ದಾರಾವಾಹಿ
ಆವರ್ತನ
ಅದ್ಯಾಯ-36
.
.
.
ತಮ್ಮ ವಠಾರದ ನಾಗದೋಷ ನಿವಾರಣೆಗಾಗಿ ಸುಮಿತ್ರಮ್ಮನ ಮನೆಯಲ್ಲಿ ನಡೆದ ಆಶ್ಲೇಷಾಬಲಿಯು ರಾಧಾಳ ಪಾಪಭೀತಿಯನ್ನು ಅಳಿಸಿ ನವಚೈತನ್ಯವನ್ನು ಮೂಡಿಸಿತು. ಅವಳು ಹಿಂದಿನಂತೆಯೇ ಲವಲವಿಕೆಯಿಂದ ಬದುಕತೊಡಗಿದಳು. ಆದರೆ ಗೋಪಾಲ ಮಾತ್ರ ಒಳಗೊಳಗೇ ಕುಸಿಯತೊಡಗಿದ್ದ. ನಾಗರಹಾವೊಂದು ವಠಾರದೊಳಗೆ ಸುತ್ತಾಡುತ್ತ ಕೆಲವು ಶ್ರೀಮಂತರ ಮನೆಗಳಿಗೆ ನುಸುಳಿ ತೊಂದರೆ ಕೊಟ್ಟಿತು ಎಂಬುದಕ್ಕೆ ನನ್ನ ಬಡ ಕುಟುಂಬದ ಪ್ರಾಣಿ, ಪಕ್ಷಿ ಸಾಕಾಣೆಯೇ ಕಾರಣ ಮತ್ತು ಹೊಣೆ ಎಂದು ನೆರೆಕರೆಯವರು ಆಗಾಗ ಆರೋಪಿಸಿ ಹೆದರಿಸುತ್ತಿದ್ದುದೇ ಅಲ್ಲದೇ ತನ್ನಿಂದ ಸಾಲ ಸೋಲ ಮಾಡಿಸಿ ಏಳು ಸಾವಿರ ರೂಪಾಯಿಗಳನ್ನು ಕಿತ್ತುಕೊಂಡ ಸುಮಿತ್ರಮ್ಮನ ಮೇಲೂ ಹಾಗೂ ವಠಾರದವರ ಕುರಿತೂ ಅವನಲ್ಲಿ ಜಿಗುಪ್ಸೆ ಮೂಡಿಬಿಟ್ಟಿತ್ತು. ಅಷ್ಟಲ್ಲದೇ ಆ ಸಾಲವೂ ಮತ್ತು ಈ ಹಿಂದೆ ಮನೆಗೆ ಮಾಡಿದ್ದ ಸಾಲದ ಹೊರೆಯೂ ಸೇರಿ ಅವನನ್ನು ಹಗಲಿಡೀ ಹಿಂಡಿ ಹಿಪ್ಪೆ ಮಾಡುತ್ತ, ರಾತ್ರಿಯಲ್ಲೂ ಅದೇ ಚಿಂತೆಯೆದ್ದು ನಿದ್ದೆಗೆಡಿಸತೊಡಗಿತು. ಹಾಗೆ ನೋಡಿದರೆ ಆವತ್ತೊಮ್ಮೆ ‘ನಿಮ್ಮಿಂದಲೇ ನಮ್ಮ ವಠಾರಕ್ಕೆ ನಾಗದೋಷ ಬಡಿದ್ದದ್ದು!’ ಎಂದು ಸುಮಿತ್ರಮ್ಮ ಎದೆಗೆ ತಿವಿದಂತೆ ಬೈದು ಹೋದ ದಿನದಿಂದಲೇ ಅವನಿಗೇ ಅರ್ಥವಾಗದಂಥ ವಿಚಿತ್ರ ಅನುಮಾನವೊಂದು ಅವನನ್ನು ಹೆದರಿಸಲು ಶುರು ಮಾಡಿತ್ತು. ಆದ್ದರಿಂದ ‘ಹೌದು, ಹೌದು. ಸುಮಿತ್ರಮ್ಮ ಹೇಳಿದ್ದು ನಿಜವಿದ್ದರೂ ಇರಬಹುದು. ಇಲ್ಲದಿದ್ದರೆ ಈ ಜಾಗಕ್ಕೆ ಬಂದ ನಂತರ ತಾನು ಒಂದಿಷ್ಟು ನೆಮ್ಮದಿಯಿಂದ ಬದುಕುವುದು ಹಾಗಿರಲಿ, ಮುಟ್ಟಿದ್ದೆಲ್ಲವೂ ಮಣ್ಣಾಗುತ್ತ ಹೋಗುತ್ತಿದೆಯೆಂದರೆ ನಾಗದೋಷವಲ್ಲದೆ ಮತ್ತಿನ್ನೇನು? ಎಂದು ಅವನು ಚಿಂತಿಸುತ್ತ ದಿನೇದಿನೇ ಅಳುಕು ಹತಾಶೆಗೆ ಜಾರುತ್ತ ಸಾಗುತ್ತಿದ್ದ.
