ಆತ್ಮಸಖಿ

ಪುಸ್ತಕ ಸಂಗಾತಿ

ಮಾನವತೆ‌ ಮೆರೆಸಿದ ಅವ್ವನ ಹುಡುಕಾಟದ ಗಜಲ್

ಗಜಲ್ ಬಹಳಷ್ಟು ಸಲ ಪ್ರೇಮ ವಿರಹಗಳ ಅಭಿವ್ಯಕ್ತಿ ಎಂಬುದು ಎಲ್ಲ ಓದುಗರ ಅನುಭವವವೇ.ಅಲ್ಲಿ ಪ್ರೇಮ ಪ್ರೀತಿಯ ಬಳ್ಳಿ ಚಂದದಿ ತನ್ನ ವಲ್ಲರಿ ಬಿಟ್ಟು‌ ಹೂ ಚಿಗುರುಗಳ ಚಿಗುರಿಸಿ ಮಕರಂದ ಗಂಧ ಹರಡಿರುತ್ತದೆ. ಕೆಲವೊಮ್ಮೆ ಅಗಲಿದವನ / ಳ ನೋವು ಹಾಡಾಗಿ ಹರಿದು ಎದೆಯ ಹಿಂಡುತ್ತದೆ.

ತಾಯಿಯನ್ನು ಕುರಿತ ಗಜಲ್ ಬಂದಿರುವದೇ ಕಡಿಮೆ. ಅಂತಹ ವಿರ಼ಳ ಗಜಲ್ಗಳಲ್ಲಿ ಶ್ರೀಮತಿ ಅರುಣಾ ನರೇಂದ್ರ ಅವರ ” ಆತ್ಮ ಸಖಿ” ಸಂಕಲನದಲ್ಲಿ ಬಂದಿರುವ ಈ ಗಜಲ ಕೂಡ ಒಂದು .ನನ್ನ ಓದಿನ ಮಿತಿಯಲ್ಲಿ ಅವ್ವನ ಕುರಿತ ಗಜಲ್ ಬರೆದಿರುವವರೇ ಕಡಿಮೆ.ಬರೆದರೂ‌ ಈವರೆಗಿನ ಇಡೀ ‌ಕನ್ನಡ ಗಜಲ್‌ ಲೋಕದಲ್ಲಿ ಒಂದೆರಡು ಗಜಲ್ ಇರಬಹುದು. ಈ ಕುರಿತು ಬಹಳಷ್ಟು ಬಲ್ಲವರು ಹೇಳಬೇಕು.ಅವ್ವನನ್ನು ಕುರಿತ‌ ಕವಿತೆ ಸಾಕಷ್ಟು ಬಂದಿವೆ. ಅವ್ವನ ಕುರಿತೇ ಬರೆದ ಕವಿತೆಗಳ ” ಆಂಥಾಲಜಿ” ಗಳೇ ಬಂದಿವೆ.ಆದರೆ ಅದರಲ್ಲಿ ಗಜಲ್ ಕಾವ್ಯ ಪ್ರಕಾರ ಸೇರಿದಂತಿಲ್ಲ.ಇರಲಿ ಅದೀಗ ಪ್ರಸ್ತುತವಲ್ಲ.

ನಾನ಼ೀಗ ಬರೆಯ ಹೊರಟಿರುವದು ಶ್ರೀಮತಿ ಅರುಣಾ ನರೇಂದ್ರ ಅವರ ಗಜಲ್ ಬಗ್ಗೆ. ಕನ್ನಡದ ಮಹಿಳಾ ಗಜಲ್ ಕಾರ್ತಿಯರಲ್ಲಿ ಅರುಣಾ ನರೇಂದ್ರ ಪ್ರಮುಖರು.ಈಗಾಗಲೇ ಮೂರು ಅತ್ಯಂತ ಮಹತ್ವದ ಗಜಲ್ ಸಂಕಲನಗಳನ್ನು ಕನ್ಮಡ ಸಾರಸ್ವತ‌ಲೋಕಕ್ಕೆ ಸಮರ್ಪಿಸಿ, ಪ್ರಮುಖ ಗಜಲ್ಕಾರ್ತಿಯಾಗಿ ಪ್ರಸಿದ್ಧ ರಾಗಿದ್ದಾರೆ.ಅವರ” ಆತ್ಮ ಸಖಿ ” ಸಂಕಲನದ ೨೦ ನೇ ಗಜಲ್ ಆಗಿ ಈ ಕೆಳಗಿನ ಗಜಲ್ ಇದೆ.

