ಸರಣಿ ಬರಹ

ಅಂಬೇಡ್ಕರ್ ಓದು

ಎಡ್ವಿನ್ ಆರ್.ಎ.ಸೆಲಿಗ್ಮನ್ ಶಿಷ್ಯ ಅಂಬೇಡ್ಕರ್

Bhimrao Ramji Ambedkar | Columbia Global Centers

       ಎಡ್ವಿನ್ ಆರ್.ಎ.ಸೆಲಿಗ್ಮನ್ ರವರು ಅಂದಿನ ಕಾಲದ ವಿಶ್ವವಿಖ್ಯಾತ ಆರ್ಥಿಕ ತಜ್ಞರಾಗಿದ್ದರು. ಅಂಬೇಡ್ಕರರು ಅವರ ಅಚ್ಚುಮೆಚ್ಚಿನ ಶಿಷ್ಯರಾದರು. ಎಷ್ಟು ಅಚ್ಚುಮೆಚ್ಚಿನ ಶಿಷ್ಯರೆಂದರೆ ಪ್ರೊ. ಸೆಲಿಗ್ಮನರು ಯಾವುದೆ ವರ್ಗದ ಕೊಠಡಿಯಲ್ಲಿ ಬೋಧಿಸುತ್ತಿರಲಿ ಅಲ್ಲಿ ಅವರ ಬೊಧನೆ ಆಲಿಸಲು ಅಂಬೇಡ್ಕರರು ಹಾಜರಿರುತ್ತಿದ್ದರು. ಒಂದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿ ಅದರ ಬಗ್ಗೆ ಚಿಂತನೆ ಮಾಡಿದಾಗ ಸಂಶೋದನೆಯ ಸರಳ ವಿಧಾನ ಯಾವುದೆಂಬುದು ತಿಳಿಯುವುದು ಎಂದು ಅಂಬೇಡ್ಕರರಿಗೆ  ಸಂಶೋದನೆಯ ಸರಳ ವಿಧಾನ ತಿಳಿಸಿ ಕೊಟ್ಟರು. ಅದರಂತೆ ಅಂಬೇಡ್ಕರರು ಅರ್ಥಶಾಸ್ತ್ರ,ರಾಜ್ಯಶಾಸ್ತ್ರ, ಸಮಾಜಶಾಸ್ತ್ರ,ತತ್ವಶಾಸ್ತ್ರ ಮತ್ತು ಮಾನವಶಾಸ್ತ್ರ ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದರು.

ಆಳವಾದ ಅಧ್ಯಯನದ ಫಲವಾಗಿ ಅಂಬೇಡ್ಕರರು 1916 ರಲ್ಲಿ ಪ್ರೊ.ಗೋಲ್ಡನ್ ವೈಜರ್ ಅವರ ನೇತೃತ್ವದಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ “ಭಾರತದಲ್ಲಿ ಜಾತಿಗಳ ಉಗಮ ಮತ್ತು ಅವುಗಳ ವಿಕಾಸ “ (Castes in India; Their mechanism, Genesis and development) ಎಂಬ ಎರಡನೆಯ ಪ್ರಬಂಧವನ್ನು ಮಂಡಿಸಿದರು. ಸ್ವ ಗೋತ್ರ ವಿವಾಹವೇ ಜಾತಿಗೆ ಮೂಲ ಮತ್ತು ಅವುಗಳ ವಿಕಾಸದ ಸೂಕ್ಷ್ಮತೆಯನ್ನು ಅಲ್ಲದೆ ಜಾತಿಗೆ ಧಾರ್ಮಿಕ ಸ್ಪರ್ಶವಿದ್ದಲ್ಲಿ ಮಾತ್ರ ಮಾಲಿನ್ಯದ ಪರಿಕಲ್ಪನೆ ಅಂದರೆ ಮಾಲಿನ್ಯ ,ಮೈಲಿಗೆ, ಮಡಿ, ಪರಿಕಲ್ಪನೆಯೊಂದಿಗೆ ಜಾತಿಯ ಹೊರಗಿನವರೊಂದಿಗೆ ಕುಳಿತು ಊಟ ಮಾಡದಿರುವುದು, ಪ್ರತ್ಯೇಕತೆ,ಅಂತರ್ಜಾತೀಯ ವಿವಾಹ ನಿಷೇದ ಮತ್ತು ಸ್ವಕುಲಜನರಿಗೆ ಮಾತ್ರ ತನ್ನೊಂದಿಗೆ ಸದಸ್ಯತ್ವ ಇವು ಜಾತಿಯ ಲಕ್ಷಣಗಳೆಂದು ವಿವರಿಸಿರುವರು.