ಇಂಥ ಅರ್ಥವಿಲ್ಲದ ಹಾಳು ಯೋಚನೆಗಳು ಅವನೊಳಗೆ ಮತ್ತಷ್ಟು ಮುಂದುವರೆಯುತ್ತಲೇ ಇದ್ದವು. ಹೀಗಾಗಿ ಆ ನಂತರ ಅವನು ತನ್ನ ಮಕ್ಕಳಿಗೆ ಸಣ್ಣಪುಟ್ಟ ಶೀತ ಜ್ವರ ಕಾಡಿದರೂ ಅಥವಾ ಊಟ, ತಿನಿಸುಗಳ ವ್ಯತ್ಯಾಸದಿಂದ ಅಜೀರ್ಣವಾದರೂ ಅಂಥ ಸಹಜ ಸಮಸ್ಯೆಗಳನ್ನೆಲ್ಲ ತನ್ನೊಳಗಿನ ನಾಗದೋಷವೆಂಬ ಕನ್ನಡಿಯ ಮೂಲಕವೇ ಕಾಣುತ್ತ ಭ್ರಮೆಗೆ ಬಿದ್ದು ಹೆದರತೊಡಗಿದ. ತಾವು ಗಂಡ ಹೆಂಡತಿ ಎಷ್ಟೋ ವರ್ಷಗಳಿಂದ ಆಸೆಪಟ್ಟು ಹಂಬಲಿಸಿ ದಕ್ಕಿಸಿಕೊಂಡಂಥ ಒಂದು ತುಂಡು ಸಣ್ಣ ಭೂಮಿಯ ಮೇಲೂ ಬಡಿದ ನಾಗದೋಷದ ಪಿಡುಗು ಅವನ ಮನಸ್ಥಿತಿಯನ್ನು ಕೊನೆಕೊನೆಗೆ ಸಂಪೂರ್ಣವಾಗಿ ಹದಗೆಡಿಸಿಬಿಟ್ಟಿತು. ಅದರೊಂದಿಗೆ ನೆರೆಕರೆಯವರೂ ಅವನನ್ನು ಕಂಡಾಗಲೆಲ್ಲ ತೋರುತ್ತಿದ್ದ ತಾತ್ಸಾರ ಮತ್ತು ವ್ಯಂಗ್ಯ ತುಂಬಿದ ಮಾತುಗಳೂ ಅವನ ಆತ್ಮವಿಶ್ವಾಸವನ್ನು ಕಸಿಯತೊಡಗಿದವು. ಹೀಗಾಗಿ ನಿಧಾನವಾಗಿ ಅವನು ಜೀವನಪ್ರೀತಿಯನ್ನೇ ಕಳೆದುಕೊಳ್ಳುತ್ತ ಸಾಗಿದವನು ಒಮ್ಮೆ ದುಡಿಮೆಯ ಮೇಲೂ ನಿರಾಸಕ್ತಿ ತಳೆದುಬಿಟ್ಟ. ತನ್ನ ಮನಸ್ಸಿಗೆ ಚೈತನ್ಯವಿದ್ದರೆ ಪೇಟೆಗೋ ಅಥವಾ ಯಾರಾದರೂ ಬಂದು ಅಗತ್ಯ ಕೆಲಸಕ್ಕೆ ಒತ್ತಾಯಿಸಿ ಕರೆದರೆ ಎದ್ದು ಹೋದ. ಅಲ್ಲಿಯೂ ಸರಿಯಾಗಿ ಕೆಲಸ ಮಾಡದೆ ಸಂಜೆಯಾಗುವುದನ್ನೇ ಕಾಯುತ್ತ ಸೈಕಲ್ ಹತ್ತಿ ಮನೆಗೆ ಹಿಂದಿರುಗುತ್ತಿದ್ದ ಅಥವಾ ಸದಾ ಮಲಗಿಕೊಂಡೇ ಇರಲು ಬಯಸತೊಡಗಿದ್ದ.
