ಅಂಕಣ ಬರಹ

ಪ್ರಭಾವತಿ ಎಸ್.ದೇಸಾಯಿ

ಸಹೃದಯ ಓದುಗರೆಲ್ಲರಿಗೂ ನಮಸ್ಕಾರ…

ಕಳೆದ ವಾರ ಹೇಳಿದಂತೆ ಇಂದು ಗಜಲ್ ಕಾರರೊಬ್ಬರ ಪರಿಚಯದೊಂದಿಗೆ ನಿಮ್ಮ ಮುಂದೆ ಹಾಜರಾಗಿದ್ದೇನೆ.

“ನಾನು ದೇವರನ್ನು ಪ್ರೀತಿಸುವಾಕೆ,

ನನಗಿನಿತೂ ಸಮಯವಿಲ್ಲ

ಸೈತಾನನ ದ್ವೇಷಿಸಲು

                        –ರಾಬಿಯಾ

      ಗಜಲ್ ಎಂದರೆ ನಮ್ಮ ಹೃದಯವನ್ನು ವಿಹ್ವಲಗೊಳಿಸುವ ಅನುಕ್ತ ವ್ಯಥೆಯಲ್ಲಿ ಮೀಯುತ್ತಲೇ ಪ್ರೇಮ ಮತ್ತು ಸೌಂದರ್ಯದ ಬಿಸಿಲು ನೆರಳಿನ ಬೀದಿಯಲ್ಲಿ ವಿಹರಿಸಿದಂತಹ ಅನುಪಮ ಸುಂದರ ಮಧುರಾನುಭವ! ಇಂಥಹ ಗಜಲ್ ನ ಅಸ್ಮಿತೆಯನ್ನು ಅದರ ತಖಲ್ಲುಸನಾಮದಲ್ಲಿ ಕಾಣಬಹುದು. ಏಕೆಂದರೆ ಇದು ಗಜಲ್ ಗೋ ಮತ್ತು ಅವರ ಭಾವನೆಗಳಿಗೆ ಸೇತುವೆಯಾಗಿ ನಿಲ್ಲುವಂತದ್ದು!! ಇದನ್ನು ಪ್ರಥಮ ಬಾರಿ ಪ್ರಯೋಗಿಸಿದವರೆಂದರೆ ೧೪ನೇ ಶತಮಾನದ ಶ್ರೇಷ್ಠ ಪರ್ಷಿಯನ್ ಗಜಲ್ ಕಾರ ಹಾಫೀಜ್ ಎನ್ನಲಾಗಿದೆ. ಇದು ಗಜಲ್ ನ ಮುಕ್ತಾಯವನ್ನು ಸೂಚಿಸುವುದರ ಜೊತೆಗೆ ಚಿಂತನೆಗೆ ನಾಂದಿ ಹಾಡುತ್ತದೆ. ತಖಲ್ಲುಸನಾಮ ಇರದೆ ಹೋದರೆ ಆ ಗಜಲ್ ನ ಕರ್ತೃ ಯಾರೂ ಎಂದು, ಆ ಗಜಲ್ ನ ಮುಕ್ತಾಯ ಯಾವಾಗ ಎಂಬುದು ತಿಳಿಯಲು ತುಂಬಾ ಗೊಂದಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಗೆ ತಖಲ್ಲುಸನಾಮ ಅವಶ್ಯಕ!! ಹಾಗಂತ ಅದು ಅನಾವಶ್ಯಕವಾಗಿ ತುರುಕಿದಂತಾಗಬಾರದು. ಅದು ಸ್ವಾಭಾವಿಕವಾಗಿ ರೂಪಕದ ನೆಲೆಯಲ್ಲೋ, ದೈವಿ ಸ್ವರೂಪದಲ್ಲಿಯೋ ಅಥವಾ ವಿಶೇಷ ಅರ್ಥದಲ್ಲಿಯೋ ಬಳಕೆಯಾಗಬೇಕು. ಅದು ಇಡೀ ಷೇರ್, ಗಜಲ್ ಗೆ ಮೆರುಗು ನೀಡುವಂತಿರಬೇಕು. ತಮ್ಮ ವಿಶೇಷ ತಖಲ್ಲುಸನಾಮದ ಬಳಕೆಯಿಂದ ಗಜಲ್ ಲೋಕದಲ್ಲಿ ಶಾಂತವಾಗಿ ಆಡಂಬರವಿಲ್ಲದೆ ಮಿನುಗುತ್ತಿರುವ ತಾರೆಯೆಂದರೆ ಶ್ರೀಮತಿ ಪ್ರಭಾವತಿ ಎಸ್. ದೇಸಾಯಿಯವರು!! ಇವರ ತಖಲ್ಲುಸನಾಮ “ಪ್ರಭೆ” ಎನ್ನುವುದು ವೈವಿಧ್ಯಮಯ ಅರ್ಥಗಳನ್ನು ನೀಡುವುದರ ಜೊತೆಗೆ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತಿದೆ!!

