಬಂದೆ.  ಸಂಕ್ರಮಣ ಓದುತ್ತಿದ್ದ ನಾನು ೧೯೯೭  ರಲ್ಲಿ ‘ಜ್ವಾಲೆಗಳ ನಡುವೆ’  ಎಂಬ  ಕವಿತೆ ಕಳುಹಿಸಿದೆ. ಅದು ಪ್ರಕಟವಾಯಿತು. ನಂತರ ಅದೇ ವರ್ಷ ಅಗಸ್ಟನಲ್ಲಿ ‘ಸ್ವಾತಂತ್ರೋತ್ಸವ ಕವಿತೆ” ಎಂಬ ಕವನವೂ ಪ್ರಕಟವಾಯಿತು‌ . ಅಂದಿನ ಬೆಸುಗೆ ಹಾಗೆ ನಡೆದು ಬಂತು. ಚಂಪಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರವಾರಕ್ಕೆ ಬಂದರು. ಪತ್ರಿಕಾಗೋಷ್ಠಿಯೂ ಆಯಿತು. ಆಗ ಧಾರವಾಡ, ಕವಿವಿ ಕ್ಯಾಂಪಸ್ ವಿಚಾರ ಹೇಳಿದೆ.  ಜನವಾಹಿನಿ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕೆಲಸಕ್ಕೆ ಸೇರಿದ್ದ ಕಾರಣ,  ಚಂಪಾ ಸರ್ ಮತ್ತಷ್ಟು ಹತ್ತಿರವಾದರು. ಮುಂದೆ ಕಸಾಪ  ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದಾಗ  ಚಂಪಾ ಮತ್ತೆ ಕಾರವಾರಕ್ಕೆ ಬಂದರು. ಆಗಲೂ ಪತ್ರಿಕಾಗೋಷ್ಠಿ ನಡೆಯಿತು. ಅದರ ಪತ್ರಿಕಾ ವರದಿಗಳನ್ನು  ತಲುಪಿಸಲು ಚಂಪಾ ಸರ್ ನನಗೆ  ಹೇಳಿ ಹೋಗಿದ್ದರು.

ಮುಂದೆ ಧಾರವಾಡದ ಮೇ ಸಾಹಿತ್ಯ ಮೇಳದಲ್ಲಿ ಸಿಕ್ಕಿದ್ದರು. ನಂತರ ಮೈಸೂರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡಿಗರು ಎಂದೂ ಮರೆಯದ ಮಾತುಗಳನ್ನು ಆಡಿದರು. ಕೋಮುವಾದವನ್ನು  ಪ್ರಬಲವಾಗಿ ವಿರೋಧಿಸಿದವರು    ಚಂಪಾ. ಅವರ ನೇರ ನಿಷ್ಠುರತೆ ಅವರನ್ನು ಬಹು ಎತ್ತರಕ್ಕೆ ಕೊಂಡೊಯ್ಯಿತು‌ .

ಗೌರಿ ಲಂಕೇಶರ ಹತ್ಯೆಯಾದಾಗ ಚಂಪಾ  ಬರೆದ ಕವಿತೆ ಸಂಕ್ರಮಣದಲ್ಲಿದೆ.

ಅದರ ಒಂದು ಸಾಲು ಇಲ್ಲಿ ನೆನಪಿಸುವೆ…

ಸತ್ತವರು ಏನಾಗುತ್ತಾರೆ?

ಬದುಕಿದವರ ನೆನಪಿನ

ಗುದ್ದಲಿಯಲ್ಲಿ

ಸದಾ ಬದುಕುತ್ತಾರೆ….”

