ಅಂಕಣ ಸಂಗಾತಿ

ಗಜಲ್ ಲೋಕ

ಅಂಬಲಗೆಯವರಅಮೃತದಆವರಣದಲ್ಲಿ…

ಹಾಯ್..

ನನ್ನ ಎಲ್ಲ ಕಸ್ತೂರಿ ಕನ್ನಡದ ಹೃದಯಗಳಿಗೆ ಈ ಮಲ್ಲನ ಹೃದಯಾಂತರಾಳದ ಶುಭಕಾಮನೆಗಳು. ಪ್ರತಿ ವಾರದಂತೆ ಈ ವಾರವೂ ಸಹ ಒಬ್ಬ ಗಜಲ್ ಸಾಧಕರ ಪರಿಚಯದೊಂದಿಗೆ ನಿಮ್ಮ ಮುಂದೆ ಹಾಜರಾಗಿದ್ದೇನೆ.

ಹೂವು ಮಾತ್ರವಲ್ಲ ಈಗ ಬಂಡೆಯೂ ಗಜಲ್ ಆಗುವುದು

ಸಮಯದ ಧ್ವನಿ ಇದಾಗಿದೆ ಖಡ್ಗವೂ ಗಜಲ್ ಆಗುವುದು

                              –ಕಮಲ್ ಕಿಶೋರಭಾವುಕ

       ಸಮಾಜ ಒಂದು ಫಲವತ್ತಾದ ಭೂಮಿಯಾದರೆ ಮನುಷ್ಯನ ಭಾವನೆಗಳೆ ಸಶಕ್ತ ಬೀಜಗಳು! ಬಿತ್ತಿದ ಬೀಜ ಫಲ ಕೊಡದೆ ಇರದು. ಈ ಹಿನ್ನೆಲೆಯಲ್ಲಿ ಕವಿ, ಕಲಾವಿದ ಉತ್ತಮ ಕೃಷಿಕನೆ ಸರಿ. ಎಲ್ಲರಿಗೂ ಭಾವನೆಗಳು ಇರುತ್ತವೆಯಾದರೂ ಅಭಿವ್ಯಕ್ತಿಯಿಂದ ಎಲ್ಲರ ಗಮನ ಸೆಳೆಯೋದು ಮಾತ್ರ ಸಾಂಸ್ಕೃತಿಕ ವಕ್ತಾರರಾದ ಕವಿಗಳು. ಅಂತೆಯೇ ಶೆಲ್ಲಿ ‘ಕವಿಗಳು ಅಘೋಷಿತ ಶಾಸಕರು’ ಎಂದು ಹೇಳಿರುವುದು. ಇದಕ್ಕೂ ಮುಂದುವರಿದು ವಿಟ್ ಮಿನ್ “ಪ್ರಪಂಚಕ್ಕೆ ಕವಿಗಳ ಅಗತ್ಯವಿದೆ ಹಾಗೂ ರಾಜ್ಯ ರಾಜ್ಯಗಳನ್ನು, ರಾಷ್ಟ್ರ ರಾಷ್ಟ್ರಗಳನ್ನು ಬೆಸೆಯುವವರೆ ಕವಿಗಳು” ಎಂದಿದ್ದಾರೆ. ಇಲ್ಲಿ ‘ರಾಜ್ಯ ರಾಜ್ಯಗಳನ್ನು ರಾಷ್ಟ್ರ ರಾಷ್ಟ್ರಗಳನ್ನು ಬೆಸೆಯುವವರೆ ಕವಿಗಳು’ ಎಂಬುದು ಜಾಗತಿಕ ಮಟ್ಟದಲ್ಲಿ ಭಾಷಾತೀತವಾಗಿ, ದೇಶಾತೀತವಾಗಿ ಹಾಗೂ ಧರ್ಮಾತೀತವಾಗಿ ನಮ್ಮ ಹೃದಯದಲ್ಲಿ ನೆಲೆಯೂರಿರುವ ಗಜಲ್ ಸುಕೋಮಲೆಗೆ ಹೆಚ್ಚು ಅನ್ವಯವಾಗುತ್ತದೆ. ಒಬ್ಬ ಶಾಯರ್ ಗಜಲ್ ಗೋ ಆಗುವುದು ತನ್ನ ದೇಶವನ್ನು ಪ್ರೀತಿಯಿಂದ ತನ್ನಲ್ಲಿ ಕರಗಿಸಿಕೊಂಡಾಗ ಆ ದೇಶವೂ ಆತನನ್ನು ತನ್ನಲ್ಲಿ ಲೀನ ಮಾಡಿಕೊಳ್ಳುತ್ತದೆ. ಇಂತಹ ಗಜಲ್ ಇಂದು ಕರುನಾಡಿನಾದ್ಯಂತ ಪ್ರವಾಹದೋಪಾದಿಯಲ್ಲಿ ಮೈ-ಮನಗಳಲ್ಲಿ ಹರಿದಾಡುತಿದೆ. ಇದು ಕನ್ನಡಕ್ಕೆ ಉರ್ದು ಮಾರ್ಗವಾಗಿಯೂ, ಹಿಂದಿ ಮೂಲಕವೂ ಬಂದಿದೆ. ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳ ಗಜಲ್ ನಲ್ಲಿ ಪ್ರಾವೀಣ್ಯ ಹೊಂದಿರುವ ಕೆಲವೇ ಕೆಲವು ಗಜಲ್ ಕಾರರಲ್ಲಿ ಡಾ. ಕಾಶೀನಾಥ ಅಂಬಲಗೆ ಅವರು ಪ್ರಮುಖರು.

