ಸರಣಿ ಬರಹ

ಅಂಬೇಡ್ಕರ್ ಓದು

ಭಾಗ-8

B R Ambedkar: 10 Little-Known Facts About His Extraordinary Life

                ಛತ್ರಪತಿ ರಾಜರ್ಷಿ ಶಾಹೂ(ಸಾಹೂ) ಮಹಾರಾಜರು ಪ್ರಜಾಪ್ರಭುತ್ವವಾದಿ ಮತ್ತು ಸಮಾಜ ಸುಧಾರಕರಾಗಿ ಭಾರತಿಯ ರಾಜಪ್ರಭುತ್ವದ ಅರಸರುಗಳಲ್ಲಿಯೇ ಪ್ರಸಿದ್ದಿ ಹೊಂದಿರುವರು. ಅಸ್ಪೃಶ್ಯತೆಯ ಕಳಂಕವನ್ನು ತೊಡೆದುಹಾಕಿ ನಿಮ್ನವರ್ಗದ ಜನರ ಜೀವನ ಸುಧಾರಣೆಗೆ ಪ್ರಯತ್ನ ಮಾಡಿದ ಕಿರ್ತಿ ಶಾಹು ಮಹಾರಾಜರಿಗೆ ಸಲ್ಲುತ್ತದೆ. ಹಿಂದು ಸಮಾಜದ ವ್ಯವಸ್ಥೆಯಲ್ಲಿ ಅಡಕಗೊಂಡಿರುವ ಜಾತಿ ಪದ್ದತಿಯ ಉದ್ದೇಶದ ಕಾರಣವನ್ನು ಪ್ರಶ್ನಿಸುತ್ತಾರೆ. ಯಾವ ಉದ್ದೇಶಕ್ಕಾಗಿ, ಯಾರಿಗಾಗಿ ಈ ಜಾತಿಪದ್ದತಿ ಜಾರಿಯಲ್ಲಿದೆ, ಎಂದು ಜಾತಿ ಪದ್ದತಿಯ ಉದ್ದೇಶವನ್ನೇ ಪ್ರಶ್ನಿಸುತ್ತಾರೆ. ಬ್ರಾಹ್ಮಣಶಾಹಿ ವ್ಯವಸ್ಥೆಯನ್ನು ದಿಕ್ಕರಿಸಿ ಸಾಂಪ್ರದಾಯಿಕ ಸಮಾಜದ ವಿರುದ್ದ ನಿಲ್ಲವರು. ಸಂಸ್ಥಾನದಲ್ಲಿ ನಿಮ್ನಜನರ ನೇಮಕ ಮಾಡಿಕೊಂಡು ಮೀಸಲಾತಿ ಜಾರಿಗೆ ತಂದು ಮೀಸಲಾತಿ ಜನಕರಾಗಿದ್ದಾರೆ.  ಅಸ್ಪೃಶ್ಯ ವ್ಯಕ್ತಿಯನ್ನು ಪಟ್ಟದಾನೆಯ ಮಾವುತನನ್ನಾಗಿ ಮಾಡುತ್ತಾರೆ.

ಅಸ್ಪೃಶ್ಯರಿಗಾಗಿ ಶಿಕ್ಷಣ ಸಂಸ್ಥೆಗಳನ್ನು, ವಸತಿ ನಿಲಯಗಳನ್ನು ತೆರೆದು ಶಿಕ್ಷಣ ಕೊಡಿಸುತ್ತಾರೆ. ಸಾರ್ವಜನಿಕವಾಗಿ ನಿಮ್ನವರ್ಗದ ಜನರೊಂದಿಗೆ ಊಟ ಮಾಡುತ್ತಾರೆ. ದಲಿತರು ಶಿಕ್ಷಣ ಪಡೆದು ಹೆಚ್ಚು ಹೆಚ್ಚು ಜನ ವಕೀಲರಾಗಲು ಕರೆ ಕೊಡುತ್ತಾರೆ. ಕಲಿತು ವಕೀಲರು, ನ್ಯಾಯಾದೀಶರು ಆದಾಗ ತನ್ನ ಜನರಿಗೆ ನ್ಯಾಯಾ ಕೊಡಿಸಲು ಸಾದ್ಯವೆಂಬುದನ್ನು ಅರಿತು ದಲಿತರಿಗೆ ನ್ಯಾಯವಾದಿಗಳಾಗಲು, ನ್ಯಾಯಾಧಿಶರಾಗಲು ಕರೆ ಕೊಟ್ಟಿದ್ದು ಅರ್ಥ ಪೂರ್ಣವಾಗಿದೆ. ಸಾಹೂ ಮಹಾರಾಜರ ಸಾಧನೆ ಅಮೋಘವಾಗಿದೆ. 

