ಅಂಕಣ ಬರಹ

ಗಾಂಧಿ ಹಾದಿ

ಭಾರತದ ಸ್ವಾತಂತ್ರ್ಯ ಚಳುವಳಿ

ಮತ್ತು ಗಾಂಧೀಜಿ

: ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಚಳುವಳಿಗಳ ಉದಯವಾಯಿತು ಎಂದು ಮೇಲ್ನೋಟಕ್ಕೆ ಅನಿಸಿದರೂ ಚಳುವಳಿಗಳಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ‍್ಮಿಕ ಅಂಶಗಳು ಕಾರಣವಾಗಿವೆ. ಜಗತ್ತಿನ ವಿದ್ಯಮಾನ ಹಾಗೂ ಬದಲಾದ ಶಿಕ್ಷಣ ಕ್ರಮದ ಪರಿಣಾಮ ನಮ್ಮವರಲ್ಲಿಯೂ ಸ್ವಾತಂತ್ರ್ಯದ ಹೊಸಗಾಳಿಯ ತವಕದ ಮನಸ್ಸುಗಳು ಉದಯಿಸಿದವು. ೧೯ನೆಯ ಶತಮಾನದ ದ್ವಿತೀಯಾರ್ಧದಲ್ಲಿ ತಲೆದೋರಿದ ಯುರೋಪಿನ ಮತ್ತು ದಕ್ಷಿಣ ಅಮೇರಿಕಾಗಳ ರಾಷ್ಟ್ರೀಯ ಮನೋಭಾವನೆ ಭಾರತೀಯರಲ್ಲಿ ರಾಷ್ಟ್ರೀಯತೆಯನ್ನು ಪ್ರಚೋದನೆಗೊಳಿಸಿತು. ಆ ಕಾಲದಲ್ಲಿ ದಕ್ಷಿಣ ಅಮೇರಿಕಾದಲ್ಲಿ ಹಲವು ರಾಷ್ಟ್ರೀಯ ರಾಜ್ಯಗಳು ಉದಯವಾದವು. ಫ್ರೆಂಚ್ ಕ್ರಾಂತಿಯ ಕಿರಣಗಳ ಕಿಡಿ ಎಲ್ಲೆಡೆ ವ್ಯಾಪಿಸಿತ್ತು. ಇತರ ರಾಷ್ಟ್ರಗಳ ರಾಷ್ಟ್ರೀಯ ಚಳುವಳಿಗಳು ಸಹ ಭಾರತದ ಸ್ವಾತಂತ್ರ್ಯ ಕನಸಿನ ಮನಸ್ಸುಗಳ ಮೇಲೆ ಆಳವಾದ ಪ್ರಭಾವ ಬೀರಿತು. ಅಂತಹ ಪ್ರಭಾವಕ್ಕೆ ಒಳಗಾದವರಲ್ಲಿ ಮಹಾತ್ಮ ಗಾಂಧೀಜಿ ಕೂಡ ಒಬ್ಬರು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಇಂದು ಕೇವಲ ಭಾರತಕ್ಕೆ ಮಾತ್ರವೇ ಅಲ್ಲದೇ ಇಡೀ ವಿಶ್ವದ ಒಬ್ಬ ಅಸಾಮಾನ್ಯ ಮಹಾ ಪುರುಷರೆನಿಸಿಕೊಂಡಿದ್ದಾರೆ. ನಿಜವಾದ ಅರ್ಥ ದಲ್ಲಿ ಅವರೊಬ್ಬ ಮಹಾಮಾನವ, ವಿಶ್ವಮಾನವ, ಸ್ವಾತಂತ್ರ್ಯ ಪೂರ‍್ವ ಭಾರತದಲ್ಲಿ ದೇಶಕ್ಕಾಗಿ, ನಾಡಿನ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರ ನಾಯಕತ್ವದಲ್ಲಿ ನಡೆದ ಹೋರಾಟ, ಅವರು ತಳೆದ ನಿಲುವುಗಳು, ಕಂಡ ಕನಸುಗಳು ನಾಡಿನ ಚರಿತ್ರೆಯ ಪುಟಗಳಲ್ಲಿ ಸುವರ್ಣಾಕ್ಷರದಿಂದ ಬರೆಯಲು ಯೋಗ್ಯವಾದವು. ಹಾಗಾಗಿ ಗಾಂಧೀಜಿಯವರ ಚಿಂತನೆಯನ್ನು ಕುರಿತು ಜಿಜ್ಞಾಸೆ ಮತ್ತು ಅಧ್ಯಯನ ಶೀಲತೆ ವಿಶ್ವವ್ಯಾಪಿಯಾಗಿದೆ. ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ನಾವು ಮೆಲುಕು ಹಾಕಿದಾಗ ನೆನಪಾಗುವ ಮೊದಲಿಗರೇ ಮಹಾತ್ಮಾ ಗಾಂಧೀಜಿ. ಅವರ ಪೂರ‍್ವ, ಜೊತೆಗೆ ಮತ್ತು ನಂತರ ಅನೇಕ ನಾಯಕರಿದ್ದರೂ ಕೂಡ, ದೇಶದ ಮತ್ತು ನಾಡಿನ ಜನತೆ ಗಾಂಧೀಜಿಯವರ ಚಿಂತನೆ, ತತ್ವಗಳು ಮತ್ತು ರಚನಾತ್ಮಕ ಕಾರ‍್ಯಕ್ರಮಗಳಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಯಶಸ್ವಿಯಾಗಲು ಶ್ರಮಿಸಿದರು.

