ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—45

ಆತ್ಮಾನುಸಂಧಾನ

ನಿಜಾಮ್ ಹೌಸ್’ ನಿಂದ ಅಧ್ಯಾಪಕರ ವಸತಿ ಗೃಹಕ್ಕೆ

ಮುಲ್ಲಾಬಾಡ’ ಏರಿಯಾದಲ್ಲಿರುವ “ನಿಜಾಮ್ ಹೌಸ್” ನನಗೆ ತುಂಬ ಅನುಕೂಲಕರವಾಗಿ ಹೊಂದಿಕೊಂಡಿತು. ಮನೆ ಮಾಲಕ ವೃದ್ಧ ದಂಪತಿಗಳನ್ನು ನಾನು ಪ್ರೀತಿಯಿಂದ “ನಾನಾ”, “ನಾನಿ” ಎಂದೇ ಗೌರವದಿಂದ ಕರೆಯುತ್ತಿದ್ದೆ. ತಮ್ಮ ಒಬ್ಬ ಮೊಮ್ಮಗ ಮತ್ತು ಮೊಮ್ಮಗಳನ್ನು ತಮ್ಮ ಜೊತೆಯಲ್ಲಿಯೇ ಇಟ್ಟುಕೊಂಡಿದ್ದ ನಿಜಾಮಸಾಬ ದಂಪತಿಗಳು ನನ್ನನ್ನೂ ಅದೇ ಅಕ್ಕರೆಯಿಂದ ನೋಡಿಕೊಂಡರು.

ನಾನು ವಾಸ್ತವ್ಯ ಮಾಡುವ ಮನೆಗೆ ಹೊಂದಿಕೊಂಡಂತೆಯೇ ಇನ್ನೆರಡು ಮನೆಗಳನ್ನೂ ದಂಪತಿಗಳು ಬಾಡಿಗೆಗೆ ನೀಡಿದ್ದರು. ಹಾಗೆ ಬಾಡಿಗೆಗೆ ನೆಲೆಸಿದ ಸಂಸಾರಗಳು ಕೂಡ ನಾನು ಕಾಲೇಜು ಅಧ್ಯಾಪಕನೆಂದು ಪ್ರೀತಿ-ಗೌರವದಿಂದಲೇ ಕಾಣುತ್ತಿದ್ದರು. ನೆರಹೊರೆಯ ಮುಸ್ಲಿಂ ಕುಟುಂಬದ ಹಿರಿಯರಾಗಲೀ, ಮಹಿಳೆಯರಾಗಲೀ ನನ್ನನ್ನು “ಜನಾಬ್” ಎಂದು ಗೌರವ ಪೂರ್ವಕ ಸಂಬೋಧನೆಯಿಂದಲೇ ಮಾತಿಗಾರಂಭಿಸುತ್ತಿದ್ದರು. ಮುಸ್ಲಿಂ ಧರ್ಮದ ಹಬ್ಬಗಳು ಬಂದರೆ ತಪ್ಪದೇ ನಾಲ್ಕಾರು ಮನೆಗಳವರೂ ನನಗೆ ಮಾಂಸದೂಟವನ್ನು ಪೂರೈಸಲು ಎಂದಿಗೂ ಮರೆಯುತ್ತಿರಲಿಲ್ಲ. ಹೆಚ್ಚಾಗಿ ಉರ್ದು ಮಾದ್ಯಮದಲ್ಲಿಯೇ ಓದುತ್ತಿರುವ ತಮ್ಮ ಮಕ್ಕಳಿಗೆ ಕನ್ನಡ ಕಲಿಕೆಯ ಅನಿವಾರ್ಯತೆ ಉಂಟಾದಾಗ ತಪ್ಪದೇ ಮಕ್ಕಳಿಗೆ ನನ್ನಿಂದ ಪಾಠ ಹೇಳಿಸಲೂ ಅವರು ಸಂಕೋಚ ಪಡುತ್ತಿರಲಿಲ್ಲ.