ದತ್ತೋಬಾ ಪವಾರ ಅವರೊಂದಿಗೆ ಅಂಬೇಡ್ಕರರು ಸಾಹೂ ಮಹಾರಾಜರನ್ನು ಬೇಟಿ ಮಾಡುವರು. ಅಂಬೇಡ್ಕರರ ಅಗಾದ ಬುದ್ದಿ ಶಕ್ತಿ ಹಾಗೂ ಅವರ ಕ್ರಾಂತಿಕಾರಿ ವಿಚಾರಗಳಿಂದ ಸಾಹೂ ಮಹಾರಾಜರು ಪ್ರಭಾವಿತರಾಗಿದ್ದರು. ಇಬ್ಬರೂ ಮಹಾನ ನಾಯಕರು ಹಲವಾರು ಬಾರಿ ಬೇಟಿಯಾಗುವರು. ದಮನಿತ ಸಮಾಜದ ಏಳ್ಗೆಗೆ ಕೂಡಿ ಕೆಲಸ ಮಾಡುವರು. 1920 ರ ಮಾರ್ಚ-21 ರಂದು ಕೋಲ್ಲಾಪುರ ಸಂಸ್ಥಾನದ ಮಾಗಾಂವ ಎಂಬಲ್ಲಿ ನಿಮ್ನವರ್ಗದ ಮಹಾಸಮ್ಮೇಳನ ಆಯೋಜಿಸುವರು. ಅಂಬೇಡ್ಕರರಿಗೆ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಡಲಾಗುತ್ತದೆ. ಸಾಹೂ ಮಹಾರಾಜರು ಸಮ್ಮೇಳದಲ್ಲಿ ಭಾಗವಹಿಸಿ ಮಾತನಾಡುತ್ತಾ, “ ನಿಮ್ಮ ಸಂಕೋಲೆಗಳನ್ನು ಬಿಡಿಸಲು ಅಂಬೇಡ್ಕರರ ರೂಪದಲ್ಲಿ ವಿಮೋಚನಾಕಾರನನ್ನು ಕಂಡುಕೊಂಡಿದ್ದಿರಿ, ಇನ್ನು ಮುಂದೆ ಅಂಬೇಡ್ಕರರು ನಿಮ್ಮ ಪಾಲಿನ ರಕ್ಷಕನಾಗುತ್ತಾರೆ, ಅವರೊಬ್ಬ ಭಾರತದ ಅಗ್ರ ಗ್ರಣ್ಯ ನಾಯಕರಾಗುತ್ತಾರೆಂದು ನನ್ನ ಅಂತರಾತ್ಮ ನುಡಿಯುತ್ತದೆ” ಎಂದು ನುಡಿದ ಅವರ ಮಾತುಗಳು ಮಹಾನಾಯಕನ ಉದಯದ   ದಿಕ್ಸೂಚಿಯಾಗಿತ್ತು.

ಅಂಬೇಡ್ಕರರು ಪತ್ರಿಕೆಯೊಂದನ್ನು ಹೊರ ತರುವುದಾಗಿ ಮಹಾರಾಜರ ಮುಂದೆ ಇಚ್ಚೆಯನ್ನು ವ್ಯಕ್ತಪಡಿಸಿದಾಗ ಸಾಹೂ ಮಹಾರಾಜರು ಅಂಬೇಡ್ಕರರಿಗೆ ಎರಡುವರೆ ಸಾವಿರ ಹಣ ಸಹಾಯ ಮಾಡುವರು. ಸಾಹೂ ಮಹಾರಾಜರ ಸಹಾಯದಿಂದ ಹಾಗೂ ದತ್ತು ಪವಾರರೊಂದಿಗೆ ಕೂಡಿ 1921 ರ ಜನವರಿ 31 ರಂದು “ಮೂಕನಾಯಕ” ವಾರ ಪತ್ರಿಕೆಯನ್ನು ಮರಾಠಿಯಲ್ಲಿ ಹೊರ ತರುತ್ತಾರೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ಜಾತಿಸಂಕೋಲೆಗಳಿಂದ ಪ್ರಾಣಿಗಳಂತೆ ಮೂಕರಾಗಿ ಬದುಕುತ್ತಿರುವ ಕೋಟಿ ಕೋಟಿ ಜನರ ಪ್ರತಿಬಿಂಬವಾಗಿ “ಮೂಕನಾಯಕ” (ಲೀಡರ್ ಆಪ್ ದಿ ಡಂಬ) ಮೊದಲ ದಲಿತ ಪತ್ರಿಕೆಯಾಗಿ ಪ್ರಕಟವಾಗುತ್ತದೆ.

