ಅನುವಾದಿತ ಅಬಾಬಿಗಳು

ಅನುವಾದ ಸಂಗಾತಿ

ಅನುವಾದಿತ ಅಬಾಬಿಗಳು

ಆಕರ : ಕಾಲಂ ಸಾಕ್ಷಿಗಾ
(ತೆಲುಗು ಅಬಾಬಿಗಳ ಸಂಕಲನ)

ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್
ಕನ್ನಡಾನುವಾದ : ಧನಪಾಲ ನಾಗರಾಜಪ್ಪ


ತೊಗಲು ಗೊಂಬೆಯಾಟ ಜೀವನ
ತೊಗಲು ಸುಲಿಯುತಿರುವ ಅಜ್ಞಾನಾಂಧಕಾರ
ಬಲಿಯಾಗುತಿವೆ ಬಡ ಜೀವಗಳು
ಹಕೀಮಾ
ಮೃಗಗಳ ರಾಜ್ಯದಲ್ಲಿ ಗುಲಾಮಗಿರಿಯ ಬದುಕು.

೬೭)
ಸುಡುವ ಹೊಟ್ಟೆಯೊಂದಿಗಿನ ಬದುಕು
ಜೀವನ ಜ್ವಾಲೆಯಲ್ಲಿ ಕರುಕು
ಮಡದಿ ಮಕ್ಕಳು ಉಪವಾಸ
ಹಕೀಮಾ
ಎಷ್ಟು ಘೋರ ಇವರ ಜೀವನ.

೬೮)
ಕಷ್ಟಗಳು ನಷ್ಟಗಳ ಕುಳಿಗಳು
ಕಂಬನಿಯಿಂದ ತುಂಬುವ ಹೊಟ್ಟೆಗಳು
ಬಡವರ ಬದುಕಿನ ಬವಣೆಗಳು
ಹಕೀಮಾ
ಮಾನಸಿಕ ಹೋರಾಟ ನಿರಂತರ.

೬೯)
ದಿನವೂ ಹೊಸ ಹೊಸ ತಿರುವು
ಮನುಷ್ಯನ ಮನಸ್ಸು ಕರುಗುತ್ತಿದೆ
ನೇರವಾಗಿ ನೀನು ನಿಲ್ಲಬೇಕು
ಹಕೀಮಾ
ಎದುರಿಗಿದ್ದು ಹೋರಾಡಬೇಕು.

೭೦)
ಧನವೇ ಮನುಷ್ಯನಿಗೆ ಮೂಲ
ದೌರ್ಜನ್ಯವೇ ಅದಕೆ ಕಾರಣ
ಮಾನವೀಯ ದೃಕ್ಪಥ ಮಾಯವಾಗುತ್ತಿದೆ
ಹಕೀಮಾ
ಮಾನವರ ವಿನಾಶ ಮೊದಲಾಯಿತೇನು?

೭೧)
ದೇಶವೆಂದರೆ ಮನುಷ್ಯರು
ಇಲ್ಲಿ ಇರುವುದಿಲ್ಲ ಅಸಮಾನತೆಗಳು
ಪರಸ್ಪರ ಕೂಡಿ ಬಾಳುವರು
ಹಕೀಮಾ
ಸಂತೋಷದ ನೆಲೆ ನಮ್ಮ ದೇಶ.

೭೨)
ಕಾಲದ ಓಟ ಮಂಜಿನ ವೇಗ
ಮನಸ್ಸಿನಲ್ಲಿ ಮರ್ಮಗಳ ರೋಗ
ಮನುಷ್ಯ ತನ್ನಂತೆಯೇ ಇರುವನೆ?
ಹಕೀಮಾ
ಮರೆತು ಹೋಗಿ ಮಾಯವಾದನೆ?

೭೩)
ನೀರಗುಳ್ಳೆ ಜೀವನ
ಗಾಳಿ ಕೊಡೆಯ ಪಯಣ
ಮನೋ ವೇದನೆಯಿಂದ ಹೆಣವಾಗಿ
ಹಕೀಮಾ
ಬದುಕೇ ಭಾರವಾಗಿ ಹೊರುತಿಹರು.

೭೪)
ಜೀವನ ಯಾನದಲ್ಲಿ ತೂತುಗಳು
ಮನುಷ್ಯ ಪೂರ್ತಿ ತೇಪೆಗಳು
ಬದುಕೆಲ್ಲಾ ಬರೀ ನಿರೀಕ್ಷೆ
ಹಕೀಮಾ
ಕಡೆಗೆ ಯಾರೂ ಜೊತೆ ಬರುವುದಿಲ್ಲ.

೭೫)
ಹೊಸ ವರ್ಷದ ಸಂಭ್ರಮಾಚರಣೆಗಳು
ದುಂದು ವೆಚ್ಚವಾಗುವವು ಕೋಟಿಗಳು
ಅಸಾಮಾಜಿಕ ಕಾರ್ಯಕಲಾಪಗಳು
ಹಕೀಮಾ
ಎಚ್ಚರಿಸುವವರಿಗೆ ಬರ ಬಂದಿದೆ.