             ಭಾರತದ ಹಿಂದು ಧರ್ಮವು ಮೂಲಭೂತವಾಗಿ ಪುರಾತನವಾದದ್ದು ಎಂದು ನಾಗರಿಕತೆ ಬದಲಾವನೆಯಾಗಿದ್ದರೂ ಸನಾತನ ನಿಯಮಗಳು ಶ್ರೇಷ್ಠವೆಂದು ಇಂದಿಗೂ ಬಲಯುತವಾಗಿ ಜಾರಿಯಲ್ಲಿವೆ. ಅಂತರ್ಜಾತಿ ವಿವಾಹ ಪದ್ಧತಿ ಇದ್ದಲ್ಲಿ ಜಾತಿ ಪದ್ದತಿ ಇರಲು ಸಾಧ್ಯವಿಲ್ಲ. ಅಂತರ್ಜಾತಿ ವಿವಾಹವೆಂದರೆ ಜಾತಿಗಳ ಬೆಸುಗೆ ಎಂದರ್ಥ. ಭಾರತಕ್ಕೆ ಸಂಬಂಧಿಸಿದಂತೆ ಹಿಂದೂ ಧರ್ಮದಲ್ಲಿ ಸ್ವಜಾತಿ ವಿವಾಹವು ಜಾತಿಯ ಉತ್ಪತ್ತಿಗೆ ಕಾರಣವೆಂದು, ಜಾತಿ ಉತ್ಪತ್ತಿ ನಂತರ ಅದನ್ನು ನಿರಂತರ ಹೇಗೆ ಕಾಪಾಡಿಕೊಂಡು ಬರಲಾಯಿತೆಂಬುವುದನ್ನು ಅಂಬೇಡ್ಕರರು ತಮ್ಮ ಈ ಪ್ರಬಂಧದಲ್ಲಿ ಸ್ವಾರಸ್ಯಕರ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.ನೈಸರ್ಗಿಕ ವಿಕೋಪಗಳನ್ನು ಹೊರತುಪಡಿಸಿ ಗಂಡ ಹೆಂಡತಿ ಒಟ್ಟಿಗೆ ಸತ್ತಾಗ ಮಾತ್ರ ಒಂದು ಗುಂಪಿನ ಜಾತಿ ಸಂಖ್ಯೆಯಲ್ಲಿ ಗಂಡು ಹೆಣ್ಣು ಅನುರೂಪತೆ ಕಾಣಲು ಸಾಧ್ಯ ಆದರೆ ಸ್ವಜಾತಿ ವಿವಾಹ ಪದ್ಧತಿ ಮೂಲಕ ಸಮನಾದ ಸಂಖ್ಯೆ ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳುವುದು ಇಲ್ಲಿ ಆಶ್ಚರ್ಯ ಚಕಿತ ಗೊಳಿಸುವಂತದೆಂದರೆ ಗಂಡ ಸತ್ತಾಗ ಆತನ ಚಿತೆಯಲ್ಲಿ ಹೆಂಡತಿಯನ್ನು ಜೀವಂತ ಸುಡುವುದು. ಇಲ್ಲದಿದ್ದಲ್ಲಿ ಹೆಚ್ಚುವರಿಯಾಗಿ ಉಳಿದ ಹೆಣ್ಣು ಅಂತರ್ಜಾತಿ ವಿವಾಹವಾದಲ್ಲಿ ಅವಳು ಸ್ವಜಾತಿ ವಿವಾಹ ಪದ್ಧತಿಯನ್ನು ಮುರಿದು ಜಾತಿ ಪದ್ಧತಿಯನ್ನು ನಾಶಮಾಡುತ್ತಾಳೆ. ಹಾಗಾಗಿ ಗಂಡ ಹೆಂಡತಿಯ ದೇಹ ಮತ್ತು ಆತ್ಮಗಳ ಪರಿಪೂರ್ಣ ಮಿಲನದ ಸಾಕ್ಷವೆಂದು, ಸಮಾಧಿಯ ಆಚೆಗೆ ಇರುವ ಭಕ್ತಿ ಎಂದು, ಸತಿ ಪದ್ಧತಿಯನ್ನು ಪುರಸ್ಕರಿಸಲಾಗಿದೆ ಎಂಬುದಾಗಿ ಸಾಂಪ್ರದಾಯಿಕ ಸಮರ್ಥನೆ ನೀಡಲಾಗಿದೆ. ಇದೆ ನಿಯಮ ಹೆಂಡತಿ ಸತ್ತ ಗಂಡನಿಗೆ ಕಟ್ಟು ನಿಟ್ಟಾಗಿ ಅಳವಡಿಸಿಲ್ಲ. ಇನ್ನು ಸತಿ ಪದ್ಧತಿಯಿಂದ ಪಾರಾಗಿದ್ದಲ್ಲಿ ಜೀವನ ಪೂರ್ತಿ ಅವಳು ವಿಧವೆಯಾಗಿ ಜೀವಿಸಬೇಕು. ಹೆಂಡತಿಸತ್ತು ಗಂಡ ಉಳಿದಲ್ಲಿ ಅವನು ವಿದುರನಾಗಬೇಕು. ಆದರೆ ಹೆಣ್ಣಿಗೆ ವಿಧಿಸಿದಷ್ಟು ಕಠೋರ ನಿಯಮ ಗಂಡಸಿಗೆ ಇಲ್ಲ. ಅವನು ಮರುಮದುವೆಯಾಗಬಹುದು. ಗಂಡ ಸತ್ತ ಹೆಣ್ಣು ಸತಿ-ಪದ್ಧತಿ ಅನುಸರಿಲ್ಲವಾದರೆ ವಿದವಾ ಪದ್ಧತಿ ಅನುಸರಿಸಲೇಬೇಕು.   

