ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—42

ಆತ್ಮಾನುಸಂಧಾನ

ಅಂಕೋಲೆಯ “ಕರ್ನಾಟಕ ಸಂಘ” ಮತ್ತು ನಾನು

Arts Images, Pictures, Photos - Arts Photographs | Shutterstock

೧೯೫೦ ರ ದಶಕದ ಆರಂಭದಲ್ಲಿಯೇ ಹುಟ್ಟಿ ಅಂಕೋಲೆಯ ಸಾಮಾಜಿಕ ಪರಿಸರದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆರಂಭಿಸಿದ ಅಂಕೋಲೆಯ “ಕರ್ನಾಟಕ ಸಂಘ” ವೆಂಬ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯು ನನ್ನಂಥ ಹಲವರಿಗೆ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ವೇದಿಕೆಯಾದದ್ದು ಅಂಕೋಲೆಯ ಇತಿಹಾಸದಲ್ಲಿಯೇ ಒಂದು ಅಭೂತಪೂರ್ವ ಕಾಲಾವಧಿ ಎನ್ನಬಹುದು.

೧೯೫೨ ರಲ್ಲಿ ಸ್ಥಾಪನೆಗೊಂಡು ಅಂಕೋಲೆಯ ಸಾಹಿತ್ಯ-ಕಲೆ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ ಸಹಸ್ರಾರು ಜನರ ಆಶೋತ್ತರಗಳನ್ನು ಈಡೇರಿಸುತ್ತಲೇ ಬದುಕಿಗೆ ಸಾಂಸ್ಕೃತಿಕ ಶ್ರೀಮಂತಿಕೆಯ ಮೆರುಗನ್ನು ನೀಡಿದ ಕರ್ನಾಟಕ ಸಂಘದ ಹುಟ್ಟು ಬೆಳವಣಿಗೆಯಲ್ಲಿ ಈ ನೆಲದ ಹಲವು ಮಹನೀಯರ ಕನಸು ಮತ್ತು ಪರಿಶ್ರಮಗಳಿವೆ.

ಅಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಹಿರಿಯ ವಿದ್ವಾಂಸರಾದ ತೀ.ನಂ.ಶ್ರೀಕಂಠಯ್ಯನವರಿಂದ ಉದ್ಘಾಟನೆಗೊಂಡ ಕನಾಟಕ ಸಂಘದ ಮೊದಲ ಅಧ್ಯಕ್ಷರಾಗಿ ಶ್ರೀ ಸ.ಪ.ಗಾಂವಕರ, ಉಪಾಧ್ಯಕ್ಷರಾಗಿ ಶ್ರೀ ಎಸ್.ವಿ.ಪಿಕಳೆ, ಕಾರ್ಯದರ್ಶಿಯಾಗಿ ಯು. ರಾಜಗೋಪಾಲಾಚಾರ್ ಕಾರ್ಯ ನಿರ್ವಹಿಸುತ್ತ ಸಂಘಕ್ಕೆ ಭದ್ರ ಬುನಾದಿ ಹಾಕಿದರು.

