ಚಾರ್ಲಿಯ ದಾಳಿಗಳು

ಚಾರ್ಲಿಯ ದಾಳಿಗಳು

.

ಚಾರ್ಲಿ, ನಮ್ಮ ಬೀದಿಯ ನಾಯಿ.

ಯಾವಾಗಲೂ ನೆಟ್ಟಗೆ ನಿಂತ ಬಾಲ.  ಕೆಂಚುಗಣ್ಣು. ಕ್ರಿಡಾಳು ತರಹ ಹದವಾದ ಶರೀರ. ಶಕ್ತವಾದ ಕಾಲುಗಳು. ಪಟಪಟ ಚುರುಕು ಓಟ. ಅಪರಿಚಿತರ ಕಂಡರೆ ಆಕಾಶಕ್ಕೆ ‌ಕೇಳುವಂತೆ ಬೊಗಳು. ಬೀದಿಯ ತನ್ನ ಅಂಗಳಕ್ಕೆ ಬೇರೆ ನಾಯಿಯನ್ನೂ ಬಿಡದ ಛಲ. ಆಟೊಗಳನ್ನು, ದ್ವಿಚಕ್ರಗಳನ್ನು ಅಟ್ಟಿಸಿಕೊಂಡು ಓಡುವನು.

ಅವರು ನಿಂತರೆ ಸುಮ್ಮನಾಗುವನು. ಬೀದಿಯಲ್ಲಿ ಎಲ್ಲರ ಮನೆಯಿಂದಲೂ ಆಹಾರ ವಸೂಲಿ. ಎಲ್ಲರಿಗೂ ಪ್ರೀತಿ ಪಾತ್ರ. ಇಲ್ಲಿಯವರೆಗೆ ಯಾರನ್ನೂ ಕಚ್ಚಿಲ್ಲ.

ನೊಂದ ಬೀದಿ ನಾಯಿಗಳನ್ನು ಸಂರಕ್ಷಿಸುವ ಹವ್ಯಾಸ, ನಮ್ಮ‌ ಹುಡುಗನದು. ಹಾಗೆ‌ ರಕ್ಷಸಿದ್ದ ನಾಯಿ ಪ್ಯಾಂಥರ್. ಕಡುಗಪ್ಪು. ಕಣ್ಣೂ ಕಪ್ಪು. ರಾತ್ರಿಯ‌ ಬೆಳಕಲ್ಲಿ ಹೊಳೆಯುವುದು. ಆದರೆ ದುರದೃಷ್ಟವಶಾತ್ ಸ್ವಲ್ಪ ಕಣ್ಣು ಮಂದ. ಬೊಗಳುತ್ತಿತ್ತು. ಆದರೆ ನಿಶ್ಯಕ್ತಿ. ನಮ್ಮ ವಾಹನದಂಗಳಲ್ಲಿ ಪ್ಯಾಂಥರ್‌ನನ್ನು ಕಟ್ಟಿದ್ದೆವು. ಆದರೆ ಚಾರ್ಲಿ ಅತ್ತಿತ್ತ ಓಡಾಡುತ್ತ ಗುರ್ ಅನ್ನುತ್ತಿದ್ದ. ‘ಏಯ್’ ಅಂದ್ರೆ ಆ ಕಡೆ ಓಡುತ್ತಿದ್ದ. ನಾವು ಯಾವಾಗಲೂ ಗೇಟ್‌ನ ಅಗಳಿಯನ್ನು ಹಾಕಿಕೊಂಡೆ ಓಡಾಡುತ್ತಿದ್ದೆವು. ಪ್ಯಾಂಥರ್ ನ ನಡಿಗೆಗೆ ಕರೆದ್ಯೊಯ್ಯುತ್ತಿದುದು ಅಪರೂಪ. ಹಾಗೆ ಹೊರಟರೆ, ಕೈನಲ್ಲಿ ಕೋಲು ಖಾತ್ರಿ.

ಚಾರ್ಲಿಯೊಂದಿಗೆ ಗೆಳೆತನ‌ ಬೆಳಸಲೆಂಬ ನಮ್ಮ ಪ್ರಯತ್ನ ಅಷ್ಟೇನು‌ ಯಶಸ್ವಿಯಾಗಲಿಲ್ಲ.