        ಭಾರತಕ್ಕೆ ಸ್ವಾತಂತ್ರ್ಯ ದೊರೆತ ವರ್ಷ 1947ರ ಜುಲೈ 10 ರಂದು ಶ್ರೀ ರಾಚಪ್ಪ ಅಂಬಲಗೆ, ಶ್ರೀಮತಿ ಗುರಮ್ಮ ಅಂಬಲಗೆಯವರ ಸುಪುತ್ರನಾಗಿ ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ ಡಾ. ಕಾಶೀನಾಥ ಅಂಬಲಗೆ ಅವರು ಜನನವಾಗಿದೆ. ಕನ್ನಡದಲ್ಲಿ ಮತ್ತು ಹಿಂದಿ ಭಾಷೆ ಎರಡರಲ್ಲೂ ಪ್ರಭುತ್ವ ಹೊಂದಿರುವ ಇವರು ಎರಡು ಭಾಷೆಗಳಲ್ಲಿಯೂ ಎಂ.ಎ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದ ಶ್ರೀಯುತರು ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಹಲವಾರು ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ.

        ಕವಿ, ಲೇಖಕ, ಸಾಹಿತಿ, ಕಾದಂಬರಿಕಾರ, ಗಜಲ್ ಕಾರರಾದ ಅಂಬಲಗೆಯವರು ಅನುವಾದಕರಾಗಿಯೂ ಪ್ರಸಿದ್ಧರಾಗಿದ್ದಾರೆ. ಜೊತೆಗೆ ಹಿಂದಿ, ಉರ್ದು ಸೇರಿದಂತೆ ಹಲವು ಭಾಷೆಗಳಲ್ಲಿಯೂ ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಮುಖ ಕವನಸಂಕಲನಗಳೆಂದರೆ-  ‘ಮೂವತ್ತೈದು ಕವನಗಳು,’ ‘ಇನ್ನಷ್ಟು ಕವನಗಳು,’ ‘ಹುಲ್ಲ ಮೇಲಿನ ಹನಿಗಳು’, ‘ಕೌದಿ’, ‘ಚುಳುಕಾದಿರಯ್ಯಾ’, ‘ಬೇವು ಬೆಲ್ಲ’, ‘ಹಾಡುಗಳು ಉಳಿದಾವ’, ‘ಮೂವತ್ತಕ್ಕೆ ಮುನ್ನೂರು’,..ಸಂಪಾದನೆಯಲ್ಲಿ ‘ಶಿವಶರಣ ಪಾಟೀಲ ಜವಳಿ- ವ್ಯಕ್ತಿ ಕೃತಿ,’ ‘ದಾಸೋಹ’, ‘ಮಹಿಳಾ ವಚನಗಳು,’ ‘ಶಬ್ದದ ಬೆಡಗು’,… ಕೃತಿಗಳು. ಅನುವಾದಕರಾಗಿ ಹಲವಾರು ಮೌಲಿಕ ಕೃತಿಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ.‌ ಅವುಗಳಲ್ಲಿ ‘ಸಮಕಾಲೀನ ಪಂಜಾಬಿ ಕವಿತೆಗಳು’, ‘ಕೋಗಿಲೆ ಅಳುತಿದೆ’, ‘ಓದಿ ಅಳುವುದು’, ‘ಸಪ್ದರ್ ಹಾಶ್ಮಿಯವರ ಮಕ್ಕಳ ನಾಟಕಗಳು,’ ‘ಸೌಂದರ್ಯಶಾಸ್ತ್ರ’, ‘ರಾಮಜಿ ಜಾಗ್ರತನಾದ’, … ಪ್ರಮುಖವಾಗಿವೆ.‌ ಇವುಗಳೊಂದಿಗೆ ಹಲವಾರು ಹಿಂದಿ ಕೃತಿಗಳನ್ನೂ ರಚಿಸಿದ್ದಾರೆ. ಅವುಗಳಲ್ಲಿ ‘ಅಧೂರೆ ಶಬ್ದ’,  ‘ಸಂತೋಂ ಔರ ಶಿವಶರಣೋಂ ಕೆ ಕಾವ್ಯ ಮೆ ಸಾಮಾಜಿಕ ಚೇತನಾ’, .. ಮುಖ್ಯವಾಗಿ ನಿಲ್ಲುತ್ತವೆ. ಇನ್ನೂ ಕನ್ನಡ ಗಜಲ್ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. ಗಜಲ್ ನ ಅಸ್ಮಿತೆ, ಮೂಲ ಸೆಲೆಯನ್ನು ತಮ್ಮ ಸತತ ಅಧ್ಯಯನ, ಅಧ್ಯಾಪನದಿಂದ ಕರಗತ ಮಾಡಿಕೊಂಡು ಹಲವು ಗಜಲ್ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಆಯ್ದ ಎಪ್ಪತ್ತೊಂದು ಅನಿಕೇತನ ಕನ್ನಡ ಗಜಲ್ ಗಳು’, ‘ಆಯ್ದ ಎಪ್ಪತ್ತೊಂದು ಕನ್ನಡ ಗಜಲ್ ಗಳು’, ‘ಶರಣು ಶರಣಾರ್ಥಿ ಗಜಲ್ ಗಳು’, ‘ಸತಿಯೇ ಸಾಕಿಯಾದ ಕವಿಸಮಯ’, ಇವುಗಳೊಂದಿಗೆ ‘ಗಜಲೋತ್ಸವ ಗಜಲ್ ಗಳು’, ‘ಗಜಲ್ ಘಲ್ ಘಲ್’, ಎನ್ನುವ ಸಂಪಾದಿತ ಹಾಗೂ ಅನುವಾದಿತ ಗಜಲ್ ಸಂಕಲನಗಳು ಸೇರಿವೆ.

        ಹಲವಾರು ಸಾಹಿತ್ಯ-ಸಾಂಸ್ಕೃತಿಕ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಿರಿಯ ಗಜಲ್ ಗೋ ಡಾ. ಕಾಶೀನಾಥ ಅಂಬಲಗೆ ಅವರಿಗೆ ಕೇಂದ್ರ ಸರ್ಕಾರದ ಕೇಂದ್ರೀಯ ಹಿಂದಿ ನಿರ್ದೇಶನಾಲಯದ 50 ಸಾವಿರ ನಗದು ಬಹುಮಾನ, ಬೆಂಗಳೂರು ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಹಿಂದಿ ಪುರಸ್ಕಾರ, ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪುರಸ್ಕಾರ ಸೇರಿದಂತೆ ಹಲವಾರು ಗೌರವ, ಪ್ರಶಸ್ತಿಗಳು ಸಂದಿವೆ.