೭೬)
ಕಳೆದ ಕಾಲವು ಒಳ್ಳೆಯದು
ಕಳೆಯುತ್ತಿರುವ ಕಾಲ ಇನ್ನೂ ಒಳ್ಳೆಯದು
ಬರಲಿರುವ ಕಾಲವೆಲ್ಲಾ ನಮ್ಮ ಒಳ್ಳೆಯದಕ್ಕೆ
ಹಕೀಮಾ
ತಾರೀಖುಗಳು ಬದುಕನ್ನು ಬದಲಿಸಬಲ್ಲವೆ?

೭೭)
ಅಮ್ಮನ ಪ್ರೀತಿ ಅಪರೂಪವಾದದ್ದು
ಲೋಕದಲ್ಲಿದು ಅನಂತವಾದದ್ದು
ಮನುಷ್ಯನಿಗಿದು ಅದ್ಭುತ ವರ
ಹಕೀಮಾ
ಅಮ್ಮನು ಸುರಿಸುವಳು ಪ್ರೇಮಸಾಗರ.

೭೮)
ಪ್ರೀತಿಯಲ್ಲಿ ಶ್ರೇಷ್ಠವಾದುದ್ದು ತಾಯಿ ಪ್ರೀತಿ
ಬೆಲೆಕಟ್ಟಲಾಗದ ಅಮೂಲ್ಯವಾದ ಪ್ರೀತಿ
ಮಕ್ಕಳನ್ನು ಕಣ್ಣಿಗೆ ರೆಪ್ಪೆಯಂತೆ ಕಾಯುವಳು
ಹಕೀಮಾ
ಅಮ್ಮನ ಪಾದಗಳೇ ಸ್ವರ್ಗದ ದಾರಿಗಳು.

೭೯)
ಅಮ್ಮನಿದ್ದರೆ ಕತ್ತಲು ಕವಿಯುವುದಿಲ್ಲ
ಕಷ್ಟಗಳು ಹೊಸ್ತಿಲು ದಾಟುವುದಿಲ್ಲ
ಅವಳ ಪ್ರೀತಿ ವಿಶ್ವ ವಿಜೇತನಾಗಿಸುವುದು
ಹಕೀಮಾ
ಕಾರುಣ್ಯವನ್ನು ಸುರಿಸುವವಳು ಅವ್ವ.

೮೦)
ನೆಲದವ್ವ ಎಷ್ಟು ದೊಡ್ಡವಳು
ಜೀವರಾಶಿಗಳಿಗೆಲ್ಲಾ ಜೀವ ನೀಡುವಳು
ಮನುಷ್ಯನಿಗೆ ತಾಯಿ ಪ್ರೀತಿಯೂ ಹಾಗೆಯೇ
ಹಕೀಮಾ
ಇಹಪರ ಲೋಕಗಳ ಕಾರುಣ್ಯವೇ ಅಮ್ಮ.

೮೧)
ನಮಗಾಗಿ ಉಪವಾಸವಿದ್ದೆ
ನಿದ್ದೆಯನ್ನು ತ್ಯಾಗ ಮಾಡಿದೆ
ಕಷ್ಟ-ಸುಖಗಳ ವಾರಧಿ ಅಮ್ಮ
ಹಕೀಮಾ
ಕಾರುಣ್ಯದ ಪ್ರತಿರೂಪವೇ ಅಮ್ಮ.

೮೨)
ನಾಡ ಜನರ ಗೌರವ
ನಾಡ ಭಾಷೆಯಲ್ಲಿರುವ ಭಾವ
ಕವೀಂದ್ರರ ಬರಹಗಳ ಬೆಲೆ
ಹಕೀಮಾ
ಪುಣ್ಯಭೂಮಿಯ ಸುರಕ್ಷಾ ನೆಲೆ.

೮೩)
ಬರಹದಿಂದ ಸಾರು ಮಾನವತೆ
ಅಕ್ಷರಗಳು ಸಮಾಜದ ಮನಃಸ್ಥಿತಿ
ಕವಿಗಳಿಗೆ ಪ್ರಧಾನ ನೈತಿಕತೆ
ಹಕೀಮಾ
ಪ್ರಜೆಗಳ ಪಕ್ಷವೇ ನಮ್ಮೆಲ್ಲರ ಆಶಯ.

೮೪)
ಅಕ್ಷರಗಳಿಂದ ಜ್ಞಾನ
ಜ್ಞಾನದಿಂದ ಸರ್ವವು
ವಿದ್ಯೆಯಿಂದ ಸಂಸ್ಕಾರ
ಹಕೀಮಾ
ಆಚಾರದಿಂದ ಜೀವನ ಬೆಳಗುವುದು.

೮೫)
ಅಕ್ಷರಗಳ ಮೌಲ್ಯ ತಿಳಿ
ಜ್ಞಾನದಿಂದ ಬದುಕುವುದು ಕಲಿ
ಸಮಾಜದ ಹಿತಕ್ಕಾಗಿ
ಹಕೀಮಾ
ನಿರಂತರವಾಗಿ ಶ್ರಮಿಸು.
————————————–

One thought on “ಅನುವಾದಿತ ಅಬಾಬಿಗಳು

Leave a Reply

Back To Top