ಈ ಪರಂಪರೆಯ ಮುಂದುವರಿಕೆಯಾಗಿ ಸಂಘವು ಸಂಘ-ಸಂಸ್ಥೆಗಳ ನೋಂದಣಿ ನಿಯಮದಂತೆ ನೋಂದಾಯಿಸಲ್ಪಟ್ಟ ೧೯೮೪-೮೫ ನೇ ವರ್ಷದಿಂದ ವರ್ಷಾವಧಿಯ ಆಡಳಿತದಲ್ಲಿ ಪ್ರಾಚಾರ್ಯ ಕೆ.ಜಿ.ನಾಯ್ಕ, ಪತ್ರಕರ್ತ ಅಮ್ಮೆಂಬಂಳ ಆನಂದ, ಮುಖ್ಯಾಧ್ಯಾಪಕ ವಿ.ಜೇ.ನಾಯಕ ವಂದಿಗೆ, ಶಾಂತಾರಾಮ ನಾಯಕ ಹಿಚ್ಕಡ, ವಿಷ್ಣು ನಾಯ್ಕ, ಶ್ಯಾಮ ಹುದ್ದಾರ, ಕಾಳಪ್ಪ ನಾಯಕ, ಮೋಹನ ಹಬ್ಬು, ವಸಂತ ಮಹಾಲೆ ಮುಂತಾದ ಮಹನೀಯರು ಸಂಘದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತ ಸಂಘದ ಸಾಹಿತ್ಯಿಕ ಸಾಂಸ್ಕೃತಿಕ ರಥವನ್ನು “ಬೆಳ್ಳಿಹಬ್ಬ”, “ಸುವರ್ಣ ಮಹೋತ್ಸವ” ಇತ್ಯಾದಿ ಸಂಭ್ರಮಗಳ ಕಡೆಗೆ ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಈ ಸತ್ಪರಂಪರೆಯಲ್ಲಿ ೧೯೯೭-೯೮, ೧೯೯೮-೯೯, ೧೯೯೯-೨೦೦೦ ಇಸ್ವಿಯ ಮೂರು ಕಾಲಾವಧಿಗೆ ಸಂಘದ ಅಧ್ಯಕ್ಷನಾಗಿ ನನ್ನ ಅಳಿಲು ಸೇವೆ ಸಲ್ಲಿಸುವ ಸುವರ್ಣಾವಕಾಶ ನನಗೆ ದೊರೆತದ್ದು ನನ್ನ ಜೀವಿತಾವಧಿಯ ಬಹುದೊಡ್ಡ ಭಾಗ್ಯವೆಂದೇ ನಾನು ಭಾವಿಸಿದ್ದೇನೆ.

ಕರ್ನಾಟಕ ಸಂಘದ ಆಶ್ರಯದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಪುಸ್ತಕ ಬಿಡುಗಡೆ, ಉಪನ್ಯಾಸ, ವಿಚಾರ ಸಂಕಿರಣ, ಕವಿಗೋಷ್ಠಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತ ೧೯೮೦ ರಿಂದ ೨೦೦೦ ದ ಕಾಲಾವಧಿಯ ಎರಡು ದಶಕಗಳಲ್ಲಿ ಪಡೆದ ಹಿರಿಯ ಕವಿ-ವಿದ್ವಾಂಸರ ಒಡನಾಟ, ಮಾರ್ಗದರ್ಶನ, ವಿಚಾರಧಾರೆಗಳಿಂದ ಪ್ರೇರಣೆ ಪಡೆದು ಒಬ್ಬ ಬರಹಗಾರನಾಗಿ ನನ್ನನ್ನು ನಾನು ರೂಪಿಸಿಕೊಳ್ಳುವುದು ಸಾಧ್ಯವಾಯಿತು. ಕರ್ನಾಟಕ ಸಂಘವು ನನಗೆ ಮತ್ತು ನನ್ನಂಥ ಅನೇಕರಿಗೆ ಸಾಹಿತ್ಯಿಕ ಒಲವು ಮತ್ತು ಸೃಜನಶೀಲತೆಗೆ ಬಹು ದೀರ್ಘಕಾಲದ ಪೋಷಕಾಂಶಗಳನ್ನು ಪೂರೈಸಿದೆ. ಈ ದಿಸೆಯಲ್ಲಿ ನಾವೆಲ್ಲರೂ ಅಂಕೋಲೆಯ ಕರ್ನಾಟಕ ಸಂಘಕ್ಕೆ ಆ ಜನ್ಮ ಋಣಿಗಳಾಗಿದ್ದೇವೆ.