       ಭಾರತಕ್ಕೆ ಸ್ವಾತಂತ್ರ್ಯ ಸಿಗುವ ತುಸು ಮೊದಲು ಅಂದರೆ ೧೯೪೭ರ ಜುಲೈ ಎರಡರಂದು ಶ್ರೀ ಗಿರಿಮಲ್ಲಪ್ಪ ಮತ್ತು ಶ್ರೀಮತಿ ಪಾರ್ವತಮ್ಮ ಅವರ ಮಗಳಾಗಿ ರಾಯಚೂರಿನಲ್ಲಿ ಜನಿಸಿದ ಇವರು ಅಲ್ಲಿಯೇ ಮಾದ್ಯಮಿಕ ಶಿಕ್ಷಣ ಮುಗಿಸಿ, ಮುಂದೆ ಗುಲಬರ್ಗಾದಲ್ಲಿ ಪ್ರೌಢ ಶಿಕ್ಷಣ ಮತ್ತು ಪಿಯುಸಿ ವರೆಗೆ ಓದಿ ನಂತರ ಹುಬ್ಬಳ್ಳಿಯ ಮಹಿಳಾ ಪಾಲಿಟೆಕ್ನಿಕ್ ದಲ್ಲಿ ಡಿಪ್ಲೊಮಾ ಮುಗಿಸಿ ವಿಜಯಪುರದಲ್ಲಿ ಹೊಲಿಗೆಯ ಮುಖ್ಯ ಭೋಧಕಿಯಾಗಿ ಕಾರ್ಯನಿರ್ವಹಿಸಿ ನಿವೃತ್ತ ಜೀವನವನ್ನು ವಿಜಯಪುರದಲ್ಲಿ ಸಂತೃಪ್ತಿಯಿಂದ ಕಳೆಯುತ್ತಿದ್ದಾರೆ. ಮುಖದ ಮೇಲೆ ಮಂದಹಾಸ, ಮೃದು ಮಾತುಗಳ ಅಮ್ಮ, ಎಲ್ಲರೊಂದಿಗೆ ಬೆರೆಯುವ ಸ್ನೇಹಜೀವಿಯಾದ ಇವರು ಗಜಲ್ ಬರೆಯುವುದರಲ್ಲಿ ಸಿದ್ದಿಯನ್ನು ಸಾಧಿಸಿ ಹೊಸಬರಿಗೆ ಬೆನ್ನು ತಟ್ಟುತ್ತ ಪ್ರೋತ್ಸಾಹಿಸುತಿದ್ದಾರೆ. ನಾವು ಮಾಡುವ ವೃತ್ತಿಗೂ ಪ್ರವೃತ್ತಿಗೂ ಯಾವ ಬಂಧ, ನಂಟು ಇಲ್ಲವೇ ಇಲ್ಲ. ಇನ್ನೂ ಬರವಣಿಗೆಗೂ ನಾವು ಕಲಿತ, ಪಡೆದುಕೊಂಡ ಪದವಿಗಳಿಗೂ ಯಾವ ರೀತಿಯ ಸಂಬಂಧವನ್ನೂ ಹುಡುಕಲಾಗುವುದಿಲ್ಲ. ಈ ಮಾತು ದೇಸಾಯಿ ಮೇಡಂ ಅವರ ಸಾಹಿತ್ಯ ಕೃಷಿಯಲ್ಲಿ ಅಕ್ಷರಶಃ ಸತ್ಯವಾಗಿದೆ. ಕಳೆದ ಎರಡು ದಶಕಗಳಿಂದ ತಮ್ಮನ್ನು ಸಂಪೂರ್ಣವಾಗಿ ವಾಙ್ಮಯ ಲೋಕದಲ್ಲಿ ತೊಡಗಿಸಿಕೊಂಡಿರುವ ಇವರು ಇಲ್ಲಿಯವರೆಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೧೮ ಸದಭಿರುಚಿಯ ಪುಸ್ತಕಗಳನ್ನು ಪ್ರಕಟಿಸಿ, ತಮ್ಮ ಜ್ಞಾನ, ದಟ್ಟವಾದ ಅನುಭವವನ್ನು ಹಂಚುತಿದ್ದಾರೆ. ವ್ಯವಹಾರಿಕ ಜಗತ್ತಿನಲ್ಲಿ ತಮ್ಮ ಪುಸ್ತಕಗಳಿಂದ ಯಾವ ಆದಾಯವನ್ನೂ ನಿರೀಕ್ಷಿಸದೆ ಓದುಗರ ಮನ ತಣಿಸುತ್ತಾ ಬಂದಿದ್ದಾರೆ. ಓದುವ ಆಸಕ್ತಿ ಇರುವವರಿಗೆ ಪುಸ್ತಕಗಳನ್ನು ಒದಗಿಸುತ್ತ ಬರುುತ್ತಿದ್ದಾರೆ. ಇವರು ಇಲ್ಲಿಯವರೆಗೆ ಮೌನ ಇಂಚರ (೨೦೦೭), ಮಿಡಿತ (೨೦೧೪), ನಿನಾದ (೨೦೧೮), ಭಾವಗಂಧಿ (೨೦೨೦) ಮತ್ತು ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ (೨೦೨೧) ಎಂಬ ಐದು ಮೋಹಕ ಗಜಲ್ ಹೂಗುಚ್ಛಗಳನ್ನು ಗಜಲ್ ಲೋಕಕ್ಕೆ ಅರ್ಪಿಸಿದ್ದಾರೆ. ಅದರಲ್ಲೂ “ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ” ಎನ್ನುವುದು ಪ್ರಾಯೋಗಿಕ ನೆಲೆಯ ತರಹೀ ಸಂಕಲನ. ಇದೊಂದು ಕನ್ನಡ ಗಜಲ್ ಮಧುಬನದಲ್ಲಿ ಮಹಿಳೆಯೊಬ್ಬರಿಂದ ರಚನೆಯಾದ ಮೊದಲ ತರಹೀ ಗಜಲ್ ಸಂಕಲನವಾಗಿದೆ!! ಪ್ರತಿ ದಿನ ಗಜಲ್ ಗಳೊಂದಿಗೆ ಉಸಿರಾಡುವ ಇವರು ಇನ್ನೂ ಎಷ್ಟು ಗಜಲ್ ಸಂಕಲನಗಳನ್ನು ಹೊರ ತರುವರು ಎಂಬುದಕ್ಕೆ ಕಾಲವೇ ಉತ್ತರಿಸಬೇಕಾಗಿದೆ, ನಮ್ಮದಂತೂ ಚಾತಕ ಪಕ್ಷಿಯಂತೆ ಕಾಯುಕ ಕಾಯಕವಷ್ಟೇ..!!