ಒಂದು ದಿನ, ಪ್ಯಾಂಥರ್ ಅಂಗಳದಲ್ಲಿ ಇರುವಾಗ, ಅಕಸ್ಮಾತ್ ಗೇಟ್‌ನ ಅಗಳಿ ಹಾಕಿರಲಿಲ್ಲ. ಛಕ್ಕನೆ, ಅನಿರೀಕ್ಷಿತವಾಗಿ ನುಗ್ಗಿದ ಚಾರ್ಲಿ, ಪ್ಯಾಂಥರ್‌ನ ಕತ್ತಿಗೆ ಬಾಯಿ ಹಾಕಿ ಹಿಡಿದು ಬಿಟ್ಟ. ಭೋ…. ಎಂದು ಕೂಗುತ್ತಾ ‌ಪ್ಯಾಂಥರ್, ಒಮ್ಮೆಗೆ ಉಚ್ಚೆ ಕಕ್ಕಸ್ಸು ಮತ್ತು ವಾಂತಿಯನ್ನು ಮಾಡಿಕೊಂಡ. ಅಲ್ಲೆ ಇದ್ದ ನನ್ನ ಮನೆಯವರು ಕೋಲಲ್ಲಿ ಒಂದೇಟು ಚಾರ್ಲಿಗೆ ಕೊಟ್ಟರು. ಏಟು ಬಲವಾಗಿಯೇ ಬಿದ್ದಿರಬೇಕು. ಕುಂಂಯೀ….. ಚಾರ್ಲಿ ಅನ್ನುತ್ತಾ ಹೊರಗೋಡಿದ. ಗೇಟ್‌ನ ಅಗಳಿ ಹಾಕಿ , ಅಂಗಳ ಸ್ವಚ್ಛ‌ ಮಾಡುವುದೆ ಕೆಲಸವಾಯಿತು. ಎಲ್ಲರೂ ಚಾರ್ಲಿಯನ್ನು ಬೈಯ್ಯುವರೆ.

*               **

ನಮ್ಮ ಮನೆಯ ಹೊರ ಕಿಟಕಿಯ ಸಜ್ಜಾದ ಮೇಲೆ ಬೆಕ್ಕೊಂದು ನಾಲ್ಕು ಮರಿ ಹಾಕಿತ್ತು.

ಬೆಕ್ಕನ್ನು ಹಿಡಿಯಲು ಚಾರ್ಲಿ ಒಂದೇ ಸಮನೆ ಕಾಯುತ್ತಿದ್ದ. ನಾವು ಗೇಟ್ ಮುಚ್ಚಿದ್ದರೂ ಪಕ್ಕದ ಮನೆ ಗೋಡೆ ಹಾರಿ ಒಳಬರುತ್ತಿದ್ದ. ಅಂತೂ ಇಂತೂ ಅವನನ್ನು ತಪ್ಪಿಸಿವುದೇ ಮಹಾ ಸಾಹಸವಾಗಿತ್ತು. ಒಂದು ದಿನ‌ ಬೆಳಿಗ್ಗೆ, ಸುಮಾರು ೦೬.೩೦ ಇರಬಹುದು. ಅಂದಿನ ದಿನ ಪತ್ರಿಕೆ ತೆಗೆದಿಕೊಳ್ಳಲು ನಾನು ಗೇಟಿನ ಬಳಿ ಬಂದೆ. ಯಾವ ಮಾಯದಲ್ಲೊ ಚಾರ್ಲಿ ಒಳ ನುಸುಳಿದ್ದ. ಅಮಾಯಕ ಬೆಕ್ಕು ಅಲ್ಲೆ‌ ಬಂದಿತ್ತು. ಚಾರ್ಲಿ ಗಕ್ಕನೆ ಬೆಕ್ಕಿನ ಕತ್ತು ಹಿಡಿದ. ಬೆಕ್ಕಿನ ಒರಲು ನನ್ನ ಗಮನಕ್ಕೆ ಬರುತ್ತಿದ್ದಂತೆ ಹಿಂದೆ ಮುಂದೆ ಯೋಚಿಸಿದೆ, ಪೇಪರ್ ಸುತ್ತಿ ಚಾರ್ಲಿಗೆ ಜೋರಾಗಿಯೆ ಹೊಡೆದೆ. ಈ ಏಟನ್ನು ನಿರೀಕ್ಷೆ ಮಾಡದಿದ್ದ  ಚಾರ್ಲಿ ಪಕ್ಕನೆ ಬಾಯಿ ತೆರೆದ. ಬೆಕ್ಕು ಸರ್ರನೆ ಓಡಿ, ಛಂಗನೆ‌ ಎದುರು ಮನೆಯ ಗೇಟನ್ನು ಹತ್ತಿ ಬಿಟ್ಟಿತು. ಚಾರ್ಲಿ ನಮ್ಮ ಮನೆಯಿಂದ ಎದುರು ಮನೆಗೆ ಹೋಗಿ, ಕೆಳಗೆ‌ ನಿಂತು ಬೊಗಳಿದ. ಬೆಕ್ಕು ನಡುಗುತ್ತಿತ್ತು. ಆದರೆ ಕ್ಯಾರೇ ಅನ್ನಲಿಲ್ಲ. ಸುಮ್ಮನೆ ಕೂತ್ತಿತ್ತು. ಐದು ನಿಮಿಷದ‌ ನಂತರ ಚಾರ್ಲಿ ಹೊರಟು ಹೋದ. ನಂತರ ಯಾವಾಗಲೋ ಬೆಕ್ಕು ಹೋಯಿತು. ನಂತರ ಅದು ಮಕ್ಕಳಿಗೆ ಹಾಲು ಕುಡಿಸುತ್ತಿದ್ದನ್ನು ನಾನು ನೋಡಿದೆ.