ಕಾಲೇಜಿನ ನಿತ್ಯ ಓಡಾಟಕ್ಕೆಂದು ನಾನು ಒಂದು ಸೈಕಲ್ ಕೊಳ್ಳುವುದು ಅನಿವಾರ್ಯವಾಯಿತು. ಒಂದು ವರ್ಷದ ಕಾಲ್ನಡಿಗೆಯ ತಿರುಗಾಟದ ಬಳಿಕ ನಾನು ಮೊದಲ ಬಾರಿಗೆ ಒಂದು ಸೈಕಲ್ ಖರೀದಿಸಿದೆ. ಇದೇ ಅವಧಿಯಲ್ಲಿ ನನ್ನ ಪ್ರೀತಿಯ ಗುರುಗಳೂ ಇದೀಗ ಸಹೋದ್ಯೋಗಿಗಳಾಗಿರುವ ಪ್ರೊ.ಟಿ.ಟಿ ತಾಂಡೇಲ್ ಎಂಬುವವರು ಒಂದು ಸುಂದರ ‘ಎಜ್ಡಿ ಎಂಬ ಮೋಟರ್ ಸೈಕಲ್’ ಕೊಂಡು ತಂದರು. ನಿತ್ಯವೂ ತಮ್ಮ ಸ್ವಂತ ಊರಾದ ಹಾರವಾಡಾ ಎಂಬ ಹಳ್ಳಿಯಿಂದ ಕಾಲೇಜಿಗೆ ಬರುತ್ತಿದ್ದ ಅವರಿಗೆ ಇದು ಅನಿವಾರ್ಯವೂ ಆಗಿತ್ತು. ತಾಂಡೇಲ್ ಗುರುಗಳು ನಾನು ಸಹೋದ್ಯೋಗಿ ಆದ ಬಳಿಕ ತುಂಬ ಆಪ್ತವಾಗಿ, ಸಹೋದರನಂತೆಯೇ ನನ್ನನ್ನು ಕಾಣುತ್ತಿದ್ದರು. ಸಮಯ ದೊರೆತಾಗ ತಮ್ಮ “ಎಜ್ಡಿ” ಬೈಕ್ ಮೇಲೆ ತಮ್ಮ ಊರಿಗೂ ಕರೆದೊಯ್ದು ಉಪಚರಿಸುತ್ತಿದ್ದರು. ಹೀಗೆ ‘ಬೈಕ್ ಸವಾರಿ’ಯ ಆನಂದದ ಅಮಲು ನನಗೂ ತಲೆಗೇರುವಂತೆ ಪ್ರೇರಣೆ ನೀಡಿದರು. ಇದರ ಪರಿಣಾಮ ಮುಂದಿನ ಒಂದೇ ವರ್ಷದಲ್ಲಿ ಗುರು-ಸಹೋದ್ಯೋಗಿ ಟಿ.ಟಿ. ತಾಂಡೇಲರ ಸಂಪೂರ್ಣ ಮಾರ್ಗದರ್ಶನದಲ್ಲಿ ನಾನು ಅಂಕೋಲೆಯ ಬೆಂಡಿಬಜಾರ್‌ನಲ್ಲಿರುವ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಸಾಲಪಡೆದು ಎಂಟು ಸಾವಿರ ರೂಪಾಯಿ ಮೊತ್ತದ “ಎಜ್ಡಿ” ಬೈಕ್ ಖರೀದಿಸಿ ತಂದೆ. ಅಲ್ಲಿಂದ ನನ್ನ ಭವಿಷ್ಯ ಬದುಕಿನ ವಾಹನ ಶೋಕಿಗೆ ಇದು ನಾಂದಿಯಾಯಿತು.