ಅಡವಿ ಅರಣ್ಯದಾಗ ಗಿಡಕ ತೊಟ್ಟಿಲ ಕಟ್ಟಿ ಲಾಲಿ ಹಾಡಿದವ಼ಳ ಹುಡುಕುತ್ತಿದ್ದೇನೆ
ಎಲುವಿನ ಗೂಡಿಗೆ ಹತ್ತಿದ ಚರ್ಮ ಎದೆ ಹಾಲು‌ ಕುಡಿಸಿದವಳ ಹುಡುಕುತ್ತಿದ್ದೇನೆ

ಖಾಲಿಯಾದ ನುಚ್ಚಿನ ಗಡಿಗೆ ಕೆರೆದು‌ ಕೆರೆದು ಉಣಿಸಿಮುಖ‌ನೋಡಿ ಅತ್ತವಳು*
ಎಲ್ಲರ‌ ಹೊಟ್ಟೆ ತುಂಬಿಸಿ ಹಸಿವೆಯನೆ ಹೊದ್ದು ಮಲಗಿದವಳ ಹುಡುಕುತ್ತಿದ್ದೇನೆ

ಹುಡುಕಾಟ ಈ ಗಜಲ್ ನ ಮುಖ್ಯ ಆಶಯ.ಅದರಲ್ಲೂ ಮಾನವತೆಯ ಹುಡುಕಾಟ ಎಲ್ಲ ಕಾಲದ ಸಾಹಿತ್ಯದ ಉದ್ದೇಶವೂ ಹೌದು . ಗಜಲ್ ಪ್ರಕಾರಕ್ಕೆ ಅಪರೂಪದ್ದಾದ ಭಾಷೆ ಇಲ್ಲಿನದು. ಜನಪದ ಶೈಲಿಯನ್ನು ಕವಯಿತ್ರಿ ವಿನೂತನವಾಗಿ ದುಡಿಸಿಕೊಂಡಿದ್ದಾರೆ.ಮೊದಲ ಷೇರ್ ನಲ್ಲಿಯೇ ನಮಗೆ ಹಾಲುಮತ‌ ಪುರಾಣದ ಬೀರಪ್ಪ ಮಾಯವ್ವ ದೇವತೆಗಳ ನೆನಪಾಗುತ್ತದೆ. ಬೀರೇಶ್ವರನನ್ನು ಗಿಡಕೆ ತೊಟ್ಟಿಲದಲ್ಲಿ ತೂಗು ಹಾಕಿದ್ದು ಅಕ್ಕ‌ ಮಾಯವ್ವ ನ ಎದೆಯಲ್ಲಿ ಹಾಲು ಒಸರಿದ್ದು ಇವೆಲ್ಲ ಜನಪದ ಹಾಲುಮತ ಪುರಾಣದಲ್ಲಿವೆ. ಆದರೆ ಷೇರ ನ ಎರಡನೆಯ ಸಾಲು ಓದಿದೊಡನೆ ಅಲ್ಲಿನ ತೀವ್ರ ಬಡತನ ಕಾಡುತ್ತದೆ. ಮಗುವನ್ನು ಅಡವಿ ಅರಣ್ಯದಲ್ಲಿ ಗಿಡಕ್ಕೆ ತೊಟ್ಟಿಲು ಕಟ್ಟಿ ತಾಯಿ ಲಾಲಿಸಬೇಕಾದರೆ ಅದೊಂದು ದುಡಿಯುವ ಬಡ ರೈತಾಪಿ ಕುಟುಂಬ ಎಂಬುದು ಮನದಟ್ಟಾಗುತ್ತದೆ.ತಾಯಿಗೆ ತನಗೇ ತಿನ್ನಲು ಅನ್ನವಿಲ್ಲ . ಅವಳ ಎದೆಯ ಗೂಡು ಬೆನ್ನಿಗಂಟಿದೆ. ಬರೀ ದೇಹದಲ್ಲಿ ಎಲುಬುಗಳಷ್ಟೇ ಇದ್ದರೂ ತಾಯಿಯ ವಾತ್ಸಲ್ಯಕ್ಕೆ ಬಡತನ ಬಾರದು.