ಅನುವಾದಿತ ಅಬಾಬಿಗಳು

ಕಾವ್ಯ ಸಂಗಾತಿ

ಆಕರ : ಕಾಲಂ ಸಾಕ್ಷಿಗಾ
(ತೆಲುಗು ಅಬಾಬಿಗಳ ಸಂಕಲನ)

ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್
ಕನ್ನಡಾನುವಾದ : ಧನಪಾಲ ನಾಗರಾಜಪ್ಪ

ABSURD by Jesús Hernández

೮೬)
ಕವಿತೆ ಸುರಿಸುವ ಹನಿಗಳು
ಮನಸ್ಸಿನ ಮಧುರ ಸ್ವರಗಳು
ಕವನದೊಂದಿಗೆ ಉಷೋದಯ
ಹಕೀಮಾ
ಕವಿತ್ವದಿಂದ ದಕ್ಕುವುದು ಅಭಯ.

೮೭)
ಜುಬ್ಬವೋ ಅಂಗಿಯೋ ಜೇಬು ತುಂಬಬೇಕಷ್ಟೇ
ಜೈಕಾರ ಕೂಗುವರು ಬಾವುಟಗಳು ಹೊರುವರು
ಮತ್ತೆ ಪ್ರಾಮಣಿಕತೆ ಪಾಠ ಮಾಡುವರು
ಹಕೀಮಾ
ಅಲ್ಲಾಹ್ ನೋಡುವುದಿಲ್ಲವೆಂದೆ ಇವರ ನಂಬಿಕೆ?

೮೮)
ಜಮಾತುಗಳ ಹೆಸರಿನಲ್ಲಿ ಸಮಾಜದಲ್ಲಿ ಗೌರವ
ಅಧಿಕಾರಕ್ಕಾಗಿ ಗುಂಪುಗಾರಿಕೆಯ ಅಹಂಕಾರ
ಇವರು ಯಾರ ಕಾರುಣ್ಯವನ್ನು ಕೋರುತ್ತಿದ್ದಾರೆ?
ಹಕೀಮಾ
ಜನರ ಪ್ರೀತಿಗಾಗಿಯೋ ಇಲ್ಲ ಸ್ವ ಕೀರ್ತಿಗಾಗಿಯೋ?

೮೯)
ವಾಸ್ತವದಲ್ಲಿ ನಡೆಯುತ್ತಿರುವುದು ಹಲಾಲಾ
ಹಲಾಲಿನ ಮುಸುಕಿನಲ್ಲಿ ಹರಾಮಾ?
ನಮಗೆ ಅಡ್ಡ ಬರದವರೆಗೇ ಏನಾದರೂ
ಹಕೀಮಾ
ಅಡ್ಡ ಬಂದರೆ ದೀನ್ ಆದರೂ ನೈ ಜಾಂತಾ.

೯೦)
ಲೋಕ ಕಾಗೆಯಂತೆ ತಿವಿಯುತ್ತಿದೆ
ನಿನಗೆ ಉಗ್ರವಾದಿಯ ಮುದ್ರೆಯೊತ್ತುತ್ತಿದೆ
ನೀನು ಮಾತ್ರ ಮಣಿಗಳನ್ನು ಏಣಿಸುತ್ತಿರು
ಹಕೀಮಾ
ನಿನ್ನಲ್ಲಿ ವಿಶ್ವಾಸ ಧೈರ್ಯ ಇದೆಯಾ?

ಪದದಗಳ ಅರ್ಥ :-
ಜಮಾತ್ = ಧಾರ್ಮಿಕ ಸಮೂಹ/ಸಭೆ
ಹಲಾಲ್ = ಧರ್ಮ, ಹರಾಮ್ = ಅಧರ್ಮ
ದೀನ್ = ಧರ್ಮ

೯೧)
ಉಷಃಕಾಲ ಕಂಬಳಿ ಹೊದ್ದುಕೊಂಡಿದೆ
ಊಹೆಗಳ ಉತ್ಸವ ಆರಂಭವಾಗಿದೆ
ನಿಮ್ಮ ತಾತನವರು ಅಂದೆಂದೋ ನವಾಬರಾಗಿದ್ದರಂತೆ
ಹಕೀಮಾ
ನೀವು ಮಾತ್ರ ಗುಲಾಮರಂತೆ ಬದಲಾಗುತ್ತಿದ್ದೀರಿ.

೯೨)
ಸಾಕು ಸಾಕಾಗದ ಉದ್ಯೋಗಗಳು
ಸಾಯಂಕಾಲಕ್ಕೆ ಚಿಕನ್ ತುಣುಕುಗಳು
ಗಳಿಕೆಯೆಲ್ಲಾ ಅನಗತ್ಯ ಖರ್ಚುಗಳು
ಹಕೀಮಾ
ಪ್ರವಾದಿಯವರ ವಿಧಾನವನ್ನು ಯಾವಾಗ ಪಾಲಿಸುವುದು?

