ವಿಶೇಷ ಬರಹ

ಗಾಲಿಬ್ಎಂಬಗಂಗಾಜಲ

Remembering Mirza Ghalib: 11 Most Popular Couplets on Love & Life

ತಾನು ಚೆನ್ನಾಗಿ ಬದುಕಿದ್ದೇನೆ ಎಂದು ಧೈರ್ಯಪಡಬಲ್ಲವನು ಸಾವಿಗೆ ಅಂಜುವುದಿಲ್ಲ

                               – ಶಿವರಾಮ ಕಾರಂತ

             ಮೊಗಲರು ಭಾರತಕ್ಕೆ ಮೂರು ಕೊಡುಗೆಗಳನ್ನು ಅಂದರೆ, ಉರ್ದು, ತಾಜ್‍ಮಹಲ್ ಮತ್ತು ಗಾಲಿಬ್ – ಬಿಟ್ಟು ಹೋಗಿದ್ದಾರೆಂದು ಹೇಳಿದರೆ ಅತಿಶಯೋಕ್ತಿಯಾಗದು. ಶೇರ್-ಶಾಯರಿ, ಗಜಲ್, ನಜಮ್‌ಗಳ ಜಗತ್ತಿನಲ್ಲಿ ಉರ್ದು ಅತ್ಯಂತ ಸುಂದರವಾದ ಮಾಧ್ಯಮ. ಇತಿಹಾಸದಲ್ಲಿ ಗಜಲ್ ನ ಪ್ರಸ್ತಾಪ ಬಂದಾಗಲೆಲ್ಲ ‘ಗಾಲಿಬ್’ ಎಂಬ ಹೆಸರು ಮೊದಲು ಕಿವಿಗೆ ಬೀಳುತ್ತದೆ. ಉರ್ದು ಶಾಯರಿ ಇವರಿಗೆ ಉರ್ದು ಸಾಹಿತ್ಯದಲ್ಲಿ ಮಹಾಕವಿಯ ಸ್ಥಾನವನ್ನು ಗಳಿಸಿಕೊಟ್ಟಿವೆ. ಅಷ್ಟೇ ಅಲ್ಲ, ಗಾಲಿಬ್ ಅವರ ಹಿರಿಮೆ ಮತ್ತು ಖ್ಯಾತಿ ಇತರ ಕವಿಗಳ ಖ್ಯಾತಿಯನ್ನು ನುಂಗಿ ನೀರು ಕುಡಿದುಬಿಟ್ಟಿದೆ. ತಾನು ಬಾಳಿ ಬದುಕಿದ ದಿನಗಳ ವರ್ತಮಾನದ ತಲ್ಲಣಗಳನ್ನು, ತನ್ನ ಜೀವನದಲ್ಲಿ ಘಟಿಸಿದ ದುರಂತಗಳನ್ನು, ವಿಪರ್ಯಾಸಗಳನ್ನು, ವಿಷಣ್ಣತೆಯನ್ನು ಜೊತೆಗೆ ತಾನು ಪ್ರೀತಿಸಿದ-ಆರಾಧಿಸಿದ ಹೆಣ್ಣಿನ ಮೇಲಿನ ಉತ್ಕಟ ಪ್ರೇಮವನ್ನು, ಆ ಪ್ರೇಮದ ದುರಂತವನ್ನು ಎದೆಯ ಎಡಭಾಗವನ್ನು ಕೀಳಿ ಅಂಗೈಯಲ್ಲಿಟ್ಟುಕೊಂಡು ಸಹೃದಯ ಓದುಗರ ಹಾಗೂ ಕೇಳುಗರ ಕಂಬನಿಗೆ ಮುನ್ನುಡಿ ಬರೆದ ಅನುಪಮ, ಅನನ್ಯ ಗಜಲ್ ಗೋ ಎಂದರೆ ಅದು ಮಿರ್ಜಾ ಗಾಲಿಬ್!! ದೆಹಲಿಯ ಕೊನೆಯ ಮೊಗಲ್ ಸಾಮ್ರಾಟ ಬಹದ್ದೂರ್ ಶಹಾ ಜಫರ್ ನ ಆಸ್ಥಾನದ ಶಾಯರ್ ಆಗಿದ್ದು, ತನ್ನ ಸಮಕಾಲೀನ ಸುಖನವರ್ ಗಳ ಜೊತೆ ಬೌದ್ಧಿಕವಾಗಿ ಕಾದಾಡುತ್ತ, ಉರ್ದು ಮತ್ತು ಪರ್ಷಿಯನ್ ಭಾಷೆಯಲ್ಲಿ ಗಜಲ್ ಗಳನ್ನು ರಚಿಸಿ, ಧಾರ್ಮಿಕ ಶ್ರದ್ಧೆಗಳಿಗೆ ತಿಲಾಂಜಲಿಯನ್ನಿತ್ತು, ಮನುಕುಲವನ್ನೆ ಕಾಡುವ ರಸಿಕನಂತೆ ಬದುಕಿದವನೆ ಮಿರ್ಜಾ ಗಾಲಿಬ್!! 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಸಿಪಾಯಿ ದಂಗೆಯ ಕ್ರಾಂತಿಗೆ ಸಾಕ್ಷಿಯಾಗಿ, ಆಂಗ್ಲರು ಮಾಡಿಸಿದ ಅಮಾನುಷ ನರಮೇಧವನ್ನು ಕಣ್ಣಾರೆ ಕಂಡು, ತನ್ನ ಹೃದಯದ ತಳಮಳ, ತಾಕಲಾಟಗಳನ್ನು ದಾಖಲಿಸಿ ಇತಿಹಾಸ ಸೃಷ್ಟಿಸಿದ ದಂತಕತೆಯೆಂದರೆ ಅದು ಮಿರ್ಜಾ ಗಾಲಿಬ್. ದಂಗೆಯ ತರುವಾಯ ಕೆಂಪು ಮೋತಿಯವರ ಆಟಾಟೋಪಕ್ಕೆ ಭಾರತೀಯ ಸಾಮಾಜಿಕ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿ, ಹೃದಯ ವಿದ್ರಾವಕ ಅವಸ್ಥೆಗೆ ತಲುಪಿದ ಚಿತ್ರಣವನ್ನು ಕಟ್ಟಿಕೊಡಲು ಭಾರತದ ಎಲ್ಲ ಭಾಷೆಗಳ ಅಕ್ಷರದ ತೊಟ್ಟಿಲು ಜಡವಾದಾಗ ಈ ಎಲ್ಲ ಘಟನೆಗಳನ್ನು ದಾಖಲಿಸುವ ಮೂಲಕ ಉರ್ದು ಸಾಹಿತ್ಯಕ್ಕೆ ‌‌‌ಘನತೆಯ ಕಿರೀಟವನ್ನು ತೊಡಿಸಿದ ಮನುಕುಲದ ಸಂವೇದನೆಯೆಂದರೆ ಅದು ಮಿರ್ಜಾ ಗಾಲಿಬ್!! ಈತನೊಬ್ಬ ಗಜಲ್ ಕಾರ, ಮದಿರಾಲಯದ ಪೂಜಾರಿ, ಮನುಜ ಮತವನ್ನು ಪ್ರೀತಿಸುವ ಪ್ರೇಮಿ, ಸಂತೋಷದೊಂದಿಗೆ ಹೆಜ್ಜೆ ಹಾಕಿದ ರಸಿಕ, ಯಾವಾಗಲೂ ಹೃದಯವನ್ನು ಕೈಯಲ್ಲಿ ಹಿಡಿದುಕೊಂಡ ಭಗ್ನಪ್ರೇಮಿ, ಮೌಢ್ಯತೆಯ ಒಡಲಿಗೆ ಕೊಳ್ಳೆ ಇಟ್ಟ ಧರ್ಮಭಂಜಕ, ದುಡ್ಡಿನ ತೊಳಲಾಟದಲ್ಲಿ ಸಿಲುಕಿದ ಸಾಲಗಾರ, ಚಟಗಳನ್ನು ಹೊತ್ತು ಸಾಕಿದ ಜೂಜುಕೋರ, ನೆರೆದ ಜನ ಸಮೂಹವನ್ನು ಆಯಸ್ಕಾಂತದಂತೆ ಸೆಳೆಯುವ ಮಾತಿನ ಮಲ್ಲ, ನಗೆಗಡಲಲ್ಲಿ ತೇಲಿಸುವ ಹಾಸ್ಯ ಪ್ರಜ್ಞೆಯ ಹೃದಯವಂತ, ಎತ್ತರದ ನಿಲುವಿನ ನೀಳ ಮೂಗಿನ ಚೆಲುವ… ಹೀಗೆ ಏನೆಲ್ಲ ಕರೆದರೂ ಪೂರ್ಣ ವಿರಾಮ ಹಾಕಲಾಗದಂತಹ ವಿಶಿಷ್ಟ ವ್ಯಕ್ತಿತ್ವದ ಜೇನು ಗೂಡು ಎಂದರೂ ತಪ್ಪಾಗಲಾರದು!! ಕಾವ್ಯದಲ್ಲಿಯೆ ಪಂಚಭೂತಗಳ ಸಾಕ್ಷಾತ್ಕಾರ ಕಂಡ ಧ್ಯಾನಿಯೇ ಮಿರ್ಜಾ ಗಾಲಿಬ್.

