ಕಾವ್ಯ ಸಂಗಾತಿ
ಅವನೆಂದೂ ಗಾಂಧಿಯಾಗಲಿಲ್ಲ
ಕಪ್ಪು ಬಾನು
ಕಣ್ಣು ತೆರೆದರೆ ಕಾಣಿಸಿತೊಂದು ಗೆರೆ
ಗೆರೆಗುಂಟ ನಡೆದೇ ನಡೆದ
ಕಲ್ಲು ಮುಳ್ಳು ಹಾದಿಯಲಿ
ಮುದುಕ ಕುರಿ ಮೇಯಿಸುತ್ತಿದ್ದ
ಒಲೆ ಹಚ್ಚಿದ್ದಳು ಮುದುಕಿ ಬಿಸಿಲು ಬಯಲಿಗೆ
ಉಣ್ಣೆ ಕತ್ತರಿಸುವ ತವಕ ಹುಡುಗನಿಗೆ
ಚೀಲ ತುಂಬಿದಳು ಮುದುಕಿ
ಬೆಳಕು-ಕತ್ತಲೆಗಳ ಬೇರ್ಪಡಿಸಿ
ಮಗ್ಗುಗುಣಿಗಿಳಿದ ಮುದುಕ
ಎಳೆಯುತ್ತಲೇ ಹೋದ ಎಳೆ ಎಳೆಗಳ
ಬೆಳೆಯುತ್ತಲೇ ಹೋಯಿತು ಬದುಕು
ಹೊದ್ದರೆ ರಾತ್ರಿ
ಮಡಚಿಟ್ಟರೆ ಕಂಬಳಿ
ಮುದುಕನೆಂದಿಗೂ ಕೂರಲಿಲ್ಲ ಉಪವಾಸ
ಹಂಬಲಿಸಲೂ ಇಲ್ಲ ಗಾಂಧಿಯಾಗಲು
ಬೆಚ್ಚಗೆ ಹೊದ್ದು ಕಂಬಳಿ
ಎಳೆ ಎಳೆಯೊಳಗೂ ನಗುವ ಗಾಂಧಿ
ಎದೆಗೆ ಬಂದು ಕುಳಿತಿದ್ದ!
*****
.ಲೋಕದ ಬೆಳಗು
ಚಮ್ಮಾಳಿಗೆಯ ದೇವತೀರ್ಥ ಕುಡಿದಿರಬೇಕು
ಹೊತ್ತು ತಿರುಗುವ ಮುನ್ನ ಭಾರ
ನೇಗಿಲು
ಕುಡಿದಿರಬೇಕು
ಕಮ್ಮಾರನ ಒಲುಮೆ
ನೆಲ ಮುಟ್ಟುವ ಮೊದಲು
ಕುಡಿದಿರಬೇಕು ಶ್ರಮದ ಬೆವರು
ಬೆಳಗುವುದಕ್ಕೂ ಮೊದಲು ಫಸಲು
ಬೇಯುವಾಗಲೂ ಮಣ್ಣು
ತುಂಬಬೇಕು ಆವುಗೆಯ ಕಣ್ಣು
ತುಂಬಿರಬೇಕು ಅಂತಃಕರುಣೆಯ ಬಟ್ಟಲು
ಕೊಳ್ಳುವವನ ಎದೆ ತುಂಬ
ಇರಬೇಕು ಬೆಳದಿಂಗಳು
ಇಲ್ಲದಿರೆ…..
ಬೆಳಗುವುದೆಂತು ಲೋಕ?
ಬಿ.ಶ್ರೀನಿವಾಸ
ಆಹಾ….ಚೆಂದ ದ ಪದ್ಯಗಳು