ಕಾವ್ಯ ಸಂಗಾತಿ
ಡಾ. ಸದಾಶಿವ ದೊಡಮನಿ
ಕಾಲಚಕ್ರದ ಕುಣಿಕೆ
ಕೊಲ್ಲುವ ನೋವುಗಳಿಗೊಂದಿಷ್ಟು
ಕರುಣೆ ಉಣಿಸು
ನಾನಿನ್ನೂ ಬದುಕಬೇಕು
ಹಾದಿ-ಬೀದಿಯ ನೋವು
ವಕ್ಕರಿಸಿ ಕಾಡತಾವು
ಪಟ್ಟ ಪಾಡು ನಾ ಹ್ಯಾಂಗ ಹಾಡದೇ ಇರಲಿ ಹೇಳು
ಹಗಲು ಹೂವುವನು ಎದೆಗೇರಿಸಿ
ಹೊರಟಿದ್ದೆ ನಾನು
ಹುಣ್ಣಿಮೆ ಕನಸು
ಅಡ್ಡ ದಾರಿಗಟ್ಟಿ
ಕಾಡಿತು ಮನವು
ಕಾದ ಕಬ್ಬಿಣದ ಬರೆ ಎಳೆದಂತಾಗಿದೆ ಬಾಳು
ಕನಿಕರದ ದನಿಯಾದರೂ ತುಸು
ಕಿವಿಗೆ ಬೀಳಲಿ
ಕೊನೆಯಿರದ ನೋವು
ಕರಗಿ ಹೋಗಲಿ
ಕಾಲಚಕ್ರದ ಕುಣಿಕೆ
ಸಡಿಲು ನುಡಿಯಲು ಜೀವ ಉಳಿಯಲಿ
********************
ಮಸಣಕೂ ಕಡೆಯೇ…
ಒಲಿದು ಬಾ ಒಲವೆ
ನೀನಿರದ ಈ ಜೀವ
ಮಸಣಕೂ ಕಡೆಯೇ
ಒಲಿದು ಬಾ ಒಲವೆ
ಹೊಲಿದ ತುಟಿಗಳು
ಬಿಗಿದು ನೋವು
ಹೆಗಲೇರಿ ಕುಣಿದ
ಕನಸು ಸಾವು
ಸೋತರೂ ನೋವಿಲ್ಲ
ನಲಿವಿಗೆ ತಾವಿಲ್ಲ
ಒಲವು ತೇರೆಳೆದು
ಬರುತಿರೆ ನೀನಿಲ್ಲ
ನೆಮ್ಮದಿಯ ಉಸಿರ
ಹಸಿರಾಗಿ ತೋರಲು
ಹಮ್ಮು-ಬಿಮ್ಮು ಮರೆತು
ಬೇಡುವೆನು ಬಂದೆನ್ನ ಸೇರು