“ನಿಜಾಮ್ ಹೌಸ್”ನ ವಾಸ್ತವ್ಯದ ಸಂದರ್ಭದಲ್ಲಿ ಆರಂಭದ ಕೆಲಕಾಲ ಊಟ-ಉಪಹಾರಕ್ಕಾಗಿ ಅಂದು ಅಂಕೋಲೆಯ “ಜೈಹಿಂದ್ ಹೋಟೆಲ್”ನ ರೈಸ್ ಪ್ಲೇಟ್ ಅವಲಂಬಿಸುವುದು ಅನಿವಾರ್ಯವಾಗಿತ್ತು. ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿದ್ದ ಹೊಲಿಗೆ ತರಬೇತಿ ಕೇಂದ್ರದಲ್ಲಿ ತರಬೇತಿಗೆ ಪ್ರವೇಶ ಪಡೆದ ನನ್ನ ಹಿರಿಯ ಸಹೋದರಿ ಲೀಲಾವತಿ ಮತ್ತು ಜೈಹಿಂದ್ ಹೈಸ್ಕೂಲ್‌ನಲ್ಲಿ ಎಂಟನೆಯ ತರಗತಿಗೆ ಸೇರಿದ ನನ್ನ ಎರಡನೆಯ ಸಹೋದರ ಮಧುಕೇಶ್ವರ ಇಬ್ಬರೂ ಕೆಲಕಾಲ ನನ್ನ ಜೊತೆ ಸೇರಿದರು. ಸಹೋದರಿ ಅಷ್ಟಿಷ್ಟು ಅಡಿಗೆ ಮಾಡಬಲ್ಲವಳಾಗಿದ್ದರಿಂದ ಅವಳ ತರಬೇತಿಯ ಅವಧಿಯಲ್ಲಿ ನನಗೆ ಮನೆಯೂಟದ ಅವಕಾಶ ದೊರಕುವಂತಾಯಿತು.

೧೯೮೦ ರ ಸುಮಾರಿಗೆ ನಮ್ಮ ಕಾಲೇಜಿನ ಅಧ್ಯಾಪಕರ ವಾಸ್ತವ್ಯಕ್ಕಾಗಿಯೇ ಯೂ.ಜಿ.ಸಿ.ನೆರವಿನಿಂದ ಆರು ವಸತಿಗ್ರಹಗಳು ನಿರ್ಮಾಣಗೊಂಡವು. ಸ್ವಂತ ಮನೆ ಇಲ್ಲದ, ಬೇರೆ ಊರಿನಿಂದ ಬಂದ ಅಧ್ಯಾಪಕರಿಗೆ ಅಲ್ಲಿ ವಾಸ್ತವ್ಯದ ಅವಕಾಶ ಕಲ್ಪಿಸಲಾಯಿತು. ಮೊದಲ ಬಾರಿಗೆ ಪ್ರೊ ಕೇ.ವಿ.ನಾಯಕ, ಪ್ರೊ.ಏ.ಡಿ.ಗಾಂವಕರ, ಪ್ರೊ.ಟಿ.ಟಿ.ತಾಂಡೇಲ್, ಪ್ರೊ.ಡಿ.ಆರ್.ಪೈ ಮತ್ತು ಪ್ರೊ. ಎಲ್.ಎನ್.ನಾಯಕ ಈ ಐದು ಜನ ಹಿರಿಯ ಅಧ್ಯಾಪಕರು ವಸತಿಗ್ರಹಗಳಲ್ಲಿ ಬಂದು ನೆಲೆಸಿದರು. ಒಂದು ವಸತಿಗ್ರಹವನ್ನು ಪ್ರಾಚಾರ್ಯ ಕೇ.ಜಿ.ನಾಯ್ಕ ಅವರು ತಮಗಾಗಿ ಕಾಯ್ದಿರಿಸಿಕೊಂಡರು. ಆದರೆ ಒಂದು ವರ್ಷವಿಡೀ ಅಲ್ಲಿಗೆ ಬಂದು ನೆಲಸದೇ ಖಾಲಿಯಾಗಿಯೇ ಅದು ಉಳಿದುಕೊಂಡಿತ್ತು. ಈ ಮಧ್ಯೆ ಮನಸ್ಸು ಬದಲಾಯಿಸಿದ ಪ್ರಾಚಾರ್ಯರು ತಾವು ನೆಲೆಸಿದ ಲಕ್ಷ್ಮೇಶ್ವರದಲ್ಲಿರುವ ಮೊದಲ ಮನೆಯಲ್ಲಿಯೇ ಮುಂದುವರಿಯುವ ತೀರ್ಮಾನ ಮಾಡಿದರು. ಇದು ತಿಳಿಯುತ್ತಿದ್ದಂತೆ ಉಪನ್ಯಾಸಕರಲ್ಲಿ ಹಲವರು ವಸತಿಗ್ರಹದ ಬೇಡಿಕೆಗಾಗಿ ಅರ್ಜಿ ಸಲ್ಲಿಸಿದರು.