             ಬಾಲ್ಯವಿವಾಹ ಪದ್ಧಿತಿಯು, ಸತಿ ಪದ್ದತಿ, ವಿಧವಾ ಪದ್ದತಿಯಂತೆ ಜಾರಿಗೆ ಬಂದಿದ್ದು, ಹೆಣ್ಣುಮಕ್ಕಳಿಗೆ ಬಾಲ್ಯದಲ್ಲಿಯೆ ಮದುವೆ ಮಾಡುವುದು. ತಾನು ಮದುವೆಯಾಗಲಿರುವ ಗಂಡಸಿನ ಹೊರತು ಬೇರೆ ಪುರುಷನಲ್ಲಿ ಪ್ರೀತಿ ಪಡುವಂತಿಲ್ಲ. ಆದರ್ಶ ಶೀಲವಂತಿಕೆ ಕಾಯ್ದುಕೊಳ್ಳಬೇಕು. ಮದುವೆಗೆ ಮೊದಲು ಆಕೆ ಯಾವ ವ್ಯಕ್ತಿಯಲ್ಲೂ ಅನುರಕ್ತಳಾಗಕುಡದು. ಹಾಗೆ ಮಾಡಿದ್ದೆ ಆದರೆ ಅದೊಂದು ಪಾಪ. ಆದ್ದರಿಂದ ಕನ್ಯೆಯು ಲೈಂಗಿಕಪ್ರಜ್ಞೆ ಜಾಗೃತಗೊಳ್ಳುವ ಮೊದಲೆ ಅವಳ ಮದುವೆ ಮಾಡುವುದು ಒಂದು ವೇಳೆ ಕನ್ಯೆಯು ಪ್ರಜ್ಞಾವಂತಳಾದ ಮೇಲೆ ಬೇರೆ ಜಾತಿಯ ವ್ಯಕ್ತಿಯಲ್ಲಿ ಅನುರಕ್ತಳಾಗಿ ವಿವಾಹವಾದಲ್ಲಿ ಜಾತಿ ಪದ್ಧತಿಗೆ ಕಳಂಕ ತರುವಳು ಅದಕ್ಕೆಂದೆ ಬಾಲ್ಯ ವಿವಾಹ.