ಕರ್ನಾಟಕ ಸಂಘದಿಂದ ಪಡೆದ ಸಾಂಸ್ಕೃತಿಕ ಪ್ರಭಾವ ಕೂಡ ನಮ್ಮ ಬದುಕಿನಲ್ಲಿ ಮಹತ್ವದ ಪರಿಣಾಮ ಬೀರಿತು. ನಾನು ಒಬ್ಬ ರಂಗ ಕಲಾವಿದನಾಗಿ ರೂಪುಗೊಳ್ಳಲು ಅಪೂರ್ವ ಅವಕಾಶ ದೊರೆಯಿತು. ೧೯೮೫ ರ ವರ್ಷಾವಧಿಯಲ್ಲಿ ಕರ್ನಾಟಕ ಸಂಘ ಏರ್ಪಡಿಸಿದ ನಾಟಕೋತ್ಸವ ಮತ್ತು ತನ್ನಿಮಿತ್ತ ನಡೆದ ರಂಗ ತರಬೇತಿ ಶಿಬಿರಗಳು ರಂಗಾಸಕ್ತರಿಗೆ ತುಂಬ ಪ್ರಯೋಜನಕಾರಿಯಾದವು. ಸಂಘದ ಹಿರಿಯ ಸದಸ್ಯರಾಗಿದ್ದ ವಿ.ಜೇ.ನಾಯಕ ವಂದಿಗೆ ಅವರು ಅಂದು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಇದ್ದ ಸಂದರ್ಭ ಅದು. ಅವರು ಅಕಾಡೆಮಿಯ ನೆರವನ್ನು ದೊರಕಿಸಿಕೊಟ್ಟು ಇಂಥ ಕಾರ್ಯಕ್ರಮ ಸಂಯೋಜನೆಗೆ ಅವಕಾಶ ಕಲ್ಪಿಸಿದ್ದರು.

ಅದೇ ಕಾಲಘಟ್ಟದಲ್ಲಿ ಮೈಸೂರಿನ ‘ಶ್ರೀನಿವಾಸ’ ಎಂಬ ಯುವ ರಂಗತಜ್ಞರೊಬ್ಬರು ಅಂಕೋಲೆಗೆ ಬಂದು ‘ಬೀದಿನಾಟಕ-ಪ್ರಯೋಗ’ದ ಕುರಿತು ಇಲ್ಲಿನ ರಂಗಾಸಕ್ತರಿಗೆ ತರಬೇತಿ ನೀಡಿದರು. ಇಲ್ಲಿ ತರಬೇತಿ ಪಡೆದ ಬಹಳಷ್ಟು ಸಂಘದ ಸದಸ್ಯರು ಮುಂದಿನ ದಿನಗಳಲ್ಲಿ ಅಂಕೋಲೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಲವಾರು ಬೀದಿ ನಾಟಕಗಳನ್ನು ಪ್ರದಶಿಸಿ ಜನಜಾಗೃತಿ ಮೂಡಿಸಲು ಅವಕಾಶವಾಯಿತು.

ಇದೇ ಕಾಲಾವಧಿಯಲ್ಲಿ ರಾಜ್ಯದಾದ್ಯಂತ ಚುರುಕುಗೊಂಡ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಅಂಕೋಲೆಯ ಹಲವು ಬರಹಗಾರರು ಸಕ್ರಿಯರಾದರು. ಬೀದಿ ನಾಟಕ ಪ್ರದರ್ಶನದ ಉದ್ದೇಶದಿಂದಲೇ ‘ಬಸಂತ’ ಕಲಾವಿದರ ತಂಡವೊಂದು ರೂಪುಗೊಂಡಿತು. “ಬಂಡಾಯ ಸಂಘಟನೆ ತಂಡ” ಎಂಬುದು ಅದರ ವಿಸ್ತೃತ ರೂಪ. ಈ ತಂಡದಲ್ಲಿ ನಾನು, ಹಿರಿಯರಾದ ವಿಷ್ಣು ನಾಯ್ಕ, ಮೋಹನ ಹಬ್ಬು, ಡಾ. ಶ್ರೀಪಾದ ಶೆಟ್ಟಿ, ಸದಾನಂದ ನಾಯಕ, ಕೃಷ್ಣಾ ನಾಯಕ, ಪ್ರಕಾಶ ಕಡಮೆ, ನರೇಶ ದೇಸಾಯಿ, ಶ್ಯಾಮ ಹುದ್ದಾರ, ಮಂಗೇಶ ಶೆಟ್ಟಿ, ಸುರೇಂದ್ರ ದಫೇದಾರ, ಪ್ರೊ. ನಿರಂಜನ, ಅನಂತ ನಾಯ್ಕ ಮುಂತಾದ ಕಲಾವಿದರು ತುಂಬ ಆಸಕ್ತಿಯಿಂದ ತೊಡಗಿಕೊಂಡಿದ್ದೆವು.