ಸ್ವಾತಂತ್ರ್ಯ ಚಳುವಳಿಯಲ್ಲಿ ಅನೇಕ ನೇತಾರರು ಇದ್ದಾಗಲೂ ಗಾಂಧೀಜಿಯೇ ನಮಗೆಲ್ಲ ಹೆಚ್ಚು ಆಪ್ತರಾಗುವುದು ಅವರ ವಿಚಾರಧಾರೆಗಳಿಂದ. ಗಾಂಧೀಜಿಯವರ ಜೀವನವನ್ನು ಸ್ಥೂಲವಾಗಿ ಪೂರ‍್ವಾರ್ಧ-ಉತ್ತರಾರ್ಧ ಎಂದು ವಿಂಗಡಿಸಿ ನೋಡಬಹುದು. ಪೂರ‍್ವಾರ‍್ಧದಲ್ಲಿ ಅವರು ಭಾರತದಲ್ಲಿ ಪಡೆದ ಶಿಕ್ಷಣ, ವಿದೇಶದ ವಿದ್ಯಾಭ್ಯಾಸ, ಅನ್ಯ ನೆಲದಲ್ಲಿ ಭಾರತೀಯರಿಗಾಗುವ ಅಸಮಾನತೆಗಳನ್ನು ಕಂಡು ಸಿಡಿದು ನಿಂತ ಗಾಂಧೀಜಿಯನ್ನು ಕಂಡರೆ, ಉತ್ತರಾರ‍್ಧದಲ್ಲಿ ಸಂಪೂರ‍್ಣವಾಗಿ ಅವರು ಸ್ವಾತಂತ್ರ್ಯದ ಚಳುವಳಿಯಲ್ಲಿ ತೊಡಗಿಸಿಕೊಂಡು ರಾಜಕೀಯ, ಸಾಮಾಜಿಕ ಬದಲಾವಣೆಯ ಜೊತೆಗೆ ಸ್ವಾತಂತ್ರ್ಯ ಸಿದ್ಧಿಗಾಗಿಯೇ ಅವರು ನಡೆಸಿದ ಹೋರಾಟಗಳು ಗಮನ ಸೆಳೆಯುವವು.

ಅವರ ಹೋರಾಟದ ಹಾದಿಯಲ್ಲಿ ಅವರೇ ಕಂಡುಕೊಂಡ ಚಿಂತನೆ, ತತ್ವಗಳನ್ನು ತಮ್ಮ ಪ್ರಾಯೋಗಿಕ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡರು. ಅವರ ವ್ಯಕ್ತಿತ್ವ ಕಾಣುವಾಗ ಅವರ ಆದರ್ಶಗಳೇ ಅಲ್ಲಿ ಪ್ರತಿಬಿಂಬಿತವಾಗಿವೆ. ಸಾಮಾಜಿಕ ಬದಲಾವಣೆಯ ಹರಿಕಾರರಾಗಿ, ರಾಜಕೀಯ ಸಿದ್ಧಾಂತಗಳ ಪ್ರತಿಪಾದಕರಾಗಿರುವ ಜೊತೆಗೆ ಇತರರಿಗೂ ಮಾದರಿಯಾದರು. ಕಾಯಕದಿಂದ ಹಿಡಿದು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸುವ ಮೂಲಕ ಹೋರಾಟಗಾರನಿಗೆ ಇರಬೇಕಾದ ವೃತ ನಿಯಮಗಳನ್ನು ನಾವು ಅವರಲ್ಲಿ ಕಂಡಿದ್ದೇವೆ.