೯೩)
ಕೂಲಿಯಾಗಿ, ಕಾರ್ಮಿಕನಾಗಿ, ರಿಕ್ಷಾವಾಲನಾಗಿ
ಆಯಿಲ್, ದುಮ್ಮು-ಧೂಳು, ಬೆವರಿನಲ್ಲಿ
ಹೊಟ್ಟೆಪಾಡಿಗಾಗಿ ದುಡಿದು ದಣಿಯುವೆಯಲ್ಲಾ
ಹಕೀಮಾ
ನಿನಗಿಲ್ಲವೆ ಪಲ್ಲಕ್ಕಿಯನ್ನೇರುವ ಅಧಿಕಾರ?

೯೪)
ಇಂದಿಗೂ ಸಾಕು ಸಾಲದ ಕೆಲಸಗಳಲ್ಲಿ ಕೊಳೆಯುತ್ತ
ಅರ್ಧ ಹೊಟ್ಟೆಯ ಉಪವಾಸದಲ್ಲಿ ಬೇಯುತ್ತ
ಕೊತಕೊತ ಕುದಿಯುತ್ತ ಆವಿಯಾಗುತ್ತಿಹೆವು
ಹಕೀಮಾ
ನಮಗಾಗಿ ಇನ್ನೊಂದು ಮಹಾಮಾರಿ ಕಾಯುತ್ತಿಹುದೆ?

೯೫)
ಯಾಕೆ ಆತ್ಮಹತ್ಯೆಗಳನ್ನು ಮಾಡಿಕೊಳ್ಳುವುದು?
ಇದೇನಾ ನಮಗೆ ಕಲಿಸಿದ ಜೀವನ ವಿಧಾನ!
ದೇವರಿಗಿಂತ ಮನುಷ್ಯರಿಗೇ ಭಯಪಡುತ್ತಿದ್ದೀರಾ?!
ಹಕೀಮಾ
ಇದು ಬಲಹೀನ ವಿಶ್ವಾಸದ ಸಮಾಜವೆ?

೯೬)
ದೈವವನ್ನು ನಂಬುವುದೆಂದರೆ ವೇಷಧಾರಣೆಯೆ?
ಇಲ್ಲವೆ ಸಂಘಗಳ ಏರ್ಪಾಟುಗಳ ಆರ್ಭಟವೆ?
ನಮ್ಮಲ್ಲೇ ಇಲ್ಲ ಒಗ್ಗಟ್ಟು
ಹಕೀಮಾ
ನಿಜವಾಗಿಯೂ ನಾವು ದೈವದ ಮಕ್ಕಳೇನಾ?

೯೭)
ಯಾರೋ ಒಬ್ಬರು ಬಲಿಯಾದರಷ್ಟೇ
ಸ್ವಲ್ಪ ಹೊತ್ತು ಬೀದಿಗಿಳಿದು ಪ್ರದರ್ಶನ ಮಾಡುವೆವು
ಟೀವಿಗಳಲ್ಲಿ, ಪತ್ರಿಕೆಗಳಲ್ಲಿ ಪ್ರಕಟಣೆಗಳು ಸಮಾವೇಶಗಳು
ಹಕೀಮಾ
ಮತ್ತೆ ಬೆಳಗಾದರೆ ದುರಸ್ತಿಗಳೇ ಜೀವನ.

೯೮)
ನೈತಿಕ ಮೌಲ್ಯಗಳೆನ್ನುತ್ತಾರೆ
ವ್ಯಾಪಾರದಲ್ಲಿ ಮೋಸ ಮಾಡುತ್ತಾರೆ
ಅಲ್ಲಾಹ್ ಕಸಮ್ ಎಂದು ನಂಬಿಸುತ್ತಾರೆ
ಹಕೀಮಾ
ಅಲ್ಲಾಹ್ ಅಂದ್ರೆ ಅಷ್ಟು ಸಾಮಾನ್ಯ ಪದವೆ?

೯೯)
ರೋಗಿಗೆ ಬೇಕಿರುವುದು ಚಿಕಿತ್ಸೆ
ಮಂತ್ರಿಸುವ ಕಾಯಿಗಳು
ದಾರದ ತಾಯತ್ತುಗಳು ಅಲ್ಲವಲ್ಲಾ
ಹಕೀಮಾ
ಬಾಬಾಗಳಿಂದ ಬಾಧೆಗಳು ದೂರವಾಗುವವೆ?