ನನಗೆ ಅಚ್ಚರಿಯ ಸಂಗತಿಯೆಂದರೆ ಕೇ.ಜಿ.ನಾಯ್ಕರು ಬೇಡಿಕೆಯ ಅರ್ಜಿಯನ್ನು ಸಲ್ಲಿಸದೇ ಇರುವ ನನ್ನನ್ನು ಕರೆದು ಈ ವಸತಿಗೃಹಕ್ಕೆ ಬಂದು ನೆಲೆಸುವಂತೆ ಸಲಹೆ ಮಾಡಿದರು.

ಒಂದು ವಿಶಾಲವಾದ ದಿವಾನ ಖಾನೆ, ಎರಡು ಬೆಡ್‌ರೂಮಗಳು, ಒಂದು ಡೈನಿಂಗ್ ಹಾಲ್, ಕಿಚನ್, ಶೌಚಾಲಯ, ಸ್ನಾನದ ಕೋಣೆ ಇತ್ಯಾದಿ ಎಲ್ಲ ಅನುಕೂಲತೆಗಳ ವಸತಿಗೃಹ. ಅಂದಿನ ದಿನಗಳಲ್ಲಿ ಅಲಭ್ಯವೆನ್ನಿಸುವಂಥ ಅನುಕೂಲವುಳ್ಳ ಮನೆ. ನಾನಿನ್ನೂ ಒಬ್ಬಂಟಿಗ. ಒಂದರ್ಥದಲ್ಲಿ ಆಚೀಚೆ ಮನೆಗಳೂ ಸಾಕಷ್ಟು ಅಂತರದಲ್ಲಿದ್ದು ಉಳಿದಂತೆ ನಿರ್ಜನ ಪ್ರದೇಶದಲ್ಲಿ ಭೂತ ಬಂಗಲೆಯಂತೆಯೇ ತೋರುವ ಆ ಮನೆಗೆ ಬರಲು ನನಗೆ ಸುತಾರಂ ಇಷ್ಟವಾಗಲಿಲ್ಲ.

ಕೇ.ಜಿ. ನಾಯ್ಕರು ತಿಂಗಳಿಗೊಮ್ಮೆಯಾದರೂ ಕರೆದು ನನಗೆ ಆಹ್ವಾನ ನೀಡುತ್ತಲೇ ಇದ್ದರು. ಬೇಡಿಕೆ ಅರ್ಜಿ ಸಲ್ಲಿಸಿದ ಅಧ್ಯಾಪಕರ ಒತ್ತಾಯವೂ ಮುಂದುವರೆದಿತ್ತು.

ಅಂಕೋಲೆಯಿಂದ ಕಾರವಾರದ ಕಡೆ ಸಾಗುವ ರಾಷ್ಟ್ರೀಯ ಹೆದ್ದಾರಿಯಿಂದ ಹೊಸಗದ್ದೆಯ ಕಡೆ ಸಾಗುವ ಕಚ್ಚಾರಸ್ತೆಯು ಇದೇ ವಸತಿಗ್ರಹಗಳ ಎದುರಿನಿಂದ ಸಾಗುತ್ತಿತ್ತು. ವಸತಿ ಗ್ರಹಗಳ ಆಚೆಗೆ ನಿರ್ಜನವಾದ ಬೆಟ್ಟ ಪ್ರದೇಶ. ಮತ್ತೊಂದಿಷ್ಟು ಬೆಟ್ಟದಂಚಿನ ಕೃಷಿ ಭೂಮಿ. ಅದನ್ನು ಯಾವುದೋ ಕಾರಣದಿಂದ “ದೆವ್ವದ ಗದ್ದೆ” ಎಂದೇ ಜನರು ಕರೆಯುತ್ತಿದ್ದರು. ಸಂಜೆಗತ್ತಲಾದ ಬಳಿಕ ಈ ದಾರಿಯಲ್ಲಿ ಜನ ಸಂಚಾರವೇ ಇರುತ್ತಿರಲಿಲ್ಲ.