       ೭೫ ರ ಈ ಇಳಿವಯಸ್ಸಿನಲ್ಲೂ ಪಾದರಸದಂತೆ ಸದಾ ಲವಲವಿಕೆಯಿಂದ ಇರುವ ಶ್ರೀಮತಿ ದೇಸಾಯಿಯವರಿಗೆ ಹತ್ತು ಹಲವಾರು ಗೌರವ, ಪುರಸ್ಕಾರಗಳು ; ಪ್ರಶಸ್ತಿಗಳು ಲಭಿಸಿವೆ. ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಇವರು ಸ್ವಲ್ಪವೂ ಹಮ್ಮು ಬಿಮ್ಮು ಹೊಂದಿರದೆ ತುಂಬಾ ಸರಳವಾಗಿ ಎಲ್ಲರೊಂದಿಗೆ ಬೆರೆಯುವುದು ಅವರ ಮಾಗಿದ ಜೀವನ, ಅನುಭವಕ್ಕೆ ಇಂಬು ನೀಡುವಂತಿದೆ!! ಇವರ ಬರಹದ ಹೆಜ್ಜೆ ಗುರುತುಗಳನ್ನು ಹಲವು ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳಲ್ಲಿ, ನಾಡಿನ ವಿವಿಧ ಪತ್ರಿಕೆಗಳಲ್ಲಿ, ಆಕಾಶವಾಣಿ ಕೇಂದ್ರಗಳಲ್ಲಿಯೂ ಆಸ್ವಾದಿಸಬಹುದು!!