೧೦೦)
ಕಪಟವು ಮನುಷ್ಯನಲ್ಲಿ ನೆಲೆಯೂರಿದೆ
ಯಾರನ್ನು ಮೋಸ ಮಾಡುತ್ತಿದ್ದಾನೆ
ಸಮಾಜವನ್ನಾ? ಇಲ್ಲ ದೈವವನ್ನಾ?
ಹಕೀಮಾ
ವಾಸ್ತವವಾಗಿ ತನಗೆ ತಾನೇ ಮೋಸಹೋಗುತ್ತಿದ್ದಾನೆ.

೧೦೧)
ಬಡವನೆಂದರೆ ಎಲ್ಲರಿಗೂ ತಾತ್ಸರವೇ
ಗುಲಾಮಗಿರಿಗೆ ವಾರಸತ್ವವೆ?
ಮತ್ತೆ ಯಾಕೆ ನೀಚವಾಗಿ ಕಾಣುವಿರಿ
ಹಕೀಮಾ
ಮಹಮ್ಮದ್ (ಸ) ಬಡವರೇ ಅಲ್ಲವೆ!

೧೦೨)
ಧರ್ಮವೆಂದರೆ ದೈವಾಜ್ಞೆಗಳ ಸಾರ
ಇವರೇನು ತಲಾ ಒಂದೊಂದು ದಿಕ್ಕು!
ಎಲ್ಲರಿಗೂ ತಮ್ಮದೇ ವ್ಯಾಪಾರದ ಗುಂಗು
ಹಕೀಮಾ
ಅಸಲು ಧರ್ಮವೆಂದರೇನು ಅಂತ ಬಲ್ಲರೆ?

೧೦೩)
ದೈವ ಸಂದೇಶವೇನಾದರೂ ಉದ್ಯೋಗವೆ?
ರಜಾ ದಿನಗಳಲ್ಲಿ ಸಾರಲು
ಸಂಘಗಳಲ್ಲಿ ಎಲ್ಲರೂ ಅವರೇನಾ?
ಹಕೀಮಾ
ದೈವವೆಂದರೆ ಭಯವಿದ್ದರೆ ಅಲ್ಲವೆ!

೧೦೪)
ಅಕ್ಕಪಕ್ಕದವರೊಡನೆ ಜಗಳಗಳು
ಸಮಾಜದಲ್ಲಿ ಸುಧಾರಕರಂತೆ ನಾಟಕಗಳು
ನಿಮ್ಮ ವೇಷಭೂಷಣಗಳೆಲ್ಲಾ ಬರೀ ತೋರಿಕೆಯೆ?
ಹಕೀಮಾ
ದೈವಕಾರ್ಯದಲ್ಲೂ ಕಣ್ಣಾಮುಚ್ಚಾಲೆಯಾಟವೆ!

೧೦೫)
ಮಾತುಗಳಷ್ಟೇ ಆಚರಣೆ ಎಲ್ಲಿ
ನಿನ್ನ ಮನದ ಕನ್ನಡಿಯಲ್ಲಿ ನೋಡು
ವಾಸ್ತವದ ಬೆಳಕಿನಲ್ಲಿ ಬದುಕು
ಹಕೀಮಾ
ಇಹಲೋಕದಲ್ಲಿ ನೀನು ದಾರಿಹೋಕನೇ!

೧೦೬)
ಹಣದ ಮೇಲೆಷ್ಟು ವ್ಯಾಮೋಹ!
ಹೆಜ್ಜೆ ಹೆಜ್ಜೆಗೂ ವಂಚನೆಗಳು
ದುಡ್ಡೇ ಸರ್ವಸ್ವವೆ?
ಹಕೀಮಾ
ಇದೊಂದು ದೊಡ್ಡ ಪರೀಕ್ಷೆ ಹುಷಾರು.

೧೦೭)
ಆತ್ಮೀಯತೆ ಅನುರಾಗಗಳು
ಇಂದು ಹೇಳಿಕೊಳ್ಳಲ್ಲಷ್ಟೇನಾ
ಮನುಷ್ಯ ಮನುಷ್ಯನನ್ನೇ ನಂಬುವುದಿಲ್ಲ
ಹಕೀಮಾ
ದೈವದ ಮೇಲಾದರೂ ನಂಬಿಕೆ ಇದೆಯಾ?

೧೦೮)
ಕಷ್ಟಗಳಲ್ಲಿದ್ದರೆ ಸಲಹೆಗಳನ್ನು ಕೊಡುತ್ತಾರೆ
ಹಸಿವಿನಲ್ಲಿರುವವರಿಗೆ ಅನ್ನ ನೀಡಬೇಕು
ಮಾತುಗಳಿಂದ ಹಸಿವು ನೀಗುವುದೆ?
ಹಕೀಮಾ
ಸಲಹೆಗಳಿಂದ ಕಷ್ಟಗಳು ತೀರುವವೆ?

