ಅಂಕಣ ಬರಹ
ಸಾಧಕಿಯರ ಯಶೋಗಾಥೆ
‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ
ಸ್ವತಂತ್ರ್ಯಹೋರಾಟಗಾರ್ತಿಉಷಾಮೆಹ್ತಾ – (1920-2000)
ಸ್ವತಂತ್ರ್ಯ ಹೋರಾಟಗಾರ್ತಿ ಉಷಾ ಮೆಹ್ತಾ – (1920-2000)
ಉಷಾರವರು 5 ಮಾರ್ಚ್ 1920ರಂದು ಗುಜರಾತ್‍ನ ಸೂರತ್‍ನಲ್ಲಿ ಜನಿಸಿದರು. ಇವರು ಕೇವಲ ಐದು ವರ್ಷದವರಿರುವಾಗ ಕುಟುಂಬದವರೊಂದಿಗೆ ಅಹಮದಾಬಾದ್‍ನಲ್ಲಿ ಗಾಂಧಿಜಿಯಿರುವ ಆಶ್ರಮಕ್ಕೆ ಭೇಟಿ ನೀಡಿದರು. ಗಾಂಧಿಯವರು ಉಷಾರವರ ಪಕ್ಕದ ಹಳ್ಳಿಯ ಹತ್ತಿರವೇ ಒಂದು ಶಿಬಿರವನ್ನು ಏರ್ಪಡಿಸಿದ್ದರು. ಶಿಬಿರ ಏರ್ಪಡಿಸಿದ ವಿಷಯ ತಿಳಿದ ಉಷಾರವರು ಅದರಲ್ಲಿ ಭಾಗವಹಿಸಿದ್ದರು.
1928ರಲ್ಲಿ ಎಂಟು ವರ್ಷದ ಉಷಾ ಸೈಮನ್ ಆಯೋಗದ ವಿರುದ್ಧದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬ್ರಿಟೀಷರ ವಿರುದ್ಧ “ಸೈಮನ್ ಗೋ ಬ್ಯಾಕ್” ಎಂದು ಘೋಷಣೆ ಕೂಗಿದರು. ಈ ಪ್ರತಿಭಟನಾ ರ್ಯಾಲಿಯಲ್ಲಿ ಕೆಲವು ಮಕ್ಕಳು ಕೂಡ ಭಾಗವಹಿಸಿದ್ದರು. ಭಾರತದ ಧ್ವಜವನ್ನು ಹಿಡಿದುಕೊಂಡು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ ಹುಡುಗಿಯ ಮೇಲೆ ಪೋಲೀಸರು ಲಾಟಿಚಾರ್ಜ್ ಮಾಡಿದರು. ಆಗ ಧ್ವಜದೊಂದಿಗೆ ಬಾಲಕಿ ನೆಲಕ್ಕುರುಳಿದಳು. ಈ ಘಟನೆಯನ್ನು ಮಕ್ಕಳೆಲ್ಲರೂ ಸೇರಿಕೊಂಡು ತಮ್ಮ ಪೋಷಕರಿಗೆ ತಿಳಿಸಿದರು. ಅದಕ್ಕೆ ಪ್ರತಿಯಾಗಿ ಮಕ್ಕಳ ಪೋಷಕರು ಮಕ್ಕಳನ್ನು ಕೇಸರಿ ಬಿಳಿ ಹಸಿರು ಬಣ್ಣಗಳಿಂದ ಅಲಂಕರಿಸಿ ಮತ್ತೆ ಬೀದಿಗಿಳಿಸಿದರು. ಮಕ್ಕಳು ಧ್ವಜದ ಬಣ್ಣಗಳನ್ನು ಧರಿಸಿ ಮೆರವಣಿಗೆಯಲ್ಲಿ “ಪೋಲೀಸರೇ ನಿಮ್ಮ ಕೋಲುಗಳಿಂದ ಮತ್ತು ದಂಡದಿಂದ ನಮ್ಮನ್ನು ನಿಯಂತ್ರಿಸಬಹುದು ಆದರೆ ನೀವು ನಮ್ಮ ಧ್ವಜವನ್ನು ಉರುಳಿಸಲು ಸಾಧ್ಯವಿಲ್ಲ” ಎಂದು ಕೂಗಿದರು.
