ಅಂಕಣ ಸಂಗಾತಿ

ನೆನಪಿನದೋಣಿಯಲಿ

ಜಟಕಾ

ವಿಧಿಯೆಂಬ ಚಾಲಕನು ಓಡಿಸುತಿಹ 

ಬಂಡಿಯಲಿ ಕುಳಿತು ನಡೆದಿದೆ ಬಾಳಪಯಣ

ಅಲ್ಲಿಷ್ಟು ಇಲ್ಲಿಷ್ಟು ಒಂದಷ್ಟು ನೆನಪುಗಳ ಬುತ್ತಿ ಔತಣ


**

ಕಾಲನ ನಾಗಾಲೋಟದ ಪಯಣವು 

ಗಾಡಿಗೆ ಕಟ್ಟಿದ ಕುದುರೆಗಳು ನಾವು 

ವಿಧಿಯ ಕಡಿವಾಣದ ಬಿಗಿ ಅಂಕೆ 

ನಡೆದಿಹೆವು ಆಮಿಷಕೆ , ಚಾಟಿಯಾ ಭಯಕೆ

“ಹಾಯ್ ಹಾಯ್ ಬಾಜೂ ಬಾಜೂ”  ಟಕ್ ಟಕ್ ಅನ್ನುವ ಕುದುರೆಗಳ ಖರಪುಟದ ಶಬ್ದದೊಂದಿಗೆ ಈ ಪದಗಳು ಕಿವಿಗೆ ಬಿತ್ತೆಂದರೆ ರಸ್ತೆಯಲ್ಲಿ ಆಡುತ್ತಿದ್ದ ಮಕ್ಕಳೆಲ್ಲ ಬದಿಗೆ ಸರಿದು ಗೌರವ ಸಲ್ಲಿಸುವಂತೆ ನಿಲ್ಲುತ್ತಿದ್ದೆವು.  ಬೀದಿಯ ಕೊನೆಯಲ್ಲಿ ತಿರುಗುವವರೆಗೂ ಅದನ್ನೇ ನೋಡುತ್ತಾ ಅಥವಾ ನಿಂತರೆ ಯಾರ ಮನೆಗೆ ಎಂದು ಮಾತನಾಡುತ್ತಾ. ಆ ಪಕ್ಕಕ್ಕೆ ನಿಲ್ಲುವ ಕ್ರಿಯೆಯೋ! ಎಲ್ಲರೂ ಹೇಳಿ ಹೇಳಿ ಅಚ್ಚೊತ್ತಿಬಿಟ್ಟಿತ್ತು.  ಓಡುವ ಕುದುರೆಯಡಿ ಮಕ್ಕಳು ಸಿಕ್ಕಿ ಗಾಯಗೊಳ್ಳುತ್ತಿದ್ದ ಪ್ರಕರಣಗಳು ಆಗ ಅಪರೂಪವೇನಲ್ಲ. ಇದೆಲ್ಲಾ ಅರುವತ್ತರ ದಶಕದ ಮೊದಲಿನ ವರ್ಷಗಳ ಮೈಸೂರಿನ ದೃಶ್ಯ.   

ತೀರ ಇತ್ತೀಚೆಗೆ 8 ವರ್ಷದ ತಂಗಿಯ ಮಗ ಸುಧನ್ವನಿಗೆ ಕುದುರೆಗಾಡಿ ಅನುಭವ ಕೊಡಿಸಲೆಂದು ಜಟಕಾ  ಸವಾರಿಗೆ ಕರೆದೊಯ್ದಿದ್ದೆವು. ಟಾಂಗಾ ಸವಾರಿಯ ಹಳೆಯ ನೆನಪುಗಳೆಲ್ಲ ರೀಲಿನಂತೆ ಬಿಚ್ಚಿಕೊಂಡವು. ಅರಮನೆಯ ಎದುರಿಗಿನ ಟಾಂಗಾ ನಿಲ್ದಾಣದಿಂದ ಸಯ್ಯಾಜಿರಾವ್ ರಸ್ತೆ ಮತ್ತು ಸುತ್ತಲ ಪಾರಂಪರಿಕ ಕಟ್ಟಡಗಳನೆಲ್ಲಾ ನೋಡಿ ಬರುವಾಗ ಹಳೆಯ ಸಂಗತಿಗಳು ಸ್ಮರಣೆಯ ಕೋಶದಲ್ಲಿ ಅಡಗಿದ್ದವು. ಗೂಡು ಚದುರಿಸಿದಾಗ ಚೆಲ್ಲಾಪಿಲ್ಲಿಯಾಗುವ ಇರುವೆಗಳ ತರಹ ಸರಿದಾಡತೊಡಗಿದ್ದವು . ಅವುಗಳನ್ನು ಹಾಗೆಯೇ ಇಲ್ಲಿ ಹಿಡಿದಿಡುವ ಪ್ರಯತ್ನ .