ಗೌರಿ ಹತ್ಯೆ ತನಿಖೆ ವಿಳಂಬವಾದಾಗ , ಗೆಳೆಯರೆಲ್ಲಾ ಸೇರಿ ಅಂದಿನ ಗೃಹ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ (25  ಸೆಪ್ಟೆಂಬರ್  2017 ) ಕೊಡಲು ಹೋಗಿದ್ದೆವು. ವಿಕಾಸ ಸೌಧದಲ್ಲಿ ರಾಮಲಿಂಗ ರೆಡ್ಡಿ ಅವರನ್ನು ಕಂಡು, ಮುಖ್ಯಮಂತ್ರಿ ಗೃಹ ಸಚಿವರನ್ನು ಕಾಣಲು ಹೋದೆವು. ಅಲ್ಲಿ ಮುಖ್ಯಮಂತ್ರಿಗಳು ಇರಲಿಲ್ಲ. ಕೊನೆಗೆ ಅವರ ಅಪ್ತಕಾರ್ಯದರ್ಶಿಯನ್ನು ಸಿಎಂ ಕಳುಹಿಸಿದರು. ಅಲ್ಲಿ ಗೌರಿ ಹತ್ಯೆ ತನಿಖೆ ಚುರುಕುಗೊಳಿಸುವಂತೆ ಮನವಿ‌ ಮಾಡಿದೆವು. ಆಗ ಚಂಪಾ ನಮ್ಮ ತಂಡದ ನೇತೃತ್ವ ವಹಿಸಿದ್ದರು. ಮುಖ್ಯಮಂತ್ರಿ ಗೃಹಕಚೇರಿ ಎದುರು ಚಂಪಾ ಸರ್ ಜೊತೆ  ಐದು ನಿಮಿಷದ ಚರ್ಚೆ . ಅದೇ ನನ್ನ ಹಾಗೂ ಚಂಪಾ ಸರ್ ಅವರ  ಕೊನೆಯ ಭೇಟಿಯಾಯಿತು. ೨೦೨೦ರ ಡಿಸೆಂಬರನಲ್ಲಿ ಸಂಕ್ರಮಣ ಪತ್ರಿಕೆಯನ್ನು ಮತ್ತೆ ತರುತ್ತಿದ್ದೇನೆ. ಎರಡು ಕವಿತೆ ಕಳಿಸು ಎಂದು ಪೋನ್ ಮಾಡಿದ್ದರು. ಪತ್ರಿಕೆಯ ಹೊಸ ಸ್ವರೂಪವನ್ನು ಹೇಳಿದ್ದರು‌ ; ಅದು ಅವರ ಜೊತೆ ಆಡಿದ ಕೊನೆಯ ಮಾತು. ಆದರೆ ಅವರ ‘ಗಾಂಧೀ ಸ್ಮರಣೆ’  ಸಂಕಲನವನ್ನು ಆಗಾಗ ಓದುತ್ತಾ,‌ ಅದರಲ್ಲಿ ನವ್ಹೆಂಬರ್ ೧೯೯೬ ರಲ್ಲಿ ಪಿ.ಲಂಕೇಶ ಮೇಷ್ಟ್ರು ಬರೆದ ಹಿನ್ನುಡಿಯ‌ನ್ನು‌ ಆಗಾಗ ಓದುತ್ತಾ ಚಂಪಾ ಸರ್ ಜೊತೆ ಆಗಾಗ ಮಾತಾಡುತ್ತೇನೆ.

ಗಾಂಧೀ ಸ್ಮರಣೆಯಲ್ಲಿ ಗಾಂಧೀಜಿ ಬಗ್ಗೆ ಬರೆದ ಕವಿತೆಗಳು, ೫೦ ರ ಅಡಿಗರು, ಹಾಗೂ  ‘ ೬೦ರ ಅಡಿಗರ ಅಡಿಗೆ ‘  ಕವಿತೆಗಳನ್ನು ಆಗಾಗ ಓದುತ್ತಿರುತ್ತೇನೆ.

ಚಂಪಾ ಎಷ್ಟು ನಿಷ್ಠುರವಾಗಿ ಬರೆಯುತ್ತಿದ್ದರು ಎಂಬುದು ಗ್ರಹಿಸಲು ಸಂಕ್ರಮಣದ ಸಂಪಾದಕೀಯಗಳನ್ನು ಇವತ್ತಿನ ಬರಹಗಾರರು ಓದಲೇಬೇಕು. ಆಧುನಿಕ  ಕನ್ನಡ  ಸಮಕಾಲೀನ ಸಾಹಿತ್ಯ ಚರಿತ್ರೆ,‌ಸಾಹಿತಿಗಳ ಮುಖವಾಡ, ಇಬ್ಬಂದಿತನ ,‌ನಾಡಿನ ಚಲನೆ ಗ್ರಹಿಸಲು ಅದು ಅಗತ್ಯ ಕೂಡಾ.