       ‘ಗಜಲ್’ ಎನ್ನುವುದು ‘ರಸಾನಿಷ್ಠ’ ಕಾವ್ಯ ಪ್ರಕಾರ. ಗಜಲ್ ನಿಂದ ಯಾವೆಲ್ಲ ಪ್ರಯೋಜನಗಳು ಸಿಗದೇ ಹೋದರೂ ಸಹೃದಯಿಗಳಿಗೆ ‘ರಸಾನಂದ’ದ ಭೋಜನವಂತೂ ತಪ್ಪಲ್ಲ!! ಶೃಂಗಾರದ ಸ್ಥಾಯಿ ಭಾವವೇ ರತಿ. ಇದು ಎಲ್ಲರಿಗೂ ಅತ್ಯಂತ ಪ್ರಿಯವಾದ ರಸ. ಗಜಲ್ ನಲ್ಲಿ ಇದರದೇ ಪಾರುಪತ್ಯ. ಆದರೆ ಎಲ್ಲರ ಹೃದಯ ತಟ್ಟಿ, ಹೃದಯಗಳನ್ನು ಬೆಸೆಯುವುದು ಮಾತ್ರ ಕರುಣ ರಸ. ಶೋಕವೇ ಇದರ ಸ್ಥಾಯಿ ಭಾವ. ಹೃದಯ ಸಂವಾದ ಬಲದಿಂದ ಸಹೃದಯನಾದವನು ಶೋಕವನ್ನು ಸಾಧಾರಣ ರೂಪದಲ್ಲಿ ಅನುಭವಿಸುತ್ತಾನೆ. ಈ ನೆಲೆಯಲ್ಲಿ ಅಂಬಲಗೆಯವರ ‘ಅಶಅರ್’ ಓದುಗರೊಂದಿಗೆ ಮಾತಿಗಿಳಿಯುತ್ತವೆ. ಮನುಷ್ಯತ್ವಕ್ಕೆ ಉಂಟಾದ ಗಾಯಗಳ ನೋವು ಇವರ ಗಜಲ್ ಗಳಲ್ಲಿದೆ.

ಮೆಲ್ಲಗೆ ಹೆಜ್ಜೆ ಇಟ್ಟು ಒಳಗೆ ಬನ್ನಿರಿ ಗಜಲಿನ ಮಂದಿರದಲಿ

ಮನಸು ತೊಳೆದಿಟ್ಟು ಒಳಗೆ ಬನ್ನಿರಿ ಗಜಲಿನ ಮಂದಿರದಲಿ

ಈ ಷೇರ್ ಅಂಬಲಗೆ ಅವರ ಗಜಲ್ ಮೇಲಿನ ಪ್ರೀತಿಯನ್ನು ಸಾರುತ್ತದೆ. ಗಜಲ್ ಎನ್ನುವುದು ಕೇವಲ ಕಾವ್ಯ ಪ್ರಕಾರವಲ್ಲ, ಅದೊಂದು ಧ್ಯಾನಸ್ಥ ಮನಸ್ಥಿತಿಯನ್ನು ಬಯಸುವ ಹೃದಯದ ಬಡಿತ. ಅದು ಮನೋರಂಜನೆಯ ಸರಕಲ್ಲ, ‘ಗಜಲ್ ಗೋಯಿ’ ಎನ್ನುವುದು ಪವಿತ್ರ ಕಾರ್ಯವಾಗಿದೆ. ಅಂತೆಯೇ ಇಲ್ಲಿ ಗಜಲ್ ಗೋ ಅವರು ಗಜಲ್ ಅನ್ನು ಮಂದಿರಕ್ಕೆ ಹೋಲಿಸಿ, ನಿರ್ಮಲವಾದ ಮನಸ್ಸಿನಿಂದ ಗಜಲ್ ಬರೆಯಬೇಕು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಗಜಲ್ ಹೃದಯದ ಪಿಸುಮಾತು. ಕರ್ಕಶ ಧ್ವನಿ ಇದಕ್ಕೆ ಸರಿ ಹೊಂದುವುದಿಲ್ಲ. ತೊಟ್ಟು ಕಳಚಿದ ಎಲೆ ನಿರಾಳವಾಗಿ, ನಿರಾತಂಕವಾಗಿ ಮತ್ತು ನಿರ್ಮಲತೆಯಿಂದ ನೆಲ ಮುಟ್ಟುವಂತೆ ಅದು ಪುಟಕ್ಕಿಳಿಯಬೇಕು ಎಂಬ ಭಾವ ಈ ಷೇರ್ ನಲ್ಲಿದೆ.