‘ಬಸಂತ’ ಕಲಾವಿದರ ತಂಡವು ಹಲವು ವರ್ಷಗಳವರೆಗೆ ಬಹಳಷ್ಟು ನಾಟಕಗಳನ್ನು ಪ್ರದರ್ಶಿಸುತ್ತ ಜನಪ್ರಿಯ ಬೀದಿನಾಟಕ ತಂಡವೆಂದು ಪ್ರಸಿದ್ಧಿ ಪಡೆದುಕೊಂಡಿತ್ತು. ತಂಡವು ಪ್ರದರ್ಶಿಸಿದ ಸರಾಯಿ ಸೂರಪ್ಪ, ಕತ್ತೆ ಮೋತಿ ಪ್ರಸಂಗ, ನಾಯಿಗಳು, ರೇಶನ್ ಕಾರ್ಡ್, ಒಂದು ಹನಿ ರಕ್ತ, ಸಾವಸುತ್ತ, ವಂದೇ ಮಾತರಂ ಮುಂತಾದ ನಾಟಕಗಳು ತುಂಬ ಯಶಸ್ವಿಯಾಗಿ ಪ್ರದರ್ಶನಗೊಂಡು ಕಲಾವಿದರು ಕೂಡ ಜನಪ್ರಿಯತೆ ಪಡೆಯಲು ಅವಕಾಶವಾಯಿತು.

ಬೀದಿ ನಾಟಕಗಳ ಜೊತೆ ಜೊತೆಯಲ್ಲಿಯೇ ಇದೇ ಕಾಲಾವಧಿಯಲ್ಲಿ ಕರ್ನಾಟಕ ಸಂಘವು ಹಲವಾರು ರಂಗ ನಟಕಗಳನ್ನು ಪ್ರದರ್ಶಿಸಿದ್ದು ಬಹುತೇಕ ನಾಟಕಗಳಲ್ಲಿ ನಾನು ಮುಖ್ಯ ಪಾತ್ರಧಾರಿಯಾಗಿ ಅವಕಾಶ ಪಡೆದದ್ದು ಕೂಡ ಸ್ಮರಣೀಯವೆನಿಸುತ್ತದೆ. ಕರ್ನಾಟಕ ಸಂಘವು ಪ್ರದರ್ಶಿಸಿದ ‘ಜೈಸಿದ ನಾಯ್ಕ್’ ನಾಟಕದ ಸಿದ್ಧ ನಾಯ್ಕ, ಮಾರಿಕೊಂಡವರು ನಾಟಕದ ಪೊಲೀಸ್ ಅಧಿಕಾರಿ, ‘ಕಟ್ಟು’ ನಾಟಕದ ಮುಂಗೋಪಿ ಯುವಕ, ‘ಒಂದು ಕತ್ತೆಯ ಕಥೆ’ ನಾಟಕದ ನವಾಬ, ‘ಜಾತ್ರೆ’ ನಾಟಕದ ಅಧಿಕ ಬುದ್ಧಿಯ ಮಹಾರಾಜ, ‘ಇವ ನಮ್ಮವ’ ನಾಟಕದ ಕನ್ನಮಾರಿ, ಮೊದಲಾದ ಪಾತ್ರಗಳು ರಂಗ ಕಲಾವಿದನಾಗಿ ನನಗೆ ತುಂಬ ಜನಪ್ರಿಯತೆ ಮತ್ತು ಗೌರವವನ್ನು ತಂದು ಕೊಟ್ಟಿವೆ. ನಾವು ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿಸಿದ ‘ಕಟ್ಟು’ ಎಂಬ ಏಕಾಂಕ ನಾಟಕವು ಪ್ರಥಮ ಬಹುಮಾನ ಪಡೆದು ರಾಜ್ಯ ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿಯೂ ಪ್ರದಶನಗೊಳ್ಳುವ ಅವಕಾಶ ಪಡೆದುಕೊಂಡಿತ್ತು!

‘ಒಂದು ಕತ್ತೆಯ ಕಥೆ’ ನಾಟಕವು “ಏಕ-ಥಾ ಗದಾ” ಎಂಬ ಹಿಂದಿ ನಾಟಕವೊಂದರ ಕನ್ನಡ ಅನುವಾದ. ಅದನ್ನು ಪ್ರೊ. ಮೋಹನ ಹಬ್ಬು  ಕನ್ನಡಕ್ಕೆ ಅನುವಾದಿಸಿ ರಂಗಪ್ರಯೋಗಕ್ಕೆ ಅನುವು ಮಾಡಿಕೊಟ್ಟು ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಇದು ಅಂಕೋಲಾ, ಕಾರವಾರ, ಮಂಚಿಕೇರಿ (ಯಲ್ಲಾಪುರ) ಭಟ್ಕಳ ಇತ್ಯಾದಿ ಜಿಲ್ಲೆಯ ಹಲವು ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತು.