      ‘ಗಾಲಿಬ್’ ಉರ್ದು ಭಾಷೆಯ ಸಾಹಿತ್ಯದ ಸಮಾನಾರ್ಥಕವಾಗಿ ಬೆಳೆದು ನಿಂತಿದ್ದ ಸುಖನವರ್. ಈ ನೆಲೆಯಲ್ಲಿ ಗಾಲಿಬ್ ನಿಜವಾಗಿಯೂ ಉರ್ದುವನ್ನು ಕಾವ್ಯಾತ್ಮಕ ಭಾಷೆಯಾಗಿ ಅದರ ವೈಭವದ ಉತ್ತುಂಗಕ್ಕೆ ಕೊಂಡೊಯ್ದ ಶಾಯರ್. ಪೂರ್ವಕವಿಗಳನ್ನು ಅನುಸರಿಸುವುದು ಗಾಲಿಬ್ ಅವರಿಗೆ ಒಪ್ಪಿಗೆಯಿರಲಿಲ್ಲ. ಹೊಸತನವೇ ಅವರ ಕಾವ್ಯದ ಜೀವಾಳ. ಜೀವನವೇ ಗಾಲಿಬ್ ಅವರ ಕಾವ್ಯದ ವಸ್ತುವಾಗಿದ್ದು, ಜೀವನದ ಉನ್ನತ ಮೌಲ್ಯಗಳನ್ನು ಅವರ ಶಾಯರಿಯಲ್ಲಿ ಕಾಣಬಹುದಾಗಿದೆ. ಗಜಲ್ ಸೃಜನಾತ್ಮಕವಾಗಿರಬೇಕೇ ಹೊರತು ಕೇವಲ ಶಬ್ದಾಡಂಬರವಾಗಿ ಇರಬಾರದು ಎಂಬುದೇ ಇವರ ಧ್ಯೇಯವಾಗಿತ್ತು. ಉದಾತ್ತ ಚಿಂತನೆಗಳು, ಉಪಮಾನಗಳ ಅಪೂರ್ವತೆ ಮತ್ತು ನವೀನತೆ, ಮೃದುಹಾಸ್ಯ, ಶ್ಲೇಷೆ, ವಸ್ತುವಿನ ನೂತನತೆ, ಅನುಭಾವಿಕತೆ, ಮೃದುಮಧುರ ಶೈಲಿ, ಪ್ರತಿಮಾಯೋಜನೆ, ಸೂಕ್ಷ್ಮ ಪರಿವೀಕ್ಷಣೆ, ಜೀವನದ ಕಟು ಅನುಭವಗಳ ನೈಜನಿರೂಪಣೆ, ಸರಳತೆ, ಅಭಿವ್ಯಕ್ತಿಯ ಪರಿಣಾಮ ರಮಣೀಯತೆ, ಪ್ರೇಮದ ತೀವ್ರತೆ-ಇವು ಗಾಲಿಬ್ ಅವರ ಶಾಯರಿಯ ಪ್ರಾಣ ಹಾಗೂ ಸತ್ತ್ವ. ಗಾಲಿಬ್ ನಿರಾಶಾವಾದಿಯೂ ಹೌದು. ಇಷ್ಟಾದರೂ ಇವರ ಕಾವ್ಯ ಸ್ವಾನುಭವದ ಪ್ರತೀಕವಾಗಿದ್ದು, ಓದುಗರೂ ಆ ಅನುಭವಗಳಲ್ಲಿ ಪಾಲ್ಗೊಳ್ಳುವಂತಾಗುತ್ತದೆ. ಗಾಲಿಬ್ ನ ಗಜಲ್ ಗಳನ್ನು ಓದುತ್ತಾ ಹೋದರೆ ಇಡೀ ಮನುಕುಲದ ಮಾನಸಿಕ ಹೊಯ್ದಾಟವೆ ಕಣ್ಣಮುಂದೆ ಬರುತ್ತದೆ. ಸೂಫಿ-ಸಂತರ ದಾರ್ಶನಿಕ ಒಳನೋಟವಿದೆ, ಕುಹಕ ನಗು ತುಂಬಿದ ತುಂಟ ಪ್ರೇಮಿಯ ಆಲಾಪವಿದೆ. ಪ್ರಾಮಾಣಿಕ ಪ್ರೀತಿಯ ಆರ್ತನಾದದ ದನಿಯಿದೆ, ಭಗ್ನಪ್ರೇಮಿಯ ಹೊಡೆದು ಹೋದ ಹೃದಯದ ಚೂರುಗಳ ಪಲ್ಲವಿಯಿದೆ, ಮದಿರೆಯ ಅಮಲಿನ ಮಹೆಕ್ ಇದೆ, ಸಮಾಜವನ್ನು ಗೇಲಿ ಮಾಡುವ ಮೊನಚಾದ ವ್ಯಂಗ್ಯವಿದೆ…. ಇವೆಲ್ಲವುಗಳಿಗಿಂತ ಹೆಚ್ಚಾಗಿ ಅಪ್ಪಟ ಮನುಷ್ಯನೊಬ್ಬನ ಹೃದಯವಂತಿಕೆಗೆ ಸಾಕ್ಷಿಯಾಗುವ ತಾಜಾತನದ ಇಬ್ಬನಿಯ ಮಧುರಾನುಭೂತಿ ಇದೆ. ಈ ಎಲ್ಲ ಕಾರಣಗಳಿಂದಾಗಿಯೆ 17 ನೆ ಶತಮಾನದ ಅಸ್ತಮಾನದ ಸಮಯದಲ್ಲಿ ಉದಯಿಸಿದ್ದ ಗಾಲಿಬ್ ಇಂದಿನ 21 ನೆ ಶತಮಾನದಲ್ಲಿಯೂ ಗಜಲ್ ರಸಿಕರ ಮನೋಮಂದಿರದಲ್ಲಿ ಆರಾಧ್ಯ ದೈವವಾಗಿ ಕಂಗೊಳಿಸುತಿದ್ದಾನೆ. ಈತನ ಒಟ್ಟು 72 ವಸಂತಗಳ ಜೀವನ ಆರಂಭದಿಂದಲೂ ಅಂತ್ಯದವರೆಗೂ, ಒಂದು ನಿರಂತರ ಹೃದಯ ಕಲುಕುವ ಯಾತನಾ ಸಫರ್.