ಗೋಪಾಲನ ಸೋಮಾರಿತನದಿಂದಾಗಿ ಸಾಲ ವಸೂಲಿಗಾಗಿ ಬ್ಯಾಂಕಿನವರು ಅವನ ಮನೆಗೇ ಬರತೊಡಗಿದರು. ಅತ್ತ ನಾಲ್ಕೈದು ವಾರ ಸಾಲದ ಕಂತು ಬರದಿದ್ದಾಗ ತಮಿಳು ಬಡ್ಡಿ ವ್ಯಾಪಾರಿಗಳು ವನಜಕ್ಕನ ಜುಟ್ಟು ಹಿಡಿದುಕೊಂಡರು. ಆಗ ಅವಳೂ ಕಂಗಾಲಾಗಿ ಇವನ ಮನೆಗೆ ಧಾವಿಸಿ ಬಂದು ಗದರಿಸತೊಡಗಿದಳು. ಆಗೆಲ್ಲ ರಾಧಾ ಬ್ಯಾಂಕಿನವರೊಡನೆಯೂ ವನಜಕ್ಕನೊಡನೆಯೂ ದಮ್ಮಯ್ಯ ದಕ್ಕಯ್ಯ ಹಾಕುತ್ತ ಸಂಭಾಳಿಸಿ ಕಳುಹಿಸುತ್ತಿದ್ದಳು. ಆದರೆ ಕೊನೆಕೊನೆಗೆ ಅವಳೂ ಸೋತುಬಿಟ್ಟಳು. ಸಾಲ ತೀರಿಸಲು ಬೇರೆ ದಾರಿ ಕಾಣದೆ, ತಾನು ಆಸೆಯಿಂದ ಸಾಕಿದ್ದ ಎರಡು ಹಸುಗಳಲ್ಲಿ ಆಗಷ್ಟೇ ಕರು ಹಾಕಿದ ಒಳ್ಳೆಯ ಹಸುವೊಂದನ್ನು ಕರುವಿನೊಂದಿಗೆ ಉಮ್ಮರ್ ಬ್ಯಾರಿಗೆ ಅವನು ಕೊಟ್ಟಷ್ಟು ಬೆಲೆಗೆ ಕಣ್ಣೀರಿಡುತ್ತ ಮಾರಿದವಳು ವನಜಕ್ಕನ ಸಾಲದ ಸುಳಿಯಿಂದ ಹೇಗೂ ತನ್ನ ಕುಟುಂಬವನ್ನು ರಕ್ಷಿಸಿಕೊಂಡಳು. ಆದರೆ ಈ ಎಲ್ಲ ತಲೆಬಿಸಿಯ ನಡುವೆಯೂ ತನ್ನ ಗಂಡ ತನಗ್ಯಾವುದೂ ಅಗತ್ಯವಿಲ್ಲ! ಎಂಬಂತೆ ಸೊಂಬೇರಿಯಾಗಿ ಕುಳಿತಿರುತ್ತಿದ್ದುದನ್ನು ಕಾಣುತ್ತ ತೀರಾ ಅಧೀರಳಾಗುತ್ತಿದ್ದಳು. ಆದರೆ ಗಂಡನ ಮೇಲೆ ಅವಳಿಗೆ ಅಪಾರ ಪ್ರೀತಿ ಮತ್ತು ನಂಬಿಕೆಯಿತ್ತು. ಹಾಗಾಗಿ, ರಾತ್ರಿ ಹಗಲು ತನ್ನ ಕುಟುಂಬಕ್ಕಾಗಿಯೇ ಕಷ್ಟಪಡುತ್ತ ಬಂದ ಜೀವ ಅವರದು. ಈ ಹಾಳಾದ ವಠಾರದವರಿಂದಲೂ ಸಾಲದ ಹಿಂಸೆಯಿಂದಲೂ ಮನಸ್ಸಿಗೇನೋ ನೋವಾಗಿರಬಹುದು. ಇನ್ನೂ ಕೆಲವು ದಿನ ಅವರಿಷ್ಟದಂತೆಯೇ ಇರಲಿ. ಆಮೇಲೆ ಮನಸ್ಸು ಸರಿಯಾಗಿ ಖಂಡಿತಾ ಎದ್ದು ಕೆಲಸಕ್ಕೆ ಹೋಗುತ್ತಾರೆ! ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತ ದಿನ ಕಳೆಯುತ್ತಿದ್ದಳು.