ಉಷಾರವರ ತಂದೆ ಬ್ರಿಟೀಷ್ ರಾಜಾಡಳಿತದ ಅಡಿಯಲ್ಲಿ ನ್ಯಾಯಾಧೀಶರಾಗಿದ್ದರು. ಹಾಗಾಗಿ ಮಗಳು ಉಷಾ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದು ಅವರಿಗೆ ಸ್ವಲ್ಪವು ಇಷ್ಟಯಿರಲಿಲ್ಲ. ನಿವೃತ್ತರಾದ ಬಳಿಕ ಸ್ವಲ್ಪ ಸ್ವತಂತ್ರ್ಯ ಹೋರಾಟದಲ್ಲಿ ತೊಡಗಲು ಅಡ್ಡಿ ಉಂಟುಮಾಡುವುದು ಕಡಿಮೆ ಮಾಡಿದರು. ಉಷಾರವರು 12 ವರ್ಷದವರಿದ್ದಾಗ ಇವರ ಕುಟುಂಬವು ಬಾಂಬೆಗೆ ಸ್ಥಳಾಂತರವಾದ ನಂತರವೇ ಇವರು ಸಕ್ರೀಯವಾಗಿ ಚಳುವಳಿಯಲ್ಲಿ ಭಾಗವಹಿಸಲು ಸಾಧ್ಯವಾಯಿತು. ಉಷಾರವರು ಮತ್ತು ಇತರೆ ಮಕ್ಕಳು ಸೇರಿಕೊಂಡು ರಹಸ್ಯವಾಗಿ ಪತ್ರಿಕೆ ಪ್ರಕಟಣೆಗಳನ್ನು ಸಂಬಂಧಿಕರಿಗೆ, ಕಾರಗೃಹಗಳಲ್ಲಿ ಇರುವ ಕೈದಿಗಳಿಗೆ ಭೇಟಿಮಾಡಿ ಪ್ರಕಟಣಾ ಸಂದೇಶಗಳನ್ನು ನೀಡುತ್ತಿದ್ದರು.
ಉಷಾರವರು ಗಾಂಧೀಜಿರವರ ಪ್ರಭಾವದಿಂದ ಬೆಳೆದರವರಾಗಿರುವುದರಿಂದ ಅವರ ಅನುಯಾಯಿಗಳಲ್ಲಿ ಇವರು ಕೂಡ ಒಬ್ಬರಾಗಿದ್ದರು. ಮದುವೆಯಾಗಬಾರದೆಂದು ನಿರ್ಧಾರ ತೆಗೆದುಕೊಂಡು, ಗಾಂಧೀಜಿಯವರ ಸರಳ ಜೀವನದಂತೆ ತಮ್ಮ ಜೀವನವನ್ನು ನಡೆಸುವುದೆಂದು ನಿರ್ಧಾರ ತೆಗೆದುಕೊಂಡರು. ಹಾಗಾಗಿಯೇ ಖಾದಿ ಬಟ್ಟೆಗಳನ್ನು ಮಾತ್ರ ಧರಿಸುತ್ತಿದ್ದರು ಮತ್ತು ಎಲ್ಲಾ ಐಶಾರಾಮಿ ವಸ್ತುಗಳಿಂದ ಮತ್ತು ಜೀವನದಿಂದ ದೂರವಿರುತ್ತಿದ್ದರು. ಕಾಲಕ್ರಮೇಣ ಇವರು ಗಾಂಧೀವಾದಿ ಚಿಂತನೆ ಮತ್ತು ಅವರ ತತ್ವಗಳ ಪ್ರತಿಪಾದಕರಾಗಿ ಹೊರಹೊಮ್ಮಿದರು.
ಉಷಾರವರು ತಮ್ಮ ಆರಂಭದ ಶಾಲಾ ಶಿಕ್ಷಣವನ್ನು ಖೇಡಾ-ಭರೋಜ್ ಮತ್ತು ಬಾಂಬೆಯಲ್ಲಿ ಪಡೆದರು. 1935ರಲ್ಲಿ ಮೆಟ್ರಿಕ್ಯೂಲೇಷನ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾದರು. ಬಾಂಬೆಯ ವಿಲ್ಸನ್ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಿ ತತ್ವಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ಮುಂದೆ ಕಾನೂನು ಅಧ್ಯಯನ ಮಾಡಲು ಸೇರಿಕೊಂಡರು. ಆದರೆ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ ಅದನ್ನು ಅರ್ಧಕ್ಕೆ ನಿಲ್ಲಿಸಿದರು.