ನಿನ್ನ ಕೈಯಲ್ಲಿ ಷರಾಬಿನ ಪಾತ್ರೆಯೊಂದಿರದಿದ್ದರೆ ಗಾಲಿಬ್,

ನಾವ್ಯಾವತ್ತೋ ನಿನ್ನನ್ನು ಸಂತನೆಂದು ಒಪ್ಪಿಕೊಳ್ಳುತಿದ್ದೇವು

ಎಂಬುದು ಗಾಲಿಬ್ ಯುಗದ ಬಹುದೊಡ್ಡ ಉದ್ಗಾರವಾಗಿದೆ!!

          ಮಿರ್ಜಾ ಅಸದ್-ಉಲ್ಲಾ ಬೇಗ್ ಖಾನ್ ಎಂಬುದು ಗಾಲಿಬ್ ಅವರ ಪೂರ್ಣ ಹೆಸರು. ಆದರೆ ಮನುಕುಲದ ಅದಬ್ ಇವರನ್ನು ಮಿರ್ಜಾ ಗಾಲಿಬ್ ಎಂದು ಗುರುತಿಸಿದೆ, ಗೌರವಿಸಿದೆ. ಶೇರ್-ಓ-ಶಾಯರಿಯ ಸರ್ತಾಜ್ ಎಂದು ಕರೆಯಲ್ಪಡುವ ಗಾಲಿಬ್ ಉರ್ದುವನ್ನು ಸಾಮಾನ್ಯ ಜನರ ಭಾಷೆಯನ್ನಾಗಿ ಮಾಡಿದನು. ಇವರ ಗಜಲ್‌ಗಳು ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಇಂತಹ ಮಹಾನ್ ಶಾಯರ್ ಮಿರ್ಜಾ ಅಬ್ದುಲ್ಲಾ ಬೇಗ್ ಖಾನ್ ಗಾಲಿಬ್ ಹಾಗೂ ಇಜ್ಜತ್-ಉತ್-ನಿಸಾ ಬೇಗಮ್ ದಂಪತಿಗಳ ಮಗನಾಗಿ ಜನಿಸಿದ್ದು 18ನೇ ಶತಮಾನದ ಕೊನೆಯ ಭಾಗದಲ್ಲಿ, ಅಂದರೆ 27 ಡಿಸೆಂಬರ್ 1797 ರಂದು ಆಗ್ರಾದಲ್ಲಿ.‌ ಗಾಲಿಬ್ ಬಾಲ್ಯದಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡರು. ಮುಂದೆ ತನ್ನ ಚಿಕ್ಕಪ್ಪ ಮಿರ್ಜಾ ನಸ್ರುಲ್ಲಾ ಬೇಗ್ ಗಾಲಿಬ್ ಅವರ ಜೊತೆ ಉಳಿದುಕೊಂಡರು.‌ ದುರಂತವೆಂದರೆ ಆ ಚಿಕ್ಕಪ್ಪ ಸಹ ಕೆಲವು ವರ್ಷಗಳ ತರುವಾಯ ಗಾಲಿಬ್ ಅವರನ್ನು ತೊರೆದು ಹೋದನು!! ಗಾಲಿಬ್ ಗೆ ಬಾಲ್ಯದಿಂದಲೂ ಶಾಯರಿ ಬರೆಯುವ ಹವ್ಯಾಸವಿತ್ತು, ಅಂದರೆ 9 ನೇ ವಯಸ್ಸಿನಲ್ಲಿ ಶೇರ್-ಓ-ಶಾಯರಿಯನ್ನು ಬರೆಯಲು ಪ್ರಾರಂಭಿಸಿದ್ದರು, ಅದೂ ಪರ್ಷಿಯನ್ ಭಾಷೆಯಲ್ಲಿ. ಅಂದಿನ ದಿನಗಳಲ್ಲಿ ಲಕ್ನೋ ನಗರದಲ್ಲಿ ಗಜಲ್ ಕ್ಷೇತ್ರದಲ್ಲಿ ದಂತಕಥೆಯಾಗಿದ್ದ ಮೀರ್ ನ ಗಮನಕ್ಕೆ ಗಾಲಿಬ್ ಅವರ ಕೆಲವು ಗಜಲ್ ಗಳು ಬಂದಾಗ, ಗಾಲಿಬ್ ನ ಬಗ್ಗೆ ಮೀರ್ ಈ ರೀತಿ ಪ್ರತಿಕ್ರಿಯಿಸಿದ್ದನಂತೆ.. “ಈ ಹುಡುಗನಿಗೆ ಸೂಕ್ತ ವಿದ್ವಾಂಸರ ಸಲಹೆ, ಮಾರ್ಗದರ್ಶನ ಸಿಕ್ಕರೆ ಈತನ ಕಾವ್ಯಕ್ಕೆ ಉಜ್ವಲ ಭವಿಷ್ಯವಿದೆ”. ಇದನ್ನು ಗಾಲಿಬ್ ಅಕ್ಷರಶಃ ನಿಜವಾಗಿಸಿದರು. ಮೂವತ್ತೆರಡು ವರ್ಷ ತುಂಬುವ ಹೊತ್ತಿಗೆ ಅವರ ಕಾವ್ಯ ದೆಹಲಿಯಿಂದ ಕಲ್ಕತ್ತಾದವರೆಗೆ ಸಂಚಲನ ಮೂಡಿಸಿತ್ತು. ಅವರ ಜೀವನೋಪಾಯಕ್ಕೆ ಅವರ ಕಾವ್ಯವೇ ಏಕೈಕ ಸಾಧನವಾಗಿತ್ತು.‌