ಆದರೆ ಕೆಲವೇ ದಿನಗಳಲ್ಲಿ ರಾಧಾಳ ನಿರೀಕ್ಷೆ ಪೂರ್ತಿ ಸುಳ್ಳಾಯಿತು. ಗೋಪಾಲ ದಿನೇದಿನೇ ಮೂಲೆ ಸೇರುವ ದಾರಿಯನ್ನೇ ಹಿಡಿಯುತ್ತಿದ್ದನಲ್ಲದೇ ಮರಳಿ ಬದುಕು ಕಟ್ಟಿಕೊಳ್ಳುವ ಪ್ರಯತ್ನವನ್ನು ಅವನು ಮಾಡುವ ಯಾವ ಸೂಚನೆಯೂ ಅವಳಿಗೆ ಕಾಣಲಿಲ್ಲ. ಬರಬರುತ್ತ ಅವನ ದುರಾವಸ್ಥೆಯನ್ನು ಕಂಡವಳಿಗೆ ಇದು ಯಾಕೋ ಕೈಮೀರಿ ಹೋಗುವುದರಲ್ಲಿದೆ ಎಂದೆನ್ನಿಸಿಬಿಟ್ಟಿತು. ಅದರಿಂದ ಒಂದು ದಿನ ತಡೆಯಲಾಗದೆ, ‘ಅಲ್ಲ ಮಾರಾಯ್ರೇ, ನೀವು ಹೀಗೆ ತಲೆಯ ಮೇಲೆ ಬೆಟ್ಟ ಬಿದ್ದ ಹಾಗೆ ಕುಳಿತುಬಿಟ್ಟರೆ ಸಂಸಾರ ಸಾಗುವುದಾದರೂ ಹೇಗೆ ಹೇಳಿ…? ಏನೇನೋ ಇಲ್ಲಸಲ್ಲದ್ದನ್ನು ತಲೆಯೊಳಗೆ ತುಂಬಿಸಿಕೊಂಡು ಜೀವನವೇ ಕಳೆದು ಹೋಯಿತು ಎಂಬ ಹಾಗೆ ಬದುಕುವುದರಲ್ಲಿ ಅರ್ಥವಿದೆಯಾ? ಯಾವತ್ತಿನಿಂದ ನೀವು ಹೀಗಾಗಿದ್ದೀರಿ ಅಂತ ನನಗೂ ಗೊತ್ತಿದೆ. ಸುಮಿತ್ರಮ್ಮನೂ ವಠಾರದವರೂ ನಾಗದೋಷದ ಮಾತೆತ್ತಿದ ಮೇಲೆಯೇ ನೀವು ಎಲ್ಲದರ ಮೇಲೂ ವಿಶ್ವಾಸ ಕಳೆದುಕೊಳ್ಳುತ್ತ ಬಂದಿದ್ದೀರಿ. ಆದರೆ ಮಾರಾಯ್ರೇ ಅವರು ಹಾಗೆ ಆಡಿದ್ದೂ ಆಯ್ತು. ಅದಕ್ಕೆ ನಮ್ಮ ಶಕ್ತಿ ಮೀರಿ ನಾವು ಪರಿಹಾರ ಮಾಡಿಸಿಕೊಂಡದ್ದೂ ಆಯ್ತು. ನೀವು ಮಾತ್ರ ಇನ್ನೂ ಅದನ್ನೇ ಚಿಂತಿಸುತ್ತ ಕೈಯಲ್ಲಾಗದವರಂತೆ ಕುಳಿತು ಬಿಟ್ಟಿರುವುದನ್ನು ನೋಡಿದರೆ, ನಾವು ಅಂಥ ದೊಡ್ಡ ಪಾಪವನ್ನೇನು ಮಾಡಿದ್ದೇವಪ್ಪಾ! ಅಂತ ನನಗೂ ಯೋಚನೆಯಾಗುತ್ತಿದೆ. ಇಲ್ನೋಡಿ, ಸುಮಿತ್ರಮ್ಮ ಮತ್ತು ವಠಾರದವರೆಲ್ಲರೂ ಶ್ರೀಮಂತರು ಮಾರಾಯ್ರೇ! ಹಾಗಾಗಿ ಅವರಿಗೆ ನಮ್ಮಂಥ ಬಡವರ ಕಷ್ಟಸುಖಗಳೆಲ್ಲ ಅರ್ಥವಾಗಲಿಕ್ಕುಂಟಾ? ಅವರಿಗೆ ಹೇಗನ್ನಿಸುತ್ತದೋ ಹಾಗೆಯೇ ಅವರು ಮಾತಾಡುತ್ತಿರುತ್ತಾರೆ. ಹಾಗಂತ ನಾವೂ ಅದನ್ನೆಲ್ಲ ತಲೆಯಲ್ಲಿ ಹೊತ್ತುಕೊಂಡು ಕುಳಿತರೆ ಜೀವನ ಸಾಗುವುದಾದರೂ ಹೇಗೆ ಹೇಳಿ? ನಮ್ಮಂಥ ಬಡವರು ಯಾವುದಕ್ಕೂ ಹೆದರಬಾರದು ಮಾರಾಯ್ರೇ. ಅದೇನು ಬರುತ್ತದೋ ದೇವರ ಮೇಲೆ ಭಾರ ಹಾಕಿ ಧೈರ್ಯದಿಂದ ಎದುರಿಸುವುದೊಂದೇ ನಮಗಿರುವ ದಾರಿ! ಹಾಗೆ ಬದುಕಿದರೆ ಆಗ ಯಾರು ಬಿಟ್ಟರೂ ದೇವರು ನಮ್ಮ ಕೈಬಿಡುವುದಿಲ್ಲ. ಹಾಗಾಗಿ ನೀವು ನಾಳೆಯಿಂದ ಎಲ್ಲವನ್ನೂ ಮರೆತು ಎದ್ದು ಕೆಲಸಕ್ಕೆ ಹೋಗಬೇಕು. ಇಲ್ಲದಿದ್ದರೆ ನಿಮ್ಮನ್ನೇ ನಂಬಿರುವ ನನ್ನನ್ನೂ ಮಕ್ಕಳನ್ನೂ ಕೊಂಡೊಯ್ದು ಎಲ್ಲಾದರೂ ಹಾಳು ಬಾವಿಗೆ ತಳ್ಳಿ ಬಂದು ಆಮೇಲೆ ನಿಮಗೆ ಹೇಗೆ ಬೇಕೋ ಹಾಗಿದ್ದುಬಿಡಿ!’ ಎಂದು ದುಃಖ, ಅಸಹನೆಯಿಂದ ಅಂದುಬಿಟ್ಟಳು.
