ಸರಣಿ ಬರಹ

ಅಂಬೇಡ್ಕರ್ ಓದು

ಭಾಗ-4

ಬಾಲ್ಯ

ಉನ್ನತ ವ್ಯಾಸಂಗ

Ambedkar original photos | B.R. Ambedkar Image gallery | ambedkar photos hd

 ತಂದೆಯ ಸಾವು ಅಂಬೇಡ್ಕರರಿಗೆ ಮರೆಯಲಾಗದ ದು:ಖವನ್ನುಂಟು ಮಾಡಿತು. ತಂದೆಯ ನೆನಪು ಮರುಕಳಿಸುತಿತ್ತು. ಆದರೂ ಅವರಲ್ಲಿ ಉನ್ನತ ವ್ಯಾಸಂಗದ ಮಹತ್ಪಾಕಾಂಕ್ಷೆ ಉತ್ಕಟಗೊಂಡಿತು. ಅದೇ ಸಂದರ್ಭದಲ್ಲಿ ಬರೋಡಾದ ಮಹಾರಾಜರು ನಾಲ್ಕು ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಕಳುಹಿಸಿ ಕೊಡುವುದಾಗಿ ಪ್ರಕಟಣೆ ಹೊರಡಿಸಿದ್ದರು. ಪ್ರಕಟಣೆಯಲ್ಲಿ ಕರಾರೊಂದನ್ನು ಹಾಕಿದ್ದರು ಅದೇನೆಂದರೆ ಮಹಾರಾಜರು ಕೊಡುವ ಶಿಷ್ಯವೇತನವನ್ನು ವಿದ್ಯಾಭ್ಯಾಸಕ್ಕಾಗಿ ಮಾತ್ರ ಉಪಯೋಗಿಸಿಕೊಳ್ಳಬೇಕು, ಬೇರೆಯದಕ್ಕೆ ಹಣ ಬಳಸಿಕೊಳ್ಳುವಂತಿಲ್ಲಅಲ್ಲದೆ ವಿದ್ಯಾರ್ಜನೆ ಪೂರ್ಣಗೊಳಿಸಿ ಬಂದನಂತರ ಬರೋಡಾ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸುವುದಾಗಿ ಕರಾರು ಪತ್ರ ಬರೆದು ಕೊಡುವುದಾಗಿತ್ತು. ಮಹಾರಾಜರು ಮುಂಬಯಿಗೆ ಬಂದಾಗ ಅಂಬೇಡ್ಕರರು ಅವರನ್ನುಭೇಟಿಯಾಗಿ ಮನವಿ ಅರ್ಜಿ ಕೊಡುವರು, ಆಯ್ಕೆ ಪಟ್ಟಿ ಪ್ರಕಟಿಸಿದಾಗ ನಾಲ್ಕು ವಿದ್ಯಾರ್ಥಿಗಳಲ್ಲಿ ಅಂಬೇಡ್ಕರರ ಹೆಸರು ಆಯ್ಕೆ ಪಟ್ಟಿಯಲ್ಲಿತ್ತು. ಇದು ಅವರಿಗೆ ಎಲ್ಲಿಲ್ಲದ ಹರ್ಷ ತಂದುಕೊಟ್ಟಿತು. ಇದು ಅಂಬೇಡ್ಕರರ ಅದೃಷ್ಟವಾಗಿರದೆ ಭಾರತದ ಜನರ ಅದೃಷ್ಟವಾಗಿತ್ತು, ಪ್ರಜಾಪ್ರಭುತ್ವದ ಅದೃಷ್ಟವಾಗಿತ್ತು ಏಕೆಂದರೆ ಶ್ರೇಷ್ಠ ಸಂವಿಧಾನ     ರಾಜಕೀಯ ಪರಿಣತರೊಬ್ಬರನ್ನು ದೇಶ ಪಡೆಯುವಂತಾಯಿತು.ಆದ್ದರಿಂದ ಬರೋಡಾದ ಮಹಾರಾಜ ಮೂರನೆ ಸಯ್ಯಾಜಿ ಗಾಯಕವಾಡರವರು ಪ್ರಾತ:ಸ್ಮರಣೀಯರಾಗಿದ್ದಾರೆ.