“ಕೇಸರಿ” ಅಂದಿನ ಪ್ರಸಿದ್ದ ಪತ್ರಿಕೆ. “ಕೇಸರಿ”ಯಲ್ಲಿ  “ಮೂಕನಾಯಕ” ಪತ್ರಿಕೆ ಪ್ರಕಟವಾದ ಕುರಿತು ಪ್ರಕಟಿಸಲು ಕೇಳಿದಾಗ ;  ಪ್ರಕಟಣೆ  ಕೊಟ್ಟಾಗಲು ಕೇಸರಿ ಪತ್ರಿಕೆ “ಮೂಕನಾಯಕ ಪತ್ರಿಕೆ”  ಕುರಿತು ಮಾಹಿತಿ ಪ್ರಕಟಿಸುವುದಿಲ್ಲ. ಬಾಲಗಂಗಾದರ ತಿಲಕರು ಕೂಡಾ ಕೇಸರಿ ಪತ್ರಿಕೆ ಸಂಪಾದಕರಿಗೆ,  ಮೂಕನಾಯಕ ಪತ್ರಿಕೆ ಕುರಿತು ಪ್ರಕಟಿಸಿಸಲು ಒತ್ತಾಯ ಮಾಡುವುದಿಲ್ಲ.

 ದಲಿತರ ಪತ್ರಿಕೆಯ ಕುರಿತು ಪ್ರಕಟಿಸದೆ ಇರುವುದು ಅಂದಿನ ಸಮಾಜದ  ಅಸ್ಪೃಶ್ಯತೆಯ, ಮೈಲಿಗೆಯ ಮನಸ್ಥಿತಿ ಹೇಗಿತ್ತೆಂಬುದು ಅರಿವುಮೂಡಿಸುತ್ತದೆ.     

 ಅಂಬೇಡ್ಕರರು ಮೊದಲ ಸಂಚಿಕೆಯ ಸಂಪಾದಕೀಯದಲ್ಲಿ ಹಿಂದೂ ಧರ್ಮದ ಲೋಪದೋಷಗಳನ್ನು ಹೊರತರುತ್ತಾರೆ .  ಹಿಂದೂ ಸಮಾಜದ ಬೌತಿಕ ಮತ್ತು ಸಾಮಾಜಿಕ ಜಗತ್ತನ್ನು ಒಳಹೊಕ್ಕು ನೋಡಿದಾಗ ನಿಸಂಶಯವಾಗಿ ನಮಗಲ್ಲಿ ಕಂಡುಬರುವುದು ತಾರತಮ್ಯ ಅಸಮಾನತೆ ಮೇಲುಕೀಳು ಅಸ್ಪೃಶ್ಯತೆಯ ಮಡಿಮೈಲಿಗೆ ಇವು ಅನೇಕ ಭಾರತೀಯರ ಮನೆ-ಮನಗಳಲ್ಲಿ ನಾನಾ ರೂಪದಲ್ಲಿ ಇವು ಜಾರಿಯಲ್ಲಿವೆ.