ತನ್ನ ಮಗುವಿಗೆ ಆಕೆ ಆ ಬಡ ಎದೆಯಿಂದಲೇ ಹಾಲು ಕುಡಿಸಿದ್ದಾಳೆ . ಬಹಳ ಅಪರೂಪದ ಚಿತ್ರದೊಂದಿಗೆ ಗಜಲ್ ಪ್ರಾರಂಭವಾಗುತ್ತದೆ. ಎಂಥ ದಾರುಣವಾದ ಬಡತನವೆಂದರೆ ತಾಯಿ ಈಗಾಗಲೇ ಖಾಲಿಯಾಗಿ ಹೋಗಿರುವ ನುಚ್ಚಿನ ಗಡಿಗೆಯನ್ನೆ ಕೆರೆದು ಕೆರೆದು ಹಸಿದ ಮಕ್ಕಳನ್ನು ಸಮಾಧಾನ ಪಡಿಸುತ್ತಾಳೆ.ಆದರೆ ಇಲ್ಲದ ನುಚ್ಚು ಎಲ್ಲಿಂದ ಬಂದೀತು? ಮಕ್ಕಳ ಹಸಿವಿಗೆ ತುತ್ತು ನುಚ್ಚು‌ ಕೊಡಲಾಗದ ತಾಯಿ ಮಕ್ಕಳ ಮುಖ ನೋಡಿ ಕಣ್ಣೀರು ಸುರಿಸುತ್ತಾಳೆ.ಅವಳಿಗಾದರೂ ತಿನ್ನಲು ಏನಾದರೂ ಇದೆಯೇ ? ಅದು ತಾಯಿಯ ಗುಣ. ಎಲ್ಲರಿಗೂ ತಿನ್ನಿಸಿ ತಾನು ಹಸಿವೆಯನ್ನೇ ಹೊದ್ದು ಮಲಗುತ್ತಿದ್ದ ತಾಯಿ ಅವಳು .ಅಂತಹ‌ ಮಹಾ ತ್ಯಾಗಮಯಿಯ ನೆನಪು ಇಂದು‌ ಕವಯಿತ್ರಿಗೆ ಆಗಿದೆ.ಅದಕ್ಕಾಗಿ ಅಂತಹ ತಾಯಿಯನ್ನು ಹುಡುಕುತ್ತಿದ್ದೇನೆ ಎನ್ನುವದು ಕವಿತೆಯ ಮೂಲ ಆಶಯ ವಾಗಿದೆ.

ಪಿಚ್ಚುಗಣ್ಣುಗಳ ಮುದ್ದಿಸಿ ಮುಖ ತೊಳೆದು ಹರಿದ ಸೀರೆಯ ಸೆರಗಿನಲಿ ಒರೆಸಿದವಳು
ಎಣ್ಣೆ ಕಾಣದ ತಲೆಯ ಪ್ರೀತಿಯಿಂದಲಿ ಸವರಿ ದಣಿವರಿಯದೆ ದುಡಿದವಳ ಹುಡುಕುತ್ತಿದ್ದೇನೆ

“ಪಿಚ್ಚುಗಣ್ಣು”ಎಂಬ ರೂಪಕ ನಮಗೆ ಮತ್ತೆಲ್ಲಿ ಸಿಕ್ಕೀತು? ನಮ್ಮ ಜನಪದರ ಅರ್ಥಕೋಶ ಬಿಟ್ಟು! ಎದ್ದೊಡನೆ ಮುಖ ತೊಳೆಯದೆ ಕುಳಿತ ಮಕ್ಕಳನ್ನು ತಾಯಿಯೇ ಮಮತೆಯಿಂದ ಅವುಗಳ ಮುಖ ತೊಳೆದು ತನ್ನ ಹರಿದ ಸೀರೆಯಿಂದಲೇ ಮುಖ ಒರೆಸಿ,ಎಣ್ಣೆ ಕಾಣದ ಅವರ ತಲೆಯನು ಪ್ರೀತಿಯಿಂದಲಿ ಸವರಿ‌ ಮತ್ತೆ ತನ್ನ ದಿನದ ದಣಿವರಿಯದ ದುಡಿಮೆಗವಳು ಸಾಗುತ್ತಾಳೆ. ತಿನ್ನಲು ಸಿಗದ ಎಣ್ಣೆ ತಲೆಗೆ ಎಲ್ಲಿಂದ ಸಿಕ್ಕಿತು? ಅವಳ‌ ಮಮತೆ ತುಂಬಿದ ಕೈಯಿಂದ ತಲೆ ಸವರುತ್ತಾಳೆ.