ಬೆಳಗ್ಗೆ ಹೊರಗಿದ್ದ ನೆರೆಹೊರೆಯವರು ಚಾರ್ಲಿಯನ್ನು ಓಡಿಸಿ, ಬೆಕ್ಕನ್ನು ಬಿಡಿಸಿದ್ದಕ್ಕೆ ನನ್ನನ್ನು ಅಭಿನಂದಿಸಿದರು. ನನ್ನ ಮಗ ಮಾತ್ರಾ ” ಅಪ್ಪಾ, ನಾಯಿ ಬೆಕ್ಕುಗಳು ಸಹಜ ಶತ್ರುಗಳು. ಸ್ನೇಹವಾಗಿದ್ದರೆ ಮಾತ್ರಾ ಒಟ್ಟಿಗೆ ಇರುತ್ತವೆ’ ಅಂದ.

**          ****

ಎಲ್ಲಿಗೋ ಹೋಗಿದ್ದೆವು. ಮನೆಗೆ ಬರುವುದು ರಾತ್ರಿ ೧೨.೩೦ ದಾಟಿತ್ತು. ಗೇಟ್ ತೆಗೆದು ಒಳಗೆ ಹೋಗಿ ಮಲಗಲು ಸಿದ್ದ ಮಾಡುತ್ತಿರುವಾಗ, ನಮ್ಮ ಹಿತ್ತಿಲಲ್ಲಿ ಪರಪರ‌ ಸದ್ದು ಕೇಳಿಸಿತು. ನಾನೆಂದೆ ‘ಏನೋ ಸದ್ದು’.  ಮನೆಯವಳು ‘ ನೋಡ್ರಿ ,ಏನಂತ. ಕಳ್ಳಕಾಕರು ಬಂದಿದ್ರೆ ಏನು ಮಾಡೋದು’. ನನ್ನ ವಾಕಿಂಗ್ ಸ್ಟಿಕ್ ಹಿಡಿದು, ಮುಂಬಾಗಿಲು ತೆರೆದು ಹೊರಬಂದೆ. ಕೋಲನ್ನು ಗೋಡೆಗೆ ಬಡಿಯುತ್ತಾ ಒಂದು ಸುತ್ತು ಹಾಕಿದೆ. ಹಿತ್ತಲಲ್ಲಿ, ಒಂದು ಭಾಗಕ್ಕೆ ಬೆಳಕು ಬೀಳುತ್ತಿರಲಿಲ್ಲ. ಅದಕ್ಕೆ ಸ್ವಲ್ಪ ದೂರವೇ ನಿಂತು, ಗೋಡೆಗೆ ಕೋಲು ಬಡಿದೆ. ಯಾವುದೇ ಪ್ರತಿಕ್ರಿಯೆ ಇಲ್ಲ. ” ಸರಿ ಏನೂ‌ ಇಲ್ಲ. ಕಳ್ಳನೂ ಇಲ್ಲ. ಕಾಕನೂ ಇಲ್ಲ. ಮಲಗು” ಅಂತ್ಹೇಳಿ ಮುಸುಕು ಹಾಕಿದೆ.