            ಸ್ವಾತಂತ್ರ್ಯೋತ್ತರ ಕಾಲದಲ್ಲಿ ನಾವಿಂದು ನಿಂತಿದ್ದೇವೆ. ಸ್ವಾತಂತ್ರ್ಯದ ಸಕಲ ಸೌಲಭ್ಯಗಳನ್ನು ಹೊಂದಿ ಬದುಕುತ್ತಿದ್ದೇವೆ. ಆದರೂ ಪ್ರಸ್ತುತ ಭಾರತೀಯರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕಾಣಿಸಿಕೊಂಡ ಮೌಲ್ಯ ಮತ್ತು ಧ್ಯೇಯಗಳು ಮಾಯವಾಗುತ್ತಿವೆ. ಮತ್ತೆ ಅಲ್ಲಿರುವ ಅಂದಿನ ಧ್ಯೇಯ-ಧೋರಣೆಗಳತ್ತ ಗಮನ ಸೆಳೆಯುವುದೇ ಈ ಲೇಖನದ ಮುಖ್ಯ ಆಶಯ.

ಸ್ವಾತಂತ್ರ್ಯ ಚಳುವಳಿಯ ಸಂಧರ್ಭ :

            ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿ ಕೇವಲ ಬ್ರಿಟಿಷ ಆಗಮನ ಅಥವಾ ಅವರ ಆಡಳಿತ ಕಾಲದಲ್ಲಿ ಉಂಟಾದದ್ದು ಅಲ್ಲ. ಆಗಾಗ ರಾಷ್ಟ್ರೀಯತೆಗಾಗಿ ನಡೆದ ಘಟನೆಗಳು ಇಲ್ಲಿ ಸ್ಮರಣೀಯ. ಗ್ರೀಕರ ವಿರುದ್ಧದ ಚಂದ್ರಗುಪ್ತ ಮೌರ‍್ಯನ ಹೋರಾಟ, ಮುಸ್ಲಿಂರ ವಿರುದ್ಧ ದಂಗೆ ಎದ್ದ ವಿಜಯನಗರ ಸಾಮ್ರಾಜ್ಯ, ಶಿವಾಜಿಯ ನೇತೃತ್ವದಲ್ಲಿ ಮರಾಠರು ನಡೆಸಿದ ಯುದ್ಧ ಇದಕ್ಕೆ ಉದಾಹರಣೆಗಳು. ಆಗಾಗ ಭಾರತದಲ್ಲಿ ಕಾಣಿಸಿದ ಹೋರಾಟದ ಮನೋಭಾವಗಳು ಜನಾಂಗ, ಮತ, ಭಾಷೆ, ಸಾಮಾಜಿಕ ಪರಂಪರೆಯ ಭಿನ್ನತೆಯ ಪರಿಣಾಮವಾಗಿ ಯಶಸ್ಸು ಸಾಧಿಸುವಲ್ಲಿ ವಿಫಲವಾದವು. ಆಗಾಗ ಸ್ವಾತಂತ್ರ್ಯದ ಕಿಡಿ ಕಾಣಿಸಿಕೊಂಡಿದ್ದರೂ, ಬ್ರಿಟಿಷರ ಕಾಲದಲ್ಲಿ ಹೋರಾಟಕ್ಕೆ ಒಂದು ಸ್ಪಷ್ಟರೂಪ ದೊರಕಿತು. ಈಗಾಗಲೇ ಬ್ರಿಟಿಷರ ಆರ‍್ಥಿಕ, ರಾಜಕೀಯ ಸ್ವಾರ್ಥ ಆಡಳಿತದ ಪರಿಣಾಮ ನಮ್ಮವರಲ್ಲಿ ಅಸಮಾಧಾನ ಉಂಟಾಗಿತ್ತು. ಆ ಕಾಲದಲ್ಲಿ ನಮ್ಮ ಸಮಾಜ ಸುಧಾರಕರ, ಧಾರ‍್ಮಿಕ ನಾಯಕರ ವಿಚಾರಧಾರೆಗಳು ನಮ್ಮಲ್ಲಿ ಸ್ವಾತಂತ್ರ್ಯಕ್ಕೆ ಬೇಕಾದ ಜಾಗೃತ ಮನೋಭಾವ ಹುಟ್ಟು ಹಾಕಿದವು. ಬ್ರಿಟಿಷರ ಶಿಕ್ಷಣ ನೀತಿ, ಅವರ ಆಡಳಿತದ ದಮನಕಾರಿ ನೀತಿಗಳು, ನಮ್ಮ ಚಿಂತಕರನ್ನು ಕೆರಳುವಂತೆ ಮಾಡಿದವು. ಚಿಂತಕರು ಪತ್ರಿಕೆಗಳ ಮೂಲಕ ನಮ್ಮವರಲ್ಲಿ ರಾಷ್ಟ್ರೀಯತೆ ಕಲ್ಪನೆ ಮೂಡುವಂತೆ ಶ್ರಮವಹಿಸಿದರು. ಭಾರತದಲ್ಲಿ ಬದಲಾವಣೆಗಾಗಿ ಕಾತರಿಸಿರುವಾಗಲೇ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ನಡೆದ ಕ್ರಾಂತಿ ಹಾಗೂ ಸ್ವಾತಂತ್ರ್ಯ ಆಂದೋಲನಗಳು ನಮ್ಮನ್ನು ಪ್ರಭಾವಿಸಿದವು. ಅದರ ತತ್ಪರಿಣಾಮವೇ ನಮ್ಮ ಸ್ವಾತಂತ್ರ್ಯ ಚಳುವಳಿಗಳು.