     ಸ್ವಜಾತಿ ವಿವಾಹದಿಂದ ಜಾತಿಯ ಸೃಷ್ಟಿಯಾಗುತ್ತದೆ. ಸತಿಪದ್ಧತಿ, ವಿದವೆ ಅಥವಾ ವಿಧೂರತನ ಮತ್ತು ಬಾಲ್ಯವಿವಾಹ ಈ ರೀತಿ ಸ್ತ್ರೀ ಪುರುಷರ ನಡುವೆ ತಾರತಮ್ಯವನ್ನು ಅನುಕೂಲಕರವಾಗಿ ಉಪಯೋಗಿಸುತ್ತಾ ಬಂದುದ್ದು, ಹಿಂದೂ ಸಮಾಜದಲ್ಲಿ ತನ್ನ ನಡವಳಿಕೆಯಲ್ಲಿ ಸಂಕೀರ್ಣವೆನಿಸಿದರೂ ಮೇಲುನೋಟಕ್ಕೆ ಅತೀರೇಕ ಸಂಪ್ರದಾಯಗಳಾಗಿ ಎದ್ದು ಕಾಣುತ್ತವೆ. ಈ ಮೂರು ಸಂಪ್ರದಾಯಗಳು ಜಾತಿಯ ಸಂರಕ್ಷಣೆಯ ವಿಧಾನಗಳಾಗಿವೆ. ಈಮೂರು ವಿದಾನಗಳಿಂದಲೆ ಜಾತಿ ಶಾಶ್ವತವಾಗಿ ಉಳಿದುಕೊಂಡು ಬರಲು ಸಾಧ್ಯವಾಗಿದೆ. ಈ ಮೂರು ಸಂಪ್ರದಾಯಗಳ ಕರಾಳತೆಯನ್ನು  ಅಂಬೇಡ್ಕರರು ಇಲ್ಲಿ ಅಲ್ಲಗಳೆಯಲಾಗದಂತೆ ವಿಶ್ಲೇಷಿಸಿರುವರು.

ಅಂಬೇಡ್ಕರರು ಎರಡು ವರ್ಷಗಳ ಅವಧಿಯಲ್ಲಿ ಎರಡು ಮಹಾ ಪ್ರಬಂಧಗಳನ್ನು ಬರೆದು ಒಪ್ಪಿಸಿದ್ದರಿಂದ ಕೊಲಂಬಿಯಾ ವಿಶ್ವವಿಧ್ಯಾಲಯವು ಅವರಿಗೆ ಎರಡು ಎಂ.ಎ. ಪದವಿಗಳನ್ನು ಅನುಗ್ರಹಿಸುತ್ತದೆ. ಅಮೇರಿಕದಲ್ಲಿ ಅವರಿಗೆ ಅಲ್ಲಿನ ಸಂವಿಧಾನ ಅದರಲ್ಲೂ 14 ನೇ ತಿದ್ದುಪಡಿ,ನೀಗ್ರೋ ಜನಾಂಗಕ್ಕೆ ಕೊಡಮಾಡಿದ ಸ್ವಾತಂತ್ರ್ಯ ಮತ್ತು ಅಬ್ರಾಹಂ ಲಿಂಕನ್ರ ಹೋರಾಟ ನೀಗ್ರೋಗಳಿಗೆ ಅವರು ತಂದುಕೊಟ್ಟ ಸ್ವಾತಂತ್ರ್ಯ,ಅಲ್ಲದೆ ಭೂಕರ ಟಿ ವಾಷಿಂಗಟನ್ ಜೀವನ ಮತ್ತು ಸಾಧನೆ ಅವರು ನೀಗ್ರೋ ಜನಾಂಗಕ್ಕೆ ಕೊಡಿಸಿದ ಸಮಾನತೆ ಅಂಬೇಡ್ಕರರ ಮೇಲೆ ಬಹಳ ಪ್ರಭಾವ ಬೀರುತ್ತದೆ. ಭಾರತದಲ್ಲಿ ತುಳಿತಕೊಳಪಟ್ಟ ನಿಮ್ನ ವರ್ಗದ ಜನರ ಜೀವನ ಸುಧಾರಣೆ, ಕಲ್ಯಾಣ ಸಮಾಜ ಸ್ಥಾಪನೆ ಅವರ ಏಕೈಕ ಗುರಿಯಾಗುತ್ತದೆ. ಬರೋಡಾ ಸಂಸ್ಥಾನದಿಂದ ಬರುತ್ತಿದ್ದ ಶಿಷ್ಯವೇತನದ ಹಣದಲ್ಲಿ ದುಂದು ವೆಚ್ಚಮಾಡದೆ ಮಿತವ್ಯೆಯಮಾಡಿ, ಅರೆ ಹೊಟ್ಟೆಯಲ್ಲಿದ್ದುಕೊಂಡು ದುಡ್ಡು ಉಳಿತಾಯ ಮಾಡಿ ಸಾವಿರಾರು ಪುಸ್ತಕ ಖರೀದಿ ಮಾಡುತ್ತಾರೆ, ಛಲದಿಂದ ಕಠೋರ ಅಧ್ಯಯನ  ಮಾಡುತ್ತಾರೆ, ಪಿ.ಎಚ್.ಡಿ ಪದವಿಗಾಗಿ ಮಹಾಪ್ರಬಂಧ ಬರೆಯಲು ಆರಂಭಿಸುತ್ತಾರೆ. ಕಠಿಣ ಪರಿಶ್ರಮ, ಆಳವಾದ ಅಧ್ಯಯನದಫಲವಾಗಿ 1917 ರಲ್ಲಿ “ರಾಷ್ಟ್ರೀಯ ಡಿವಿಡೆಂಟ್: ಒಂದು ಐತಿಹಾಸಿಕ ಮತ್ತು ವಿಶ್ಲೇಷನಾತ್ಮಕ ಅಧ್ಯಯನ “(National Dividend of India- A Historical and Analytical study) ಎಂಬ ಮಹಾ ಪ್ರಬಂಧವನ್ನು ಬರೆದು ಮಂಡಿಸುವರು. ಈ ಕೃತಿಗೆ “ಬ್ರಿಟಿಷ ಇಂಡಿಯಾದಲ್ಲಿ ಪ್ರಾಂತೀಯ ಹಣಕಾಸು ವ್ಯವಸ್ಥೆಯ, ವಿಕಾಸ” ಎಂಬ ಮೂಲ ತಲೆಬರಹ ಮತ್ತು ಬ್ರಿಟಿಷ ಸಾಮ್ರಾಜ್ಯದ ಹಣಕಾಸು ವ್ಯವಸ್ಥೆ, ವಿಕೇಂದ್ರಿಕರಣ “ ಎಂಬುದಾಗಿ ಎರಡನೆ ತಲೆಬರಹದೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ.