      ಹಿಂಸೆಯ ಪ್ರತಿ ನಡೆಯೂ ಹೆಣ್ಣಿನ ಆತ್ಮವಿಶ್ವಾಸ, ಆತ್ಮಗೌರವವನ್ನೇ ನಾಶ ಮಾಡುತ್ತದೆ. ಅವಳ ವ್ಯಕ್ತಿತ್ವವನ್ನೆ ಅಲುಗಾಡಿಸುತ್ತದೆ. ಮುಕ್ಕಾಲು ಭಾಗ ಮಹಿಳೆಯರು ತಮ್ಮ ಹಣೆಬರಹವನ್ನು ದೂಷಿಸುತ್ತ ಒತ್ತಡದಲ್ಲಿ ಬದುಕಿದರೆ ಕೆಲವರಷ್ಟೇ ತಮ್ಮ ಹೋರಾಟದ ಮೂಲಕವಾಗಿ ಹೊರದಾರಿಗಳನ್ನು ಕಂಡುಕೊಳ್ಳುತ್ತಾರೆ, ಕಂಡುಕೊಂಡಿದ್ದಾರೆ!! ಮಾನಸಿಕ ಖಿನ್ನತೆ ಆತ್ಮಹತ್ಯೆಯ ದಾರಿಯನ್ನು ತೋರಿಸುತ್ತದೆ ಎನ್ನಲಾಗುತ್ತದೆ. ಇಂಥಹ ಮನಸ್ಥಿತಿಯನ್ನು ರೂಪಿಸಿದ ಸಮಾಜದ ಹಲವು ಆಯಾಮಗಳು ಶ್ರೀಮತಿ ಪ್ರಭಾವತಿ ಎಸ್. ದೇಸಾಯಿಯವರ ಗಜಲ್ ಗಳ ಸ್ಥಾಯಿ ಭಾವವಾಗಿದೆ. ಇವರ ಗಜಲ್ ನ ಪ್ರತಿ ಅಶಅರ್ ಹೆಣ್ಣಿನ ನೋವಿನೊಂದಿಗೆ ಮಾತಿಗಿಳಿಯುತ್ತವೆ, ಸಮಾಧಾನದ ಮುಲಾಮು ಹಚ್ಚುತ್ತವೆ ; ಪ್ರೋತ್ಸಾಹಿಸಿ ಬೆನ್ನು ತಟ್ಟುತ್ತವೆ. ಮುಖ್ಯವಾಗಿ ಸ್ತ್ರೀ ಸಂವೇದನೆಯ ಭಾವ ನಮಗೆ ಎದುರಾದರೂ ಅದರೊಂದಿಗೆ ಪ್ರೀತಿ, ಪ್ರೇಮ, ಪ್ರಣಯ, ಪ್ರಸ್ತುತ ಸಮಾಜದ ಚಿತ್ರಣಗಳು ಓದುಗರನ್ನು ತಡೆದು ನಿಲ್ಲಿಸುತ್ತವೆ!!

“ಈ ಪರಿ ರೋದನ ತರವಲ್ಲ ಅಬಲೆ ಎನ್ನುವುದು ಈ ಲೋಕ

ಬಿಕ್ಕಳಿಕೆ ಅದುಮಿ ಬುಸುಗುಡು ಒಮ್ಮೆ ಹೆದರುವುದು ಈ ಲೋಕ”

ಎನ್ನುವ ಷೇರ್ ಮಹಿಳೆಯ ಸ್ವಾತಂತ್ರ್ಯ, ಸ್ವಾಭಿಮಾನದ ಕುರಿತು ಮಾತನಾಡುತ್ತಲೆ ಸಿಡಿದೇಳಲು ಊರುಗೋಲಾಗುತ್ತದೆ.

“ಬರಡಾದ ಬದುಕಿಗೆ ಶೃಂಗಾರ ಭಾವಜೀವ ತುಂಬಿ ಜಗದಲಿ

ದಾಂಪತ್ಯ ಜೀವನದ ದಿವ್ಯ ದರ್ಶನ ಮಾಡೋಣ ಇನಿಯಾ”

ಈ ಷೇರ್ ದಾಂಪತ್ಯ ಜೀವನದ ಸುಂದರ ದರ್ಶನವಾಗಿದೆ. ಎಂಥ ಸಂಬಂಧಗಳೂ, ಬಂಧನಗಳೂ ನಮಗೆ ದರ್ಶನವಾಗದೇ ಉಳಿದರೆ ಅದು ಗಜಲ್ ಗೆ ನೀಡಬೇಕಾದ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಗಜಲ್ ಗೋ ದೇಸಾಯಿಯವರು ಗೆದ್ದಿದ್ದಾರೆ. 