ಸ್ವಲ್ಪ ನಿದ್ದೆ ಬಂದ ಹಾಗಿತ್ತು. ಮಗ ಕರೆದ ಬಾಲ್ಕನಿಗೆ. ಮೊಬೈಲ್ ಬೆಳಕು ಬಿಟ್ಟು ತೋರಿಸಿದ. ಚಾರ್ಲಿ ಹಿತ್ತಲಿಗೆ ಬಂದು ನೆಲ ಕೆರೆಯುತ್ತಿದ್ದಾನೆ. ಯಾವ ಮಾಯದಲ್ಲೊ ನಾವು ಗೇಟ್ ತೆಗೆದಾಗ‌ ಒಳಗೆ ಬಂದಿದ್ದಾನೆ. ಅವನ ಅರ್ಧ ಶರೀರ ಮಣ್ಣಿನಲ್ಲಿ ಹೂತಿದೆ. ಎಷ್ಟೆ ಬೆಳಕು ಬಿಟ್ಟರೂ ಸದ್ದು ಮಾಡಿದರೂ ಅತ್ತಿತ್ತ ತಿರುಗಿ‌ನೋಡುತ್ತಿಲ್ಲ. ಅದೇನು ಏಕಾಗ್ರತೆ. ಒಂದೇ ಸಮ ನೆಲ ಬಗೆಯುತ್ತಿದ್ದಾನೆ. :ಸರಿ ಹೋಗುತ್ತಾನೆ’ ಅಂತ ಗೇಟ್ ತೆರೆದಿಟ್ಟು‌ ಮಲಗಿದೆ.

ಆದರೂ ಕುತೂಹಲ. ಮಕ್ಕಳು ನೋಡುತ್ತಲೇ ಇದ್ದರು.  ಸುಮಾರು ೩೦ ನಿಮಿಷ ಕಳೆಯಿತು. ಚಾರ್ಲಿ ತಲೆಯೆತ್ತಿ, ಒಮ್ಮೆ‌ ತಲೆಯನ್ನು ಅತ್ತಿತ್ತ ಝಾಡಿಸಿ, ಹೊರಗೆ ಬಂದ. ನಿಧಾನವಾಗಿ ಗೇಟ್‌ನ ಬಳಿ ಬಂದು, ಅಲ್ಲಿರಿಸಿದ್ದ ನೀರು ಕುಡಿದು ಹೊರಗೆ ಹೋದ. ಅಲ್ಲಿ ಅವನ ಎಂದಿನ ಗೆಳತಿ ಕಾಯುತ್ತಿದ್ದಳು. ಸಮಯ ರಾತ್ರಿ ಎರಡರ ಸಮೀಪ. ಗೇಟ್ ಬೀಗ ಹಾಕಿ ಮಲಗಿದೆವು. ಚಾರ್ಲಿ ಹಿತ್ತಲಲ್ಲಿ ಏನು‌ ಮಾಡಿದ ಎಂಬುದೇ ಚರ್ಚೆ.

ಮಾರನೆ ದಿನ, ಮನೆಗೆಲಸದ‌ ಗೌರಮ್ಮ ಬಂದಾಗ ” ಗೌರಮ್ಮ ಹಿತ್ತಲಲ್ಲಿ ಚಾರ್ಲಿ ಏನೋ ರಾದ್ದಾಂತ ಮಾಡಿದ್ದಾನೆ ರಾತ್ರಿ. ಏನು ನೋಡು” ಅಂದೆ.