ನನಗೆ ನೆನಪಿರುವಷ್ಟು ಹಿಂದಕ್ಕೆ ಅಂದರೆ 5 ಅಥವಾ 6 ವರ್ಷದವಳಿದ್ದಾಗ ಮೈಸೂರಿನಲ್ಲಿ ಆಂತರಿಕ ಸಾರಿಗೆಯೆಂದರೆ ಜಟಕಾನೇ ಆಗಿತ್ತು.  ಸಿಟಿ ಬಸ್ಸುಗಳು ಇರದಿದ್ದ ಕಾಲ. ಪುಟ್ಟಮಕ್ಕಳು ನಡೆಯಲು ಹಾಗೂ ಸ್ವಲ್ಪ ದೂರದ ಪಯಣ ಇದ್ದಾಗಲೆಲ್ಲಾ ಆಶ್ರಯಿಸುತ್ತಿದ್ದುದು ಜಟಕಾವನ್ನೇ. ಮೈಸೂರಿನ ಮಹಾರಾಜರು ೧೮೯೭ ರಲ್ಲಿ ಟಾಂಗಾವನ್ನು ಮೈಸೂರಿಗೆ ತಂದರಂತೆ.  ಸುಮಾರು ಐನೂರು ಆರುನೂರು ಜಟಕಾ ಗಳಿದ್ದ ಕಾಲವೂ ಇತ್ತು ಎಂದು ಹೇಳುತ್ತಾರೆ. ಈಗ ಅವುಗಳ ಸಂಖ್ಯೆ ಶತಕ ದಾಟಿಲ್ಲ. ಅವುಗಳಿಗೆಲ್ಲಾ ನೋಂದಣಿ ಸಂಖ್ಯೆ, ಚಾಲಕರಿಗೆ ಗುರುತಿನ ಬಿಲ್ಲೆ ಕೊಡುತ್ತಿದ್ದರು. ಮುನಿಸಿಪಾಲಿಟಿಯ ಅಧಿಕಾರವ್ಯಾಪ್ತಿಗೆ ಬರುತ್ತಿದ್ದವು.  ಈಗಿನ ಆಟೋಗಳ ಹಾಗೆ ಅವುಗಳಿಗೆಂದೇ ಪ್ರತ್ಯೇಕ ಸ್ಟ್ಯಾಂಡ್ ನಿಲ್ದಾಣಗಳು ಇರುತ್ತಿತ್ತು .ನಾನೇ ಕಂಡಂತೆ ಚಾಮುಂಡಿಪುರಂ ಸರ್ಕಲ್, ಅಗ್ರಹಾರ, ಅರಮನೆಯ ಮುಂದುಗಡೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕೆ ಆರ್ ಆಸ್ಪತ್ರೆಯ ಮುಂದೆ ಇಲ್ಲೆಲ್ಲಾ ಕುದುರೆ ಗಾಡಿಗಳು ಸಾಲಾಗಿ ನಿಂತಿರುತ್ತಿದ್ದವು . 