1942ರ ಆಗಸ್ಟ್ 9 ರಂದು ಗೌವಾಲಿಯಾ ಟ್ಯಾಂಕ್ ಮೈದಾನದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಆರಂಭವಾಗಲಿದೆ ಎಂದು ಗಾಂಧೀಜಿಯವರು ಮತ್ತು ಕಾಂಗ್ರೆಸ್ ಘೋಷಿಸಿತ್ತು. ಗಾಂಧೀಜಿಯವರು ಸೇರಿದಂತೆ ಎಲ್ಲಾ ನಾಯಕರನ್ನು ಆ ದಿನಾಂಕದ ಮೊದಲೇ ಬಂಧಿಸಲಾಯಿತು. ಆದರೂ ಕೂಡ ಗೌವಾಲಿಯಾ ಟ್ಯಾಂಕ್ ಮೈದಾನದಲ್ಲಿ ಹಲವಾರು ಭಾರತೀಯ ಜನರು, ಕಾರ್ಮಿಕರು ಮತ್ತು ಸ್ವತಂತ್ರ್ಯ ಹೋರಾಟಗಾರರು ರಾಷ್ಟ್ರಧ್ವಜ ಹಾರಿಸಲು ಮೈದಾನಕ್ಕೆ ಇಳಿದರು.
1942 ಆಗಸ್ಟ್ 14 ರಂದು ಉಷಾ ಮತ್ತು ಅವರ ಆಪ್ತರು ಸೇರಿ ರಹಸ್ಯವಾದ ರೇಡಿಯೋ ಕೇಂದ್ರವಾದ ‘ಸೀಕ್ರೇಟ್ ಕಾಂಗ್ರೆಸ್ ರೇಡಿಯೋ’ವನ್ನು ಪ್ರಾರಂಭಿಸಿದರು. ಇದು ಆಗಸ್ಟ್ 27 ರಂದು ಪ್ರಸಾರವಾಯಿತು. ಈ ಸೀಕ್ರೇಟ್ ರೇಡಿಯೋಕ್ಕೆ ಅನೇಕ ಗಣ್ಯರು ಸಹಾಯ ಮಾಡಿದರು. ಈ ರೇಡಿಯೋದಲ್ಲಿ ಗಾಂಧೀ ಮತ್ತು ಇತರೆ ನಾಯಕರ ಸಂದೇಶಗಳನ್ನು ರೆಕಾರ್ಡ್ ಮಾಡಲಾಗಿತ್ತು. ಈ ರೆಕಾರ್ಡಿಂಗ್ ಪ್ರಕ್ರೀಯೆಯು ಬ್ರಿಟಿಷರಿಗೆ ಗೊತ್ತಾಗಬಾರದೆಂದು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವರ್ಗಾಯಿಸುತ್ತಿದ್ದರು. ಆದರೂ ಬ್ರಿಟೀಷರು ಅದನ್ನು ಕಂಡು ಹಿಡಿದು ಉಷಾ ಮೆಹ್ತಾ ಮತ್ತು ಅವರ ಸಂಘಟಕರನ್ನು ಬಂಧಿಸಿ ಜೈಲಿಗೆ ಹಾಕಿದರು.
ಭಾರತೀಯ ಪೊಲೀಸ ವಿಭಾಗವು (ಸಿ.ಐ.ಡಿ)ಯು ಸತತವಾಗಿ ಆರು ತಿಂಗಳು ಉಷಾರವರಿಗೆ ವಿಚಾರಣೆ ನಡೆಸಿತು. ಇವರನ್ನು ಏಕಾಂತ ಬಂಧನದಲ್ಲಿರಿಸಿದರು. ಉಷಾರವರಿಗೆ ದೇಶದ್ರೋಹ ಮಾಡಿದರೆ ವಿದೇಶದಲ್ಲಿ ಓದಲು ಅವಕಾಶವನ್ನು ಮಾಡಿಕೊಡುವುದಾಗಿ ಆಮೀಷವನ್ನು ಒಡ್ಡಿದರೂ ಕೂಡ ಯಾವುದೇ ರಹಸ್ಯವನ್ನು ಬ್ರಿಟಿಷರಿಗೆ ಬಿಟ್ಟು ಕೊಡದೆ ಮೌನವಾಗಿದ್ದರು. ಉಷಾರವರಿಗೆ ಸತತವಾಗಿ ಕಠಿಣ ವಿಚಾರಣೆ ಮಾಡಿದರೂ ಕೂಡ ಯಾವುದೇ ಮಾಹಿತಿಯನ್ನು ನೀಡದೇ ಇದ್ದರು. ಹಾಗಾಗಿ ಇವರಿಗೆ ನಾಲ್ಕು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಿ, ಪುಣೆಯ ಯರವಾಡ ಜೈಲಿನಲ್ಲಿರಿಸಿದರು. ಜೈಲಿನಲ್ಲಿ ಉಷಾರವರ ಆರೋಗ್ಯ ಬಹಳ ಹದಗೆಟ್ಟಿತು. ಅನಾರೋಗ್ಯದ ಕಾರಣ ಸರ್ ಜೆಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಾಂಬೆಗೆ ಕಳುಹಿಸಿದರು. ಚಿಕಿತ್ಸೆಯ ಬಳಿಕ ಮತ್ತೆ ಜೈಲಿಗೆ ಕಳುಹಿಸಿದರು.
