ಗಜಲ್
ರತ್ನರಾಯಮಲ್ಲ
ಪುಣ್ಯತಿಥಿಗಳು ಜಾತ್ರೆಗಳನು ಮೀರಿಸುತ್ತಿವೆ ಹೇಗೆ ಸಹಿಸಲಿ
ಭಾವನೆಗಳು ಪ್ರಚಾರದ ಸರಕಾಗುತ್ತಿವೆ ಹೇಗೆ ಸಹಿಸಲಿ
ಹೊಟ್ಟೆ ತುಂಬಿದವರ ಮುಂದೆ ಅನ್ನ ಅವತಾರವೆತಿದೆ ಗಾಲಿಬ್
ತಟ್ಟೆಗಳೂ ಜನ ಜಂಗುಳಿಯಲ್ಲಿ ನುಲಿಯುತಿವೆ ಹೇಗೆ ಸಹಿಸಲಿ
ವೇದಿಕೆಯ ಒನಪು ವಯ್ಯಾರ ಕಂಡು ಕಂಗಳು ಮೌನವಾಗಿವೆ
ರಾಜಕೀಯದ ತಂತ್ರಗಳು ಬಡಿತ ತಡೆಯುತಿವೆ ಹೇಗೆ ಸಹಿಸಲಿ
ಕಾಯಕದ ಹೆಸರಲ್ಲಿ ಹವ್ಯಾಸಗಳು ಬದಲಾಗುತಿವೆ ಇಂದು
ಉಡುಗೆ-ತೊಡುಗೆಗಳು ದರ್ಪದಿಂದ ನರ್ತಿಸುತಿವೆ ಹೇಗೆ ಸಹಿಸಲಿ
ಬರಬಾರದ ಜಾಗಕ್ಕೆ ಬಂದು ಅಳುತ ಕೂರುವುದೇಕೆ ‘ಮಲ್ಲಿ’
ಮೈ-ಮನದಲ್ಲಿ ಕೆಂಪಿರುವೆಗಳು ಓಡಾಡುತಿವೆ ಹೇಗೆ ಸಹಿಸಲಿ