ಅಪ್ಪನಾಡುವ ಆಟಕ್ಕೆ ಅವ ಕೊಡುವ ಕಾಟಕ್ಕೆ ದಿನನಿತ್ಯ ಕಣ್ಣೀರು ಸುರಿಸಿದವಳು
ಬರಗಾಲದ ಬವಣೆಯಲ್ಲೂ ಬದುಕು ಚಿಗುರಿಸಿ ಹೂವು ಅರಳಿಸಿದವಳ ಹುಡುಕುತ್ತಿದ್ದೇನೆ

ಹೀಗೆ ಬಡತನದ ದುರ್ಭರ ಚಿತ್ರ ಚಿತ್ರಿಸುತ್ತಲೇ ಗಜಲ್ ಅಪ್ಪನ ಚಿತ್ರವನ್ನೂ ಎಳೆದು ತರುತ್ತದೆ .ಆತ ಎಂದಿನಂತೆ ಜವಾಬ್ದಾರಿಯೇ ಇಲ್ಲದ ಆಪಾಪೋಲಿ. ಅವನ ಆಟಗಳೋ‌ ನೂರೆಂಟು .ತಾಯಿಗೆ ಕೊಡುವ ಕಾಟಗಳೂ ಎಣೆ ಇಲ್ಲದವು .ತಾಯಿ‌ ಮಾತ್ರ ಅವನ್ನು ಸಹಿಸುತ್ತಲೇ ಕಣ್ಣೀರು ಸುರಿಸುತ್ತಲೇ” ಬದುಕೇ ಬರಗಾಲವಾದಾಗಲೂ ಆ ಬವಣೆಯಲ್ಲೂ ಬದುಕ ಚಿಗುರಿಸಿ ಹೂ ಅರಳಿಸಿದ್ದು ” ಅವಳ ಜೀವ ಪ್ರೀತಿಗೆ ಸಾಕ್ಷಿಯಾಗಿದೆ.ಅದನ್ನೇ ಕವಿಯತ್ರಿ ತುಂಬ ಗೌರವದಿಂದ ನೆನೆಯುತ್ತಾಳೆ.ಮುಂದಿನ ಷೇರಿನ ಸಾಲುಗಳಂತೂ ಅಭಿಮಾನ ಉಕ್ಕಿಸುವಂತಿವೆ.

ಉಡಿಯಲ್ಲಿ ಬಯಕೆಗಳ ಬೀಜ ಕಟ್ಟಿಕೊಂಡು ನನ್ನೆದೆಯ ಹೊಲ ಹರಗಿ ಹದ ಮಾಡಿದವಳು
ಕುಡುಗೋಲು ಕುರುಪಿ ಹಿಡಿಯುವ ಕೈಯಲ್ಲಿ
ಪಾಟಿ ಚೀಲ ಕೊಟ್ಟು ಶಾಲೆಗೆ ಕಳಿಸಿದವಳ ಹುಡುಕುತ್ತಿದ್ದೇನೆ