ಈ ಎಲ್ಲ ಕಾರಣಗಳಿಂದ ನನಗೆ ಪ್ರಾಚಾರ್ಯರು ಸೂಚಿಸಿದ ವಸತಿಗ್ರಹದಲ್ಲಿ ಬಂದು ಉಳಿಯಲು ಧೈರ್ಯವೇ ಸಾಲದಾಯಿತು. ಅವರು ಕರೆದಾಗಲೆಲ್ಲ ನಿರಾಕರಿಸಲಾಗದ ಭಯದಿಂದ ‘ಹೂಂ’ಗುಡುತ್ತಿದ್ದೆನಾದರೂ ನನ್ನೊಳಗೆ “ಬೇರೆಯಾರಿಗಾದರೂ ಕೊಟ್ಟು ಬಿಡಲಿ”ಎಂಬ ಪ್ರಾರ್ಥನೆಯೇ ಸುಪ್ತವಾಗಿತ್ತು.

ಒಂದು ಮುಂಜಾನೆ ಮತ್ತೆ ಪ್ರಾಚಾರ್ಯರಿಂದ ಕರೆ ಬಂದಿತು. ನನ್ನನ್ನು ಛೇಂಬರಿನಲ್ಲಿ ಕೂಡ್ರಿಸಿಕೊಂಡು ಶಿಷ್ಯನಿಗೆ ಗುರು ಪಾಠ ಹೇಳುವ ಹಾಗೆ ತಿಳಿ ಹೇಳಲು ಆರಂಭಿಸಿದ ಪ್ರಾಚಾರ್ಯರು “ನೋಡು ಬಾಡಿಗೆ ಮನೆ ಸಿಗುವುದು ನಿನಗೆ ಸುಲಭದ ಮಾತಲ್ಲ, ಮತ್ತೆ ನೀನು ಮದುವೆ ಸಂಸಾರ ಇತ್ಯಾದಿ ಕುಟುಂಬ ಬೆಳೆಸಿಕೊಳ್ಳುವ ದಿನಗಳು ಮುಂದೆ ಇವೆ. ಆಗ ಮನೆ ದೊರಕಿಸುವುದು ಇನ್ನೂ ಕಷ್ಟವಾಗುತ್ತದೆ. ಇಲ್ಲಿ ನಿನಗೆ ಮತ್ತೆ ಮತ್ತೆ ಮನೆ ಬದಲಾಯಿಸುವ ಕಷ್ಟವೂ ಇರುವುದಿಲ್ಲ. ನಿನ್ನ ಸರ್ವಿಸಿನುದ್ದಕ್ಕೂ ಆರಾಮಾಗಿ ಇರಬಹುದು. ಇಂದೇ ಕೀಲಿ ಕೈ ತೆಗೆದುಕೋ…” ಎಂದು ಅಪ್ಪಣೆ ಮಾಡಿದರು.

ನಾನು ನಿರುತ್ತರನಾಗಿ ಛೇಂಬರಿನಿಂದ ಆಫೀಸ್ ಕೋಣೆಗೆ ಬಂದು ನಿಂತೆ. ಆಫೀಸ್ ಅಧೀಕ್ಷಕರು “ಗುಂದಿಯವರು ಸ್ಟಾಫ್ ಕ್ವಾಟರ್ಸಿಗೆ ಬರುವ ಕೃಪೆ ತೋರಿದ್ದಾರೆ” ಎಂದು ನಗು ನಗುತ್ತ ಅಭಿನಂದಿಸಿ ನನಗೆ ವಸತಿಗ್ರಹದ ಕೀಲಿಕೈ ನೀಡಿದರು.