       ಡಾ. ಕಾಶೀನಾಥ ಅಂಬಲಗೆ ಅವರು ಪ್ರಾದೇಶಿಕ ಭಾಷೆಯನ್ನು ಸತ್ವಪೂರ್ಣವಾಗಿ ಬಳಸಿಕೊಂಡಿದ್ದಾರೆ. ಇವರ ಗಜಲ್ ಗಳು ಸಮಾಜಮುಖಿ ಚಿಂತನೆಗಳ ಆಗರವಾಗಿವೆ. ಇವರ ಗಜಲ್ ಗಳ ಮೇಲೆ ಬಸವಾದಿ ಶರಣರ ವಚನಗಳ ದಟ್ಟವಾದ ಪ್ರಭಾವವಿದೆ.

“ಬದುಕಿಗೆ ಬದುಕಿನ ಆರತಿಯೆನ್ನೆತ್ತಿದ ಶರಣರೇ ನಿಮಗೆ ಶರಣು ಶರಣಾರ್ಥಿ

ಬೆಳಕಿಗೆ ಬೆಳಕಿನ ಆರತಿಯೆನ್ನೆತ್ತಿದ ಶರಣರೇ ನಿಮಗೆ ಶರಣು ಶರಣಾರ್ಥಿ”

ಇದೊಂದು ಲಂಬಿ ರದೀಫ್ ಇರುವ ಷೇರ್. ಮಾನವೀಯ ಮೌಲ್ಯಗಳ ನೆಲೆಯಲ್ಲಿ ಶರಣರ ವಿಚಾರಗಳನ್ನು ಇಲ್ಲಿ ಗುರುತಿಸಬಹುದು. ಶರಣರ ವಚನ ಸಾಹಿತ್ಯದ ಪ್ರಮುಖ ಆಶಯ ‘ಸಮತೆ ಎಂಬುದೇ ಯೋಗ ನೋಡ..’ ಸರ್ವರಿಗೂ ಸಮ ಬಾಳು ಎನ್ನುವುದರ ಸಮರ್ಥ ಸಾಕ್ಷಾತ್ಕಾರ ಇಲ್ಲಿದೆ. ಸಾಮಾಜಿಕ ಕ್ರಾಂತಿಯ ಮನೋಭೂಮಿಕೆ ಇವರ ಗಜಲ್ ಗಳಲ್ಲಿ ಕಾಣುತ್ತೇವೆ.

       ಕನ್ನಡ ಗಜಲ್ ಪರಂಪರೆಯಲ್ಲಿ ಶಾಂತರಸ ಅವರದು ಒಂದು ಘಟ್ಟವಾದರೆ, ಕಾಶೀನಾಥ ಅಂಬಲಗೆ ಅವರದು ಮತ್ತೊಂದು ಘಟ್ಟ. ಇವರ ಗಜಲ್ ಗಳು ಸಮುದಾಯದ ಆತಂಕಗಳಿಗೆ ದನಿಯಾಗಿವೆ. ಎಲ್ಲರೆದೆಯ ನೋವುಗಳನ್ನು ಮುನ್ನೆಲೆಗೆ ತಂದು ಪ್ರಶ್ನೆ ಕೇಳುವ ಪರಿ ಇವರ ಗಜಲ್ ಗಳಲ್ಲಿದೆ. ಇವರಿಂದ ಕನ್ನಡ ಗಜಲ್ ಪರಂಪರೆ ಮತ್ತಷ್ಟು ಹಿಗ್ಗಲಿ ಎಂದು ಹೃನ್ಮನದಿಂದ ಶುಭಕೋರುವೆನು.

“ಮಸೀದಿಯು ದಕ್ಕುವುದಿಲ್ಲ ಶಿವಾಲಯವು ಸಿಗುವುದಿಲ್ಲ

ಹೃದಯಕ್ಕಿಂತ ಪವಿತ್ರ ದೇವಾಲಯವು ದೊರೆಯುವುದಿಲ್ಲ”

                           -ಅಶೋಕ ‘ಮಿಜಾಜ’

ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಮ್ಮೆ ನಿಮ್ಮ ನೆಚ್ಚಿನ ಗಜಲ್ ಉಸ್ತಾದರೊಂದಿಗೆ ನಿಮ್ಮ ಮುಂದೆ ಪ್ರತ್ಯಕ್ಷನಾಗುವೆ. ಅಲ್ಲಿಯವರೆಗೂ ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top