     ಆರಂಭದಲ್ಲಿ ಹೇಳಿದಂತೆ ಇವರು ಬಳಸುವ ತಖಲ್ಲುಸನಾಮ “ಪ್ರಭೆ” ಎಂಬುದು ಇವರ ಎಲ್ಲ ಗಜಲ್ ಗಳಲ್ಲಿ ತುಂಬಾ ಸಶಕ್ತವಾಗಿ ಅನಾವರಣಗೊಂಡಿದೆ. ‘ಪ್ರಭೆ’ ಎಂಬ ಶಬ್ದ ಎಷ್ಟು ಲೌಕಿಕವೋ ಅಷ್ಟೇ ಅಲೌಕಿಕವಾಗಿ ಓದುಗರ ಹೃದಯವನ್ನು ತಟ್ಟುತ್ತದೆ. ಇವರ ತಖಲ್ಲುಸನಾಮದಿಂದ ಮಕ್ತಾಗಳು ವಿಶೇಷ ಅನುಪಮ ಅನುಭೂತಿಯನ್ನು ಕಟ್ಟಿಕೊಡುತ್ತವೆ. ಈ ಕಾರಣಕ್ಕಾಗಿಯೇ ದೇಸಾಯಿಯವರ ಪ್ರತಿ ಮಕ್ತಾಗಳು ಔನತ್ಯದತ್ತ ಮುಖ ಮಾಡಿ ನಿಂತಿರುವುದನ್ನು ಕಾಣಬಹುದು!!

“ಸಂತೆಗೆ ಸರಕು ತಂದವರು ಯಾರು? ಖರೀದಿ ಮಾಡಿದವರು ಯಾರು?

ಎಲ್ಲಾ ಲೆಕ್ಕ ಮುಗಿಸಿ ‘ಪ್ರಭೆ’ಯು ಗೂಡು ಸೇರಲೆಬೇಕಲ್ಲ”

ಈ ಮೇಲಿನ ಷೇರ್ ನಲ್ಲಿ ಗಜಲ್ ಕಾರರ ಅಪಾರ ಅನುಭವ ಮಡುಗಟ್ಟಿರುವುದು ಫೀಲ್ ಆಗುತ್ತದೆ!! ಜೀವನದ ಕುರಿತು ತಾತ್ವಿಕ ನೆಲೆಯ ಜಿಜ್ಞಾಸೆಗೆ ನಮ್ಮನ್ನು ದೂಡುತ್ತದೆ. ಜನ್ಮ-ಮರಣಗಳೆಂಬ ಮೋಹದ ಸರಪಳಿಯಿಂದ ಹೊರಬಂದು ಕಾಲಚಕ್ರ, ಪಂಚಭೂತ, ಪರಮಸತ್ಯದ ವಾಸ್ತವ ಕಣ್ಣ ಮುಂದೆ ಹಾದು ಹೋಗುತ್ತದೆ.

     ಪ್ರಭಾವತಿ ದೇಸಾಯಿಯವರ ಗಜಲ್ ಗಳು ಒಳಗೊಳ್ಳದ ವಿಷಯಗಳೇ ಇಲ್ಲ ಎನ್ನುವಷ್ಟರ ಮಟ್ಟಿಗೆ ವಿಷಯದ ಹರವು ಹೊಂದಿವೆ.‌ ಸಮಾಜದ ಎಲ್ಲ ಚಿಂತಕರ ಚಿಂತನೆಗಳನ್ನು ಇಲ್ಲಿ ಗುರುತಿಸಲು ಸಾಧ್ಯ. ಮನುಷ್ಯನ ವಿವಿಧ ಮುಖಗಳ ಅನಾವರಣವೇ ದೇಸಾಯಿಯವರ ಗಜಲ್ ಗಳ ಹೂರಣ. ಇವರಿಂದ ನಮ್ಮ ಗಜಲ್ ಕನ್ನಿಕೆ ಮತ್ತಷ್ಟು, ಮೊಗೆದಷ್ಟೂ ಕಾಂತಿಯುಕ್ತವಾಗಿ ಕಂಗೊಳಿಸಲಿ!!

     ಮತ್ತೆ ಮುಂದಿನ ವಾರ, ಮತ್ತೊಬ್ಬ ಗಜಲ್ ಗಾರುಡಿಗರೊಂದಿಗೆ ಪ್ರತ್ಯಕ್ಷವಾಗುವೆ… ಹೋಗಿ ಬರಲೆ… ಧನ್ಯವಾದಗಳು…!!

ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ..‌

2 thoughts on “

  1. ಅಭಿನಂದನೆಗಳು ಸರ್ ತುಂಬಾ ಚಂದದ ಬರಹ. ಹೊಸಬರಿಗೆ ಸ್ಫೂರ್ತಿ.

  2. ಪ್ರಭಾವತಿ ಅಮ್ಮನವರ ಪರಿಚಯ ಲೇಖನ ಚೆನ್ನಾಗಿ ಮೂಡಿ ಬಂದಿದೆ.

Leave a Reply

Back To Top