ಸಾಮಾನ್ಯವಾಗಿ ಜಟಕಾ ಮತ್ತು ಟಾಂಗಾ ಎರಡೂ ಕುದುರೆ ಗಾಡಿಗೆ ಬಳಸುವ ಪದಗಳಾದರೂ ಎರಡರ ರಚನೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ .ಎತ್ತಿನಗಾಡಿಯದೇ ಸ್ವಲ್ಪ ಪರಿಷ್ಕೃತ ಸುಧಾರಿತ ರೂಪ ಜಟಕಾ. ಆದರೆ ಟಾಂಗಾ ನವೀನ ಮಾದರಿಯ ಐಶಾರಾಮಿ ತರಹದ್ದು.  ಮೈಸೂರು ಮಹಾರಾಜರಿಗೆಂದೇ ವಿಶೇಷ ವಿನ್ಯಾಸದಲ್ಲಿ ಮಾಡಿರುವ ಇಬ್ಬರೇ ಕೂರುವ ಇದನ್ನು ಅರಸರು ಬಹಳವಾಗಿ ಮೆಚ್ಚಿದ್ದರಿಂದ “ಷಾ ಪಸಂದ್” ಟಾಂಗಾಗಳು ಎನಿಸಿಕೊಂಡಿದ್ದವು . ಈಗೀಗ ಬರುತ್ತಿರುವ ಸಾರೋಟುಗಳು ಮತ್ತು ಐಷಾರಾಮಿ ಹಾಗೂ ವೈಭವೋಪೇತವಾಗಿರುವವು. 

ಆಗಲೇ ಹೇಳಿದೆನಲ್ಲ ದೂರ ಹೋಗುವುದಿದ್ದರೆ ಜಟಕಾದಲ್ಲಿ ಅಂತ .  ಆಗೆಲ್ಲ ನಿಲ್ದಾಣಕ್ಕೆ ಬರುವುದು . ಆಗಲೂ ಈಗಿನ ಆಟೊ ಚಾಲಕರ ಹಾಗೆ ಸಾಹೇಬರುಗಳು (ಸಾಮಾನ್ಯ ಜಟಕಾ ಓಡಿಸುತ್ತಿದ್ದವರು ಮುಸಲ್ಮಾನರೇ ಆಗಿದ್ದರಿಂದ ಆ ಪದ ವಾಡಿಕೆಗೆ ಬಂದಿರಬಹುದು) ಆ ಕಡೆ ಬರಲ್ಲ ಅನ್ನುವುದು, ಜನ ಜಾಸ್ತಿಯಾಯಿತು ಅನ್ನುವುದು, ಆಣೆ ಕಾಸುಗಳಿಗೆ ಚೌಕಾಶಿ ಮಾಡುವುದು ಸಾಮಾನ್ಯವಾಗಿತ್ತು.  ಇನ್ನೂ ಆ ಚೌಕಾಶಿಯೋ… ಜುಗ್ಗಾಡಿ ಜುಗ್ಗಾಡಿ ಇಬ್ಬರೂ ಅವರವರ ಬೆಲೆಗಳಲ್ಲಿ ನಿಂತು ಕಡೆಗೆ 1 ಮದ್ಯದ ಬೆಲೆಗೆ ಒಪ್ಪಿತವಾಗುತ್ತಿತ್ತು . ಚೌಕಾಶಿ ಮಾಡದೇ ಏನನ್ನೂ ವ್ಯವಹರಿಸುತ್ತಿರಲಿಲ್ಲ ಅಂದಿನ ಹಿರಿಯರು . ನಮಗೋ ಮಕ್ಕಳಿಗೆ ಬೇಗ ಕುದುರೆಗಾಡಿ ಏರುವ ಆಸೆ .ಕೆಲವೊಮ್ಮೆ ಏರಿದ ಕುದುರೆಗಾಡಿಯವನೊಂದಿಗಿನ  ಚೌಕಾಶಿ ಗಿಟ್ಟದೆ ಮತ್ತೆ ಇಳಿದು ಬೇರೆ ಗಾಡಿಯಲ್ಲಿ ಕುಳಿತ ಪ್ರಸಂಗಗಳೂ ಇದೆ . ನಮಗೆ ಮಕ್ಕಳಿಗೆ ನೋಡಲು ಬಣ್ಣಬಣ್ಣವಾಗಿ ಅಂದವಾಗಿ ಕಾಣುತ್ತಿದ್ದ ಜಟಕಾದಲ್ಲಿ ಹೋಗುವ ಆಸೆ .ಹಿರಿಯರು ಕಟ್ಟುಮಸ್ತಾಗಿ ಆರೋಗ್ಯವಾಗಿ ಕುದುರೆ ಇರುವ ಗಾಡಿ ಆರಿಸುತ್ತಿದ್ದರು ಈ ರೀತಿ ತುಂಬಾ ಓಡಿಯಾಡಿದ ನೆನಪುಗಳು. ಒಂದೆರಡು ಘಟನೆ ನೆನಪಿದೆ ಎಷ್ಟರಮಟ್ಟಿಗೆ ಮೆದುಳಲ್ಲಿ ಹೂತಿದೆ ಎಂದರೆ ಇತ್ತೀಚೆಗೆ ಕುದುರೆಗಾಡಿಯಲ್ಲಿ ಕೂತಾಗಲೂ ಎಡಕ್ಕೆ ವಾಲಿದರೇ ಬಿದ್ದೇಬಿಟ್ಟೆನೇನೋ  ಅಂತ ಹೃದಯ ಬಾಯಿಗೆ ಬಂದಿತ್ತು.