ಮಹಾಪ್ರಬಂಧವನ್ನು ತಮಗೆ ಉನ್ನತ ವ್ಯಾಸಂಗಕ್ಕಾಗಿ ಶಿಷ್ಯವೇತನ ಮಂಜೂರಿಸಿದ ಬರೋಡಾ ಮಹಾರಾಜರಾದ ಸಯ್ಯಾಜೀ ಗಾಯಕವಾಡ ರವರಿಗೆ ಅರ್ಪಿಸಿರುವರು. ವಿಶ್ವಪ್ರಸಿದ್ಧಅರ್ಥಶಾಸ್ತ್ರಜ್ಞ ಮತ್ತು ಅಂಬೇಡ್ಕರರ ಅಚ್ಚುಮೆಚ್ಚಿನ ಉಪನ್ಯಾಸಕರಾದ ಪ್ರೋ.ಎಡ್ವಿನ್ ಸೆಲಿಗ್ಮನ್ ರವರು ಪುಸ್ತಕಕ್ಕೆ ಮುನ್ನುಡಿ ಬರೆದಿರುವರು. ಹಣಕಾಸಿನ ಕುರಿತು ಇಷ್ಟೊಂದು ಆಳವಾಗಿ ಅಧ್ಯಯನ ಮಾಡಿ ವಿಶ್ಲೇಷನೆಮಾಡಿ ಬರೆದಂತ ಇಂತಹ ಪ್ರಬಂಧವನ್ನು ಇಲ್ಲಿಯವರೆಗೆ ನೋಡಿಲ್ಲವೆಂದು ಪ್ರೋ. ಸೆಲಿಗ್ಮನ್ ರವರು ಮುಕ್ತಕಂಠದಿಂದ ಹೊಗಳಿರುವರು.