ತಾಯಿಯ ಮಮತೆಯ ಕೃಷಿಗೆ ಮಕ್ಕಳ ಎದೆಯೇ ಹೊಲ.ಪ್ರೀತಿ ಕೃಷಿ‌ಮಾಡುವ ಅವ್ವ ಎದೆಯ ಹೊಲ ಹರಗಿ ತನ್ನ ಬಯಕೆಯ ಬೀಜ ಅಲ್ಲಿ ಬಿತ್ತುತ್ತಾಳೆ.ತನ್ನ ದುಡಿಯುವ ಬದುಕಿನೊಳಗೇ ಮಗಳನ್ನು ಓದಿಸಿದ ಆ ಪರಿ ಎಂಥ ಎದೆಯಲ್ಲಿಯೂ ಅಭಿಮಾನ ಉಕ್ಕಿಸುವಂಥದು . ಕುಡುಗೋಲು ಕುರುಪಿ ಹಿಡಿದು ಹೊಲಕ್ಕೆ ಹೋಗುವ ಆ ಮಹಾತಾಯಿ ಅದೇ ದುಡಿಮೆಯ ನಡುವೆಯೂ ಮಗಳ‌ ಬದುಕು ಸುಂದರವಾಗಲಿ ಎಂದು ಪಾಟೀ ಚೀಲ ಕೊಟ್ಟು ಶಾಲೆಗೆ ಕಳಿಸುತ್ತಾಳೆ.ಹೆಣ್ಣು ಮಗಳನ್ನು ತನ್ನ ಬಡತನದ ನಡುವೆಯೂ ಶಿಕ್ಷಣದ ಬೆಳಕಿನತ್ತ ‌ನಡೆಸಿದ ರೀತಿ ಗೌರವ ಮೂಡಿಸುತ್ತದೆ.

ಮುರುಕು ಚಪ್ಪರದೊಳಗೆ ಹರಿದ ಕನಸಿನೆಳೆಗಳ ಕೂಡಿಸಿ ಕಸೂತಿ ಹಾಕಿದವಳು
ಚಿಮಣಿಗೆ ಎಣ್ಣೆ ಇಲ್ಲದ ರಾತ್ರಿ ಕಣ್ಣ ಬೆಳಕಿನ‌ ಹಿಲಾಲುಉರಿಸಿದವಳ ಹುಡುಕುತ್ತಿದ್ದೇನೆ*

ಎಂತಹ ಚಂದದ ರೂಪಕದಿಂದ ತಾಯಿಯ ಸೃಜನಶೀಲ ಗುಣವನ್ನು ಕವಯಿತ್ರಿ ಬಣ್ಣಿಸುತ್ತಾರೆಂದರೆ ಆಕೆ ಮುರುಕು ಚಪ್ಪರದ ಒಳಗೆ ಹರಿದ ಕನಸಿನ ಎಳೆಗಳ ಕೂಡಿಸಿ ಕಸೂತಿ ಹಾಕಿದಳಂತೆ! ಅವರದು ಎಂತಹ ದಯನೀಯ ಸ್ಥಿತಿಯೆಂದರೆ ದೀಪ ಹಚ್ಚಲೂ ಎಣ್ಣೆ ಇರದ ದುರ್ಬರ ಬಡತನ..ಓದುವಾಗ ಕರುಳು ಹಿಂಡಿದಂತಾಗುವ ಸಾಲುಗಳ‌ ಕವಿತೆಯಾಗಿಸಿದ ಕವಿ ಶಕ್ತಿಗೆ ಅಭಿಮಾನ ಮೂಡುತ್ತದೆ. ತಾಯಿ ತಾನೇ ಎಣ್ಣೆಯಾಗಿ ಉರಿದು ಮಗಳ‌ ಬಾಳಿಗೆ ಬೆಳಕಾದಳಂತೆ!

ಕೊನೆಯ ಷೇರ್ ಜಾತಿ‌ವ್ಯವಸ್ಥೆಯ ದುಷ್ಟ ಚಿತ್ರಣವನ್ನು ನೀಡಿ‌ ಇನ್ನೊಂದು ಆಯಾಮವನ್ನು‌ ಪಡೆಯುತ್ತದೆ.ತಾಯಿ ದುಡಿಮೆಯಲ್ಲಿ ಗಟ್ಟಿಗಿತ್ತಿ‌ ಮಾತ್ರವಲ್ಲ, ಎಂತಹ ಧೈರ್ಯವಂತೆ ಎಂದರೆ ಜಾತಿಯ ಹುನ್ನಾರವನ್ನು ಧಿಕ್ಕರಿಸಿ‌ ನಿಲ್ಲುತ್ತಾಳೆ.