ಜಗತ್ತಿನೆಲ್ಲೆಡೆ ದೈಹಿಕವಾಗಿ ಮತ್ತು ಜನಾಂಗಿಯವಾಗಿ ಕಪ್ಪಗೆ-ಬೆಳ್ಳಗೆ,ಉದ್ದ-ಗಿಡ್ಡ, ಸೀದಾಮೂಗು-ಮೊಂಡಮೂಗು, ಆರ್ಯ-ಅನಾರ್ಯ, ಯವನ-ದ್ರಾವಿಡ, ಅರಬ-ಇರಾನಿ, ಬಡವ-ಶ್ರೀಮಂತ ಇತ್ಯಾದಿ ಅಸಮಾನತೆಗಳು ಕಂಡುಬರುತ್ತವೆ. ಆದರೆ ಭಾರತದಲ್ಲಿ ಧಾರ್ಮಿಕ ಅಸಮಾನತೆ ಅತ್ಯಂತ ಕ್ರೂರವಾಗಿ ಜಾರಿಯಲ್ಲಿರುವುದನ್ನು ಅಂಬೇಡ್ಕರರು ಪತ್ರಿಕೆ ಮೂಲಕ ಅರಿವಿಗೆ ತರುತ್ತಾರೆ. ಹಿಂದೂಗಳ ಮನಸ್ಸಿನಲ್ಲಿ ಜಾತೀಯತೆ ಬೇರುಗಳು ಆಳವಾಗಿ ಇಳಿದುಬಿಟ್ಟಿವೆ ಎನ್ನುತ್ತಾರೆ. ಯುರೋಪಿಯನೊಬ್ಬನನ್ನು ಯಾರು ನೀನು ಎಂದು ಕೇಳಿದರೆ ಆತ ನಾನು ಇಂಗ್ಲೀಷನವನು, ನಾನು ಜರ್ಮನ, ನಾನು ಪ್ರೆಂಚ್ ಎಂದು ಉತ್ತರಿಸುತ್ತಾರೆ. ಆದರೆ ಭಾರತದಲ್ಲಿ ಒಬ್ಬ ಇನ್ನೊಬ್ಬ ಬಾರತೀಯನನ್ನು ಯಾರು ಎಂದು ಕೇಳಿದಾಗ ತಾನು ಹಿಂದೂ ಎಂದು ಹೇಳಿದರೆ ಆತ ತೃಪ್ತನಾಗುವುದಿಲ್ಲ, ಜಾತಿಯನ್ನು ಹೇಳಲೇಬೇಕು, ಆಗ ಅಸಮಾನತೆ ತೆರೆದುಕೊಳ್ಳುತ್ತಿದೆ, ಕೀಳು ಜಾತಿಯವನೆಂಬ ತಿರಸ್ಕಾರ ಭಾವನೆ ಸವರ್ಣಿಯನ ಮನದಲ್ಲಿ ತುಂಬಿಬಿಡುವುದು ಎಂದು ಪತ್ರಿಕೆಯಲ್ಲಿ ವಿಶ್ಲೇಷಿಸುವರು.

“ಮೂಕನಾಯಕ”ದ ಮತ್ತೊಂದು ಸಂಪಾದಕೀಯದಲ್ಲಿ ಅಂಬೇಡ್ಕರರು, “ಹಿಂದೂ ಸಮಾಜ ಬಹು ಮಹಡಿಗಳುಳ್ಳ ಬೃಹತ ಗೋಪುರ. ಇದು ಮೆಟ್ಟಿಲುಗಳಿಲ್ಲದ, ಪ್ರವೇಶ ದ್ವಾರವಿಲ್ಲದ ಅಂತಸ್ತುಗಳ  ಮಹಡಿ. ಕೆಳಗಿನ ಮಹಡಿಯಲ್ಲಿ ಹುಟ್ಟಿನಿಂದ ಸಾಯುವವರೆಗೆ ಅಲ್ಲೇ ಕೊಳೆಯಬೇಕು. ಎಷ್ಟೇ ಅರ್ಹನಿದ್ದರೂ ಮೇಲಿನ ಮಹಡಿಗೆ ಹೋಗಲಾರ. ಇನ್ನು ಮೇಲಿನ ಮಹಡಿಯಲ್ಲಿ ಎಷ್ಟೇ ಅನರ್ಹನಿದ್ದರೂ ಕೇಳಗೆ ಬರಲಾರ. ಮೊದಲನೆ ಮಹಡಿಯಲ್ಲಿ ಬ್ರಾಹ್ಮನರು, ಎರಡನೇ ಮಹಡಿಯಲ್ಲಿ ಬ್ರಾಹ್ಮನೇತರರು, ಮೂರನೇ ಮಹಡಿಯಲ್ಲಿ ಶೂದ್ರರನ್ನು ಇರಿಸಲಾಗಿದೆ ಎಂದು ವಿಶ್ಲೇಷಿಸುತ್ತಾ ಬ್ರಾಹ್ಮನೇತರರಿಗೆ ಮತ್ತು ಶೂದ್ರರಿಗೆ ಬ್ರಾಹ್ಮನರು ಆದಿಕಾಲದಿಂದಲು ಕೀಳಾಗಿ ಕಾಣುತ್ತಾ ಬಂದರು. ಬ್ರಾಹ್ಮನರು ಜ್ಞಾನ ಸಂಗ್ರಹಕಾರರೆ ಹೊರತು ಜ್ಞಾನ ಪ್ರಸಾರಕರಲ್ಲ. ಬ್ರಾಹ್ಮನೆತರರು ಮತ್ತು ಶೂದ್ರರು ಹಿಂದೂಳಿಯಲು ಅವರ ಅಜ್ಞಾನ ಮತ್ತು ಮೂಡ ನಂಬಿಕೆ ಕಾರಣ. ಬ್ರಾಹ್ಮನರು ಅವರಿಗೆ ಶಿಕ್ಷಣ ನೀಡಲಿಲ್ಲ. ಸಂಸ್ಕೃತ ಭಾಷೆ ಕಲಿಸಲಿಲ್ಲ. ಪ್ರಾಣಿಗಳನ್ನು ದೇವರೆಂದು, ಪಕ್ಷಿಗಳನ್ನು ದೇವರೆಂದು, ಗಿಡಮರಗಳನ್ನು ದೇವರೆಂದು ಪೂಜಿಸುವ ತನ್ನದು ಶ್ರೇಷ್ಠ ಸಂಸ್ಕೃತಿ ಎಂದು ಬಿಂಬಿಸಿಕೊಳ್ಳುವ ಹಿಂದೂ ಸಮಾಜವು ತನ್ನದೆ ದೇವರುಗಳನ್ನು ಪೂಜಿಸುತ್ತಾ ಸಂಪ್ರದಾಯವನ್ನು ಅನುಸರಿಸುತ್ತಾ ಬಂದ ಅಸ್ಪೃಶ್ಯರನ್ನು ಮನುಷ್ಯರನ್ನಾಗಿ ಕಾಣಲಿಲ್ಲ. ಬ್ರಾತೃತ್ವದಿಂದ ನೋಡಲಿಲ್ಲ, ಪ್ರಾಣಿಗಳಿಗಿಂತ ಕೀಳಾಗಿ ಕಾಣುತ್ತಾ ಬಂದರು. ಸಾರ್ವಜನಿಕವಾಗಿ ಊಟವನ್ನು, ಪ್ರರ್ಥನೆಯನ್ನು ಹಂಚಿಕೊಳ್ಳದೆ ತಾನು ಮತ್ತು ತನ್ನ ದೇವರು ಮೈಲಿಗೆಯಾಗುತ್ತದೆಂದು, ಅಪವಿತ್ರವಾಗುತ್ತದೆಂದು ಹಿಂದೂ ಸಮಾಜದ ಒಂದು ಭಾಗದಂತೆ ಇದ್ದ ಮೂಲ ನಿವಾಸಿಗಳನ್ನು ಅಸ್ಪೃಶ್ಯರನ್ನಾಗಿಸಿ ಮುಟ್ಟಿಸಿಕೊಳ್ಳದೆ, ಹಿಂದೂ ಸಮಾಜದಿಂದ ದೂರವಿಟ್ಟರೆಂದು ಮಾನವ ಹಕ್ಕುಗಳಿಗಾಗಿ ನಿಮ್ನ ವರ್ಗದ ಜನರಲ್ಲಿ ಅರಿವು ಮುಡಿಸುವ ಕಾರ್ಯ ಆರಂಭವಾಗಬೇಕಿದೆ ಎನ್ನುತ್ತಾರೆ.