        ಗಾಲಿಬ್ ಅವರು ತಮ್ಮ ಹದಿಮೂರನೆಯ ವಯಸ್ಸಿನಲ್ಲಿ ಅಂದರೆ 1810ರಲ್ಲಿ ದೆಹಲಿಯ ಮೊಗಲರ ಆಸ್ಥಾನದಲ್ಲಿ ಕವಿಯಾಗಿ, ಬರಹಗಾರನಾಗಿ ಹೆಸರು ಪಡೆದಿದ್ದ ಆಗ್ರಾದ ಖ್ಯಾತ ನವಾಬ್ ಇಲಾಹಿ ಬಕ್ಷ್ ಖಾನ್ ಅವರ ಮಗಳು ಉಮ್ರಾವ್ ಬೇಗಂ ಅವರನ್ನು ವಿವಾಹವಾದರು. ನಂತರ ಅವರು 1815ರಲ್ಲಿ ದೆಹಲಿಗೆ ತೆರಳಿ ಅಲ್ಲಿನ ಚಾಂದನಿ ಚೌಕ್ ನಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದು ನೆಲೆಸಿದರು. ಅಲ್ಲಿಯೆ ಬದುಕಿನೊಂದಿಗೆ ಅವರ ಹೋರಾಟ ಶುರುವಾಯಿತು. ಆ ಕಾಲದಲ್ಲಿ ದೆಹಲಿಯಲ್ಲಿ ಈತನಿಗೆ ಕವಿಗಳ, ವಿದ್ವಾಂಸರ ಮತ್ತು ಸೂಫಿ ಸಂತರ ಸಹವಾಸ ದೊರೆಯಿತು. ಇದು ಅವರ ಕಾವ್ಯ ರಚನೆಯ ಮೇಲೆ ತನ್ನದೇ ಆದ ಪ್ರಭಾವ ಬೀರಿತು. ಧರ್ಮಾತೀತರಾಗಿ ಬೆಳೆಯಲು ಸಹಕಾರಿಯಾಯಿತು! ದೇವರು, ಧರ್ಮಗಳ ಬಗ್ಗೆ ಕೋಪಕ್ಕಿಂತ ಜನರು ಆಚರಿಸಿಕೊಂಡು ಬರುತ್ತಿದ್ದ ಮೌಢ್ಯತೆ, ಕಂದಾಚಾರ ಕುರಿತು ಜಿಗುಪ್ಸೆ, ಅಸಹನೆ ಇತ್ತು.

“ದೇವರು ಒಬ್ಬನೆ ಅದು ನನ್ನ ನಂಬಿಕೆ ಎಲ್ಲಾ ಆಚರಣೆಗಳ ತ್ಯಜಿಸಿದ್ದೇನೆ

ಧರ್ಮಗಳ ಚಹರೆ ನಶಿಸಿದಾಗ ಉಳಿಯುವ ನಂಬಿಕೆ ಮಾತ್ರ ಪರಿಶುದ್ಧ”

ಇದರೊಂದಿಗೆ ಗಾಲಿಬ್ ಅವರಲ್ಲಿ ವೈಚಾರಿಕತೆ ಇತ್ತು. ಇದನ್ನು ಅವರ ಒಂದು ಷೇರ್ ನಲ್ಲಿ ಗಮನಿಸಬಹುದು.

ಕಾಬಾದಲ್ಲಿ ತೆಂಗಿನ ಕಾಯಿ ಒಡೆದು

ದೇಗುಲದಲ್ಲಿ ಚಾದರ್ ಹೊದಿಸುವ ಆಸೆ

ಎಂದು ಹೇಳಿಕೊಂಡಿದ್ದಾರೆ. ಸಹಜವಾಗಿಯೇ ಗಾಲಿಬ್ ಅವರ ಇಂತಹ ಪ್ರಗತಿಪರ ವಿಚಾರಗಳು ಅವರ ಸಮಕಾಲೀನ ಶಾಯರ್ ಗಳ ಜೊತೆಗೆ ಸಂಘರ್ಷಕ್ಕೀಡು ಮಾಡಿತು. ಗಾಲಿಬ್ ಅವರ ಸಮಕಾಲೀನರಾದ ಜೌಕ್, ಅಲಾನಿ, ಮೊಮೀನ್, ನಜೀರ್ ಅಕಬರ ಬಾದಿ, ಜಹೂರ್.. ಮುಂತಾದವರು ಮೊಗಲ್ ದೊರೆ ಬಹದ್ದೂರ್ ಶಹಾ ಜಫರ್ ನ ಅವಧಿಯಲ್ಲಿ ಉತ್ತಮ ಶಾಯರ್ ಗಳಾಗಿದ್ದರು. ಬಹದ್ದೂರ್ ಶಹಾ ಜಫರ್ ಸಹ ಉತ್ತಮ ಶಾಯರ್ ಆಗಿದ್ದು, ಅವರಿಗೆ ಮಾರ್ಗದರ್ಶನ ನೀಡಲು ಶಾಯರ್ ಗಳ ದಂಡೆ ಅಲ್ಲಿ ಇತ್ತು. ಜೌಕ್ ನ ಮರಣದ ತರುವಾಯ ದೊರೆಗೆ ಸಾಹಿತ್ಯದ ಸಲಹೆಗಾರನಾಗಿ, ಮಾರ್ಗದರ್ಶಕನಾಗುವ ಯೋಗ ಗಾಲಿಬ್ ಅವರಿಗೆ ದೊರೆಯಿತು. 1850 ರಲ್ಲಿ ಬಹದ್ದೂರ್ ಷಾ ಜಫರ್ ಅವರಿಂದ ‘ದಬೀರ್-ಉಲ್-ಮುಲ್ಕ್’, ಮತ್ತು ‘ನಜ್ಮ್-ಉದ್-ದೌಲಾ’, ಎಂಬ ಬಿರುದುಗಳನ್ನು ಪಡೆದಿದ್ದ ಗಾಲಿಬ್ ಅವರು ವಿಲಕ್ಷಣ ಸ್ವಭಾವಗಳನ್ನು ಹೊಂದಿದ್ದು, ಸ್ವಾಭಿಮಾನಿಯಾಗಿದ್ದರು.