ಓಂದು ಬಾರಿ ಜೂ ಗಾರ್ಡನ್ನಿಗೆ ಹೊರಟಿದ್ದೆವು.  ನನಗೆ ಆಗ 4 / 5 ವರ್ಷ ಇರಬಹುದು. ಮನೆಗೆ ಬಂದ ನೆಂಟರೆಲ್ಲ ಸೇರಿ ಒಂದೇ ಜಟಕಾದಲ್ಲಿ ಹೇರಿಕೊಂಡೆವು.  ಚಿಕ್ಕವಳೆಂದು ಚಾಲಕನ ಪಕ್ಕದ ಸೀಟು ಖಾಯಂ ಆಗ ನನಗೆ . ಮುಂಭಾರ ಹಿಂಭಾರ ಎಲ್ಲ ಸರಿದೂಗಿಸಿ ಹೊರಟ . ಖುಷಿಯಾಗಿಯೇ ಇತ್ತು . ಅರಮನೆಯ ಹಿಂದಿನ ದ್ವಾರದ ರಸ್ತೆಯಲ್ಲಿ ಬಂದು ಬಲಗಡೆಗೆ ತಿರುಗಬೇಕಿತ್ತು . ಎಡಗಡೆಗೆ ಸ್ವಲ್ಪ ತಗ್ಗಿನಲ್ಲಿ ಅರಮನೆಯ ಮಾರಮ್ಮನ ದೇವಸ್ಥಾನದ ಅವರಣ.  ಬಲಗಡೆಗೆ ದೊಡ್ಡಕೆರೆ ಏರಿ ಇನ್ನೂ ಕೆರೆ ಮುಚ್ಚಿರಲಿಲ್ಲ. ನೀರಿತ್ತು. ಧಡ್ ಧಡ್ ಗಾಡಿಯ ಸದ್ದು, ಒಳಗಡೆ ದೊಡ್ಡವರ ಮಾತು, ಮಕ್ಕಳ ಕೇಕೆ, ಸಾಹೇಬನ ಬಾಜೂ ಬಾಜೂ ಇವುಗಳ ಮಧ್ಯೆ ಎಡ ಚಕ್ರದ ಕಡಾಣಿ ಕಳಚಿ ಬಿದ್ದ ಸದ್ದು ಯಾರಿಗೂ ಕೇಳಿಲ್ಲ . ಮುಂದೆ ಅಷ್ಟು ದೂರ ಓಡಿ ಗಾಡಿಯ ಚಕ್ರ ಕಳಚಿ ಮಾರಮ್ಮನ ಗುಡಿ ಹಳ್ಳಕ್ಕೆ ಗಾಡಿ ಒಮ್ಮೊಗವಾಗಿ ರಸ್ತೆಯಲ್ಲಿ ಉರುಳಿತ್ತು . ಮುಂದೆ ಕುಳಿತ ನಾನು ರಸ್ತೆಗೆ….. ಒಳಗಿದ್ದವರು ಒಬ್ಬರ ಮೇಲೊಬ್ಬರು. ಎಲ್ಲರದೂ ಕಿರುಚಾಟ .ಸಣ್ಣಪುಟ್ಟ ತರಚು ಗಾಯ ನೆನಪಿನಲ್ಲಿ ಅವತ್ತಿನವೇ ಕ್ಷಣಗಳು ಇನ್ನೂ ಗಿರಕಿ ಹೊಡೆಯುತ್ತೆ .ಅಕಸ್ಮಾತ್ ಬಲ ಬದಿಯ ಕೆರೆಗೆ ಬಿದ್ದಿದ್ದರೆ ಏನು ಗತಿ?ಇದನ್ನು ಬರೆಯಲು ನಿಮ್ಮ ಮುಂದೆ ನಾನೇ ಇರುತ್ತಿರಲಿಲ್ಲವೇನೋ ?