ಅಸ್ಪೃಶ್ಯರ ಹಕ್ಕುಗಳ ನಿರ್ಧಾರವಾಗದೆ ಶೋಷನೆಯಿಂದ ವಿಮೋಚನೆಗೆ ಅವಕಾಶವಿಲ್ಲದ ಸ್ವಾತಂತ್ರ್ಯ ಹೇಗೇ ಸ್ವಾತಂತ್ರ್ಯವಾದಿತು ಎಂದು ಪ್ರಶ್ನಿಸುತ್ತಾರೆ. ಅಸ್ಪೃಶ್ಯರಿಗೆ ಸಮಾನತೆ ಹಕ್ಕುಗಳಿಲ್ಲದ ಹಸ್ತಾಂತರವಾದ ಸ್ವರಾಜ್ಯ, ಸ್ವರಾಜ್ಯವೇ ಅಲ್ಲವೆನ್ನುತ್ತಾರೆ. ಹೋಂ ರೂಲ್ ಗಾಗಿ ಬ್ರಿಟಿಷರ ವಿರುದ್ದ ಚಳುವಳಿ ಸಾರಿದ ಜನ ಅಸ್ಪೃಶ್ಯರಿಗೆ, ಮೊದಲು ಶಿಕ್ಷಣ, ಉದ್ಯೋಗ, ಸಮಾನತೆಯನ್ನು ಕೊಡಲು ಮುಂದಾಗಬೇಕೆಂದು ಪತ್ರಿಕೆ ಮೂಲಕ ಆಗ್ರಹಿಸುತ್ತಾರೆ.

                          (ಮುಂದುವರೆಯುವುದು)              

————————————-

                               

         …‌………….                    ಸೋಮಲಿಂಗ ಗೆಣ್ಣೂರ

Leave a Reply

Back To Top