           1913 ರ ಜೂನ 4 ರಂದು ಅಂಬೇಡ್ಕರರು ಬರೋಡಾ ಸಂಸ್ಥಾನಕ್ಕೆ ಹೋಗಿ ಕರಾರು ಒಪ್ಪಂದ ಪತ್ರಕ್ಕೆ ಸಹಿಹಾಕಿ ಬಂದು ಅಮೇರಿಕ್ಕಾಕೆ ಹೋಗಲು ಸಿದ್ದರಾದರು. ರಮಾಬಾಯಿ, ಅಮೇರಿಕಾ ಎಷ್ಟು ದೂರ ಇದೆ ಎಂದು ಪ್ರಶ್ನಿಸಿದಾಗ ಅಂಬೇಡ್ಕರರು ಮಡದಿಯ ಮುಗ್ದ ಪ್ರಶ್ನೆಗೆ ಅದೇನು ನಿನ್ನ ತವರುಮನೆ ದಾಪೊಲಿಯಷ್ಟು ದೂರ ಅಂತಾ ತಿಳಿದು ಕೊಂಡಿದ್ದಿಯಾ, ಅಮೇರಿಕಾಗೆ ಹೋಗಿ ತಲುಪ ಬೇಕಾದರೆ ತಿಂಗಳು ಗಟ್ಟಲೆ ಹಡಗು ಪ್ರಯಾಣ ಮಾಡಬೇಕು ಎಂದರು. ಅಷ್ಟು ದೂರ ಹೋಗಬೇಕೆ? ಇಲ್ಲಿಯೇ ಓದಬಾರದೆ? ಎಂದು ರಮಾಬಾಯಿ ಮತ್ತೆ ಕೇಳಿದಾಗ, ರಮಾ ಇಲ್ಲಿನ ಜಾತಿ ವ್ಯವಸ್ಥೆ ನನಗೆ ಸಾಧನೆ ಮಾಡಲು ಬಿಡುವುದಿಲ್ಲ. ನಾನು ಜ್ಞಾನಿಯಾದರೆ ಮಾತ್ರ ಜನರು ನನ್ನ ಮಾತು ಕೇಳುತ್ತಾರೆ ,ಸಮಾಜ ಸುಧಾರಣೆ ಮಾಡಲು ಸಾಧ್ಯವಾಗುವುದು ಪ್ರತಿಯೋಬ್ಬ ವ್ಯಕ್ತಿಯ ಜೀವನದಲ್ಲಿ ಅವಕಾಶವೆನ್ನುವುದು ಒಮ್ಮೆ ಮನೆಬಾಗಿಲನ್ನು ತಟ್ಟುತ್ತದೆ. ಆಗಲೆ ಅಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬರೋಡಾ ಮಹಾರಾಜರು ನನಗೆ ಅಂತಹ  ಒಂದು ಅವಕಾಶ ಕಲ್ಪಿಸಿ ಶಿಷ್ಯವೇತನ ಮಂಜೂರಿಸಿದ್ದಾರೆ. ಎಲ್ಲವು ಒಳ್ಳೆಯದಾಗುತ್ತದೆ ಎಂದು ರಮಾಬಾಯಿಗೆ ಧೈರ್ಯ ತುಂಬಿ ಅಮೇರಿಕಾಕ್ಕೆ ಹೊರಡುವರು. ಯಶವಂತ ಹಿರಿಯ ಮಗ ಇನ್ನು ಚಿಕ್ಕವನು, ಎರಡನೆ ಮಗು ಹೊಟ್ಟೆಯಲ್ಲಿ ಬೆಳೆಯುತಿತ್ತು, ರಮಾಬಾಯಿ ಯಾವುದಕ್ಕೂ ಎದೆಗುಂದದೆ ಪತಿಯನ್ನು ಉನ್ನತ ವ್ಯಾಸಂಗ ಮಾಡಲು ಅಮೇರಿಕಾಗೆ ಕಳುಹಿಸಿಕೊಟ್ಟರು.