ಸ್ವಾತಂತ್ರ್ಯ ಹೋರಾಟದಲ್ಲಿ ಮಾಡಿದ ಪ್ರಮುಖ ಪ್ರಯೋಗಗಳು :

            ಇತರ ರಾಷ್ಟ್ರಗಳ ಹೋರಾಟಗಳು ಕಣ್ಣೆದುರು ಇರುವಾಗಲೂ ಅವುಗಳನ್ನು ಅನುಸರಿಸದೇ ಭಾರತೀಯ ತಾತ್ವಿಕತೆಯ ಹಿನ್ನಲೆಯಲ್ಲಿಯೇ ಗಾಂಧೀಜಿಯವರು ಹೋರಾಟಕ್ಕೆ ಮುನ್ನಡಿ ಬರೆದರು.

•          ರೌಲತ್ ಮಸೂದೆಯನ್ನು ೧೯೧೯ ರಲ್ಲಿ ಭಾರತೀಯರು ವಿರೋಧಿಸಿದ್ದು.

•          ಜಲಿಯನ್ ವಾಲಾಬಾಗದಲ್ಲಿ ನಡೆದ ಸಭೆ ಹಾಗೂ ಹತ್ಯಾಕಾಂಡ.

•          ರವೀಂದ್ರನಾಥರಿಂದ ‘ನೈಟ್ ಹುಡ್’ ಪದವಿ ತಿರಸ್ಕಾರ ಹಾಗೂ ಗಾಂಧೀಜಿಯವರಿಂದ ‘ಕೈಸರ್-ಇ-ಹಿಂದ’ ಪದವಿ ತಿರಸ್ಕಾರ.

•          ಖಿಲಾಫತ್ ಚಳುವಳಿ.

•          ಪ್ರಥಮಅಸಹಕಾರ ಚಳುವಳಿ (೧೯೨೦-೨೨).

•          ಚೌರಿಚೌರಘಟನೆ.

•          ಲಾಹೋರಕಾಂಗ್ರೆಸ್ ‘ಪರ‍್ಣ ಸ್ವರಾಜ್ಯ’.

•          ಮಹಮ್ಮದಾಲಿ ಜಿನ್ನಾನ ೧೪ ಅಂಶಗಳು.

•          ಕಾನೂನುಭಂಗ ಚಳುವಳಿ (೧೯೩೦-೩೧).

•          ದುಂಡುಮೇಜಿನ ಸಮ್ಮೇಳನ.