ಲೋಕದಲ್ಲಿ ಹಲವರು ಉತ್ತಮ ಶಾಯರ್ ಗಳಿದ್ದಾರೆ

ಹೇಳುತ್ತಾರೆಗಾಲಿಬ್ ಅಭಿವ್ಯಕ್ತಿ ಶೈಲಿಯೇ ಭಿನ್ನವೆಂದು

ಸ್ವತಃ ಗಾಲಿಬ್ ಅವರೆ ಬರೆದ ಈ ಷೇರ್ ನಲ್ಲಿ ಉತ್ಪ್ರೇಕ್ಷೆ ಅಥವಾ ದುರಹಂಕಾರವಿಲ್ಲ. ಅಲ್ಲಿರುವುದು ನಿರ್ಮಲ ಆತ್ಮನಿವೇದನೆ ಮಾತ್ರ. ಜೈಲು ವಾಸ, ಜೂಜು, ಬರವಣಿಗೆ ಬಿಟ್ಟರೆ ಮಿರ್ಜಾಗೆ ಏನೂ ಗೊತ್ತಿರಲಿಲ್ಲ. ಮೊಘಲ್ ದೊರೆಗಳು ನೀಡುತಿದ್ದ ಪಿಂಚಣಿಯನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಿತು. ಇದರ ಪ್ರತಿಫಲನ ಅವರ ಶಾಯರಿ, ಷೇರ್-ಗಜಲ್ ಗಳಲ್ಲಿ ಕಾಣುತ್ತೇವೆ ಮಿರ್ಜಾ ಗಾಲಿಬ್ ಅವರು ಯಾರ ಹೊಗಳಿಕೆಗೂ, ತೆಗಳಿಕೆಗೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅಂತೆಯೇ ಆವರ ಒಂದು ಷೇರ್ ಈ ರೀತಿಯಲ್ಲಿ ಇದೆ.

ನಾನು ಶಾಯರಿಗಳನ್ನು ಬರೆಯುವುದು ಯಾರ ಹೊಗಳಿಕೆಗಾಗಿ ಅಲ್ಲ

ನನ್ನ ಅಶಅರ್ ನಲ್ಲಿ ಅರ್ಥವಿಲ್ಲದಿದ್ದರೆ ನನಗದು ಚಿಂತೆಯೇ ಅಲ್ಲ

ಗಾಲಿಬ್ ಅವರಿಗೆ ತಮ್ಮ ಬದುಕಿನ ಮೇಲೆ ಯಾವುದೇ ನಿಯಂತ್ರಣ ಹೇರಿಕೊಳ್ಳಲು ಇಷ್ಟವಿರಲಿಲ್ಲ. ಯಾರಾದರೂ ಹೇರಲು ಪ್ರಯತ್ನಿಸಿದರೆ ಅದು ಅವರಿಗೆ ಸಹ್ಯವಾಗುತ್ತಿರಲಿಲ್ಲ. ಯಾವುದೇ ಮುಲಾಜಿಲ್ಲದೆ ತಿರಸ್ಕರಿಸುತಿದ್ದರು! ಸಂಪ್ರದಾಯದ ಜಾಡಿನಲ್ಲಿಯೇ ಹರಿಯುತ್ತಿದ್ದ ಉರ್ದು ಕಾವ್ಯ ಧಾರೆಯ ದಿಕ್ಕನ್ನು ಬದಲಾಯಿಸಿದ ಶ್ರೇಯಸ್ಸು ಗಾಲಿಬ್ ಅವರಿಗೆ ಸಲ್ಲುತ್ತದೆ, ಸಲ್ಲಬೇಕು. ಈ ಕಾರಣಕ್ಕಾಗಿಯೇ ಇವರನ್ನು ಆಧುನಿಕ ಉರ್ದು ಶಾಯರಿಯ ಪ್ರವರ್ತಕನೆಂದು ಗೌರವಿಸಲಾಗಿದೆ. ಉರ್ದು ಕಾವ್ಯದ ಮೇಲೆ ಗಾಲಿಬ್ ಬೀರಿರುವ ಪ್ರಭಾವ ಮಹತ್ತರವಾದುದು. ಇವರು ದೇಶಾದ್ಯಂತ ಅಸಂಖ್ಯಾತ ಶಿಷ್ಯರನ್ನು ಪಡೆದಿದ್ದರು. ಅವರಲ್ಲಿ ಇಸ್ಮಾಯಿಲ್ ಮೇರಟಿ, ಮೀರ್ ಮೇಹದಿ ಮಜರೂಹ, ಸೈಯದ್ ಯುಸೂಫ್ ಅಲಿ ಖಾನ್ ನಾಜಿಮ್, ಜೈನುಲ್ ಆಬ್ದಿನ್ ಖಾನ್ ಆರೀಫ್, ಅನ್ವರ್ ದೆಹಲಿ… ಪ್ರಮುಖರು.