ಮುಟ್ಟಬೇಡವೆಂದು ದೂರ ಅಟ್ಟಿದವರ ಮತದ ಗೊಡವೆ ಬೇಡವೆಂದವಳು
ಉಟ್ಟ ಬಟ್ಟೆಯ‌ ಒಳಗೆ ಎಲ್ಲರೂ ಬೆತ್ತಲೆಯೆ ಅರುಣಾ ಮಾನವತೆ ಮೆರೆಸಿದವಳ ಹುಡುಕುತ್ತಿದ್ದೇನೆ

ಷೇರಿನ‌ಮೊದಲ ಸಾಲು ಜಾತಿ ವ್ಯವಸ್ಥೆಯ ದುಷ್ಟತನವನ್ನು ವಿಡಂಬಿಸುತ್ತದೆ.ಆ ತಾಯಿಯೇನೂ ಮುಟ್ಟಿಸಿಕೊಳ್ಳದವರ ಬಗೆಗೆ ಚಿಂತೆ ಮಾಡಿಲ್ಲ. ಅವರನ್ನು ತಾನೇ ದೂರ ವಿರಿಸಿ ಅಂಥ ಮಾನವೀಯತೆ ಇಲ್ಲದ ಮತವೇ ನಮಗೆ ಬೇಡ ಎಂದವಳು .ಷೇರಿನ ಎರಡನೆಯ ಸಾಲಿನಲ್ಲಿ ಗಜಲ್ ಅನುಭಾವಿಕ ನೆಲೆಯನ್ನು ಮುಟ್ಟುವದು ಗಜಲ್ ಕಾವ್ಯದ ಮತ್ತೊಂದು ಶಕ್ತಿಯಾಗಿದೆ.ತಾಯಿ ಯ‌ ಗುಣ ಬಣ್ಣಿಸುತ್ತಲೇ ಗಜಲ್ ಕಾರ್ತಿ” ಉಟ್ಟ ಬಟ್ಟೆಯ ಒಳಗೇ ಎಲ್ಲರೂ ಬೆತ್ತಲೆಯೇ ” ಎಂಬ ಅನುಭಾವಿಕ ಸಾಲಿನೊಂದಿಗೆ ಗಜಲ್ ಮುಗಿಸಲೆಳಸುತ್ತಾರೆ.ತಾಯಿ ಅವರಿಗೆ ಮಾನವೀಯತೆಯ ಸಾಕಾರ ರೂಪವಾಗಿ ಕಂಡಿರುವ, ಜಗತ್ತಿನ ಸಮಸ್ತ ತಾಯಿಯಂದಿರಿಗೆ ಸಲ್ಲಿಸಿದ ಗೌರವವಾಗಿದೆ. ಇಂತಹ ತಾಯಿ ಸಿಗುವದೂ ಕಷ್ಟವೇ ಅಂಥವಳ ಹುಡುಕಾಟ ನಮ್ಮೆಲ್ಲ ಕಾವ್ಯದ ಗುರಿ‌ ಎನ್ನುವ ಅರ್ಥದಲ್ಲಿ ಕವಿತೆಯ ಧ್ಯಾನವಿದೆ.ಒಂದು ನೆಲೆಯಿಂದ ಇನ್ನೊಂದು ‌ನೆಲೆಗೆ ಜಿಗಿಯುವ ಇಂಥ ಅಪರೂಪದ ಗಜಲ್ ಬರೆದ ಶ್ರೀಮತಿ ಅರುಣಾ ನರೇಂದ್ರ ಅವರು‌ ನಮ್ಮ‌ಅಭಿನಂದನೆಗೆ ಪಾತ್ರರಾಗುತ್ತಾರೆ.ಅವರ ಖುಷಿ ಒಂದೊಂದೂ‌ ಗಜಲ್ ವಿಮರ್ಶೆಯ‌ ಮೂಸೆಯಲ್ಲಿ ಬೆಳಗಬೇಕಾಗಿದೆ.


   ಡಾ.ಯಲ್ಲಪ್ಪ ಯಾಕೊಳ್ಳಿ

Leave a Reply

Back To Top