ನಾನು ಮರುದಿನವೇ ನನ್ನೆಲ್ಲ ಲಗ್ಗೇಜುಗಳೊಂದಿಗೆ ಕಾಲೇಜು ಉಪನ್ಯಾಸಕರ ವಸತಿ ಗ್ರಹದಲ್ಲಿ ಬಂದು ನೆಲೆಸಿದೆ. ಐದಾರು ವರ್ಷಗಳ ದೀರ್ಘ ಕಾಲದಿಂದ ನಾನು ವಾಸ್ತವ್ಯ ಹೂಡಿದ “ಮುಲ್ಲಾಬಾಡಾ” ಪ್ರದೇಶವನ್ನು ಬಿಟ್ಟು ಬರಲು ತುಂಬ ಸಂಕಟವಾಯಿತು. ಮನೆಯ ಯಜಮಾನರು, ನೆರೆಹೊರೆಯ ಪ್ರೀತಿಯ ನಿವಾಸಿಗಳು ತೋರಿದ ಒಡನಾಟದಿಂದ ನನ್ನೊಳಗೆ ಸುಪ್ತವಾಗಿದ್ದ ಮುಸ್ಲಿಂ ಸಮುದಾಯದ ಕುರಿತಾದ ಭಯ ಸಂಪೂರ್ಣ ನಿವಾರಣೆಯಾಗಿತ್ತು. ಬದಲಾಗಿ ಸಮುದಾಯದ ಕುರಿತು ಪ್ರೀತ್ಯಾದರ ಭಾವನೆಗಳು ಬೆಳೆದು ನಿಂತಿದ್ದವು. ಅವರ ಧರ್ಮಾಚರಣೆಯ ಶೃದ್ಧೆ-ನಿಷ್ಠೆಗಳು ನನ್ನಲ್ಲಿ ಗೌರವಾದರಗಳನ್ನು ಹೆಚ್ಚಿಸಿದವು. ಹಿರಿಯ-ಕಿರಿಯರೆಂಬ ಬೇಧವಿಲ್ಲದೇ ನನ್ನನ್ನು ಪ್ರೀತಿ ಮತ್ತು ನೋವಿನಿಂದ ಬೀಳ್ಕೊಂಡ ಮುಸ್ಲಿಂ ಬಂಧುಗಳು ನನ್ನಲ್ಲಿ ಶಾಶ್ವತ ನೆನಪಾಗಿಯೇ ಉಳಿದುಕೊಂಡರು.

ಕಾಲೇಜಿನ ವಸತಿಗ್ರಹದಲ್ಲಿ ನನ್ನ ಒಂಟಿ ಬದುಕು ಆರಂಭವಾಯಿತು. ಕೇ.ಜಿ.ನಾಯ್ಕರು ನನ್ನನ್ನು ಈ ಮನೆಗೆ ಬರುವಂತೆ ಒತ್ತಾಯಿಸಿ ಶಿಕ್ಷೆಗೆ ಗುರಿಪಡಿಸಿದರು ಎಂದೇ ಆರಂಭದ ದಿನಗಳಲ್ಲಿ ನಾನು ಭಾವಿಸಿದೆ. ಮನಸ್ಸಿಲ್ಲದ ಮನಸ್ಸಿನಿಂದಲೇ ಅಲ್ಲಿ ಬದುಕು ಆರಂಭಿಸಿದೆ. ನೆರೆಹೊರೆಯಲ್ಲಿ ಅಧ್ಯಾಪಕರ ಕುಟುಂಬಗಳು ಇದ್ದವಾದರೂ ಮುಕ್ತ ಒಡನಾಟಕ್ಕೆ ಮನಸ್ಸು ತೆರೆದುಕೊಳ್ಳಲಿಲ್ಲ. ಕತ್ತಲಾಗುವ ಮುನ್ನ ಮನೆಯೊಳಗೆ ಸೇರಿಕೊಂಡು ನನ್ನ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕೆಂಬ ಅವ್ಯಕ್ತ ಭಯದಲ್ಲಿಯೇ ಒಂದೆರಡು ತಿಂಗಳು ಕಳೆದೆ. ಹಗಲು ಹೊತ್ತಿನಲ್ಲೂ ಮನೆಯ ಆಚೀಚೆ ಕಾಣಿಸಿಕೊಳ್ಳುವ ಹಾವು-ಚೇಳುಗಳು ನನ್ನ ಅಂಜಿಕೆಗೆ ಇನ್ನಷ್ಟು ಇಂಬು ನೀಡುತ್ತಿದ್ದವು. ಅಂಥ ಕ್ಷಣಗಳಲ್ಲಿ ಮತ್ತೆ ಮತ್ತೆ ಕೇ.ಜಿ.ನಾಯ್ಕರನ್ನೇ ಹೊಣೆಗಾರರನ್ನಾಗಿಸಿ ನೊಂದುಕೊಳ್ಳುತ್ತಿದ್ದೆ.