ಮುಂದೆ ಎಷ್ಟೋ ದಿನ ಜಟಕಾ ಹತ್ತಲು ಭಯಪಡುತ್ತಿದ್ದೆನಂತೆ . ಅಣ್ಣ 1 ಬಾರಿ ಪಕ್ಕದಲ್ಲಿ ಕೂರಿಸಿಕೊಂಡು 1 ಸುತ್ತು ಹೊಡೆಸಿಕೊಂಡು ಬಂದಮೇಲೆ ಸರಿ ಹೋದೆನಂತೆ.  

ಇನ್ನೊಂದು ಸ್ವಲ್ಪ ನಗೆಯ ಪ್ರಸಂಗ .ಆಗೆಲ್ಲ ಶ್ರೀರಂಗಪಟ್ಟಣ ಪ್ರವಾಸ ಅಂದರೆ ಬಸ್ ನಲ್ಲಿ ಅಲ್ಲಿಗೆ ಹೋಗಿ 1 ಜಟಕಾ ಮಾತಾಡಿಕೊಂಡು ದೇವಸ್ಥಾನ ನಂತರ   ದರಿಯಾದವಲತ್ ಗುಂಬಜ್ ಮತ್ತು ಸಂಗಮಗಳಿಗೆ ಭೇಟಿ (ನಿಮಿಷಾಂಬ ಆಗಿನ್ನೂ ಪ್ರಸಿದ್ಧವಾಗಿರಲಿಲ್ಲ) . ಹಾಗೆ ಗಾಡಿಯಲ್ಲಿ ಯಥಾಪ್ರಕಾರ ಡಬಲ್ ಜನ ತುಂಬಿದ್ದೆವು . ದೇವಸ್ಥಾನ ಮುಗಿಸಿ ದರಿಯಾದೌಲತ್ ಕಡೆಗೆ ಹೊರಟರೆ ದಾರಿಯಲ್ಲಿ 1 ಸಿನಿಮಾ ಟೆಂಟ್ . ಕುದುರೆ ಅಲ್ಲಿಂದ ಮುಂದಕ್ಕೆ ಹೋಗ್ತಾನೇ ಇಲ್ಲ .ಪೂಸಿ ಹೊಡೆದರೂ ಇಲ್ಲ ಚಾಟಿ ಏಟಿಗೂ ಬಗ್ತಿಲ್ಲ. ಸಾಹೇಬ ಹೇಳಿದ್ದು ಬರೀ ಅಲ್ಲಿ ತನಕ ಮಾತ್ರ ಸವಾರಿ ಬರ್ತಿದ್ದಂತೆ. ಮುಂದೆ ಹೋಗ್ಲಿಲ್ಲ ಅದಕ್ಕೆ ಅಂತ . ಕಡೆಗೆ ಕುದುರೆ ಹಟಾನೇ ಗೆದ್ದು ನಮ್ಮನ್ನೆಲ್ಲ ಬೇರೆ ಗಾಡಿಗೆ ಹತ್ತಿಸಲಾಯಿತು.  ಮನುಷ್ಯರಷ್ಟೇ ಅಲ್ಲ ಕುದುರೆಗಳಿಗೂ ಎಂತಹ “ಅಭ್ಯಾಸಬಲ” ನೋಡಿ !

