ಕನ್ನಡ ಸಾಹಿತ್ಯದಲ್ಲಿ ಅಂತರ್ಜಾಲ ಪತ್ರಿಕೆಗಳ ಪಾತ್ರ
“ಸಾಹಿತ್ಯದ ಗಂಧವಿಲ್ಲದ ಜೀವನ ನರಕವಿದ್ದಂತೆ” ಎಂಬ ಆಂಗ್ಲ ಕವಿಯ ನುಡಿಯು ಜೀವನದಲ್ಲಿ ಸಾಹಿತ್ಯದ ಮಹತ್ತರ ಪಾತ್ರವನ್ನು ಸಾರಿ ಹೇಳುತ್ತದೆ. ಯಾವುದೇ ಭಾಷೆಯ ಸಾಹಿತ್ಯದ ಜನಪ್ರಿಯತೆ ಸುಶಿಕ್ಷಿತ ಮತ್ತು ಆಸಕ್ತ ಜನರಿಂದ ಪಡೆದ ಮನ್ನಣೆಯನ್ನು ಅವಲಂಬಿಸಿರುತ್ತದೆ. ಕಾವ್ಯದ ನಿಜವಾದ ಜನಪ್ರಿಯತೆ ತಿಳಿದು ಬರುವುದು ಅದು ಸಾಮಾನ್ಯ ಜನರ ಬಾಯಲ್ಲಿ ನಲಿದಾಗ. ಕನ್ನಡ ಸಾಹಿತ್ಯದ ಕೆಲವು ಪ್ರಕಾರಗಳು ಇಂತಹ ಮಾನ್ಯತೆಯನ್ನು ಪಡೆದಿವೆ. ಬದುಕೇ ಬರಹದ ಬುತ್ತಿ ಎನ್ನುವ ಮಾತಿನಂತೆ ಬದುಕಿನ ಅನುಭವಗಳಿಗೆ ಅಕ್ಷರ ರೂಪ ಕೊಟ್ಟು ಅದಕ್ಕೊಪ್ಪುವ ಚಿತ್ರಗಳನ್ನು ಬಳಸಿ ವಿವಿಧ ಜರ್ನಲ್ಗಳಿಗೆ ಉಪಯೋಗಿಸಿದ ಅತ್ಯುತ್ತಮ ಲೇಖನ ಮಾಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಅಂತರ್ಜಾಲ ಪತ್ರಿಕೆಗಳ ಮೂಲಕ ಲಭ್ಯವಾಗುತ್ತಿದೆ.
ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚು ತಿಳಿಯಲು ಅಂತರ್ಜಾಲ ಪತ್ರಿಕೆಗಳು ಸಹಕಾರಿಯಾಗಿದೆ. ಇಂದಿನ ಸಮಕಾಲೀನ ಕವಿಗಳು ,ಲೇಖಕರು, ವಿಮರ್ಶಕರು ತಮ್ಮ ಸಾಹಿತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬ್ಲಾಗರ್ ಗಳ ಮೂಲಕ ಕನ್ನಡ ಪ್ರತಿ ಲಿಪಿ ಮೂಲಕ ಓದುಗರಿಗೆ ನೀಡುವುದಲ್ಲದೇ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಬಹುದೊಡ್ಡ ಲಾಭವೆಂದರೆ ಇಲ್ಲಿ ಯಾರೂ ಕೂಡ ತಮ್ಮ ಆಸಕ್ತಿ ಅಭಿರುಚಿಗಳನ್ನು ಅಕ್ಷರದಲ್ಲಿ ಹೆಣೆದು ಇತರರೊಂದಿಗೆ ಹಂಚಿಕೊಳ್ಳಬಹುದು. ಅಂತರ್ಜಾಲ ಸಾಹಿತಿಗಳಾಗಿ ಬ್ಲಾಗರ್ ಗಳಾಗಿ ಅನೇಕ ಸಾಹಿತ್ಯ ಪ್ರೇಮಿಗಳು ಓದುಗರ ಮನದಲ್ಲಿ ಮನೆ ಮಾಡಿ ಕನ್ನಡ ಸಾಹಿತ್ಯದ ಕಂಪನ್ನು ಪ್ರಪಂಚದಾದ್ಯಂತ ಹರಡುತ್ತಿದ್ದಾರೆ. ಅಂತರ್ಜಾಲ ಪತ್ರಿಕೆಗಳಲ್ಲಿ ಏರ್ಪಡಿಸುವ ಕಾವ್ಯ ಬರಹದ ಸ್ಪರ್ಧೆಗಳು , ಚಿತ್ರ ಕವನ, ಕಥೆ, ಪ್ರಬಂಧ ಸ್ಪರ್ಧೆಗಳು ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಆಸಕ್ತರಾಗಲು ಕಾರಣವಾಗಿದೆ. ವಿವಿಧ ವಿಷಯಗಳ ಕುರಿತು ಅಂಕಣ ಬರಹಗಳು , ಯುವ ಬರಹಗಾರರು ಬರೆದ ಅಂಕಗಳನ್ನು ನುರಿತ ಅನುಭವಿ ಲೇಖಕರು ಓರೆ ಹೆಚ್ಚುವುದರಿಂದ ಯುವ ಸಾಹಿತಿಗಳಲ್ಲಿ ವಿಶ್ವಾಸವನ್ನು ಹೆಚ್ಚುಸುತ್ತಾರೆ. ಭರವಸೆಯ ಅಂಕಣಗಾರರನ್ನು ಹುಟ್ಟು ಹಾಕುವಲ್ಲಿಯು ಅಂತರ್ಜಾಲ ಪತ್ರಿಕೆಯು ಸಹಕಾರಿಯಾಗಿದೆ.
ಕನ್ನಡ ಸಾಹಿತ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಹಾಗೂ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯವನ್ನು ಅಂತರಜಾಲ ಪತ್ರಿಕೆಗಳು ಮಾಡುತ್ತಿವೆ. ಅಲ್ಲದೇ ಅನೇಕ ಪರಿಚಯವೇ ಇಲ್ಲದ ಸಾಹಿತಿಗಳನ್ನು ಅವರ ಕೃತಿಗಳ ಮೂಲಕ ವಿಶ್ವದಾದ್ಯಂತ ವ್ಯಾಪಿಸಿರುವ ಕನ್ನಡಿಗರಿಗೆ ಗುರುತಿಸುವ ಕಾರ್ಯ ಈ ಅಂತರ್ಜಾಲ ಪತ್ರಿಕೆ ಮಾಡುತ್ತಿದ್ದು, ಕನ್ನಡ ಸಾಹಿತ್ಯವನ್ನು ಆಳವಾಗಿ ಅರಿಯಲು ನೆರವಾಗುತ್ತಿದೆ.
ಅಕ್ಷತಾ ಜಗದೀಶ.