•          ಗಾಂಧಿ-ಇರ‍್ವಿನ್‌ ಒಪ್ಪಂದ (೧೯೩೧).

•          ಎರಡನೆಯ ದುಂಡು ಮೇಜಿನ ಸಮ್ಮೇಳನ.

•          ಮತೀಯ ತರ‍್ಪು ಮತ್ತು ಪೂನಾ ಒಪ್ಪಂದ.

•          ಗಾಂಧೀಜಿಯವರ ಉಪವಾಸ.

•          ಪೂನಾ ಒಪ್ಪಂದದ ಕರಾರುಗಳು.

•          ೩ನೆಯ ದುಂಡು ಮೇಜಿನ ಸಮ್ಮೇಳನ.

•          ೧೯೩೭ ಚುನಾವಣೆ ಮತ್ತುಕಾಂಗ್ರೆಸ್ ಮಂತ್ರಿಮಂಡಲಗಳು.

•          ಕ್ವಿಟ್‌ ಇಂಡಿಯಾ ಚಳುವಳಿ.

•          ನೇತಾಜಿ ಸುಭಾಷ್ ಮತ್ತು ಭಾರತರಾಷ್ಟ್ರೀಯ ಸೈನ್ಯ ಮುಂತಾದವುಗಳು

.

ಸ್ವಾತಂತ್ರ್ಯ ಸಾಧನೆಗಾಗಿ ಬಳಸಿಕೊಂಡ ಅಸ್ತ್ರಗಳು ಮತ್ತು ರಚನಾತ್ಮಕ ವಿಧಾನಗಳು

            ಹೋರಾಟದ ಹಾದಿಯಲ್ಲಿ ಅನೇಕ ಪ್ರಯೋಗಾತ್ಮಕ ಘಟನೆಗಳನ್ನು ನಾವು ಕಾಣುತ್ತೇವೆ. ೧೯೧೪ ರಲ್ಲಿ ಭಾರತಕ್ಕೆ ಮರಳಿ ಬಂದ ಗಾಂಧೀಜಿ ತಮ್ಮದೇ ಆದ ಒಂದು ಹೊಸ ವಿಧಾನದಿಂದ ೩೩ ರ‍್ಷಗಳಲ್ಲಿ ಭಾರತ ಸ್ವಾತಂತ್ರ್ಯವಾಗುವ ಹಾಗೆ ತಮ್ಮ ಅಸ್ತ್ರ ಹಾಗೂ ರಚನಾತ್ಮಕ ಕಾರ‍್ಯಗಳಿಂದ ನಾಡಿನ ಜನತೆಯ ಗಮನ ಸೆಳೆದರು. ರಾಷ್ಟ್ರ ವ್ಯಾಪಿ ಪ್ರವಾಸ, ಜನರ ಸಮಸ್ಯೆ, ಹಳ್ಳಿಗರನ್ನು ಅರ‍್ಥೈಸಿಕೊಂಡ ಪರಿಣಾಮ ರಚನಾತ್ಮಕ ವಿಧಾನಗಳನ್ನು ಕಂಡುಕೊಂಡ ಖಾದಿ ಪ್ರಸಾರ, ಅಸ್ಪೃಶ್ಯತಾ ನಿವಾರಣೆ, ಹಿಂದೂ-ಮುಸ್ಲಿಂ ಐಕ್ಯತೆ ಸಾಧನೆ, ಭಾಷಾ ಐಕ್ಯತೆಗಾಗಿ ಹಿಂದಿ ಭಾಷೆಯ ಪ್ರಸಾರ, ಪಾನ ಪ್ರತಿಬಂಧ, ರಾಷ್ಟ್ರೀಯ ಶಿಕ್ಷಣ ಇವು ಇವರ ಪ್ರಮುಖ ರಚನಾತ್ಮಕ ಕಾರ‍್ಯಗಳು.