೧೦೯)
ಬಲವೆಂದರೆ ತೋಳ್ಬಲವೆ?
ಇಲ್ಲ ಧನ ಬಲವೆ?
ಅಧಿಕಾರ ಬಲವೆ?
ಹಕೀಮಾ
ಅಸಲು ಬಲವೆಂದರೆ ವಿಶ್ವಾಸವೇ ಅಲ್ಲವೆ!

೧೧೦)
ನಿಶ್ಶಬ್ದವು ಶಾಂತಿ ಚಿಹ್ನೆಯೆ?
ಹೇಡಿತನದ ಪ್ರತಿರೂಪವೆ?
ನಮ್ಮನಾವಾಹಿಸಿದ ಒಳ್ಳೆಯತನವೆ?
ಹಕೀಮಾ
ತಪ್ಪನ್ನು ಮನಸ್ಸಿನಲ್ಲೂ ತಡೆಯಲಾರದವರು!

೧೧೧)
ಗತವನ್ನು ಅನುಭವದಿಂದ ನೋಡು
ಪ್ರಸ್ತುವವನ್ನು ಆಚರಣೆಯಿಂದ ಮಾಡು
ಭವಿಷ್ಯತ್ತಿಗೆ ದಾರಿಗಳನ್ನು ನಿರ್ಮಿಸು
ಹಕೀಮಾ
ಪರಲೋಕವೇ ಅಲ್ಲವೆ ಅಸಲಿ ಭವಿಷ್ಯತ್ತು.

೧೧೨)
ಜೀವನವೆಂದರೆ ವಿಲಾಸಗಳ ವಾಹನವೆ?
ಎಲ್ಲೆಗಳಿರದ ವ್ಯಸನಗಳಮಯವೋ?
ಮನೋವ್ಯಾಧಿಗಳ ತವರು ಮನೆಯೆ?
ಹಕೀಮಾ
ಪ್ರವಾದಿಯವರ ಮಾತೇ ಬದುಕಿಗೇ ಹೂದೋಟ.

೧೧೩)
ಊಹೆಗಳಲ್ಲಿ ಎಷ್ಟು ಹೊತ್ತು ಕಳೆಯುವೆ?
ಇಸ್ಪೀಟೆಲೆಗಳ ಮಹಡಿಗಳು ಕುಸಿದು ಬೀಳುವವು
ಸ್ಥಿರವಾದ ನಿರ್ಣಯಗಳನ್ನು ತೆಗೆದುಕೋ
ಹಕೀಮಾ
ದೈವದೊಂದಿಗೆ ನಂಟನ್ನು ಹೆಚ್ಚಿಸಿಕೋ.

೧೧೪)
ಕುಸಿಯುತ್ತಿವೆ ಕನಸುಗಳು!
ಕರಗುತ್ತಿವೆ ಕಾಲಗಳು!
ಎಂದು ಬರುವುದು ಆತ್ಮಸ್ಥೈರ್ಯ?
ಹಕೀಮಾ
ಆಚರಣೆಯೇ ನಿನ್ನ ಜೀವನದ ಗೆಲುವು.

೧೧೫)
ನಿನ್ನಲ್ಲಿ ಉಕ್ಕುವ ಭಾವಗಳೇ
ಉದ್ವೇಗ ಭರಿತ ಜ್ವಾಲೆಗಳು
ನೀತಿಗಾಗಿ ಹೋರಾಡುವ ವೀರನಾಗಿ
ಹಕೀಮಾ
ಬದುಕು ವಿಶ್ವಾಸಿಯಾಗಿ ಚಿರಕಾಲ.


4 thoughts on “ಅನುವಾದಿತ ಅಬಾಬಿಗಳು

  1. ಎಲ್ಲಾ ಅಬಾಬಿಗಳು ತುಂಬಾ ಅರ್ಥಗರ್ಭಿತವಾಗಿವೆ ಸರ್

  2. ನೇರ ಸರಳ ಸುಂದರ
    ಭಾವಾಭಿವ್ಯಕ್ತಿಗೆ
    ಇನ್ನೇನು ಬೇಕು ನೀನೇ ಹೇಳು
    ಕವಿಕಾವ್ಯಾತ್ಮ ,
    ಅಬಾಬಿಗಳ ಅಕ್ಷರಗಳಿಂಚರವಿದೆಯಲ್ಲಾ !

    *ಅಕ್ಷರಮಾಂತ್ರಿಕ-ಅಮೋಘಂಚೈತ್ರಕಾರಂಜಿ

Leave a Reply

Back To Top