ದಿನ ಕಳೆದಂತೆ ಮನೆ ನನ್ನದಾಗುತ್ತ ಆತ್ಮೀಯತೆ ಬೆಳೆಯತೊಡಗಿತು. ಹೊಸದಾಗಿ ಬಂದ ಅಧ್ಯಾಪಕರು ಬಾಡಿಗೆ ಮನೆಯ ಹುಡುಕಾಟದಲ್ಲಿ ಅನುಭವಿಸುವ ತೊಂದರೆಗಳು, ಒಂದೆರಡು ವರ್ಷಕ್ಕೆ ಇದ್ದವರೂ ಮನೆ ಬದಲಾಯಿಸುವ ಅನಿವಾರ್ಯತೆಯಲ್ಲಿ ಅನುಭವಿಸುವ ಸಂಕಷ್ಟಗಳನ್ನು ಕಣ್ಣಾರೆ ಕಾಣುವಾಗ ಕೇ.ಜಿ.ನಾಯ್ಕರು ನನಗೆ ಅದೆಂಥ ಉಪಕಾರ ಮಾಡಿದರು? ನಿಜವಾಗಿ ಈ ಮನೆಗೆ ಕರೆತಂದು ಉಳಿಸಿ ನಾನು ಬದುಕಿನುದ್ದಕ್ಕೂ ಎಂಥ ನೆಮ್ಮದಿಯ ಜೀವನ ಅನುಭವಿಸಲು ಕಾರಣರಾದರು? ಎಂಬುದು ನನಗೆ ವೇದ್ಯವಾಗತೊಡಗಿತು.

ಮುಂದಿನ ನನ್ನ ಭವಿಷ್ಯದ ಬದುಕಿನಲ್ಲಿ ಇದೇ ಮನೆ ನನ್ನ ಮದುವೆ, ಮಕ್ಕಳು, ಮಕ್ಕಳ ವಿದ್ಯಾಭ್ಯಾಸ, ನೌಕರಿ ಇತ್ಯಾದಿಗಳೆಲ್ಲವೂ ಸಾಧ್ಯವಾದದ್ದು ಇದೇ ಅಧ್ಯಾಪಕರ ವಸತಿಗ್ರಹದಲ್ಲಿಯೇ ಎಂಬುದನ್ನು ನೆನೆಯುವಾಗ ಕೇ.ಜಿ.ನಾಯ್ಕರು ನನಗೆ ಬೆಲೆ ಕಟ್ಟಲಾಗದ ಸಹಾಯ ಮಾಡಿದರೆಂದೇ ಹೃದಯ ತುಂಬಿ ಬರುತ್ತದೆ. ಅವರ ಆತ್ಮಕ್ಕೆ ಈಗಲೂ ನಾನು ಮನಪೂರ್ವಕ ಭಕ್ತಿಯ ನಮನಗಳನ್ನು ಸಲ್ಲಿಸುವೆ.


ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿ

One thought on “

  1. ಕಾಲೇಜಿನ ವಸತಿಗೃಹದ ನಿಮ್ಮ ಈ ಪುರಾಣದ ಕಥೆ ನಾನು ತಿಳಿದಿರಲಿಲ್ಲ. ತುಂಬಾ ಚೆನ್ನಾಗಿದೆ ಯೋಗ.

Leave a Reply

Back To Top