ಹೆಂಡತಿಯ ಕೊನೆಯ ಮಾತು ಗೋಪಾಲನಿಗೆ ಸರಿಯಾಗಿ ನಾಟಿತು. ಆದ್ದರಿಂದ ಅವನಲ್ಲಿ ಮೆಲ್ಲನೆ ಬದಲಾವಣೆಯೂ ಕಾಣಿಸಿತು. ಆದರೆ ಅದು ಮರುದಿನವೇ ಎದ್ದು ದುಡಿಮೆಗೆ ಹೊರಡುವಷ್ಟು ಬಲವಾಗಿರಲಿಲ್ಲ. ಆ ನಂತರ ರಾಧಾಳೂ ಸುಮ್ಮನಿರಲಿಲ್ಲ. ದಿನನಿತ್ಯ ಅವನ ಬೆನ್ನುಬಿದ್ದು ಬುದ್ಧಿಮಾತು ಹೇಳುತ್ತ ಆಗಾಗ ಸಹನೆ ತಪ್ಪಿ ಕೆಟ್ಟದಾಗಿ ಬೈಯ್ದು ಚಿರಿಪಿರಿಯನ್ನೂ ಮಾಡುತ್ತ ಅವನನ್ನು ಚುರುಕುಗೊಳಿಸತೊಡಗಿದಳು. ಅದರಿಂದ ಬರಬರುತ್ತ ಅವನೂ ರೋಸಿದವನು ಆವತ್ತೊಂದು ಮುಂಜಾನೆ ಬೆಳಗ್ಗೆದ್ದು ಸೈಕಲ್ ಹತ್ತಿ ಕೆಲಸಕ್ಕೆ ಹೊರಟ ಹೋದ. ಅದನ್ನು ಕಂಡ ರಾಧಾ ನೆಮ್ಮದಿಯ ಉಸಿರುಬಿಟ್ಟು ಕೂಡಲೇ ದೇವರಿಗೆ ಭಕ್ತಿಯಿಂದ ತುಪ್ಪದ ದೀಪ ಹಚ್ಚಿ, ‘ಇನ್ನಾದರೂ ನಮ್ಮ ಕಷ್ಟಗಳನ್ನು ನಿವಾರಿಸು ದೇವರೇ…!’ ಎಂದು ಕಣ್ಣು ತುಂಬಿ ಬೇಡಿಕೊಂಡಳು. ಆವತ್ತು ಗೋಪಾಲನಿಗೆ ಒಂದು ಕಡೆ ತೋಟಕ್ಕೆ ಮಣ್ಣು ಹೊರುವ ಕೆಲಸ ಸಿಕ್ಕಿತು. ಸಂಜೆಯವರೆಗೆ ಮೈಮುರಿದು ದುಡಿದ. ಸಂಬಳ ಪಡೆದು ಮನೆಗೆ ಹಿಂದಿರುಗಿದ. ಅವನನ್ನು ಕಂಡ ರಾಧಾಳಿಗೆ ಜೀವ ಬಂದಂತಾಯಿತು. ಅವನ ಸ್ನಾನಕ್ಕೆ ಬಿಸಿ ನೀರು ಮಾಡಿಕೊಟ್ಟು ಬಿಸಿ ಬಿಸಿ ಅನ್ನ ಮಾಡಿ ಒಣ ಮೀನಿನ ಸಾರಿನೊಂದಿಗೆ ಊಟ ಬಡಿಸಿದಳು. ಗೋಪಾಲ ನೆಮ್ಮದಿಯಿಂದ ಹೊಟ್ಟೆ ತುಂಬ ಉಂಡವನು ಹೊರಗೆ ಹೋಗಿ ಅಂಗಳದಲ್ಲಿ ಕುಳಿತು ಮಕ್ಕಳೊಂದಿಗೆ ಹರಟುತ್ತ ಬೀಡಿ ಸೇದತೊಡಗಿದ.
ಸ್ವಲ್ಪಹೊತ್ತಿನಲ್ಲಿ ಅವನಿಗೆ ತನ್ನ ತಲೆಯೊಳಗೇನೋ ಹರಿದಾಡಿದಂಥ ಅನುಭವವಾಗತೊಡಗಿತು. ಜೊತೆಗೆ ಮೈಕೈಯೆಲ್ಲ ಸೆಟೆದು ಕೊಂಡಂತಾಗಿ ನೋಯಲಾರಂಭಿಸಿತು. ಮತ್ತೆ ಕುಳಿತುಕೊಳ್ಳಲಾಗದೆ, ‘ರಾಧಾ ಸ್ವಲ್ಪ ಚಾಪೆ ಹಾಸು ಮಾರಾಯ್ತೀ, ಏನೋ ಒಂಥರಾ ಆಗುತ್ತಿದೆ. ಜ್ವರ ಬರುತ್ತದೋ ಏನೋ…?’ ಎಂದ. ರಾಧಾ ಆತಂಕದಿಂದ ಹೊರಗೆ ಬಂದು, ‘ಏನಾಯ್ತು ಮಾರಾಯ್ರೇ… ಈಗಷ್ಟೇ ಹುಷಾರಿದ್ದೀರಲ್ಲಾ…?’ ಎನ್ನುತ್ತ ಗಂಡನ ಹಣೆ, ಕೊರಳು ಮುಟ್ಟಿ ನೋಡಿದಳು. ಅವನ ದೇಹ ಜ್ವರದಿಂದ ಕಾವೇರುತ್ತಿತ್ತು!