ಈ ಮಹಾ ಪ್ರಬಂಧದಲ್ಲಿ ಅಂಬೇಡ್ಕರರು ಭಾರತದ ಅರ್ಥವ್ಯವಸ್ತೆ ಮತ್ತು ಹಣಕಾಸು ವ್ಯವಸ್ಥೆಯನ್ನು ವೈಜ್ಞಾನಿಕ ಮತ್ತು ವಸ್ತುನಿಷ್ಠ ಅಂಕಿ ಅಂಶಗಳೊಂದಿಗೆ ವಿಶ್ಲೇಷಣೆ ಮಾಡಿದ್ದಾರೆ. ಒಳ್ಳೆಯ ಆಡಳಿತ –ಒಳ್ಳೆಹಣಕಾಸಿನ ಮೇಲೆ ಅವಲಂಬಿಸಿರುತ್ತದೆ. ಆಡಳಿತ ಎಂಬ ಇಂಜಿನ್ನಿಗೆ ಹಣಕಾಸು ಎಂಬುದು, ಇಂಧನವಾಗಿದೆ ಎಂದು ಹಣಕಾಸು ಆಡಳಿತವನ್ನು ವಿಮರ್ಶೆ ಮಾಡಿರುವರು. ಭಾರತಕ್ಕೆ ಇಂಗ್ಲೆಂಡ ಕೊಟ್ಟ ಕೊಡುಗೆ ಏನು ಎಂಬುದಕಿಂತಲೂ ಇಂಗ್ಲೆಂಡಗೆ ಭಾರತ ಕೊಟ್ಟ ಕೊಡುಗೆ ಆರ್ಥಿಕವಾಗಿ ಅಪಾರವಾಗಿದೆ. ಅಧಿಕ ತೆರಿಗೆಯಿಂದ ಇಂಗ್ಲೆಂಡ ಭಾರತವನ್ನು ಎಷ್ಟು ಲೂಟಿ ಮಾಡಿತು ಎಂದರೆ ಪ್ರಪಂಚದಲ್ಲಿಯೆಭಾರತವು ಒಂದು ಬತ್ತಿಹೋದ ಸ್ಥಳವಾಗಿದೆ ಎಂಬುದಾಗಿ ಹೇಳುತ್ತಾರೆ. ಬ್ರಿಟಿಷರಿಂದ ಶಾಂತಿಯುತ ಆಡಳಿತ ಪದ್ದತಿ, ನ್ಯಾಯಾಂಗ ಪದ್ದತಿ, ಕೊಡುಗೆಗಳಾದರೂ ಭಾರತವನ್ನು ಬಡತನ, ದಾರಿದ್ರ್ಯ ಕೂಪಕ್ಕೆ ತಳ್ಳಿದ್ದು ಘೋರ ಅನ್ಯಾಯವಾಗಿದೆ ಎಂಬುದಾಗಿ ಬ್ರಿಟಿಷರ ಆಡಳಿತವನ್ನು, ಆರ್ಥಿಕ ನೀತಿಯನ್ನು ಕಟುವಾಗಿ ಟೀಕಿಸುತ್ತಾ ಜಗತ್ತಿಗೆ ಬಹಿರಂಗ ಗೊಳಿಸಿದ್ದಾರೆ. ಬ್ರಿಟಿಷರ ಮುಖಕ್ಕೆ ಹೊಡೆದಂತೆ ಅಂಕಿ ಅಂಶ ಪ್ರಸ್ತೂತ ಪಡೆಸಿದ್ದಾರೆ. ಈ ಕೃತಿ –ಅಂದು ಎಷ್ಟು ಪ್ರಸಿದ್ದಿ ಹೊಂದಿತ್ತು ಎಂಬುದಕ್ಕೆ, ಅಂದಿನ ಸಂಸದರು, ಶಾಸಕರು ಬ್ರಿಟಿಷ ಆಡಳಿತದ ಬಜೆಟ್ ಮಂಡನೆಯ ಸಮಯದಲ್ಲಿ ಆಕರ ಗ್ರಂಥವಾಗಿ ಬಳಸಲಾಗುತಿತ್ತು. ಅಂಬೇಡ್ಕರರುಒಬ್ಬ ಶ್ರೇಷ್ಠ ಆರ್ಥಿಕ ತಜ್ಞರೆಂಬುದು, ಒಬ್ಬ ಅಪ್ಪಟ ದೇಶಪ್ರೇಮಿ ಎಂಬುದನ್ನು ಲೇಖನಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ಬೇಜವಾಬ್ದಾರಿ ಬ್ರಿಟಿಷರ ಆಡಳಿತ ಪದ್ಧತಿಯನ್ನು ನೇರವಾಗಿ, ದಿಟ್ಟವಾಗಿ ಖಂಡಿಸಿದ್ದು ಯಾವ ಸ್ವಾತಂತ್ರ್ಯ ಹೊರಾಟಗಾರನಿಗಿಂತಲೂ ಕಡಿಮೆಯಾದುದಲ್ಲ ಎಂಬುದನ್ನು ಕೃತಿಯು ಸಾಬೀತು ಪಡಿಸುತ್ತದೆ. ಈ ಕೃತಿಗೆ ಕೊಲಂಬಿಯಾ ವಿಶ್ವವಿದ್ಯಾಲಯವು ಅಂಬೇಡ್ಕರ್ ಅವರಿಗೆ ಪಿಎಚ್ ಡಿ ಪದವಿಯನ್ನು ನೀಡಿತು.

                                                 (ಮುಂದುವರೆಯುವುದು)


                                        

ಸೋಮಲಿಂಗ ಗೆಣ್ಣೂರ        

Leave a Reply

Back To Top