ಕನ್ನಡ ಕನ್ನಡಬರ್ರಿ ನಮ್ಮ ಸಂಗಡ…” ಎಂಬ ಚಂಪಾಅವರ ಕವಿತೆಯ ಸಾಲು ಹಾಗೂ

ಬೇಂದ್ರೆ ಜೊತೆ ಧಾರವಾಡ ಕವಿವಿ ರೈಲ್ವೆ ಗೇಟ್ ಬಳಿ ಮಾಡಿದ‌ ಜಗಳವನ್ನು ನಾವು ನೆನಪಿಡಬೇಕು‌. ( ಅದು ಯೂ ಟೂಬ್ ನಲ್ಲಿ ಲಭ್ಯವಿದೆ) ಜಗಳದ ಕೊನೆಗೆ ಚಂಪಾ ಹೇಳುವ ಮಾತು ; ” ಬೇಂದ್ರೆ ದೊಡ್ಡ ಕವಿ, ಸಣ್ಣ ಮನುಷ್ಯ” ಇಂತಹ ಸತ್ಯದ ಕಿಡಿನುಡಿಗಳ ಮೂಲಕ ಚಂಪಾ ನಮ್ಮ ಎದೆಯಲ್ಲಿ ಬದುಕಿರುತ್ತಾರೆ‌ . ಚಂಪಾ ನಮ್ಮೊಳಗಿನ ದನಿ ಹಾಗೂ ಎಚ್ಚರ. ಹಾಗೂ

ಈ ನೆಲದ ಜಾಗೃತ ಪ್ರಜ್ಞೆ.

………..

ನಾಗರಾಜ್ ಹರಪನಹಳ್ಳಿ

The News Minute | South News | Latest Breaking News and Headlines From  South India

2 thoughts on “ಪ್ರೀತಿಯಿಂದ ಎಲ್ಲವನ್ನೂ ಮಾಡಿದ ಪ್ರೊ.ಚಂಪಾ

  1. ಕಂಬಾರರಿಗೆ ಜ್ಞಾನಪೀಠ ಬಂದಾಗ ಚಂಪಾ ಅವರು ವಿಜಯ ಕರ್ನಾಟಕದಲ್ಲಿ ಅಂಕಣ ಬರೆಯುತ್ತಿದ್ದರು
    ‌ ಕಂಬಾರ ಬಗ್ಗೆ ಒಂದು ಪದ್ಯ ಬರೆದಿದ್ದರು.
    ಅದು ಹೀಗಿತ್ತು….

    ” ಕಂಬಾರ
    ಇಂವ
    ನಾಕಣೆದು ಕುಡುದು
    ಎಂಟಣೇದು ವದರತಾನ “

  2. ನನ್ನ ಕವನ ಸಂಕಲನ ತಲುಪಿದಾಗ ಖುದ್ದಾಗಿ ಫೋನ್ ಮಾಡಿ ಮೆಚ್ಚುಗೆಯ ಮಾತಾಡಿ, ಉಯಿಲೊಂದು ಬರೆದಿಡುವೆ ಕವಿತೆಯ ಒಂದು ಸಾಲು ಹೇಳಿ .. ಹೀಗೇ ಬರೆಯಮ್ಮ ಅಂದಿದ್ದರು. ಸಂಕ್ರಮಣ ಕ್ಕೆ ಆ ತಾಯಿ ಈ ತಾಯಿ ಕವಿತೆ ಕಳಿಸಿದಾಗ ಆ ಕವಿತೆಯ ಕುರಿತು ಸಹ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಮೊನ್ನೆ ಹಾವೇರಿಗೆ ಹೋದಾಗ ಅವರ ಒಡನಾಡಿ ಹಾವೇರಿಯ ಹಿರಿಯ ಲೇಖಕಿ ಶ್ರೀಮತಿ ಸಂಕವ್ವ ನವರು ಭೇಟಿ ನನ್ನ ಪುಣ್ಯಕ್ಕೆ ಆಯಿತು. ಆಗ ಮಾತಿನ ನಡುವೆ ಚಂಪಾ ಸರ್ ಅನಾರೋಗ್ಯ ದ ಕುರಿತು ಹೇಳಿದ್ದರು. ಕರೆ ಮಾಡುವೆ ಅಂತ ಹೇಳಿ ಬಂದಿದ್ದೆ ಅವರಿಗೆ. ಕಾಲ್ ಮಾಡಲು ಮರೆತೇ ಬಿಟ್ಟೆ. ತುಂಬಾ ಅವರ ದನಿ ಕೇಳುವ ಭಾಗ್ಯವೂ ಇಲ್ಲವಾಯ್ತು. ಅವರ ವೈಚಾರಿಕತೆ ನಮ್ಮ ಮುಂದಿದೆ. ಸದಾ ಎದೆಯಲ್ಲಿಡುವೆ.

Leave a Reply

Back To Top