‘ಅಯ್ಯೋ ದೇವರೇ…! ಹೌದು ಮಾರಾಯ್ರೇ ಜ್ವರ ಬರುತ್ತಿದೆ!’ ಎಂದು ಉದ್ಗರಿಸಿದವಳು ಚಿಮಿಣಿದೀಪ ಹಿಡಿದುಕೊಂಡು ಬೇಲಿಯತ್ತ ಓಡಿದಳು. ಒಂದಿಷ್ಟು ಆಡುಸೋಗೆ ಮತ್ತು ಮಜ್ಜಿಗೆಸೊಪ್ಪನ್ನು ಕಿತ್ತು ತಂದಳು. ಶುಂಠಿ, ಈರುಳ್ಳಿ, ಕಾಳುಮೆಣಸು, ಅರಶಿಣ ಮತ್ತು ಬೆಲ್ಲ ಸೇರಿಸಿ ತರಾತುರಿಯಲ್ಲಿ ಕಷಾಯ ಕುದಿಸಿ ಗಂಡನಿಗೆ ಕೊಟ್ಟಳು. ಗೋಪಾಲ ಕಷಾಯ ಕುಡಿದವನು ಮುಸುಕೆಳೆದು ಮಲಗಿಬಿಟ್ಟ. ಜ್ವರದ ತೀವ್ರತೆ ಇನ್ನೂ ಹೆಚ್ಚಿತು. ಆದರೂ ನಿದ್ರೆ ಹತ್ತಿತು. ನಿದ್ದೆಯಲ್ಲಿ ಅವನಿಗೊಂದು ಭೀಕರ ಕನಸು ಬಿತ್ತು.
ಕನಸಿನಲ್ಲೂ ಅವನು ಮಲಗಿದ್ದ. ನಡುರಾತ್ರಿ. ಹುಣ್ಣಿಮೆ ಚಂದ್ರ ಮಂದ ಹಗಲಿನಂತೆ ಬೆಳಗುತ್ತಿದ್ದ. ಅಷ್ಟರಲ್ಲಿ ಅವನಿಗೆ ದೂರದ ನಾಗಬನದಲ್ಲೊಂದು ಸಿಡಿಲಿನ ಅಬ್ಬರದಂಥ ಭಯಂಕರ ಸದ್ದು ಕೇಳಿಸಿತು. ಅವನು ಬೆಚ್ಚಿಬಿದ್ದು ಎಚ್ಚರವಾದ. ಆಗ ಒಂದು ವಿಚಿತ್ರ ಘಟನೆ ನಡೆಯಿತು. ಆ ಬನದಿಂದ ನೀಲವರ್ಣದ, ಏಳು ಹೆಡೆಗಳುಳ್ಳ ದೊಡ್ಡ ಘಟಸರ್ಪವೊಂದು ಭೀಕರವಾಗಿ ಬುಸುಗುಟ್ಟುತ್ತ ಇವನ ಮನೆಯತ್ತಲೇ ಧಾವಿಸಿ ಬರುತ್ತಿದೆ! ಅದು ಆವತ್ತು ಏಕನಾಥ ಗುರೂಜಿಯವರು ಆಶ್ಲೇಷಬಲಿಯ ಪ್ರವಚನದಲ್ಲಿ ವರ್ಣಿಸಿದ ಸರ್ಪದಂತೆಯೇ ಇವನಿಗೆ ಕಾಣಿಸುತ್ತದೆ! ಇವನಿಗೆ ವಿಪರೀತ ಭಯವಾಗುತ್ತದೆ. ಅಕ್ಕಪಕ್ಕ ನೋಡುತ್ತಾನೆ. ಹೆಂಡತಿ ಮಕ್ಕಳು ಗಾಢ ನಿದ್ರೆಯಲ್ಲಿದ್ದಾರೆ. ಎಚ್ಚರಿಸಲು ಮುಂದಾಗುತ್ತಾನೆ. ಆದರೆ ಅವರೂ ಭಯಪಟ್ಟು ಗದ್ದಲವೆಬ್ಬಿಸುತ್ತಾರೇನೋ ಎಂದುಕೊಂಡು ಸುಮ್ಮನಾಗಿ ತರತರ ನಡುಗುತ್ತಾನೆ. ಆದರೂ ಅವರನ್ನು ಎಬ್ಬಿಸಲೇಬೇಕು. ಇಲ್ಲದಿದ್ದರೆ ಅವರೂ ಅನಾಹುತಕ್ಕೆ ಸಿಲುಕುತ್ತಾರೆ ಎಂದು ಯೋಚಿಸಿ ಹೆಂಡತಿಯ ರಟ್ಟೆ ಹಿಡಿದು ಕುಲುಕುತ್ತಾನೆ. ಅವಳು ಮಿಸುಕಾಡುವುದಿಲ್ಲ. ಮಕ್ಕಳನ್ನೂ ಅದೇ ರೀತಿ ಎಚ್ಚರಿಸಲು ಪ್ರಯತ್ನಿಸುತ್ತಾನೆ. ಹ್ಞೂಂ,ಹ್ಞೂಂ! ಅವರ್ಯಾರಿಗೂ ಎಚ್ಚರವಾಗುವುದಿಲ್ಲ.