ಸಿಕ್ರೇಟ್ ಕಾಂಗ್ರೆಸ್ ಕೇವಲ ಮೂರು ತಿಂಗಳು ಮಾತ್ರ ಕಾರ್ಯನಿರ್ವಹಿಸಿತು. ಇದು ಚಳÀುವಳಿಗೆ ತುಂಬಾ ಉಪಯುಕ್ತವಾಗಿತ್ತು. ಇವರ ರೇಡಿಯೋ ಕಾರ್ಯಕ್ರಮವು ಸ್ವಾತಂತ್ರ್ಯ ಚಳುವಳಿಯ ನಾಯಕರನ್ನು ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿರಿಸಿತು.
ಸ್ವಾತಂತ್ರ್ಯ ನಂತರ ಉಷಾರವರ ಆರೋಗ್ಯ ಸರಿಯಾಗಿರದುದ್ದಕ್ಕೆ ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವುದು ಕಡಿಮೆ ಮಾಡಿದರು. ಇವರು ಸ್ವಾತಂತ್ರ್ಯ ದಿನದಂದು ಅನಾರೋಗ್ಯದ ಕಾರಣಕ್ಕಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ನಂತರ ತಾವು ಅರ್ಧಕ್ಕೆ ನಿಲ್ಲಿಸಿದ ಶಿಕ್ಷಣವನ್ನು ಮುಂದುವರೆಸಿದರು. ಗಾಂಧಿಜೀಯವರ ರಾಜಕೀಯ ಮತ್ತು ಸಾಮಾಜಿಕ ಚಿಂತನೆಯ ಬಗ್ಗೆ ಡಾಕ್ಟರೆಟ್‍ಗಾಗಿ ಬಾಂಬೆ ವಿಶ್ವವಿದ್ಯಾಲಯಕ್ಕೆ ಪ್ರಬಂಧವನ್ನು ಸಲ್ಲಿಸಿ ಡಾಕ್ಟರೆಟ್ ಪದವಿಯನ್ನು ಪಡೆದರು. ವಿಧ್ಯಾರ್ಥಿಯಾಗಿ, ಸಂಶೋಧನಾ ಸಹಾಯಕರಾಗಿ, ಉಪನ್ಯಾಸಕರಾಗಿ, ಪ್ರಧ್ಯಾಪಕರಾಗಿ ಮತ್ತು ನಾಗರೀಕ ಮತ್ತು ರಾಜಕೀಯ ವಿಭಾಗದ ಮುಖ್ಯಸ್ಥರಾಗಿ ಬಾಂಬೆ ವಿಶ್ವವಿದ್ಯಾಲಯದಿಂದ ನಿವೃತ್ತರಾದರು.
ಗಾಂಧಿ ತತ್ವಗಳನ್ನು ಮತ್ತು ಗಾಂಧಿ ಚಿಂತನೆಗಳನ್ನು ಹರಡುವಲ್ಲಿ ಉಷಾ ಮೆಹ್ತಾರವರ ಪಾತ್ರವು ಪ್ರಮುಖವಾಗಿದೆ. ಉಷಾರವರು ಅನೇಕ ಲೇಖನಗಳನ್ನು, ಪ್ರಬಂಧಗಳನ್ನು, ಪುಸ್ತಕಗಳನ್ನು ಗುಜರಾತಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆದಿದ್ದಾರೆ. ಗಾಂಧಿ ಪರಂಪರೆಯ ಸಂರಕ್ಷಣೆಗೆ ಮೀಸಲಾಗಿರುವ ಟ್ರಸ್ಟ್ ‘ಗಾಂಧಿ ಸ್ಮಾರಕ ನಿಧಿ’ಯ ಅಧ್ಯಕ್ಷರಾಗಿ, ನಂತರದಲ್ಲಿ ನವದೆಹಲಿಯ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಆಯ್ಕೆಯಾಗಿ ಸೇವೆಯನ್ನು ಸಲ್ಲಿಸದ್ದಾರೆ. 2000ನೆಯ ಇಸ್ವಿಯಲ್ಲಿ ನಿಧನರಾದ ಉಷಾರವರಿಗೆ 1998ರಲ್ಲಿ ಭಾರತ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.
ಡಾ.ಸುರೇಖಾ ರಾಠೋಡ್.
ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