ಆಗೆಲ್ಲ ಹೊಸ ಮದುವಣಿಗರು ಮೈಸೂರಿಗೆ ದಸರಾಗೆ ಬರುವ ವಾಡಿಕೆ . ಹೊಸಜೋಡಿಗಳು ಯಾವಾಗಲೂ ಷಾಪಸಂದ್ ಟಾಂಗಾದಲ್ಲಿ ಇಬ್ಬರೇ ಕೂತು ದೀಪಾಲಂಕಾರ ನೋಡಲು ಹೋಗುವುದು ಒಂದು ರಿವಾಜು. ಹೆಮ್ಮೆಯಿಂದ ನೆಂಟರಿಷ್ಟರಿಗೆಲ್ಲಾ ಕೊಚ್ಚಿಕೊಳ್ಳುವ ವಿಷಯವಾಗಿತ್ತು ಆಗ ಅದು.  ಹಾಗೆ ಆ ಬಾರಿ ನಮ್ಮ ಮನೆಗೂ ನವ ವಿವಾಹಿತ ಜೋಡಿ ಬಂದಿತಂತೆ .ಹೊರಡುವ ಮೊದಲು ಸುಮ್ಮನೆ ಸೌಜನ್ಯಕ್ಕೆಂದು ನನ್ನ ಕರೆದರೆ ಹೋಗಿಯೇ ತೀರುವೆನೆಂದು ನನ್ನ ಹಠವಂತೆ . ಅಪ್ಪ ಅಮ್ಮ ಎಷ್ಟು ಹೇಳಿದರೂ ಕೇಳದೆ ಅತ್ತು ಕರೆದು ಅವರ ಜತೆ ಹೊರಟೇಬಿಟ್ಟೆನಂತೆ. ಪಾಪ ನನ್ನನ್ನು ಎಷ್ಟು ಬಯ್ದುಕೊಂಡಿದ್ದರೋ ಏನೋ ..ಆದರೆ ಇದೆಲ್ಲಾ ಒಂದು ಚೂರೂ ನೆನಪಿಲ್ಲ ನನಗೆ. ಅಮ್ಮ ಹೇಳುತ್ತಿದ್ದುದು ಅಷ್ಟೆ 

ಬರಬರುತ್ತಾ ಪೆಟ್ರೋಲ್ ವಾಹನಗಳು ಹೆಚ್ಚಾಗಿ ದ್ವಿಚಕ್ರ ವಾಹನ, ಚತುಷ್ಚಕ್ರ ವಾಹನಗಳ ಭರಾಟೆ ಹೆಚ್ಚಿದ ಮೇಲೆ ಸಮಯದ ಹಿಂದಿನ ಓಟದ ಸ್ಪರ್ಧೆಯಲ್ಲಿ ನಿಧಾನಗತಿಯ ಈ ಸಂಚಾರ ಸಾಧನ ಮೂಲೆಗುಂಪಾಯಿತು.  ಒಂದಷ್ಟು ದಿನ ಸರಕು ಸಾಗಾಣಿಕೆ ವಾಹನವಾಗಿ ಮುಂದುವರಿಯಿತು. ಈಗ ಸವಾರಿಯ ಶೋಕಿಯ ಅನುಭವಕ್ಕಷ್ಟೇ ಬಳಕೆ. ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯ ಗ್ರಾಹಕರು . ಇದನ್ನೇ ಉದರಂಭರಣಕ್ಕಾಗಿ ನೆಚ್ಚಿದ್ದ ಕುಟುಂಬಗಳಲ್ಲಿ ಎಷ್ಟೋ ಕುಟುಂಬಗಳು ಬೇರೆ ಉದ್ಯೋಗವನ್ನರಸಿ ಹೋಗಿವೆ .