          ಅಂಬೇಡ್ಕರರು 1913 ರ ಕೊನೆಯ ವಾರದಲ್ಲಿ ಅಮೇರಿಕಾದ ನ್ಯೂಯಾರ್ಕ ನಗರ ತಲುಪಿದರು. ಮೊದಮೊದಲು ಒಂದೆರಡು ಕಡೆ ಹಾಸ್ಟೆಲ್ ನೋಡಿಕೊಂಡರು, ಅಲ್ಲಿ ಅವರಿಗೆ ಊಟ ಒಗ್ಗದೆ ಇದ್ದುದರಿಂದ ಕೊನೆಗೆ ಲಿವಿಂಗ್ ಸ್ಟನ್ ಎಂಬಲ್ಲಿ ಬಂದು ಉಳಿದುಕೊಂಡರು. ಅಲ್ಲಿಯೇ ನಾವೆಲ್ ಬಾತೆನಾ ಎಂಬ ಪಾರ್ಸಿಯೊಬ್ಬನ ಪರಿಚಯವಾಯಿತು. ನಾವೆಲ್ ಬಾತೆನಾ ಕೊನೆಯವರೆಗೂ ಅಂಬೇಡ್ಕರರ ಆತ್ಮೀಯ ಸ್ನೇಹಿತರಾಗಿ ಉಳಿದರು. ಕೊಲಂಬಿಯಾ ವಿಶ್ವವಿದ್ಯಾಲಯವು ಅಂದು ಜಗತ್ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಒಂದು. ಅಂಬೇಡ್ಕರರಿಗೆ ಕೊಲಂಬಿಯಾ ವಿಶ್ವವಿದ್ಯಾಲಯವು ಹೊಸ ಪ್ರಪಂಚವನ್ನು ತೆರೆದಿಟ್ಟಿತು. ಅಸ್ಪೃಶ್ಯತೆಯ ಕರಾಳತೆ ಅಲ್ಲಿರಲಿಲ್ಲ, ಎಲ್ಲಿ ಬೇಕಾದಲ್ಲಿ ತಿರುಗಾಡಬಹುದು, ಕೂಡ್ರಬಹುದು,

ಮುಟ್ಟಬಹುದು,ಮೇಲು-ಕೀಳು, ಉಚ್ಚ-ನೀಚ ಭೇದ ಭಾವ ಇಲ್ಲದ ಹೊಸ ಜಗತ್ತನ್ನು ಕಂಡರು. ಬಟ್ಟೆ ಹಾಸಿದ ಡೈನಿಂಗ ಟೇಬಲ್ ಕುರ್ಚಿ ಮೇಲೆ ಕುಳಿತು ಊಟ ಮಾಡುವುದು ಅವರಿಗೆ ಬಹಳ ಇಷ್ಟವಾಯಿತು. ನೀನು ಅಸ್ಪೃಶ್ಯ ಮುಟ್ಟಬೇಡ ಮೈಲೀಗೆಯಾಗುತ್ತದೆ ಎಂಬ ತೆಗಳಿಕೆಯ ಮಾತುಗಳು ಅಲ್ಲಿರಲಿಲ್ಲ. ಸ್ವತಂತ್ರ ವಾತಾವರಣ ಅಂಬೇಡ್ಕರರಿಗೆ ಹೊಸ ಬದುಕನ್ನು ತಂದುಕೊಟ್ಟಿತು.