            ಶಿಕ್ಷಣದಿಂದ ಜಾಗೃತಿ, ಭಾಷೆಯಿಂದ ಐಕ್ಯತೆ ಮನುಷ್ಯ ಜಾತಿಯಲ್ಲಿ ಒಗ್ಗಟ್ಟು, ಅಸಮಾನತೆ ನಿವಾರಣೆ, ಉಡುಪಿನಿಂದ ಒಂದೇ ಎಂಬ ಭಾವ ಹೊಂದಿದಾಗ ರಾಷ್ಟ್ರೀಯತೆ ಬೆಳೆಯಲು ಸಾಧ್ಯ ಎಂಬ ಸತ್ಯ ಅರಿತ ಗಾಂಧೀಜಿ ಇವುಗಳನ್ನು ಕಾರ‍್ಯಗತಗೊಳಿಸುವ ಮೂಲಕ ಆಂದೋಲನಕ್ಕೆ ಹೊಸ ರೂಪ ನೀಡಿದರು.

            ಚಳುವಳಿಗಾಗಿಯೇ ತಯಾರಿಸಿದ ಅಸ್ತ್ರವೆಂಬಂತೆ ಸತ್ಯ, ಪ್ರೇಮ, ಅಸಹಕಾರ, ಸತ್ಯಾಗ್ರಹ, ಸರಳ ಜೀವನ, ಸ್ವಾವಲಂಬನೆ, ಕಷ್ಟ ಸಹಿಷ್ಣುತೆಗಳನ್ನು ಜಾರಿಯಲ್ಲಿ ತಂದರು. ಗಾಂಧೀಜಿಯವರ ಅಸ್ತ್ರ ಹಾಗೂ ರಚನಾತ್ಮಕ ಕಾರ‍್ಯಗಳ ಕಡೆ ಅರೆಕ್ಷಣ ಗಮನಿಸಿದರೆ ಗಾಂಧೀಜಿಯವರ ಕನಸು ಕೇವಲ ಭಾರತದ ಸ್ವತಂತ್ರದ ಕನಸಲ್ಲ, ಪ್ರತಿ ಭಾರತೀಯನ ಉದ್ಧಾರ ಎಂಬುದು ಸುಸ್ಪಷ್ಟ.

ಸ್ವಾತಂತ್ರ್ಯದ ನಂತರ ಅವರ ತತ್ವಗಳು : ಕಲ್ಯಾಣ ರಾಜ್ಯದ ಪರಿಕಲ್ಪನೆ:

            ರಾಷ್ಟ್ರ ನಿರ‍್ಮಾಣದಲ್ಲಿ ಪ್ರತಿ ವ್ಯಕ್ತಿಯ ಪಾತ್ರವೂ ಮುಖ್ಯ ಎಂದು ಅರಿತವರು ಗಾಂಧೀಜಿ. ಅದಕ್ಕಾಗಿಯೇ ವ್ಯಷ್ಠಿಯಿಂದ ಸಮಷ್ಠಿ ಕಡೆಗೂ ಅವರ ಚಿಂತನೆಗಳನ್ನು ಕಾಣುತ್ತೇವೆ. ಇಂದಿಗೂ ಅವರ ತತ್ವಗಳನ್ನು ನಾವು ಕಾಣಲು ಸಾಧ್ಯ.

•          ಅಸ್ಪೃಶ್ಯತಾ ನಿವಾರಣೆ

•          ಮಧ್ಯಪಾನ ನಿಷೇಧ

•          ಸ್ತ್ರೀ ಸಮಾನತೆ

•          ವ್ಯಕ್ತಿ ಸ್ವಾತಂತ್ರ್ಯ

•          ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ

•          ಸರ‍್ವೋದಯ

•          ಖಾದಿ

•          ವೃತ್ತಿ ಶಿಕ್ಷಣ

•          ಸ್ವದೇಶಿ

•          ಗೋಹತ್ಯೆ ನಿಷೇಧ

•          ಗ್ರಾಮ ಸ್ವರಾಜ್ಯ

•          ಪಕ್ಷರಹಿತ ಸರ‍್ಕಾರ

•          ವಿಕೇಂದ್ರೀಕರಣ

•          ಗುಡಿಕೈಗಾರಿಕೆಗೆಆದ್ಯತೆ

•          ನೈತಿಕತೆಗೆ ಆದ್ಯತೆ

•          ಅಹಿಂಸೆಗೆ ಪ್ರಾಧಾನ್ಯತೆ ಮುಂತಾದವುಗಳು.