ಜಟಕಾದ ಬಗ್ಗೆ ಹೇಳಿದ ಮೇಲೆ ಕುದುರೆಯ ಬಗ್ಗೆ ಒಂದೆರಡು ಮಾತು ಹೇಳದಿದ್ದರೆ ಪೂರ್ಣವಾಗುವುದಿಲ್ಲ .ಮುಂಚೆ ಈ ಕುದುರೆಗಳನ್ನು ದೂರದ       ಗಳಿಂದ ತರಿಸಿಕೊಳ್ಳುತ್ತಿದ್ದರಂತೆ . ಕುದುರೆಯ ಮಾಲೀಕರು ಗಳಂತೂ ಅದನ್ನು ತಮ್ಮ ಮಕ್ಕಳಷ್ಟೇ ಪ್ರೀತಿಯಿಂದ ಸಾಕಿ ಹುರುಳಿ ಹಸಿಹುಲ್ಲು ಒಣಹುಲ್ಲುಗಳನ್ನು ಕೊಡುತ್ತಿದ್ದರು. ಅವುಗಳಿಗೆ ಅಲಂಕಾರ ಅಂತೂ ಪೈಪೋಟಿಯಲ್ಲಿ ಮಾಡುತ್ತಿದ್ದರು.  ಬಣ್ಣಬಣ್ಣದ ಮುತ್ತಿನ ಗೆಂಡೆಗಳು ಕುಚ್ಚುಗಳು ನೋಡಲು 2 ಕಣ್ಣು ಸಾಲ್ತಿರಲಿಲ್ಲ . ಹಾಗೆಯೇ ಬಡಕಲಾದ ನಿಶ್ಶಕ್ತವಾದ ಕಾಲು ಮುರಿದುಕೊಂಡ ವಯಸ್ಸಾದ ಕುದುರೆಗಳನ್ನು ಹಾಗೆಯೇ ಬೀದಿಗೆ ಬಿಟ್ಟು ಬಿಡುತ್ತಿದ್ದರಿಂದ ಬೀದಿ ಹಸುಗಳ ತರಹ ಬೀದಿ ಕುದುರೆಗಳ ಕಾಟವೂ ಇರುತ್ತಿತ್ತು ಆಗೆಲ್ಲ . ಮೇರಾ ರಾಜ ಬೇಟಾ,  ಮೇರಾ ಸೋನಾ ಬೇಟಾ ಎಂದೆಲ್ಲಾ ಮುದ್ದಿಸುವಂತೆಯೇ ಚಾಟಿಯೇಟು ಹೊಡೆಯುವಾಗ ಹರಾಮ್ ಜಾದೇ ಬೈಗುಳವೂ ಇರುತ್ತಿತ್ತು. ಒಟ್ಟಿನಲ್ಲಿ ಕುದುರೆ ಗಾಡಿ ಓಡಿಸುವವರ ಮನೆಯ ಸದಸ್ಯನಂತೆಯೇ ಆಗಿಬಿಟ್ಟಿರುತ್ತಿತ್ತು ಕುದುರೆಗಳೂ. 

ಪಾರಂಪರಿಕ ವಸ್ತುಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಮೈಸೂರು ಅಂದರೆ ಅರಮನೆ, ಮಲ್ಲಿಗೆ, ವೀಳೆಯದೆಲೆ, ಬದನೆಕಾಯಿಗಳ ಹಾಗೆ ಟಾಂಗಾಗಳು ನೆನಪಿನ ಬೆಸುಗೆಗೆ ಜೋಡಿಸಿಕೊಳ್ಳುತ್ತದೆ. ಪ್ರವಾಸಿಗರಿಗೆ ಇದರ ಪರಿಚಯಕ್ಕೆಂದು NERM  ಯೋಜನೆಯಡಿ ಹೊಸ ಕುದುರೆಗಾಡಿಗಳನ್ನು ಕೊಳ್ಳಲು ಸಾಲ ರೂಪದಲ್ಲಿ ಧನಸಹಾಯ ಮಾಡಿ ಈ ಸಾಂಸ್ಕೃತಿಕ ಸಂಚಾರಿ ರಾಯಭಾರಿಗೆ ಕಾಯಕಲ್ಪ ಕಲ್ಪಿಸಲಾಗುತ್ತಿದೆ ಅದೇನೇ ಆದರೂ ಜನತೆಯೂ ಸಹ ಇದನ್ನು ಪ್ರೋತ್ಸಾಹಿಸುವ ಮೂಲಕ ಮೈಸೂರಿನ ಹೆಮ್ಮೆಯ ಪ್ರಸಿದ್ಧಿಯ ಟಾಂಗಾಗಳು ಉಳಿಯುವಂತೆ ಮಾಡಬೇಕು . ಇವು  ಈಗ ವಿರಳವಾಗಿದ್ದರೂ ಪಳೆಯುಳಿಕೆಯಾಗಿಲ್ಲ ಎಂಬುದಷ್ಟೇ ನೆಮ್ಮದಿ ತರುವ ವಿಷಯ .