       ಗಾಲಿಬ್ ತನ್ನ ಮಡದಿಯೊಂದಿಗೆ ದೆಹಲಿಯಲ್ಲಿ ಬದುಕು ಕಟ್ಟಿಕೊಳ್ಳುವ ಹಂತದಲ್ಲಿ ತನ್ನ ಹಲವು ಹವ್ಯಾಸಗಳ ಮೇಲೆ ಹಿಡಿತ ಸಾಧಿಸಿದ್ದರೆ ಅವರು ನೆಮ್ಮದಿಯ ಜೀವನ ಸಾಗಿಸಬಹುದಾಗಿತ್ತೇನೊ…! ಆದರೆ ಅದ್ಯಾವುದೂ ಸಾಧ್ಯವಾಗಲಿಲ್ಲ. ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಗಾಲಿಬ್ ತನ್ನ ಸಮಕಾಲೀನ ಸಾಹಿತಿಗಳನ್ಯಾರನ್ನೂ ತಮ್ಮ ಹತ್ತಿರಕ್ಕೆ ಬಿಟ್ಪುಕೊಳ್ಳುತ್ತಿರಲಿಲ್ಲ. ಈ ಗುಣ ಅವರ ಶಕ್ತಿಯೂ ಆಗಿತ್ತು, ಜೊತೆಗೆ ದೌರ್ಬಲ್ಯವೂ ಆಗಿತ್ತು! ಈ ಸ್ವಾಭಿಮಾನ ಯಾರೆದರಿಗೂ ತಲೆಬಾಗದಂತೆ ಮಾಡಿತು. ಓಲೈಕೆಗಳ ತೊಟ್ಟಿಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ತಮಗೆ ಸಿಗಬಹುದಾಗಿದ್ದ, ಸಿಗಬೇಕಾಗಿದ್ದ ಗೌರವ-ಮನ್ನಣೆಗಳಿಂದ ವಂಚಿತರಾದರು. ಆದರೂ ಗಾಲಿಬ್ ಇದ್ಯಾವುದಕ್ಕೂ ಕುಗ್ಗಲಿಲ್ಲ. ಅವರ ಈ ಅಟ್ಟಿಟ್ಯೂಡ್ ಜನರಿಗೆ ಖುಷಿ ನೀಡಿತು. ಜನ ಹುಚ್ಚೆದ್ದು ಕುಣಿದರು. ಇವರ ಗಜಲ್ ಗಳು ಬೀದಿ ಬೀದಿಗಳಲ್ಲಿ ಪ್ರತಿಧ್ವನಿಸಿದವು. ಯುವಕರ ಪಾಲಿಗೆ ಗಾಲಿಬ್ ಮೂರ್ತ ಸ್ವರೂಪದ ದೇವರಾಗಿ ಬಿಟ್ಟರು. ಮುಶಾಯಿರಾದಂತಹ ಸಭೆಗಳಲ್ಲಿ ಗಾಲಿಬ್ ಎದ್ದು ನಿಂತರೆ ಕೆಂಪುಕೋಟೆಯ ಶಾಯರ್ ಗಳ ಗಂಟಲು ಒಣಗುತಿತ್ತಂತೆ!! ರೇಷ್ಮೆ ವಸ್ತ್ರ, ಕಿರೀಟ ಧರಿಸಿ ಸಂಭ್ರಮದಿಂದ, ಹಮ್ಮಿನಿಂದ, ಆತ್ಮತೃಪ್ತಿಯಿಂದ ತಮ್ಮ ಮನೆಯ ಹೊಸ್ತಿಲು ತುಳಿಯುತಿದ್ದರು. ಆದರೆ….ಹಸಿದ ಒಡಲಿಗೆ ಈ ಗೌರವ, ಸನ್ಮಾನಗಳು ಅರ್ಥವಾಗುತ್ತಿರಲಿಲ್ಲ. ಮನೆಯ ಬಡತನ ಅವುಗಳನ್ನು ಅಣಕಿಸುತಿತ್ತು!! ನಿಧಾನವಾಗಿ ಒಂದಾದ ಮೇಲೊಂದರಂತೆ ಅವರ ಏಳು ಮಕ್ಕಳೂ ಅಸುನೀಗಿದವು. ಮುಂದೆ ಬಂಧುಗಳ ಹುಡುಗನೊಬ್ಬನನ್ನು ಗಾಲಿಬ್ ದತ್ತು ಪಡೆದುಕೊಂಡರು. ಆದರೆ ಆ ಬಾಲಕನೂ ಚಿಕಿತ್ಸೆಯಿಲ್ಲದೆ ಕ್ಷಯರೋಗದಿಂದ ಉಸಿರು ಬಿಟ್ಟನು. ಅವರ ಗಜಲ್ ಗಳಲ್ಲಿ ಈ ಎಲ್ಲ ದುಃಖ ಮಡುಗಟ್ಟಿದೆ. ಈ ಕಾರಣಕ್ಕಾಗಿಯೇ ಅವರ ಶಾಯರಿಯಲ್ಲಿ ನೋವಿನ ಝಲಕ್ ಇದೆ ಮತ್ತು ಸಾವಿನೊಂದಿಗೆ ಕೊನೆಗೊಳ್ಳುವ ಜೀವನದ ನಿರಂತರ ಹೋರಾಟವಿದೆ. ಮಿರ್ಜಾ ಗಾಲಿಬ್ ಯಾವ ಬಂಧಕ್ಕೂ ಬದ್ಧರಾಗಿರಲಿಲ್ಲ. ಧರ್ಮ, ಜಾತಿ.. ಎಲ್ಲವನ್ನೂ ಮೀರಿದವರಾಗಿದ್ದರು. ಇವೆಲ್ಲಕ್ಕಿಂತ ಮಿಗಿಲಾಗಿದ್ದರು. ಮಕ್ಕಳ ಸಾವಿನ ನಂತರ ಅವರು ಧರ್ಮದ ವಿರುದ್ಧ ಬಂಡಾಯವೆದ್ದರು. ಉಪವಾಸವೂ ಇಲ್ಲ, ಪ್ರಾರ್ಥನೆಯೂ ಇಲ್ಲ. ಮದಿರೆಯೇ ಅವರ ಬಾಳ ಸಂಗಾತಿಯಾಗಿತ್ತು!!

