ಕಾವ್ಯ ಸಂಗಾತಿ

ನನಗೂ ನಿನ್ನಂತಾಗಬೇಕಿತ್ತು

ಅದೆಷ್ಟೋ ಸಲ ನಾನೂ ನಿನ್ನಂತಾಗಲು…
ಎದೆಯಾಳದ ಕನಸಿನ ಕಣ್ಣಿಗೆ 
ಕಪ್ಪು ಪಟ್ಟಿ ಬಿಗಿಯುತಿದ್ದೆ
ತೀವ್ರವಾದ ಭಾವಗಳು ಎಲ್ಲೆ ಮೀರದಂತೆ
ಇತಿಮಿತಿಯ ರೇಖೆಯನೆಳೆಯುತಿದ್ದೆ

ಕೆಲವೊಮ್ಮೆ ಮಾತುಗಳು ಹಳಿ ತಪ್ಪಿದಾಗ
ಕರಾಳ ಮೌನ ಎದೆಯನ್ನು ಸುಡುತಿತ್ತು
ಅಭದ್ರತೆಯ ನೆಲೆಯೊಳಗೆ ಓಲಾಡಿಸುತಿತ್ತು

ಅಂದುಕೊಂಡಂತೆ ಇರಲಾಗದೆ
ಸಣ್ಣ ತಪ್ಪುಗಳೂ ವಿರಾಟ ರೂಪ ತಳೆದು
ಮೂರ್ತರೂಪಕ್ಕಿಳಿಸುವ ಛಲ
ದಿನಕಳೆದಂತೆ ಇಳಿಯುತ್ತಲೇ ಇತ್ತು

ನಿನ್ನ ಸಖ್ಯವಾದ ಮೇಲೆ
ನಾನೆನುವ ಅಹಂಭಾವ ಬಿಗುಮಾನ
ಎಲ್ಲವೂ ದೂರ ಸರಿದು
ನಿನ್ನ ಅನುನಯದೊಳು ಹೂವಾಗಿದ್ದು ಸುಳ್ಳಲ್ಲ

ಬೇಕು ಬೇಡಗಳ ನಡುವಿನ ಒಳಪಂಥದಲಿ
ಅದೆಷ್ಟೋ ಬಾರಿ ನಾನೂ ನೀನೂ
ಸೋತು ಗೆಲ್ಲುತಿದ್ದೆವು

ಕೆಲವೊಮ್ಮೆ ಮಾತು ಮೌನಗಳ ಮಥನದಲಿ 
ವಿರಹದ ಅಲೆಗಳೆದ್ದು ನಲುಗಿ ಸುಸ್ತಾದಾಗ
ನನಗೂ ನಿನ್ನಂತಾಗುವ ಹಂಬಲ

ದಿನ ಕಳೆದಂತೆ ನೋಯಿಸುವ ಭಾವಗಳನ್ನೆಲ್ಲ
ನಿರಾಕಾರಕ್ಕಿಳಿಸಿದೆ
ನನಗೂ ನಿನ್ನಂತಾಗಬೇಕಿತ್ತು
ನನ್ನತನವನ್ನಾದರೂ ಉಳಿಸಿಕೊಳ್ಳುವಷ್ಟು

ಈಗ ಕಳವಳವಿಲ್ಲ 
ಕಳುವಾಗುವ ಭಯವೂ ಇಲ್ಲ
ಬಂದಂತೆ ಬದುಕನೊಪ್ಪಿಕೊಳ್ಳುವ
ದಿಟ್ಟನಡೆ ನಿನ್ನಂತೆ… ನಾನಂದುಕೊಂಡಂತೆ


ಅನಿತಾ ಪಿ. ತಾಕೊಡೆ

11 thoughts on “

  1. ಕವಿತೆಯ ಪ್ರಾಸ ಮತ್ತು ಭಾವ ತುಂಬಾ ಚೆನ್ನಾಗಿದೆ ಮೇಡಮ್

Leave a Reply

Back To Top