ಗಾಂಧೀಜಿಯವರ ವಿಚಾರಗಳ ಪ್ರಸ್ತುತತೆಯ ಕುರಿತು :

            ಗಾಂಧೀಜಿ ಕೇವಲ ವ್ಯಕ್ತಿಯಾಗಿರದೆ ಅವರೊಬ್ಬ ಅಸಾಮಾನ್ಯ ಶಕ್ತಿ ಎಂಬುದಾಗಿ ಬರ‍್ನಾರ‍್ಡ ಷಾ ನುಡಿದಿದ್ದಾರೆ. ಗಾಂಧೀಜಿ ಕೇವಲ ಭಾರತದ ರಾಷ್ಟ್ರೀಯ ಚಳುವಳಿ ಮುಖಂಡರಲ್ಲ. ಜಗತ್ತಿನ ಜನ ಅಭ್ಯುದಯ ಬಯಸಿದ ಮುತ್ಸದ್ಧಿ ಎಂಬುದು ಸ್ಪಷ್ಟವಾಗುತ್ತದೆ. ಸ್ವಾತಂತ್ರ್ಯ ದೊರೆತು ೬ ದಶಕ ಕಳೆದರೂ ಇಂದಿಗೂ ಅವರ ವಿಚಾರಗಳು ಭಾರತೀಯರಿಗೆಲ್ಲ ಪ್ರಸ್ತುತವಾಗಿಯೇ ಉಳಿದದ್ದು ಅವರ ವಿಚಾರಗಳ ಮಹತ್ವದ ಸಂಕೇತ.

•          ಜಾಗತಿಕ ಮಟ್ಟದಲ್ಲಿ ಭ್ರಷ್ಟಾಚಾರ, ಅಶಾಂತಿ, ಅಭದ್ರತೆ ನೋಡಿದಾಗ ಇಂದಿಗೂ ಅವರ ಸರ‍್ವೋದಯ, ಸತ್ಯ ಹಾಗೂ ಅಹಿಂಸೆ ತತ್ವಗಳ ಅಗತ್ಯತೆಇದೆ.

•          ರಾಷ್ಟ್ರ ಬದಲಾವಣೆಗಾಗಿ ಸತ್ಯಾಗ್ರಹದ ಅಗತ್ಯವಿದೆ.

•          ಸಾಮಾಜಿಕ, ರಾಜಕೀಯ ಮೌಲ್ಯಗಳ ಕುಸಿತದ ಈ ಘಟ್ಟದಲ್ಲಿ ಗಾಂಧೀಜಿಯವರ ಸಾಮಾಜಿಕ, ಆರ‍್ಥಿಕ ಸಮಾನತೆ, ಆಧ್ಯಾತ್ಮಿಕ ಚಿಂತನೆಗಳು ಮತ್ತೆ ಮೌಲ್ಯಗಳ ಉಳಿಕೆಗೆ ಕಾರಣವಾಗುತ್ತವೆ.

•          ಭಾರತೀಯರನ್ನು ಕಾಡುವ ನಿರುದ್ಯೋಗ, ಬಡತನಗಳಿಗೆ ಅವರ ವೃತ್ತಿಶಿಕ್ಷಣ, ಸರಳ ಜೀವನ ಶ್ರಮಾನ್ನ ಪರಿಕಲ್ಪನೆಯಿಂದ ಪರಿಹಾರ ಸಾಧ್ಯ.

•          ಕೃಷಿಗೆ ಆದ್ಯತೆ, ಗ್ರಾಮೀಣ ಅಭಿವೃದ್ಧಿಯಿಂದ ಭಾರತದ ಅಭಿವೃದ್ಧಿ.