        ಗಾಲಿಬ್ ಆಜಾನುಬಾಹುವೂ, ಸ್ಪುರದ್ರೂಪಿಯೂ ಆಗಿದ್ದು, ಅವರ ಮನಸ್ಸು 23ರ ವಯಸ್ಸಿನಲ್ಲಿ ಮುಗಲ್ ಜಾನ್ ಎಂಬ ಗೆಜ್ಜೆಯೊಂದರ ನಾದಕ್ಕೆ ಸೋತಿತ್ತು. ಅವಳು ಗಾಯಕಿಯೂ ಹೌದು, ನೃತ್ಯಗಾತಿಯೂ ಹೌದು. ಅವಳನ್ನು ಮನಸಾರೆ ಅನುಭವಿಸುತ್ತಿದ್ದ ಗಾಲಿಬ್ ತಮ್ಮ ಗಜಲ್ ಗಳ ಉದ್ದಕ್ಕೂ ಅವಳೊಂದಿಗಿದ್ದ ಪರಿಪೂರ್ಣ ಪ್ರೇಮದ ಸಂಬಂಧ, ಅವಳ ರೂಪ, ತಣ್ಣನೆಯ ವ್ಯಕ್ತಿತ್ವ, ಕಣ್ಣೋಟ…. ಇವೆಲ್ಲವನ್ನು ಬಣ್ಣಿಸಿದ್ದಾರೆ. ಪ್ರೀತಿಸಿದ ಎರಡು ವರ್ಷದ ಅವಧಿಯೊಳಗೆ ಆಕೆ ಆತ್ಮಹತ್ಯೆಗೆ ಶರಣಾದುದ್ದರ ನೋವು ಅವರ ಸಾಹಿತ್ಯದ ಪ್ರತಿ ಹರ್ಫ್ ನಲ್ಲಿ ಕಾಣುತ್ತೇವೆ. ಸಮಾಜದ ಬಗ್ಗೆ, ಬಂಧುಮಿತ್ರರ ಕುರಿತು ಜಿಗುಪ್ಸೆಗೊಂಡ ಗಾಲಿಬ್ ಏಕಾಂತಕ್ಕೆ ಶರಣಾಗಿ, ತಮ್ಮ ನೋವನ್ನು ಹೀಗೆ ದಾಖಲಿಸಿದ್ದಾರೆ.

ಹೃದಯವೆಂಬುದು

ಕಲ್ಲು ಇಟ್ಟಿಗೆಯದಲ್ಲ

ಬೇಕೆನಿಸಿದಾಗಲೆಲ್ಲ

ಸಾವಿರ ಬಾರಿ ಅತ್ತೇನು

ಗಾಲಿಬ್ ಬಗ್ಗೆ

ಜಗತ್ತಿಗೇಕೆ ಚಿಂತೆ?”

          1857 ರಲ್ಲಿ ಘಟಿಸಿದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಸಿಪಾಯಿ ದಂಗೆಯ ನಂತರ ಭಾರತದ ರಾಜಕೀಯ, ಸಾಮಾಜಿಕ ವಾತಾವರಣವು ತುಂಬಾ ಬದಲಾಯಿತು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರು ಬದುಕುವುದೆ ದುಸ್ತರ, ಅಪರಾಧ ಎನ್ನುವಂತಾಯಿತು. ನೂತನ ಬ್ರಿಟಿಷರ ಸರ್ವಾಧಿಕಾರದಲ್ಲಿ ಯಾರೂ ಏನನ್ನೂ ಪ್ರತಿಭಟಿಸಲಾರದಂತಹ ಅಸಹಾಯಕ ಸ್ಥಿತಿ ತಲೆದೋರಿತ್ತು. ಗಾಲಿಬ್ ಅವರು ದೆಹಲಿಯ ಅಸಹನೀಯ ಮೌನವನ್ನು ಪ್ರಸ್ತಾಪಿಸುತ್ತ “ಎಲ್ಲಾ ವಸ್ತುಗಳು ದುಬಾರಿಯಾಗಿವೆ, ಸಾವೊಂದೇ ಅಗ್ಗವಾಗಿದೆ” ಎಂದಿರುವುದು ಅಂದಿನ ಜನಜೀವನದ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ! ಬರ್ಮಾದ ರಾಜಧಾನಿ ರಂಗೂನಿನ ಸೆರೆಮನೆಯಲ್ಲಿದ್ದ ಮೊಗಲ್ ದೊರೆ ಬಹದ್ದೂರ್ ಶಹಾ ಜಫರ್ 1862 ರ ನವ್ಹೆಂಬರ್ 7ರ ಶುಕ್ರವಾರದಂದು ನಿಧನರಾದ ಸುದ್ದಿ ಕೇಳಿ ಗಾಲಿಬ್ ಅವರು ಆಘಾತಗೊಂಡರು. ಲಕ್ಷಾಂತರ ಕುಟುಂಬಗಳು ಬೀದಿಪಾಲಾದದ್ದು ಗಾಲಿಬ್ ಅವರನ್ನು ಘಾಸಿಗೊಳಿಸಿತ್ತು. ತನ್ನ ದುರಂತದ ಜೊತೆಗೆ ಕಣ್ಮುಂದಿನ ಸಮುದಾಯದ ದುರಂತವನ್ನೂ ತನ್ನದೆಂದು ಪರಿಭಾವಿಸುವ ಹೃದಯವಂತಿಕೆ ಗಾಲಿಬ್ ಅವರದಾಗಿತ್ತು. ಇಂಥಹ ತೊಳಲಾಟದ ಸಮಯದಲ್ಲಿ ಬಡತನದಲ್ಲೇ ಉಸಿರಾಡುತಿದ್ದ ಗಾಲಿಬ್ ಅವರ ಆರೋಗ್ಯ ನರಕದ ಬಾಗಿಲು ತಟ್ಟಿತು! ತಮ್ಮ ಸಾವು ತಮಗೆ ಬೆನ್ನು ಹತ್ತಿದೆ ಎಂಬುದನ್ನು ಅರಿತುಕೊಂಡರು!!

ಮಧುಬಟ್ಟಲನು ತುಟಿಗಿಟ್ಟ ಕ್ಷಣ ರಾತ್ರಿಗಳಿಗೆ ಇದ್ದ ಸೊಬಗುಗಳೆಲ್ಲಿ ?

