
ಕಾವ್ಯ ಸಂಗಾತಿ
ಮಿಲನ
ಹೃದಯ ಹೃದಯಗಳ
ಮಿಲನಕ್ಕೆ ಸ್ನೇಹವೇ
ಸೇತುವೆ ಬೇರೆ ಮಾತಿನ
ಜೋಡಣೆ ಇಲ್ಲ
ಸ್ವಾರ್ಥ ನಿಸ್ವಾರ್ಥ ಬೇಕು
ಮುನಿಸು ರಮಿಸುವ
ಮಿಲನದ ಅಮೃತ
ರಸಾನುಭಾವ
ಅರಿತ ಮನಕ್ಕೆ ಶಂಕೆ ಬೇಡ
ಹತ್ತಿರ ದೂರದ ಅಂತರ ಏಕೆ
ದೇಹಕ್ಕೆ ದೂರವಾಗಿರುವುದೇ
ನಗು ಅಳುವಿನ ನೆರಳು ನಿನ್ನದೇ
ಬಾಳಿನ ಪಯಣದಲ್ಲಿ ಜೊತೆಯಾದ ಸಂಗಾತಿ ನೀ
ಅಗಲಿ ಹುಡುಕುವ ಅಳುಕು ಏಕೆ
ಪ್ರೀತಿಯ ಬೆಳಕಿಗೆ ಕೊನೆಯಿಲ್ಲ!
****
ಹಸಿವು

ಹಸಿವಿನ ನರಳಾಟದಲ್ಲಿ
ತುಳಿತಕ್ಕೆ ಒಳಗಾಗುವೆವು ನಾವು
ಸಂಕಟದಲ್ಲಿ ಒದರಾಡಿದರೆ
ಮೂರಡಿಯಲ್ಲಿ ಹೂಳುವರು
ಹಸಿವಿನ ಚೀಲ ಬೆನ್ನು ತಟ್ಟಿದೆ
ಶಾಂತಿ ನೆಮ್ಮದಿಯ ವೇದಾಂತ
ಕಿವಿಯಲ್ಲಿ ಗುಣುಗುಟ್ಟಿದೆ
ಮೋಸ ವಂಚನೆ ಕೊರಳ ಉರುಳಾಗಿದೆ
ಮಾಯೆ ಎಂಬುವರು ಬಾಳು
ಆಸೆ ದುಃಖಕ್ಕೆ ಮೂಲ ಎನ್ನುವರು
ಕಡಿವಾಣ ಇಲ್ಲದೆ ಹಸಿವು
ಮೆರೆಯುತ್ತಿದೆ ಏಕೆ
ಎಲುಬಿಲ್ಲದ ನಾಲಿಗೆ
ಬಯಸುತ್ತಿದೆ ರುಚಿ
ಹಸಿವು ತಣಿಯುವ ಮಂತ್ರ
ವೇದಾಂತ ಇದೆಯೇ ಮನವೇ….
ಮಾಜಾನ್ ಮಸ್ಕಿ