ಈ ಕಾಲಾವಧಿಯಲ್ಲಿ ಪ್ರೊ. ಮೋಹನ ಹಬ್ಬು ಅವರು ಬರೆದ ‘ಸಾವ ಸುತ್ತ’ ಮತ್ತು ನಾನು ರಚಿಸಿದ ‘ವಂದೇ ಮಾತರಂ’ ಎಂಬ ಎರಡು ಬೀದಿ ನಾಟಕಗಳನ್ನು ಪ್ರಕಟಿಸುವ ಮೂಲಕ ಕರ್ನಾಟಕ ಸಂಘವು ಮೊದಲ ಬಾರಿಗೆ ಪುಸ್ತಕ ಪ್ರಕಟಣೆಯ ಪ್ರಯೋಗ ಮಾಡಿದ್ದು ಮತ್ತು ಆ ಮೂಲಕ ನಮ್ಮನ್ನು ಪ್ರೋತ್ಸಾಹಿಸಿರುವುದು ಅವಿಸ್ಮರಣೀಯ ಸಂದರ್ಭವಾಗಿದೆ.

ಒಟ್ಟಾರೆಯಾಗಿ ಕರ್ನಾಟಕ ಸಂಘದ ಸದಸ್ಯರಾದ ಪ್ರತಿಯೊಬ್ಬರು ಇಲ್ಲಿಯ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಿಂದ ಒಂದಲ್ಲ ಒಂದು ವಿಧದಲ್ಲಿ ಅದರ ಪ್ರಭಾವಕ್ಕೆ ಒಳಗಾಗಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಂಡಿದ್ದಾರೆ.

ನನ್ನ ‘ಕಾಲೇಜು ಉಪನ್ಯಾಸಕ’ ಎಂಬ ಒಂದು ವ್ಯಕ್ತಿತ್ವಕ್ಕೆ ಕಲಾವಿದ, ಲೇಖಕ ಇತ್ಯಾದಿ ಪೂರಕವಾದ ಇನ್ನಷ್ಟು ಮುಖಗಳು ಅಭಿವ್ಯಕ್ತಗೊಂಡು ಸಾಮಾಜಿಕವಾಗಿ ನಾನು ಗುರುತಿಸಲ್ಪಡುವುದಕ್ಕೆ ಗೌರವಾರ್ಹನಾಗುವುದಕ್ಕೆ ಕರ್ನಾಟಕ ಸಂಘವು ಮಹತ್ವದ ಕೊಡುಗೆ ನೀಡಿದೆ ಎಂಬುದು ನಿಸ್ಸಂದೇಹ. ಪ್ರೀತ್ಯಾದರಗಳಿಂದಲೇ ನನ್ನನ್ನು ಸಂಘದ ಒಳಗು ಮಾಡಿಕೊಂಡ ಇಲ್ಲಿನ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ ನಾನು ಯಾವತ್ತೂ ಋಣಿಯಾಗಿರುವೆ. ಹಾಗೆಯೇ ನನ್ನ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ನಾಟಕಕಾರರಾದ ವಿಷ್ಣು ನಾಯ್ಕ, ಮೋಹನ ಹಬ್ಬು, ಚಂದ್ರಶೇಖರ ಕಂಬಾರ, ವ್ಯಾಸ ದೇಶಪಾಂಡೆ, ಎ.ಎನ್.ಮೂರ್ತಿರಾವ್ ಅವರ ಕೊಡುಗೆಯನ್ನೂ ಸ್ಮರಿಸದಿರಲಾರೆ. ನಮ್ಮ ನಾಟಕಗಳನ್ನು ನಿರ್ದೇಶಿಸಿ ನಮ್ಮ ಅಭಿನಯ ಸಾಮರ್ಥ್ಯಕ್ಕೆ ಸಾಣೆ ಹಿಡಿದ ನಿರ್ದೇಶಕರಾದ ಮೈಸೂರಿನ ಶ್ರೀನಿವಾಸ, ಹೊನ್ನಾವರದ ಡಾ. ಶ್ರೀಪಾದ್ ಭಟ್, ವಿಷ್ಣು ನಾಯ್ಕ, ಮೋಹನ ಹಬ್ಬು ಮೊದಲಾದ ಹಿರಿಯರೆಲ್ಲರೂ ನನ್ನ ಕಲಾವಿದ ವ್ಯಕ್ತಿತ್ವದ ಹಿಂದಿನ ಶಕ್ತಿಗಳು ಎಂದು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುವೆ

*********************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿ
ದೆ

7 thoughts on “

  1. ಗುರೂಜಿ,
    ನೀವು ಒಬ್ಬ ನಿಷ್ಠಾವಂತ ವ್ಯಕ್ತಿತ್ವ ಉಳ್ಳವರು, ಅದೇ ನಿಮ್ಮನ್ನು ಆ ಮಟ್ಟಕ್ಕೆ ಮುಟ್ಟಲು ಕಾರಣ. ಸತ್ಯ ಎಲ್ಲಿದ್ದರೆರೂ ಕೈ ಮಾಡಿ ತೋರಿಸುತ್ತದೆ, ಆ ಕೈ ಮಾಡಿ ತೋರಿಸಿದ ವ್ಯಕ್ತಿ ಬೇರೆ ಯಾರೂ ಅಲ್ಲ ನೀವೆ.
    ತುಂಬಾ ಹೆಮ್ಮೆ ಆಯಿತು…….
    ಮುಂದಿನ ಸಂಚಿಕೆ…..
    ಎದುರು………..

  2. ರಾಮಕೃಷ್ಣ ಗುಂದಿ, ಮೋಹನ ಹಬ್ಬು ರಂತಹ ಕ್ರಿಯಾಶೀಲ ವ್ಯಕ್ತಿತ್ವ ಗಳೊಡನೆ ಸ್ನೇಹ ಸಂಪಾದಿಸಿರುವದು ನನ್ನ ಬಹು ದೊಡ್ಡ ಪುಣ್ಯ.
    ನಾಟಕಗಳಲ್ಲಿನ ಅವರ ಪಾತ್ರ ಇನ್ನೂ ನೆನಪಿದೆ.
    ಮೊನ್ನೆ ಬೆಳಸೆ ಯಲ್ಲಿ ಅವರ ಕಾರ್ಯಕ್ರಮ ದ ಕುರಿತು ಸುದ್ದಿ ಓದಿ ತುಂಬಾ ಸಂತೋಷವಾಯಿತು.
    ಇನ್ನೂ ಹೆಚ್ಚು ಅವರನ್ನು ಕೇಳುವಂತಾಗಲಿ ಎಂದು ಆಸೆ.

    1. ಸರ್ ..ದಯವಿಟ್ಟು ತಮ್ಮ ಹೆಸರು ನಮೂದಿಸಿರುವ…ನಿಮ್ಮ ಅಭಿಮಾನ ಕ್ಕೆ ಧನ್ಯವಾದಗಳು

  3. ಕರ್ನಾಟಕ ಸಂಘದ ಕಾರ್ಯ ಚಟುವಟಿಕೆಗಳು ಮತ್ತು ನಿಮ್ಮ ಭಾಗವಹಿಸುವಿಕೆ ನಿಮ್ಮ ಬಹುಮುಖ ವ್ಯಕ್ತಿತ್ವ ರೂಪಿಸಿದ್ದು ಈ ಅಧ್ಯಾಯದಲ್ಲಿ ಚೆನ್ನಾಗಿ ಮೂಡಿ ಬಂದಿದೆ.

  4. ಸರ,
    ತಮ್ಮ ಬಹುಮುಖ ಪ್ರತಿಭೆ ಗೆ ಕರ್ನಾಟಕ ಸಂಘವು
    ಸಹಕಾರಿಯಾಗಿದೆ ಎನ್ನುವುದು ಸವಿಸ್ತಾರವಾಗಿ
    ತಿಳಿಸಿರುತ್ತೀರಿ.

Leave a Reply

Back To Top