            ಶಿಷ್ಯವೇತನ ಅವಧಿ ಮುಗಿಯುವುದರೊಳಗೆ ಓದು ಪೂರ್ಣಗೊಳಿಸಬೆಕೆಂಬ  ಗುರಿಯೊಂದಿಗೆ  ಅಂಬೇಡ್ಕರರು ದಿನಕ್ಕೆ 18 ಗಂಟೆಗಳ ಕಾಲ ಕಷ್ಟಪಟ್ಟು ಅಧ್ಯಯನ ಮಾಡತೊಡಗಿದರು. ಹೊಸ ಪುಸ್ತಕ ಕೈಗೆ ಸಿಕ್ಕಿತೆಂದರೆ ಸಾಕು ಅನ್ನ ನೀರು ಮರೆತು ಓದಿ ಪೂರ್ಣಗೊಳಿಸುತ್ತಿದ್ದರು. ಅಲ್ಲಿನ ಬೃಹತ ಗ್ರಂಥಾಲಯದ ಬಹುತೇಕ ಪುಸ್ತಕಗಳನ್ನು ಓದಿ ಮುಗಿಸುತ್ತಾರೆ. ಲಾಲ ಲಜಪತರಾಯರು ಭಾರತದ ಸ್ವಾತಂತ್ರದ ಹೋರಾಟದ ಅಗ್ರ ನಾಯಕರು. ಅವರು ಅಮೇರಿಕದಲ್ಲಿ ಇದ್ದುದರಿಂದ ದಿನಾಲು ಗ್ರಂಥಾಲಯಕ್ಕೆ ಬರುತ್ತಿದ್ದರು.  ಲಾಲ ಲಜಪತರಾಯರು ತದೇಕ ಚಿತ್ತದಿಂದ ಓದುತ್ತ ಕುಳಿತಿರುತ್ತಿದ್ದ ಯುವಕನ ಹತ್ತೀರ ಒಂದು ದಿನ ಬಂದು ಎಷ್ಟೊಂದು ಗಹನವಾಗಿ ಅಧ್ಯಯನ ಮಾಡುತ್ತಿದ್ದಿಯಾ, ಯಾರು ನೀನು ಎಂದು ವಿಚಾರಿಸಿದರು. ಅಂಬೇಡ್ಕರರು ತಮ್ಮ ಪರಿಚಯ ಮಾಡಿಕೊಂಡರು. ಲಾಲ ಲಜಪತರಾಯರು ಅಂಬೇಡ್ಕರರ ಅಧ್ಯಯನ ಕಂಡು ಹೆಮ್ಮೆ ಪಡುತ್ತಾ

ಲಾಲ ಹರದಯಾಳರ ಮುಖಂಡತ್ವದಲ್ಲಿ ನಡೆಯುತ್ತಿರುವ ಗದ್ಧಾರ ಪಕ್ಷಕ್ಕೆ ಸೇರಿಕೊಂಡು ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಲು ಕರೆ ಕೊಡುತ್ತಾರೆ . ಅಂಬೇಡ್ಕರರು ಉತ್ತರಿಸುತ್ತಾ ತಾನು ಬರೋಡಾ ಮಹಾರಾಜರ ಶಿಷ್ಯವೇತನದಲ್ಲಿ ಓದಲು ಬಂದಿದ್ದು ಕಲಿಯುವುದನ್ನು ಬಿಟ್ಟು ಅವರಿಗೆ ದ್ರೋಹ ಮಾಡುವುದಿಲ್ಲ, ಓದು ಮುಗಿದ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವುದಾಗಿ ತಿಳಿಸಿ ಓದಲು ಮಗ್ನನಾದರು.