ಇನ್ನೂ ಜಟಕಾ ಅಂದರೆ ಕನ್ನಡ ಸಾಹಿತ್ಯ ಪ್ರೇಮಿಗಳಿಗೆಲ್ಲ ಡಿವಿಜಿಯವರ ಈ ಪ್ರಸಿದ್ಧ ಮಂಕುತಿಮ್ಮನ ಕಗ್ಗ ನೆನಪಿಗೆ ಬಾರದೆ ಇರದು . 

ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ

ಕುದುರೆ ನೀನಂ ಅವನು ಪೇಳ್ದಂತೆ ಪಯಣಿಗರು

ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು 

ಪದಕುಸಿಯೆ ನೆಲವಿಹುದು ಮಂಕುತಿಮ್ಮ 

                            _ ಡಿ ವಿ ಜಿ 

ಇಲ್ಲಿ ಕುದುರೆ ಗಾಡಿಗೂ ಮನುಷ್ಯನ ಜೀವನಕ್ಕೂ ಸಾಮ್ಯತೆಯನ್ನು ಹೇಳುತ್ತಾ ಹಿರಿದಾದ ಬಾಳ ತತ್ವವನ್ನು ಅನಾವರಣಗೊಳಿಸಿದ್ದಾರೆ.  ನಿಜ! ನಮ್ಮ ಬದುಕು ಒಂದು ಜಟಕಾ ಗಾಡಿಯೇ. ನಾವೆಲ್ಲಾ ಹೇಳಿದಂತೆ ಮಾತ್ರ ನಡೆಯಬೇಕಾದ ಕುದುರೆಗಳು. ಓಡಿಸುವ ಸಾಹೇಬ ವಿಧಿ! ಆ ದೇವರು.  ಅವನ ಮರ್ಜಿ ಇದ್ದೆಡೆಗೆ ನಮ್ಮ ಪಯಣ. ನಲಿವು ಸಂತೋಷದ ಮದುವೆ ಮನೆಗಾದರೂ ಆಗಿರಬಹುದು ; ನೋವು ಸಂಕಟದ ಸ್ಮಶಾನಕ್ಕಾದರೂ ಕರೆದೊಯ್ಯಬಹುದು . ಕರ್ತವ್ಯಗಳ ಛಡಿ ಏಟಿನ ಜವಾಬ್ದಾರಿಗಳ ಭಯ ಕೆಲವೊಮ್ಮೆ ಮುನ್ನಡೆಸಿದರೆ,  ಹುರುಳಿ ಹುಲ್ಲು ವಿರಾಮದ ಆಮಿಷಗಳು ವೇಗ ಹೆಚ್ಚಿಸಬಹುದು. ಆದರೆ ಪಯಣವಂತೂ ನಿರಂತರ . ಇನ್ನು ನಡೆಯಲಾರೆ ನನ್ನಿಂದಾಗದು ಎಂದು ಕುಸಿಯಲೂ ಬಹುದು . ಆಶ್ರಯ ಕೊಡಲು ಭೂಮಿತಾಯಿ ಇದ್ದಾಳೆ ತಾತ್ಕಾಲಿಕ ವಿರಾಮದ ಸಾವರಿಸಿ ಏಳುವವರೆಗೂ ಆಸರೆಯಾಗಿ ಅಥವಾ ಮುಂದೆ ಏಳಲೇ ಆಗದು ಎಂದಾಗ ಶಾಶ್ವತವಾಗಿ ಮಲಗಲು ತಾವು ಕೊಡುತ್ತಾ ……….


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

One thought on “

  1. ಪ್ರಕಟಣೆಗಾಗಿ ಸಂಪಾದಕರಿಗೆ ಧನ್ಯವಾದಗಳು

    ಸುಜಾತಾ ರವೀಶ್

Leave a Reply

Back To Top