ಅವಳು ಹಿತ್ತಲಿಗೆ ಹೋಗಿ ‘ಸ್ವಾಮ್ಯಾರೇ, ಇಲ್ಲಿ ಬನ್ನಿ ‘ ಎಂದಳು. ಹೋಗಿ ನೋಡಿದರೆ,  ಚಾರ್ಲಿ ಎರಡು ಅಡಿ ಹೊಂಡ ತೋಡಿ, ಹೆಗ್ಗಣವೊಂದನ್ನು ಹಿಡಿದು, ಕಚ್ಚಿ ಸಾಯಿಸಿ ಬಿಟ್ಟಿದ್ದಾನೆ. “ಓಹ್.. ಈ ಹೆಗ್ಗಣ ಭಾಳ ದಿನದಿಂದ ತೊಂದರೆ ಕೊಡುತ್ತಿತ್ತು. ಅಂತೂ ಚಾರ್ಲಿ ಹೀರೋ. “ಛಲ ಬಿಡದ ತ್ರಿವಿಕ್ರಮನಂತೆ ಹೆಗ್ಗಣವನ್ನು ಸಾಯಿಸಿಯೇ ಹೊರಗೆ ಹೋದ. ಗಂಡು ಅಂದ್ರೆ ಅವನೇ” ಅಂತ ಎಲ್ಲರ ಹೊಗಳಿಕೆ.

**

ಈ ಮೂರು ಘಟನೆಗಳಲ್ಲಿ ಚಾರ್ಲಿನೇ ಹೀರೋ. ಪ್ಯಾಂಥರ್, ಬೆಕ್ಕು‌ ಮತ್ತು ಹೆಗ್ಗಣ, ಇತರ ಪಾತ್ರಧಾರಿಗಳು. ನಾನು ಮತ್ತು ನಮ್ಮ ‌ಮನೆಯವರುಗಳು ಹಾಗೂ ನೆರೆಹೊರೆಯವರು …ಮೂರೂ ಸಂದರ್ಭದಲ್ಲಿ ಇದ್ದಂತಹ ಪಾತ್ರಗಳು. ಮೂರೂ ಘಟನೆಗಳಲ್ಲಿ ಚಾರ್ಲಿ ನಾಯಿಯು , ಬೇರೆ ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡಿದೆ. ದಾಳಿಯು,  ನಾಯಿಯ ಸಹಜ ಗುಣ.  ಮನುಷ್ಯರಾದ ನಮ್ಮದು ಬೇರೆ ಬೇರೆ ಪ್ರತಿಕ್ರಿಯೆ. ಅದೂ ಸಹಜ ಅನ್ನಿಸುತ್ತದೆ. ಆದರೆ ಪ್ಯಾಂಥರ್, ಬೆಕ್ಕು ಹಾಗೂ ಹೆಗ್ಗಣದಲ್ಲಿ ಇದ್ದ ಜೀವ ಒಂದೇ ಅಲ್ಲವೇ.!


ಬೆಂಶ್ರೀ ರವೀಂದ್ರ

2 thoughts on “ಚಾರ್ಲಿಯ ದಾಳಿಗಳು

  1. ಚಾರ್ಲಿಯ ಸಹಜ ಸ್ವಭಾವವನ್ನು ಸಂಧರ್ಭಕ್ಕನುಗುಣವಾಗಿ ಹೇಗೆ ಬೇರೆ ರೀತಿಯಲ್ಲಿ ನೋಡುತ್ತೇವೆ ಅನ್ನುವುದನ್ನು ಘಟನೆಗಳ ಮೂಲಕ ಚೆನ್ನಾಗಿ ತಿಳಿಸಿದ್ದೀರಿ. ಜೀವಿಗಳಲ್ಲಿ ತಾರತಮ್ಯ ಎಸಗುವ ನಾವು ಎಲ್ಲ ನಮ್ಮ ಅನುಕೂಲ ಸಂತೋಷಕ್ಕೆ ತಕ್ಕಂತೆ ನಡೆಯಬೇಕೆಂದು ಬಯಸುತ್ತೇವೆ

  2. ಪ್ರಕೃತಿ ಸಹಜವಾದ ಕ್ರಿಯೆಗಳನ್ನು ಮನುಷ್ಯನು ತನ್ನ ಅನುಕೂಲಕ್ಕೆ ತಕ್ಕಂತೆ ಗ್ರಹಿಸುತ್ತಾರೆ ಎನ್ನುವದನ್ನು ಈ ಪ್ರತಿಮೆಯ ಮೂಲಕ ತೋರಿಸಿದ್ದಾರೆ ರವೀಂದ್ರರು.
    ಅಭಿನಂದನೆಗಳು.

Leave a Reply

Back To Top