   ಈಷ್ಟ ಇಂಡಿಯಾ ಕಂಪನಿಯ ಆಡಳಿತ ಮತ್ತು ಅರ್ಥ ವ್ಯವಸ್ಥೆ ಕುರಿತು ಆಳವಾಗಿ ಅಧ್ಯಯನಮಾಡಿ, ಸತತ ಪರಿಶ್ರಮದಿಂದ 1915 ರಲ್ಲಿ “ಪ್ರಾಚೀನ ಭಾರತದ ವಾಣಿಜ್ಯ” (Ancient Indian commerce)  ಎಂಬ ಪ್ರಬಂಧವನ್ನು ಬರೆದು ಮಂಡಿಸಿದರು. ವಿಶ್ವವಿದ್ಯಾಲಯವು  ಅಂಬೇಡ್ಕರರಿಗೆ ಎಂ.ಎ ಪದವಿಯನ್ನು ನೀಡಿತು. ನಿಮ್ನವರ್ಗದ ವಿದ್ಯಾರ್ಥಿಯೊಬ್ಬ ಹೊರದೇಶದಲ್ಲಿ ಪಡೆದ ಎಂ.ಎ ಪದವಿ ಮಹಾನ್             ಸಾಧನೆಯಾಯಿತು. ಭಾರತದ ವಾಣಿಜ್ಯ ಸಂಬಂಧಗಳು ಪ್ರಾಚೀನ ಕಾಲದಲ್ಲಿ, ಮಧ್ಯಯುಗದಲ್ಲಿ ಹಾಗೂ ಬ್ರಿಟೀಷ ಅರಸೊತ್ತಿಗೆಯ ಮುಂಚಿನ ಕಾಲದಲ್ಲಿ ಹೇಗೆ ವ್ಯಾಪಿಸಿತು ಎಂಬುದನ್ನು ಎಳೆ ಎಳೆಯಾಗಿ ಪ್ರಬಂಧದಲ್ಲಿ ಬಿಚ್ಚಿಟ್ಟಿದ್ದಾರೆ. ಬ್ರಿಟೀಷರು ಈಷ್ಟ ಇಂಡಿಯಾ ಕಂಪನಿಯ ಮೂಲಕ ವ್ಯಾಪಾರಕ್ಕಾಗಿ ಆಗಮಿಸಿ ಸಂಪದ್ಭರಿತ

ಭಾರತವನ್ನು ಲೂಟಿ ಮಾಡುತ್ತಾ ತನ್ನ ಸಾಮ್ರಾಜ್ಯ ಶಾಹಿ ಅರಸೋತ್ತಿಗೆಯ ನೀತಿಯಿಂದ ದೇಶ ಕಬಳಿಸಿದ್ದನ್ನು ವಿವರಿಸುತ್ತಾರೆ.

      ಉದಾಹರಣೆ ಸಹಿತವಾಗಿ ಬ್ರಿಟೀಷರ ಆಡಳಿತ ಡಕಾಯಿತರ ಮತ್ತು ಕ್ರೂರ ದೊರೆಗಳ ಆಡಳಿತವಾಗಿದೆ ಎನ್ನುತ್ತಾ ಛಾಟಿ ಭೀಸುತ್ತಾ ತೆರಿಗೆಯನ್ನು ಹೇರಿದರು, ಹೇಗೆ ಯುದ್ದಗಳ ಕರ್ಚುವೆಚ್ಚ ಹೇರುತ್ತಾ, ಸೈನ್ಯ ಸ್ಥಾಪಿಸಿ ಸಂಪದ್ಭರಿತ ಭಾರತವನ್ನು ಹೇಗೆ ದೋಚಿದರೆಂಬುವುದನ್ನು ಸ್ಪಷ್ಟವಾಗಿ ಬರೆಯುತ್ತಾರೆ. ಇದು ಅಂದಿನ ಯಾವ ಸ್ವಾತಂತ್ರ್ಯ ಹೋರಾಟಗಾರರಿಗಿಂತಲೂ  ಕಡಿಮೆಯಾಗಲಾರದು. ಅವರ ದೇಶ ಪ್ರೇಮದ ಸಾಕ್ಷಿಯಾಗಿ ಈ ಕೃತಿನಿಲ್ಲುತ್ತದೆ.


                ಸೋಮಲಿಂಗ ಗೆಣ್ಣೂರ                                 

Leave a Reply

Back To Top