ಸಂತೋಷಗಳೆಲ್ಲ ಎಲ್ಲಿ ಹೋದವು? ನನ್ನ ಪಾಲಿಗೆ ಮುಂಜಾನೆ ಎಂಬುದು ಕಳೆದೇ ಹೋಯಿತಲ್ಲ

ಎಂದು ನಿದ್ರೆ ಇಲ್ಲದ ರಾತ್ರಿಗಳಲ್ಲಿ ಕಳೆದು ಹೋದರು. ಈ ಮೇಲಿನ ಬರಹ ಅವರ ಒಂಟಿತನ, ಮಾನಸಿಕ ಯಾತನೆಯ ಕುರುಹು ಆಗಿದೆ. ಶಾಯರಿ ಬರವಣಿಗೆ ಎನ್ನುವುದು ಗಾಲಿಬ್ ಅವರಿಗೆ ಹವ್ಯಾಸ, ಮೋಜು, ಮಸ್ತಿ ಆಗಿರಲಿಲ್ಲ, ಬದಲಿಗೆ ಅದುವೇ ಉಸಿರಾಗಿತ್ತು, ಆಹಾರ, ನಿದ್ರೆ, ಮೈಥುನದಷ್ಟೇ ಸಹಜವಾಗಿತ್ತು. ನೋವಿನ ಕ್ಷಣಗಳಲ್ಲೂ ಬರೆಯುವ ಅವರ ತುಡಿತ ಶಾಯರಿಯ ಮೇಲಿರುವ ಅವರ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ತೀವ್ರ ಅನಾರೋಗ್ಯ, ಜಾರುತ್ತಿರುವ ನೆನಪುಗಳು ಮಧ್ಯೆಯೂ ಅವರ ದಿವ್ಯ ಪ್ರತಿಭೆ ಕುಂದಿರಲಿಲ್ಲ! ಯಾರಾದರೂ ಯೋಗಕ್ಷೇಮ ವಿಚಾರಿಸಿದರೆ “ನನ್ನ ಸ್ಥಿತಿಯ ಬಗ್ಗೆ ನನ್ನನ್ನೇಕೆ ಕೇಳುವಿರಿ? ಎರಡು ದಿನಗಳ ನಂತರ ನನ್ನ ನೆರೆಹೊರೆಯವರೆ ನಿಮಗೆ ವಿಷಯ ತಿಳಿಸುತ್ತಾರೆ” ಎಂದು ಉತ್ತರಿಸುತ್ತಿದ್ದರು!

ಪ್ರತಿಯೊಬ್ಬರಿಗೂ ಸಾವು ನಿಗದಿಯಾಗಿದೆ

ನಿದ್ರೆಯಿಲ್ಲದ ರಾತ್ರಿ ಏಕೆ ಕಳೆಯುವೆ ಗಾಲಿಬ್

ಎನ್ನುವ ಷೇರ್ ಎಂತವರ ಹೃದಯವನ್ನಾದರೂ ಕಲುಕಿ ಬಿಡುತ್ತದೆ. ಗಾಲಿಬ್ 1869ರ ಫೆಬ್ರವರಿ 15 ರ ಮಧ್ಯಾಹ್ನ, ಹತ್ತಿರದ ಮಸೀದಿಯಲ್ಲಿ ನಮಾಜ್ ಕೂಗುತಿದ್ದಂತೆಯೇ ‘ದೇವರ ಗೊಡವೆ ಕೂಡ ನನಗೆ ಬೇಡ’ ಎಂದು ಘೋಷಿಸಿ ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ ಅಲ್ಲಿಂದ ನಿರ್ಗಮಿಸಿದರು!! ಗಾಲಿಬ್‌ ಅವರ ಮನೆಯನ್ನು ಈಗ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ‘ಗಾಲಿಬ್’ ನಮ್ಮಿಂದ ಅಗಲಿ ಎಷ್ಟೋ ವರ್ಷಗಳಾದರೂ ನಮ್ಮೆಲ್ಲರ ಮನದಲ್ಲಿ ತನ್ನ ಗಜಲ್ ಗಳ ಮುಖಾಂತರ ಇನ್ನೂ ಜೀವಂತವಾಗಿದ್ದಾರೆ. ನಮ್ಮ ಹೃದಯದಲ್ಲಿ ಪ್ರೀತಿಯ ಬೆಂಕಿಯನ್ನು ಉರಿಯುವಂತೆ ಮಾಡಿದ್ದಾರೆ. ನಮ್ಮ ಹೃದಯ ಒಡೆದಾಗಲೂ ಗಾಲಿಬ್ ಅವರ ಅಶಅರ್ ಮುಲಾಮು ಹಚ್ಚುತ್ತವೆ. ಸಾಮಾನ್ಯವಾಗಿ ನಮ್ಮ ನೋವನ್ನು ಕಡಿಮೆ ಮಾಡುವ ಬದಲು ಗಾಲಿಬ್ ಅವರ ಅಶಅರ್ ನೋವೇ ಔಷಧ ಅನ್ನಿಸುವ ರೀತಿಯಲ್ಲಿ ಮುದ ನೀಡುತ್ತವೆ. ಮಿರ್ಜಾ ಗಾಲಿಬ್ ಕಾಲದೊಂದಿಗೆ ಕುಸ್ತಿ ಆಡಿ ಜಯಶಾಲಿಯಾದ ವಿಶ್ವ ಕುಸ್ತಿ ಪಟು!! ಕಾಲದ ಧೂಳಿನಲ್ಲಿ ಎಂದಿಗೂ ಕಳೆದುಹೋಗದ ಅದ್ಭುತ ವ್ಯಕ್ತಿ. 

ಗಾಲಿಬ್ ಅವರ ಅಶಅರ್ ಗೆ ಹೊಂದಿಕೆಯಾಗದ ಯಾವುದೇ ಭಾವನೆಗಳಿಲ್ಲ. ಅದು ಭೇಟಿಯ ಸಂತೋಷ ಅಥವಾ ಪ್ರತ್ಯೇಕತೆಯ ದುಃಖ, ಕಲ್ಪನೆಯ ಹಾರಾಟ ಅಥವಾ ಆಲಿಂಗನದ ಕುಡಿತ ಅಥವಾ ದೃಷ್ಟಿಯ ನಿಗೂಢ ಸಮಸ್ಯೆಗಳು. ಎಲ್ಲೆಲ್ಲಿಯೂ ಗಾಲಿಬ್‌ ಅವರ ಗಜಲ್ ಗಳು ಪ್ರಸ್ತುತವೆನಿಸುತ್ತವೆ.

ಸುಳ್ಳಲ್ಲ ಗಾಲಿಬ್ ನಿನ್ನ ಶಬ್ದ ಜಗತ್ತು ನಿನ್ನ ನೋಟದ ಶಕ್ತಿ ಇವುಗಳ ತುಂಬೆಲ್ಲ ಸಂತನ ನೋಟವಿದೆ

ಇದು ಈ ಜಗತ್ತಿಗೆ ಅರ್ಥವಾಗಬೇಕಾದರೆ ಮೊದಲು ನೀನು ಇಲ್ಲಿಂದ ನಿರ್ಗಮಿಸಬೇಕು” 


ಡಾ. ಮಲ್ಲಿನಾಥ ಎಸ್. ತಳವಾರ

One thought on “

  1. ಸಮಯೋಚಿತ ಹಾಗೂ ಬಹು ಅರ್ಥಪೂರ್ಣ ಲೇಖನ ಅಭಿನಂದನೆಗಳು ಸರ್…

Leave a Reply

Back To Top