ಅಯ್ಯಯ್ಯೋ ದೇವರೇ! ಈಗೇನು ಮಾಡುವುದಪ್ಪಾ…? ಎಂದುಕೊಂಡು ದುಃಖಿಸುತ್ತಾನೆ. ಅತ್ತ ಆ ಭಯಂಕರ ಸರ್ಪವು ಮತ್ತಷ್ಟು ರೋಷದಿಂದ ನುಗ್ಗಿ ಬರುತ್ತಿದೆ. ಅದನ್ನು ಕಂಡವನು ಹತಾಶನಾಗಿ ಆಗುವುದಾಗಲಿ, ಎಲ್ಲರೂ ಒಟ್ಟಿಗೆ ಸಾಯುವ ಎಂದುಕೊಂಡು ಹೆಂಡತಿ ಮಕ್ಕಳನ್ನು ಸಮೀಪ ಎಳೆದು ಬಾಚಿ ತಬ್ಬಿಕೊಳ್ಳುತ್ತಾನೆ. ಆ ಕಾರ್ಕೋಟಕ ಸರ್ಪವು ತನ್ನೆದುರು ಸಿಕ್ಕಿದ ಗಿಡಮರ, ಬಳ್ಳಿ, ಪೊದೆಗಳಿಗೆಲ್ಲ ಬೀಸಿ ಬೀಸಿ ಹೊಡೆದು, ಕಿತ್ತು ನೆಲಕ್ಕಪ್ಪಳಿಸುತ್ತ ಆವೇಶದಿಂದ ನುಗ್ಗಿ ಬರುತ್ತಿದೆ. ಅದರ ಕೋಪವನ್ನು ಕಂಡ ಗೋಪಾಲನಿಗೆ ಜೀವ ಬಾಯಿಗೆ ಬಂದಂತಾಗುತ್ತದೆ. ಮಡದಿ ಮಕ್ಕಳೂ ಎಚ್ಚರವಾಗುತ್ತಿಲ್ಲವಲ್ಲಾ! ಎಂದು ಮತ್ತೆ ದುಃಖ ಒತ್ತರಿಸುತ್ತದೆ. ಅದರೊಂದಿಗೆ ತಾನಾದರೂ ಆ ರಾಕ್ಷಸ ಹಾವಿನಿಂದ ತಪ್ಪಿಸಿಕೊಳ್ಳಬೇಕು ಎಂಬ ಯೋಚನೆಯೂ ಬರುತ್ತದೆ. ರಪ್ಪನೆ ಏಳಲು ಪ್ರಯತ್ನಿಸುತ್ತಾನೆ. ಆದರೆ ಆಶ್ಚರ್ಯ! ತನ್ನ ಕೈಕಾಲುಗಳನ್ನು ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತದೆ. ಜೋರಾಗಿ ಅರಚಿಕೊಳ್ಳುತ್ತಾನೆ. ಆದರೂ ಬಿಡುಗಡೆ ದೊರಕುವುದಿಲ್ಲ. ವಿಧಿಯಿಲ್ಲದೆ ಮರಳಿ ತನ್ನ ಕುಟುಂಬವನ್ನು ತಬ್ಬಿಕೊಂಡು ಮುದುಡುತ್ತಾನೆ.
(ಮುಂದುವರೆಯುವುದು)
ಗುರುರಾಜ್ ಸನಿಲ್
ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