            ಭಾರತದ ಸ್ವಾತಂತ್ರ್ಯ ಚಳುವಳಿಯ ಯಶಸ್ಸಿಗೆ ಗಾಂಧಿಯವರು ಬಳಸಿದ ಅಸ್ತ್ರಗಳು ಜಗತ್ತಿಗೆ ಮಾದರಿಯಾಗಿವೆ. ಇಂದಿಗೂ ಹತ್ತು ಹಲವು ಹೋರಾಟಗಳಿಗೆ ಸ್ಪೂರ‍್ತಿಯನ್ನೀಯುತ್ತಿವೆ. ಆದರೆ ಅನೇಕರ ಕನಸಿನ ಫಲವಾದ ಸ್ವಾತಂತ್ರ್ಯ ವನ್ನು ಕಾಯ್ದುಕೊಳ್ಳುವ ಜವಾಬ್ದಾರಿಯಲ್ಲಿ ನಾವು ಎಡವುತ್ತಿದ್ದೇವೇನೋ ಎಂಬಂತೆ ಭಾಸವಾಗುತ್ತಿದೆ. ಇಂದಿನ ರಾಜಕೀಯ ವಿದ್ಯಮಾನಗಳೇ ಇದಕ್ಕೆ ಸಾಕ್ಷಿ. ಗಾಂಧೀಜಿಯವರ ಕನಸು ಸಾಕಾರಗೊಳ್ಳಬೇಕಾದರೆ ಅವರ ತತ್ವಗಳ ಅಡಿಯಲ್ಲಿ ಹೋರಾಟ ಮಾಡುವುದರ ಮೂಲಕ ರಾಷ್ಟ್ರವನ್ನು ಸುಭದ್ರಗೊಳಿಸುವುದು ಮತ್ತು ಅವರ ಚಿಂತನೆ ತತ್ವಗಳನ್ನು ಅನುಷ್ಠಾನ ಮಾಡುವುದು ಅಗತ್ಯವಾಗಿದೆ. ಇಂದಿನ, ಯುವಜನಾಂಗ ಗಾಂಧೀ ಮಾದರಿಯ ಹೋರಾಟಕ್ಕೆ ಪ್ರತಿಕ್ರಿಯಿಸುತ್ತಿರುವುದು ಆಶಾದಾಯಕವಾಗಿದೆ. ಇದಕ್ಕೆ ಪ್ರಸ್ತುತ ಭ್ರಷ್ಟಾಚಾರ ವಿರೋಧಿ ಹೋರಾಟ ಒಂದು ಜ್ವಲಂತ ಉದಾಹರಣೆಯಾಗಿದೆ













——————————-

ಡಾ. ಎಸ್.ಬಿ. ಬಸೆಟ್ಟಿ

ಡಾ.ಎಸ್.ಬಿ.ಬಸೆಟ್ಟಿಯವರು ದಾರವಾಡದ ಕರ್ನಾಟಕ ವಿ.ವಿ.ಯ ಗಾಂಧೀ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿದ್ದಾರೆ. ಸಾಹಿತ್ಯ ಶ್ರೀ- ರಾಷ್ಟ್ರ ಮಟ್ಟದ ಪ್ರಶಸ್ತಿ, ವಿದ್ಯಾಭೂಷಣ- ಅಂತರಾಷ್ಟ್ರೀಯ ಮಟ್ಟದು, ಕನಕ ಶ್ರೀ, ಸಮಾಜ ರತ್ನ, ರಾಷ್ಟ್ರ ರತ್ನ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದಾರೆಲೋಕಮಾನ್ಯ ಬಾಲಗಂಗಾದರ ತಿಳಕರ ಸ್ವರಾಜ್ಯ ಕಲ್ಪನೆ,ಲೋಕಮಾನ್ಯ ಬಾಲಗಂಗಾದರ ತಿಳಕರ ದೃಷ್ಠಿಯಲ್ಲಿ ರಾಷ್ಟ್ರೀಯತೆ,ಭಾರತದ ರಾಷ್ಟ್ರದ್ವಜ: ವಿಕಾಸ ಹಾಗು ಸಂಹಿತೆ -ಇವರ ಕೃತಿಗಳು.ಗಾಂಧೀ ಕುರಿತು ೨೦ ಲೇಖನ ಅಂತರಾಷ್ಟ್ರೀಯ, ರಾಷ್ಟ್ರೀಯ ನಿಯತಕಾಲಿಕೆ, ಮಾಸಿಕ ಪತ್ರಿಕೆ ಗಳು ಮತ್ತು ದಿನ ಪತ್ರಿಕೆಯಲ್ಲಿ ಪ್ರಕಟವಾಗಿವೆ.ಸಾಹಿತ್ಯ ಶ್ರೀ- ರಾಷ್ಟ್ರ ಮಟ್ಟದ ಪ್ರಶಸ್ತಿ, ವಿದ್ಯಾಭೂಷಣ- ಅಂತರಾಷ್ಟ್ರೀಯ ಮಟ್ಟದು, ಕನಕ ಶ್ರೀ, ಸಮಾಜ ರತ್ನ, ರಾಷ್ಟ್ರ ರತ್ನ ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ

Leave a Reply

Back To Top